ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, March 5, 2010

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ


ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ


ಆದಿ ಶಂಕರರ ಬಗ್ಗೆ ತಮಗೆ ಹೊಸದಾಗಿ ಪರಿಚಯಿಸುವ ಅವಶ್ಯಕತೆಯಿಲ್ಲ. ಯಾವುದೇ ಪ್ರಲೋಭನೆಗೆ ಒಳಗಾಗದೆ, ಯಾವುದೇ ಮಾಧ್ಯಮಗಳು ಪ್ರಚಾರಮೂಲಗಳು ಇಲ್ಲದ ಆ ಕಾಲದಲ್ಲಿ, ಪ್ರಾಣಿಬಲಿ-ಹಿಂಸೆ ಅತಿಯಾಗಿದ್ದ ಆ ಕಾಲದಲ್ಲಿ ಸನಾತನ ಧರ್ಮವನ್ನು ಪುನರುತ್ಥಾನಗೈದ, ಅದೇ ಕಾರಣಕ್ಕಾಗಿ ಜನಿಸಿ ಕಷ್ಟದ ಜೀವಿತ ನಡೆಸಿ, ೫ ನೇ ವರ್ಷದಲ್ಲೇ ಉಪನಯನ ಸಂಸ್ಕಾರ ಪಡೆದುಕೊಂಡು,ಬಾಲ ಸನ್ಯಾಸಿಯಾಗಿ ಅಸೇತು-ಹಿಮಾಚಲ ಪರ್ಯಂತ ಕಾಲ್ನಡಿಗೆಯಲ್ಲಿ ಓಡಾಡಿ ಜನರನ್ನು-ಮನುಕುಲವನ್ನು ಉದ್ಧರಿಸಿದ ಉದ್ಧಾಮ ಪಂಡಿತ,ವಾಗ್ಮಿ, ವಾಗ್ಗೇಯಕಾರ, ಪರಕಾಯಪ್ರವೇಶದ ವಿಭೂತಿಪುರುಷ, ಅಖಂಡ ತಪಸ್ವಿ ಅವರು. ಅವರನ್ನು ಜನ ಮೊದಲೊಮ್ಮೆ ಗುರುತಿಸದಿದ್ದರೂ ತನ್ನದಲ್ಲದ ಜಗತ್ತಿಗೆ ಕೇವಲ ಕಾರ್ಯಸಿದ್ಧಿಗೆ ಭಗವಂತನಿಂದ ಕಳಿಸಲ್ಪಟ್ಟ ಕೈಲಾಸಪತಿ ಶಂಕರನ ಸಾಕ್ಷಾತ್ ಅವತಾರ ಗುರು ಶಂಕರರು. ತಂದೆ-ತಾಯಿ-ಅಣ್ಣ-ತಮ್ಮ-ಅಕ್ಕ-ತಂಗಿ-ಬಂಧು-ಬಾಂಧವ ಎಲ್ಲವೂ ಆಗಿ ಜನರನ್ನು ಅನುಗ್ರಹಿಸಿದ ಕೀರ್ತಿ ಈ ಮಾನವೀಯತೆಯ ಮೂರ್ತಿಗೆ ಸಂದಿದೆ. ಜನರ ಕಷ್ಟಗಳನ್ನು ತನ್ನ ಕಷ್ಟಗಳೆಂದು ಪರಿಗಣಿಸಿ ಅದಕ್ಕೆ ಪರಿಹಾರೋಪಾಯವಾಗಿ ಅನೇಕ ಧ್ಯಾನ-ಪ್ರಾರ್ಥನೆಗಳ ಮಾರ್ಗಗಳನ್ನು ಬೋಧಿಸಿದ ಜಗದ್ಗುರು ಶ್ರೀ ಶಂಕರರು. ಅವರ ಬಗ್ಗೆ ಅನೇಕ ದಂತಕಥೆಗಳೇ ಇವೆ.

