ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, July 28, 2011

ಸತ್ತ ಬಾಳಿಗೆ ಮತ್ತೆ ಅಮೃತವೆರೆದೂ ಕತ್ತಲಾಳಗಳಲ್ಲಿ ದೀಪವುರಿದೂ

ಸಾಂಕೇತಿಕ ಚಿತ್ರ ಕೃಪೆ : ಅಂತರ್ಜಾಲ

ಸತ್ತ ಬಾಳಿಗೆ ಮತ್ತೆ ಅಮೃತವೆರೆದೂ
ಕತ್ತಲಾಳಗಳಲ್ಲಿ ದೀಪವುರಿದೂ


" ಹಲೋ "

ದೂರವಾಣಿಯಲ್ಲಿ ಅತ್ತ ಕಡೆಯ ಧ್ವನಿ ಕೇಳಿ ಪ್ರಕಾಶನಿಗೆ ಮನಸ್ಸಿನಲ್ಲಿ ಸಾವಿರ ಮೊಂಬತ್ತಿ ಬೆಳಗಿದಷ್ಟು ಸಂತಸವಾಯ್ತು. ಅದು ಚಿರಪರಿಚಿತ ದನಿಯೇ. ಆ ದನಿಯಲ್ಲಿ ಇರುವ ಮಾರ್ದವತೆ, ಇಂಪು, ನಾಜೂಕು ಬೇರೆಲ್ಲೂ ಸಿಗಲೇ ಇಲ್ಲ! ಆ ಕಂಠ ಶಾರೀರವನ್ನು ಆಲಿಸದೇ ಹದಿನೈದು ವರ್ಷಗಳೇ ಕಳೆದಿವೆ; ಆದರೂ ಆ ಕಂಠ ಮರೆತು ಹೋಗುವುದಲ್ಲ, ತನ್ನ ಜೀವವಿರುವವರೆಗೂ ಅದು ಶಾಶ್ವತ ಎಂಬ ಅನಿಸಿಕೆ ಎಂದೋ ಆತನಲ್ಲಿ ನೆಲೆನಿಂತುಬಿಟ್ಟಿದೆ. ಬದುಕಿನಲ್ಲಿ ಹಲವು ಚೌಪದಿಗಳನ್ನೂ ಷಟ್ಪದಿಗಳನ್ನೂ ಹಾಡಿದ ಸಿರಿಕಂಠದ ಮರೆವು ಅದು ಹೇಗೆತಾನೇ ಸಾಧ್ಯ ?

ಅಂದಿನ ದಿನಗಳಲ್ಲಿ ತಾನು ಮತ್ತು ಸುಮಾ ಚಾಮರಾಜಪೇಟೆಯ ವಿದ್ವಾನ್ ಕೃಷ್ಣಮೂರ್ತಿಗಳಲ್ಲಿ ಒಟ್ಟಿಗೇ ಸಂಗೀತವನ್ನು ಅಭ್ಯಸುತ್ತಿದ್ದುದು ಪರಿಚಯಕ್ಕೆ ಮೂಲ ಕಾರಣ. ಕರ್ನಾಟಕ ಸಂಗೀತದ ಹಲವು ಪಲಕುಗಳನ್ನು ಯುಗಳವಾಗಿ ಹಾಡಿ ತೋರಿಸಿ ಗುರುಗಳಿಂದ ಶಹಭಾಷ್ ಗಿಟ್ಟಿಸಿದವರು ಪ್ರಕಾಶ್-ಸುಮಾ. ಆರೋಹಣ ಅವರೋಹಣದ ಕಾಲದಲ್ಲಿ ಲೀಲಾಜಾಲವಾಗಿ ಹೊರಹೊಮ್ಮುವ ವಿಶಿಷ್ಟ ಅನನ್ಯ ಕಂಠ ಮಾರ್ದವವನ್ನು ಕಂಡು ಕೃಷ್ಣಮೂರ್ತಿಗಳು ಸುಮಾರಾಣಿಯನ್ನು ಬಹಳವಾಗಿ ಹೊಗಳುತ್ತಿದ್ದರು. ಆ ಕಾಲಘಟ್ಟದಲ್ಲೇ ಪ್ರಕಾಶನ ಹೃದಯದ ಬಾಗಿಲನ್ನು ತಟ್ಟಿದವಳು ಸುಮಾ. ಅಲ್ಲೀವರೆಗೂ ಕೇವಲ ಸಂಗೀತದ ಸಹಪಾಠಿಯಾಗಿದ್ದ ಸುಮಾ ಆ ದಿನಗಳಲ್ಲಿ ಇನ್ನೂ ಹಲವು ರೂಪಗಳಲ್ಲಿ ಕಂಡಳು.

