ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, November 5, 2012

ಮೇರಿ ಅಲಿಯಾಸ್ ಶುಭದಾ ಹಬ್ಬು

ಚಿತ್ರಕೃಪೆ : ಅಂತರ್ಜಾಲ
ಮೇರಿ ಅಲಿಯಾಸ್ ಶುಭದಾ ಹಬ್ಬು

ಮಳೆಗಾಲದ ಎಡಬಿಡದ ತುಡಿತಕ್ಕೆ ಬೋಳುಗುಡ್ಡೆಯ ಎಲ್ಲಾ ಮಗ್ಗುಲಿಗೂ ಹಸಿರು ಹೊದಿಕೆ ಬಂದಿತ್ತು. ತೊಟ ತೊಟ ತೊಟ್ಟಿಕ್ಕುವ ಸೋನೆಮಳೆಯ ತುಸುಹೊತ್ತಿನ ಬಿಡುವಿನಲ್ಲೇ ಬೋಳುಗುಡ್ಡೆಯ ತುದಿಯೇರಿ ನಿಂತಾಗ ಕಾಣುವ ಸೌಂದರ್ಯ ಅಪಾರ. ದೂರದಲ್ಲಿ ಗದ್ದೆ, ಗದ್ದೆ ಮಧ್ಯದಲ್ಲಿ ಹಾದುಹೋಗುವ ಹಾದಿ, ಹಾದಿಯಲ್ಲಿ ಜನರ ಓಡಾಟ. ಇನ್ನೊಂದು ಪಕ್ಕದಲ್ಲಿ ಅಮ್ಮನವರ ದೇವಸ್ಥಾನ, ಬೆಳಗಿನ ಹೊತ್ತು ಅಲ್ಲಿ ಆಗಾಗ ಬಾರಿಸಲ್ಪಡುವ ಗಂಟೆಯ ಶಬ್ದ, ದೇವಸ್ಥಾನದ ಪಕ್ಕದಲ್ಲಿರುವ ಸೀಯಾಳ ನೀರಿನಂಥಾ ನೀರಿನ ಚಿಕ್ಕ ಪುಷ್ಕರಣಿ, ದೇವಸ್ಥಾನಕ್ಕೆ ನಸುದೂರದಲ್ಲಿ ಇರುವ ಸರ್ಕಾರೀ ಜಾಗದಲ್ಲಿರುವ ಗೋಮಾಳದಲ್ಲಿ ಮೇಯುವ ಮಲೆನಾಡ ಗಿಡ್ಡ ತಳಿಯ ದನಗಳ ಅಂಬಾ ಅಂಬಾ ಎನ್ನುವ ಕೂಗು, ಪಕ್ಕದ ಇನ್ಯಾವುದೋ ಗುಡ್ಡದಲ್ಲಿ ನರ್ತಿಸುವ ನಲಿಲಿನ ಈ ಹಾಂ ಈ ಹಾಂ ಈ ಹಾಂ.......ಎಂಬ ಕೇಕೇ ಆಹಹ ಅನುಭವಿಸಲು ಪಡೆದುಬಂದಿರಬೇಕು. ಕಂಬಳಿ ಕೊಪ್ಪೆ ಹೊದ್ದು ಮೋಟು ಬೀಡಿ ಹಚ್ಚಿಕೊಂಡು ತಲೆಯಮೇಲೆ ಸಾಮಾನು ಹೊತ್ತು ಓಡಾಡುತ್ತಿದ್ದ ಕೆಲಸದ ಆಳುಗಳನ್ನು ನೋಡಿದಾಗಲಂತೂ ಬತ್ತಿಹೋಗಿದ್ದ ನರಗಳಲ್ಲೂ ಜೀವಂತಿಕೆಯ ಸಂಚಲನ ...ಪ್ರಾಯಶಃ ಜೀವಿತಕ್ಕಾಗಿ ಅವರ ದುಡಿಮೆಯನ್ನು ಕಂಡು ನೂ ಪ್ರಯತ್ನಿಸಬೇಕು...ಬದುಕು ಇಷ್ಟೇ ಅಲ್ಲ.. ಇನ್ನೂ ಇದೆ ಎಂಬ ಅನಿಸಿಕೆ ಇರಬಹುದು. 

