ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, September 28, 2012

ಈ ಬದುಕು ’ಬಿಸಿಲು ಬೆಳದಿಂಗಳು’ !

ಚಿತ್ರಗಳ ಋಣ: ಅಂತರ್ಜಾಲ 
ಈ ಬದುಕು ’ಬಿಸಿಲು ಬೆಳದಿಂಗಳು’ !

ಬಹಳ ಜನ ಸೇರಿದ್ದರು. ನಾವೆಲ್ಲಾ ಚಿಕ್ಕ ಮಕ್ಕಳು, ನೇರವಾಗಿ ಶಾಲೆಯಿಂದ ದೌಡಾಯಿಸಿದ್ದೆವು. ಅಲ್ಲಿ ನಮ್ಮಲ್ಲಿನ ಶಾಸ್ತ್ರೀಯ ಪಂಚವಾದ್ಯವಿತ್ತು, ತಳಿರುತೋರಣಗಳಿಂದ ಊರ ಮುಖ್ಯಭಾಗ ಅಲಂಕೃತಗೊಂಡಿತ್ತು. ಇಡೀ ಗ್ರಾಮದ ಜನತೆ ಸ್ವಾಮೀಜಿಯೊಬ್ಬರ ಆಗಮನಕ್ಕಾಗಿ ಕಾದಿತ್ತು. ಸಾವಿರಾರು ಜನ ಸ್ವಾಗತಕ್ಕೆ ನಿಂತ ಆ ಜಾಗಕ್ಕೆ ಬಂದಿಳಿದವರೇ ಚಿತ್ರದುರ್ಗದ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು. ನಮ್ಮೂರಿನ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಾಮಿಗಳಿಗೆ ಊರಿನವತಿಯಿಂದ ಗೌರವ ಸಮರ್ಪಣೆ ಕಾರ್ಯಕ್ರಮವಿತ್ತು. ಇದು ನಡೆದಿದ್ದು ಅಜಮಾಸು ೩೦ ವರ್ಷಗಳ ಹಿಂದೆ. ಸಮಾಜದ ವಿವಿಧ ಕ್ಷೇತ್ರಗಳಿಗೆ ಅನೇಕ ಗಣ್ಯರನ್ನು ಹೆತ್ತುಕೊಟ್ಟ ನನ್ನ ತಾಯ್ನೆಲ ಹೊನ್ನಾವರದ ಹಡಿನಬಾಳ. ಇಂದು ನಿವೃತ್ತ ಜೀವನ ನಡೆಸುತ್ತಿರುವ ಕಪ್ಪೆಕೆರೆ [ಹಡಿನಬಾಳ ಗ್ರಾಮದ ಒಂದು ಮಜರೆ] ಗಜಾನನ ಹೆಗಡೆಯವರು, ತರಳಬಾಳು ಸ್ವಾಮಿಗಳು ನಡೆಸುತ್ತಿದ್ದ ಕಾಲೇಜಿನಲ್ಲಿ ಅಂದು ಉಪನ್ಯಾಸಕರಾಗಿ ಕೆಲಸಮಾಡುತ್ತಿದ್ದರು. ಉಪನ್ಯಾಸಕರ ಕರೆಯನ್ನು ಮನ್ನಿಸಿ ಹಡಿನಬಾಳಕ್ಕೆ ತರಳಬಾಳುವಿನಿಂದ ಶ್ರೀಗಳು ಬಂದಿದ್ದರು. ಆ ಕಾಲಕ್ಕೆ ಶ್ರೀರಾಮಚಂದ್ರಾಪುರಮಠದ ಆಸ್ಥಾನ ವಿದ್ವಾನ್ ಎನಿಸಿದ್ದ ಸೂರಿ ರಾಮಚಂದ್ರ ಶಾಸ್ತ್ರಿಗಳು ’ಮೈಸೂರು ಶಾಸ್ತ್ರಿ’ಎಂದೇ ಪ್ರಸಿದ್ಧರು ಮತ್ತು ಪ್ರಕಾಂಡ ಪಂಡಿತರೂ ಆಗಿದ್ದವರು. ಅಂತಹ ವಿದ್ವನ್ಮಣಿಗಳನ್ನು ಸಭೆಯಲ್ಲಿರಿಸಿಕೊಂಡ ಹಡಿನಬಾಳದ ಜನತೆ ತರಳಬಾಳು ಶ್ರೀಗಳಿಗೆ ತನ್ನ ಗೌರವಾರ್ಪಣೆ ಸಲ್ಲಿಸಿತು. ಋಜುಮಾರ್ಗದವರೇ ತುಂಬಿದ ನಮ್ಮ ಊರು ಇಂತಹ ಅನೇಕರನ್ನು ಸ್ವಾಗತಿಸಿದೆ, ಸನ್ಮಾನಿಸಿದೆ. ಸ್ವಾಮಿಗಳಿಗೆ ಹಾರಾರ್ಪಣೆ ಮಾಡಿದ ಚಿಕ್ಕ ಬಾಲಕರಲ್ಲಿ ನಾನೂ ಒಬ್ಬ, ನೆಟ್ಟಗೆ ಗಟ್ಟಿನಿಲ್ಲಲೇ ಆಗದ ಸ್ಥಿತಿಯಲ್ಲಿ, ಗಡಗಡಗುಡುವ ಕೈಗಳಿಂದಲೇ ಹಾರವನ್ನು ಹಾಕುವಾಗ ಧರ್ಯಕ್ಕೆ ಬೆನ್ನಿಗೆ ನಿಂತಿದ್ದು ನನ್ನ ಅಜ್ಜ.