ಕಾರ್ಯೇಷು ದಾಸಿ ಶಯನೇಷು ರಂಭಾ ....ಮೊದಲಾಗಿ ಬರದ ಆ ಶ್ಲೋಕವನ್ನು ಮನದಲ್ಲೇ ಬರೆದುಕೊಳ್ಳುತ್ತಾ ಆ ಎಲ್ಲಾ ಪಾತ್ರಗಳಲ್ಲಿ ಸುಮಾ ತನಗೊದಗಿಬಿಟ್ಟರೆ ಬ್ರಹ್ಮಾಂಡದಲ್ಲೇ ತನ್ನಷ್ಟು ಸುಖಿ ಬೇರೇ ಯಾರೂ ಇಲ್ಲ ಎಂಬ ಭಾವ ಸ್ಫುರಿಸಲು ಹತ್ತಿತ್ತು. ಪ್ರತಿದಿನವೂ ಭೇಟಿಯಾಗುತ್ತಿದ್ದರೂ ಒಟ್ಟಿಗೇ ಹಲವು ರಾಗಗಳನ್ನು ಹಂಚಿಕೊಂಡು ಹಾಡುತ್ತಿದ್ದರೂ ತನ್ನ ಮನದಿಂಗಿತವನ್ನು ಅವಳಲ್ಲಿ ನಿವೇದಿಸುವ ತಾಕತ್ತು ಯಾಕೋ ಬಂದಿರಲೇ ಇಲ್ಲ! ಆನಂದಭೈರವೀ ರಾಗದ ಆಲಾಪಗಳನ್ನು ಅಭ್ಯಸಿಸುವಾಗ ಆನಂದಭೈರವೀ ಸಿನಿಮಾ ನಾಯಕಿಯ ನೆನಪಾಗಿ ಮತ್ತೆ ಆತನ ಹೃದಯ ಕೋಗಿಲೆ ಹಾಡತೊಡಗಿದ್ದರೂ, ಹೃದಯಕದ್ದ ಕಳ್ಳಿ ಪಕ್ಕದಲ್ಲೇ ಕುಳಿತಿದ್ದರೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಆತನಿದ್ದ. ಹೇಳಿದಮೇಲೆ ಒಂದೊಮ್ಮೆ ಏನಾದರೂ ಆಕೆ ಬೈದು ಬಿಟ್ಟರೆ ಅಥವಾ ತಮ್ಮನಡುವಿನ ಸ್ನೇಹ ಬಾಂಧವ್ಯ ಆ ಕಾರಣದಿಂದ ಮುರಿದುಹೋಗಿಬಿಟ್ಟರೆ ಎಂಬಿತ್ಯಾದಿ ಹಲವು ಆಲೋಚನೆಗಳು ನಾಮೇಲು ತಾಮೇಲು ಎಂದು ಮನದ ಮೂಸೆಯಲ್ಲಿ ಹಾರಿ ಕುಪ್ಪಳಿಸಿ ಆ ವಿಷಯದಲ್ಲಿ ಆತ ನಿತ್ರಾಣನಾಗಿಬಿಡುತ್ತಿದ್ದ. ಜೊತೆಗೆ ಸತ್ಸಂಪ್ರದಾಯಸ್ಥ ಮನೆತನದಲ್ಲಿ ಬೆಳೆದ ತನಗೆ ಜಾತಕ-ಗೀತಕ ಹೊಂದಾಣಿಕೆಯಾಗದೇ ಅವಳನ್ನು ಮದುವೆಯಾಗಲು ಮನೆಯವರು ಬಿಡುತ್ತಾರೆಯೇ ಎಂಬ ಪ್ರಶ್ನೆ ಕೂಡ ಕಾದ ಬಾಣಲಿಗೆ ನೀರೆರಚಿದಂತೇ ಆಗಾಗ ಆಗಾಗ ಹೊಡೆತಕೊಡುತ್ತಿತ್ತು.

ಹತ್ತಾರು ತಿಂಗಳು ಕಳೆಯುತ್ತಿದ್ದಂತೇ ಒಂದೆರಡು ದಿನ ಸುಮಾ ಪಾಠಕ್ಕೆ ಬಂದಿರಲಿಲ್ಲ. ಗುರುಗಳಿಗೆ ಆಕೆ ವಿಷಯ ತಿಳಿಸಿದ್ದರೂ ಆತನಿಗೆ ಯಾಕೆ ಎಂಬುದೇ ತಿಳಿಯಲಿಲ್ಲ. ಅಂದಿನ ಪಾಠಗಳು ಮುಗಿದಮೇಲೆ ಮನದಲ್ಲಿನ ತುಮುಲ ತಡೆಯಲಾರದೇ ಮನೆಗೆ ಹೋದಮೇಲೆ ಮಂಕಾಗಿ ಮಲಗಿಬಿಟ್ಟಿದ್ದ ಪ್ರಕಾಶ. ಊಟಬೇಡ, ತಿಂಡಿಬೇಡ, ಟಿವಿ ನೋಡುವುದು-ಎಫ್.ಎಮ್ ರೇಡಿಯೋ ಕೇಳುವುದು ಯಾವುದೂ ಊಹೂಂ. ಮನದಲ್ಲಿ ಸುಮಾ ಹಾಡಿದ ಕೆಲವು ಗೀತೆಗಳೇ ಮೊಳಗುತ್ತಿದ್ದವು. ಹಾಗೆ ಅವು ಮೊಳಗುವಾಗ ಆಕೆಯೇ ಭರತನಾಟ್ಯಗೈದಂತೇ ಭಾಸವಾಗಿ ತನ್ನೊಳಗೇ ಅದೇನೋ ಒಂಚೂರು ಆನಂದವೂ ಆಯಿತು. ಮರುಕ್ಷಣ ಮತ್ತೆ ಆಕೆ ಯಾಕೆ ಬರಲಿಲ್ಲಾ ಎಂಬಾ ಚಿಂತೆ.