ಬೋಳುಗುಡ್ಡೆ ಇಳಿದರೆ ಸಿಗುವ ಮಾಲಂಗೆರೆಯಲ್ಲಿ ಅಪ್ಪ-ಅಮ್ಮನ ನೆನಪಿಗಾಗಿ ಇದ್ದಿತ್ತು ಆ ಮನೆ. ಮನೆಯಲ್ಲಿ ಅಣ್ಣ ಮಾತ್ರ ಇದ್ದಾನೆ. ಅಣ್ಣ ಬ್ರಹ್ಮಚಾರಿ.. ಮದುವೇನೇ ಆಗಲಿಲ್ಲ ಪಾಪ! ಮದುವೆ ಆಗದ್ದಕ್ಕೆ ನಾನೇ ಕಾರಣವೇನೋ ಎಂದೂ ಅನಿಸುತ್ತದೆ. ಅದು ನನ್ನ ತಪ್ಪೇ? ನನ್ನನ್ನು ಕರೆದೊಯ್ದ ವ್ಯಕ್ತಿಯ ತಪ್ಪೇ? ನನಗೆ ವಿದ್ಯೆ ಕಲಿಸಿದ ಪಲಕರ ತಪ್ಪೇ? ಅಥವಾ ನನ್ನ ಉಕ್ಕೇರುತ್ತಿದ್ದ ಹರೆಯದ ತಪ್ಪೇ? ಅರ್ಥವಾಗದೇ ಇರುವ ವಿಷಯ. ಮಿಂಚಿಹೋದ ಆ ಕಾಲ ಮತ್ತೆ ಹಿಂದಕ್ಕೆ ಓಡಲು ಸಾಧ್ಯವೇ? ಆಗದಲ್ಲಾ? ಹಾಗೊಮ್ಮೆ ಆಗಿಬಿಡುತ್ತಿದ್ದರೆ ನಾನು ಮತ್ತೆಂದೂ ಅಪ್ಪ-ಅಮ್ಮನಿಗೆ ತೊಂದರೆ ಕೊಡ್ತಾ ಇರಲಿಲ್ಲ. ಬೇಸರವನ್ನೂ ಮಾಡ್ತಾ ಇರಲಿಲ್ಲ. ನನಗೆ ಯಾವುದಕ್ಕೆ ಕಮ್ಮಿ? ಹಣ, ಬಂಗಲೆ, ಓಡಾಟಕ್ಕೆ ಕಾರು, ಮುದ್ದಾದ ಮಕ್ಕಳು ಎಲ್ಲವೂ ಇದೆ. ಆದರೆ ಕೊರತೆಯೊಂದೇ ಮುಪ್ಪಿನಕಾಲದಲ್ಲೂ ಅಪ್ಪ-ಅಮ್ಮನನ್ನು ಮಾತನಾಡಿಸಲು ಆಗಲಿಲ್ಲವಲ್ಲ ಎಂಬುದು. ಮಕ್ಕಳಿಂದ ಅಗಲಿರುವ ಕೊರಗು ಬಹಳ ವೇದನೆಯಂತೆ. ಅದನ್ನು ಅನುಭವಿಸಿದವರೇ ಬಲ್ಲರು ಎಂದು ಕೆಲವರು ಹೇಳುತ್ತಾರೆ. ಶ್ರವಣ ಕುಮಾರನ ತಂದೆ ದಶರಥನ ಬಾಣಕ್ಕೆ ಬಲಿಯಾದಾಗ ದಶರಥನಿಗೂ ಪುತ್ರಶೋಕ ತಟ್ಟಲಿ ಎಂದು ಶ್ರವಣನ ತಂದೆ ಶಪಿಸಿದ್ದರಂತೆ. ಪಾಪ ಶಾಪಗ್ರಸ್ತ ದಶರಥ ಸರ್ವಸಮರ್ಥನಾದರೂ, ಚಕ್ರವರ್ತಿಯೇ ಆಗಿದ್ದರೂ ಕೈಕೇಯಿಗೆ ಕೊಟ್ಟ ವರಗಳು ತನ್ನನ್ನೇ ಹುರಿದು ಮುಕ್ಕುತ್ತವೆ ಎಂದು ಅಂದುಕೊಂಡಿರಲಿಲ್ಲ. ವರ ಕೇಳಿದ ಕೈಕೇಯಿಯ ಮಾತನ್ನು ಅಲಿಸಿದ ಕ್ಷಣದಿಂದ ನಿಜವಾದ ದಶರಥನ ಅವಸಾನ ನಡೆದೇ ಹೋಗಿತ್ತು!! ಆತ ಮನಸಾ ಕುಗ್ಗಿದ್ದರೂ ಕೈಕೇಯಿಗೆ ತಿಳಿಹೇಳಿ ನಿಲುವನ್ನು ಬದಲಾಯಿಸಿಕೊಳ್ಳುವಂತೇ ಪ್ರಯತ್ನಿಸಿ ರಾಮನನ್ನು ಅಯೋಧ್ಯೆಯಲ್ಲೇ ಇಟ್ಟುಕೊಳ್ಳುವ ಕೊನೆಯ ಆಸೆಯನ್ನು ಇಟ್ಟುಕೊಂಡಿದ್ದ. ಪ್ರೀತಿಯ ಮಗನನ್ನು ಬಿಟ್ಟಿರಲಾರ, ಕಾಡಿಗೆ ಕಳಿಸಲಾರ. ಆದರೂ ವಿಧಿ ರಾಮನನ್ನು ದಶರಥನಿಂದ ಅಗಲಿಸಿತು. ಪುತ್ರವಿಯೋಗದಿಂದ ಬಳಲೀ ಬಳಲೀ ಗತಿಸಿಹೋದ ದಶರಥನಿಗೆ ಆ ಕ್ಷಣಗಳು ಅದೆಷ್ಟು ಅಸಹನೀಯವಾಗಿದ್ದವೋ ತಿಳಿಯದು; ಅಷ್ಟೇ ವೇದನೆಯನ್ನು ನನ್ನ ಅಪ್ಪ-ಅಮ್ಮ ಅನುಭವಿಸಿದ್ದರೆ ಅದಕ್ಕೆ ಕಾರಣ ನಾನೇ ಅಲ್ಲವೇ? ಇಲ್ಲಿ ಕೈಕೇಯಿಯಿಲ್ಲ ಆದರೆ ಕಲಿಸಿದ್ದ ವಿದ್ಯೆ ಕೈಕೇಯಿಗೆ ಇತ್ತ ವರಗಳಂತೇ ಆಗಿತ್ತಲ್ಲಾ....ಬದುಕಿನ ಮಜಲುಗಳ ಅರ್ಥವ್ಯಾಪ್ತಿ ಗೊತ್ತಿರದ ಆ ದಿನಗಳಲ್ಲಿ ಆತನೊಬ್ಬ ಸಿಗದಿದ್ದರೆ ಅಥವಾ ನಾನು ಆ ಕಾಲೇಜಿಗೆ ಹೋಗದೇ ಇದ್ದಿದ್ದರೆ ಇಷ್ಟೆಲ್ಲಾ ಅಗುತ್ತಿರಲಿಲ್ಲ ಎನಿಸುತ್ತದೆ.   

"ಹಬ್ಬುಮಾಸ್ತರು ಅಂದ್ರೆ ಮರ್ಯಾದೆಗೆ ಅಂಜೋ ಜನ ಅಂತ ಎಲ್ಲರಿಗೂ ಗೊತ್ತಿದೆ. ಕರ್ತವ್ಯದಲ್ಲಿ ಕಿಂಚಿತ್ತೂ ಲೋಪವಿಲ್ಲದಂತೇ ವ್ಯವಹರಿಸುತ್ತಾ ಬಂದವನು ನಾನು. ಮಕ್ಕಳಿಗೊಂದು ಒಳ್ಳೆ ವಿದ್ಯೆ ಕಲಿಸಿ ದಡಹತ್ತಿಸಿಬಿಟ್ಟರೆ ನನ್ನ ಕೆಲಸ ಮುಗೀತು" ಎಂದು ಸದಾ ಸ್ನೇಹಿತರುಗಳ ಹತ್ತಿರ ಹೇಳಿಕೊಳ್ಳುತ್ತಿದ್ದ ಅಪ್ಪಯ್ಯನ ಹೆಸರಿಗೇ ಮಸಿಬಳಿದೆನಲ್ಲಾ ಎಂಬುದೇ ಸದಾ ಕಾಡುತ್ತಿದೆ. ಅಪ್ಪ ನಮ್ಮನ್ನೆಲ್ಲಾ ಎಷ್ಟೊಂದು ಪ್ರೀತಿಯಿಂದ ಸಲಹಿದ್ದರು. ಶಾಲೆ ಮುಗಿಸಿ ಎಲ್ಲಿಗೇ ಹೋದರೂ ಸಾಧ್ಯವಾದ ಕಡೆಗೆಲ್ಲಾ ಕರೆದುಕೊಂಡೇ ಹೋಗುತ್ತಿದ್ದರು. "ಜಗತ್ತಿನಲ್ಲಿ ಕೋಟಿವಿದ್ಯೆಗಳಿವೆ ಮಗಾ. ಅಲ್ನೋಡು ಜಮೀನಿನಲ್ಲಿ ದುಡೀತಾರಲ್ಲಾ ...ಮೇಟಿ ಹಿಡಿದು ಕೆಲಸಮಾಡ್ತಾರಲ್ಲಾ ...ಅವರೇ ಎಲ್ಲರಿಗೂ ಅನ್ನದಾತರು. ಅವರು ಕೆಲಸ ಮಾಡ್ದಿದ್ರೆ ದೇಶ ಉಪವಾಸ ಬೀಳ್ತದೆ. ಬೇರೇ ವಿದ್ಯೆಗಳನ್ನೆಲ್ಲಾ ಕಲಿತರೂ ಮೇಟಿವಿದ್ಯೆಯಲ್ಲೂ ಆಸಕ್ತಿ ಇಟ್ಕೊಂಡಿರಬೇಕು. ಗದ್ದೆ-ತೋಟಗಳಲ್ಲಿ ಕೆಲಸಮಾಡುವುದು, ದನಗಳ ಆರೈಕೆ, ಹಾಲು-ಹೈನದ ಕೆಲಸ, ಬೀಸುವ-ಕಾಸುವ ಕೆಲಸ ಎಲ್ಲವನ್ನೂ ಕಲಿತಿರಬೇಕು. ಸಮಯ ಬಂದ್ರೆ ಯಾವುದನ್ನೇ ಮಾಡಲೂ ತಯಾರಾಗಿರಬೇಕು. ಬರೇ ಪುಸ್ತಕದ ವಿದ್ಯೆ ಸಾಲದು." ಎನ್ನುತ್ತಾ ತನ್ನ ಅನುಭವಗಳ ಮೂಟೆಯನ್ನು ಬಿಚ್ಚಿ ಹಿತನುಡಿಗಳನ್ನು ಹೇಳುತ್ತಿದ್ದರು.    

