ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, January 14, 2011

ಹರಿವ ತೊರೆಗಳು ಬರಿದಾದ ಕಥೆಯು !


ಹರಿವ ತೊರೆಗಳು ಬರಿದಾದ ಕಥೆಯು !


ಮಿತ್ರಾ ರವಿ, ನಮಸ್ಕಾರಗಳು.

ಉಭಯಕುಶಲೋಪರಿ ನಿತ್ಯವೂ ಸಾಂಪ್ರತ! ವ್ಯತ್ಯಾಸವಿಷ್ಟೇ ನೀನು ದಿನವೂ ಉದಿಸಿ ದಿನವೂ ಮುಳುಗಿ ಮತ್ತದೇ ಕ್ರಿಯೆಯಲ್ಲಿರುತ್ತಾ ಜಗತ್ತಿನ ಪ್ರತಿ ಜೀವಸಂಕುಲಕ್ಕೇ ಮಿತ್ರನಾಗಿದ್ದೀಯ, ನಾವೋ ಹುಟ್ಟಿದಾಘಳಿಗೆಯಿಂದ ದಿನವೂ ಮುದುಕಾಗುತ್ತಾ ನಡೆದಿದ್ದೇವೆ ಬಿಟ್ಟರೆ ಜಗತ್ತಿನ ಬಗ್ಗೆ ನಿನ್ನಷ್ಟು ಕಾಳಜಿ ಇಟ್ಟುಕೊಂಡವರಲ್ಲ.

ವಿಜ್ಞಾನಿಗಳು ಹೇಳಿದರು ನೀನು ಕರಗುತ್ತಿದ್ದೀಯ ಒಂದುದಿನ ಪೂರ್ತಿ ಕರಗೇ ಹೋಗುತ್ತೀಯ ಅಂತ! ನನಗೆ ಆ ಮಾತಿನಲ್ಲಿ ಸ್ವಾರಸ್ಯಕಾಣಿಸಲಿಲ್ಲ. ನೀನು ಇನ್ನೂ ಪ್ರಖರವಾಗುತ್ತಲೇ ನಡೆಯುತ್ತೀಯ ಬಿಡು. ನಿನ್ನ ಹತ್ತಿರ ಬರಲು ಮನುಜರಾದ ನಮಗೆ ಅವಕಾಶ ಸಿಕ್ಕಿದ್ದರೆ ನಿನ್ನನ್ನು ನಾವೇ ಕೊಯ್ದು ಒಯ್ದು ಮನೆಯಲ್ಲಿ ದೀಪಕ್ಕಾಗಿ ಬಳಸುತ್ತಾ ಕರಗಿಸಿಬಿಡುತ್ತಿದ್ದೆವು! ಆದರೆ ನಿನ್ನ ಅಗಾಧ ಪರ್ಸನಾಲಿಟಿ ಇದೆಯಲ್ಲಾ ಅದು ಹತ್ತಿರ ಬರುವುದಿರಲಿ ಸರಿಯಾಗಿ ನೋಡಲೂ ಬಿಡುವುದಿಲ್ಲ. ಹೀಗಾಗಿ ನಿರುಪಾಯರಾಗಿ ಕುಳಿತಿದ್ದೇವೆ. ನಮ್ಮಲ್ಲೇ ವಿಜ್ಞಾನಿಗಳೆನಿಸಿಕೊಂಡವರಿಗೆ ತಿನ್ನಲಾರದ ದ್ರಾಕ್ಷಿ ಹುಳಿಯಾಗಿದೆ!

