ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, November 1, 2013

ಚೂರ್ಣಾವತಾರ-’ದಶಾವತಾರಿಷ್ಟ’ದ ಮೇಲೊಂದು ಬೆಳಕು!

ಚಿತ್ರಗಳ ಋಣ: ಅಂತರ್ಜಾಲ 
ಚೂರ್ಣಾವತಾರ-’ದಶಾವತಾರಿಷ್ಟ’ದ ಮೇಲೊಂದು ಬೆಳಕು!
                                             
ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಗಂಡುಮೆಟ್ಟಿನ ಕಲೆಯಾಗಿ ’ಯಕ್ಷಗಾನ’ವೆಂದು ನಾಮಾಂತರಗೊಂಡ ಕಲೆಯೊಂದರ ಬಗೆಗೆ ಡಾ| ಶಿವರಾಮ ಕಾರಂತರ ಸಂಶೋಧನೆ ಸಮಗ್ರವಾಗಿಲ್ಲ ಅಥವಾ ಸಮೃದ್ಧವಾಗಿಲ್ಲ ಎನ್ನುವ ಮಾತು ಸ್ಥಳೀಯ ಕಲಾಚಿಂತಕರಲ್ಲಿ ಆಗಾಗ ಕೇಳಿಬರುತ್ತಲೇ ಇರುವುದು ಹೊಸದೇನಲ್ಲ; ಕಾರಂತರು ನಡೆಸಿದ್ದು some-ಶೋಧನೆಯೇ ಹೊರತು ಸಂಶೋಧನೆ ಎನಿಸುವುದಿಲ್ಲ ಯಾಕೆ ಎಂಬುದನ್ನು ಸಮರ್ಥವಾಗಿ ಬಿಂಬಿಸಿದವರು ‘’ದಶಾತಾರಿಷ್ಟ’’ವನ್ನು ತಯಾರಿಸಿದ ’’ನಾಶಾ’’ ಹೊನ್ನಾವರ.[ನಾಜಗಾರ ಗಂಗಾಧರ ಶಾಸ್ತ್ರಿ, ಹೊನ್ನಾವರ]’ದಶಾವತಾರ ಆಟ’ದ ಕುರಿತು 2013ರಲ್ಲಿ ಪ್ರಕಟಗೊಂಡ, ನಾಶಾ ಅವರ ಸಂಶೋಧನಾ ಪ್ರಬಂಧಗಳ ಸಂಕಲನವೇ ’ದಶಾವತಾರಿಷ್ಟ’! ಸಾಹಿತ್ಯಾಸಕ್ತ ನ್ಯಾಯವಾದಿಯೆಂದು ಉತ್ತರಕನ್ನಡದಲ್ಲಿ ಗುರುತಿಸಲ್ಪಟ್ಟ, ಹೊನ್ನಾವರದ ಜಿ.ವಿ.ಭಟ್ಟರ ಮೂಲಕ ಇಂಥಾದ್ದೊಂದು ಪುಸ್ತಕ ಕೈಗೆ ಬಂದಾಗ, ವಿಲಕ್ಷಣ ಹೆಸರನ್ನು ಹೊತ್ತ ಹೊತ್ತಗೆಯ ಪುಟಗಳ ಹಿಂದೆ ಅಡಗಿರಬಹುದಾದ ಚಮತ್ಕಾರ-ಚಕ್ಷುಗಳನ್ನು ಮತ್ತು ಹರಿತವಾದ ಲೇಖನಿಯನ್ನು ಹುಡುಕುತ್ತಾ ಪುಟಗಳನ್ನು ತೆರೆದರೆ, ಸಮಯದ ಪರಿವೆಯನ್ನು ಹರಿದೊಗೆದು ಓದಿಯೇ ಮುಗಿಸಬೇಕೆಂಬ ಅನಿಸಿಕೆ ಕಾಡಿದ್ದರಿಂದ ಆ ಕೆಲಸ ಗಂಟೆಯೆರಡರಲ್ಲೇ ಸಂಪನ್ನವಾಯ್ತು. 

ದಶಾವತಾರ ಆಟದ ಅತ್ಯದ್ಭುತ ಕಲಾವಿದ ದಿ|  ಮೂಡ್ಕಣಿ ನಾರಾಯಣ ಹೆಗಡೆ
ಚಿತ್ರಕೃಪೆ: ಕೀರ್ತಿಕುಮಾರ ಶಾಸ್ತ್ರಿ,ಹೊನ್ನಾವರ

