ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, November 16, 2011

ಆನೆ ಭಾರ ಆನೆಗೆ ಇರುವೆ ಭಾರ ಇರುವೆಗೆ!


ಆನೆ ಭಾರ ಆನೆಗೆ ಇರುವೆ ಭಾರ ಇರುವೆಗೆ!

ಆನೆಗೆ ಆನೆ ಭಾರವಾಗಿರುವುದಂತೂ ನಿಜ. ಮೊದಲೇ ಕಾಡುಗಳ್ಳರು, ರಾಜಕಾರಣಿಗಳು ಮತ್ತು ಹೊಸದಾಗಿ ಜಮೀನಿಗಾಗಿ ಒತ್ತುವರಿಮಾಡುವ ರೈತಾಪಿ ಜನರು ಈ ಮೂರು ಕಾರಣಗಳಿಂದ ಅಡವಿ ಪ್ರದೇಶ ಕಮ್ಮಿಯಾದಮೇಲೆ ಬೃಹತ್ ಕಾಡುಪ್ರಾಣಿಗಳಿಗೆ ಜೀವನ ಕಷ್ಟಕರವೇ ಆಗಿದೆ. ಅದರಲ್ಲಂತೂ ಕಳೆದೊಂದು ವರ್ಷದಿಂದ ಬಿದಿರು ಹೂ ಬಿಟ್ಟು ತನ್ನನ್ನು ತಾನೇ ಸಂಪೂರ್ಣ ನಾಶಪಡಿಸಿಕೊಳ್ಳುವ ಹನ್ನೊಂದು ವರ್ಷಕ್ಕೊಮ್ಮೆ ನಡೆಯುವ ನೈಸರ್ಗಿಕ ಪ್ರಕ್ರಿಯೆ ನಡೆದಿದೆ. ದಿನಕ್ಕೆ ೨೫೦ ಕೆಜಿ ಆಹಾರ ಅದರಲ್ಲೂ ಹೆಚ್ಚಾಗಿ ಬಿದಿರು ಸೊಪ್ಪನ್ನು ತಿಂದು ಬದುಕುವ ಆನೆ ಎಲ್ಲಿಂದ ಯಾವರೀತಿಯಲ್ಲಿ ಆಹಾರ ಹುಡುಕಿಕೊಂಡೀತು ? ತಿನ್ನಲು ಹುಡುಕುತ್ತಾ ಸಾಗುವಾಗ ಹಿಂದೊಮ್ಮೆ ತನ್ನ ರಹದಾರಿಯಾಗಿದ್ದ ಪ್ರದೇಶಗಳಲ್ಲಿ ಕಾಲಿರಿಸಿದಾಗ ಹಲವು ಜಾಗಗಳು ರೈತರ ಕೈವಶವಾಗಿ ಹಲವು ತೆರನಾದ ಬೆಳೆಗಳು ಬೆಳೆದುನಿಂತಿರುವುದನ್ನು ನೋಡಿವೆ. ಆನೆ ಕುಟುಂಬ ಅಥವಾ ಸಂಘಜೀವಿಯಾದುದರಿಂದ ಬಂದರೆ ಇಡೀ ಸಮುದಾಯ ಬರುತ್ತವೆ; ತಿಂದರೆ ಎಲ್ಲವೂ ಮೆಲ್ಲುತ್ತವೆ. ಹಾಗೆ ಬಂದಿದ್ದು ಕರ್ನಾಟಕದ ಹಾಸನ ಜಿಲ್ಲೆಯ ಕೆಲವು ಭಾಗಗಳಿಗೆ ಮೈಸೂರು ಜಿಲ್ಲೆಯ ಹಲವು ಪ್ರದೇಶಗಳಿಗೆ ಮೇಲಾಗಿ ದಾರಿತಪ್ಪಿ ಮೈಸೂರಿಗೆ ! ಅವುಗಳ ಜಾಗವನ್ನು ಅವುಗಳ ಪಾಲಿಗೇ ಬಿಟ್ಟಿದ್ದರೆ ಅವು ಕಾಡಿನಿಂದ ನಾಡಿಗೆ ಬರುತ್ತಿರಲಿಲ್ಲ ಎಂಬುದನ್ನು ನಾವಿನ್ನೂ ಮನಗಾಣಬೇಕಾಗಿದೆ.

ವಿಷಯದ ಪ್ರಸ್ತಾವನೆ ಈ ರೀತಿಯಿಂದಾದರೂ ಇಲ್ಲಿ ಹೇಳ ಹೊರಟಿದ್ದು ಅದನ್ನಲ್ಲ. ಕಿಂಗ್ ಫಿಶರ್ ಎಂಬ ವಿಮಾನಯಾನ ಸಂಸ್ಥೆ ಯಾಕೆ ನಷ್ಟಕ್ಕೆ ಗುರಿಯಾಯ್ತು ಎಂಬುದನ್ನು ಅವಲೋಕಿಸಹೊರಟಿದ್ದು. ಜೊತೆಗೆ ವಿದರ್ಭ ಎಂಬಲ್ಲಿನದೂ ಸೇರಿದಂತೇ ನಮ್ಮ ಕರ್ನಾಟಕದ ಬಡತನದ ಕೆಲವು ಮುಖಗಳನ್ನೂ ನೋಡಿಕೊಂಡು ಬರೋಣ ಎಂಬ ಒಂದು ಪ್ರಯತ್ನ ಹೀಗೆ ಬರೆಸುತ್ತಿದೆ.

