ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, February 27, 2010

ಖಂಡವಿದೆಕೋ ಮಾಂಸವಿದೆಕೋ




[ಸ್ನೇಹಿತರೇ, ಇಂದಿನ ನನ್ನ ಲೇಖನಕ್ಕೆ ಪೂರ್ವಭಾವಿಯಾಗಿ ಒಂದು ಪ್ರಸ್ತುತಿ- ಮೊನ್ನೆ ತಮ್ಮನ್ನೆಲ್ಲಾ ದಿ|ಶ್ರೀ ಮಹಾಬಲ ಹೆಗಡೆ,ಕೆರೆಮನೆ ಇವರ ನಾದ-ನಮನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆನಷ್ಟೇ? ಕಾರ್ಯಕ್ರಮ ತುಂಬಾ ಚೆನ್ನಾಗಿ ಸಾಂಗವಾಯ್ತು. ಸಾವಿರ ಸಂಖ್ಯೆಯಲ್ಲಿದ್ದ ಪ್ರೇಕ್ಷಕರನ್ನು ಮಹಾಬಲ ಹೆಗಡೆಯವರ ಮಗ ಶ್ರೀ ರಾಮ ಹೆಗಡೆಯವರು ತಮ್ಮ ಭಾವಗೀತೆ ಮತ್ತು ಯಕ್ಷಗಾನದ ಹಾಡುಗಳಿಂದ ಮಹಾಬಲರ ಕಾಲಕ್ಕೆ ಕರೆದೊಯ್ಯುವಲ್ಲಿ ಸಂಪೂರ್ಣ ಯಶಸ್ವಿಯಾದರು. ಅವರ ಇಡೀ ಕುಟುಂಬವೇ ಬಂದು ಹಾಡು-ಭಜನೆಗಳ ಮುಖಾಂತರ ಮನಸೂರೆ ಗೊಂಡರು.ನುಡಿನಮನ ಸಲ್ಲಿಸುತ್ತಾ ನಮ್ಮ ಸಾಹಿತಿ ಶ್ರೀ ಜಯಂತ್ ಕಾಯ್ಕಿಣಿ ಉತ್ತರಕನ್ನಡದ ಭಾಷಾ ಸೊಗಡನ್ನು-ಅಲ್ಲಿನ ಜೀವನದ ಸೊಗಸನ್ನು ಹದ ಪಾಕ ಇಳಿಸಿ, ಮಹಾಬಲರ ಬಗ್ಗೆ-ಯಕ್ಷಗಾನದ ಬಗ್ಗೆ ತಮಗಿದ್ದ-ಇರುವ ಕಳಕಳಿ ವ್ಯಕ್ತಪಡಿಸಿದರು, ಕೆರೆಮನೆ ಶಿವಾನಂದ ಹೆಗಡೆಯವರ ನೇತ್ರತ್ವದ ಇಡಗುಂಜಿ ಮೇಳ ಸುಧನ್ವಾರ್ಜುನ ಯಕ್ಷಗಾನ ಪ್ರದರ್ಶಿಸಿ ಕಳೆಕಟ್ಟಿದರು, ಯಕ್ಷಗಾನ-ಹಿಂದೂಸ್ತಾನಿ ಸಂಗೀತವನ್ನು ಉಟ್ಟ-ಉಂಡ,ಆ ಕಲೆಯಲ್ಲೇ ತಮ್ಮೆಲ್ಲ ಕಷ್ಟ-ಬವಣೆ-ಬಡತನ ಮರೆತು ಜನತೆಗಾಗಿ ಭಾವುಕರಾಗಿ ಮೆರೆದು ಬದುಕು ಪೂರ್ತಿ ಪ್ರೇಕ್ಷಕರನ್ನ-ಆಸಕ್ತರನ್ನ ರಂಜಿಸಿದ ಮಹಾಬಲರು 'ಯಕ್ಷಗಾನಕ್ಕೊಬ್ಬ ಮಹಾಬಲ'ರೇ ಸರಿ ! ಕಾರ್ಯಕ್ರಮ ರೂಪಿಸಿ,ಅಳವಡಿಸಿ ಪ್ರಸ್ತುತಪಡಿಸಿದ 'ಸಪ್ತಕ' ಕ್ಕೆ ನಾವೆಲ್ಲಾ ಆಭಾರಿಗಳಾಗೋಣ. ಒಟ್ಟಾರೆ
ತಮ್ಮೆಲ್ಲರ ಪರವಾಗಿ ನಾನು ಕಾರ್ಯಕ್ರಮದಲ್ಲಿ ಸಹಭಾಗಿಯಾಗಿ ತಮಗೆ ಸಂದೇಶ ತಲ್ಪಿಸುತ್ತಿದ್ದೇನೆ-ಒಪ್ಪಿಸಿಕೊಳ್ಳಿ
]
---------

ಖಂಡವಿದೆಕೋ ಮಾಂಸವಿದೆಕೋ

[ಚಿತ್ರಗಳ ಋಣ : ಅಂತರ್ಜಾಲದಿಂದ ಕೆಲವು ]














ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕ ತನ್ನ ಮೂಲ ಸತ್ವ ಸಾರವಾದ, ಸಂಪತ್ತಿನ ಆಗರವಾದ, ಅನೇಕ ವನ್ಯಜೀವಿಗಳಿಗೆ ಆಶ್ರಯ ತಾಣವಾದ ಹಸಿರು ಕಾಡನ್ನೂ, ಆಶ್ರಯಿಸಿದ ಪಶು-ಪಕ್ಷಿಗಳಾದಿಯಾಗಿ ಎಲ್ಲಾ ವನ್ಯಜೀವಿಗಳನ್ನೂ ಕಳೆದುಕೊಳ್ಳುತ್ತದೆ. ಬೇರೆ ರಾಜ್ಯಗಳ ಮೂಲದಲ್ಲಿ ಹುಟ್ಟಿ, ಬೆಳೆದು ಇಲ್ಲಿ ಕಂಡಲ್ಲಿ ಜನರ ಒಳ್ಳೆಯತನವನ್ನೂ ದುರುಪಯೋಗಪಡಿಸಿಕೊಳ್ಳುತ್ತಾ, ಇಲ್ಲಿನ ಸಿರಿಯನ್ನು ಸೂರೆಹೊಡೆಯುತ್ತಿರುವ ಗಣಿಧಣಿಗಳಿಗೆ ನಮ್ಮ ರಾಜ್ಯದ ಮೀಸಲು ಅರಣ್ಯಗಳು ಮಾರಾಟವಾಗಿವೆ ! ಈ ಮಾರಾಟದಲ್ಲಿ ಬರುವ ನಿಕ್ಕಿ ಕಳ್ಳ ಹಣದಲ್ಲಿ ಯಾವ ಯಾವ ರಾಜಕಾರಣಿಗಳಿಗೆ-ಶಾಸಕರಿಗೆ ಪಾಲೆಷ್ಟು ಎಂಬುದು ಇನ್ನೂ premature ಸ್ಥಿತಿಯಲ್ಲಿದೆ, ಸ್ವಲ್ಪ ಸಮಯದ ನಂತರ ತಿಳಿಯಲ್ಪಡುತ್ತದೆ. ರಾಜ್ಯದ ಸ್ಥಿತಿ - ದೇವರಾಣೆ ಹೇಳುತ್ತೇನೆ ಬ್ರಿಟಿಷರೂ ಇಷ್ಟು ಕಟುಕರಾಗಿರಲಿಲ್ಲ; ಇಷ್ಟು ಹಾಳುಗೆಡವಿರಲಿಲ್ಲ,ಇಷ್ಟು ಖೊಳ್ಳೆ ಹೊಡೆದಿರಲಿಲ್ಲ ! ಅವರಿಗಾದರೂ ಒಂದು ನೀತಿ ಇತ್ತು, ರೀತಿ ಇತ್ತು ! ನಂಬಿ : ಇಂದಿನ ರಾಜಕಾರಣಿಗಳಿಗಿಂತ ಬ್ರಿಟಿಷರೇ ವಾಸಿ ಎನಿಸುತ್ತದೆ, ಯಾಕೆಂದರೆ ಕಣ್ಮುಂದೆ ನಡೆಯುವ ಬ್ರಷ್ಟಾಚಾರ, ದುರಾಚಾರ ಸಹಿಸಲಾಗುತ್ತಿಲ್ಲ.



ಒಂದಾನೊಂದು ಕಾಲವಿತ್ತು, ಅಂದು ನಮ್ಮ ಅಖಂಡ ಭಾರತವನ್ನು ವಂಗ.ಕಳಿಂಗ, ಚಾಲುಕ್ಯ, ರಾಷ್ಟ್ರಕೂಟ, ಮಗಧ, ಮೌರ್ಯ ಮುಂತಾದ ಚಪ್ಪನೈವತ್ತಾರು ದೇಶಗಳ ರಾಜರುಗಳು ಆಳುತ್ತಿದ್ದರು. ಆಳುವ ರಾಜರೆಲ್ಲರಲ್ಲಿಯೂ ತಮ್ಮ ಪ್ರಜೆಗಳಬಗ್ಗೆ-ರಾಜ್ಯ ಅಥವಾ ದೇಶದಬಗ್ಗೆ ಬಹಳ ಕಳಕಳಿ ಇತ್ತು. ರಾಜ ಯಾರ ಕೈಗೊಂಬೆಯಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲ. ಹಲವಾರು ಕಲೆ-ಸಾಹಿತ್ಯ-ಸಂಗೀತ ಮುಂತಾದ ೬೪ ಯಾವುದಾದರೊಂದು ವಿದ್ಯೆಯಲ್ಲಿ ಪಾರಂಗತನಾದ ವ್ಯಕ್ತಿಯನ್ನು ರಾಜ ಗುರುತಿಸಿ, ಗೌರವಿಸಿ ಅವನಿಗೆ ವಿಶೇಷ ಬಹುಮಾನಾದಿ ಕೊಟ್ಟು ಅವನ ಉಪಜೀವನಕ್ಕೆ ಏನಾದರೂ ಮಾರ್ಗವನ್ನು ತೋರಿಸುತ್ತಿದ್ದ.

ಒಂದೊಂದುಸಲ ನೋಡಿದರೆ, ನಮ್ಮ ಹಳೆಯಕಾಲವೇ ಚೆನ್ನಾಗಿತ್ತು. ರಾಜರನೇಕರು ಧರ್ಮಮಾರ್ಗದಲ್ಲಿ ರಾಜ್ಯಭಾರಮಾಡುತ್ತಿದ್ದರು.ಪ್ರಜೆಗಳ ಕೂಗು ಅವರನ್ನು ತಟ್ಟುತ್ತಿತ್ತು. ಪ್ರಜೆಗಳಮೇಲೆ ಅಪಾರ ಅಸ್ತೆಯುಳ್ಳವರು,ಪ್ರಜೆಗಳು ಸುಖವಾಗಿದ್ದರೇ ತಾವು ಸುಖಪಡಬಹುದೆಂಬ ಇಂಗಿತವನ್ನು ಹೊಂದಿದ್ದರು. ಪ್ರಜೆಗಳೂ ರಾಜರನ್ನು ಅತ್ಯಂತ ಭಯ-ಭಕ್ತಿಯಿಂದ ಕಾಣುತ್ತಿದ್ದರು.