ಪುಟಗಳ ನಡುವಿನ ಪುಟವೊಂದರಲ್ಲಿ ನಾಶಾ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದು ಸಕ್ರಿಯವಾಗಿ ಆಗದಿದ್ದರೂ, ’ದಶಾವತಾರ ಆಟ’ವೆಂಬ ರಂಗಪ್ರಕಾರದಿಂದ ರಂಜಿಸಿದ ಹಿರಿಯ ಕಲಾವಿದರ ಋಣದಲ್ಲಿ ನಾವೆಲ್ಲಾ ಇದ್ದೇವೆಂಬ ಅನಿಸಿಕೆಯಿಂದ, ಹಿರಿಯಕಲಾವಿದರು ಬಡತನದಲ್ಲಿದ್ದರೂ ಅದನ್ನು ಕಾರಣವಾಗಿಸಿಕೊಳ್ಳದೇ ಕಲೆಯ ಸಾಂಪ್ರದಾಯಿಕ ಮೌಲ್ಯಗಳ ಉಳಿವಿಗಾಗಿ ದುಡಿದರು ಎಂಬುದಕ್ಕೆ ಒಂದೆರಡು ಉದಾಹರಣೆಗಳನ್ನು ಆರಂಭದಲ್ಲೇ ಕೊಟ್ಟುಬಿಡುವುದು ಔಚಿತ್ಯವಾಗುತ್ತದೆ: ತನ್ನ ಹೆಂಡತಿ-ಮಕ್ಕಳ ಉಪವಾಸ ಪರಿಸ್ಥಿತಿಗೆ ನೊಂದು ಎರಡು ಸಲ ಆತ್ಮಹತ್ಯೆಗೆ ಯತ್ನಿಸಿ ವಿಫಲರಾದ ದಿ. ಮಲ್ಲಗದ್ದೆ ಗಣೇಶ ಹೆಗಡೆಯವರು ಮರುದಿನದ ‘ಆಟ’ದಲ್ಲಿ ಮಾಯಾ ಹಿಡಂಬಿಯಾಗಿ, ರಾಣಿಯಾಗಿ ಪ್ರೇಕ್ಷಕರನ್ನು ದಂಗುಬಡಿಸಿದ್ದನ್ನು ಉತ್ತರಕನ್ನಡದ ಹಿರಿಯ ಜನತೆ ಬಲ್ಲರು. ಶರಾವತಿ ನದಿಯನ್ನು ದಾಟಲು ಒಂದೂವರೆ ಆಣೆ[9ಪೈಸೆ]ದುಡ್ಡಿಲ್ಲದೇ, ಸಾಬರ ಅಂಗಡಿಯಲ್ಲಿ ಒಂದು ಕಟ್ಟು ಬೀಡಿ ಕಟ್ಟಿಕೊಟ್ಟು-ಬಂದ ಹಣದಲ್ಲಿ ಮನೆತಲ್ಪಿದ ದಿ. ಕೆರೆಮನೆ ಶಿವರಾಮ ಹೆಗಡೆ ‘’ಕರದ ಗದೆಯಂ ಪೆಗಲೊಳಾಂತಾ ಸುಯೋಧನಂ’’ ಎಂಬ ಪದ್ಯದ ಸನ್ನಿವೇಶದಲ್ಲಿ ಗಧಾಯುದ್ಧದ ಕೌರವನಾಗಿ ರಂಗವನ್ನೇ ಸಾಕ್ಷಾತ್ ಕುರುಕ್ಷೇತ್ರದ ರಣರಂಗವಾಗಿಸಿ ತೋರಿಸಿದ್ದನ್ನು ಅದೇ ಜನ ಬಲ್ಲರು. ತಮಗಿದ್ದ ಹದಿನಾರು ಗುಂಟೆ ಅಡಕೆತೋಟದ ಗೇಣಿ ತೀರಿಸಲಾರದೇ ಮನೆ ಜಪ್ತಿಯಾದಾಗ ಒಂದು ತಿಂಗಳಕಾಲ ಬರೇ ಹಾಲು ಕುಡಿದು ಬಾಲ್ಯವನ್ನು ಕಳೆದು, ಹಗಲು ತೋಟದಲ್ಲಿ ಗೆಯ್ದು-ರಾತ್ರಿ ಆಟದಲ್ಲಿ ದುಡಿದು ಕಲೆಗೊಂದು ಮಾನ್ಯತೆಯೊದಗಿಸಿಕೊಟ್ಟ ದಿ. ಡಾ| ಕೆರೆಮನೆ ಮಹಾಬಲ ಹೆಗಡೆಯವರನ್ನು ಆ ಜನ ಮರೆಯಲಾರರು. ಇಂತಹ ಮಹನೀಯರನೇಕರ ನಿಸ್ವಾರ್ಥ ಸೇವೆಯಿಂದ, ಹೈಗನಾಡಿನ ರಂಗಕಲೆಯೊಂದು ತನ್ನ ಛಾಪನ್ನು ಹಾಗೇ ಉಳಿಸಿಕೊಂಡಿತು ಎಂಬುದಾದರೆ ಈ ಕಲೆಯ ಐತಿಹಾಸಿಕ ಹುಟ್ಟು- ಬೆಳವಣಿಗೆಗಳ ಬಗ್ಗೆ, ಕಲೆಯ ಅಶ್ರಯದಾತರ ಬಗ್ಗೆ, ಕಲೆಯ ಪ್ರಾದೇಶಿಕ ವ್ಯಾಪ್ತಿಯ ಬಗ್ಗೆ, ಕಾಲಾನಂತರದಲ್ಲಿ ಕಲೆಯಮೇಲಾದ ದಾಳಿ/ಅತಿಕ್ರಮಣಗಳ ಬಗ್ಗೆ ಆಮೂಲಾಗ್ರ ತಿಳಿದುಕೊಳ್ಳುವ ಬಯಕೆ ಕೆಲವರಲ್ಲಾದರೂ ಉದ್ಭವವಾಗುತ್ತದೆ. ಸಂಭಾವ್ಯ ಸಂದೇಹಗಳಿಗೆ ಸಂಶಯಾತೀತ ಉದಾಹರಣೆಗಳೊಂದಿಗೆ, ಐತಿಹಾಸಿಕ ಕಾಲಘಟ್ಟವನ್ನು ಸಾಕ್ಷ್ಯಾಧಾರಗಳ ಸಹಿತ ತಿಳಿಸಿಕೊಡುವುದರತ್ತ ನಾಶಾ ಪರಿಶ್ರಮಿಸಿದ್ದಾರೆ.