ಹಿಂದೊಮ್ಮೆ ಜೆ.ಆರ್.ಡಿ ಟಾಟಾ ಪುಸ್ತಕ ಬರೆದಿದ್ದೆ, ಅದಿನ್ನೂ ಮುದ್ರಣ ಮುಂಚಿನ ದೋಷ ಪರಿವೀಕ್ಷಣೆಯಲ್ಲಿದೆ ಅಂತಿಟ್ಟುಕೊಳ್ಳಿ. ಭಾರತದಲ್ಲಿ ವಿಮಾನಯಾನವನ್ನು ಆರಂಭಿಸಿದ್ದೇ ಜೆ.ಆರ್.ಡಿ. ಯವರು. ಸ್ವಾತಂತ್ರ್ಯಾ ನಂತರದ ವರ್ಷಗಳಲ್ಲಿ ಆದ ರಾಜಕೀಯ ಬದಲಾವಣೆಗಳಿಂದ ಕೇಂದ್ರ ಸರಕಾರ ವಿಮಾನಯಾನವನ್ನು ರಾಷ್ಟ್ರೀಕರಣಗೊಳಿಸಿತು. ಮಾತ್ರವಲ್ಲ ವಿಮಾನಯಾನ ಸಂಸ್ಥೆಗೆ ಮುಖ್ಯಸ್ಥರಾಗಿದ್ದ ಜೆ.ಆರ್.ಡಿಯವರನ್ನೂ ವಜಾ ಗೊಳಿಸಿರುವುದಾಗಿ ನೆಹರೂ ಜೆ.ಆರ್.ಡಿಗೆ ಪತ್ರ ಬರೆದಿದ್ದರು. ಖಾಸಗೀ ಸಂಸ್ಥೆಗಳಿಗೆ ವಿಮಾನಯಾನ ಪರವಾನಗಿ ಒಮ್ಮೆ ಇದ್ದಿದ್ದು ರದ್ದಾಗಿ ಮತ್ತೆ ಈಗ ನಾಕಾರು ವರ್ಷಗಳ ಹಿಂದೆ ಖಾಸಗೀ ಸಂಸ್ಥೆಗಳಿಗೂ ಪರವಾನಗಿ ನೀಡಲಾಯ್ತು. ಹಣವಿದ್ದ ದೊಡ್ಡ ದೊಡ್ಡ ಕಂಪನಿಗಳು ಇದನ್ನು ಬಹಳ ಆಸಕ್ತ ವಿಷಯವನ್ನಾಗಿ ತೆಗೆದುಕೊಂಡು ವಿಮಾನ ಹಾರಿಸಲು ಮುಂದಾದವು; ಆ ಪೈಕಿ ಕಿಂಗ್ ಫಿಶರ್ ಕೂಡ ಒಂದು.

ಸಾವಿರ ಕೋಟಿಗಳಲ್ಲಿ ಹೂಡಿಕೆಮಾಡಿ ನಿಧಾನವಾಗಿ ಹಿಂಪಡೆಯಬೇಕಾದ ದಂಧೆ ಅದು. ಒಂದೇ ಒಂದು ವಿಮಾನ ಹಾರಬೇಕದರೂ ಕೋಟ್ಯಂತರ ರೂಪಾಯಿ ನಷ್ಟವಾಗುವ ಸಂಭವನೀಯತೆ ಇರುವ ರಿಸ್ಕೀ ಜಾಬ್ ಅದು! ಹೆಂಡದಲ್ಲಿ ಹೇರಳ ಕಾಸೆಣಿಸಿದ್ದ ದೊರೆ ಮಲ್ಯರಿಗೆ ಇದರ ಆಗು ಹೋಗುಗಳ ಬಗ್ಗೆ ಅಷ್ಟಾಗಿ ಆಳವಾದ ಜ್ಞಾನ ಇರಲಿಲ್ಲ. ಸಕಾಲದಲ್ಲಿ ಆತ ಉತ್ತಮ ಸಲಹೆದಾರರಿಂದ ಸಲಹೆಯನ್ನೂ ಪಡೆದಿದ್ದು ಸುಳ್ಳು. ಮಾಡಬೇಕೋ ಮಾಡಬೇಕು ಎಂಬ ಹುಂಬತನವೇ ಮೊದಲ ತಪ್ಪುಹೆಜ್ಜೆಯೇನೋ ಅನಿಸುತ್ತದೆ. ದೊಡ್ಡವರ ವಿಷಯ ಬಿಡಿ; ಮಾತನಾಡುವ ಹಾಗಿಲ್ಲ. ಹಣವೊಂದೇ ಇದ್ದರೆ ಯಾವ ದಂಧೆಯನ್ನದರೊ ಮಾಡಲು ಸಾಧ್ಯ ಎಂದುಕೊಳ್ಳುವವರಿಗೆ ಮಲ್ಯ ಹಾಗೆ ಮಾಡಲು ಮುಂದಾಗಬಾರದು ಎಂಬುದನ್ನು ಮುಂದೊಂದು ದಿನ ಪಾಠಮಾಡಬಹುದು!