ಶೃತಿಸ್ಮೃತಿಪುರಾಣಾನಾಮಾಲಯಂ ಕರುಣಾಲಯಂ |
ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಮ್ ||
ಶಂಕರಂ ಶಂಕರಾಚಾರ್ಯಂ ಕೇಶವಂ ಬಾದರಾಯಣಂ |
ಸೂತ್ರಭಾಷ್ಯಕೃತೌ ವಂದೇ ಭಗವಂತೌ ಪುನಃ ಪುನಃ ||

ಆಡು ಮುಟ್ಟದ ಸೊಪ್ಪಿಲ್ಲ ಹೇಗೋ ಹಾಗೇ ಶಂಕರರು ಎತ್ತುಕೊಳ್ಳದ ವೇದ-ವೇದಾಂತ-ಶಾಸ್ತ್ರ-ಸೂತ್ರ-ಸಂಹಿತೆ-ಶೃತಿ-ಸ್ಮೃತಿ-ಪುರಾಣ ಇಲ್ಲವೇ ಇಲ್ಲ ! ಎಲ್ಲಿ ನೋಡಿ ಅಲ್ಲಿ ಶಂಕರರ ಕೊಡುಗೆ ಇದೆ. ಯಾವ ದೇವ-ದೇವತೆಗಳನ್ನೂ ಸ್ತುತಿಸದೇ ಇರಲಿಲ್ಲ ನಮ್ಮ ಶಂಕರರು. ಹೇಗೆ ಕವಿಗೆ ಸಮಯ ಕೆಲವೊಮ್ಮೆ ಸ್ಫೂರ್ತಿ ತರುತ್ತದೋ ಹಾಗೇ ಶಂಕರರು ಓಡಾಡುವಾಗ ಎದುರಾಗುವ ಹಲವು ಪ್ರಸಂಗಗಳಲ್ಲಿ ಹಲವು ಕೃತಿಗಳು ಅವರಿಂದ ಹುಟ್ಟಿಕೊಂಡವು. ಅದನ್ನು ಇಂದಿನವರೆಗೂ ಕಾಪಾಡಿಕೊಂಡು ಬಂದ ನಮ್ಮ ಪೂರ್ವಜರಿಗೆ ನಾವು ಶರಣೆನ್ನಬೇಕು.


ಇಂತಹ ಶಂಕರರು ಕೆಲವೊಮ್ಮೆ ಶಿಷ್ಯರನ್ನು ಬಿಟ್ಟು ಭಿಕ್ಷೆಗಾಗಿ ತೆರಳುತ್ತಿದ್ದರು, [ಮೊನ್ನೆಯಷ್ಟೇ ಯೋಗಭಿಕ್ಷೆಯ ಬಗ್ಗೆ ಹೇಳಿದ್ದೇನೆ]. ಹೀಗೇ ಒಂದು ದಿನ ಶಂಕರರು ಭಿಕ್ಷೆಗಾಗಿ ಹೊರಟು ಅತೀವ ಕಷ್ಟದಲ್ಲಿರುವ,ಬಡತನದಲ್ಲಿರುವ ಓರ್ವನ ಮನೆಯ ಮುಂದೆ ಭಿಕ್ಷೆ ಕೇಳುತ್ತಾ ನಿಂತರು--


|| ಭವತಿ ಭಿಕ್ಷಾಂದೇಹಿ || " ಅಮ್ಮಾ , ಸನ್ಯಾಸಿ ಬಂದಿದ್ದೇನೆ, ಭಿಕ್ಷೆ ನೀಡು ತಾಯಿ "


ಮನೆಯಲ್ಲಿ ಮನೆಯ ಯಜಮಾನರು ಇರಲಿಲ್ಲ, ಅವರ ಹೆಂಡತಿ ಮಾತ್ರ ಇದ್ದಳು, ಆಕೆ ಹೊರಗಡೆ ಬಂದು ಸನ್ಯಾಸಿಯ ಎದುರು ಒಮ್ಮೆ ನಿಂತು ನೋಡಿ ಕೈಮುಗಿದು ಗಳಗಳನೆ ಅಳಲು ಪ್ರಾರಂಭಿಸಿದಳು. ಶಂಕರರು ಕೇಳಿದರು

