ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, March 5, 2010

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ


ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ


ಆದಿ ಶಂಕರರ ಬಗ್ಗೆ ತಮಗೆ ಹೊಸದಾಗಿ ಪರಿಚಯಿಸುವ ಅವಶ್ಯಕತೆಯಿಲ್ಲ. ಯಾವುದೇ ಪ್ರಲೋಭನೆಗೆ ಒಳಗಾಗದೆ, ಯಾವುದೇ ಮಾಧ್ಯಮಗಳು ಪ್ರಚಾರಮೂಲಗಳು ಇಲ್ಲದ ಆ ಕಾಲದಲ್ಲಿ, ಪ್ರಾಣಿಬಲಿ-ಹಿಂಸೆ ಅತಿಯಾಗಿದ್ದ ಆ ಕಾಲದಲ್ಲಿ ಸನಾತನ ಧರ್ಮವನ್ನು ಪುನರುತ್ಥಾನಗೈದ, ಅದೇ ಕಾರಣಕ್ಕಾಗಿ ಜನಿಸಿ ಕಷ್ಟದ ಜೀವಿತ ನಡೆಸಿ, ೫ ನೇ ವರ್ಷದಲ್ಲೇ ಉಪನಯನ ಸಂಸ್ಕಾರ ಪಡೆದುಕೊಂಡು,ಬಾಲ ಸನ್ಯಾಸಿಯಾಗಿ ಅಸೇತು-ಹಿಮಾಚಲ ಪರ್ಯಂತ ಕಾಲ್ನಡಿಗೆಯಲ್ಲಿ ಓಡಾಡಿ ಜನರನ್ನು-ಮನುಕುಲವನ್ನು ಉದ್ಧರಿಸಿದ ಉದ್ಧಾಮ ಪಂಡಿತ,ವಾಗ್ಮಿ, ವಾಗ್ಗೇಯಕಾರ, ಪರಕಾಯಪ್ರವೇಶದ ವಿಭೂತಿಪುರುಷ, ಅಖಂಡ ತಪಸ್ವಿ ಅವರು. ಅವರನ್ನು ಜನ ಮೊದಲೊಮ್ಮೆ ಗುರುತಿಸದಿದ್ದರೂ ತನ್ನದಲ್ಲದ ಜಗತ್ತಿಗೆ ಕೇವಲ ಕಾರ್ಯಸಿದ್ಧಿಗೆ ಭಗವಂತನಿಂದ ಕಳಿಸಲ್ಪಟ್ಟ ಕೈಲಾಸಪತಿ ಶಂಕರನ ಸಾಕ್ಷಾತ್ ಅವತಾರ ಗುರು ಶಂಕರರು. ತಂದೆ-ತಾಯಿ-ಅಣ್ಣ-ತಮ್ಮ-ಅಕ್ಕ-ತಂಗಿ-ಬಂಧು-ಬಾಂಧವ ಎಲ್ಲವೂ ಆಗಿ ಜನರನ್ನು ಅನುಗ್ರಹಿಸಿದ ಕೀರ್ತಿ ಈ ಮಾನವೀಯತೆಯ ಮೂರ್ತಿಗೆ ಸಂದಿದೆ. ಜನರ ಕಷ್ಟಗಳನ್ನು ತನ್ನ ಕಷ್ಟಗಳೆಂದು ಪರಿಗಣಿಸಿ ಅದಕ್ಕೆ ಪರಿಹಾರೋಪಾಯವಾಗಿ ಅನೇಕ ಧ್ಯಾನ-ಪ್ರಾರ್ಥನೆಗಳ ಮಾರ್ಗಗಳನ್ನು ಬೋಧಿಸಿದ ಜಗದ್ಗುರು ಶ್ರೀ ಶಂಕರರು. ಅವರ ಬಗ್ಗೆ ಅನೇಕ ದಂತಕಥೆಗಳೇ ಇವೆ.

ಶೃತಿಸ್ಮೃತಿಪುರಾಣಾನಾಮಾಲಯಂ ಕರುಣಾಲಯಂ |
ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಮ್ ||
ಶಂಕರಂ ಶಂಕರಾಚಾರ್ಯಂ ಕೇಶವಂ ಬಾದರಾಯಣಂ |
ಸೂತ್ರಭಾಷ್ಯಕೃತೌ ವಂದೇ ಭಗವಂತೌ ಪುನಃ ಪುನಃ ||