ಮಗಯಾಕೆ ಮಬ್ಬಾದ ಎಂದು ತಾಯಿ ಮಂಗಳಮ್ಮ ತಿರುತಿರುಗಿ ನೋಡಿದರು. ಯಾವಾಗಲೂ ಹಾಲ್‍ನಲ್ಲಿ ಕೂತು ಹರಟುತ್ತಿದ್ದ ಮಗ ಹಾಗೆ ಏಕಾಏಕಿ ಮಲಗಿದ್ದೇ ಇರಲಿಲ್ಲ. ಜ್ವರವಿಲ್ಲ-ಶೀತವಿಲ್ಲ, ಹೊಟ್ಟೆನೋವಂತೂ ಇರಲಿಕ್ಕಿಲ್ಲ

" ಯಾಕೆ ಮಗನೇ ಏನಾಯ್ತು ಹೆತ್ತ ಅಮ್ಮನಲ್ಲಿಯೋ ಹೇಳಲು ಸಂಕೋಚವೇನೋ ? " ಕೇಳಿದರು.

" ಏನೂ ಇಲ್ಲಮ್ಮ ಸುಮ್ನೇ ಯಾಕೋ ಬೇಜಾರಾಗಿತ್ತು ಅದ್ಕೇ ಮಲಗಿದ್ದೆ "

" ಊಟ ಮಾಡುಬಾರೋ ಅವರೇಕಾಳಿನ ಹುಳಿ ಮಾಡಿದೀನಿ ನಿನ್ನಿಷ್ಟದ್ದು ಮಾಡದೇ ತುಂಬಾ ದಿನ ಆಗಿತ್ತಲ್ವಾ ? "

" ಯಾಕೋ ಹಸಿವೇನೇ ಇಲ್ಲಮ್ಮಾ ಆಮೇಲೆ ಮಾಡ್ತೀನಿ "

ಅಮ್ಮ ಕರೆಕರೆದು ಸೋತರು. ಅಪ್ಪ ವೆಂಕೋಬರಾಯರು ಸ್ವಲ್ಪ ನಯವಾಗಿಯೇ ಗದರಿಕೊಂಡರು. ಯಾವುದೂ ಫಲಿಸಲಿಲ್ಲ. ಅನೇಕಾವರ್ತಿ ಪ್ರಯತ್ನಿಸಿದಮೇಲೆ ಶಾಸ್ತ್ರಕ್ಕೆ ಊಟಮಾಡಿ ಎದ್ದು ಕೈತೊಳೆದು ಮತ್ತೆ ಮಲಗಿಬಿಟ್ಟ ಪ್ರಕಾಶ.

ದಿನವೊಪ್ಪತ್ತಿನಲ್ಲಿ ಸೋದರಮಾವ ಯಾವುದೋ ಕೆಲಸಕ್ಕೆ ಮನೆಗೆ ಬಂದರು. ಬಂದವರೇ ವಿಷಯ ತಿಳಿದು ಖಾಡಾಖಾಡಿ

" ನಿನ್ನ ಮನಸ್ಸಲ್ಲೇನಿದೆ ಎಂದು ಹೇಳಲೇಬೇಕು " ಹಠಹಿಡಿದು ಕೂತುಬಿಟ್ಟರು.
ಮುಳುಗುವಾತನಿಗೆ ಯಾವುದೋ ಮರದ ಬೀಳಲೊಂದು ಕೈಗೆ ಸಿಕ್ಕು ಬದುಕುವ ಅವಕಾಶ ಲಭ್ಯವಾಗುವಂತೇ ಮಾವನನ್ನು ಬಿಟ್ಟರೆ ಇನ್ನು ಹೇಗೂ ಯಾರಲ್ಲಿಯೂ ಹೇಳಲಾಗದ ಮನೋವ್ಯಾಕುಲತೆಯಿಂದ ತನ್ನ ಮನಸ್ಸಿನ ತುಮುಲವನ್ನು ಅದು ಹೇಗೋ ಸ್ವಲ್ಪ ಹೇಳಿಬಿಟ್ಟ.

ಮಗನ ಆಂತರ್ಯವನ್ನು ಅರಿತ ಮಂಗಳಮ್ಮ-ವೆಂಕೋಬರಾಯ ದಂಪತಿ
" ಮಗಾ ಅದು ಶ್ರೀಮಂತರ ಮನೆ ವಸ್ತು, ನಮಗೆ ದಕ್ಕುವಂಥದ್ದಲ್ಲ, ಸುಮ್ನೇ ಯಾಕೆ ಅದಕ್ಕೆ ಹಂಬಲಿಸಿ ಆಕಾಶಕ್ಕೆ ಏಣಿಹಾಕ್ತೀಯಾ ? ಶೀಘ್ರದಲ್ಲೇ ಸುಂದರ ಹುಡುಗಿಯೊಂದನ್ನು ನೋಡಿ ನಿನಗೆ ಮದುವೆಮಾಡಿಸುತ್ತೇವೆ. ಆಕೆಯನ್ನು ಮರೆತುಬಿಡು " ಎಂದು ಹೇಳಿದರು.