ಅಂದೇ ತರಳಬಾಳುವಿನ ಸಂಪರ್ಕ ನಮಗಾಯ್ತು. ಆಲ್ಲಿಂದಾಚೆಗೆ ಆಗಾಗ ಅಲ್ಲಿನ ಸುದ್ದಿ, ಮಠದ ಬೆಳವಣಿಗೆಗಳ ಮಾಹಿತಿ ಬರುತ್ತಲೇ ಇತ್ತು. ಅದೆಲ್ಲಕ್ಕಿಂತಾ ಹೆಚ್ಚಾಗಿ ಶ್ರೀಗಳ ಅಧ್ಯಯನ ಮಾರ್ಗ ಬಹಳ ಹಿಡಿಸಿತು. ಗುರುವೆನಿಸಿಕೊಳ್ಳುವ ವ್ಯಕ್ತಿಗೆ ಅಧ್ಯಯನ ಮತ್ತು ಅಧ್ಯಾಪನ ಸಹಜವಾಗಿ ಬೇಕು. ಇಂದು ನಾವು ಹೊರಗೆ ಏನೇ ಅಂದರೂ ಅಂದಿಗೆ ಬ್ರಾಹ್ಮಣಮಠಗಳಲ್ಲಿ ಪೀಠಾರೂಢರಾಗಿರುತ್ತಿದ್ದವರಿಗೆ ಅಧ್ಯಯನ ಕಡ್ಡಾಯವಾಗಿ ಇರುತ್ತಿತ್ತು ಮತ್ತು ಅದನ್ನವರು ಪಾಲಿಸುತ್ತಿದ್ದರು. ಲೌಕಿಕ ಪ್ರಾಪಂಚಿಕ ವ್ಯವಹಾರಗಳಲ್ಲಿ ಧೂರ್ತ ಶಿಷ್ಯರ ಹೇಳಿಕೆಗಳನ್ನು ಒತ್ತಾಯದಿಂದ ಒಪ್ಪಿದರೂ ಒಳಗಿನಿಂದ ಅವರು ವಿರಾಗಿಗಳಾಗಿರುತ್ತಿದ್ದರು. ಹಾಗಿರುವ ಗುರುವನ್ನು ನೋಡಿದ್ದ ನಮಗೆ ಕೇವಲ ಲೌಕಿಕವಾಗಿ ವ್ಯವಹಾರ ಚತುರರಾಗಿರುವ ಗುರುಗಳಾದರೆ ಮಾತ್ರ ಸಾಲುತ್ತಿರಲಿಲ್ಲ. ಗುರುವೊಬ್ಬ ಇಹ-ಪರಗಳ ಮಾರ್ಗದರ್ಶಿಯಾಗಿದ್ದು ಸ್ವತಃ ಅಧ್ಯಯನ ಶೀಲನೂ, ತನ್ನನ್ನೇ ತಾನು ತಿದ್ದಿಕೊಳ್ಳುತ್ತಾ ಲೋಕದ ಡೊಂಕನ್ನು ತಿದ್ದುವವನೂ, ಆರ್ತರ-ದೀನರ ಮೊರೆಯನ್ನು ಆಲಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸುವವನೂ, ಲೋಕೋಪಕಾರಾರ್ಥವಾಗಿ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುವವನೂ, ಕಾರ್ಯದಕ್ಷನೂ, ಜಪತಪಾನುಷ್ಠಾನ ನಿರತನೂ, ಮಾನವ ಸಹಜ ಜೀವನಧರ್ಮದ ಪ್ರಬೋಧಕನೂ, ನಿಸ್ವಾರ್ಥನೂ, ನೈತಿಕನಿಷ್ಠನೂ ಮೊದಲಾದ ಸನ್ಯಾಸ ಧರ್ಮದ ಸಲ್ಲಕ್ಷಣಗಳನ್ನು ನಾವೆಲ್ಲಾ ಗುರುಸ್ಥಾನದಲ್ಲಿ ಇರುವ ವ್ಯಕ್ತಿಯಲ್ಲಿ ನಿರೀಕ್ಷಿಸುತ್ತಿದ್ದೆವು. ದೂರದ ತರಳುಬಾಳು ನಮ್ಮೂರಿಗೆ ಪ್ರಾದೇಶಿಕವಾಗಿ ಹತ್ತಿರವಾಗಿರಲಿಲ್ಲ; ಅದೂ ನಮ್ಮಂಥ ಅನೇಕ ನಮ್ಮ ಗ್ರಾಮವಾಸಿಗಳಿಗೆ ಕಣ್ಣಿಗೆ ಕಾಣದ ಪ್ರದೇಶ, ಆದರೂ ನಮ್ಮಲ್ಲಿನ ಹಿರಿಯರಿಗೆ ಒಂದು ಸಮಾಧಾನವಿತ್ತು- ಗಜಾನನ ಕರೆದಿದ್ದರೆ ಅವರು ಯೋಗ್ಯರೇ ಇರಬೇಕು ಎಂಬುದು; ಅದು ಸುಳ್ಳಾಗಲಿಲ್ಲ, ಆ ಗುರು ನಿಜಕ್ಕೂ ಯೋಗ್ಯತೆಯುಳ್ಳವರೇ ಆಗಿದ್ದರು! 