ಶಾಸ್ತ್ರಿಗಳು ಹೇಳುವುದಿಷ್ಟೇ: ಯಕ್ಷಗಾನ ಬೇರೆ ಮತ್ತು ದಶಾವತಾರ ಆಟವೇ ಬೇರೆ. ಎರಡನೇ ಶತಮಾನದಲ್ಲಿ ಸಂಸ್ಕೃತದ ನಾಟಕಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದವು, ಆ ಕಾಲಘಟ್ಟದಲ್ಲೇ ರಚಿತವಾದ ಭರತಮುನಿಯ ನಾಟ್ಯ ಶಾಸ್ತ್ರವನ್ನು ಸಮಗ್ರವಾಗಿ ಆಧರಿಸಿ, ಬಳಸಿಕೊಂಡು 13-14ನೇ ಶತಮಾನದಲ್ಲಿ ಹೈಗನಾಡಿನಲ್ಲೇ ಹುಟ್ಟಿ ಬೆಳೆದ ಸಮೃದ್ಧ ರಂಗ ಕಲೆ-‘’ದಶಾವತಾರ ಆಟ’’ ಎಂಬ ರಂಗಪ್ರಾಕಾರವೊಂದು ರಂಗ ನಾಟಕ. ತನ್ನದೇ ಆದ ಆಂಗಿಕ, ಆಹಾರ್ಯಕ, ವಾಚಿಕ ಯಾ ಶಾಬ್ದಿಕ, ಸಾತ್ವಿಕ ಆಯಾಮಗಳನ್ನೊಳಗೊಂಡು, ನವರಸಗಳನ್ನುಳ ರಂಜನಾಮಯ ಕಥಾಕೌತುಕಗಳನ್ನು ಉಣಬಡಿಸುವಲ್ಲಿ ಋಣವಿಲ್ಲದ ಅಥವಾ ಇನ್ನಾವುದೇ ರಂಗಕಲೆಗೆ ಋಣಿಯಾಗಿರಬೇಕಾದ ಅಗತ್ಯತೆಯಿರದ ಸಮಗ್ರ ಕಲೆ ’ದಶಾವತಾರ ಆಟ.’ ಕೇವಲ ರಾಮಾಯಣ, ಮಹಾಭಾರತ ಮತ್ತು ಇನ್ನಿತರ ಪೌರಾಣಿಕ ಕಥಾಭಾಗಗಳನ್ನು ಪದ್ಯಗಳ ರೂಪದಲ್ಲಿ ಬರೆದು ಅದನ್ನು ’ಪ್ರಸಂಗ’ವೆಂದರು; ಅದು ಪ್ರಸಂಗದ ಪಠ್ಯವಾಯ್ತು. ಅಂತಹ ಪಠ್ಯವನ್ನಾಧರಿಸಿ ಅದನ್ನು ಕಂಠಸ್ಥಗೊಳಿಸಿಕೊಂಡ ’ಆಡುಗಾರ’ ಭಾಗವತ, ಸಾಂದರ್ಭಿಕವಾಗಿ ಲಯ ಮತ್ತು ರಾಗಗಳಿಗೆ ಒತ್ತುಕೊಡುತ್ತಾ, ಮಿಕ್ಕುಳಿದ ಸಮಯದಲ್ಲಿ ವಾಚಿಕದ ಸಂಭಾಷಣೆಗೆ ಅನುಕೂಲ ಕಲ್ಪಿಸುತ್ತಾ, ಪಾತ್ರಧಾರಿಗಳು ಪಾತ್ರವನ್ನು ಸಮರ್ಥವಾಗಿ ಅಭಿನಯಿಸುವ ಮೂಲಕವೇ ಕಥಾಹಂದರ ಬಿತ್ತರಗೊಳ್ಳುವಂತೇ ಮಾಡುವ ಕಲೆ ದಶಾವತಾರ ಆಟ.  
 
ಐದಾರು ಶತಮಾನಗಳ ಕಾಲ ಹೆಸರಿನಲ್ಲಿ ಯಾವುದೇ ವ್ಯತ್ಯಾಸವಿಲ್ಲದೇ, ಸಂಪ್ರದಾಯಕ್ಕೆ ಕೊರತೆಯಿಲ್ಲದೇ ಮುನ್ನಡೆದುಬಂದಿದ್ದ ದಶಾವತಾರ ಆಟ ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿಯ ಕಾಲಘಟ್ಟದಲ್ಲಿ ಬಹಳ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂಬುದು ಶಾಸ್ತ್ರಿಯವರ ಅಭಿಪ್ರಾಯ. ಜೈನಧರ್ಮೀಯಳೂ ಪರಮತ ಸಹಿಷ್ಣುವೂ ಮತ್ತು ಶೂರಳೂ ದಕ್ಷಳೂ ಆಗಿದ್ದ ರಾಣಿ ಚೆನ್ನಭೈರಾದೇವಿ ’ದಶಾವತಾರ ಆಟ’ಕ್ಕೆ ಮೂಲದಲ್ಲಿ ಆಶ್ರಯದಾತಳು ಎಂದು ಹೇಳುವುದರ ಜೊತೆಗೆ ಹೈಗನಾಡಿನ ದಶಾವತಾರ ಆಟ ಬಡೋದೆ, ಸಾಂಗ್ಲಿ, ರಾಮದುರ್ಗ, ಮೈಸೂರು ಮೊದಲಾದ ಅನ್ಯಪ್ರದೇಶಗಳಿಗೆ ತೆರಳಿ ಪ್ರದರ್ಶನ ನಡೆಸಿ ಅಂದಿನ ರಾಜಮಹಾರಾಜರುಗಳಿಂದ ಮನ್ನಣೆ ಗಳಿಸಿತು ಎಂಬುದನ್ನು ಸ್ಥೂಲವಾಗಿ ವಿವರಿಸಿದ್ದಾರೆ. ಬ್ರಿಟಿಷ ಗೆಜೆಟಿಯರ್ ನಂತೇ ಹೈಗನಾಡೆಂದು ಕರೆಸಿಕೊಂಡ ಗೇರುಸೊಪ್ಪೆ ರಾಣಿಯ ಸಾಮ್ರಾಜ್ಯ ಇಂದಿನ ದಕ್ಷಿಣಕನ್ನಡದ ಬ್ರಹ್ಮಾವರ ಹೊಳೆಯೀಚಿನ ಕುಂದಾಪುರವನ್ನೊಳಗೊಂಡು ಗಂಗಾವಳಿ ನದಿತಟದ ಅಂಕೋಲಾವರೆಗೆ ವ್ಯಾಪಿಸಿತ್ತು. ಇದನ್ನು ಇತಿಹಾಸ ತಜ್ಞ ಮಂಜೇಶ್ವರ ಗೋವಿಂದ ಪೈಯವರ ಬರಹಗಳಲ್ಲಿ ಮತ್ತು ಸಹ್ಯಾದ್ರಿ ಉತ್ತರ ಕಾಂಡದಲ್ಲಿ ಓದಿ ತಿಳಿದುಕೊಳ್ಳಬಹುದಾಗಿದೆ.