ಹೌದೂ ಕೇಳುವುದಕ್ಕೇ ಮರೆತೆ ನಿನ್ನೊಳಗೇನಿದೆ ಮಹನೀಯ ? ನಾವೆಲ್ಲಾ ಹಲವು ಬ್ಯಾಟರಿಗಳನ್ನೋ ಜನರೇಟರ್ ಗಳನ್ನೋ ಬಳಸಿದರೂ ಬೆಳಕನ್ನು ಪಡೆಯುವುದು ಕೇವಲ ಎಣಿಕೆಯಮೇಲೆ. ಆದರೆ ದಿನವೂ ಅದೇ ಬೆಳಕು ಹರಿಸುವ, ಅದರೊಂದಿಗೆ ಶಾಖನೀಡುವ ಅಲ್ಲದೇ ನಿನ್ನ ಕಿರಣಗಳ ರೂಪದಿಂದ ಕಿಣ್ವಗಳನ್ನು ಆಯಾ ಜೀವಿಗಳಲ್ಲಿ ಸೃಷ್ಟಿಸುವ ನಿನಗೆ ಅಷ್ಟೆಲ್ಲಾ ಶಕ್ತಿ ಎಲ್ಲಿಂದ ಬಂತು ? ಹೇಳಲಾರೆಯಾ ? ಹಾಗಂತ ನಸುಕಿನಲ್ಲಿ ನೀನು ಉದಿಸುವಾಗ ಮತ್ತು ಸಾಯಂಕಾಲ ನೀನು ಸಮುದ್ರದಲ್ಲಿ ಮುಳುಗಿಹೋಗುವಾಗ[!]ನಾವು ನಿನ್ನನ್ನು ಕೆಂಪಗೆ ಕಾಣುತ್ತೇವೆ. ಆಗಮಾತ್ರ ನಿನ್ನನ್ನು ನೋಡುತ್ತೇವೆ, ಆದರೂ ನಮಗೆ ನಿನ್ನ ಗಾತ್ರದ ಲೆಕ್ಕ ಹಾಕುವುದು ಸಾಧ್ಯವೇ ಇಲ್ಲ. ಕಣ್ಣು ಮೂಗು ಕೈಕಾಲು ಏನೂ ಇಲ್ಲದ ನಿನಗೆ ಪೂರ್ವದ ದಿಕ್ಕು ಇಲ್ಲೇ ಇದೆ ಮತ್ತು ಪಶ್ಚಿಮ ಆಕಡೆಗೇ ಇದೆ ಎಂದು ಯಾರು ಹೇಳಿಕೊಡುತ್ತಾರೆ ಮಾರಾಯ? ಒಂದೇಒಂದು ದಿನ ಉತ್ತರಕ್ಕಾಗಲೀ ದಕ್ಷಿಣಕ್ಕಾಗಲೀ ಉದಯಿಸಲಿಲ್ಲವಪ್ಪಾ, ಹಾಗಂತ ಪಶ್ಚಿಮದಿಂದಲೂ ಉದಯಿಸಲಿಲ್ಲ. ಸದಾ ಒಂದೇ ದಿಕ್ಕು-ಪೂರ್ವ! ನಿನ್ನ ಈ ಕರ್ತವ್ಯಶೀಲ ಜೀವನ ಅಪೂರ್ವ!

ವೇದಾಂತಿಗಳು ನಿನ್ನನ್ನು ಸೂರ್ಯನಾರಾಯಣನೆಂದರು, ಭಾಸ್ಕರನೆಂದರು, ದಿವಾಕರ, ಪ್ರಭಾಕರ ಹೀಗೆಲ್ಲಾ ಹೇಳಿಕೊಳ್ಳುತ್ತಾ ನಮಿಸಿದರು, ಸೂರ್ಯನಮಸ್ಕಾರವೆಂಬ ವ್ಯಾಯಾಮವನ್ನೇ ಹುಟ್ಟುಹಾಕಿ ಹೊಸ ಆಯಾಮ ಕಂಡುಕೊಂಡರು. ಆದರೂ ’ಮಿತ್ರಾ’ ಎಂದರಲ್ಲ ಅದೇ ನನಗೆ ಬಹಳ ಹಿಡಿಸಿತು. ಯಾಕೆ ಗೊತ್ತೋ ಒಂದು ದಿನ ನೀ ಬರದಿದ್ದರೆ, ನೀನಿರದಿದ್ದರೆ ನಮಗೆ ಬದುಕಲೇ ಸಾಧ್ಯವಿಲ್ಲ ಇಲ್ಲಿ. ನಾವು ಬದುಕಬೇಕೆಂದಿದ್ದರೆ ನೀನು ಬರಲೇಬೇಕು. ಹೀಗಾಗಿ ನಾವೆಲ್ಲಾ ಜೀವಸಂಕುಲಗಳ ಸಂಘ ನಿನ್ನನ್ನು ಸನ್ಮಾನಿಸಿದರೂ ಅದು ನಿನ್ನ ಘನತೆಗೆ ತೀರಾ ಕಮ್ಮಿಯೇ ಬಿಡು. ಆದರೂ ಸನ್ಮಾನಿಸಲು ನೀನು ಬಿಡುವುದಿಲ್ಲವಲ್ಲ.

ಹುಟ್ಟಿದಾಗಿನಿಂದ ಹಲವು ಬದಲಾವಣೆಗಳನ್ನು ಸುತ್ತಲ ಪರಿಸರಗಳಲ್ಲಿ ಕಂಡಿದ್ದೇವೆ. ಹಿರಿಯರು ