ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, October 4, 2012

ಇಲಿಯು ಪಂಜರದೊಳಿಲ್ಲ ಶ್ರೀರಾಮರಾಮಾ......

ಚಿತ್ರಋಣ: ಅಂತರ್ಜಾಲ
ಇಲಿಯು ಪಂಜರದೊಳಿಲ್ಲ ಶ್ರೀರಾಮರಾಮಾ......

ಚಕಿತರಾದರೂ ನಂಬಲೇಬೇಕಾದ ೧೦೦ ಕ್ಕೆ ಇನ್ನೂರರಷ್ಟು ಅಪ್ಪಟ ಸತ್ಯದ ವಿಚಾರ, ರೂಪಾಯಿಗೆ ೩೨ ಆಣೆ ಸತ್ಯ; ಮಿಕ್ಕಿದ ಬರಹಗಳೆಲ್ಲಾ ಸುಳ್ಳು ಇದು ಮಾತ್ರ ಸತ್ಯ ಎಂದು ತಿಳಿಯಬೇಡಿ, ಕಾಲ ಕಷ್ಟವಪ್ಪಾ ಹೀಗೆ ಬರೆದಾಗಲೇ ಮಿಕ್ಕಿದ ಬರಹಗಳೆಲ್ಲಾ ಸುಳ್ಳು ಎಂದು ಇನ್ನೂ ವಾಕ್ಯ ಪೂರ್ಣವಾಗುವ ಮೊದಲೇ ಶ್ರೀಕೃಷ್ಣ ’ಅಶ್ವತ್ಥಾಮೋ ಹತಃ .....’ ಎನ್ನುತ್ತಿದ್ದಾಗ ಶಂಖ ಊದಿದಂತೇ ತಮಗೆ ಬೇಕಾದಂತೇ ಊದಿಬಿಡುವ ಜನಗಳೂ ಇದ್ದಾರೆ. ಅಂದಹಾಗೇ ನಮ್ಮಲ್ಲಿ ಶಂಖ ಊದುವುದು ಎಂದರೆ ಕವಚ ಕುಡುಗುವುದು ಎಂದರ್ಥ ಅರ್ಥಾತ್ ಟಿಕೆಟ್ ತಗೊಳ್ಳೋದು ಎಂದು ಬೆಂಗಳೂರಿಗರೂ ಹೇಳಿದಂತೇ ಈ ಲೋಕದ ಪ್ರಯಾಣ ಮುಗಿಸುವುದು ಎಂದರ್ಥ. ನೋಡಿ ನಿಜವಾಗಿ ಶಂಖ ಊದುವುದು ಮಂಗಳಮಯ ಸನ್ನಿವೇಶಗಳಲ್ಲಿ ಮತ್ತು ಯುದ್ಧಗಳಲ್ಲಿ ಮಾತ್ರ! ಆದ್ರೆ ಗೂರಲು ಉಬ್ಬಸದ ಮುದುಕರು ಚಳಿಗಾಲದಲ್ಲಿ ಕೆಲವೊಮ್ಮೆ ತಾಳಲಾರದೇ ಮೇಲಕ್ಕೆ ಹೋಗಿಬಿಡುತ್ತಾರೆ. ಬೆಳ್ಳಂಬೆಳಿಗ್ಗೆ ಸುದ್ದಿಮಾಡಲೆಂದೇ ಇರುವ ಕೆಲವು ಜನ "ಗೊತ್ತಿಲ್ವಾ..... ಅಂವ ಶಂಖ ಊದಿಬಿಟ್ಟ" ಎನ್ನುತ್ತಾ ಬರುವುದೂ ಇರುತ್ತದೆ. ಶಂಖ ಊದುವುದಕ್ಕೂ ಅದಕ್ಕೂ ನಿಜವಾಗಿಯೂ ಸಂಬಂಧವಿಲ್ಲ, ದ್ರೋಣಚಾರ್ಯರು, ಶ್ರೀಕೃಷ್ಣ ಶಂಖ ಊದಿದಾಗ ಹೋದರು ಎಂಬ ಕಾರಣಕ್ಕೋ ಏನೋ ಅದನ್ನು ಹೀಗೆ ಬಳಸುತ್ತಿರುವುದು ವಿಪರ್ಯಾಸ. ಟಿವಿ ಜ್ಯೋತಿಷಿಗಳು ಗುರು ಮತ್ತು ಗುರೂಜಿ ಎಂಬ ಪದಗಳಿಗೆ ಸ್ಥಾನಪಲ್ಲಟ ಮಾಡಿಸಿದಂತೇ, ಬೈಗುಳಕ್ಕೆ ’ಸಂಸ್ಕೃತ ಪದಗಳು’ ಎಂದು ಕೆಲವರು ಹೇಳಿದಂತೇ ಇಲ್ಲೂ ’ಶಂಖ ಊದು’ ಎಂಬುದರ ಈ ರೀತಿಯ ಬಳಕೆ ಕರ್ಣಕಠೋರವಾಗುತ್ತದೆ ಯಾಕೆಂದರೆ ಶಂಖ ಅವಮಂಗಳದ ಸಂಕೇತವಲ್ಲ, ಬದಲಾಗಿ ಅದು ವಿಜಯದ ಸಂಕೇತ.       

ಅಂದಹಾಗೇ ಶಂಖ ಊದುವುದಕ್ಕೂ ಈ ಕಥೆಗೂ ಸಂಬಂಧವೇನೂ ಇಲ್ಲ. ಆದರೂ ತಮಾಷೆಗಾಗಿ ಹೇಳುವುದು- ಇದು ಇಲಿಗಳು ಶಂಖ ಊದಿದ ಕಥೆ!

ಗಿಳಿಯು ಪಂಜರದೊಳಿಲ್ಲಾ ಶ್ರೀರಾಮರಾಮ
ಬರಿದೇ ಪಂಜರವಾಯ್ತಲ್ಲಾ

ಎಂದು ದಾಸರು ಹಾಡಿದರು. ದಾಸರಪದಗಳನ್ನು ಕದ್ದು ಬಳಸುತ್ತೇವೆ ಎಂಬ ಆಪಾದನೆ ಕೆಲವು ಸ್ನೇಹಿತರದು. ಅದು ಒಂದು ವರ್ಗಕ್ಕೆ ಮಾತ್ರ ಮೀಸಲು ಎಂಬುದು ಅವರ ಧೋರಣೆ. ನಮ್ಮದೋ ಹಾಗಲ್ಲ; ಉತ್ತಮವಾದುದು ಎಲ್ಲಿಂದ ಬಂದರೂ ನಾವದನ್ನು ಮುಕ್ತಮನದಿಂದ ಸ್ವಾಗತಿಸುತ್ತೇವೆ, ಸ್ವೀಕರಿಸುತ್ತೇವೆ. ಮತ್ತು ಹಾಗೆ ಸ್ವೀಕರಿಸಿದ್ದನ್ನು ಮನಸಾ ಅನುಮೋದಿಸುತ್ತೇವೆ, ಅನುಸರಿಸುತ್ತೇವೆ, ಅಸ್ವಾದಿಸುತ್ತೇವೆ, ಮತ್ತಷ್ಟು ಅಂಥದ್ದನ್ನೇ ಅಪೇಕ್ಷಿಸುತ್ತೇವೆ ವಿನಃ ಅದನ್ನು ಕದ್ದು ಬಳಸುವ ಜಾಯಮಾನ ನಮ್ಮದಲ್ಲ. ಹಾಗೆ ಹೇಳುವ ಕೆಲವರಿಗೆ ಅವರ ನೈತಿಕ, ಆಧ್ಯಾತ್ಮಿಕ ಕುಬ್ಜತನದ ಅರಿವಿಲ್ಲ!  ದಾಸರು ಈ ಹಾಡನ್ನು ಹಾಡಿದ್ದೂ ’ಶಂಖ ಊದಿದ್ದ’ರ ಕುರಿತೇ ಆಗಿದೆ. ಭಗವಂತನನ್ನು ಅಕ್ಕನಿಗೆ ಹೋಲಿಸಿ ಅವರು ಮುಂದುವರಿಸುತ್ತಾರೆ ಹೀಗೆ :

ಅಕ್ಕ ನಿನ್ನ ಮಾತು ಕೇಳಿ
ಚಿಕ್ಕದೊಂದು ಗಿಳಿಯಸಾಕಿದೆ
ಅಕ್ಕ ನೀನಿಲ್ಲದ ವೇಳೆ
ಬೆಕ್ಕುಕೊಂಡು ಪೋಯಿತಯ್ಯೋ

ಆತ್ಮವೆಂಬ ಗಿಳಿ ದೇಹವೆಂಬ ಪಂಜರದಲ್ಲಿ ಬಂಧಿಯಾಗಿರುತ್ತದೆ. ಭಗವಂತನೆಂಬ ಅಕ್ಕನ ಮಾತು ಕೇಳಿ ಸಾಕಿದೆ ಎನ್ನುತ್ತಾರೆ. ’ಅಕ್ಕ’ನಿಲ್ಲದ ವೇಳೆ ಬೆಕ್ಕು[ಯಮ] ಕದ್ದೊಯ್ದಿತು ಎನ್ನುತ್ತಾರೆ. ದಾಸರ ಪದ್ಯಗಳೆಲ್ಲವೂ ಅರ್ಥಗರ್ಭಿತವೇ. ಅವು ಭಗವಂತನನ್ನು ಭಕ್ತಿಮಾರ್ಗದಿಂದ ಸೇವಿಸಲು ಇರುವ ಸೋಪಾನಗಳು. ಅವುಗಳಲ್ಲಿಯೇ ಈ ಪದ್ಯ ಅತ್ಯಂತ ವಿಶಿಷ್ಟವಾಗಿದೆ.

ನೋಡಿ ಇದನ್ನೇ ನಾವು ಚಿಕ್ಕವರಿದ್ದಾಗ ತಮಾಷೆಗೆ ಬಳಸಿದ್ದುಂಟು. ದೇವರನ್ನು ತಮಾಷೆಯಾಗಿಯಾದರೂ ನೆನಪುಮಾಡಿಕೊಳ್ಳಬಹುದಂತೆ ಬಿಡಿ. ಕೆಲವೊಮ್ಮೆ ನಮ್ಮಲ್ಲಿ ಊಟಕ್ಕೆ ಕುಳಿತಾಗ ಗ್ರಂಥಗಳನ್ನೋ ಶ್ಲೋಕಗಳನ್ನೋ ಹೇಳುವುದಿರುತ್ತದೆ. ಹಾಗೆ ಹೇಳುತ್ತಾ ಪ್ರತೀ ಗ್ರಂಥ/ಶ್ಲೋಕದ ಕೊನೆಗೆ ರಾಮನಾಮ ಸ್ಮರಣೆ, ದೈವ ಸ್ಮರಣೆ, ಜೈಕಾರ  ಇತ್ಯಾದಿಯಾಗಿ ಹೇಳುವುದಿದೆ.

||ಭೋಜನಕಾಲೇ ಸೀತಾಕಾಂತ ಸ್ಮರಣಂ||ಎಂದಿರುವುದನ್ನು ಯಾರೋ ನನ್ನಂಥಾ ಕಿಡಿಗೇಡಿ ಯುವಕರು ತಿರುಚಿ ||ಭೋಜನಕಾಲೇ ಅಕಸ್ಮಾತ್ ಮರಣಂ ||ಎಂದು ಹೇಳಿಬಿಟ್ಟಿದ್ದರು! ಕಿವಿಗೆ ರಾಮಸ್ಮರಣೆಯೇ ಕೇಳಿದಂತೆನಿಸಿದ ಹಿರಿಯರು "ಜೈ ಜೈ ರಾಮ್" ಎಂದು ಹೇಳಿದಾಗ ಯುವಪಡೆಯ ಮುಖದಲ್ಲಿ ನಗು ತಡೆಯಲಾರದಾಗಿತ್ತು!  ಅದೇರೀತಿ ||ಹರಹರಾ ಶ್ರೀಚನ್ನಸೋಮೇಶ್ವರಾ|| ಎಂಬಲ್ಲಿ ||ಹರಹರಾ ಹರ್ಕಂಗಿ ಮಾಬ್ಲೇಶ್ವರಾ|| ಎಂದವರೂ ಇದ್ದಾರೆ. ಕೆಲವರಂತೂ ಅವರವರದ್ದೇ ಆದ ಶ್ಲೋಕಗಳನ್ನು ರಚಿಸಿ ಹೇಳುತ್ತಿದ್ದುದೂ ಉಂಟು. ಒಬ್ಬ ಪುಣ್ಯಾತ್ಮ ಇಡೀ ಕರ್ನಾಟಕದ ಜನತೆಯ ನಾನಾ ವಿಧದ ಸಿಹಿತಿನಿಸುಗಳ ವೈಖರಿಯನ್ನು ವರ್ಣಿಸಿ ಶ್ಲೋಕವೊಂದನ್ನು ರಚಿಸಿದ್ದು ನೆನಪಿಗೆ ಬರುತ್ತದೆ. ಒಬ್ಬ ಹುಡುಗನಿಗೆ ಮಾತ್ರ

ಶಾಂತಾಕಾರಂ ಭುಜಗ ಶಯನಂ
ಪದ್ಮನಾಭಂ ಸುರೇಶಂ |

ಎಂದಿರುವಲ್ಲಿ ಹೇಳುವಾಗ ಹೆದರಿಕೆಯೋ ಎಲ್ಲಿ ತಪ್ಪಿಹೋಗುತ್ತದೆಂಬ ಭಾವವೋ ಗೊತ್ತಿಲ್ಲ ಯಾವಾಗಲೂ ಹೀಗೇ ಹೇಳುತ್ತಿದ್ದ:

ಶಾಂತಾಕಾರಂ ಗಜಭುಜ ಶಯನಂ
ಪದ್ಮನಾಭಂ ಸುರೇಶಂ |

ಹೀಗೇ ನಮ್ಮ ಬಾಲ್ಯ ವಿವಿಧ ವಿನೋದಾವಳಿಗಳಿಂದ ಕೂಡಿದ್ದಿತ್ತು. ’ಮೇಲೆ’ ಹೋಗುವ ಪದಸೂಚಕವಾಗಿ ’ಹರಹರ ಹಾಕುವುದು’, ’ಗೋವಿಂದ ಹಾಕುವುದು’ ಎಂಬೆಲ್ಲಾ ಪರ್ಯಾಯ ಪದಗಳನ್ನು ಬಳಸುತ್ತಿದ್ದರು. ಇದು ಎಲ್ಲರಿಗೂ ಸಹಜ ಭಾವಾರ್ಥದಲ್ಲಿ ತೋರಿದರೂ ಸ್ಥಳಿಕರಿಗೆ ಮಾತ್ರ ಅದರ ಗೂಢಾರ್ಥ ತಿಳಿದುಬಿಡುತ್ತಿತ್ತು. ದಾಸರ ಪದಗಳನ್ನೂ ಶ್ಲೋಕಗಳನ್ನೂ ಕೆಲವೊಮ್ಮೆ ನಾವೇ ನಮಗೆ ಬೇಕಾದ ರೀತಿಯಲ್ಲಿ ತಿದ್ದಿಕೊಂಡು ತಮಾಷೆ ಮಾಡುವುದಿತ್ತು.

ನೀನೇಕೋ ನಿನ್ನ ಹಂಗೆಕೋ
ನಿನ್ನ ನಾಮದ ಬಲವೊಂದಿದ್ದರೆ ಸಾಕೋ

ಎಂಬ ಹಾಡನ್ನು ಪಟ್ಟಣದ ಜನರಿಗೆ ತಕ್ಕಹಾಗೇ ತಿದ್ದಿ,

ನೀನೆಕೋ ನಿನ್ನ ಹಂಗೇಕೋ
ನಿನಗೆ ನಾಮ ಹಾಕುವ ಬಲವೊಂದಿದ್ದರೆ ಸಾಕೋ

ಎಂದು ಹೇಳಿ ನಕ್ಕಿದ್ದೇವೆ. ಎಲ್ಲಾದರೂ ಬಂದ್, ಗಲಾಟೆ, ಮುಷ್ಕರ ನಡೆಯುತ್ತಿದ್ದರೆ ನಮ್ಮ ಹಾಡು ಇದು:

ಕಲ್ಲು ಸಿಕ್ಕರೆ ಕೊಳ್ಳಿರೋ
ನೀವೆಲ್ಲರು ಕಲ್ಲುಸಿಕ್ಕರೆ ಕೊಳ್ಳಿರೋ

ಕಲ್ಲು ಸಿಕ್ಕರೆ ಉರಿ ಬಲ್ಲವರೇ ಬಲ್ಲರು !
ಮೆಲ್ಲ ತೋಚಿದ ಎಡೆಗೆಲ್ಲ ಬಿಸಾಕಿರೋ

ಹೀಗೆಲ್ಲಾ ನಾನು ಬರೆದರೆ, "|ಶಾಂತಮ್ ಪಾಪಂ ಶಾಂತಂ ಪಾಪಂ| ಎನ್ನಪ್ಪಾ ಹಾಗೆಲ್ಲಾ ಅನ್ಬಾರ್ದು" ಎನ್ನುವ ಮಂದಿಯೂ ಇದ್ದಾರು! ಇದು ದಾಸರನ್ನೋ ಗ್ರಂಥ ರಚನೆಕಾರರನ್ನೋ ಟೀಕಿಸುವ ಪರಿಯಲ್ಲ; ಕೇವಲ ತಮಾಷೆಗಾಗಿ ಹೈಕಳು ಹಾಡಿಕೊಳ್ಳುವ ಪರಿ.

ಇಷ್ಟೆಲ್ಲಾ ಹೇಳಿದ್ದಾಯ್ತಲ್ಲಾ ಈಗ ಮುಖ್ಯ ಕಥೆಗೇ ಹೋಗಿಬಿಡೋಣ. ನಾವು ಚಿಕ್ಕವರಿದ್ದಾಗಿನ ದಿನಗಳ ಕಥೆ ಇದು. ನಮ್ಮೂರಲ್ಲಿ ಮನೆಯಲ್ಲಿ ರಾತ್ರಿಯಾಯ್ತೆಂದರೆ ಇಲಿಗಳ ಕಾಟ ಬಹಳವಾಗಿತ್ತು. ಇದ್ದಬದ್ದ ಸಾಮಾನು-ದಿನಸಿ, ತರಕಾರಿ, ಬಟ್ಟೆಗಳು, ಪುಸ್ತಕಗಳು ಎಲ್ಲವನ್ನೂ ಒಂದಷ್ಟು ತಿಂದು ಒಂದಷ್ಟು ಕಡಿದು ನಿತ್ಯ ತಮ್ಮ ಅಭರ್ತಳ[ಅಸಾಧ್ಯ ಉಪಟಳ] ತೋರಿಸುತ್ತಿದ್ದವು. ರಾತ್ರಿ ಮಲಗಿದಾಗ ಮೈಮೇಲೇ ಹರಿದಾಡುವಷ್ಟೂ ಅತಿರೇಕದ ಧೈರ್ಯ! ಎಲಾ ಇವುಗಳ ಹೀಗೇ ಬಿಟ್ಟರೆ ಸಾಧ್ಯವಿಲ್ಲ ಎಂದುಕೊಂಡ ಅಪ್ಪ ಇಲಿಬೋನನ್ನು ತಂದಿದ್ದ.[ನಮ್ಮಲ್ಲಿ ನಾವು ಅಪ್ಪ-ಅಮ್ಮನನ್ನು ಬಹುವಚನದಿಂದ ಕರೆಯುವುದಿಲ್ಲ, ಅವರು ನಮಗೆ ಅತ್ಯಂತ ಆಪ್ತರಲ್ಲವೇ? ಭಗವಂತನನ್ನು ಏಕವಚನದಿಂದ ಸಂಬೋಧಿಸಿದಂತೇ ಇಲ್ಲೂ ಹಾಗೇ.] ನಿತ್ಯ ರಾತ್ರಿ ಕೊಬ್ಬರಿ ತುಣುಕು ಏನಾದರೂ ಹಾಕಿ ಬೋನನ್ನು ಇಡುವುದು ವಾಡಿಕೆಯಾಯ್ತು. ಕೆಲವು ದಿನ ಮರಿ ಇಲಿಗಳೂ ಸೇರಿದಂತೇ ಮಧ್ಯಮ ತರಗತಿಯ ದೇಹದಾರ್ಡ್ಯತೆಯ ಇಲಿಗಳೂ ಬೋನಿನಲ್ಲಿ ಬಿದ್ದವು; ಬಿದ್ದು ಶಂಖ ಊದಿದವು!

ದೇಹದಾರ್ಡ್ಯತೆಯ ಬಗ್ಗೆ ಹೇಳುವಾಗ ತಕ್ಷಣಕ್ಕೆ ನೆನಪಾಯ್ತು. ಸೊಂಡಿಲಿಗಳು ನಮ್ಮಲ್ಲಿ ಅತಿ ಕಮ್ಮಿ ಇದ್ದವು. ಅವು ನಿಜಕ್ಕೂ ಪಾಪದವು. ಅಂತಹ ಮೂಷಿಕಗಳು ಅಪರೂಪಕ್ಕೊಮ್ಮೆ ಬರುತ್ತಿದ್ದವು. ಹೆಗ್ಗಣಗಳ ಕಾಟವೇ ಜಾಸ್ತಿ. ದಪ್ಪ ಹೊಟ್ಟೆಯ ೧೦ ಕೇಜಿ ತೂಕದ ಬೆಕ್ಕಿಗಿಂತಾ ದೊಡ್ಡಗಾತ್ರದ ಹೆಗ್ಗಣಗಳು ಎದುರಾದರೆ, ನಮ್ಮ ಪೋಲೀಸರಿಗೆ ವೀರಪ್ಪನ್ ಎದುರಾದಾಗಿನ ಪರಿಸ್ಥಿತಿಯಂತೇ ಆ ಬೆಕ್ಕುಗಳ ಸ್ಥಿತಿಯೂ ಆಗುತ್ತಿತ್ತೋ ಏನೋ!! ಎದುರಾಗುವ ಬೆಕ್ಕಿಗೆ ಲಬಕ್ಕನೆ ಎರಡು ಬಿಟ್ಟು ಓಡಿಸಿ ತಮ್ಮ ಕೆಲಸ ನಡೆಸಿಕೊಳ್ಳುವ ಹೆಗ್ಗಣಗಳೂ ಇದ್ದಿರಲು ಸಾಕು. ಅವು ಮಾಡುವ ಸಪ್ಪಳಕ್ಕೆ ಕಳ್ಳರು ಬಂದಿದ್ದಾರೆ ಎಂದೇ ತಿಳಿಯಬೇಕು. ಕಳ್ಳರು ಅಕಸ್ಮಾತ್ ಆ ಹೊತ್ತಿಗೆ ಹೊರಗೆ ಬಂದಿದ್ದರೆ, ಹೆಗ್ಗಣಗಳು ಮಾಡುವ ಸದ್ದುಕೇಳಿ ಯಾರೋ ಎಚ್ಚರವಾಗಿದ್ದಾರೆ ಎಂದುಕೊಂಡು ಓಡಿಹೋಗಬೇಕಾದ ಪರಿಸ್ಥಿತಿ! ಹಗಲಿಡೀ ಅಕ್ಕಪಕ್ಕದ ತೋಟ-ಗದ್ದೆಗಳ ನೆಲದಲ್ಲಿರುವ ಮಹಮಹಾ ದೊಡ್ಡ ಬಿಲಗಳಲ್ಲಿ ಅವುಗಳ ವಾಸ. ಸಂಜೆಯಾಗುತ್ತಲೇ ಮನೆಗಳತ್ತ ಸವಾರಿಯ ಆಗಮನ. ಆ ಕಾಲಕ್ಕೆ ಜೀವನ್ ಟೋನ್ ಮತ್ತು  ಚ್ಯವನ ಪ್ರಾಶ ಎಂಬ ಲೇಹ್ಯಗಳು ದೇಹವರ್ಧನೆಗೆ ಎಂದು ಜಾಹೀರಾತು ಬರುತ್ತಿತ್ತು. ಅಂತಹದೇನನ್ನೋ ತಿಂದು ಕೊಬ್ಬಿದ ರೀತಿ ಸಿಕ್ಸ್ ಪ್ಯಾಕ್ ಮಾಡಿಕೊಂಡು ಓಡಾಡುತ್ತಿದ್ದ ಹೆಗ್ಗಣಗಳ ಕಾಲದಲ್ಲಿ ಬೆಕ್ಕುಗಳೇ ಸೇರಿ ಇಲಿಗೆ ಗಂಟೆ ಕಟ್ಟಲು ತಯಾರಾಗಿದ್ದವೋ ಏನೋ! ಬೆಕ್ಕುಗಳಿಗೆ ಬದುಕಬೇಕೆಂಬ ಆಸೆ ಇತ್ತಲ್ಲಾ ಅದಕ್ಕೆ.

ಇಂಥಾಕಾಲಮಾನದಲ್ಲಿ ಅಪ್ಪ ಇಡುವ ಬೋನಿಗೆ ಬಿದ್ದ ಹೆಗ್ಗಣಗಳು ಕೆಲವು ತಪ್ಪಿಸಿಕೊಂಡು ಹೋಗಿಬಿಡುತ್ತಿದ್ದವು. ಬೋನು ಚಿಕ್ಕದಾಗಿದ್ದರಿಂದ ಒಳಗಡೆಯಿಂದ ಬಾಗಿಲನ್ನು ಒತ್ತಿ ತೆರೆದುಕೊಂಡು ಜಾರಿಕೊಳ್ಳುತ್ತಿದ್ದವು. ಬೆಳ್ಳಂಬೆಳಗ್ಗೆ ಇಲಿ ಬಿದ್ದಿದೆಯಾ ಎಂದು ನೋಡಲು ಮಹಡಿಯೇರಿ ಬರುತ್ತಿದ್ದ ಅಪ್ಪನನ್ನು ಕಂಡಾಗ ನಮಗೆ ದಾಸರ ಪದ ನೆನಪಾಗುತ್ತಿತ್ತು. ಅಪ್ಪನ ಹೆಸರೂ ರಾಮಚಂದ್ರ ಎಂದೇ ಆಗಿದ್ದರಿಂದ ಹಾಡು ಹೇಳಿಬರೆಸಿದ ಹಾಗಿತ್ತು.

ಇಲಿಯು ಪಂಜರದೊಳಿಲ್ಲ
ಶ್ರೀರಾಮರಾಮ ಬರಿದೇ ಪಂಜರವಾಯ್ತಲ್ಲಾ.