ದಿ|ಮೂಡ್ಕಣಿ ನಾರಾಯಣ ಹೆಗಡೆ-ಚುಕ್ಕಿಚಿತ್ರ ಕಲಾವಿದ ಕೀರ್ತಿಕುಮಾರ್ ಶಾಸ್ತ್ರಿ ಅವರ ರಚನೆಯಲ್ಲಿ

ದಶಾವತಾರ ಆಟವೆಂಬುದು ಕೇವಲ ಗಾನ ಪ್ರಧಾನವಾದದ್ದಲ್ಲ, ಮೊದಲೇ ಹೇಳಿದಂತೇ ಆಂಗಿಕ, ಆಹಾರ್ಯಕ, ವಾಚಿಕ ಯಾ ಶಾಬ್ದಿಕ ಮತ್ತು ಸಾತ್ವಿಕ ಅಭಿನಯಗಳ ಮಜಲುಗಳನ್ನು ಮೇಳೈಸಿಕೊಂಡ ಕಲೆ.  ಸ್ಥೂಲವಾಗಿ ಹೇಳುವುದಾದರೆ ಅರವತ್ತರ ಮುದುಕ ಅಭಿಮನ್ಯುವಿನ ಪಾತ್ರವನ್ನು ಮಾಡಬಾರದು, ಕೃಶದೇಹಿ ಭೀಮನ ಪಾತ್ರವನ್ನು ಪೋಷಿಸಲಾಗದು, ಸ್ತ್ರೀಯರು ಪುರುಷವೇಷ ತೊಡುವುದರಿಂದ ಗಂಡಿನ ದನಿಯ ಅನುಕರಣೆ ಮಾಡಲು ಸಾಧ್ಯವಾಗದು-ಎಂಬೀರೀತಿಯ ‘’ಫಿಸಿಕಲ್ ಎಲಿಜಿಬಲಿಟಿ ಟು ಅಂಡರ್ ಟೇಕ್ ಅ ಕ್ಯಾರೆಕ್ಟರ್’’ ಎಂಬಂತಹ ನಿಯಮಗಳನ್ನು ತಿಳಿಸುವುದು ಆಂಗಿಕದ ಒಂದು ಭಾಗವಾಗುತ್ತದೆ. ಪಾತ್ರಕ್ಕೆ ತಕ್ಕ ವೇಷಭೂಷಣಗಳನ್ನು ಆಹಾರ್ಯಕ ವೆನ್ನುತ್ತೇವೆ; ಉದಾಹರಣೆಗೆ: ಕಲಾವಿದರು ಕಸೆವಸ್ತ್ರವೆಂಬ ಲುಂಗಿಯಂತಯ ಬಟ್ಟೆಯನ್ನು ಶರೀರದ ಕೆಳಭಾಗದಲ್ಲಿ ಧರಿಸುತ್ತಾರೆ-ಇದು ದೇವ, ದಾನವ, ಮಾನವರಿಗೆ  ಅಲ್ಲದೇ ರಾಜ, ಮಂತ್ರಿ, ಸೇವಕ ಮೊದಲಾದ ಪಾತ್ರಗಳಿಗೆ ತಕ್ಕಂತೇ ಭಿನ್ನಭಿನ್ನವಾಗಿರಬೇಕೆಂಬುದು ಸಂಪ್ರದಾಯ; ಆದರೆ ಇಂದು ಅದನ್ನು ಸಮವಸ್ತ್ರದಂತೇ ಎಲ್ಲಾ ಪಾತ್ರಧಾರಿಗಳೂ ಒಂದೇ ರೂಪದ ಕಸೆವಸ್ತ್ರವನ್ನು ಧರಿಸುತ್ತಿದ್ದಾರೆ. ವಾಚಿಕದಲ್ಲಿ ಮೂರು ಭಾಗಗಳು: ಒಂದು ಗೀತ ಅಥವಾ ಭಾಗವತಿಕೆ ಎರಡನೆಯದು ಕರಣ, ಮುದ್ರೆ ಮೊದಲಾದವುಗಳಿಂದ ಪದ್ಯದ ಹೇಳಿಕೆಯನ್ನು ಅಭಿವ್ಯಕ್ತಗೊಳಿಸುವುದು, ಮೂರನೆಯದು ಮಾತು ಅಥವಾ ಸಂಭಾಷಣೆ. ಸಾತ್ವಿಕವೆಂದರೆ ಶಬ್ದಶಹ ಸಾತ್ವಿಕ ಸ್ವಭಾವವೆಂದರ್ಥವಲ್ಲ, ಸಾತ್ವಿಕ ಎಂಬುದು ಪಾತ್ರದ ಸತ್ವ ಎಂಬುದನ್ನು ಬಿಂಬಿಸುತ್ತದೆ. ರಾವಣನಾಗಿ ಅಭಿನಯಿಸುವಾಗ ರಾವಣ ಕಠೋರ ಸ್ಥಾಯೀಭಾವ ಪಾತ್ರಧಾರಿಯಲ್ಲಿರಬೇಕು, ಅಕ್ರೂರನಾಗಿ ಕೃಷ್ಣನಲ್ಲಿಗೆ ಸಂದೇಶಹೊತ್ತು ಬಂದಾಗ ಅಕ್ರೂರನ ಭಕ್ತ/ವಿನೀತ ಭಾವ ಪಾತ್ರಧಾರಿಯಲ್ಲಿರಬೇಕು.