ವೃತ್ತಿಗಾಗಿ ಬೆಂಗಳೂರನ್ನು ಸೇರಿದ ನನಗೆ ರವೀಂದ್ರನಾಥ ಠಾಗೋರ್ ನಗರಕ್ಕೆ ಹೋಗುವಾಗೆಲ್ಲಾ ’ತರಳಬಾಳು ಮಾರ್ಗ’ ಎಂದು ಬರೆದಿರುವುದು ಕಾಣಿಸುತ್ತಿತ್ತು; ಪ್ರಥಮವಾಗಿ ನಾನದನ್ನು ನೋಡಿದಾಗ ಅದು ತರಳಬಾಳುವಿಗೇ ಹೋಗುತ್ತದೆ ಎಂದುಕೊಂಡುಬಿಟ್ಟಿದ್ದೆ! ಆಮೇಲೆ ಅರಿವಿಗೆ ಬಂದಿದ್ದು-ಅದು ಆ ಮಾರ್ಗಕ್ಕೆ ಇಟ್ಟ ಹೆಸರಷ್ಟೇ, ತರಳಬಾಳು ಎಂಬ ಪ್ರದೇಶ ಚಿತ್ರದುರ್ಗ ಜಿಲ್ಲೆಯಲ್ಲಿದೆ ಎಂದು. ತರಳಬಾಳು ಶ್ರೀಗಳ ಲೇಖನ ಆಗಾಗ ಅಲ್ಲಲ್ಲಿ ವಿರಳವಾಗಿ ಓದಲು ಸಿಗುತ್ತಿತ್ತು; ಸಾಹಿತ್ಯ ಪ್ರಿಯನಾದ ನನ್ನನ್ನು ಅದು ತನ್ನಲ್ಲಿರುವ ಸರಳ ನಿರೂಪಣೆಯಿಂದ ಆಕರ್ಷಿಸುತ್ತಿತ್ತು. ಗಜಾನನ ಹೆಗಡೆಯವರೂ ಸೇರಿದಂತೇ ಬಹಳ ಜನ ಹೇಳಿದ್ದರು-ತರಳಬಾಳು ಶ್ರೀಗಳು ಸಂಸ್ಕೃತವನ್ನು ಕಂಪ್ಯೂಟರಿಗೆ ಅಳವಡಿಸುತ್ತಿದ್ದಾರೆ ಎಂದು. ಗಣಕತಂತ್ರಜ್ಞರಲ್ಲದ ಶ್ರೀಗಳು ಅದು ಹೇಗೆ ಆ ಕೆಲಸ ನಿಭಾಯಿಸುತ್ತಾರೆಂಬುದೇ ಒಂದು ಸೋಜಿಗವಾಗಿತ್ತು;  ಕ್ರಿ.ಪೂ. ೫ನೇ ಶತಮಾನಕ್ಕೂ ಮೊದಲು ಬದುಕಿದ್ದನೆನ್ನಲಾದ ಮಹಾಕವಿ ಪಾಣಿನಿಯ ಅಷ್ಟಾಧ್ಯಾಯವನ್ನು ಗಣಕಯಂತ್ರಕ್ಕೆ ಅಳವಡಿಸುವ ಕಾರ್ಯಯೋಜನೆ ಅವರದಾಗಿತ್ತು !  ಸಂಸ್ಕೃತ ಸತ್ತಭಾಷೆ, ಮೃತಭಾಷೆ ಎಂದೆಲ್ಲಾ ಜರಿಯುವ ಜನ ಇಂತಹ ಸಂಸ್ಕೃತ ಪಂಡಿತರನ್ನು ಕಂಡು ಮಾತನಾಡಬೇಕು. ಪುಣ್ಯಭೂಮಿ ಭಾರತದಲ್ಲಿ ನಿಧಿನಿಕ್ಷೇಪಗಳಿಗಿಂತಾ ಹೆಚ್ಚಾಗಿ ಅನೇಕ ಜ್ಞಾನನಿಧಿಗಳು ಆಗಿಹೋಗಿದ್ದಾರೆ. ಅವರು ಹೂತಿಟ್ಟುಹೋದ ’ನಿಧಿ-ನಿಕ್ಷೇಪ’ಗಳು ಅನೇಕವಿವೆ. ಅವುಗಳನ್ನು ಅರಿತುಕೊಳ್ಳಲಾದರೂ ನಾವು ಸಂಸ್ಕೃತವನ್ನು ಅಭ್ಯಸಿಸಿದರೆ ಉತ್ತಮ ಎಂಬುದು ನನ್ನ ಅಭಿಪ್ರಾಯ. ||ಸಂಸ್ಕಾರಾತ್ ದ್ವಿಜ ಉಚ್ಯತೇ||- ಮನುಷ್ಯ ತನ್ನ ಉತ್ತಮ ಸಂಸ್ಕಾರಗಳಿಂದ ಬ್ರಾಹ್ಮಣನಾಗುತ್ತಾನಂತೆ, ಇಂದು ಯಾವುದೇ ವಿದ್ಯೆಯೂ ಇಲ್ಲದೇ ಗುರುವೆಂದು ಪೀಠಹತ್ತಿ ಕೂತು ಮೆರೆಯುವ ಜನ ಇದ್ದಾರೆ. ಆದರೆ ಸಿರಿಗೆರೆಯ ಶ್ರೀಗಳು ಹಾಗಲ್ಲ. ಐಹಿಕ-ಪ್ರಾಪಂಚಿಕ ವಿದ್ಯೆಯನ್ನು ವಿದೇಶಗಳಲ್ಲಿ ಕಲಿತರೂ ಸಂಸ್ಕೃತವನ್ನು ಅಧ್ಯಯನಮಾಡಿದ ಶ್ರೀಗಳು ವೇದ-ವೇದಾಂಗಗಳ ಬಗೆಗೆ, ಸಂಸ್ಕೃತದಲ್ಲಿ ಬರೆಯಲ್ಪಟ್ಟ ಬಹುತೇಕ ಕಾವ್ಯ-ಸಾಹಿತ್ಯಗಳ ಬಗೆಗೆ ಅಧ್ಯಯನ ನಡೆಸಿದರು. ಶಿವಕುಮಾರ ಶ್ರೀಗಳ ಅನುಭವಗಳ ಜೊತೆಗೆ, ಉತ್ತಮ ಹೊತ್ತಗೆಗಳು ನೀಡಿದ ಈ ಸಂಸ್ಕಾರಗಳೂ ಸೇರಿಕೊಂಡಾಗ ಸಾದರ-ಲಿಂಗಾಯತರ ಮಠವಷ್ಟೇ ಎನಿಸಿದ್ದ ಪೀಠವನ್ನು ಸರ್ವಜನಮಾನ್ಯವನ್ನಾಗಿ ಬೆಳೆಸುವಲ್ಲಿ ಅದು ಸಹಕಾರಿಯಾಯ್ತು. 