" ಅಮ್ಮಾ ಯಾಕಮ್ಮ ಅಳುತ್ತಿರುವೆ ? ಒಂದು ಮುಷ್ಠಿ ಭಿಕ್ಷೆ ಹಾಕೆಂದರೆ ಅದಕ್ಕೆ ಅಳಬೇಕೇಕೆ? "


ಆಕೆ ಉತ್ತರಿಸಿದಳು " ಸ್ವಾಮೀ ಸನ್ಯಾಸಿಗಳೇ, ನಾವು ತುಂಬಾ ಬಡವರು, ಊಟ ಮಾಡದೇ ದಿವಸಗಳೇ ಆದವು, ಮನೆಯಲ್ಲಿ ಉಣಲು-ಉಡಲು ಅನುಕೂಲವಿಲ್ಲದವರು, ಏನೂ ಇಲ್ಲದ ನಮ್ಮ ಮನೆಯ ಎದುರು ತಮ್ಮಂತಹ ಸನ್ಯಾಸಿ ಬಂದರೂ ಕೂಡ ಕೊಡಲೂ ತುತ್ತಿರದಷ್ಟು ಬಡತನದಲ್ಲಿ ದೇವರು ಇಟ್ಟುಬಿಟ್ಟ ಸ್ಥಿತಿ ನೆನಪಾಗಿ ಅಳು ಬಂತು, ನಮ್ಮನ್ನು ಕ್ಷಮಿಸಿ ಸ್ವಾಮೀ, ಮನೆಯಲ್ಲಿ ಕೊಡಲು ಏನೂ ಉಳಿದಿಲ್ಲ "


" ನೋಡಮ್ಮಾ, ಏನೂ ಇಲ್ಲ ಅನ್ನಬಾರದು, ಏನಾದರೊಂದು ಇದ್ದೇ ಇದೆ, ಹುಡುಕಿ ಸಿಕ್ಕಿದ್ದನ್ನೇ ಕೊಡು, ನಗದಷ್ಟೇ ಸಾಕು "


" ಸ್ವಾಮೀ, ಏನೂ ಇಲ್ಲವೆಂದರೂ ಈ ರೀತಿ ಹಠ ಮಾಡುತ್ತೀರಿ ಯಾಕೆ? ಮನೆಯಲ್ಲಿ ಕೈಗೆ ಸಿಗಬಹುದಾದ ತಿನ್ನುವ ಯಾವ ಪದರ್ಥವೂ ಉಳಿದಿಲ್ಲ "


" ಒಂದು ಲೋಟ ನೀರು ಕೊಡಮ್ಮಾ ನನಗೆ, ಅದೂ ಇಲ್ಲವೇ ನಿಮ್ಮ ಮನೆಯಲ್ಲಿ ? "


" ನೀರನ್ನು ಕೊಡಬಹುದು, ಬರೇ ನೀರನ್ನು ಹೇಗೆ ಕೊಡುವುದು ಸ್ವಾಮೀ ? "


" ಬರೇ ನೀರೇ ಸಾಕು ಕೊಡಮ್ಮ, ಇಲ್ಲದಿದ್ದರೆ ಉಪ್ಪಿನಕಾಯಿ ಇದ್ದರೆ ಕೊಡು "


ಹುಡುಕುತ್ತಾಳೆ, ಅಡುಗೆ ಮನೆಯಲ್ಲಿ ಉಪ್ಪಿನ ಭರಣಿಯಲ್ಲಿ ಹಾಕಿಟ್ಟಿರುವ ನೆಲ್ಲಿಕಾಯಿ ಒಂದಿರುವುದು ನೆನಪಾಯ್ತು. ಅದನ್ನೇ ಕೊಡಲೇ ಎಂದಾಗ ಶಂಕರರು ಕೊಡುವಂತೆ ಹೇಳಿದ್ದಾರೆ. ಭಕ್ತಿಯಿಂದ ಆ ನೆಲ್ಲಿಕಾಯನ್ನು ಶಂಕರರ ಕೈಗೆ ಹಾಕಿ, ಲೋಟದಲ್ಲಿ ನೀರಿತ್ತು ನಮಸ್ಕರಿಸಿದ್ದಾಳೆ ಆ ತಾಯಿ.