ಕಾರಂತರ ಸಂಶೋಧನೆಯಲ್ಲಿ ಅವರು ಕಂಡುಕೊಂಡ ಮೂಲ ಹೈಗನಾಡಿನ ದಶಾವತಾರ ಆಟವನ್ನು ‘’ಸುಂದರ ಸಂಪ್ರದಾಯ’’ ಎಂದು ಬಣ್ಣಿಸಿದ್ದರಂತೆ. ರಷ್ಯಾದೇಶದ ಬ್ಯಾಲೆ ನರ್ತನವನ್ನು ಸಮೀಕರಿಸಿ ಮೂಕಬ್ಯಾಲೆಯನ್ನು ಜೋಡಿಸಿ ದಶಾವತಾರ ಆಟವನ್ನು ಭಿನ್ನವಾಗಿ ರೂಪಿಸಲು ಯತ್ನಿಸಿದವರು ಕಾರಂತರು. ಅದೇ ಕಾಲಘಟ್ಟದಲ್ಲಿ ಅಂದರೆ ಸರಿಸುಮಾರು 1950-60ರ ದಶಕಗಳಲ್ಲಿ ’ದಶಾವತಾರ ಆಟ’ದ ಮೇಲೆ ಸಂಪ್ರದಾಯೇತರ ಹುಚ್ಚುಕುಣಿತಗಳು, ಉಪನ್ಯಾಸಗಳಂತಹ ಉದ್ದದ ಮಾತುಗಾರಿಕೆ ಇವೆಲ್ಲಾ ಸೇರಿಕೊಳ್ಳುವುದರ ಜೊತೆಗೆ ‘’ಯಕ್ಷಗಾನ’’ವೆಂದು ಹೆಸರಿಸಿ ಕಲೆಯನ್ನು ಕುಲಗೆಡಿಸಿಬಿಟ್ಟರು ಎಂಬುದು ಶಾಸ್ತ್ರಿಯವರ ಅಳಲು. ಇದಕ್ಕೆ ಪೂರಕವಾದ ಉದಾಹರಣೆಗಳನ್ನು ಅವರು ತಮ್ಮ ಲೇಖನಗಳಲ್ಲಿ ಹೇಳಿದ್ದಾರೆ. ’’ಯಕ್ಷಗಾನ’’ ಎಂಬುದು ದೇಶವ್ಯಾಪಿ ಬಳಕೆಯಲ್ಲಿರುವ ಸಂಸ್ಕೃತ ಮೂಲದ ಹೆಸರು. ’ಯಕ್ಷ’ ಎಂಬ ಪದಕ್ಕೆ ಪೂಜಿಸುವವ, ಆರಾಧಿಸುವವ ಎಂಬೆಲ್ಲಾ ಅರ್ಥಗಳಿರುವುದರಿಂದ, ಪೂಜಾಂಗವಾಗಿ ಹಾಡುವವರನ್ನು ಯಕ್ಷಗಾನದವರು ಎನ್ನಲಾಗುತ್ತದೆ. ಇದಕ್ಕೆ ದಾಸಪಂಥವೂ ಹೊರತಲ್ಲ. ಕಲೆಗೊಂದು ಸ್ಥಾನ ಕಲ್ಪಿಸುವ ಭರದಲ್ಲಿ ಮೂಡಲಪಾಯ, ತೆಂಕುತಿಟ್ಟು, ದೊಡ್ಡಾಟ, ಶ್ರೀಕೃಷ್ಣ ಪಾರಿಜಾತ, ದಶಾವತಾರ ಆಟ ಎಲ್ಲವನ್ನೂ ಸೇರಿಸಿ ’ಯಕ್ಷಗಾನ’ವೆಂದು ಕರೆದುಬಿಟ್ಟರು, ಆದರೆ ದಶಾವತಾರ ಆಟವೆಂಬುದು ಯಕ್ಷಗಾನವಲ್ಲ, ಅದಕ್ಕೆ ತನ್ನದೇ ಆದ ಶಾಸ್ತ್ರೀಯತೆ ಇದೆ. ಹೇಗೆ ಹೇಗೋ ಕುಣಿದರೆ, ಗಾನಮಾಡಿದರೆ ಅದು ದಶಾವತಾರ ಆಟವಾಗುವುದಿಲ್ಲ.

ಬ್ರಹ್ಮಾವರದ ಹೊಳೆಯಿಂದಾಚೆಗೆ ಕೇರಳದವರೆಗಿನ ನಾಡು ತುಳುನಾಡೆಂದು ಗುರುತಿಸಲ್ಪಟ್ಟು ಗೇರುಸೊಪ್ಪೆ ನಗರದ ರಾಣಿಯ ಮಾಂಡಲಿಕರು ಬಾರಕೂರನ್ನು ರಾಜಧಾನಿಯನ್ನಾಗಿಸಿಕೊಂಡು ಅಲ್ಲಿ ಆಳುತ್ತಿದ್ದರು ಎಂಬುದು ಇತಿಹಾಸ. ಕೇರಳದ ಕಥಕ್ಕಳಿಯ ವೇಷಗಳನ್ನೇ ಹೋಲುವ ವೇಷಭೂಷಣಗಳನ್ನು ತೆಂಕುತಿಟ್ಟಿನಲ್ಲಿ ಕಾಣಬಹುದಾಗಿದೆ. ಅಲ್ಲದೇ ಆಂಗಿಕ, ಆಹಾರ್ಯ, ವಾಚಿಕ ಮತ್ತು ಸಾತ್ವಿಕ ಈ ನಾಲ್ಕೂ ಮಜಲುಗಳಲ್ಲಿ ಅತಿ ಭಿನ್ನವಾಗಿರುವ ತೆಂಕುತಿಟ್ಟು ಮತ್ತು ದಶಾವತಾರಗಳ ನಡುವಿನ ಸಾಮ್ಯ ಸಂಬಂಧವೆಂದರೆ ಕೇವಲ ಪ್ರಸಂಗ ಪಠ್ಯವೊಂದೇ! ತೆಂಕಿನಲ್ಲಿ ಬಳಸುವ ಜಾಗಟೆ ನುಡಿಸಲು ಬರುವಂಥದ್ದಲ್ಲ, ಮದ್ದಳೆಯ  ತಾತ್ಕಾರಕ್ಕೆ ಅಲ್ಲಿ ಮನ್ನಣೆಯೇ ಇಲ್ಲ, ಚಂಡೆಯ ಅಬ್ಬರ ಕೇರಳಿಗರ ಚಂಡೆಯ ದನಿಯನ್ನೇ ಹೋಲುವುದರಿಂದ ಇನ್ನಿತರ ವಾದ್ಯಗಳಿಗೆ ಪೂರಕವಾಗಿ ವಿಲಂಬಿತವಾಗಿ ಧೇನಿಸಬೇಕಿದ್ದ ಚಂಡೆಯ ಅಬರಾಟವೇ ಹೆಚ್ಚಿನದಾಗಿದೆ ಎಂಬುದನ್ನು ಗಮನಿಸಬೇಕು. ದಕ್ಷಿಣಕನ್ನಡ ಪ್ರಾಂತದ ವಿದ್ವಾಂಸರು ಅಭಿನಯಿಸಿ ತೋರಿಸಿಲಾರದ ತಮ್ಮ ನ್ಯೂನತೆಯನ್ನು ಉಪನ್ಯಾಸಗಳಂತಹ ವಾಗ್ಝರಿಗಳಿಂದ ತುಂಬಿಸಿಕೊಳ್ಳಲು ಯತ್ನಿಸಿದ್ದರೆ ಅದನ್ನೇ ಅನುಕರಿಸಿದ ದಶಾವತಾರ ಆಟದ ಕೆಲವು ಪಾತ್ರಧಾರಿಗಳು ಈ ನಮ್ಮ ರಂಗಕಲೆಯನ್ನು ಹಾಳುಗರೆಯುವುದಕ್ಕೆ ತಮ್ಮ ಕೊಡುಗೆ ನೀಡಿದರು ಎಂಬುದು ನಾಶಾರ ಅಂಬೋಣ.