ಆತ ನಿರುತ್ತರಿಯಾಗಿದ್ದ, ಹಿಮಾಲಯದಂತೇ ತನ್ನ ನಿರ್ಧಾರದಲ್ಲಿ ಅಚಲನಾಗಿದ್ದ, ಅಲ್ಲಿರುವ ತಪಸ್ವಿಗಳಂತೇ ಮಹಾಮೌನ ಧರಿಸಿ ಕುಳಿತಿದ್ದ! ಮಗನ ಈ ಸ್ಥಿತಿಕಂಡು ಸಹಿಸಲಾರದ ಪಾಲಕರು ಮಾರನೇ ಬೆಳಿಗ್ಗೆ ಹೂವು-ಹಣ್ಣುಗಳನ್ನು ಹಿಡಿದುಕೊಂಡು ಜಯನಗರದಲ್ಲಿರುವ ದ್ವಾರಕಾನಾಥರ ಮನಗೆ ದೌಡಾಯಿಸಿದರು.

ಬೆಲ್ ಮಾಡಿದಾಗ ಬಾಗಿಲು ತೆರೆದವರೇ ನೀರಜಮ್ಮ.

" ಬನ್ನಿ , ಕೂತ್ಕೊಳಿ ತಾವು ಯಾರೆಂದು ಗೊತ್ತಾಗ್ಲಿಲ್ಲ ? ಯಜಮಾನ್ರು ಬಾತ್‍ರೂಮ್‍ನಲ್ಲಿದ್ದಾರೆ ಇನ್ನೇನು ಬರ್ತಾರೆ ಕೂತಿರಿ " ಎಂದರು.

ಮಗಳು ಅಲ್ಲೆಲ್ಲೂ ಕಾಣಲಿಲ್ಲ. ಸ್ನಾನಮುಗಿಸಿದ ದ್ವಾರಕಾನಾಥರು " ಶುಕ್ಲಾಂಬರಧರಂ ...." ಶ್ಲೋಕಗಳನ್ನೆಲ್ಲಾ ಹೇಳಿಕೊಳ್ಳುತ್ತಾ ಬಂದರು. " ಬಂದೆ ಒಂದ್ನಿಮಿಷ " ಎನ್ನುತ್ತಾ ದೇವರಕೋಣೆಗೆ ಹೋಗಿ ಕಡ್ಡಿಹಚ್ಚಿ ಹೂವಿಟ್ಟು ಕೈಮುಗಿದು ಆಚೆ ಬಂದರು.

" ತಮ್ಮ ಪರ್ಚಯ ಸಿಗ್ಲಿಲ್ಲಾ ? "

" ನಾನು ವೆಂಕೋಬರಾಯ ಈಕೆ ನನ್ನ ಹೆಂಡ್ತಿ ಮಂಗಳ "

" ಏನ್ಕುಡಿತೀರಿ ಕಾಫೀ ಟೀ ? "

" ಏನೂ ಬೇಡ ನಮ್ದಾಗಲೇ ತಿಂಡಿ-ತೀರ್ಥ ಎಲ್ಲಾ ಪೂರೈಸಿದೆ "

" ಅಬ್ಯಂತರವಿಲ್ಲಾಂದ್ರೆ ತಾವು ಬಂದ ಕಾರಣ ಕೇಳ್ಬಹುದೇ ? "

" ನಮ್ಮ ಮಗ ಪ್ರಕಾಶ ......." ಎಂದು ಆರಂಭಿಸಿ ವೃತ್ತಾಂತವನ್ನು ಅರುಹಿದರು.

ಎಲ್ಲವನ್ನೂ ಕೇಳಿಸಿಕೊಂಡ ದ್ವಾರಕಾನಾಥರು " ಸದ್ಯಕ್ಕೆ ಆಕೆಯ ಮದುವೆಯ ಬಗ್ಗೆ ಆಲೋಚನೆ ಇಲ್ಲ ಮಾಡೋ ವಿಚಾರ ಬಂದಾಗ ತಿಳಿಸ್ತೇನೆ " ಎಂದುಬಿಟ್ಟರು. ಅಡ್ಡಗೋಡೆಯಮೇಲೆ ದೀಪವಿಟ್ಟಂತಾಗಿ ವೆಂಕೋಬರಾಯ ದಂಪತಿ ಬಡಾ ಮುಖ ಮಾಡಿಕೊಂಡು ಮನೆ ಕಡೆ ಹೊರಟರು.

ಅದಾದ ಹದಿನೈದಿಪ್ಪತ್ತು ದಿನಗಳಲ್ಲೇ ದ್ವಾರಕಾನಾಥರು ಸುಮಾಗೆ ತಮ್ಮ ಅಂತಸ್ತಿಗೆ ತಕ್ಕ ಶ್ರೀಮಂತ ವರನೊಬ್ಬನನ್ನು ನೋಡಿದರು. ಈ ವಿಷಯ ಪಾಠದ ಮನೆಗೂ ಹೇಗೋ ತಿಳಿಯಿತು. ಗುರು ಕೃಷ್ಣಮೂರ್ತಿಗಳು

" ಏನಮ್ಮಾ ಮದುವೇನಂತೆ? ಮದುವೆ ಆಗೋಕ್ಮುಂಚೆ ಎಲ್ಲಾ ರಾಗಗಳನ್ನೂ ಸಂಪೂರ್ಣ ಅಭ್ಯಾಸ ಮಾಡಿಕೊಂಡು ಬಿಡು. ಆಮೇಲೆ ಅಂದ್ರೆ ನಿಧಾನ ಆಗೋಗುತ್ತೆ, ಆಗ್ದೇ ಹೋದ್ರೂ ಹೋಯ್ತೆ " ಎಂದುಬಿಟ್ಟರು.

ಪಕ್ಕದಲ್ಲೇ ಕುಳಿತಿದ್ದ ಪ್ರಕಾಶನಿಗೆ ಎಲ್ಲವೂ ಕೇಳಿಸಿಬಿಟ್ಟಿತು. ಆದರೂ ಆತ ಸುಮಾಳಲ್ಲಿ ಆ ವಿಷಯ ಮಾತನಾಡಲಿಲ್ಲ. ಒಳಗೊಳಗೇ ನೋವನ್ನು ತಿಂದ. ತಿಂಗಳು ಕಳೆಯುವಷ್ಟರಲ್ಲಿ ಒಂದುದಿನ ಪ್ರಕಾಶನಿಗೆ ಲಗ್ನದ ಆಮಂತ್ರಣ ಪತ್ರಿಕೆ ಸಿಕ್ಕಿತು. ಅಸಾಧ್ಯ ಮನೋಮಂಡಿಗೆಯನ್ನು ಅನುಭವಿಸಿದ ಆತ ಪ್ರೀತಿಸಿದ ಹುಡುಗಿ ಸುಖವಾಗಿದ್ದರೇನೆ ಸಾಕು ಎಂಬ ಅಂತಿಮ ತೀರ್ಮಾನಕ್ಕೆ ಬಂದುಬಿಟ್ಟ! ಪ್ರೀತಿ ನಲುಗಬಾರದು. ಕೇವಲ ಆಕೆ ತನ್ನ ಮಡದಿಯಾಗಿ ಬರಲಿಲ್ಲವೆಂಬ ಕಾರಣಕ್ಕೆ ಆಕೆಗೆ ಹಿಂಸೆ ಕೊಡುವುದಾಗಲೀ ಅಥವಾ ಆಕೆಯ ಲಗ್ನಕ್ಕೆ ತೊಂದರೆ ಕೊಡುವುದಾಗಲೀ ಸರಿಯಲ್ಲ ಎಂಬ ವಿವೇಚನೆ ಆತನಲ್ಲಿತ್ತು. ಎಷ್ಟೆಂದರೂ ಆತ ಸಂಗೀತವನ್ನೂ ಕಲಿತ ಸುಸಂಸ್ಕೃತ ಸದ್ಗುಣಿ.

ವೆಂಕೋಬರಾಯರ ಮನೆಗೆ ಪ್ರತ್ಯೇಕ ಆಮಂತ್ರಣ ಬರಲೇ ಇಲ್ಲ. ಮದುವೆ ಜಯನಗರ ಸೌತೆಂಡ್ ಸರ್ಕಲ್ ಹತ್ತಿರದ ’ ಪೈ ವಿಸ್ಟಾ ’ ಹಾಲ್‍ನಲ್ಲಿ ನಡೆದುಹೋಯಿತು. ಭಾರೀ ಜನಸ್ತೋಮ. ಬಂದವರೆಲ್ಲಾ ಮಿನುಗುವ ದಿರಿಸುಗಳನ್ನು ತೊಟ್ಟವರೇ. ಅಲಂಕಾರದಲ್ಲಿ ತಾವೇನೋ ಕಮ್ಮಿ ಇಲ್ಲ ಎಂಬುದು ಎಲ್ಲರ ಮುಖದಲ್ಲೂ ಕಾಣುತ್ತಿತ್ತು! ಬಗೆಬಗೆಯ ಬ್ಯಾಗ್‍ಗಳು, ವೂಡ್ ಲ್ಯಾಂಡ್ ಶೂ ಚಪ್ಪಲಿಗಳು ಅತ್ತರು-ಪರಿಮಳಗಳ ಘಾಟು, ನಗುವಲ್ಲದ ನಗುವಿನಿಂದ " ಆರಾಮೇನ್ರೀ ? " ಎಂದುಕೊಳ್ಳುತ್ತಾ ಪರಸ್ಪರ ಕೈಕುಲುಕಿ ಮಾತನಾಡಿಕೊಳ್ಳುತ್ತಿದ್ದವರು. ಊಟೋಪಚಾರಕ್ಕೆ ಮೆನು ಬಹಳದೊಡ್ಡ ರೀತಿಯಲ್ಲಿ ಆಯೋಜಿಸಲ್ಪಟ್ಟಿತ್ತು. ನಾಕು ಬಗೆಯ ಸಿಹಿತಿನುಸುಗಳು, ಥರಥರದ ಭಕ್ಷ್ಯ ಭೋಜ್ಯಗಳು, ತಂಪು ಪಾನೀಯಗಳು, ವಿವಿಧ ರೀತಿಯ ಐಸ್ ಕ್ರೀಮ್‍ಗಳು ಹೀಗೇ ಒಂದೇ ಎರಡೇ? ಕೇವಲ ಸುಮಾಳ ಕರೆಗೆ ಮನ್ನಿಸಿ ಮತ್ತು ಅವಳ ಬದುಕು ಹಸನಾಗಲೆಂದು ಅಳುವ ಹೃದಯದಿಂದಲೇ ಹಾರೈಸಿ ಶುಭಕೋರಲು ಪ್ರಕಾಶ ಕೂಡ ಆ ಮದುವೆಗೆ ಬಂದಿದ್ದ.