ವಿಜಯಕರ್ನಾಟಕದಲ್ಲಿ ಕೆಲವು ವರ್ಷಗಳಿಂದ ’ಬಿಸಿಲು ಬೆಳದಿಂಗಳು’ ಅಂಕಣವನ್ನು ಬರೆಯುತ್ತಿರುವ ಶ್ರೀಗಳ ಲೇಖನಗಳ ಬಗ್ಗೆ ಹೊಸದಾಗಿ ನಿಮಗೆ ಹೇಳುವುದೇನೂ ಬೇಕಾಗಿಲ್ಲ. ಅಲ್ಲಿ ನ್ಯಾಯ-ನೀತಿ-ದಯೆ-ಕರುಣೆ-ಅನುಕಂಪ-ಸಹನೆ-ದಾನ-ಧರ್ಮ-ದಂಡ ಎಲ್ಲದರ ಬಗೆಗೂ ಸೋದಾಹರಣವಾಗಿ ಬರೆಯುವ ಶೈಲಿ ಮತ್ತು ಅಚ್ಚುಕಟ್ಟಾಗಿ ನಿರೂಪಿತವಾಗುವ ಅವರ ಅಂಕಣ ನನ್ನ ಓದಿನ ಆದ್ಯತೆಗಳಲ್ಲೊಂದು. ಒಮ್ಮೆ ಅವರ ಪೂರ್ವಾಶ್ರಮದ ಬಾಲ್ಯಕಾಲದಲ್ಲಿ ಅಮ್ಮನ ಜೊತೆ ಹೊಲಕ್ಕೆ ಹೋದಾಗ ಆಳದಲ್ಲಿ ಬಿದ್ದು ತಲೆಗೆ ಪೆಟ್ಟುಮಾಡಿಕೊಂಡ ಘಟನೆ ವಿವರಿಸಿದ್ದರು, ಜೊತೆಗೆ ಈಗ ಕೆಲವರ್ಷಗಳ ಹಿಂದೆ ಅವರ ಪೂರ್ವಾಶ್ರಮದ ಅಮ್ಮ ಕಾಯಿಲೆಯಿಂದ ಬಳಲಿ ಖರ್ಚಿಗೆ ಹಣವಿಲ್ಲದಾದಾಗ, ಮಠದಿಂದ ಕಳುಹಿಸಿದ್ದರ ಬಗ್ಗೆ-ವಾಸಿಯಾದಮೇಲೆ ಆ ಹಣವನ್ನು ತಾವು ಇಟ್ಟುಕೊಳ್ಳಬಾರದೆಂದು ಅವರಮ್ಮ ಮಠಕ್ಕೆ ಮರಳಿಸಿದ್ದರ ಔಚಿತ್ಯದ ಬಗ್ಗೆ ವಿಶದವಾಗಿ ತಿಳಿಸಿಕೊಟ್ಟಿದ್ದರು. ||ಸರ್ವವಂದ್ಯೇಣ ಯತಿನಾಂ ಪ್ರಸೂರ್ಮಾತಾ ಪ್ರಯತ್ನತಃ||-ಲೋಕದ ಸಮಸ್ತರಿಂದಲೂ ನಮಸ್ಕರಿಸಲ್ಪಡುವ ಯತಿಯಾದರೂ ಹಡೆದಮ್ಮನಿಂದ ಮಾತ್ರ ನಮಸ್ಕಾರ ಸ್ವೀಕರಿಸದೇ, ಬದಲಾಗಿ ತಾನೇ ನಮಸ್ಕರಿಸಬೇಕು ಎಂದು ಆದಿಶಂಕರರು ಹೇಳಿದಂತೇ ಅಮ್ಮನ ಋಣ ತೀರಿಸಲು ಸಾಧ್ಯವಿಲ್ಲಾ ಎಂಬುದನ್ನು ಅವರು ಬರೆದ ಲೇಖನ ಹೇಳಿತ್ತು ಮತ್ತು ವಾರಗಟ್ಟಲೆ ಆ ಲೇಖನದ ಗುಂಗಿನಲ್ಲೇ ನಾನಿದ್ದೆ! ಮನುಷ್ಯನಾಗಿ ಹುಟ್ಟಿದಮೇಲೆ ತಪ್ಪು-ಒಪ್ಪು ಇದ್ದಿದ್ದೇ. ಎಲ್ಲರೂ ತಪ್ಪನ್ನು ಮಾಡದೇ ಇರಲು ಸಾಧ್ಯವೇ? ತಪ್ಪುಮಾಡಿದವರನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೇ ಪ್ರೇರೇಪಿಸುವ ಶ್ರೀಗಳ ’ಸದ್ಧರ್ಮ ನ್ಯಾಯಪೀಠ’ ಒಂದು ವಿಶಿಷ್ಟ ಸಾಧನೆ. ಧರ್ಮಸ್ಥಳದಲ್ಲಿ ಮಂಜುನಾಥನಿಗೆ ಹೆದರಿ ಹೆಗ್ಗಡೆಯವರ ಎದುರು ನ್ಯಾಯಕ್ಕೆ ಒಪ್ಪಿಕೊಳ್ಳುವಂತೇ ಈ ಮಠದ ಶಿಷ್ಯಗಣದ ಹಲವರು ಶ್ರೀಗಳ ವರ್ಚಸ್ಸಿಗೂ ಮತ್ತು ನ್ಯಾಯಪರತೆಗೂ ಅಂಜಿ ನಿಜವನ್ನು ಹೇಳುತ್ತಾರೆ! ತಪ್ಪಿತಸ್ಥರಿಗೆ ಕಠಿಣಶಿಕ್ಷೆಯ ಬದಲು ಅಂಥವರ ಮನಃಪರಿವರ್ತನೆ ಮಾಡುವ ಕೆಲಸ ಶ್ಲಾಘನೀಯ.