ಮಂಟಪ ಉಪಾಧ್ಯರ ಏಕವ್ಯಕ್ತಿ ಪ್ರದರ್ಶನ ಪ್ರಸಂಗಗಳನ್ನು ದಶಾವತಾರ ಆಟದ ತಿಟ್ಟು ಎನ್ನುವುದು ತೀರಾ ಅಸಂಗತವೆಂದು ಹೇಳುವ ನಾಶಾ, “ಒಬ್ಬರೇ ನಗುವುದು ಮಾತನಾಡಿಕೊಳ್ಳುವುದು ಇದಕ್ಕೆಲ್ಲಾ ಏನೆನ್ನಬೇಕೆಂದುಕೊಳ್ಳುತ್ತಿದ್ದೆ, ಮಾರನೇದಿನ ಮುರುಕು ಬಸ್ ಸ್ಟ್ಯಾಂಡಿನಲ್ಲಿ ಹುಚ್ಚನೊಬ್ಬ ಒಬ್ಬನೇ ಮಾತನಾಡಿಕೊಂಡು ನಗುವುದನ್ನು ಮಾಡುತ್ತಿದ್ದುದನ್ನು ಕಂಡಾಗ ಉತ್ತರ ದೊರೆಯಿತು” ಎನ್ನುತ್ತಾರೆ-ಆಕ್ರೋಶದಿಂದ. ನಾಲ್ಕು ಆಯಾಮಗಳ ಸಮಗ್ರ ಸಮಷ್ಟಿಯ ಪಾರಮ್ಯದಿಂದ ವೈಭವೋಪೇತವಾಗಿ ಮೂಡಬೇಕಾದ ರಂಗನಾಟಕವನ್ನು ಕೇವಲ ನೃತ್ಯಕ್ಕೆ, ಕೇವಲ ಗಾನಕ್ಕೆ, ಕೇವಲ ಅಭಿನಯಕ್ಕೆ ಅಥವಾ ಕೇವಲ ಮಾತುಗಾರಿಕೆಗೆ ಮೀಸಲಾಗಿಸುವುದನ್ನು ಶಾಸ್ತ್ರಿಯವರು ಒಪ್ಪುವುದಿಲ್ಲ. ಇದರ ಆಳಗಲ ವಿಸ್ತಾರಗಳನ್ನು ಅರಿಯದೇ ಏಕವ್ಯಕ್ತಿ ‘’ಪ್ರಹಸನ’’ಕ್ಕೆ ಶತಾವಧಾನಿ ಡಾ| ರಾ. ಗಣೇಶರು ಪಠ್ಯಬರೆದುಕೊಟ್ಟರು ಎಂಬುದಕ್ಕಾಗಿ ನಾಶಾ ವಿಷಾದಿಸುತ್ತಾರೆ. ನಾಲ್ಕು ಆಯಾಮಗಳ ಭಾಗವೇ ಆಗಿ, ಕಲಾವಿದರೊಂದಿಗೆ ಪ್ರಸಂಗದಾದ್ಯಂತ ಸಾತತ್ಯವಹಿಸುವ ’’ಆಡುಗಾರ’’ ಕೇವಲ ರಾಗಗಳ ಹಾಡುಗಾರನಲ್ಲಾ-ಬದಲಾಗಿ ಆತನೊಬ್ಬ ಕಥಾನಕವನ್ನು ಆಡಿಸುವ ’ಆಡುಗಾರ’ ಎನ್ನುವ ನಾಶಾ, ಮೂಡ್ಕಣಿ ನಾರಾಯಣ ಹೆಗಡೆಯಂತಹ ಮಹಾನ್ ಕಲಾವಿದರ ಕಾಲಘಟ್ಟದ ಘಟನೆಗಳನ್ನು ಓದುಗರ ಮುಂದೆ ಹರಡಿಕೊಂಡು ಕುಳಿತುಬಿಡುತ್ತಾರೆ! ಬೆಳ್ಳಿ-ಕಂಚು ಮಿಶ್ರಲೋಹಗಳ ಎರಕದಿಂದ ತಯಾರಿಸಿದ ದಶಾವತಾರದ ತಾಳಕ್ಕೆ ಲಯ-ಗಚ್ಚು ಮುಖ್ಯ, ಮೃದಂಗಕ್ಕೆ ತಾತ್ಕಾರ[ಬೋಲ್] ಮುಖ್ಯವೆಂಬುದನ್ನು ಹೇಳುವ ಗಂಗಾಧರರು, ರಂಗರೂಪಕದ ಭಾಗವೇ ಆದ ಭಾಗವತ, ಶೃತಿಯಾತ, ಮದ್ದಳೆಗಾರ ಮತ್ತು ಚಂಡೆವಾದಕ ಎಲ್ಲರೂ ಧರಿಸಬೇಕಾದ ಸಾಂಪ್ರದಾಯಿಕ ದಿರಿಸುಗಳ ಬಗೆಗೂ ಹೇಳುತ್ತಾರೆ.         