ಮದುವೆ ಮುಗಿದು ಸುಮಾ ಮುಂಬೈ ಸೇರಿದಳು. ಅಲ್ಲಿ ಎಲ್ಲಿರುವಳೋ ಹೇಗಿರುವಳೋ ಎಂದು ತಿಳಿದುಕೊಳ್ಳುವ ತುಡಿತ ಉಂಟಾದರೂ ಹಾಗೆ ಮಾಡಲು ಯಾಕೋ ಮನ ಅಳುಕುತ್ತಿತ್ತು ಪ್ರಕಾಶನಿಗೆ. ಯಾರಲ್ಲಿ ಕೇಳುವುದು? ಏನೂಂತ ಕೇಳುವುದು ? ಅಲ್ಲವೇ? ತಾನು ಹೇಗೂ ಮದುವೆಯಾಗುವುದಿಲ್ಲವೆಂಬ ನಿರ್ಧಾರವನ್ನು ಪ್ರಕಟಿಸಿಬಿಟ್ಟಿದ್ದ ಮನೆಯಲ್ಲಿ. ಇದ್ದೊಬ್ಬ ಮಗನೂ ಈ ರೀತಿ ಮಾಡುವುದನ್ನು ಸಹಿಸದ ಪಾಲಕರು ಹೈರಾಣಾಗಿದ್ದರು.
" ನೋಡೋ ಪ್ರಕಾಶು, ನಮಗೂ ವಯಸ್ಸಾಗುತ್ತಾ ಬಂತು. ಮುಂದೆ ನಿನ್ನನ್ನು ನೋಡಿಕೊಳ್ಳಲು ನಿನ್ನವರು ಅಂಥ ಯಾರು ಬರ್ತಾರಪ್ಪಾ, ಒಳ್ಳೇ ಮಗ ಕಣೋ ನೀನು ನಮಗಾಗಿಯಾದರೂ ಮದುವೆಯಾಗು " ಎಂದು ಬಹುವಿಧದಲ್ಲಿ ತಿಳಿಹೇಳೀ ಹೇಳೀ ಸೋತುಹೋಗಿದ್ದರು. ತಿರುಪತಿಯಲ್ಲಿ ಶ್ರೀನಿವಾಸನನ್ನು ಕಂಡು

" ಅಪ್ಪಾ ನನ್ನ ಮಗನಿಗೆ ಮದುವೆಯಾದ್ರೆ ಇಲ್ಲಿಗೆ ಕರ್ಕೊಂಡು ಬಂದು ಕಲ್ಯಾಣೋತ್ಸವ ನಡೆಸಿಕೊಡ್ತೇವಪ್ಪಾ ಅನುಗ್ರಹಿಸು " ಎಂದೂ ಬೆಟ್ಟಹತ್ತಿ ಬೇಡಿಕೊಂಡರು.

ಹದಿನೈದು ವರ್ಷಗಳ ತಪಸ್ಸಿನ ಫಲವೋ ಎಂಬಂತೇ ಆ ಹಣ್ಣು ಜೀವಗಳು ಇನ್ನೂ ಬದುಕಿರುವಾಗ ತಿಮ್ಮಪ್ಪ ಕಣ್ಣುತೆರೆದನೋ ನಿಸರ್ಗ ಕರೆಯಿಟ್ಟಿತೋ ಅಂತೂ ಪ್ರಕಾಶ ಮೆತ್ತಗಾಗಿದ್ದ. ಕಾಲಚಕ್ರದ ಹಲ್ಲು ತುಸುಮುಂದೆ ಜಾರಿದಾಗ ಏನೂ ಇಲ್ಲದ ತನ್ನ ಬದುಕು ವಿಧವೆಯೊಬ್ಬಳಿಗೆ ಆಸರೆಯಾದರೆ ಅದೆಷ್ಟೋ ಪುಣ್ಯ ತನ್ನದಾಗಬಹುದೆಂಬ ಅನಿಸಿಕೆ ಆತನಲ್ಲಿ ಒಡಮೂಡಿತ್ತು. ತನ್ನ ಮನದಿಚ್ಛೆಯನ್ನು ನೊಂದ ಪಾಲಕರಿಗೆ ಅರುಹಿದ್ದ ಕೂಡ. ಕಟ್ಟಾ ಸಂಪ್ರದಾಯವಾದಿಗಳಾಗಿದ್ದರೂ ಮಗನ ಮನದ ಹೊಯ್ದಾಟವನ್ನು ನೋಡಿ ಸಹಿಸಲಾಗದೇ ಹಾಗಾದ್ರೂ ಸುಖವಾಗಿರ್ಲಿ ಎಂದು ಅವರಂದುಕೊಂಡಿದ್ದರು.