|| ರಾಜಾ ಪ್ರತ್ಯಕ್ಷ ದೇವತಾ ||

-ಎಂಬಂತೆ ಪ್ರಜೆಗಳು ರಾಜರನ್ನು ಪೂಜಿಸುವಮಟ್ಟಿಗೆ ಗೌರವಿಸುತ್ತಿದ್ದರು, ಕಣ್ಣಿಗೆ ಕಾಣುವ-ತಮ್ಮ ದುಃಖ ದುಮ್ಮಾನಗಳನ್ನು ಖುದ್ದಾಗಿ ಅವಲೋಕಿಸಿ ಪರಿಹರಿಸುವ ದೇವರೆಂದು ತಿಳಿಯುತ್ತಿದ್ದರು;ಅದಕ್ಕೆ ತಕ್ಕಂತೆ ರಾಜರು ಮಾರು ವೇಷಧರಿಸಿ ಪ್ರಜೆಗಳ ನಡುವೆ ಬಂದು ತಮ್ಮನ್ನೇ [ರಾಜರನ್ನೇ]ದೂರುತ್ತ ಪ್ರಜೆಗಳ ಅಭಿಪ್ರಾಯ ಸಂಗ್ರಹಿಸುತ್ತಿದ್ದರು. ಇಂದು ಜನತಾದರ್ಶನವೆಂಬುದು ಬರೇ ನಾಟಕವಾಗಿದೆ ಅಷ್ಟೇ, ಹಾಗೊಮ್ಮೆ ನೋಡಿದರೆ ಆ ಕಾಲದ ಆಳ್ವಿಕೆ ಚೆನ್ನಾಗೇ ಇತ್ತು, ಅಲ್ಲಿ ಲಂಚವಿರಲಿಲ್ಲ, ರುಶುವತ್ತಿರಲಿಲ್ಲ, ಪಕ್ಷಾಟನೆಯಿರಲಿಲ್ಲ, ಜಾತಿ-ಮತ ಭೇದವಿರಲಿಲ್ಲ, ಅನ್ಯಾಯವಿರಲಿಲ್ಲ,ಅಸತ್ಯವಿರಲಿಲ್ಲ, ದೊಂಬಿಯಿರಲಿಲ್ಲ, ಧರಣಿಯಿರಲಿಲ್ಲ, ಹಿಂಸೆಯಿರಲಿಲ್ಲ. ಇಂದು ಅವುಗಳೆಲ್ಲ ಸಾಂಬಾರಿಗೆ ಬಳಸುವ ಮಸಾಲೆ ಪದಾರ್ಥಗಳಂತೆ ಅತೀ ಸಾಮಾನ್ಯವಾಗಿಬಿಟ್ಟಿವೆ, ಜನರ ಜೀವಕ್ಕೆ ಕಿಮ್ಮತ್ತೇ ಇಲ್ಲ, ಎಲ್ಲಿ ನೋಡಿದರೂ ಗೂಂಡಾಗಿರಿ, ಲಂಚ, ಹಿಂಸೆ, ದರೋಡೆ, ಕೊಲೆ-ಸುಲಿಗೆ, ಧರ್ಮದ ರಾಜಕೀಯ ಇವೆಲ್ಲ ಹೆಚ್ಚುತ್ತಲೇ ಇವೆಯೇ ಹೊರತು ಇವಕ್ಕೆಲ್ಲ ಕಡಿವಾಣವೇ ಇಲ್ಲ. ಇದರ ಬದಲಿಗೆ ಮೈಸೂರು ಅರಸರಂಥ ರಾಜರ ಆಳ್ವಿಕೆ ಅನುಕೂಲವಿರಬಹುದಿತ್ತಲ್ಲವೇ ? ಅಲ್ಲಿ ಒಬ್ಬ ವಿಶ್ವೇಶ್ವರಯ್ಯ, ಒಬ್ಬ ಮಿರ್ಜಾ ಇಸ್ಮಾಯಿಲ್, ಒಬ್ಬ ವೀಣೆ ಶೇಷಣ್ಣ, ಒಬ್ಬ ಪಿಟೀಲು ಚೌಡಯ್ಯ ಎಲ್ಲರೂ ಇದ್ದರಲ್ಲವೇ ? ಅಂದಮೇಲೆ ಪ್ರಜಾರಕ್ಷಕರಾಗಿ ಅವರೂ ನಮ್ಮ ಪ್ರಜಾ ಸರಕಾರಕ್ಕಿಂತ ಚೆನ್ನಾಗಿಯೇ ನಡೆಸಿದ ಉದಾಹರಣೆಗಳು ನಮಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಥರದ ರಾಜರಲ್ಲಿ ನೋಡಸಿಗುತ್ತವಲ್ಲವೇ ?














ಇಂದು ಈ ಯಾವುದೂ ವಿದ್ಯೆ ಮುಖ್ಯವಲ್ಲ. ಇಂದು ಉಪಜೀವನವೇ ಮುಖ್ಯಜೀವನವಾಗಿ ಪರಿಣಮಿಸಿದೆ. ಎಲ್ಲರಿಗೂ ದುಡ್ಡಿನದೇ ಚಿಂತೆ, ಬೇಗ ದುಡ್ಡು ಮಾಡಬೇಕು-ಅದು ನ್ಯಾಯವೋ ಅನ್ಯಾಯವೋ ಗೊತ್ತಿಲ್ಲ, life is short and one has to enjoy to the fullest ಎನ್ನುವ ಯಾರೋ ಹೇಳಿದ ಮಾತಿಗೆ ಕಟ್ಟುಬಿದ್ದು ಅದರ ಹಿಂದೆ ಬಿದ್ದು ಮೌಲ್ಯ ಕಳೆದುಕೊಂಡೆವು!