ಆಡು ಮುಟ್ಟದ ಸೊಪ್ಪಿಲ್ಲ ಹೇಗೋ ಹಾಗೇ ಶಂಕರರು ಎತ್ತುಕೊಳ್ಳದ ವೇದ-ವೇದಾಂತ-ಶಾಸ್ತ್ರ-ಸೂತ್ರ-ಸಂಹಿತೆ-ಶೃತಿ-ಸ್ಮೃತಿ-ಪುರಾಣ ಇಲ್ಲವೇ ಇಲ್ಲ ! ಎಲ್ಲಿ ನೋಡಿ ಅಲ್ಲಿ ಶಂಕರರ ಕೊಡುಗೆ ಇದೆ. ಯಾವ ದೇವ-ದೇವತೆಗಳನ್ನೂ ಸ್ತುತಿಸದೇ ಇರಲಿಲ್ಲ ನಮ್ಮ ಶಂಕರರು. ಹೇಗೆ ಕವಿಗೆ ಸಮಯ ಕೆಲವೊಮ್ಮೆ ಸ್ಫೂರ್ತಿ ತರುತ್ತದೋ ಹಾಗೇ ಶಂಕರರು ಓಡಾಡುವಾಗ ಎದುರಾಗುವ ಹಲವು ಪ್ರಸಂಗಗಳಲ್ಲಿ ಹಲವು ಕೃತಿಗಳು ಅವರಿಂದ ಹುಟ್ಟಿಕೊಂಡವು. ಅದನ್ನು ಇಂದಿನವರೆಗೂ ಕಾಪಾಡಿಕೊಂಡು ಬಂದ ನಮ್ಮ ಪೂರ್ವಜರಿಗೆ ನಾವು ಶರಣೆನ್ನಬೇಕು.


ಇಂತಹ ಶಂಕರರು ಕೆಲವೊಮ್ಮೆ ಶಿಷ್ಯರನ್ನು ಬಿಟ್ಟು ಭಿಕ್ಷೆಗಾಗಿ ತೆರಳುತ್ತಿದ್ದರು, [ಮೊನ್ನೆಯಷ್ಟೇ ಯೋಗಭಿಕ್ಷೆಯ ಬಗ್ಗೆ ಹೇಳಿದ್ದೇನೆ]. ಹೀಗೇ ಒಂದು ದಿನ ಶಂಕರರು ಭಿಕ್ಷೆಗಾಗಿ ಹೊರಟು ಅತೀವ ಕಷ್ಟದಲ್ಲಿರುವ,ಬಡತನದಲ್ಲಿರುವ ಓರ್ವನ ಮನೆಯ ಮುಂದೆ ಭಿಕ್ಷೆ ಕೇಳುತ್ತಾ ನಿಂತರು--


|| ಭವತಿ ಭಿಕ್ಷಾಂದೇಹಿ || " ಅಮ್ಮಾ , ಸನ್ಯಾಸಿ ಬಂದಿದ್ದೇನೆ, ಭಿಕ್ಷೆ ನೀಡು ತಾಯಿ "


ಮನೆಯಲ್ಲಿ ಮನೆಯ ಯಜಮಾನರು ಇರಲಿಲ್ಲ, ಅವರ ಹೆಂಡತಿ ಮಾತ್ರ ಇದ್ದಳು, ಆಕೆ ಹೊರಗಡೆ ಬಂದು ಸನ್ಯಾಸಿಯ ಎದುರು ಒಮ್ಮೆ ನಿಂತು ನೋಡಿ ಕೈಮುಗಿದು ಗಳಗಳನೆ ಅಳಲು ಪ್ರಾರಂಭಿಸಿದಳು. ಶಂಕರರು ಕೇಳಿದರು

" ಅಮ್ಮಾ ಯಾಕಮ್ಮ ಅಳುತ್ತಿರುವೆ ? ಒಂದು ಮುಷ್ಠಿ ಭಿಕ್ಷೆ ಹಾಕೆಂದರೆ ಅದಕ್ಕೆ ಅಳಬೇಕೇಕೆ? "


ಆಕೆ ಉತ್ತರಿಸಿದಳು " ಸ್ವಾಮೀ ಸನ್ಯಾಸಿಗಳೇ, ನಾವು ತುಂಬಾ ಬಡವರು, ಊಟ ಮಾಡದೇ ದಿವಸಗಳೇ ಆದವು, ಮನೆಯಲ್ಲಿ ಉಣಲು-ಉಡಲು ಅನುಕೂಲವಿಲ್ಲದವರು, ಏನೂ ಇಲ್ಲದ ನಮ್ಮ ಮನೆಯ ಎದುರು ತಮ್ಮಂತಹ ಸನ್ಯಾಸಿ ಬಂದರೂ ಕೂಡ ಕೊಡಲೂ ತುತ್ತಿರದಷ್ಟು ಬಡತನದಲ್ಲಿ ದೇವರು ಇಟ್ಟುಬಿಟ್ಟ ಸ್ಥಿತಿ ನೆನಪಾಗಿ ಅಳು ಬಂತು, ನಮ್ಮನ್ನು ಕ್ಷಮಿಸಿ ಸ್ವಾಮೀ, ಮನೆಯಲ್ಲಿ ಕೊಡಲು ಏನೂ ಉಳಿದಿಲ್ಲ "