ವರ್ಗಾವರ್ಗೀ ಕೆಲಸದಲ್ಲಿ ಆ ಕಾಲದಲ್ಲಿ ಲಂಚ-ರುಷುವತ್ತು ಇರಲಿಲ್ಲ. ಎಲ್ಲಿಗೆ ಹಾಕಿದರೋ ಅಲ್ಲಿಗೆ ಹೋಗುವುದು ವಾಡಿಕೆಯಾಗಿತ್ತು. ಮೂಲ ಊರನಿಂದ ಹಲವು ಊರುಗಳಿಗೆ ತಿರುಗಿದವರು ಅಪ್ಪ. ಜಿಲ್ಲೆಯ ಪಕ್ಕದ ಜಿಲ್ಲೆಯ ಹಳ್ಳಿಗಳ ಮೂಲೆಯ ಶಾಲೆಗಳಿಗೆ ವರ್ಗಾ ಮಾಡಿದಾಗ ಬೆಕ್ಕು ತೊಟ್ಟಿಲು ತೆಗೆದುಕೊಂಡು ಹೋಗುವಂತೇ ನಮ್ಮನ್ನೆಲ್ಲಾ ಕಟ್ಟಿಕೊಂಡು ಅಲ್ಲಲ್ಲಿಗೇ ಹೋಗಿ, ಬಾಡಿಗೆಮನೆಮಾಡಿ ಬದುಕು ಸಾಗಿಸಿದವರು ನಮ್ಮಪ್ಪ. ಇರುವ ಚಿಕ್ಕ ನೌಕರಿಯಲ್ಲೇ ತೃಪ್ತಿಯನ್ನು ಕಂಡವರು. ಯಾವುದೇ ಚಟಗಳನ್ನು ಅಂಟಿಸಿಕೊಂಡವರಲ್ಲ. ಎಲ್ಲಿಗೇ ಹೋದರೂ ಆ ಗ್ರಾಮಗಳಲ್ಲೆಲ್ಲಾ ಹಬ್ಬುಮಾಸ್ತರು ಎಂದರೆ ಎಲ್ಲರೂ ಮೆಚ್ಚುವಂತೇ ಬದುಕಿದ್ದವರು. ತೂರಾಡುವ ತುಂಬಾಲೆಯಂತಿದ್ದ ಕೃಶಶರೀರದ ಅಪ್ಪ ಹಕ್ಕಿಹಾರುವಷ್ಟು ಸಲೀಸಾಗಿ ಓಡಾಡುತ್ತಿದ್ದರು. ಇರುವ ಗ್ರಾಮಗಳ ಪ್ರತೀ ಮನೆಮನೆಯೂ ಅವರಿಗೆ ಗೊತ್ತು. ಗ್ರಾಮಸ್ಥರ ನಡುವೆ, ಅಣ್ಣ-ತಮ್ಮಂದಿರ ನಡುವೆ  ಯಾವುದೇ ಚಿಕ್ಕ ಪುಟ್ಟ ಜಗಳ-ವೈಮನಸ್ಸು ಬಂದಾಗ ಖುದ್ದಾಗಿ ಹೋಗಿ ಅದನ್ನು ಬಗೆಹರಿಸಿದ ದಾಖಲೆಗಳಿಗೆ ಲೆಕ್ಕವೇ ಇಲ್ಲ. ಪೂಜೆ, ಪ್ರಾರ್ಥನೆ, ರಾಗವಾಗಿ ಹಾಡುವುದು, ಯಕ್ಷಗಾನ ಒಂದೇ ಎರಡೇ ಅವರ ಕಲಾಕೌಶಲಗಳ ಪಟ್ಟಿ ಮಾಡುತ್ತಾ ಹೋದರೆ ಮಕ್ಕಳಾದ ನಾವು ಅಲ್ಪರು ಎಂಬುದರಲ್ಲಿ ಸಂಶಯವೇ ಇಲ್ಲ. ಹೊಸಾಕುಳಿ ಶಾಲೆಯಲ್ಲಿ ಮಾಸ್ತರಿಕೆ ಮುಗಿಸಿ ವರ್ಗವಾಗಿ ಹೊರಡುವ ದಿನ ನಡೆದ ಬೀಳ್ಕೊಡುವ ಸಮಾರಂಭದಲ್ಲಿ ಅಲ್ಲಿನ ಜನ ಕಣ್ಣೀರು ಹಾಕಿದ್ದನ್ನು ಮರೆಯಲು ಸಾಧ್ಯವೇ ಇಲ್ಲ ಬಿಡಿ. ಊರಕೇರಿಲಿದ್ದಾಗ ಭಾಗೊತ್ರ ಮನೇಲಿ ಕೊಟ್ಟ ಆದರಾತಿಥ್ಯದ ಬಗ್ಗೆ ಹೇಳ್ತಾ ಇದ್ರು. ನಾವೆಲ್ಲಾ ಚಿಕ್ಕವರಾಗಿದ್ರಿಂದ ನಮಗೆ ಎಲ್ಲವೂ ಮೊದಮೊದಲು ತಿಳೀತಿರ್ಲಿಲ್ಲ. ಕುಮಟಾ ಹೆಗಡೆ ಗ್ರಾಮದಲ್ಲಿ ಶಾಂತಿಕಾಂಬಾ ದೇವಸ್ಥಾನದ ಎದುರಿನ ಬಯಲಿನಲ್ಲಿ ನಡೆದ ಕರ್ಣಪರ್ವ ಯಕ್ಷಗಾನದಲ್ಲಿ ಕರ್ಣನ ಪಾತ್ರ ನೋಡಿದವರು ಇವತ್ತಿಗೂ ಹಬ್ಬು ಮಾಸ್ತರ ಕರ್ಣ ಅಂದ್ರೆ ಸಾಕ್ಷಾತ್ ಕರ್ಣನೇ ಬಂದ ಹಾಗಾಗಿತ್ತು ಅಂತಾರೆ. "ಇಂಥಾ ಒಬ್ಬ ಅಪ್ಪನನ್ನು ಪಡೆಯಲು ಏಳೇಳು ಜನ್ಮಗಳ ಪುಣ್ಯ ಪಡೀಬೇಕು ಮರೀ" ಎಂದು ಶಾನಭಾಗ್ ಮಾಸ್ತರು ನನ್ನ ಕೆನ್ನೆ ಹಿಂಡಿದ ನೆನಪು ಇಂದು-ನಿನ್ನೆಯೇ ನಡೆದ ಘಟನೆಯಂತೇ ಕಾಣುತ್ತದೆ.      