ಶಂಕರರು ಅದನ್ನು ಅಷ್ಟೇ ತೃಪ್ತಿಯಿಂದ ತಿಂದು ನೀರನ್ನು ಕುಡಿದು, ಅಲ್ಲೇ ನೇರವಾಗಿ ದೇವಿ
ಮಹಾಲಕ್ಷ್ಮಿಯೊಂದಿಗೆ ಸಂವಾದ ಮಾಡುತ್ತಾರೆ!

"ಅಮ್ಮಾ ಮಾತೆ ಮಹಾಲಕ್ಷ್ಮೀ , ಯಾಕಮ್ಮಾ ಇವರಿಗೆ ಈ ರೀತಿ ಬಡತನ ? "


" ಅದು ಅವರ ಪೂರ್ವ ಜನ್ಮದ ದುಷ್ಕೃತಗಳ ಪಾಪಾವಶೇಷ, ಹೀಗಾಗಿ ಅದು ಕಳೆಯುವವರೆಗೆ ನಾನೇನೂ ಮಾಡಲಾರೆ " ಉತ್ತರಿಸುತ್ತಾಳೆ ಭಗವತಿ.


ಹೀಗೇ ವಾಗ್ವಾದ ಮುಂದುವರಿದು ದೇವಿಯನ್ನು ಒಲಿಸಿಕೊಳ್ಳುವಲ್ಲಿ, ಒಲಿಸಿಕೊಂಡು ಬಡತನ ನಿವಾರಿಸಿಕೊಡುವಲ್ಲಿ ಶಂಕರರು ಯಶಸ್ವಿಯಾಗುತ್ತಾರೆ. ಇದಕ್ಕೇ ನಮ್ಮಲ್ಲಿ ಒಂದು ಮಾತಿದೆ ' ಹರಮುನಿದರೂ ಗುರು ಕಾಯುವ 'ನೆಂದು!


ಆಗ ಶಂಕರರ ಬಾಯಿಂದ ಹುಟ್ಟಿದ್ದೇ 'ಕನಕಧಾರಾ ಸ್ತೋತ್ರ'. ಶಂಕರರು ಈ ಸ್ತೋತ್ರ ಪಠಿಸಿ ಅದರಿಂದ ಆ ಮನೆಗೆ ಕನಕವೃಷ್ಟಿ ಯಾಗುವಂತೆ,ಸಿರಿವಂತಿಕೆ ಬರುವಂತೆ ಮಾಡುತ್ತಾರೆ. ಬಹುಶಃ ಸನ್ಯಾಸಿಗೆ ಭಿಕ್ಷೆ ನೀಡಲೂ ಯೋಗಬೇಕು. ಸನ್ಯಾಸಿಗಳಿಗೂ ಮನಸ್ಸಿಗೆ ಮೊದಲೇ ಅನಿಸುತ್ತದಿರಬೇಕು 'ಇಂದು ಇಂಥಾ ಮನೆಗೇ ಭಿಕ್ಷೆಗೆ ಹೋಗು' ಅವರ ಆತ್ಮ ನುಡಿಯುತ್ತಿರಬೇಕು! ಆಚಾರ್ಯ ಶಂಕರರು ಇದನ್ನು ಮೊದಲೇ ಗ್ರಹಿಸಿಯೇ ಬೇಕೆಂತಲೇ ಅಲ್ಲಿಗೇ ಬಂದಿದ್ದರು ಅನಿಸುತ್ತದೆ, ಹೀಗೇ ಬಂದು ಕಷ್ಟನಿವಾರಿಸಲೂ ಒಂದು ಯೋಗ ಬಡತನದಲ್ಲಿದ್ದವರಿಗೆ ಬೇಕು.


ಇಂತಹ ಗುರುವನ್ನು ಪಡೆದ ನಾವೇ ಧನ್ಯರು. ಜಗದಮಿತ್ರ ಒಮ್ಮೆ ಇಂತಹ ಗುರು ಸಂಕುಲಕ್ಕೆ ಎರಗುತ್ತ ನೆನಪಿಸಿಕೊಳ್ಳುತ್ತಾನೆ -


ಆದಿ ಶಂಕರತಾನು ಮೋದದಲಿ ವೇದವನು
ಓದುತನುಭವಿಸಿ ಲೋಕದ ಕಷ್ಟಗಳನು
ಬಾಧೆ ಕಳೆಯಲು ಹಲವು ಸನ್ಮಾರ್ಗ ಬೋಧಿಸಿದ
ಆದರ್ಶ ಗುರು ನೋಡ | ಜಗದಮಿತ್ರಶೃತಿ-ಸ್ಮೃತಿ ಪುರಾಣಗಳ ನೋಡಿ ಭಾಷ್ಯವ ಬರೆದ
ಕೃತಿಗಳಪಾರವ ದಯದಿ ಕರುಣಿಸುತ ಜಗಕೆ
ಧೃತಿಗೆಟ್ಟ ಮನುಕುಲಕೆ ಭೂರಿ ಕಾಣ್ಕೆಯ ಕೊಟ್ಟ
ಕೃತದೋಷ ಕಳೆ ನಮಿಸಿ | ಜಗದಮಿತ್ರಇರಲು ಇಂಥಹ ಗುರುವು ಬರಲಿ ಯಾವುದೇ ಬವಣೆ
ಹರಮುನಿಯೇ ಗುರು ಕಾಯ್ವ ನಮ್ಮ ಬದುಕಿನಲಿ
ಬರದ ಛಾಯೆಯದೆಂದು ಬಾಧಿಸದು ಜಗದೊಳಗೆ
ವರವ ಪಡೆಯಲು ಕ್ರಮಿಸು | ಜಗದಮಿತ್ರಸದಾಶಿವಸಮಾರಂಭಾಂ ಶಂಕರಾಚಾರ್ಯ ಮಧ್ಯಮಾಂ |
ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರು ಪರಂಪರಾಮ್ ||

10 comments:

 1. ದಿನದ ಆರಂಭದಲ್ಲೇ ಶಂಕರರ ಸ್ಮರಣೆಯನ್ನು ಮಾಡಿಸಿದ ನಿಮಗೆ ಕೋಟಿ ನಮನ.

  ReplyDelete
 2. ನಿಮ್ಮಿಂದ ಈ ಲೇಖನವನ್ನು ನಿರೀಕ್ಷಿಸಿದ್ದೆ ..:). ಚಿಕ್ಕ, ಚೊಕ್ಕ ಸೊಗಸಾದ ಲೇಖನ. ಶಂಕರರ ಇಡೀ ಜೀವನದ ಚರಿತ್ರೆಯನ್ನು ಹಂತ-ಹಂತವಾಗಿ ನೀವು ಬರೆದರೆ ಚೆನ್ನಾಗಿರುತ್ತದೆ. ತಿಳಿಯದವರು ತಿಳಿದುಕೊಳ್ಳಬಹುದು. (ಒಂದಷ್ಟು ತಿಳಿಯಲಿ ಎನ್ನುವ ನನ್ನ ಸ್ವಾರ್ಥವೂ ಇದರಲ್ಲಿದೆ :) ). ಜಗದಮಿತ್ರ ಮತ್ತೆ ಬಂದು ಹಾಡಿದ್ದು ಚೆನ್ನಾಗಿದೆ. ಶಂಕರ ನಿಮಗೆ ಒಳ್ಳೆಯದ್ದೆಲ್ಲವನ್ನೂ ಕರುಣಿಸಲೆಂದು ಸದ್ಗುರುವಿನಲ್ಲಿ ಪ್ರಾರ್ಥಿಸುತ್ತೇನೆ . ಧನ್ಯವಾದ

  || ನಿತ್ಯಾನಂದಂ ಪರಮ ಸುಖದಂ ಕೇವಲಂ ಜ್ಞಾನ ಮೂರ್ತಿಂ,
  ವಿಶ್ವಾತೀತಂ ಗಗನ ಸದೃಶಂ ತತ್ವಮಸ್ಯಾದಿಲಕ್ಷ್ಯಮ್
  ಏಕಂ ನಿತ್ಯಂ ವಿಮಲಮಚಲಂ ಸರ್ವಧೀ ಸಾಕ್ಷಿಭೂತಮ್
  ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ . ||

  Small correction...ಶೃತಿ = Boiled . ಶ್ರುತಿ = Tuned .

  ReplyDelete
 3. ಕನ್ನಡ ಅಕ್ಷರಗಳನ್ನು ಮೂಡಿಸುವಾಗ -ಇಲ್ಲಿಯೇ ನೋಡಿ ಇದು 'ಮಾ' ರೀತಿ ಕಾಣಿಸುತ್ತದೆ, ಬೇಗನೆ ಮುಗಿಸುವ ಆತುರ-ಸಮಯದ ಅಭಾವದಿಂದ ಈ ರೀತಿ ಆಗುವುದಕ್ಕೆ ಕ್ಷಮೆಯಿರಲಿ, ಸರಿಪಡಿಸಿದ್ದೇನೆ, ಶಂಕರರ ಕುರಿತು ಬರೆದರೆ ಅದೇ ಒಂದು ಮಹಾಕಾವ್ಯವೋ, ಪುರಾಣವೋ ಆಗಬಹುದು, ಆದರೂ ಕಾಲಾನುಕ್ರಮದಲ್ಲಿ ಅದನ್ನು ಬರೆಯಲು ಬಯಸುತ್ತೇನೆ.ತ್ವರಿತವಾಗಿ ಓದಿ ಪ್ರತಿಕ್ರಿಯಿಸಿದ ಸುಬ್ರಹ್ಮಣ್ಯ ಭಟ್ ಮತ್ತು ಶ್ರೀಧರ್ ಅವರಿಗೂ, ಈಗಾಗಲೇ ಓದಿರುವ -ಮುಂದೆ ಓದಲಿರುವ ಅನೇಕರಿಗೂ ಧನ್ಯವಾದಗಳು.

  ReplyDelete
 4. "ಭಜೇ ಗೋವಿ೦ದಮ
  ಭಜೇ ಗೋವಿ೦ದಮ
  ಗೋವಿ೦ದಮ್ ಭಜೇ ಮೂಡಮತೇ" ಎ೦ದು ಮಾನವೋದ್ಧಾರಕ್ಕೇ ತಮ್ಮ ಜೀವನ ಮೀಸಲಿಟ್ಟ ಯತಿಗಳು ಶ೦ಕರಾಚಾರ್ಯರು. ಅ೦ತಹ ಪ್ರಾತಸ್ಮರಣೀಯ ಯತಿಗಳ ಕಿರುಪರಿಚಯದ ಜೊತೆಗೆ ಜಗದ ಮಿತ್ರನ ಸುಶ್ರಾವ್ಯವಾಗಿ ಹಾಡುವ೦ತ ಅವರಿಗರ್ಪಿಸಿದ ನುಡಿನಮನವನ್ನ ("ಮೊದಲೊ೦ದಿಪೆ ನಿನಗೆ ಗಣನಾಥ" ಧಾಟಿಯಲ್ಲಿ) -ನೀಡಿದ ತಮಗೆ ವ೦ದನೆಗಳು.

  ReplyDelete
 5. ’ದೇವ’ನೊಬ್ಬ ನಾಮ ಹಲುವು - ಏಕಂ ಸದ್ವಿಪ್ರಾ ಬಹುಧಾ ವದಂತಿ
  ’ದೇವ’ನು ನಿರಾಕಾರ, ನಿರ್ವಿಕಾರ, ಅನಾದಿ, ಅನಂತ, ನಿರ್ವಣಿ, ನಿರ್ಭಾವ, ನಿಸ್ಸ್ವಭಾವ
  ಆತ್ಮ ಪರಮಾತ್ಮನ ಒಂದು ಭಾಗ - ಅಹಂ ಬ್ರಹ್ಮಾಸ್ಮಿ ಅನ್ನೋ ವಾದ,
  ಪರಮಾತ್ಮ ನಮ್ಮೋಳಿಗಿರುವ ಅನುಭವ ಕೇವಲ ಜ್ಞಾನಯೋಗದಿಂದ ಬರುತ್ತದೆ
  ಹೀಗೆಲ್ಲ ದೇವರ ಬಗ್ಗೆ ಮಂಡಿಸಿದ, ಶಂಕರರು ಅದೈತವಾದವನ್ನು ಮೇಲೆತ್ತುವುದರ ಮೂಲಕ ಜನತ್ತಿಗೆ ಒಳ್ಳೆಯದನ್ನು ಮಾಡಲು ಹೋರಟವರು.