" ನೋಡಮ್ಮಾ, ಏನೂ ಇಲ್ಲ ಅನ್ನಬಾರದು, ಏನಾದರೊಂದು ಇದ್ದೇ ಇದೆ, ಹುಡುಕಿ ಸಿಕ್ಕಿದ್ದನ್ನೇ ಕೊಡು, ನಗದಷ್ಟೇ ಸಾಕು "


" ಸ್ವಾಮೀ, ಏನೂ ಇಲ್ಲವೆಂದರೂ ಈ ರೀತಿ ಹಠ ಮಾಡುತ್ತೀರಿ ಯಾಕೆ? ಮನೆಯಲ್ಲಿ ಕೈಗೆ ಸಿಗಬಹುದಾದ ತಿನ್ನುವ ಯಾವ ಪದರ್ಥವೂ ಉಳಿದಿಲ್ಲ "


" ಒಂದು ಲೋಟ ನೀರು ಕೊಡಮ್ಮಾ ನನಗೆ, ಅದೂ ಇಲ್ಲವೇ ನಿಮ್ಮ ಮನೆಯಲ್ಲಿ ? "


" ನೀರನ್ನು ಕೊಡಬಹುದು, ಬರೇ ನೀರನ್ನು ಹೇಗೆ ಕೊಡುವುದು ಸ್ವಾಮೀ ? "


" ಬರೇ ನೀರೇ ಸಾಕು ಕೊಡಮ್ಮ, ಇಲ್ಲದಿದ್ದರೆ ಉಪ್ಪಿನಕಾಯಿ ಇದ್ದರೆ ಕೊಡು "


ಹುಡುಕುತ್ತಾಳೆ, ಅಡುಗೆ ಮನೆಯಲ್ಲಿ ಉಪ್ಪಿನ ಭರಣಿಯಲ್ಲಿ ಹಾಕಿಟ್ಟಿರುವ ನೆಲ್ಲಿಕಾಯಿ ಒಂದಿರುವುದು ನೆನಪಾಯ್ತು. ಅದನ್ನೇ ಕೊಡಲೇ ಎಂದಾಗ ಶಂಕರರು ಕೊಡುವಂತೆ ಹೇಳಿದ್ದಾರೆ. ಭಕ್ತಿಯಿಂದ ಆ ನೆಲ್ಲಿಕಾಯನ್ನು ಶಂಕರರ ಕೈಗೆ ಹಾಕಿ, ಲೋಟದಲ್ಲಿ ನೀರಿತ್ತು ನಮಸ್ಕರಿಸಿದ್ದಾಳೆ ಆ ತಾಯಿ.


ಶಂಕರರು ಅದನ್ನು ಅಷ್ಟೇ ತೃಪ್ತಿಯಿಂದ ತಿಂದು ನೀರನ್ನು ಕುಡಿದು, ಅಲ್ಲೇ ನೇರವಾಗಿ ದೇವಿ
ಮಹಾಲಕ್ಷ್ಮಿಯೊಂದಿಗೆ ಸಂವಾದ ಮಾಡುತ್ತಾರೆ!

"ಅಮ್ಮಾ ಮಾತೆ ಮಹಾಲಕ್ಷ್ಮೀ , ಯಾಕಮ್ಮಾ ಇವರಿಗೆ ಈ ರೀತಿ ಬಡತನ ? "


" ಅದು ಅವರ ಪೂರ್ವ ಜನ್ಮದ ದುಷ್ಕೃತಗಳ ಪಾಪಾವಶೇಷ, ಹೀಗಾಗಿ ಅದು ಕಳೆಯುವವರೆಗೆ ನಾನೇನೂ ಮಾಡಲಾರೆ " ಉತ್ತರಿಸುತ್ತಾಳೆ ಭಗವತಿ.