ಅಪ್ಪನಿಗೆ ಯಾವ ವಿಷಯದಲ್ಲೂ ಅಡ್ಡಿಮಾಡದೇ ಇರುವ ಅಮ್ಮ ಕೂಡ ಹಾಗೇ ಇದ್ದರು. ಅಪ್ಪ ವರ್ಗವಾಗಿ ಊರೂರು ಸುತ್ತುವಾಗ ಎಂದೂ ಬರಲಾರೆ ಎಂದವಳಲ್ಲ. ಅಪ್ಪ ಕರೆದಲ್ಲಿಗೆ ಕರೆದಾಗೆಲ್ಲಾ ನಡೆದುಹೋಗಿ ಅವರ ನೆರಳಿನಂತೇ ಬದುಕಿದವರು ನನ್ನ ಸಾಧ್ವಿ ತಾಯಿ. ಮನೆಯಲ್ಲಿ ಅಪ್ಪ ಬಡ ಮಕ್ಕಳಿಗೆ ನಿಶ್ಶುಲ್ಕವಾಗಿ ಪಾಠ ಹೇಳುತ್ತಿದ್ದರು, ಪಾಠ ಹೇಳಿಸಿಕೊಳ್ಳಲು ಬಂದ ಮಕ್ಕಳಿಗೆ ಕೆಲವೊಮ್ಮೆ ಊಟ-ತಿಂಡಿಯೆಲ್ಲಾ ನಮ್ಮನೆಯಲ್ಲೇ ನಡೆಯುತ್ತಿತ್ತು. ಕೆಲವು ಮಕ್ಕಳಿಗಂತೂ ಬಟ್ಟೆ-ಪುಸ್ತಕ ವಗೈರೆ ಕೊಡಿಸುತ್ತಿದ್ದರು. ಹಳೆಯ ಪಠ್ಯಪುಸ್ತಕಗಳನ್ನು ಸಂಪಾದಿಸಿ ಮಾರ್ನೇವರ್ಷದ ಬಡಮಕ್ಕಳಿಗೆ ಕೊಟ್ಟುಬಿಡುತ್ತಿದ್ದರು. ಇದಕ್ಕೆಲ್ಲಾ ಅಮ್ಮನ ಸಹಾಯ ಕೂಡ ಇತ್ತು.ಇರುವ ದಿನಸಿಗಳಲ್ಲಿ ಅದಷ್ಟೂ ರುಚಿರುಚಿಯಾದ ಅಡುಗೆಯನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ, ದುರ್ಗಾನಮಸ್ಕಾರ, ಮಂಗಳಗೌರೀವ್ರತ, ಶನಿವಾರ ಒಪ್ಪೊತ್ತು ಹೀಗೇ  ನೇಮನಿಷ್ಠೆ ಮಾತ್ರ ಬಹಳ ಜೋರಾಗೇ ಇತ್ತು. ಒಪ್ಪೊತ್ತಿನ ದಿನ ರಾತ್ರಿ ಊಟಮಾಡ್ತಿರಲಿಲ್ಲ. ಸ್ವಲ್ಪವೇ ಸ್ವಲ್ಪ ಒಗ್ಗರಣೆ ಅವಲಕ್ಕಿನೋ ಮೊಸರವಲಕ್ಕಿನೋ ತಿನ್ನುತ್ತಿದ್ದರು. ಆಗೆಲ್ಲಾ ಅಪ್ಪ ಸುಮ್ನೇ ಛೇಡಿಸ್ತಿದ್ರು

ಆಚೆಮನೆ ಸುಬ್ಬಮ್ಮಂಗೆ ಏಕಾದಶಿ ಉಪವಾಸ
ಏನೋ ಸ್ವಲ್ಪ ತಿಂತಾರಂತೆ ಅವಲಕ್ಕಿ ಉಪ್ಪಿಟ್ಟು ಪಾಯಸ .....

ಸದಾ ಕೆಲಸಗಳ ಏಕತಾನತೆಯಲ್ಲಿ ಬೇಸರವಾಗಬಹುದು ಎಂಬ ಅನಿಸಿಕೆಯಿಂದ ಅಮ್ಮನನ್ನು ಗೋಳುಹುಯ್ದುಕೊಳ್ಳುತ್ತಿದ್ದ ಅಪ್ಪನ ಆ ವರಾತವೂ ಒಂದರ್ಥದಲ್ಲಿ ಅಮ್ಮನಿಗೂ ಬೇಕಾಗಿಯೇ ಇರುತ್ತಿತ್ತು. ಸೌಂದರ್ಯದಲ್ಲಿ  ಕಾಶ್ಮೀರೀ ಸೇಬಿನ ಹಾಗೇ ಗುಲಾಬಿ-ಬಿಳಿ ಮಿಶ್ರಬಣ್ಣದ ಅಮ್ಮ ನಿರಾಭರಣ ಸುಂದರಿ. ಕಡೆದಿಟ್ಟ ಶಿಲಾಬಾಲಿಕೆಯಂತಹ ಅಂಗಸೌಷ್ಟವ, ದಾಳಿಂಬೆ ಬೀಜಗಳಂತಹ ದಂತಪಂಕ್ತಿ, ಸಂಪಿಗೆ ಎಸಳಿನ ನಾಸಿಕ, ಕಾಮನಬಿಲ್ಲಿನ ಹುಬ್ಬಿನ ಆಕೆ ಕಮಲನಯನೆ. ಅಲಂಕರಿಸಿಕೊಂಡರೆ ಥೇಟ್ ಶ್ರೀಮನ್ಮಹಾಲಕ್ಷ್ಮಿ! ಕ್ಷುಲ್ಲಕ ಕಾರಣಕ್ಕೆ ಕೋಪಮಾಡಿಕೊಂಡು ಮಲಗಿದ್ದಾಗ ಬಂದು ಮುದ್ದಿಸಿ, ರಮಿಸಿ ಕರೆದೊಯ್ದು ಊಟಾನೋ ತಿಂಡೀನೋ ಕೊಡುತ್ತಿದ್ರು. ಬೆಣ್ಣೆಮನೆ ಮಾಣಿ ನನಗೆ ಕಲ್ಲಿನಲ್ಲಿ ಹೊಡೆದು ಕಣ್ಣ ಹತ್ತಿರ ಆದ ಗಾಯಕ್ಕೆ ಅವರ ಸೀರೆಯನ್ನೇ ಹರಿದು ಕಟ್ಟಿ ಹಿಯತ್ತಿದ್ದ ರಕ್ತವನ್ನು ತಡೆಯಲು ಯತ್ನಿಸಿದ್ದರು. ಗುಡುಗಿಗೆ ಹೆದರುತ್ತಿದ್ದ ನನ್ನನ್ನು ತನ್ನ ಹೊದಿಕೆಯೊಳಗೇ ಸೇರಿಸಿಕೊಂಡು ಮಲಗಿಸಿ ಮೈದಡವಿ ಧೈರ್ಯ ಹೇಳುತ್ತಿದ್ದರು. ನವರಾತ್ರಿ, ದೀಪಾವಳಿ ಕಾಲದಲ್ಲಿ ಮುತ್ತೈದೆಯರಲ್ಲಿ ಹಲವರನ್ನು ಕರೆದು ಅರಿಶಿನ-ಕುಂಕುಮ-ಬಳೆ-ಕಣ-ಕಾಣಿಕೆ ಕೊಟ್ಟು ನಮಿಸುತ್ತಿದ್ದುದು ಹಬ್ಬಗಳ ಸಾಲು ಬಂದಾಗ ನೆನಪಾಗುವಂಥಾ ವಿಷಯ. ಹಬ್ಬುಮಾಸ್ತರಿಗೆ ತಕ್ಕ ಜೋಡಿ ಎನಿಸಿಕೊಂಡ ಅಮ್ಮ ಆದರ್ಶ ಗೃಹಿಣಿಯ ಅಷ್ಟೂ ಲಕ್ಷಣಗಳನ್ನು ಮೈವೆತ್ತವರು.