  ತ್ರಯೀ ವೇದ್ಯಂ ಹೃದ್ಯಂ ತ್ರಿಪುರಹರಮಾದ್ಯಂ ತ್ರಿನಯನಂ
  ಜಟಾಭಾರೋದಾರಂ ಚಲದುರಗಹಾರಂ ಮೃಗಧರಮ್|
  ಮಹಾದೇವಂ ದೇವಂ ಮಯಿ ಸದಯಭಾವಂ ಪಶುಪತಿಂ
  ಚಿದಾಲಂಬಂ ಸಾಂಬಂ ಶಿವಮತಿವಿಡಂಬಂ ಹೃದಿ ಭಜೆ||

  ಪರಮಾತ್ಮನಿಗೆ ಆಕಾರವಿಲ್ಲವೆಂಬ ಸತ್ಯ ಗೊತ್ತಿದ್ದರೂ ಶಂಕರರು ಈ ಮೇಲಿನ ಶ್ಲೋಕದಲ್ಲಿ ಆಕಾರದ ಬಗ್ಗೆ ಅದೆಷ್ಟು ವರ್ಣಿಸಿದ್ದಾರೆ ಅಲ್ಲವೇ!

  ನಿಜವಾಗಿಯೂ ಶಂಕರರ ಬಗ್ಗೆ ನಮಗೆ ಇವತ್ತಿನ ಕಾಲದಲ್ಲಿ ತಿಳಿಸಿಕೊಟ್ಟೀದ್ದಕ್ಕೆ ಹೃದಯಪೂರ್ವಕ ನಮನಗಳು :)

  ReplyDelete
 6. ನಿನ್ನೆಯಷ್ಟೇ ನಮ್ಮ ಕ್ಲಾಸಿಕಲ್ ಓದುಗರ ಬಗ್ಗೆ ಹೇಳಿದ್ದೇನೆ, ಅವರ ಸೃಜನಶೀಲತೆ, ತಡೆದುಕೊಳ್ಳಲಾಗದೆ ತೊಡಗಿಕೊಳ್ಳುವ ಅಸೀಮ ಸ್ನೇಹ ಪ್ರವೃತ್ತಿ ಪೂರಕ ವಿಲಂಬಿತ ಪ್ರತಿಕ್ರಿಯೆಗಳ ಮುಖಾಂತರ ಗೊತ್ತಾಗುತ್ತದೆ, ಮೊದಲೇ ಹೇಳಿದ ಹಾಗೇ ಎಲ್ಲರಿಗೂ ನಮನಗಳು, ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಿದ ಸೀತಾರಾಮ್ ಮತ್ತು ಸಂಜು ಅವರಿಗೂ ಧನ್ಯವಾದಗಳು

  ReplyDelete
 7. ಅತ್ಯುತ್ತಮ ಲೇಖನ. ಶಂಕರಾಚಾರ್ಯರ ಬಗ್ಗೆ ಹೇಳಿದಷ್ಟೂ ಸಾಲದು. ಲೋಕ ಕಲ್ಯಾಣಕ್ಕಾಗಿ ದರೆಗಿಳಿದ ದೇವತಾ ಪುರುಷ ಶಂಕರಾಚಾರ್ಯರು.
  ಶೃಂಗೇರಿಯ ತಾಯಿ ಶಾರದೆಯ ಸೇವಕನಾಗಿ, ಆ ಸ್ಥಳದ ಮಹಿಮೆಗೆ ಕಾರಣರು ಶ್ರೀಯುತರು. ಅವರ ಬಗ್ಗೆ ಇನ್ನು ಹೆಚ್ಚು ಬರೆಯಿರಿ,
  ದನ್ಯವಾದಗಳು

  ReplyDelete
 8. ಮೊದಲು ಭಾರತದಲ್ಲಿ ಮಠ-ಮಾನ್ಯಗಳ ವ್ಯವಸ್ಥೆ ಸರಿಯಾದ ರೂಪದಲ್ಲಿರಲಿಲ್ಲ, ಅದು ಘೋರ ಖೂಳ ರಕ್ಕಸರು ಇರುವಂತಹ ಕಾಲವಾಗಿತ್ತು, ಅಂತಹ ಕಾಲದಲ್ಲಿ ಭವ್ಯ ಭಾರತದ ಕನಸು ಕಂಡು ಭಕ್ತರ ಉದ್ಧಾರಕಾಗಿ ೪ ದಿಕ್ಕುಗಳಲ್ಲಿ ೪ ಮುಖ್ಯ ಆಮ್ನಾಯ ಮಠಗಳನ್ನು ಸ್ಥಾಪಿಸಿದರು ಶ್ರೀ ಶಂಕರರು, ಶ್ರೀ ಚಕ್ರ ಬರೆದರು, ಹಲವು ಕಡೆ ಅದನ್ನು ಸ್ಥಾಪಿಸಿದರು, ಇಂದಿಗೂ ಅದು ತಿರುಪತಿಯಲ್ಲಿ ಧನಾಕರ್ಷಕ ಯಂತ್ರವೆಂದು ಪೂಜೆಗೊಳ್ಳುತ್ತದೆ. ಅದೇ ರೀತಿ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠ ಒಂದು, ಇಲ್ಲಿನ ವೈಶಿಷ್ಟ್ಯ ಅಂದರೆ ಸಾಕ್ಷಾತ್ ಶಾರದೆ ಶಂಕರರ ಕರೆಗೆ ಓಗೊಟ್ಟು ಬಂದಳು, ಶಂಕರರು ತಾನು ಹೋಗುವಲ್ಲಿಯವರೆಗೂ ಬರಬೇಕೆಂದು ಪ್ರಾರ್ಥಿಸಿದರು, ಬರೇ ಕಾಲಿನ ಗೆಜ್ಜೆಯ ಸಪ್ಪಳದಿಂದ ತಿಳಿದುಕೊಳ್ಳಬೇಕು ಯಾವುದೇ ಕಾರಣಕ್ಕೂ ಹಿಂದಿರುಗಿ ನೋಡಬಾರದು ಎಂದು ಅಮ್ಮ ತಾಕೀತು ಮಾಡಿದ್ದಳು. ನಡೆಯುತ್ತಾ ಬರುವಾಗ ಶಂಕರರಿಗೂ ಒಂದು ಕಡೆ ಕಪ್ಪೆಯ ಪ್ರಸವಕ್ಕೆ ಹಾವು ಸಾಥ್ ಕೊಡುವ ದೃಶ್ಯ ಕಂಡಿತು, ಅದು ಪ್ರಶಾಂತ ತುಂಗಾ ತೀರ, ಅಲ್ಲಿ ಗೆಜ್ಜೆಯ ಸಪ್ಪಳವೂ ನಿಂತುಹೋಯಿತು, ಶಾರದೆಯ ಪ್ರತಿಷ್ಠೆಯಾಯಿತು, ಪ್ರತ್ಯಕ್ಷ ಶಾರದೆ ನೆಲೆಸಿದ ಪುಣ್ಯ ಕ್ಷೇತ್ರ ಶೃಂಗೇರಿ, ಅದರ ಸರಹದ್ದಿನಲ್ಲಿ ಜನಿಸಿದ ಸೌಭಾಗ್ಯ ನಿಮ್ಮದು ಪ್ರವೀಣ್, ಧನ್ಯವಾದಗಳು

  ReplyDelete
 9. शं करोति इति शङ्करः । शङ्करभगवत्पादानां विषये लिखित्वा भवतः अक्ष्रराणि गुरवे समर्पितानि । वयमपि तानि अक्षराणि पठित्वा पुण्यभाजः अभवाम ।
  धन्यवादाः भट्टमहोदय ।

  ReplyDelete