ವಿಮಾನಯಾನ ಸಂಸ್ಥೆ ಆರಂಭಿಸಿ, ಬೆಳೆಸಿ ಬೇರೆ ಕಂಪನಿಗಳಿಗೆ ವಹಿಸಿಕೊಟ್ಟು ಹೆಚ್ಚಿನ ಕೀರ್ತಿಮೌಲ್ಯ ಎಣಿಸಿಕೊಳ್ಳುವ ಆಸೆಯೂ ಇದ್ದಿರಬಹುದು. ಏನಿದ್ದರೂ ಬೆಳೆದ ಮೂಲ ದಂಧೆಯಿಂದ ಹಣ ಹೊಂಚಿ ಇನ್ನೊಂದಕ್ಕೆ ಸುರಿಯುವಾಗ ಸ್ವಲ್ಪ ದೀರ್ಘಾಲೋಚನೆ ಅವಶ್ಯಕ. ಕಿಂಗ್ ಫಿಶರ್ ಆರಂಭವಾದ ಒಂದೆರಡು ವರ್ಷಗಳಲ್ಲೇ ಡೆಕ್ಕನ್ ವಿಮಾನಯಾನ ಸಂಸ್ಥೆಯನ್ನೂ ಖರೀದಿಸಿದ್ದು ಮತ್ತೊಂದು ತಪ್ಪು ಹೆಜ್ಜೆ. ಕೇವಲ ಶ್ರೀಮಂತರಿಗಷ್ಟೇ ಮೀಸಲಾಗಿಡುವ ಹೈ ಕ್ಲಾಸ್ ವಿಮಾನಯಾನವನ್ನಷ್ಟೇ ನಡೆಸಿಕೊಂಡು ನಿಗದಿತ ಪ್ರದೇಶಗಳಿಗೆ ಮಾತ್ರ ಸೀಮಿತ ವಿಮಾನಗಳನ್ನು ಇಟ್ಟುಕೊಂಡು ನಡೆಸಬಹುದಿತ್ತು. ಹಾಗೂ ಮಾಡಲಿಲ್ಲ. ಮಲ್ಯ ಕೈ ಹಾಕಿದಮೇಲೆ ಎಲ್ಲಾಕಡೆಗೂ ಅದರ ಅಮಲು ಹರಡಬೇಕೆಂಬ ಅತೀ ಮಹತ್ವಾಕಾಂಕ್ಷೆ ಇನ್ನೊಂದು ತಪ್ಪು. ಜಗತ್ತಿನಲ್ಲಿಯೇ ಎರಡನೇ ಅತಿದೊಡ್ಡ ವಿಮಾನಯಾನ ಸಂಸ್ಥೆ ಮಾಡಿದ ಮಲ್ಯ ಹಾಗೆ ಮೇಲೇರುವಾಗ ಆಗುವ ಲಾಭ-ನಷ್ಟಗಳ ಪರಿವೆಯನ್ನೇ ಇಟ್ಟುಕೊಳ್ಳಲಿಲ್ಲ.