ನಿತ್ಯವೂ ದಿನಪತ್ರಿಕೆಯಲ್ಲಿ ವಿಧವೆಯರ ಬಗ್ಗೆ ಜಾಹೀರಾತು ಬಂದಾಗ ತೆಗೆದು ಓದುತ್ತಾ ಇದ್ದ ಪ್ರಕಾಶ ಅಂದು ಭಾನುವಾರ ಬೆಳಿಗ್ಗೆ ಹಾಗೇ ಸಿಕ್ಕಿದ ಜಾಹೀರಾತನ್ನು ಕೆಲಹೊತ್ತು ನೋಡುತ್ತಲೇ ಇದ್ದ. ಅದರಲ್ಲಿ ಸುಮಾ ಎಂಬ ಹೆಂಗಸು ತನಗೆ ಅಲಯನ್ಸ್ ಬೇಕು ಎಂಬುದಾಗಿ ತಿಳಿಸಿ ತನ್ನ ನಂಬರನ್ನೂ ನಮೂದಿಸಿದ್ದಳು. ಯಾಕೋ ’ಸುಮಾ’ ಎಂಬ ಆ ಹೆಸರಿನಮೇಲೇ ಅಷ್ಟು ಮಮತ್ಕಾರವಿರುವ ಪ್ರಕಾಶನಿಗೆ ಆ ಹೆಂಗಸಿಗೆ ಕರೆಮಾಡುವ ಮನಸ್ಸು ಉಂಟಾಯಿತು. ಮೊಬೈಲ್ ಹಿಡಿದು ಕರೆಮಾಡಿದಾಗ .......ಹೌದು ಅದೇ ಆ ಚಿರಪರಿಚಿತ ಧ್ವನಿ. ತನ್ನ ಸುಮಾಳೇ ಅವಳು!

ದೂರವಾಣಿಯಲ್ಲಿ ವಿಷಯ ಕೇಳಿ ಒಮ್ಮೆ ಸ್ತಂಭೀಭೂತನಾದರೂ ಮನದ ಯಾವುದೋ ಆಸೆ ಈಡೇರಿದ ತೃಪ್ತಿಯೂ ಮತ್ತು ವಿಧವೆಗೆ ಆಸರೆಕೊಡುವ ಪುಣ್ಯಕೆಲಸಮಾಡುವೆನೆಂಬ ಬದುಕಿನ ಸಾರ್ಥಕ್ಯವೂ ಏಕಕಾಲಕ್ಕೆ ಘಟಿಸಿದಂತಾಗಿ ಖುಶಿಪಟ್ಟ. ದೊಡ್ಡ ಕಂಪನಿಯಲ್ಲಿ ನೌಕರಿಯಲ್ಲಿದ್ದ ಸುಮಾಳ ಗಂಡ ವರ್ಷದ ಹಿಂದೆ ಅಪಘಾತದಲ್ಲಿ ತೀರಿಕೊಂಡಿದ್ದ. ಬಹಳಕಾಲ ಮಕ್ಕಳಾಗದಿದ್ದ ಅವರಿಗೆ ಕೊನೆಗೊಮ್ಮೆ ಒಂದು ಹೆಣ್ಣು ಮಗು ಜನಿಸಿತ್ತು. ೪ ವರ್ಷದ ಮಗಳನ್ನು ನೋಡಿಕೊಳ್ಳುತ್ತಾ ಏಕಾಂಗಿಯಾಗಿ ಮುಂದಿನ ಜೀವನ ಸಾಗಿಸುವುದು ಸುಮಾಗೆ ಇಷ್ಟವಿರಲಿಲ್ಲ. ಪಾಲಕರು " ಬೇಡಾ ನಮ್ಮ ಸರ್ಕಲ್ಲಿನಲ್ಲೇ ಎಲ್ಲಾದರೂ ಹುಡುಕೋಣ " ಎಂದರೂ ಕೇಳದೇ ಆಕೆ ಜಾಹೀರಾತು ನೀಡಿದ್ದಳು!ಮಾತುಕತೆ ಮುಂದುವರಿದು ಇಬ್ಬರ ಕಣ್ಣಾಲಿಗಳೂ ಆನಂದಭಾಷ್ಪ ಸುರಿಸಿದವು.