ಇಂಥಾ ಅಪ್ಪ-ಅಮ್ಮನಿಗೆ ನಾನಾದರೂ ಯಾಕೆ ಹುಟ್ಟಿ ಅವರ ನೋವಿಗೆ ಕಾರಣವಾದೆ ಎಂದೂ ಅನಿಸುತ್ತಿದೆ. ನಿವೃತ್ತರಾಗುವ ಕಾಲಕ್ಕೆ ಸ್ವಂತ ಊರಾದ ಮಾಲಂಗೆರೆಗೆ ಬಂದು ಪಿತ್ರಾರ್ಜಿತವಾಗಿ ಇದ್ದ ಮನೆಯಲ್ಲೇ ಉಳಿದುಕೊಂಡರಂತೆ. ಅಣ್ಣನಿಗೆ ಮದುವೆ ವಯಸ್ಸಾಗಿತ್ತು. ಎಂ ಕಾಂ ಓದಿದ್ದರೊ ಒಬ್ಬನೇ ಮಗನಾದುದರಿಂದ ಕೆಲಸಕ್ಕಾಗಿ ತಮ್ಮಿಂದ ದೂರ ಹೋಗುವುದು ಬೇಡವೆಂದು ಹೇಳಿದ್ದರಂತೆ. ನಿತ್ಯವೂ ನನ್ನನ್ನು ನೆನೆದು ಆಗಾಗ ಕಣ್ಣೀರು ಹಾಕುತ್ತಿದ್ದರಂತೆ. ಇದ್ದೊಬ್ಬ ತಂಗಿ ಈ ರೀತಿ ಮಾಡಿಬಿಟ್ಟಮೇಲೆ ತನಗೆ ಮದುವೆಯೇ ಬೇಡವೆಂದು ಅಣ್ಣ ಮದುವೆಯೇ ಆಗಲಿಲ್ಲ. ಅರವತ್ತು ದಾಟಿದ ಅಣ್ಣನನ್ನು ಈಗ ನೋಡಿದರೆ ಪಾಪಾ ಎನಿಸುತ್ತದೆ. ಮಾಡಿಬಡಿಸಲು ಯಾರೂ ಇಲ್ಲ, ಕಾಯಿಲೆ ಕಸಾಲೆಗೆ ಆಗಿಬರುವವರಿಲ್ಲ. ನೆಂಟರು-ಇಷ್ಟರು ಊಹುಂ ಬ್ರಹ್ಮಚಾರಿಯ ಮನೆಗೆ ಯಾಕಾದರೂ ಬರುತ್ತಾರೆ?  

ಹಳದೀಪುರದಲ್ಲಿರುವಾಗ ಹೊನ್ನಾವರ ಕಾಲೇಜಿಗೆ ನಾನು ಹೋಗುತ್ತಿದ್ದೆನಲ್ಲಾ ಅಲ್ಲಿಯೇ ನನಗೆ ಮ್ಯಾಥ್ಯೂ ಪರಿಚಯವಾಯ್ತು. ಸುಂದರ ಹುಡುಗ ಕೇರಳಕಡೆಯವನು; ಮಲೆಯಾಳಿ. ಅತನ ತಂದೆ ಮರದ ಹಾಗೂ ಸತ್ತ ಎಮ್ಮೆಗಳ ಕೊಂಬಿನಿಂದ ಬೊಂಬೆಗಳನ್ನು ತಯಾರಿಸಿಕೊಡುವ ಚಿಕ್ಕ ಕೈಗಾರಿಕಾ ಮಳಿಗೆಯಲ್ಲಿ ಕೆಲಸ ಸಿಕ್ಕಿದ್ದರಿಂದ ಅವರು ಹೊನ್ನಾವರಕ್ಕೆ ಬಂದುಳಿದಿದ್ದು. ರಾಜಕುಮಾರ್ ನಟಿಸಿದ ನಾನೊಬ್ಬಕಳ್ಳ, ಶಂಕರ್ ಗುರು ಸಿನಿಮಾಗಳನ್ನೆಲ್ಲಾ ನೋಡಿದ್ದ ನನಗೆ ಮ್ಯಾಥ್ಯೂ ತುಂಬಾ ಇಷ್ಟವಾಗಿದ್ದ. ಇಷ್ಟವಾಗಲು ಕಾರಣವೂ ಇತ್ತು. ಆತ ಒಮ್ಮೆ ಇಷ್ಟಪಡುವುದಾಗಿ ಹೇಳಿದ್ದ. ಎಷ್ಟೋ ದಿನಗಳ ನಂತರ ಕಷ್ಟಪಟ್ಟು ತಾನು ಅದನ್ನು ಹೇಳಿದುದಾಗಿಯೂ ಕಾಲೇಜು ಮುಗಿಸಿ ಒಳ್ಳೆಯ ನೌಕರಿ ಹಿಡಿದು ಮದುವೆ ಆಗುತ್ತೇನೆಂದೂ ಒಂದೊಮ್ಮೆ ನಾನು ತಿರಸ್ಕರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದೂ ಹೇಳಿಬಿಟ್ಟ. ಹಾಗೆಲ್ಲಾ ಎಲ್ಲರ ಎದುರಿಗೆ ಹೇಳಿಕೊಳ್ಳುವ ವಿಷಯ ಅದಾಗಿರಲಿಲ್ಲ. ಬಹಳ ದಿನಗಳ ತನಕ ನಾನು ಉತ್ತರಿಸಲೇ ಇಲ್ಲ, ಒಮ್ಮೆ ಒಂದು ವಾರದ ಕಾಲ  ಸತತವಾಗಿ ಮ್ಯಾಥ್ಯೂ ಕಾಲೇಜಿಗೆ ಬರಲೇ ಇಲ್ಲ. ಇಂದಿನಂತೇ ಅಂದು ಮೊಬೈಲು ವಗೈರೆ ಇರಲಿಲ್ಲ. ಎಲ್ಲಿಗೆ ಹೋದನೆಂಬ ಸುಳಿವೇ ಇರಲಿಲ್ಲ. ಬೊಂಬೆ ತಯಾರಿಕಾ ಕೇಂದ್ರದ ಸುತ್ತಮುತ್ತ ಹೋಗಿ ನೋಡಿದೆ, ಅಲ್ಲೂ ಕಾಣಲಿಲ್ಲ. ಅಲ್ಲಿರುವ ಯಾರಲ್ಲಾದ್ರೂ ಕೇಳೋಣಾ ಎಂದುಕೊಂಡೆ.....ಏನಂತ ಕೇಳಲಿ? .......ಅವರು ಏನು ತಿಳಿದಾರು?....ಅಲ್ಲವೇ? ಸುಮ್ಮನೇ ಮರಳಿದೆ. ನನ್ನ ಸಲುವಾಗಿ ಆತ ಸಾಯದಿರಲಿ ಎಂದು ಅದೆಷ್ಟು ದೇವರಲ್ಲಿ ಪ್ರಾರ್ಥಿಸಿದೆನೋ ಗೊತ್ತಿಲ್ಲ. ಎಣ್ಣೆ ಆರಿಹೋದ ದೀಪದಂತೇ ದಿನದಿನವೂ ನಿಸ್ತೇಜಳಾಗುತ್ತ ನಡೆಯುತ್ತಿದ್ದೆ. ಮಾರನೇ ವಾರ, ಯಾವದೇವರ ಅನುಗ್ರಹವೋ ತಿಳಿಯದು...ಮ್ಯಾಥ್ಯೂ ಕಾಲೇಜಿಗೆ ಬಂದ. ಕೇಳಿದೆ ಯಾಕೆ ಬರಲಿಲ್ಲವೆಂದು? ಅವರ ಮನೆಯಲ್ಲಿ ಎಲ್ಲರೂ ಊರಿಗೆ ಹೋಗಿದ್ರಂತೆ. ನೀನು ಹೇಗೂ ಪ್ರೀತಿಸುವುದಿಲ್ಲ ಅದೆಲ್ಲಾ ನಿನಗ್ಯಾಕೆ? ಎಂದ. ನಾನು ಸುಮ್ಮನೇ ಇದ್ದೆ. ಆತನೂ ಮಾತನಾಡಲಿಲ್ಲ. ಆ ನಂತರ ನಿತ್ಯವೂ ನೋಡ್ತಿದ್ದೆವು. ನನ್ನೊಳಗೆ ನನಗೇ ಅರಿವಿಲ್ಲದಂತೇ ಆತನ ಪ್ರತಿಷ್ಠಾಪನೆಯಾಗಿತ್ತು.