೨೦೦೫ ರಲ್ಲಿ ಸಂಸ್ಥೆ ಆರಂಭವಾದಾಗ ಕೆಲವು ಉದ್ಯಮಿಗಳೂ ಸೇರಿದಂತೇ ಸಿರಿವಂತ ಪ್ರಯಾಣಿಕರು ಮಲ್ಯ ಅಣಿಗೊಳಿಸಿದ ಸೆಕ್ಸೀ ಗಗನಸಖಿಯರನ್ನು ನೋಡುತ್ತಾ ಅವರ ವಿಮಾನಗಳಲ್ಲಿ ಯಾನ ಬೆಳೆಸಿದ್ದರೂ ಬರುಬರುತ್ತಾ ಅವರೆಲ್ಲಾ ಎಚ್ಚೆತ್ತುಕೊಂಡುಬಿಟ್ಟರು. ವಿಮಾನಯಾನ ಸಂಸ್ಥೆಗಳ ಸಂಖ್ಯೆಯೂ ಜಾಸ್ತಿಯಾಗಿ ಪ್ರಯಾಣದರದಲ್ಲಿ ಪೈಪೋಟಿ ಆರಂಭವಾಯ್ತು. ಕಚ್ಚಾತೈಲದ ಬೆಲೆಯೇರಿಕೆಯ ಆಧಾರದಲ್ಲಿ ಪೆಟ್ರೋಲ್ ಬೆಲೆ ದುಬಾರಿಯಾಗುತ್ತಾ ಬಂತು. ಹಣದುಬ್ಬರ ಜಾಸ್ತಿಯಾಗಿ ಬ್ಯಾಂಕುಗಳ ಸಾಲಕ್ಕೆ ಬಡ್ಡಿದರ ಜಾಸ್ತಿಯಾಯ್ತು. ವಿದೇಶೀ ಬಂಡವಾಳ ಹೂಡಿಕೆದಾರರನ್ನು ಕರೆದುಕೊಳ್ಳಲು ಮಲ್ಯರಿಗೆ ಅನುಮತಿ ಸಿಗಲಿಲ್ಲ. ಪೆಟ್ರೋಲ್ ಮೇಲೆ ಇರುವ ತೆರಿಗೆಯೇ ಬಹಳವಾಗಿ ಖರ್ಚಿನಲ್ಲಿ ಅದೇ ಸುಮಾರು ೫೦% ನಷ್ಟು ಕಬಳಿಸಿಬಿಡುತ್ತಿದ್ದು. ಮಿಕ್ಕುಳಿದಂತೇ ಸೆಕ್ಸೀ ಗಗನಸಖಿಯರನ್ನು ದುಬಾರಿ ಸಂಬಳದಲ್ಲಿ ಸಾಕಬೇಕಲ್ಲಾ ? ಅನುಭವೀ ಪೈಲಟ್‍ಗಳನ್ನು ಬೇರೇ ಇಟ್ಟುಕೊಳ್ಳಬೇಕಾಗುತ್ತದಲ್ಲಾ ಯಾಕೆಂದರೆ ವಿಮಾನ ಗಗನಮಾರ್ಗದಲ್ಲಿ ಸಾಗುವಂಥದ್ದು, ಎಲ್ಲೋ ಇಲ್ಲೇ ಅಕ್ಕಪಕ್ಕದ ರಸ್ತೆಗಳಲ್ಲಿ ಓಡಾಡುವ ಲಾರಿ, ಬಸ್ಸುಗಳ ರೀತಿ ಅಲ್ಲ ನೋಡಿ! ಹೀಗೆಲ್ಲಾ ಆಗಿ ಮಲ್ಯ ಈಗ ಮಿಕಿಮಿಕಿ ನೋಡುತ್ತಿದ್ದಾರೆ.

ಈ ಸುದ್ದಿ ಆಗಾಗ ಮಾಧ್ಯಮಗಳಲ್ಲಿ ಪ್ರಚಾರ ಪಡೆದರೂ ಇಲ್ಲೀವರೆಗೂ ಮಲ್ಯ ತಡೆದುಕೊಂಡೇ ಇದ್ದಿದ್ದು ತನ್ನ ಇಮೇಜಿಗೆ ತನ್ನ ಛಾಪಿಗೆ ದಕ್ಕೆ ಬಾರದಿರಲಿ ಎಂಬ ಕಾರಣಕ್ಕಾಗಿ. ಸದ್ಯಕ್ಕೆ ನಷ್ಟ ಅಂದಾಜು ೪೮೦೦ ಕೋಟಿ ಎಂದು ಗಣಿಸಲ್ಪಟ್ಟಿದ್ದರೂ ಒಳಗಿನ ಗುಟ್ಟು ಶಿವನೇ ಬಲ್ಲ! ಒಟ್ಟೂ ೧೩ ಬ್ಯಾಂಕುಗಳು ಹಣ ಸುರಿದಿದ್ದು ಆಮೇಲಾಮೇಲೆ ಭದ್ರತೆಗಾಗಿ ೨೪% ಸ್ಟೇಕ್ಸ್‍ನ್ನು ತಮ್ಮಲ್ಲಿ ಇರಿಸಿಕೊಂಡಿವೆ. ಈಗ ಅವು ಮತ್ತೆ ಸಹಾಯ ನೀಡಲು ಮುಂದಾಗುತ್ತಿಲ್ಲ. ಆದರೂ ಮಹಾರಾಷ್ಟ್ರದ ಹಣಕಾಸು ಸಂಸ್ಥೆಯೊಂದು ೪೦೦೦ ಕೋಟಿ ಸಹಾಯ ಮಾಡುವುದಾಗಿ ಮುಂದಾಗಿದೆ. ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗುತ್ತದೆಯೇ ? ಸಂದೇಹವಂತೂ ಬಲವಾಗಿದೆ. ದೇಶದಲ್ಲಿ ಉತ್ತಮ ಆಡಳಿತ ಸಲಹೆದಾರರು ಇದ್ದವರೆಲ್ಲಾ ಏನೆನ್ನುತ್ತಾರೆ? ಯಾರೂ ತಮ್ಮ ಅಭಿಪ್ರಾಯಗಳನ್ನು ಮುಂದೆ ತರುತಿಲ್ಲ ಎಂಬುದೇ ಆಶ್ಚರ್ಯವಾಗಿದೆ !