ವಿಷಯ ತಿಳಿದ ದ್ವಾರಕಾನಾಥ ದಂಪತಿ ಶ್ರೀನಗರದ ಹತ್ತಿರದ ಬ್ಯಾಂಕ್ ಕಾಲೋನಿಯಲ್ಲಿರುವ ವೆಂಕೋಬರಾಯರ ಮನೆಗೆ ಹೂವು-ಹಣ್ಣು ಹಿಡಿದು ಬಂದರು. ಬಾಗಿಲು ತೆರೆದ ಮಂಗಳಮ್ಮ ಆದರದಿಂದ ಸ್ವಾಗತಿಸಿದರು. ದ್ವಾರಕಾನಾಥ ದಂಪತಿಗೆ ಮುದಿವಯಸ್ಸಿನ ಆ ದಂಪತಿ ಸತ್ಕರಿಸಿದರು. ಮಧ್ಯಮವರ್ಗದ ಸಾದಾ ಸೀದಾ ಜೀವನವಾದರೂ ಅತ್ಯಂತ ಸುಸಂಸ್ಕೃತರಾದ ವೆಂಕೋಬರಾಯ ದಂಪತಿಯನ್ನೂ ಅವರ ಮಗನನ್ನೂ ನೋಡಿ ದ್ವಾರಕಾನಾಥ ದಂಪತಿಯ ಕಣ್ಣಲ್ಲಿ ನೀರು ಉಕ್ಕಿತು.

" ನಮ್ಮ ಮಗಳನ್ನು ನೀವೇ ಕೇಳಿದಾಗ ನಾವಾಗಿಯೇ ಕೊಡಲಿಲ್ಲ, ಇಂದು ನಾವೇ ಕೇಳುತ್ತಿದ್ದೇವೆ ನಮ್ಮ ಮಗಳನ್ನು ಸೊಸೆಯಾಗಿ ಸ್ವೀಕರಿಸಿ ಅವಳಿಗೆ ನಿಮ್ಮಲ್ಲಿ ಆಶ್ರಯ ಕೊಡುವಿರೇ ? "

" ನೀವು ಬೇಡವೆಂದರೂ ಶ್ರೀನಿವಾಸನ ಮನಸಲ್ಲಿ ಅನುರೂಪ ಹುಡುಗ-ಹುಡುಗಿಯಿವರನ್ನು ಸೇರಿಸಬೇಕೆಂಬ ಸಂಕಲ್ಪವಿದ್ದರೆ ಅದಕ್ಕೆ ನಾವೆಲ್ಲಾ ಕೇವಲ ಆತನ ನಾಟಕದ ಪಾತ್ರಧಾರರಷ್ಟೇ ತಾನೇ ? ಶುಭಸ್ಯ ಶೀಘ್ರಂ " ಎಂದುಬಿಟ್ಟರು ವೆಂಕೋಬರಾಯರು !

ಕಾರಿನ ಹಿಂದುಗಡೆಯ ಸೀಟಿನಿಂದ ಚಿಕ್ಕ ಮಗಳ ಜೊತೆಗೆ ಜರತಾರೀ ಸೀರೆಯುಟ್ಟ ಸ್ಫುರದ್ರೂಪಿ ಸುಮಾ ರಂಭೆಯನ್ನೂ ನಾಚಿಸುವ ಸೌಂದರ್ಯವನ್ನು ಇನ್ನೂ ಹಾಗೇ ಕಾಪಿಟ್ಟುಕೊಂಡು ಕಂಗೊಳಿಸುತ್ತಾ ನಡೆದುಬಂದು ವೆಂಕೋಬರಾಯರ ಮನೆ ಪ್ರವೇಶಿಸಿದಳು. ಒಳಗಡೆ ಕೋಣೆಯಲ್ಲಿ ಯಾವುದೋ ಕಾದಂಬರಿ ಓದಲು ತೊಡಗಿದ್ದ ಶ್ರೀರಾಮಚಂದ್ರನ ಥರದ ಸುಂದರ ಪ್ರಕಾಶ ಹೊರಬಂದು ತನ್ನ ಸದ್ಗುಣದ ತೋಳುಗಳನ್ನು ಚಾಚಿ ಆಕೆಯನ್ನು ಸ್ವಾಗತಿಸಿದ. ಅಪ್ಪನಿಲ್ಲದ ಮಗಳಿಗೆ

" ಇವರೇ ನಿನ್ನ ಅಪ್ಪ ನೋಡಮ್ಮಾ " ಎಂದರು ದ್ವಾರಕಾನಾಥರು. ಚಿಕ್ಕ ಮಗು ಓಡೋಡಿ ತನ್ನ ಅಪ್ಪನನ್ನು ತಬ್ಬಿಕೊಂಡಿತು!

ಕಡಿದುಹೋಗಿದ್ದ ಸಂಬಂಧವೊಂದು ಮರಳಿ ಬೆಸೆದುಕೊಂಡಿತ್ತು. ಒಣಗಿದ ಮರವೊಂದು ಅನಿರೀಕ್ಷಿತವಾಗಿ ಚಿಗಿತುಕೊಂಡಿತ್ತು! ಮನೆಯಲ್ಲಿ ಸಣ್ಣಗೆ ಹಾಕಿದ್ದ ಎಫ್. ಎಮ್ ರೇಡಿಯೋದಲ್ಲಿ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ " ಯಾವುದೀ ಹೊಸಸಂಚು ....." ಹಾಡು ಕರ್ಣಾನಂದಕರವಾಗಿ ತೇಲಿಬರುತ್ತಿತ್ತು.