ಸಂವಹನ ಪ್ರಕ್ರಿಯೆಯಲ್ಲಿ ಭಾಷಾಬೆಳವಣಿಗೆಯ ನಂತರವೇ ಅದಕ್ಕೊಂದು ಅಂಗ-ಆಕಾರ ಕಲ್ಪಿತಗೊಂಡು, ವ್ಯಾಕರಣ-ಛಂದಸ್ಸು ಮೊದಲಾದವುಗಳು ರೂಪಿತವಾಗುತ್ತವೆ; ಅದರಂತೆಯೇ ಕಲೆ-ಸಾಹಿತ್ಯ-ಸಂಗೀತಗಳೂ ಕೂಡ ಇದಕ್ಕೆ ಹೊರತಲ್ಲ. ಬೆಳವಣಿಗೆಯ ಒಂದು ಹಂತದ ನಂತರ ಅವುಗಳಿಗೆ ಅವುಗಳದ್ದೇ ಆದ ಸಂವಿಧಾನಗಳು ಸ್ಥಾಪಿತವಾಗುತ್ತವೆ. ಕಾಲಘಟ್ಟಗಳಲ್ಲಿ ಹೊಸ ಹೊಸ ಮಾರ್ಪಾಡುಗಳು ಆಗುತ್ತಲೇ ಇರುವುದು ಹೊಸತನ ಬಯಸುವ ಪ್ರೇಕ್ಷಕರ/ವೀಕ್ಷಕರ/ಸಭಾಸದರ/ಶ್ರೋತ್ರಗಳ/ಓದುಗರ ನಡವಳಿಕೆಯನ್ನೂ ಅವಲಂಬಿಸಿರುತ್ತದೆ. ಭಾಷೆಯಾಗಿ ಸಂಸ್ಕೃತ ಇಂದಿಗೂ ತನ್ನತನವನ್ನು ಕಳೆದುಕೊಳ್ಳದೇ  ಸುಂದರವಾಗಿಯೂ ಸಮೃದ್ಧವಾಗಿಯೂ ಉಳಿದುಕೊಂಡಿದೆ. ಅದೇರೀತಿ, ಶಿಷ್ಟಕಲೆಯಾದ ’ದಶಾವತಾರ ಆಟ’ಕ್ಕೆ ಕೆಲವು ಅಲಿಖಿತ ಮತ್ತು ಅನುಕರಿಸಲ್ಪಟ್ಟ/ಅನುಸರಿಸಲ್ಪಟ್ಟ ನಿಯಮಗಳಿವೆ. ಪರಿವರ್ತನೆ ಜಗದ ಸಹಜ ನಿಯಮ. ಆದರೆ ತನ್ನತನವನ್ನು ಇಟ್ಟುಕೊಂಡೂ ನವಯುಗಕ್ಕೆ ಸ್ಪಂದಿಸುವ ಕಲೆಯಾಗಿ ’ದಶಾವತಾರ ಆಟ’ ಬೆಳೆಯಬೇಕು. ಹೊರಗಿನ ಹೊಸ ಹೊಸ ಉತ್ತಮ ರಂಗಪ್ರಯೋಗಗಳನ್ನು ಪೂರ್ವರಂಗಕ್ಕೆ/ಮೂಲರಂಗಚರ್ಯೆಗೆ ಭಂಗಬರದಂತೇ ಬಳಸಿಕೊಳ್ಳಬಹುದು; ಹಾಗೆ ಬಳಸಿಕೊಳ್ಳುವಾಗ ನಾಲ್ಕು ಆಯಾಮಗಳ ಸಮಷ್ಟಿಯ ನಿಯಮಗಳನ್ನು ಮೀರಿ ಜೋಡಣೆಯಾಗಬಾರದು. ಪಾತ್ರಧಾರಿ ಉಪನ್ಯಾಸ ಕೊರೆಯುವ ಬದಲು ಅಧ್ಯಯನಶೀಲನಾಗಿದ್ದು ನೂರು ಮಾತುಗಳಲ್ಲಿ ಹೇಳುವುದನ್ನು ಹಿತಮಿತವಾಗಿ ಮೂರೇ ಮಾತಿಗೆ ಇಳಿಸುವಷ್ಟು ಪ್ರೌಢಿಮೆ ಹೊಂದಿರಬೇಕು. ಕೊಡುವ ಗಂಟಿನಮೇಲೆ ಕಣ್ಣಿಟ್ಟು ನಡೆಯದೇ, ಹಿರಿಯರು ಬಳುವಳಿಯಾಗಿತ್ತ ’ಇಡಗಂಟ’ನ್ನು ಕಳೆಯದೇ, ಅಭಿಜಾತ ಕಲಾವಿದನಾಗಿ ಕಲೆಯನ್ನು ಪೋಷಿಸುವ ಮನೋಧರ್ಮ  ದಶಾವತಾರ ಕಲಾವಿದನಲ್ಲಿರಬೇಕು; ಅದು ನಾವು ನಮ್ಮ ಪೂರ್ವಜರಿಗೆ ಸಲ್ಲಿಸುವ ಕೃತಜ್ಞತೆ ಮತ್ತು ಕರ್ತವ್ಯ ಕೂಡ.         