ಇನ್ನು ವಿದರ್ಭ ಎಂಬುದು ನಮ್ಮ ನೆರೆರಾಜ್ಯವಾದ ಮಹಾರಾಷ್ಟ್ರದ ಒಂದು ಪ್ರದೇಶ. ಅಲ್ಲಿನ ರೈತರ ಜೀವನ ಎಷ್ಟು ದುರ್ಭರವಾಗಿದೆ ಎಂದರೆ ರಾಜಕಾರಣಿಗಳು ಅದರಲ್ಲೂ ರಾಹುಲ್ ಗಾಂಧಿಯಂತಹ ಜನ ಸ್ವತಃ ಭೇಟಿ ನೀಡಿ ಮತದಾರರ ಕಣ್ಸೆಳೆದರು ಬಿಟ್ಟರೆ ಅಲ್ಲೀಗ ಯಾರೂ ಕೇಳುವವರಿಲ್ಲ. ನಾಗಪುರದಿಂದ ಹೈದ್ರಾಬಾದಿಗೆ ಹೋಗುವ ಮಾರ್ಗದುದ್ದಕ್ಕೂ ಹತ್ತಿ ಬೆಳೆಯುವ ಪ್ರದೇಶಗಳನ್ನೇ ಕಾಣಬಹುದು. ಹತ್ತಿ ಬೆಳೆ ಬೆಳೆಯುವ ರೈತನಿಗೆ ಕೆಜಿಗೆ ೫ ರೂ. ಸಿಗುತ್ತದಂತೆ. ಒಂದು ದಿನಕ್ಕೆ ಬೆಳಿಗ್ಗೆಯೇ ಹತ್ತಿ ಆಯಲು ಹೋದರೆ ಸಾಯಂಕಾಲ ೬:೩೦ಕ್ಕೆ ಸಿಗುವುದು ೫ ಕೆಜಿ ಹತ್ತಿ ! ಚಿಕ್ಕ ಹಿಡುವಳಿದಾರರು ಅಲ್ಪಸ್ವಲ್ಪ ಗದ್ದೆಗಳಿರುವವರು ಹಿಂದೆ ಮಾಡಿದ ಸಾಲ ಕೈಸಾಲಗಳಿಗೆ ಮತ್ತೆ ಕಿರುಸಾಲ ಮರಿಸಾಲ ಎಂದು ಸಾಲದ ಪಟ್ಟಿ ಬೆಳೆದು ೨೫,೦೦೦ ದಿಂದ ೫೦,೦೦೦ ....೩,೦೦,೦೦೦ ವರೆಗೂ ಸಾಲ ಮಾಡಿಕೊಂಡ ಜನ ಇದ್ದಾರೆ. ಸಾಲಕೊಟ್ಟವರ ಉಪಟಳ ಜಾಸ್ತಿಯಾದಾಗ ಅವರು ಮನೆಗೆ ಬಂದು ಮರಳಿಸುವಂತೇ ಬಲವಂತ ಮಾಡಿದಾಗ ಬೇಸತ್ತು ವಿಷಪ್ರಾಶನ ಮಾಡಿದ ಹಲವು ರೈತರ ವಿಧವೆಯರು ಬದುಕಲೂ ಆರದೆ, ಸಾಯಲೂ ಆರದೇ ಜೀವ ತೇದು ಕಾಲಹಾಕುತ್ತಿದ್ದಾರೆ. ಒಪ್ಪೊತ್ತಿನ ಗಂಜಿ ಕಾಣಿಸಲಿಕ್ಕೂ ಕಷ್ಟದಾಯಕ ಪರಿಸ್ಥಿತಿ ಇದೆ. ಒಂದೊಂದು ಮನೆಯಲ್ಲಿ ಕನಿಷ್ಠ ಎರಡು ಮೂರು ಮಕ್ಕಳಿದ್ದಾರೆ. ಅವರುಗಳ ವಿದ್ಯಾಭ್ಯಾಸ, ಬಟ್ಟೆ, ಸ್ಕೂಲ್ ಫೀಸು, ಔಷಧ ವಗೈರೆ ಖರ್ಚು ನೆನಪಿಸಿಕೊಂಡರೆ ಅಲ್ಲಿನ ಆ ವಿಧವೆಯರಲ್ಲಿ ಕಣ್ಣೀರು ಉಕ್ಕಿ ಹರಿಯುತ್ತದೆ. ೨೦೦೫ ರಿಂದ ಇತ್ತೀಚೆಗೆ ರೈತರ ಸಾವುಗಳ ಸಂಖ್ಯೆ ಜಾಸ್ತಿಯಾಗಿದೆ.

ರೈತರ ಸಾಲ ಮನ್ನಾ ಆಗುವುದು ಇರಲಿ ಸತ್ತ ರೈತರಿಗೆ ಪರಿಹಾರ ಸಿಗುತ್ತಿಲ್ಲ ಏಕೆಂದರೆ ಬಹುಸಂಖ್ಯಾಕರು ಗುತ್ತಿಗೆಯಮೇಲೆ ಕೆಲ್ಸಮಾಡುವವರಾಗಿದ್ದಾರೆ. ಸತ್ತಾಗ ಅವರ ಹೆಸರಿನಲ್ಲಿ ಯಾವುದೇ ಜಮೀನು ದಾಖಲೆಪತ್ರಗಳು ಇರುವುದಿಲ್ಲ. ಇದ್ದರೂ ಅವು ಸಾಲ ಕೊಟ್ಟವರ ಕೈವಶವಾಗಿ ಖಾತೆ ಬದಲಾವಣೆಯಾಗಿರುತ್ತದೆ! ಒಂದು ಕಾಲದಲ್ಲಿ ತಮ್ಮದೇ ಆಗಿದ್ದ ಹೊಲಗಳನ್ನು ಸಾಲಕೊಟ್ಟವರಿಗೆ ಮಾರಿಕೊಂಡು ಮತ್ತದೇ ಹೊಲದಲ್ಲಿ ಗುತ್ತಿಗೆಯ ಆಧಾರದಲ್ಲಿ ಹತ್ತಿ ಕೆಲಸಮಾಡುವ ರೈತರಿಗೆ ಯಾವುದೇ ಭದ್ರತೆ ಇರುವುದಿಲ್ಲ. ನಿತ್ಯ ಹನ್ನೆರಡು ತಾಸು ಕೆಲಸಮಾಡಿದರೂ ಹೊಟ್ಟೆ ತುಂಬಿಸಲಾಗದ ಬವಣೆ ಅವರನ್ನು ಕಾಡುತ್ತಿದೆ. ಮನೆಯ ಯಜಮಾನ ರಾತ್ರಿ ಮಲಗಿದವನು ಬೆಳಿಗ್ಗೆ ಏಳುತ್ತಾನೆ ಎನ್ನುವ ಗ್ಯಾರಂಟಿಯೇ ಇರದಷ್ಟು ಬೇಸತ್ತ ಜೀವನ ಅಲ್ಲಿನ ಜನರದಾಗಿದೆ. ಒಮ್ಮೆ ಬಂದು ಹೋದ ರಾಹುಲ್ ಗಾಂಧಿ ಮತ್ತೆ ಆ ಕಡೆ ತಲೆ ಹಾಕಿಲ್ಲ! ಛೆ ಛೆ ಹಾಗೆಲ್ಲಾ ಹೇಳ್ಬಾರ್ದು ನಮ್ಮ ರಾಜಕಾರಣಿಗಳೇ ಹಾಗಲ್ವೇ ?

ಕರ್ನಾಟಕದ ರಾಮನಗರದಲ್ಲಿ ಬಡತನ ಹೇಗಿದೆಯೆಂಬುದಕ್ಕೆ ಇತ್ತೀಚೆಗೆ ಟಿವಿ೯ ವರದಿಮಾಡಿತ್ತು. ಅಲ್ಲಿ ಸರಿಸುಮಾರು ೨೦,೦೦೦ ಜನ ತಮ್ಮ ಒಂದೊಂದು ಕಿಡ್ನಿ ಮಾರಾಟಮಾಡಿಕೊಂಡಿದ್ದಾರೆ ! ಕಿಡ್ನಿ ಜಾಲದ ಆಮಿಷಕ್ಕೆ ಬಲಿಬಿದ್ದು ೩-೪ ಲಕ್ಷ ಹಣಬರುತ್ತದೆ, ತಮ್ಮ ಸಾಲವಾದರೂ ತೀರಬಹುದೆಂಬ ಕಾರಣಕ್ಕೆ ಕಿಡ್ನಿ ಮಾರಿದರೆ ಜಾಲದ ಮಧ್ಯವರ್ತೀ ಕಳ್ಳಜನ ಬಹಳಷ್ಟು ಜನರಿಗೆ ೨,೦೦೦ ಅಥವಾ ೨,೫೦೦ ಕೊಟ್ಟು ಬೆದರಿಸಿ ಸುಮ್ಮನಾಗಿಸಿದ್ದಾರೆ. ವಿಚಿತ್ರವೆಂದರೆ ಕಿಡ್ನಿ ಮಾರಾಟಮಾಡಿಕೊಂಡವರು ಹೊಸ ಏಜೆನ್ಸಿ ಪಡೆದವರಂತೇ ತಮ್ಮಂತೇ ಅಸಹಾಯಕತೆಯಲ್ಲಿರುವ ಬೇರೇ ಜನರನ್ನು ಹುಡುಕಿ ತಂದು ಕಿಡ್ನಿ ಮಾರಾಟ ಮಾಡಿಸುತ್ತಿದ್ದಾರೆ. ಇದರಲ್ಲಿ ಹೆಂಗಸರೂ ಬಹಳ ಜನ ಸೇರಿದ್ದಾರೆ. ಅನಕ್ಷರಸ್ಥರಾದ ಗಂಡಸರು ಸಾಲ ತೀರಿಸುವ ಚಿಂತೆಯಲ್ಲಿ ಕುಡುಕರಾಗಿ, ದುಶ್ಚಟಗಳಿಗೆ ಬಲಿಬಿದ್ದು ಯಾರಾದರೂ ಕೊಟ್ಟರೆ ಉಂಟು ಇಲ್ಲದಿದ್ದರೆ ಇಲ್ಲಾ ಎನ್ನುವ ಹಂತಕ್ಕೆ ಬಂದಾಗ, ಹೆತ್ತ ಅಪ್ಪ-ಅಮ್ಮ ತಮ್ಮ ಮುಪ್ಪಿನ ವಯಸ್ಸಿನಲ್ಲಿ ಮಗಳು-ಅಳಿಯಂದಿರಿಗೆ ಏನೂ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲದಾಗ ಮರ್ಯಾದೆ ಉಳಿಸಿಕೊಳ್ಳಲು ಹಣ ಸಿಗುವುದೆಂಬ ಆಸೆಗೆ ಗಾಳಿ ಸುದ್ದಿಗೆ ಕಿವಿಯೊಡ್ಡಿ ತಮ್ಮ ಕಿಡ್ನಿ ಮಾರಾಟಕ್ಕೆ ಒಪ್ಪಿ ಕಳೆದುಕೊಂಡ ಹೆಂಗಸರೇ ಬಹಳ ಜನ ಇದ್ದಾರೆ. ಇದನ್ನೆಲ್ಲಾ ಕೇಳುವುದಕ್ಕೆ ಅಥವಾ ಜನರನ್ನು ಹಾಗೆಲ್ಲಾ ಮಾಡದಂತೇ ಎಜ್ಯುಕೇಟ್ ಮಾಡುವುದಕ್ಕೆ ಯಾರಿದ್ದಾರೆ ? ಗೊತ್ತಿಲ್ಲ !

ಬಡತನವೆಂಬುದು ಯಾವುದೇ ಒಂದು ಜಾತಿ, ಕುಲ-ಗೋತ್ರಕ್ಕೆ ಸಂಬಂಧಿಸಿದ್ದಲ್ಲ. ಬಡತನ ಮತ್ತು ಸಿರಿತನ ಎಂಬುದೇ ಎರಡು ಜಾತಿಗಳು. ಎಲ್ಲಾ ಜನಾಂಗಗಳಲ್ಲೂ ಬಡತನ ಇದ್ದೇ ಇದೆ. ಬಡವರು ಬಡವರಾಗೇ ಉಳಿಯುತ್ತಾರೆ, ಸಿರಿವಂತರು ಸಿರಿವಂತರಾಗುತ್ತಲೇ ನಡೆಯುತ್ತಾರೆ. ಬಡತನ ಸಿರಿತನ ಪಡೆದು ಬಂದಿದ್ದಲ್ಲ ಮಾಡಿಕೊಂಡಿದ್ದು ಎಂದು ವಾದಿಸುವ ಯಾವ ಜನರೂ ಮಾರ್ಗದರ್ಶನಕ್ಕಾಗಿ ಅಲ್ಲಿಗೆ ಬರುವುದಿಲ್ಲ. ಬಡತನ ನಿರ್ಮೂಲನೆ ಎಂಬುದು ಒಂದು ಸೋಗೇ ಹೊರತು ಅದು ಯಾವ ರಾಜಕಾರಣಿಗೂ ಬೇಕಾಗಿಲ್ಲ. ಆಗಾಗ ರಾಯಚೂರು ಕಡೆಯ ಬಡತನದ ಚಿತ್ರಣಗಳನ್ನು ಮಾಧ್ಯಮಗಳಲ್ಲಿ ನೋಡಿದ್ದೀರಿ. ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುವ ಜೀವಗಳನ್ನು ಕಂಡಿದ್ದೀರಿ. ಇದಕ್ಕೆಲ್ಲಾ ಯಾರಾದರೂ ನಿವಾರಣೋಪಾಯ ನೀಡುವವರಿದ್ದಾರಾ?

ಕೊನೆಯ ಒಂದು ಮಾತು ಹೇಳಿ ಮುಗಿಸಿಬಿಡುವುದು ಉತ್ತಮ : ಉತ್ತರಕರ್ನಾಟಕದಲ್ಲಿ ಮೇಲ್ವರ್ಗ, ಸ್ಥಿತಿವಂತರು ಎನಿಸಿಕೊಂಡು ಸರಕಾರೀ ಮೀಸಲಾತಿ ಮತ್ತು ಕೃಪೆಯಿಂದ ದೂರವೇ ಉಳಿದ ಬ್ರಾಹ್ಮಣವರ್ಗದ ಜನ ರಣಬಿಸಿಲಲ್ಲಿ ಕಲ್ಲು ಒಡೆದು ಜಲ್ಲಿ ತಯಾರಿಸಿ ಬದುಕುತ್ತಿದ್ದಾರೆ ! ಅಲ್ಲಿನ ಕೂಲಿಯೂ ಮತ್ತದೇ ೫೦-೬೦ ರೂಪಾಯಿ. ಸಿನಿಮಾವೊಂದರಲ್ಲಿ ದಿ| ಟಿ.ಎನ್.ಬಾಲಕೃಷ್ಣ ಮುದಿವಯಸ್ಸಿನಲ್ಲಿ ಕಲ್ಲು ಒಡೆಯುವ ಕಷ್ಟದ ಚಿತ್ರಣವನ್ನು ತೋರಿಸಿದ್ದಾರೆ. ಅದೇ ರೀತಿ ಅಕ್ಷರಶಃ ಮುದುಕರೂ ಕಲ್ಲು ಒಡೆಯುವುದನ್ನು ರಾಯಚೂರು-ಸಿಂಧನೂರು-ಬಳ್ಳಾರಿಯ ಕೆಲವು ಹಳ್ಳಿಗಳಲ್ಲಿ ಕಾಣಬಹುದು ! ’ನಾಡಿಗೆ ದೂರ ಕಾಡಿಗೆ ಹತ್ತಿರ’ ಎನಿಸುವ ಮುದುಕರಿಗೆ ಹುಟ್ಟಿದ ತಪ್ಪಿಗೆ ಮಾಡಲೇಬೇಕಾದ ಅನಿವಾರ್ಯತೆ ಅಲ್ಲಿದೆ. ಬೆವರು ಸುರಿಸುತ್ತಾ ಅವರು ತಯಾರಿಸಿದ ಜಲ್ಲೀ ಕಲ್ಲುಗಳು ಎಲ್ಲೆಲ್ಲಿಗೋ ಲಾರಿಗಳಲ್ಲಿ ಸಾಗುತ್ತವೆ.