ಯಾವತ್ತಿದ್ರೂ ನಮಗೆ ಮಕ್ಕಳು ಮರಿಮಕ್ಕಳ ಕಾಲಕ್ಕೂ ಇರಲಿ ಅಂತ, ಅತೀ ದುರಾಸೆಯಿಂದ ಹಣವನ್ನು ಗೋಚಲು ಈ ಹಿಂದೆ ಹಾಗೂ ಹೀಗೂ ಗೋಚಿದ,ಬಾಚಿದ ಹಣವನ್ನೇ ಬಂಡವಾಳವನ್ನಾಗಿಟ್ಟುಕೊಂಡು ರಾಜ್ಯವನ್ನೇ ಹೆಚ್ಚೇಕೆ ದೇಶವನ್ನೇ ಕರೀದಿಸಲು ಮುಂದಾದ, ಖೊಳ್ಳೆ ಹೊಡೆಯಲು ಮುಂದಾದ ಖೂಳರು ನಮ್ಮ ಆಳುವ ಸ್ಥಾನಕ್ಕೆ ಬಂದಿರುವುದು ಇದು ನಿಜಕ್ಕೂ ಕಲಿಗಾಲ ! ಇದು ಪ್ರಜಾಪ್ರಭುತ್ವದ ವಿಪರ್ಯಾಸ; ವಿಪ್ಲವ, ದುರಂತ.


















ಮನೆಗೊಂದು ಪಕ್ಷ, ಪಕ್ಷಕ್ಕೊಬ್ಬ ಖೂಳ ಮುಖಂಡ, ಅವನ ಹಿಂದೆ ಅಧಿಕಾರಲಾಲಸೆ-ದುಡ್ಡಿನಲಾಲಿತ್ಯಕ್ಕಾಗಿ ನಾಯಿಗಳ ಥರ ಹಿಂಬಾಲಿಸುವ ಬೆಂಬಲಿಗರೆಂಬ ದಂಡು-ದುಡ್ಡಿರುವವರೆಗೆ ಉಂಡು, ಆಮೇಲೆ ಬೇರೆ ಪಕ್ಷಕ್ಕೆ ಹಾರಿಬಿಟ್ಟರು ಅವರ ಚಂಡು! ಎಂಥಾ ಆಭಾಸ ಅಲ್ಲವೇ ?

ಪುನರಪಿ ಚುನಾವಣೆ, ಹಲವು ಪಕ್ಷಗಳು ಅಧಿಕಾರಕ್ಕಾಗಿ ಮಾಡಿಕೊಂಡ ಚುನಾವಣಾನಂತರದ ದುಪಟ್ಟಾ [ಹರಿದ ಹಲವು ಬಟ್ಟೆಗಳನ್ನು ಸೇರಿಸಿ ನಮ್ಮ ಉತ್ತರಕರ್ನಾಟಕದ ಮಂದಿ ಮಾಡುತ್ತಾರಲ್ಲ ಅದು] ಮತ್ತೆ ಹರಿಯುವಿಕೆ-ಮುರಿಯುವಿಕೆ ಮತ್ತೆ ಕೂಡುವಿಕೆ-ಒಳ ಒಡಂಬಡಿಕೆ, ಮತ್ತೆ ಗೋತಾ ಇವೆಲ್ಲ ಯಾರಿಗಾಗಿ ಇನ್ನೂ ತಿಳಿಯದಾಯ್ತಾ ?













ಪ್ರಪಂಚದಲ್ಲಿ ಅತಿ ವಿಶೇಷ ಗಿಡಮೂಲಿಕೆಗಳನ್ನೊಳಗೊಂಡ ನಮ್ಮ ಹೆಮ್ಮೆಯ ಕಾಡು ಪಶ್ಚಿಮ ಘಟ್ಟದ್ದು. ಇದರಲ್ಲೇ ಕೆಲವು ಭಾಗ ಮೀಸಲು ಅರಣ್ಯ ಅಥವಾ ಅಭಯಾರಣ್ಯ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿದೆ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ವನ್ಯಜೀವಿ ಪ್ರಭೇದಗಳು ಇಲ್ಲಿವೆ. ಆನೆ,ಸಿಂಹ,ಹುಲಿ,ಚಿರತೆ,ಕರಡಿ,ಕಾಡೆಮ್ಮೆ-ಕೋಣ,ಹಂದಿ,ಕತ್ತೆಕಿರುಬ,ನವಿಲು, ಕಾಡಿಕೋಳಿ ಒಂದೇ ಎರಡೇ ? ಈ ಜೀವ ವೈವಿಧ್ಯದ ಕೆಲವು ಈಗಾಗಲೇ ಕಾಯಿಲೆ-ಕಸಾಲೆಯಿಂದ, ಆಹಾರದ ಕೊರತೆಯಿಂದ, ಜಾಗದ ಅಭಾವದಿಂದ ನಾಶವಾಗಿದ್ದರೆ, ಇನ್ನು ಕೆಲವೇ ಕೆಲವು ಮಾತ್ರ ಉಳಿದುಕೊಂಡಿದ್ದು ಅವುಗಳಬಗ್ಗೆ ಸಾಹಿತಿ,ಕವಿ-ನಾಟಕಕಾರರು,ಬುದ್ಧಿಜೀವಿಗಳು ಹೇಗೆ ಕಾಪಾಡಬೇಕೆಂಬ ಚಿಂತನೆಯಲ್ಲಿ ಇರುವಾಗ