||ಅರ್ಚಕಸ್ಯ  ಪ್ರಭಾವೇನ ಶಿಲಾ ಭವತಿ ಶಂಕರ|| ಎಂಬರೀತಿಯಲ್ಲೇ ತನ್ನ ವೈಯ್ಯಕ್ತಿಕ ವರ್ಚಸ್ಸಿನಿಂದಲೂ, ವ್ಯಾವಹಾರಿಕ ಜಾಣ್ಮೆಯಿಂದಲೂ, ಆಳವಾದ ಅಧ್ಯಯನದಿಂದಲೂ, ಸನ್ಮಾರ್ಗದ ಅನುಸರಣೆ ಮತ್ತು ಬೋಧನೆಯಿಂದಲೂ ಶ್ರೀಗಳು ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ. ಸಂಕಲ್ಪಗಳು ಸಾಕಾರರೂಪ ತಳೆದಿವೆ. ಅನೇಕ ಶಾಲಾ-ಕಾಲೇಜುಗಳೂ ಸೇರಿದಂತೇ ೧೫೦ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ವೇದಾಧ್ಯಯನಕ್ಕೂ ಪಾಠಶಾಲೆಗಳನ್ನು ವ್ಯವಸ್ಥೆಮಾಡಿದ್ದು ಪ್ರಮುಖವಾಗಿ ಹೇಳಬೇಕಾದ ಅಂಶ ಯಾಕೆಂದರೆ ಅಪೌರುಷೇಯವಾದ ಅನರ್ಘ್ಯರತ್ನಗಳನ್ನು ಉಳಿಸಿಕೊಳ್ಳಬೇಕಾದ ಕರ್ತವ್ಯ ನಮ್ಮೆಲ್ಲಾ ಹಿಂದೂ ಸನ್ಯಾಸಿಗಳದ್ದಾಗಿದೆ. ಶಿಸ್ತಿನಲ್ಲೂ ತಮ್ಮದೇ ಆದ ಚೌಕಟ್ಟನ್ನು ರೂಪಿಸಿಕೊಂಡ ಶ್ರೀಗಳ ಪ್ರತೀ ವ್ಯವಹಾರವೂ ಶಿಸ್ತಿನಿಂದಲೇ ಕೂಡಿದೆ, ಅನುಕರಣೀಯವಾಗಿದೆ. ಪ್ರೌಢಾವಸ್ಥೆಗೆ ಬಂದನಂತರ ಮತ್ತೆ ನಾನು ಅವರನ್ನು ತೀರಾ ಹತ್ತಿರದಿಂದ ಕಾಣಲಿಲ್ಲವಾದರೂ ಮಿಂಚಂಚೆಯ ಮುಖಾಂತರ ಅವರನ್ನು ತಲ್ಪಬೇಕು, ಒಮ್ಮೆ ಭೇಟಿಮಾಡಬೇಕು ಎಂಬ ಇಂಗಿತ ಉಳಿದುಕೊಂಡಿದೆ-ಅದನ್ನು ಮಾಡಬೇಕಾಗಿದೆ. ಅವರ ಅಧಿಕಾರ ನಿವೃತ್ತಿ ಸ್ವಲ್ಪ ಬೇಸರ ತರಿಸಿದ್ದರೂ ಅದು ಅವರ ಗುರುಗಳು ಹಾಕಿಕೊಟ್ಟ ಕ್ರಮವಾದ್ದರಿಂದ ಹಾಗೆ ಮಾಡಬೇಡಿ ಎನ್ನುವ ಅಧಿಕಾರ ನಮಗಿದೆಯೇ?  

ಬಿಸಿಲಿನಲ್ಲೂ ಬೆಳದಿಂಗಳನ್ನು ತೋರುವ ಅಗಾಧ ಪಾಂಡಿತ್ಯವನ್ನು ಗಳಿಸಿದ ಶ್ರೀಗಳ ಲಘುಹಾಸ್ಯ ಅತಿಮಧುರ! ಅಂತಹ ಒಂದು ಉದಾಹರಣೆ ಹೀಗಿದೆ: ಒಮ್ಮೆ ಸರಕಾರದ ಸರ್ವೇ ಮತ್ತು ರೆವಿನ್ಯೂ ಇಲಾಖೆಗಳ ನೌಕರರು ಒಟ್ಟಾಗಿ ಸತ್ಯನಾರಾಯಣ ಪೂಜೆ ಮಾಡಿಸಿದರಂತೆ; ಹೇಳಿಕೇಳಿ ಸಂಸ್ಕೃತ ಗೊತ್ತಿಲ್ಲದ ಜನ. ಪೂಜೆಗೆ ಬಂದ ಪುರೋಹಿತರು, ಸತ್ಯನಾರಾಯಣ ಪೂಜಾಂತ್ಯದಲ್ಲಿ || ಸರ್ವೇಜನಾಃ ಸುಖಿನೋ ಭವಂತು|| ಎಂದಾಗ ರೆವಿನ್ಯೂ ಇಲಾಖೆಯ ಜನಗಳದ್ದು ಒಂದೇಸಮನೆ ಜಗಳ ಶುರುವಾಯ್ತಂತೆ. ನಾವು ಎರಡು ಇಲಾಖೆಯವರು ಸೇರಿ ನಡೆಸಿದ ಪೂಜೆ ಇದು, ಹಾಗಿದ್ದೂ ಪುರೋಹಿತರು ಸರ್ವೇಜನ ಮಾತ್ರ ಸುಖವಾಗಿರಲಿ ಎಂದು ಹೇಗೆ ಹೇಳಿದರು ಎಂಬುದೇ ಅಲ್ಲಿನ ಜಗಳದ ವಿಷಯ. ಬುದ್ಧಿವಂತ ಪುರೋಹಿತರು "ರೆವಿನ್ಯೂ ಜನಾಃ ಸುಖಿನೋ ಭವಂತು" ಎಂದು ಅವರನ್ನು ಸಮಾಧಾನಿಸಿದರಂತೆ.-ಇದು ಶ್ರೀಗಳ ಹಾಸ್ಯಪ್ರಜ್ಞೆ. ಅರ್ಥವಾಯ್ತಲ್ಲಾ?  ನಮ್ಮಲ್ಲಿ ಎಷ್ಟೋ ಜನ ನಾವು ಪೂಜೆ ಮಾಡಿಸುತ್ತೇವೆ, ಹೇಳುವ ಮಂತ್ರಗಳ ಅರ್ಥ ನಮಗೆ ತಿಳಿದಿಲ್ಲ, ಸಂಸ್ಕೃತ ಕಂಡರೆ ಬದ್ಧವೈರ! ಆದರೂ ಪೂಜೆಗೆ ಮಾತ್ರ ಸಂಸ್ಕೃತವೇ ಅನಿವಾರ್ಯ! ಇನ್ನಾದರೂ ನಾವು ಸಂಸ್ಕೃತವನ್ನು ತಕ್ಕಮಟ್ಟಿಗೆ ಕಲಿಯೋಣವೇ? ಎಂಬ ಪ್ರಶ್ನೆಯನ್ನು ನಿಮ್ಮ ಮುಂದಿಟ್ಟು ಶ್ರೀಗಳಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಸಲ್ಲಿಸುತ್ತಿದ್ದೇನೆ.