ಅಪ್ಪ ನಿನ್ನ ಮಾತು ಕೇಳಿ
ಒಪ್ಪಿ ಸಣ್ಣ ಬೋನು ಇರಿಸಿದೆ
ಅಪ್ಪ ನೀನಿಲ್ಲದ ವೇಳೆ
ತಪ್ಪಿಸ್ಕೊಂಡು ಹೋಯಿತಯ್ಯೋ ....

"ರಾಮನಿರುವ"ಎಂಬ ಇಲಿಯು
ರೋಮರಾಶಿ ಹೊದ್ದ ಇಲಿಯು
ನೇಮದಂತೆ ಎಲ್ಲಮೆದ್ದು
ನಾಮಹಾಕಿ ಹೋಯಿತಯ್ಯೋ ....

ಒಂಬತ್ಸಾರಿ ಬಡಿದು ನೂಕಿ
ತಿಂಬಷ್ಟ್ ಕೊಬ್ರಿ ತಿಂದುಕೊಂಡು
ನಂಬಿಕೂತ ನಮ್ಮನೆಲ್ಲಾ
ತುಂಬುಮನದಿ ಬೈದುಕೊಂಡು ...

ಹೇಳಲು ಮರೆತಿದ್ದೆ: ನಮ್ಮಲ್ಲಿ ಬೋನಿಗೆ ಪಂಜರ ಎನ್ನುವ ಗಾಂವ್ಟಿ ಪದ ಚಾಲ್ತಿಯಲ್ಲಿದೆ. ಇಲಿ-ಹುಲಿ ಇಂಥಾದ್ದನ್ನೆಲ್ಲಾ ಇಡುವುದಕ್ಕೆ ಬಳಸುವುದು ಬೋನು. ಗಿಳಿಯನ್ನು ಬಂಧಿಸಿಡುವುದು ಮಾತ್ರ ಪಂಜರ. ಆದರೆ ನಮ್ಮಲ್ಲಿ ಈ ಎಲ್ಲದಕ್ಕೂ ಪಂಜರ ಎಂಬ ಶಬ್ದವನ್ನೂ ಬಳಸುವುದುಂಟು. ಹೀಗಾಗಿ ಮೇಲಿನ ಹಾಡಿನಲ್ಲಿ ’ಇಲಿಯು ಪಂಜರದೊಳಿಲ್ಲ’ ಎಂದು ಬಳಸಿದ್ದು. ನಮಗೆ ನಮ್ಮೊಳಗೇ ನಗೆ ಮತ್ತು ಚರ್ಚೆ. ತಪ್ಪಿಸಿಕೊಂಡು ಹೋದ ಇಲಿ ತನ್ನ ಸಹಚರರಿಗೆ ಏನು ಹೇಳಿದ್ದೀತು ? 

"ಹೇಯ್ ನೋಡ್ರೋ ನೀವೆಲ್ಲಾ ರಾತ್ರಿ ಆ ಮನೆಗೆ ಹೋಗೀರಲ್ಲಾ ಹೋದಾಗ ಬಾಳ ಹುಷಾರಪ್ಪಾ .. ಅಲ್ಲಿ ಯಜಮಾನ್ರು ರಾಮ ಅಂತ, ಅವರು ಪಂಜರ ಇಡ್ತಾರೆ. ಅಪ್ಪಿ ತಪ್ಪಿ ಪಂಜರದಲ್ಲಿ ಬಿದ್ದುಗಿದ್ದೀರ ಮತ್ತೆ. ಅಕಸ್ಮಾತ್ ಪಂಜರದಲ್ಲಿ ಬಿದ್ರೂ ಇನ್ನೊಬ್ಬರನ್ನ ಸಹಾಯಕ್ಕೆ ಕೂಗಿ. ನಾವ್ಯಾರಾದ್ರೂ ಬಂದು ಮೇಲಿನಿಂದ ಬಾಗಿಲಿನ ಹಿಡಿಕೆಯಮೇಲೆ ಒತ್ತಡ ಹಾಕಿ ನಿಮ್ಮನ್ನ ತಪ್ಪಿಸ್ತೇವೆ. ಸುಮ್ನೇ ಇರ್ಬೇಡಿ ಆಯ್ತಾ...ಹಾಗೇನಾದ್ರೂ ಇದ್ರೆ  ಆಮೇಲೆ ಶಂಖ ಊದ್ಬೇಕಾಗ್ತದೆ" ಅಂತ ಮೀಟಿಂಗ್ ಕರೆದು ಹೇಳಿರಬೇಕು!

ಅದೆಲ್ಲಾ ಹೋಗ್ಲಿ, ಅನುಮಾನ ಬಂದ್ರೆ ಅದೆಷ್ಟೋ ದಿನ ಹೆಗ್ಗಣಗಳು ಬೋನು ಇರಿಸಿದ ದಿಕ್ಕಿನತ್ತ ಕೂಡ ಬರುತ್ತಿರಲಿಲ್ಲ. ಬೋನು ಇರಿಸುವವರಿಗೇ ಗಂಟೆಕಟ್ಟಿದರೆ ಹೇಗೆ ಅಂತ ಮೀಟಿಂಗ್ ನಲ್ಲಿ ಮಾತಾಡಿಕೊಂಡಿರಬಹುದು ಅಂತೀರಾ? ಹೋಗ್ಲಿ ಬಿಡಿ ಕಲಿಗಾಲ! ಸದ್ಯ ಮೀಸಲಾತಿ ಕೇಳಲೊಂದು ಮುಂದಾಗಲಿಲ್ಲ! "ನಿಮ್ಮ ಜಮೀನುಗಳಲ್ಲಿ ಕಾಯಮ್ಮಾಗಿ ವಾಸವಿರುವ ನಮಗೆ ಇಂತಿಷ್ಟು ಪಡೆಯಲು ಅರ್ಹರೆಂಬ ಹಕ್ಕನ್ನು ಕಡ್ಡಾಯ ಮಾಡತಕ್ಕದ್ದು" ಎಂದು ಇಲಿರಾಯ[ಇಲಿರಾಜ] ಘರ್ಜಿಸಿದ್ದರೆ ಇಂದಿನ ವಿಧಾನಸೌಧದ ವರೆಗೂ ಸುದ್ದಿಯಾಗುತ್ತಿತ್ತೇನೋ! ಅವುಗಳಿಗೂ ಮತ ಚಲಾಯಿಸುವ ’ಪ್ರಜಾಪ್ರಭುತ್ವ’ ಕಲ್ಪಿಸಿದ್ದರೆ ವೋಟ್ ಬ್ಯಾಂಕ್ ರಾಜಕಾರಣಿಗಳು ಅವುಗಳಿಗೆ ಬೆಂಬಲ ನೀಡುತ್ತಿದ್ದಿರಲೂ ಬಹುದಿತ್ತೇನೋ! ಬೇರೇ ಯಾರೇ ಶಂಖ ಊದಿದರೂ ಬ್ರಷ್ಟ ರಾಜಕಾರಣಿಗಳು ಮಾತ್ರ ಶಂಖ ಊದುವುದಿಲ್ಲ ನೋಡಿ! ನೀವೂ ಇಂಥಾ ಪದ್ಯಗಳನ್ನು ಕಲ್ಪಿಸಿಕೊಂಡು ಹಾಡಿ. ಮೀಸಲಾತಿ ಕೊಡಲಾಗುವುದಿಲ್ಲ ಮತ್ತೆ ಮೊದ್ಲೇ ಹೇಳ್ಬಿಟ್ಟಿದ್ದೀನಿ...ಇಲ್ಲೇನಿದ್ರೂ ನಿಮ್ಮ ಪದಭಂಡಾರ ಮತ್ತು ಅವುಗಳನ್ನು ಬಳಸುವ ಜಾಣ್ಮೆಯ ಕರಾಮತ್ತಿಗೇ ಮೆರಿಟ್ಟು. ಅಂದಹಾಗೇ ಶಂಖ ಊದುವ ಸುದ್ದಿ ಜಾಸ್ತಿ ಕೇಳಿ ನಿಮಗೆ ಬೇಜಾರಾಯ್ತೇನೋ ಅಲ್ವೇ ?

ಮಂಗಲಂ ಭಗವಾನ್ ವಿಷ್ಣುಃ
ಮಂಗಲಂ ಮಧುಸೂದನಃ |
ಮಂಗಲಂ ಪುಂಡರೀಕಾಕ್ಷೋ
ಮಂಗಲಂ ಗರುಡಧ್ವಜ ||

ಮಂಗಲ ಹಾಡಿಬಿಟ್ಟಿದ್ದೇನೆ, ಹೋಗಿಬನ್ನಿ, ಮತ್ತೆ ಸಿಗೋಣ, ಅಲ್ಲೀತನಕ ನೋಡ್ತಾ ಇರಿ.......೨೪/೭ ....... ಓ ಸಾರಿ ಸಾರಿ ಟಿವಿ ಚಾನೆಲ್ ಹುಡ್ಗೀರು ಹುಡ್ಗರು ಹೇಳಿದ್ದು ಅನಗತ್ಯವಾಗಿ ಕಂಠಪಾಠ ಆಗಿಬಿಟ್ಟಿದೆ,  ಬ ಬಾಯ್...