’ಎಲ್ಲಮರೆತಿರುವಾಗ ಇಲ್ಲಸಲ್ಲದ ನೆಪವ ಹೂಡಿಬರದಿರು ಮತ್ತೆ.......’ಎಂಬ ಕವಿ ಸಾಲಿನಂತೆ ಮನ ಮರುಗುವ ಕೆಲಸಕ್ಕೆ ಸರಕಾರ ಮುಂದಾಗಿದೆ. ಇನ್ನೇನಿದ್ದರೂ ಕೆಲವೇ ದಿನಗಳಲ್ಲಿ ಕಾಡೆಂಬುದು ಬರೇ ನೆನೆಪು ಮಾತ್ರ! ಸರಕಾರ ತಯಾರಿಸುವ ಅಕೇಶಿಯಾ ನೆಡುತೋಪಿಗೆ ಕಾಡು ಎಂದು ಕರೆಯಬೇಕಾದ ದಿನ ಬಹಳ ದೂರವಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿರುವವರಿಗೇ ತಲೆಯಲ್ಲಿ ಅಧಿಕಾರದ ಹುಚ್ಚೊಂದೇ ತುಂಬಿದ್ದರೆ, ಅವರೇ ಬೇರೇ ಖೂಳ ರಕ್ಕಸ ರಾಜಕಾರಣಿಗಳ ಮುಂದೆ ಭಿಕ್ಷೆಯಥರ ಅಧಿಕಾರ ಉಳಿಸಿಕೊಡಲು ಕೈಯ್ಯೊಡ್ಡಿದರೆ ಆಗುವ ದುರಂತ ಇದೇ ಅಲ್ಲದೇ ಇನ್ನೇನು? ನಮಗೆ ಇರುವ ದಾರಿ ಎರಡೇ- ಒಂದು: ಸುಮ್ಮನಿದ್ದು ಎಲ್ಲವನ್ನೂ ಕಳೆದುಕೊಂಡು ದುರಂತಕ್ಕೆ ಮೂಕ ಪ್ರೇಕ್ಷಕರಾಗುವುದು, ಎರಡು : ದುರಂತವನ್ನು ತಡೆಗಟ್ಟಲು ಸ್ವಯಂ ಸೇವಕರಾಗಿ[ಆರ್.ಎಸ್.ಎಸ್. ಅಂತ ಹೇಳುತ್ತಿಲ್ಲ] ಸರಕಾರಕ್ಕೆ ಬುದ್ಧಿ ಕಲಿಸುವುದು. ಕೊನೇ ಹಂತದಲ್ಲಿದ್ದೇವೆ-ಆಯ್ಕೆ ನಿಮ್ಮದು!

ತಮ್ಮಲ್ಲೆಲ್ಲಾ ಅತ್ಯಂತ ವಿನಮ್ರನಾಗಿ ನಾನು ಬೇಡಿಕೊಳ್ಳುವುದಿಷ್ಟೇ-ನಮ್ಮ ನಮ್ಮ ಮನಸ್ಸಲ್ಲಿ-ನಮ್ಮಲ್ಲಿ ವೀರಭದ್ರರು ಹುಟ್ಟಿಬರಲಿ, ಈ ರಾಜಕೀಯವನ್ನು ಭಸ್ಮಮಾಡುವ ಭಸ್ಮಾಸುರ ಹುಟ್ಟಿಬರಲಿ, ಎಲ್ಲಾ ಸೇರೋಣ, ಆಗಬಹುದಾದ ಅನಾಹುತವನ್ನು ತಡೆಗಟ್ಟೋಣ. ಆಗದೇ ? ಕರೆದರೆ ಬರುವಿರಲ್ಲವೇ ?
ಸ್ವಾರ್ಥರಹಿತ ಬದುಕು ಬದುಕೋಣ ಅಲ್ಲವೇ ? ಪಾಪದ ಕಾಡು ಜೀವಿಗಳ ಕಣ್ಣೀರ ಕಥೆಯನ್ನ ಕಿವಿಗೊಟ್ಟು ಕೇಳೋಣ ಅಲ್ಲವೇ ? ಮಾತುಬಾರದೆ ಮೂಕವಾಗಿ ರೋದಿಸುವ ಗಿಡ-ಮರಗಳ ಬಗ್ಗೆ ಚಿಂತಿಸೋಣವೇ ? ಅವುಗಳ ಉಳಿವಿಗಾಗಿ , ಪ್ರಕೃತಿಯ ಸಮತೋಲನಕ್ಕಾಗಿ ಪರೋಕ್ಷ ನಮ್ಮ ಒಳಿತಿಗಾಗಿ ಸಾತ್ವಿಕ ಚಳುವಳಿಗೆ ಚಾಲನೆ ನೀಡೋಣವೇ ?

ದುರಂತ ವೀಕ್ಷಿಸಲು ಮಾನಸಿಕ ಸಿದ್ಧತೆ ಮಾಡಿಕೊಳ್ಳಿ


ಹಲೋ ಹಲೋ, ಕ್ಷಮಿಸಿ ಓದುಗರೇ ಈಗ ಸರ್ಕಾರದ ಪರವಾಗಿ ನಮ್ಮ ಯಡ್ಯೂರಪ್ಪ ಒಂದು ಹಾಡುಹಾಡಲಿದ್ದಾರೆ. ಮೂಲ ಸಂಗೀತ ಸಂಯೋಜನೆ ದಿ| ಶ್ರೀ ಸಿ.ಅಶ್ವಥ್ [ಕ್ಷಮಿಸಿ ಸರಕಾರದ ಕೆಲಸವಾದ್ದರಿಂದ ದೇವರಕೆಲಸವೆಂದು ತಿಳಿದು ಅವರ ಮರಣಾನಂತರ ಇಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದೇನೆ!] , ಪಕ್ಕವಾದ್ಯದಲ್ಲಿ : ಘಟಂ -ಖೇಣಿ[ಅತಿಥಿ ಕಲಾವಿದರು], ತಾಳ- ಜನಾರ್ದನ ರೆಡ್ಡಿ, ಮೃದಂಗ-ಶ್ರೀರಾಮುಲು , ವಾಯೋಲಿನ್- ಕರುಣಾಕರ ರೆಡ್ಡಿ, ತಂಬೂರ-ರಾಮಚಂದ್ರ ಗೌಡ, ಮೋರ್ಸಿಂಗ್ -ಆರ್ ಅಶೋಕ್, ಬೆಳಕು-ಈಶ್ವರಪ್ಪ, ಬಣ್ಣ ಮತ್ತು ಧ್ವನಿವರ್ಧಕ-ರೇಣುಕಾಚಾರ್ಯ, ವೇದಿಕೆ ಮತ್ತು ಸಹಕಾರ- ಎಲ್ಲಾ ಶಾಸಕ ಮಿತ್ರ ಮಂಡಳಿ, ಪರಿಕಲ್ಪನೆ, ಪ್ರಧಾನ ನಿರ್ದೇಶನ ಮತ್ತು ನಿರ್ಮಾಣ-ಲಕ್ಷ್ಮಿ ಮಿತ್ತಲ್ [ಅಂತರ್ರಾಷ್ಟ್ರೀಯ ಖ್ಯಾತಿ], ಓದುಗರನ್ನು ಕ್ಷಣಕಾಲ ವಿಧಾನಸೌಧದ ಬಾಂಕ್ವೆಟ್ ಹಾಲ್ ಗೆ ಕರೆದೊಯ್ಯುತ್ತಿದ್ದೇವೆ !

ವಿ.ಸೂ. ಪ್ರಾಯೋಜಿತ ಕಾರ್ಯಕ್ರಮದಿಂದ ಬರುವ ಎಲ್ಲಾ ಹಣವನ್ನೂ 'ಕಾಡು ನಿರ್ಮೂಲನಾ ಸಮಿತಿ'ಯ ಕಟ್ಟಡ ಕಟ್ಟುವಿಕೆಗೆ ಬಳಸಲಾಗುವುದು.


ಯಡ್ಯೂರಪ್ಪರ ಹಾಡು
[ಸಂತ ಶಿಶುನಾಳ ಶರೆಫರನ್ನು ಕ್ಷಮೆಕೋರಿ ಅವರ 'ಹಾವು ತುಳಿದೇನೆ ' ಹಾಡಿನ ರಾಗವನ್ನು ಬಳಸಿಕೊಂಡಿದ್ದೇನೆ ]

ಕಾಡೂ ಕಡಿದೇನೆ ಪ್ರಜೆಗಳೇ
ಕಾಡೂ ಕಡಿದೇನೆ ......

ಕಾಡು ಕಡಿದು ನಾಡಿಗಾಗಿ ಬೀಡು ಕಟ್ಟುವ ಕೆಲಸಮಾಳ್ಪೆ
ಮೂಢತನದಲಿ ಯಾರೇಕೂಗಲಿ ನಾಡಜನ ನೀವ್ ನೋಡುತಿರಲು!

ತೇಗ ಹೊನ್ನೇ ಮತ್ತಿ ಭರಣಿ
ಮಾಗಿ ತೂಗುವ ಮಾವು ಹಲಸು
ವೇಗದಲಿ ಬೇರೆಡೆಗೆ ಬೆಳೆದು
ಬೇಗ ನಿಮಗೆ ತಂದುಕೊಡುವೆ !
ಕಾಡೂ ಕಡಿದೇನೆ ......

ಕರಡಿ ನವಿಲು ಹಾವು ಸಿಗಲು
ಜನಗಳೆಲ್ಲಾ ಹೆದರಿ ದಿಗಿಲು
ಗದರಿಕೊಂಬರು ರೈತಜನರು
ಬೆದರಿ ನಾ ಬೇಸತ್ತು ಹೋದೆ !
ಕಾಡೂ ಕಡಿದೇನೆ ......

ಆನೆ ಸಿಂಹಗಳಿಹವು ಬರಿದೇ
ಏನು ಫಲವುಂಟವುಗಳುಳಿದು ?
ಸ್ಥಾನವಂತರು ಹಣವ ಸುರಿದು
ಮೌನದಿಂದ ಕಾಯುತಿಹರು !
ಕಾಡೂ ಕಡಿದೇನೆ ......

ಮೀಸಲಿರುವಾ ಸ್ವಲ್ಪ ಕಾಡು
ಯಾತಕಿನ್ನು ಹೊಲಸುಗೋಳು ?
ಮೀಸೆಚಿಗುರದ ಗಣಿಧಣಿಗಳು
ಆಸೆಯಿಂದ ಕೇಳುತಿಹರು !
ಕಾಡೂ ಕಡಿದೇನೆ ......

ಹುಲಿಯ ದೇವರ ಬನದ ಕಾಡು
ಬಲಿದು ನಿಂತಿಹ ಪುಟ್ಟ ಕಾಡು
ಬಲಿಯಥರದಲಿ ದಾನಗೈದು
ಒಲಿದ ಪಟ್ಟವ ಉಳಿಸಿಕೊಂಬೆ !
ಕಾಡೂ ಕಡಿದೇನೆ ......

ಮಗ ಹೇಳಿದ ನರಿಕಥೆ

ಮೊನ್ನೆ ಹರಿಕಥೆಯನ್ನೇನೋ ಕೇಳಿ ಬಿಟ್ಟಿರಿ ಆದರೆ ಹೊಸಕಾಲದ ನರಿಕಥೆ ನಿಮಗೆ ಗೊತ್ತೇ ? ಅದನ್ನು ಈಗಿನ ಮಕ್ಕಳ ಬಾಯಿಂದ ಕೇಳಿದರೇ ಸಂತೋಷ ! ನಮ್ಮ ಕಾಲಕ್ಕೇ ಮಕ್ಕಳ ಬುದ್ಧಿ ಅಂಟಿಕೊಂಡಿಲ್ಲ, ಅದು ವಿಕಸಿತವಾಗಿದೆ ಎಂಬುದಕ್ಕೆ ಹಲವಾರು ಉದಾಹರಣೆಗಳು ಸಿಗುತ್ತವೆ. ಇಂದಿನ ಮಕ್ಕಳು ಟಿವಿ ಮಾಧ್ಯಮದಲ್ಲಿ ನೋಡಿ ಅನೇಕ ಹೆಸರುಗಳನ್ನೂ, ಅನೇಕ ಕಾರ್ಯಕ್ರಮಗಳವೇಳೆಯನ್ನೋ ತಿಳಿದು ನೆನಪಿಟ್ಟುಕೊಂಡಿರುತ್ತಾರೆ. ನಾವು ಅವರಿಗೆ ಏನನ್ನೋ ಹೇಳಿದ್ದರೆ ಅವರ ಮನಸ್ಸು ಸೃಜನಶೀಲವಾಗಿ ಆ ವಿಷಯಗಳಿಗೆ ಮತ್ತೇನನ್ನೋ ತುಲನೆ ಮಾಡುತ್ತದೆ, ಕಲ್ಪನೆಯನ್ನು ಜೋಡಿಸಲು ಸಾಧ್ಯವಾದರೆ ಜೋಡಿಸುತ್ತದೆ. ನಮ್ಮ ಸುತ್ತಲ ಪರಿಸರ ಮಕ್ಕಳ ಮೇಲೆ ತುಂಬಾ ಪರಿಣಾಮ ಬೀರುತ್ತದೆ ಎಂಬುದೂ ಕೂಡ ಗಹನವಾದ ವಿಚಾರ! ಹೀಗಾಗಿ ಪಾಲಕರೇ ಮಕ್ಕಳ ಮುಂದೆ ಯಾವ ದುಶ್ಚಟಗಳನ್ನು ಶುರುವಿಟ್ಟುಕೊಳ್ಳಬೇಡಿ. ಚಟಗಳೇ ಬೇಡ, ಒಂದೊಮ್ಮೆ ಇದ್ದರೂ ನಿಮ್ಮ ಚಟಗಳೆಲ್ಲ ಅವರ ಕಣ್ಣಿಗೆ ಕಾಣಿಸದಂತಿರಲಿ. ನಮ್ಮ ಕಾಲಕ್ಕಿದ್ದ ಪೆದ್ದು ನರಿ ಈ ಕಾಲದಲ್ಲಿಲ್ಲ ! ನರಿಗೂ ಬುಧ್ಧಿ ಬೆಳೆದಿದೆ , ಓದಿ ನಿಮಗೇ ಗೊತ್ತಾಗುತ್ತೆ ...............


ಮಗ ಹೇಳಿದ ನರಿಕಥೆ
[ಚಿತ್ರಗಳ ಋಣ : ಅಂತರ್ಜಾಲ ]

ಹೀಗೆ ತಿಂಗಳ ಹಿಂದಿನ ಒಂದು ಭಾನುವಾರ, ಸ್ವಲ್ಪ ಚಳಿ ಮಿಶ್ರಿತ ವಾತಾವರಣ. ನಾನು ಮಗನೊಟ್ಟಿಗೆ ಆಟವಾಡುತ್ತ ವಿರಮಿಸುತ್ತಿದ್ದೆ. ೪.೫ ವಯಸ್ಸಿನ ಅವನಿಗೆ ಈಗ ಕಥೆಯ ಗೀಳು. " ಅಪ್ಪಾ ಆ ಕಥೆ ಹೇಳು, ಈ ಕಥೆ ಹೇಳು " ಹೀಗೆ ಕಂಡರೆ ಬೆನ್ನುಹತ್ತುವುದು ಅಭ್ಯಾಸವಾಗಿಬಿಟ್ಟಿದೆ. ಹೀಗೇ ಮಲಗಿರುವಾಗ ಅವತ್ತೂ ಕೂಡ ಕಥೆಹೇಳುವ ಮಾತು ಬಂತು, ನೀನೇ ನನಗೆ ನರಿ ದ್ರಾಕ್ಷಿ ತಿಂದ ಕಥೆ ಹೇಳು ಅಂತ ಹಠಹಿಡಿದೆ. ಮೊದಲು ಆಗುವುದಿಲ್ಲ ಅಂತ ಕುಳಿತ ಆತ ನಂತರ ಹೇಳಲು ಶುರುಮಾಡಿದ--

" ಒಂದಾನೊಂದು ಕಾಲದಲ್ಲಿ ಒಂದು ನರಿ ಇತ್ತಂತೆ, ಅದು ಅಲ್ಲಿ ಇಲ್ಲಿ ಸುತ್ತಾಡುತ್ತ ಇರುವಾಗ ಅದಕ್ಕೆ ದ್ರಾಕ್ಷಿ ತಿನ್ನುವ ಮನಸ್ಸಾಯಿತಂತೆ. ಹಾಗೇ ಹುಡುಕುತ್ತ ಒಂದು ದ್ರಾಕ್ಷಿ ತೋಟವನ್ನು ಕಂಡಿತಂತೆ. ಅಲ್ಲಿ ತುಂಬಾ ದ್ರಾಕ್ಷಿಹಣ್ಣುಗಳು ಇದ್ದವಂತೆ. ಆದರೆ ಎತ್ತರದಲ್ಲಿ, ಚಪ್ಪರದ ಎತ್ತರಕ್ಕೆ, ಮರಕ್ಕೆ ಹಬ್ಬಿಸಿದ ಬಳ್ಳಿಗಳಲ್ಲಿ ಇದ್ದವಂತೆ. ಅದನ್ನು ತಿನ್ನಬೇಕೆಂದು ನರಿ ಹತ್ತಿರ ಹೋಯಿತಂತೆ. ಒಂದು ಸರ್ತಿ ಎತ್ತರಕ್ಕೆ ಜಿಗಿಯಿತು ...ಸಿಗಲಿಲ್ಲ ........ಎರಡು ಸರ್ತಿ ಜಿಗಿಯಿತು.......ಸಿಗಲಿಲ್ಲ....ಮೂರು ಸರ್ತಿ ಜಿಗಿಯಿತು ಸಿಗಲಿಲ್ಲ.............." ಎನ್ನುತ್ತಾ ಸ್ವಲ್ಪ ನಿಧಾನ ಮಾಡತೊಡಗಿದ.