ಬದುಕಿನ ಹಲವು ಮಜಲುಗಳಲ್ಲಿ ಕಷ್ಟ-ಸುಖಗಳು ಬರುತ್ತಲೇ ಇರುತ್ತವೆ. ಸೈಕಲ್ಲಿನಲ್ಲಿ ಹೋಗುವವನಿಗೆ  ಏರು-ತಗ್ಗುಗಳು ಸಿಗುವಹಾಗೇ. ಏರುಸಿಕ್ಕಾಗ ತಳ್ಳಬೇಕು, ಏದುಸಿರು! ಇಳುಕಲಿನಲ್ಲಿ ಪೆಡಲ್ ಮಾಡುವ ಅಗತ್ಯವೇ ಇಲ್ಲ, ಶ್ರಮರಹಿತ ವೇಗದ ನಡೆ. ಸಿಹಿಯನಂತರ ಕಹಿ, ಮತ್ತೆ ಸಿಹಿ, ಮತ್ತೆ ಕಹಿ. ಇದೇ ಈ ಜೀವನ. ಕಹಿಇದ್ದಾಗಲೇ ಸಿಹಿಯ ಮಹತ್ವದ ಅರಿವು ನಮಗೆ. ಅದಕ್ಕೇ ಸಾಂಕೇತಿಕವಾಗಿ ಯುಗಾದಿಯಂದು ಬೇವು-ಬೆಲ್ಲವನ್ನು ತಿನ್ನುತ್ತೇವೆ. ಕಹಿಯೂ ಇರಲಿ, ಸಿಹಿಯೂ ಇರಲಿ ಎಂಬುದು ಅದರ ಸಂದೇಶ. ದುಃಖವನ್ನೇ ಕೊಡಬೇಡಾ ದೇವರೇ ಎನ್ನಲು ನಾವು ಅಧಿಕಾರಸ್ಥರಲ್ಲ; ದುಃಖವನ್ನು ಸಹಿಸುವ ಶಕ್ತಿಯನ್ನು ಕೊಡು ಎಂಬುದು ನಮ್ಮ ಪ್ರಾರ್ಥನೆಯಾಗಿರಬೇಕು ಅಲ್ಲವೇ? ಕಷ್ಟವನ್ನು ಬಿಸಿಲಿಗೆ ಹೋಲಿಸಿದರೆ ಸುಖವನ್ನು ಬೆಳದಿಂಗಳಿಗೆ ಹೋಲಿಸಬಹುದಾಗಿದೆ. ಆದರೆ ಒಂದೇ ಒಂದು ದಿನ ಸೂರ್ಯರಶ್ಮಿ ಇರಲಿಲ್ಲಾ ಎಂದರೆ ಈ ಜಗತ್ತು ನಡೆಯುವುದಿಲ್ಲ. ಎಲ್ಲರಿಗೂ ರಜವಿದೆ, ಮೋಜಿದೆ, ಮಜವಿದೆ. ಆದರೆ ಲೋಕವನ್ನು ಬೆಳಗುವ ದಿನಮಣಿಗೆ ಮಾತ್ರ ರಜವೆಂಬುದೇ ಇಲ್ಲ. ಆ ಬಿಸಿಲು ಇದ್ದರೇನೆ ಅನೇಕ ಜೀವಿಗಳೂ ಜೀವಗಳೂ ತರುಲತೆಗಳೂ ತಮ್ಮ ಆಹಾರ ಸಿದ್ಧಪಡಿಸಿಕೊಳ್ಳಲು ಸಾಧ್ಯ. ಅಂದಾಗ ಕಷ್ಟದಲ್ಲೇ ಒಳಿತೂ ಅಡಗಿದೆ ಎಂಬುದು ಅರಿವಾಗುತ್ತದಲ್ಲಾ? ಹುಣ್ಣಿಮೆಯ ಬೆಳದಿಂಗಳ ರಾತ್ರಿಯಲ್ಲೂ ನಾವಿರುವ ಪ್ರದೇಶದಲ್ಲಿ ದುಷ್ಕರ್ಮಿಗಳು ಬಾಂಬ್ ಇರಿಸಿದ್ದಾರೆ ಎಂದು ಸುದ್ದಿಬಂದರೆ ನಮಗೆ ಸುಖ ಸಿಕ್ಕೀತೇ? ಸಾಧ್ಯವಿಲ್ಲ. ಅಂದಮೇಲೆ ಬೆಳದಿಂಗಳಲ್ಲೂ ಕಷ್ಟದ ಛಾಯೆ ಇರಬಹುದಲ್ಲಾ ?   