ಹೀಗೇ ವಾಗ್ವಾದ ಮುಂದುವರಿದು ದೇವಿಯನ್ನು ಒಲಿಸಿಕೊಳ್ಳುವಲ್ಲಿ, ಒಲಿಸಿಕೊಂಡು ಬಡತನ ನಿವಾರಿಸಿಕೊಡುವಲ್ಲಿ ಶಂಕರರು ಯಶಸ್ವಿಯಾಗುತ್ತಾರೆ. ಇದಕ್ಕೇ ನಮ್ಮಲ್ಲಿ ಒಂದು ಮಾತಿದೆ ' ಹರಮುನಿದರೂ ಗುರು ಕಾಯುವ 'ನೆಂದು!


ಆಗ ಶಂಕರರ ಬಾಯಿಂದ ಹುಟ್ಟಿದ್ದೇ 'ಕನಕಧಾರಾ ಸ್ತೋತ್ರ'. ಶಂಕರರು ಈ ಸ್ತೋತ್ರ ಪಠಿಸಿ ಅದರಿಂದ ಆ ಮನೆಗೆ ಕನಕವೃಷ್ಟಿ ಯಾಗುವಂತೆ,ಸಿರಿವಂತಿಕೆ ಬರುವಂತೆ ಮಾಡುತ್ತಾರೆ. ಬಹುಶಃ ಸನ್ಯಾಸಿಗೆ ಭಿಕ್ಷೆ ನೀಡಲೂ ಯೋಗಬೇಕು. ಸನ್ಯಾಸಿಗಳಿಗೂ ಮನಸ್ಸಿಗೆ ಮೊದಲೇ ಅನಿಸುತ್ತದಿರಬೇಕು 'ಇಂದು ಇಂಥಾ ಮನೆಗೇ ಭಿಕ್ಷೆಗೆ ಹೋಗು' ಅವರ ಆತ್ಮ ನುಡಿಯುತ್ತಿರಬೇಕು! ಆಚಾರ್ಯ ಶಂಕರರು ಇದನ್ನು ಮೊದಲೇ ಗ್ರಹಿಸಿಯೇ ಬೇಕೆಂತಲೇ ಅಲ್ಲಿಗೇ ಬಂದಿದ್ದರು ಅನಿಸುತ್ತದೆ, ಹೀಗೇ ಬಂದು ಕಷ್ಟನಿವಾರಿಸಲೂ ಒಂದು ಯೋಗ ಬಡತನದಲ್ಲಿದ್ದವರಿಗೆ ಬೇಕು.


ಇಂತಹ ಗುರುವನ್ನು ಪಡೆದ ನಾವೇ ಧನ್ಯರು. ಜಗದಮಿತ್ರ ಒಮ್ಮೆ ಇಂತಹ ಗುರು ಸಂಕುಲಕ್ಕೆ ಎರಗುತ್ತ ನೆನಪಿಸಿಕೊಳ್ಳುತ್ತಾನೆ -


ಆದಿ ಶಂಕರತಾನು ಮೋದದಲಿ ವೇದವನು
ಓದುತನುಭವಿಸಿ ಲೋಕದ ಕಷ್ಟಗಳನು
ಬಾಧೆ ಕಳೆಯಲು ಹಲವು ಸನ್ಮಾರ್ಗ ಬೋಧಿಸಿದ
ಆದರ್ಶ ಗುರು ನೋಡ | ಜಗದಮಿತ್ರ



ಶೃತಿ-ಸ್ಮೃತಿ ಪುರಾಣಗಳ ನೋಡಿ ಭಾಷ್ಯವ ಬರೆದ
ಕೃತಿಗಳಪಾರವ ದಯದಿ ಕರುಣಿಸುತ ಜಗಕೆ
ಧೃತಿಗೆಟ್ಟ ಮನುಕುಲಕೆ ಭೂರಿ ಕಾಣ್ಕೆಯ ಕೊಟ್ಟ
ಕೃತದೋಷ ಕಳೆ ನಮಿಸಿ | ಜಗದಮಿತ್ರ



ಇರಲು ಇಂಥಹ ಗುರುವು ಬರಲಿ ಯಾವುದೇ ಬವಣೆ
ಹರಮುನಿಯೇ ಗುರು ಕಾಯ್ವ ನಮ್ಮ ಬದುಕಿನಲಿ
ಬರದ ಛಾಯೆಯದೆಂದು ಬಾಧಿಸದು ಜಗದೊಳಗೆ
ವರವ ಪಡೆಯಲು ಕ್ರಮಿಸು | ಜಗದಮಿತ್ರ



ಸದಾಶಿವಸಮಾರಂಭಾಂ ಶಂಕರಾಚಾರ್ಯ ಮಧ್ಯಮಾಂ |
ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರು ಪರಂಪರಾಮ್ ||