ರಾಜಕಾರಣಿಗಳ ಡೊಂಬರಾಟ ಮಾತ್ರ ಇದನ್ಯಾವುದನ್ನೂ ಲೆಕ್ಕಿಸುವುದೇ ಇಲ್ಲ, ಅಲ್ಲಿ ಖುರ್ಚಿ ಭದ್ರತೆಯೇ ಅವರ ಚಿಂತೆ. ನೋಡಿ: ಮತ್ತೆ ಬಳ್ಳಾರಿಯಲ್ಲಿ ಈಗ ಡೊಂಬರಾಟ ನಡೆಯುತ್ತಿದೆ. ಇರುವ ಶಾಸಕ ರಾಜೆನಾಮೆ ಒಗೆದ. ಕಾರಣ ಕೇಳಿದರೆ ಸ್ವಜನರಿಂದಲೇ ಅವಮರ್ಯಾದೆ, ಅವಗಣನೆ! ಈಗ ಸ್ವತಂತ್ರ ಅಭ್ಯರ್ಥಿ-ನಾಳೆ ಗೆದ್ದಮೇಲೆ ಹುಲ್ಲು ಹೊತ್ತ ಮಹಿಳೆಯ ಸೆರಗು ಹಿಡೀತಾನೆ, ಅಲ್ಲಿ ಮತ್ತೆ ಜಗಳ- ಮತ್ತೆ ಹೊರಗೆ, ಮತ್ತೆ ಚುನಾವಣೆ; ಇದು ಮುಗಿಯದ ಡೊಂಬರಾಟ. ಪ್ರತೀ ಚುನಾವಣೆಗೆ ಕದ್ದೂ ಮುಚ್ಚಿ ಕೋಟ್ಯಂತರ ಹಣ ಚೆಲ್ಲುವ ಪ್ರತೀ ಹುರಿಯಾಳು ಎಲ್ಲಿಂದ ಹಣ ತರುತ್ತಾನೆ? ಗೆದ್ದಮೇಲೆ ಮತ್ತೆ ಮಾಮೂಲಿ ಸಿಗುತ್ತದೆಯೆಂಬ ಭದ್ರತೆ ಇರದಿದ್ದರೆ ಅಷ್ಟೆಲ್ಲಾ ಧೈರ್ಯ ಹೇಗೆ ಬರುತ್ತದೆ ? ಹೆಂಡ-ಬಟ್ಟೆ-ಬ್ಯಾನರು ಇತ್ಯಾದಿ ಚುನಾವಣೆಗೆ ಖರ್ಚುಮಡುವ ಆ ಹಣವನ್ನು ಬಡತನ ನಿರ್ಮೂಲನಗೆ ಖರ್ಚುಮಾಡಲು ಸಾಧ್ಯವಿಲ್ಲವೇ ? ಅಥವಾ ಬಡತನ ನಿರ್ಮೂಲನೆ ಎಂಬ ಕೆಲಸಕ್ಕೆ ಯಾರಲ್ಲೂ ಹಣ ಇರುವುದಿಲ್ಲವೇ ? ತಪ್ಪು ನಮ್ಮದು. ನಾವು ಮಂಗಗಳಾಗಿದ್ದೇವೆ. ರಾಜೀನಾಮೆ ಯಾಕೆ ಕೊಟ್ಟೆ-ಅಥವಾ ಯಾವ ಆಧಾರದ ಮೇಲೆ ಸ್ವೀಕರಿಸಿದಿರಿ ? ಎಂಬ ಕಾರಣ ಕೇಳಲು ನಾವು ಅರ್ಹರಲ್ಲ ! ಆಡಳಿತ ಯಂತ್ರದ ಕೀಲು ಕಳಚಿಬಿದ್ದರೂ ಕಂಡೂ ಕಾಣದಂತೇ ಪಂಕ್ಚರ್ ಆದ ಬಸ್ಸನ್ನೇರಿ ಮುಂದೆ ಸಾಗಿದಂತೇ ಸಾಗಬೇಕಾಗುತ್ತದೆ! ಇದೇ ಇಂದಿನ ಪ್ರಜಾಪ್ರಭುತ್ವ !! ಪಾಪ ಅವರ ಭಾರ ಅವರಿಗೆ ಸುಮ್ನೇ ಮಾತಾಡಿ ಪ್ರಯೋಜನವಿಲ್ಲ; ಆನೆ ಭಾರ ಆನೆಗೆ ಇರುವೆ ಭಾರ ಇರುವೆಗೆ !