ನನಗೆ ತೀರಾ ಪರಿಚಿತರಲ್ಲದಿದ್ದರೂ ಹಲವರ ಬಾಯಿಂದ, ಫೇಸ್ ಬುಕ್ ನಿಂದ, ಸಂಯುಕ್ತ ಕರ್ನಾಟಕ ಪತ್ರಿಕೆಯಿಂದ ಪರಿಚಿತರಾದವರು ದಿ| ಡಾ| ಸತೀಶ್ ಶೃಂಗೇರಿ. ಇನ್ನೂ ೪೪ರ ವಯಸ್ಸು. ಸಾಧಿಸುವ ಕನಸುಗಳು ಹಲವಿದ್ದವು. ಸಾಧನೆಯೂ ತಕ್ಕಮಟ್ಟಿಗೆ ಆಗಿತ್ತು. ಅವರ ವ್ಯಂಗ್ಯಚಿತ್ರಗಳು ಮಾತನಾಡುತ್ತಿದ್ದವು! ಆಯುರ್ವೇದದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡು ಆಯುರ್ವೇದ ಸಂಸ್ಥೆಯೊಂದಕ್ಕೆ ಸಲಹೆಗಾರರಾಗಿ ಕೆಲಸಮಾಡುತ್ತಲೂ ಖಾಸಗಿಯಾಗಿ ತಾನೇ ಚಿಕ್ಕ ಚಿಕಿತ್ಸಾಲಯವನ್ನು ನಡೆಸುತ್ತಲೂ ಇದ್ದ ಸತೀಶ್ ಅವರ ಪ್ರವೃತ್ತಿ ವ್ಯಂಗ್ಯಚಿತ್ರವನ್ನು ಬರೆಯುವುದು. ಉದಯೋನ್ಮುಖ ವ್ಯಂಗ್ಯಚಿತ್ರಕಾರರಲ್ಲಿ ಅದಾಗಲೇ ಮನೆಮಾತಾಗಿದ್ದ ಅವರು ರಾಷ್ಟ್ರೀಯ-ಅಂತಾರಾಷ್ಟ್ರೀಯ ಮನ್ನಣೆಗಳನ್ನು ಪಡೆದವರು. ಆಸ್ತಮಾ ಮತ್ತು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರು ವಾರದ ಹಿಂದೆ ಬೆಂಗಳೂರಿನ ಖಾಸಗೀ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರಂತೆ. ನಿನ್ನೆ ಗುರುವಾರ ಅವರು ಹೆಂಡತಿ ಮತ್ತು ಮಗನನ್ನೂ, ಅಭಿಮಾನಿಗಳಾದ-ಸ್ನೇಹಿತರಾದ ನಮ್ಮೆಲ್ಲರನ್ನೂ ಅಗಲಿದ್ದಾರೆ. ಈ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತಿದ್ದೇನೆ.  

ವ್ಯಕ್ತಿಯೊಬ್ಬ ರೂಪುಗೊಳ್ಳಲು ಬಹುಕಾಲಬೇಕು. ಅದು ಕುಂಬಾರ ಆವೆಮಣ್ಣನ್ನು ತಂದು ಹದಮಾಡಿ ಮಡಕೆ ಮಾಡಿದಂತೇ ದೀರ್ಘ ಕೆಲಸ. ಹಡೆದ ಅಪ್ಪ-ಅಮ್ಮನ ಆರೈಕೆಯಲ್ಲಿ ಹುಟ್ಟಿದಮನೆಯ ಕಷ್ಟವನ್ನೋ ಸುಖವನ್ನೋ ಹಂಚಿಕೊಂಡು ಬೆಳೆಯುವ ಮಗು ವಿಧಿಲಿಖಿತದಂತೇ ವಿದ್ಯೆಯನ್ನು ಪಡೆದುಕೊಳ್ಳುತ್ತದೆ. ಪಡೆದುಬಂದ ಭಾಗ್ಯವನ್ನು ಅನುಭವಿಸುತ್ತದೆ. ಸುಮ್ಮನೇ ಕೆಲವೊಮ್ಮೆ ವಿಚಾರಿಸುತ್ತಾ ಕುಳಿತಾಗ ನಾವು ಬಳಸುವ ಪ್ರತಿಯೊಂದು ವಸ್ತುವೂ ನೆನಪಿಗೆ ಬರುತ್ತದೆ. ಚಹಾ ಕುಡಿಯುವ ಲೋಟ, ಸ್ನಾನಮಾಡುವ ಮಗ್ಗು, ಒರೆಸಿಕೊಳ್ಳುವ ವಸ್ತ್ರ, ಬಾಚಿಕೊಳ್ಳುವ ಹಣಿಗೆ, ರೂಪನೋಡಿಕೊಳ್ಳುವ ಕನ್ನಡಿ, ಸ್ನಾನಕ್ಕೆ ನೀರು ಬಿಸಿಮಾಡಿದ ಗೀಜರ್, ಅದಕ್ಕೆ ವಿದ್ಯುತ್ತು ಸರಬರಾಜುಮಾಡಿದ ಯಂತ್ರಗಳು, ಮನೆಯಲ್ಲಿ ನೀರು ಹೊತ್ತು ಮೇಲ್ಗಡೆ ಸಾಗಿಸುವ ಪಂಪು, ಕೂತಿರುವ ಸೋಫಾ, ಮಲಗುವ ಮಂಚ, ಹೊದೆಯುವ ಹೊದಿಕೆ, ಬೀಸುವ ಫ್ಯಾನು, ಮೊಳಗುವ ಫೋನು, ಅನ್ನಕ್ಕೆ ಅಕ್ಕಿ, ಆಸೆಗೆ ಬೇಳೇಕಾಳು-ತರಕಾರಿ, ನಾನೀಗ ಬರೆಯುತ್ತಿರುವ ತಂತ್ರಾಂಶ, ಬಳಸುತ್ತಿರುವ ಗಣಕಯಂತ್ರ, ಅಂತರ್ಜಾಲ--ಈ ಎಲ್ಲದರ ಹಿಂದೆ ಒಂದು ಅಗಾಧವಾದ ಶಕ್ತಿ ಕೆಲಸಮಾಡುತ್ತದೆ!

ಶರಣವೊಗು  ಜೀವನ ರಹಸ್ಯದಲಿ ಸತ್ತ್ವದಲಿ
ಶರಣು ಜೀವನ ಸುಮವೆನಿಪ ಯತ್ನದಲಿ
ಶರಣಂತರಾತ್ಮ ಗಂಭೀರ ಪ್ರಶಾಂತಿಯಲಿ
ಶರಣು ವಿಶ್ವಾತ್ಮನಲಿ-ಮಂಕುತಿಮ್ಮ

ಇಂತಿಂಥಾ ವ್ಯಕ್ತಿ ಇಂತಲ್ಲೇ ಹುಟ್ಟಿ ಇಂತಿಂಥಾದ್ದನ್ನೇ ಮಾಡಬೇಕು, ಇಂತಿಷ್ಟೇ ಕಾಲ ಬದುಕಬೇಕೆಂಬ ವಿಧಿಬರಹದ ಹಿಂದಿನ ಕರ್ಮಬಂಧನದ ಜಾಲದ ಬಗೆಗೆ ನಮಗೆ ಅರಿವಿಲ್ಲ! ಆದರೂ ಬಂದ ವ್ಯಕ್ತಿ ಹೋಗುವ ಮುನ್ನ ತೊಡಗಿಕೊಂಡ ಈ ಲೋಕದ ನವಿರಾದ ಭಾವಗಳು ಕೆಲವರ ಮರಣಾನಂತರವೂ ಮರಣಿಸುವುದಿಲ್ಲ. ಅಂಥವರಲ್ಲಿ ಇತ್ತೀಚೆಗೆ ನಿಧನರಾದ ರಾಜಕಾರಣಿ ಡಾ| ವಿ.ಎಸ್. ಆಚಾರ್ಯ ಒಬ್ಬರು, ಅದೇ ರೀತಿ ಡಾ| ಸತೀಶ್ ಕೂಡ ಎಲೆಮರೆಯ ಕಾಯಿಯಂತೇ ಇದ್ದರು. ತನ್ನ ಕಟುಹಾಸ್ಯ ಭರಿತ ವ್ಯಂಗ್ಯಚಿತ್ರಗಳಿಂದ ಜನಮನ ಗೆಲ್ಲುವಲ್ಲಿ ಅವರು ಯಶಸ್ವಿಯಾಗಿದ್ದರೂ ಬಹುಜನರನ್ನು ತಲುಪಿ ಇನ್ನೂ ಮತ್ತಷ್ಟು ಸಾಧನೆಮಾಡುವ ಮುನ್ನವೇ ಅವರನ್ನು ವಿಧಿ ಬರಹೇಳಿದೆ-ಅವರು ತೆರಳಿದ್ದಾರೆ. ಈ ಈರ್ವರ ಬ್ಲಾಗುಗಳೂ ಇನ್ನೂ ಜೀವಂತವೇ. ನಿನ್ನೆ ಒಮ್ಮೆ ’ಶೃಂಗೇರಿ ಕಾರ್ಟೂನ್’ ಬ್ಲಾಗ್ ತೆರೆದು ನೋಡಿದೆ. ಮರೆಯಲಾಗದ ಮನುಷ್ಯ! ನಂಬಲಾಗದ ಘಟನೆ. ಡಾ| ರಾಜ್ ಕುಮಾರ ಗತಿಸಿದರೇನಾಯ್ತು? ಅವರು ಚಲನಚಿತ್ರಗಳಲ್ಲಿ ಇನ್ನೂ ಅಮರ, ಅದೇ ರೀತಿ ವಿ.ಎಸ್. ಆಚಾರ್ಯರು ರಾಜಕೀಯ ಸೇವೆಗಳಿಂದ ಅಮರರು, ಸತೀಶ್ ತಮ್ಮ ಕಾರ್ಟೂನುಗಳಿಂದ ಅಮರರು. ಆದರೂ ಎಳವೆಯಲ್ಲೇ ಹೋಗಿಬಿಟ್ಟರೆ ಅದು ತರುವ ಮಾನವಸಹಜ ನೋವು ತುಸು ಅಸಹನೀಯ. ಅದು ಮೋಹವೋ ವ್ಯಾಮೋಹವೋ ಭಾವವೋ ಬಂಧವೋ ಯಾವುದೇ ಆಗಿರಲಿ, ಬೋಗಿಯಲ್ಲಿ ಹೊರಟ ಸಹಪ್ರಯಾಣಿಕನೊಬ್ಬ ಗಮ್ಯಕ್ಕೂ ಮೊದಲೇ ಕೈಬೀಸಿ ಎಲ್ಲಿಗೋ ಇಳಿದು ಹೋದಂತೇ, ನೋಡುತ್ತಿರುವ ನಾಟಕದ ಪಾತ್ರಧಾರಿಯೊಬ್ಬ ಪಾತ್ರಮುಗಿಯುವ ಮುನ್ನವೇ ಬಣ್ಣದಮನೆಯಲ್ಲೆಲ್ಲೋ ಅಡಗಿಹೋದಂತೇ  ಎಲ್ಲಿಗೆ ಹೋಗುವರೆಂಬ ಗುರುತು ಸಿಗಲಾರದ ಜಾಗಕ್ಕೆ ತೆರಳಿಬಿಡುವ ಈ ಸನ್ನಿವೇಶದಲ್ಲಿ ಮಾನವಸಹಜ ಅಗಲಿರಲಾರದ ಆಪ್ತ ಭಾವಗಳು ಎದ್ದೆದ್ದು ಕುಣಿಯುತ್ತವೆ, ನಮ್ಮರಿವಿಗೇ ಇರದೇ ಕಣ್ಣಾಲಿಗಳು ತುಂಬಿ ನೀರು ಹೊರಹರಿಯುತ್ತದೆ. ಇದಲ್ಲವೇ ಈ ಬದುಕಿನ ಬಿಸಿಲು ಬೆಳದಿಂಗಳು ? ನಮಸ್ಕಾರ.