ಹೈಗನಾಡಿನ ’’ದಶಾವತಾರ ಆಟ’’ ತನ್ನ ಅಂತಃಸತ್ವವನ್ನು ಹಾಗೇ ಉಳಿಸಿಕೊಳ್ಳಬೇಕಾದರೆ ಈ ಪ್ರಾಂತದ ನಿಜವಾದ ರಂಗಚಿಂತಕರು ಕಾರ್ಯಪ್ರವೃತ್ತರಾಗಿ ಅದಕ್ಕೊಂದು ಲಿಖಿತರೂಪದ ಸಂವಿಧಾನದ ನೆಲೆಗಟ್ಟು  ಕಲ್ಪಿಸಬೇಕೆಂಬುದು ಶಾಸ್ತ್ರಿಯವರ ಅಪೇಕ್ಷೆ. ಅಂದಿನ ಕಲಾತಪಸ್ವಿಗಳಾದ ಮೂಡ್ಕಣಿ ನಾರಾಯಣ ಹೆಗಡೆ, ಹೆಗಡೆಯ ಗಣಪ ಹೆಗಡೆ, ಮಾಳ್ಕೋಡ್ ಗಣಪ ಹೆಗಡೆ, ವಾಸು ಆಚಾರಿ, ಕೊಕ್ಕರ್ಣಿ ನರಸಿಂಹ ಕಮ್ತಿ, ಗಣಪತಿ ಪ್ರಭು, ಕಿಟ್ಟಪ್ಪ, ಮಾರ್ವಿ ರಾಮಕೃಷ್ಣ ಹೆಬ್ಬಾರ, ಮಲ್ಲಗದ್ದೆ ಗಣೇಶ ಹೆಗಡೆ ಮೊದಲಾದ ರಂಗಕರ್ಮಿಗಳು ವಿದ್ಯುದ್ದೀಪ, ಮೈಕುಗಳ ಆಡಂಬರವಿಲ್ಲದ ಆ ಕಾಲಘಟ್ಟದಲ್ಲಿ, ವಿಶಾಲ ಕತ್ತಲ ಬಯಲಲ್ಲಿ ನಾಲ್ಕು ಅಡಕೆ ಕಂಬಗಳನ್ನು ನೆಟ್ಟು ನಿರ್ಮಿಸಿದ ರಂಗಸ್ಥಳದಲ್ಲಿ ಹೇಗೆ ಈ ಕಲೆಯನ್ನು ಪೋಷಿಸಿದರು ಎಂಬುದನ್ನು ಅವಲೋಕಿಸುತ್ತಾ, ಅನ್ಯ ಮಾಧ್ಯಮಗಳ ಹಾವಳಿಯಿದ್ದರೂ, ತನ್ನತನದಿಂದ ಇನ್ನೂ ಬದುಕಿರುವ ಈ ಸಮಗ್ರ ಕಲೆಗೆ ’’ದಶಾವತಾರ ಆಟ’’ ಎಂದೇ ಮರುನಾಮಕರಣವಾಗಬೇಕು ಎಂಬುದು ಶಾಸ್ತ್ರಿಯವರ ಬಯಕೆ; ’’ದಶಾವತಾರಿಷ್ಟ’’ದ ನಾಶಾರ ಹೇಳಿಕೆಗಳಲ್ಲಿ ಸತ್ಯವಿದೆ ಎಂಬುದನ್ನು ದಶಾವತಾರ ಆಟದ ಮೂಲ ಅಭಿರುಚಿಯನ್ನು ಹೊಂದಿದ ಹೈಗನಾಡಿಗರು ಬಲ್ಲರು.   

"ಎಂದೋ ಆಗಬೇಕಾಗಿದ್ದ ಕಾರ್ಯ ಇಂದು ಆಯಿತಲ್ಲ"ವೆಂದು ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಉದ್ಗರಿಸಿದ್ದರೆ, ದಕ್ಷಿಣೋತ್ತರ ಕನ್ನಡ ಜಿಲ್ಲೆಯಾದ್ಯಂತ ನೆಲೆಸಿರುವ ಬಹುಶ್ರುತ ವಿದ್ವಾಂಸರು ಶಾಸ್ತ್ರಿಗಳ ಚಿಂತನೆಯನ್ನು ಮಾನ್ಯಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕಾರಂತರ ನಿರ್ಲಕ್ಷ್ಯದಿಂದಾಗಿ ಅಸಡ್ಡೆಗೆ ಒಳಗಾಗಿ, ಜಾನಪದ ಕಲೆಯೆಂದೇ ಬೋರ್ಡು ಹಾಕಿಕೊಂಡ ’ಅಶಾವತಾರ ಆಟ’ದ ಈ ಚಿಂತನ ಗ್ರಂಥದಲ್ಲಿ ’ಆಡುಗಾರ’, ’ರಾಗವತ’ ಮೊದಲಾದ ನವಪದಗಳನ್ನು ರಂಜನೀಯವಾಗಿ ಸೃಜಿಸಿದ ಶಾಸ್ತ್ರಿಗಳ ವಿಡಂಬನಾ ಮನೋಭಾವ ಗಂಭೀರ ಓದಿನ ನಡುವೆ ಕಿರುನಗೆಗೆ ಕಾರಣವಾಗುತ್ತದೆ. ದಶಾವತಾರ ಹಿಂದೆ ಹೇಗಿತ್ತು, ನಡುವೆ ಹೇಗಿತ್ತು, ಇಂದು ಹೇಗಿದೆ ಮತ್ತು ಮುಂದೆ ಏನಾಗಬೇಕು ಎಂಬೆಲ್ಲ ಅಂಶಗಳು ಚರ್ವಿತಚರ್ವಣವೆನಿಸಿದ ರೀತಿಯಲ್ಲಿ ಹೇಳಲ್ಪಟ್ಟಿವೆ. ಒಟ್ಟಾರೆ, ’ದಶಾವತಾರಿಷ್ಟ’ ಆಯುರ್ವೇದೀಯ ಔಷಧಿಯಂತೇ, ದಶಾವತಾರಕ್ಕೆ ಅಂಟಿಕೊಂಡ ’ಯಕ್ಷಗಾನ’ವೆಂಬ ರೋಗವನ್ನು ಕಾಲಕ್ರಮದಲ್ಲಿ ಬೇರುಸಹಿತ ನಿವಾಳಿಸಬಲ್ಲ ಲಕ್ಷಣಗಳು ಕಾಣುತ್ತವೆ.