ದೇಹವೆಂಬ ದೇಗುಲದಲ್ಲಿ
ಆತ್ಮವೆಂಬ ಶಿವಲಿಂಗದ ಮೇಲೆ
ಪ್ರೀತಿ ಎಂಬ ಪುಷ್ಪ ಎಂದೆಂದೂ ಬಾಡದಿರಲಿ

ಎಂದು ಕೊನೆಯವರ್ಷದ ಕಾಲೇಜು ಹುಡುಗರು ಹುಡುಗಿಯರಿಗೆ ಆಟೋಗ್ರಾಫ್ ಬರೆದುಕೊಡುವುದನ್ನು ನೋಡಿದ್ದೆ. ಎಂತೆಂಥಾ ಬರಹಗಳು! ಪ್ರೀತಿಗಾಗಿ ಜ್ ಮಹಲ್ ಕಟ್ಟಿಸಿದ ಎಂಬ ಶಹಜಹಾನ್ ಕಥೆ ಕೇಳಿದ್ದೆ. ಲೈಲಾ-ಮಜನೂ ಕಥೆನೂ ಕೇಳಿದ್ದೆ. ಜಗತ್ತು ಬಹಳ ಸುಂದರವಾಗಿ ಕಾಣುತ್ತಿತ್ತು. ಮ್ಯಾಥ್ಯೂ ರಾಜಕುಮಾರನ ರೀತಿ ಕಾಣ್ತಿದ್ದ. ನಿಂತಲ್ಲಿ, ಕುಳಿತಲ್ಲಿ, ಹೋದಲ್ಲಿ, ಬಂದಲ್ಲಿ ಎಲ್ಲೆಲ್ಲೂ ಮ್ಯಾಥ್ಯೂ ...ಮ್ಯಾಥ್ಯೂ.......ಮ್ಯಾಥ್ಯೂ....... ಆತನಿಗೆ ಹೇಳಿಬಿಡುವುದೇ ಸರಿ ಎನಿಸಿತು. ಒಪ್ಪಿಗೆ ಕೊಟ್ಟುಬಿಟ್ಟೆ. 

ಒಂದುದಿನ ಅಪ್ಪ ಬಹಳ ಕೆಲಸಗಳ ಒತ್ತಡದಲ್ಲಿದ್ದರು. ನಾನು ಕಾಲೇಜಿಗೆ ಹೋಗುತ್ತೇನೆಂದು ಹೊರಟೆ. ಅದೇ ಕೊನೆ. ನಾನೂ ಮ್ಯಾಥ್ಯೂ ಮೊದಲೇ ನಿರ್ಧರಿಸಿದಂತೇ ಒಟ್ಟಿಗೆ ಸೇರಿ ಕೇರಳದ ಹಾದಿ ಹಿಡಿದುಬಿಟ್ಟೆವು. ಕೇರಳ ತಲ್ಪುವ ವರೆಗೆ ಬಸ್ಸುಗಳಲ್ಲಿ ನಮ್ಮಂಥಾ ರಾಜ-ರಾಣಿ ಇನ್ಯಾರಿದ್ದಾರೆ ಅನಿಸುತ್ತಿತ್ತು. ಅಂತೂ ಕೇರಳ ತಲುಪಿಬಿಟ್ಟೆವು. ನನಗೋ ಮಲಯಾಳ ಬರದು. ಅಲ್ಲಿ ಗುಟ್ಟಾಗಿ ಒಂದು ಕೊಠಡಿಯಲ್ಲಿದ್ದೆವು. ಮ್ಯಾಥ್ಯೂ ಮನೆಗೂ ಸುದ್ದಿ ಗೊತ್ತಿರಲಿಲ್ಲ. ಒಂದು ವರ್ಷ ಹಾಗೂ ಹೀಗೂ ಕಳೆದುಹೋಯ್ತು. ಮ್ಯಾಥ್ಯೂ ಅದೆಲ್ಲೋ ಕೆಲಸಕ್ಕೆ ಹೋಗುತ್ತಿದ್ದ. ಅವನಿಗೆ ಕೇರಳದ ಸ್ನೇಹಿತರು ಬಹಳ ಮಂದಿ ಇದ್ದರು. ಅವರ ಸಂಗದಿಂದ ಮ್ಯಾಥ್ಯೂ ಚಟಗಳನ್ನು ಅಂಟಿಸಿಕೊಳ್ಳ ತೊಡಗಿದ್ದು ನನಗೆ ತಿಳಿಯಲೇ ಇಲ್ಲ. ಬರಬರುತ್ತಾ ಮ್ಯಾಥ್ಯೂ ನನ್ನನ್ನು ನಿರ್ಲಕ್ಷಿಸ ತೊಡಗಿದ. ನನ್ನೊಡನೆ ದೇಹಸಂಪರ್ಕ ಬೆಳೆಸುವುದನ್ನೇ ನಿಲ್ಲಿಸಿದ್ದ. ಆತನಿಗೆ ಅದೇನು ಕಾಯಿಲೆಯೋ ತಿಳಿಯದಾಯ್ತು, ಒಂದು ದಿನ ಕುಡಿದ ಅಮಲಿನಲ್ಲೇ ನರಳಿ ಸತ್ತುಹೋದ.  

ನಾನು ಅನಾಥಳಾಗಿದ್ದೆ. ಮ್ಯಾಥ್ಯೂಗೆ ಕೊಟ್ಟ ಶರೀರವನ್ನು ಹೊತ್ತು ಮತ್ತೆ ಊರಿಗೆ ಹೋಗುವ ಮನಸ್ಸು ಇರಲಿಲ್ಲ. ಮೇಲಾಗಿ ನಾನು ಹಾಗೆ ಯೋಚಿಸುವ ಮುನ್ನವೇ ನನಗೆ ಪ್ರಜ್ಞೆ ತಪ್ಪಿತ್ತು. ಎಚ್ಚರಗೊಂಡಾಗ ನಾನು ಯಾರದೋ ಮನೆಯಲ್ಲಿದ್ದೆ. ಅಲ್ಲಿ ಕಂಡಾತ ಹೇಳಿದ ಆತ ಮ್ಯಾಥ್ಯೂವಿಗೆ ಹಣ ಕೊಟ್ಟಿದ್ದನಂತೆ. ಮ್ಯಾಥ್ಯೂ ಸತ್ತುಹೋದುದರಿಂದ ತನ್ನ ಮನೆಯಲ್ಲೇ ಇರಲಿ ಎಂದು ಕರೆದುಕೊಂಡು ಬಂದೆನೆಂದೂ ಮೇರಿ ಎಂದು ನಾಮಕರಣ ಮಾಡಿದ್ದೇನೆಂದೂ ಕ್ರಿಸ್ತಿಯನ್ ಮತವನ್ನು ಸ್ವೀಕರಿಸಿ ತನ್ನೊಂದಿಗೆ ಬಾಳಬೇಕೆಂದೂ ಒಂದೊಮ್ಮೆ ಹಾಗೆ ಮಾಡದಿದ್ದರೆ ಪರಿಣಾಮ ನೆಟ್ಟಗಿರಲಿಕ್ಕಿಲ್ಲವೆಂದೂ ಆಗ್ರಹಪೂರ್ವಕ ತಿಳಿಸಿದ. ಗೊತ್ತುಗುರಿಯೇ ಇಲ್ಲದ ಬದುಕಿಗೆ ಯಾವುದನ್ನು ಎಲ್ಲಿ ಹೇಗೆ ಮಾಡಬೇಕೆಂಬ ನಿರ್ಧಾರ ತೆಗೆದುಕೊಳ್ಳುವ ತಾಕತ್ತಿರಲಿಲ್ಲ. ನನ್ನತನ ಎಂಬುದು ಅಳಿಸಿಹೋಗಿತ್ತು. ಪ್ರೀತಿಯ ಆದರ್ಶಗಳೆಲ್ಲಾ ಕೇವಲ ಆಮಿಷಗಳಾಗಿ ನನ್ನೆದುರೇ ಧಗ ಧಗ ಧಗ ಧಗನೇ ಹೊತ್ತು ಉರಿದಂತೇ ಭಾಸವಾಗುತ್ತಿತ್ತು. ಊಟಕ್ಕೂ ಅನುಕೂಲವಿಲ್ಲದ ಸ್ಥಿತಿಯಲ್ಲಿ ಆ ಶ್ರೀಮಂತನ ಮನೆಯಲ್ಲಿ ಆತನ ಹೇಳಿಕೆಗಳನ್ನು ಕೇಳುತ್ತಾ ಕೆಲವು ದಿನಗಳನ್ನು ಕಳೆದೆ. ಒಂದಷ್ಟು ದಿನ ಆತ ನನ್ನನ್ನು ಬೇಕಷ್ಟು ಭೋಗಿಸಿದ. ಆತನ ಮುಖ್ಯ ಕಸುಬು ಹೆಣ್ಣುಮಕ್ಕಳ ಸರಬರಾಜು ಎಂಬುದು ಅಮೇಲೆ ತಿಳಿಯಿತು. ತಿಂಗಳುಗಳು ಕಳೆದು ಆತ ನನ್ನನ್ನು ಇನ್ಯಾರಿಗೋ ಮಾರಿಬಿಟ್ಟ.

ದಾರಿಯಲ್ಲಿ ಹಾರಿಬಿದ್ದ ಹಾರದ ನಡುವಿನ ಹೂವಿಗೆ ತೇರನೇರಿ ಮೆರೆವ ಭಾರೀಯೋಗ ಬರುವುದಾದರೂ ಎಂತು? ಆದರೂ ನನ್ನನ್ನು ಕೊಂಡುಕೊಂಡ ಮನುಷ್ಯ ಒಳ್ಳೆಯವನಿದ್ದ. ಖರೀದಿಸುವ ವ್ಯಕ್ತಿಯಲ್ಲೂ ದೇವರು ನನಗಾಗಿ ಒಬ್ಬ ಕರುಣಾಮಯಿಯನ್ನು ಅನುಗ್ರಹಿಸಿದ್ದ. ಆತನಲ್ಲಿ ನನ್ನೆಲ್ಲಾ ವಿಷಯವನ್ನೂ ತೋಡಿಕೊಂಡೆ. ಆತನಿಗೆ ಅದೇನು ಅನ್ನಿಸಿತೋ ಅರಿವಾಗಲಿಲ್ಲ. ಆತ ಹೇಳಿದ "ನೀನು ಹಿಂದೆ ಏನೇ ಆಗಿರು, ಇಂದಿನಿಂದ ನೀನು ನನ್ನವಳೆಂದು ಭಾವಿಸುತ್ತೇನೆ. ನನಗೆ ಎರಡು ಮಕ್ಕಳು-ಹೆಂಡತಿಯಿಲ್ಲ. ಆರ್ಥಿಕವಾಗಿ ಬೇಕಷ್ಟಿದೆ, ಆದರೆ ಮಕ್ಕಳನ್ನು ನೋಡಿಕೊಳ್ಳಲು ಮತ್ತು ನನ್ನ ಅವಶ್ಯಕತೆಗಳನ್ನು ಪೂರೈಸಲು ಒಬ್ಬರು ಬೇಕು. ಅದಕ್ಕಾಗಿ ಹುಡುಕುತ್ತಿದ್ದೆ. ಅನಿರೀಕ್ಷಿತವಾಗಿ ಯಾರದೋ ಮೂಲಕ ನನಗೆ ನೀನು ಸಿಕ್ಕಿದೆ. ಇನ್ನು ಚಿಂತಿಸಬೇಡ, ಇಲ್ಲೇ ಇದ್ದುಬಿಡು" ಎಂದ. ಅಲ್ಲಿಯೇ ಕಾಲಹಾಕುತ್ತಿದ್ದೇನೆ. ಆತನ ಮಕ್ಕಳ ಲಾಲನೆಪಾಲನೆಯಲ್ಲಿ ತೊಡಗಿಕೊಂಡು ಅವೇ ನನ್ನ ಮಕ್ಕಳಾಗಿಬಿಟ್ಟಿವೆ. ನನಗೆ ಬೇರೇ ಮಕ್ಕಳ ಅಗತ್ಯತೆ ಕಾಣಲಿಲ್ಲ. ಜೀವನದಲ್ಲಿ ಹಲವು ಅಧ್ಯಾಯಗಳು ತೆರೆದಿವೆ, ಕೆಲವು ಮುಗಿದಿವೆ, ಕೆಲವು ಮುಗಿಯುತ್ತಿವೆ ಇನ್ನೂ ಕೆಲವು ಇನ್ಯಾವಾಗ ಮುಗಿಯುತ್ತವೋ ತಿಳಿಯದು. ಹಳೆಯ ಹೊತ್ತಗೆಯ ಹರಿದ ಹಾಳೆಗಳಂತೇ ಬದುಕಿನ ಪುಟಗಳು ಹರಿದುಹೋಗಿವೆ. ಹರಿದ ಹಾಳೆಗಳಿಗೆ ಅದೆಷ್ಟೇ  ತೇಪೆ ಹಾಕಿದರೂ ಮೂಲರೂಪ ಬರುವುದಿಲ್ಲವಷ್ಟೇ ? ಅದೇ ರೀತಿ ನನ್ನ ಕಥೆಯೂ ಕೂಡಾ.  

ಐವತ್ತೈದರ ಹೊಸ್ತಿಲಲ್ಲಿರುವ ನನಗೆ ಅನೇಕ ವರ್ಷಗಳಿಂದ ಅಪ್ಪ-ಅಮ್ಮನ ನೆನಪು, ಮನೆಯ ನೆನಪು, ಒಡಹುಟ್ಟಿದ ಅಣ್ಣನ ನೆನಪು ತಡೆದುಕೊಳ್ಳಲಾಗದಷ್ಟು ಆಗತೊಡಗಿತು. ಒಮ್ಮೆ ನೋಡಿಬರಬೇಕು.....ಒಮ್ಮೆ ಕಂಡುಬರಬೇಕು ಎಂಬ ಆಸೆ. ಅವರು ಏನೇ ಅಂದರೂ ಸರಿಯೇ .....ಅವರನ್ನೊಮ್ಮೆ ಕಾಣಬೇಕು ಎಂಬ ಅದಮ್ಯ ಬಯಕೆ ಯನ್ನು ತಿಳಿಸಿ, ಈಗಿನ ನನ್ನವರನ್ನೂ ನನ್ನೊಟ್ಟಿಗೆ ಕರೆದುಕೊಂಡು ಮಾಲಂಗೆರೆಗೆ ಬಂದೆ. ಊರು ಬದಲಾಗಿ ಹೋಗಿದೆ. ಆದರೂ ನಮ್ಮ ಹಳ್ಳಿಯ ಸೊಗಡನ್ನು ಇಷ್ಟಾದರೂ ಉಳಿಸಿಕೊಂಡಿದೆ ಎನಿಸಿತು. ಮುಪ್ಪಿನ ದಿನಗಳು ಸಮೀಪಿಸಿದ ಅಣ್ಣ ಪಾಪ ಒಬ್ಬನೇ ಇದ್ದಾನೆ. ಆತನೇ ಅಡಿಗೆ ಮಾಡಿಕೊಳ್ಳುತ್ತಾನೆ. ಪ್ರೀತಿಯ ಅಪ್ಪ-ಅಮ್ಮ ಕಾಲವಾಗಿ ಹದಿಮೂರು ವರ್ಷಗಳೇ ಕಳೆದುಹೋದವಂತೆ. ಗೋಡೆಯಮೇಲೆ ಅಣ್ಣಹಾಕಿರುವ ಅವರ ಭಾವಚಿತ್ರಗಳನ್ನು ಕಂಡು ಕಣ್ಣೀರು ಕೋಡಿ ಹರಿಯಿತು. ಎಂಥಾ ಅಪ್ಪ, ಎಂಥಾ ಅಮ್ಮ, ಅಂತಹ ಅಪ್ಪ-ಅಮ್ಮಂದಿರಿಗೆ ಇಂಥಾ ಮಗಳು.....ಓದಲಿ ಎಂದು ಕಾಲೇಜಿಗೆ ಕಳಿಸಿದರೆ ವಿಶ್ವಾಸದ್ರೋಹಮಾಡಿಬಿಟ್ಟೆ. ಅದೆಷ್ಟು ನೊಂದರೋ, ಮುದ್ದಿನ ಮಗಳಿಗಾಗಿ ಅದೆಷ್ಟು ಅಲವತ್ತುಕೊಂಡರೋ....ಅದೆಷ್ಟು ದಿನ ಯಾರೋ ಹುಡುಗಿ ದೂರದಲ್ಲಿ ಬಸ್ಸಿನಿಂದಿಳಿದು ಬರುವಾಗ ನಾನೇ ಬಂದಿರಬೇಕೆಂದು ಭಾವಿಸಿದರೋ.......ಅವರ ಯಾವ ಜನ್ಮದ ಪಾಪಕ್ಕಾಗಿ ನನ್ನನ್ನು ಅವರ ಮಗಳಾಗಿ ದೇವರು ಅವರಿಗಿತ್ತನೋ..........ಯೋಚನಾಲಹರಿ ಅಸಾಧ್ಯವಾಗಿ ಧುಮುಗುಡುತ್ತಿತ್ತು; ಮೆದುಳಿನೊಳಗೆ ಭೋರ್ಗರೆವ ಕಡಲ ಸಾವಿರ ಅಲೆಗಳ ಅಬ್ಬರ ! ನಾನು ಮಾಡಿದ ತಪ್ಪಿಗೆ ನನಗೆ ತಕ್ಕ ಶಿಕ್ಷೆ ಎಂದುಕೊಂಡೆ....ಆದರೆ ಏನೂ ತಪ್ಪುಮಾಡದ ಅಣ್ಣನಿಗೆ, ಅಪ್ಪ-ಅಮ್ಮನಿಗೆ ನನ್ನಿಂದಾಗಿ ಪ್ರಾಪ್ತವಾದ ಮಾನಸಿಕ ಹಿಂಸೆಯನ್ನು ನೆನೆಸಿಕೊಂಡು ಅತ್ತೆ...ಆತ್ತೆ. ಹದಿಹರೆಯದ ಹುಡುಗ-ಹುಡುಗರಿಗೆ ಹೇಳುತ್ತೇನೆ--ಆ ವಯಸ್ಸಿನ ಪ್ರೀತಿ ಶಾಶ್ವತವಲ್ಲ, ಅದು ನಿಜವಾದ ಪ್ರೀತಿಯಲ್ಲ. ಮನಸ್ಸು ಮಾಗಿದಮೇಲೆ ಒಡಮೂಡುವ ಪ್ರೀತಿ ಶಾಶ್ವತ. ರೂಪ, ಯೌವ್ವನ, ಅಧಿಕಾರ ಯಾವುದೂ ಶಾಶ್ವತವಲ್ಲ, ಅವುಕೊಡುವ ಸುಖವೂ ಶಾಶ್ವತವಲ್ಲ. ನಾನು ಬದಲಾಗಿದ್ದೇನೆ. ಅಪ್ಪ-ಅಮ್ಮಂದಿರ ಹೆಸರಿನಲ್ಲಿ ಅನಾಥಾಶ್ರಮ ನಡೆಸಬೇಕೆಂದುಕೊಂಡಿದ್ದೇನೆ. ಅಣ್ಣ ಹೇಗೂ ನನ್ನೊಂದಿಗೆ ಬರಲಾರ. ಅದಕ್ಕಾಗಿ ಅಣ್ಣನಿಗೂ ಒಂದಷ್ಟು ಜನರ ಸಾಂಗತ್ಯ ಇರುತ್ತದೆ ಎಂಬ ಅನಿಸಿಕೆ ಇದೆ. ಬಡ-ನಿರ್ಗತಿಕ ಮಕ್ಕಳಿಗೆ ಆಶ್ರಯ ಕೊಡುವ, ಕೊಟ್ಟು ಅವರ ಬಾಳಿಗೆ ದಾರಿ ತೋರಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳುವ ಮನಸ್ಸಾಗಿದೆ. ಹಾಗೆಂದುಕೊಳ್ಳುತ್ತಿರುವಾಗಲೇ ಅದೋ ಅಲ್ಲಿ ಎದುರುಗೋಡೆಯಲ್ಲಿದ್ದ ಅಪ್ಪ-ಅಮ್ಮನ ಫೋಟೋ ಪಕ್ಕದಲ್ಲಿ ಭಗವದ್ಗೀತೆಯ ಚಿತ್ರವೊಂದು ಕಾಣುತ್ತಿದೆ. ಅಲ್ಲಿ ಬರೆದಿದೆ : ’ಪರಿವರ್ತನೆ ಜಗದ ನಿಯಮ’