" ಆಮೇಲೆ ? " ಕೇಳಿದೆ

" ಅಲ್ಲೇ ಹತ್ತಿರ ಒಂದುಕಡೆ ಏಣಿ ಇತ್ತಂತೆ, ಅದನ್ನು ತಂದು ನಿಧಾನಕ್ಕೆ ಸಾಚಿ ಇಟ್ಟುಕೊಂಡು ಹಣ್ಣು ಕೀಳಲು ಪ್ರಯತ್ನಿಸುವ ಯೋಚನೆ ಮಾಡಿತಂತೆ "

" ನರಿಗೆಲ್ಲ ಕೈ ಇರಲ್ಲಾ ಕಣೋ, ನರಿ ಹೇಗೋ ಏಣಿನೆಲ್ಲ ಎತ್ತಿ ಇಡತ್ತೆ ? "




" ಅಪ್ಪಾ, ಸ್ವಲ್ಪ ಇರು ಹೇಳ್ತೀನಿ, ಅದು ಹಾಗೆ ವಿಚಾರ ಮಾಡಿತ್ತು ಅಷ್ಟೇ......"



"ನಂತರ ಏನಾಯ್ತು ? "

" ಹತ್ತಿರದಲ್ಲಿ ತೋಟದ ಮಾಲಿ ಒಂದು ದೋಟಿ [ಜೋಟಿ-ಉದ್ದನೆಯ ಕೊಕ್ಕೆ ] ಇಟ್ಟಿದ್ನಂತೆ ಯಾಕೋ ಬೇಕು ಅಂತ, ಅದನ್ನು ತಂದು ದ್ರಾಕ್ಷಿ ಕೊಯ್ಯಲು ಪ್ರಯತ್ನಿಸಿತಂತೆ "

" ಮಗಾ, ಏನು ತಲೆಯೋ ನಿಂದು ಈಗ ಹೇಳಿಲ್ವೇನೋ ನರಿಗೆ ಕೈ ಇಲ್ಲ ಅದು ಏನನ್ನೂ ಎತ್ತಕ್ಕಾಗಲ್ಲಾ ಅಂತ, ಮತ್ತೆ ಅದು ಹೇಗೆ ದೋಟಿ ತಂತು ? "

" ಅಲ್ಲಲ್ಲ , ದೋಟಿ ತರುವ ಯೋಚನೆ ಮಾಡುತ್ತಿತ್ತು , ದೋಟಿಯನ್ನು ಎತ್ತಲು ಆಗ್ಲಿಲ್ಲ ಅದಕ್ಕೇ ಬೇಡಾ ಅಂತ ವಾಪಸ್ ದ್ರಾಕ್ಷಿ ಬಳ್ಳಿಯ ಹತ್ತಿರ ಬಂತು"

" ಮುಂದೆ ? "

" ಮತ್ತೆ ಜಿಗಿಯಿತು, ಒಂದು ಎರಡು....ಮೂರು, ಸುಮಾರು ಸರ್ತಿ ಜಿಗೀತು, ಜಿಗ್ದೂ ಜಿಗ್ದೂ ಸುಸ್ತಾಯ್ತಲ್ಲ , ಸ್ವಲ್ಪ ಹೊತ್ತು ಅಲ್ಲೇ ಕುಂತಿತ್ತು . ಆಮೇಲೆ ಅದಕ್ಕೆ ಏನೋ ನೆನಪಾಯ್ತು "

" ಏನು ನೆನಪಾಯ್ತಪ್ಪಾ ಅದಕ್ಕೆ ? "










" ದ್ರಾಕ್ಷಿ ಹಣ್ಣುಗಳಿಗೆ ಔಷಧಿ ಹೊಡೀತಾರಲ್ಲ, ಅದನ್ನ ತಿಂದರೆ ತುಂಬಾ ಹಾಳು, ಶರೀರಕ್ಕೆಲ್ಲ ವಿಷ ಸೇರ್ಬಿಡುತ್ತೆ. ಅದಕ್ಕೇ ಜಾಣ ನರಿ ದ್ರಾಕ್ಷಿ ತಿನ್ನುವುದೇ ಬೇಡಾ ಅಂತ ತೀರ್ಮಾನಮಾಡಿ ವಾಪಸ್ ಹೊರಟೇ ಹೋಯ್ತು ! "

















[ಅಪ್ಪ-ಮಗನ 'ನರಿಕಥಾ ಕಾಲಕ್ಷೇಪ' ವನ್ನು ಶ್ರದ್ಧಾಳುವಾಗಿ ಭಕ್ತಿಯಿಂದ ಆಲಿಸುತ್ತಿದ್ದ ನನ್ನ ಹೆಂಡತಿಗೆ ೧೫ ನಿಮಿಷಗಳ ಕಾಲ ನಗೆಹಬ್ಬವನ್ನು ತಂದ ಈ ಕಥೆಯಲ್ಲಿ ಮಧ್ಯೆ ಮಧ್ಯೆ ತಾನು ಹೇಳುತ್ತಿರುವುದು ತಪ್ಪಿದೆ ಅಂತ ಅರಿವಾದಾಗ ಅವನ ಎಳೆಯ-ಮುಗ್ಧ ಮುಖದ ಭಾವನೆಗಳು ಹೇಗಿರಬಹುದು ಎಂಬುದನ್ನು ನಿಮ್ಮ ಊಹೆಗೆ-ಕಲ್ಪನೆಗೆ ಬಿಡುತ್ತಿದ್ದೇನೆ, ಎಂಜಾಯ್ ಮಾಡಿದಿರಲ್ಲವೇ ? ]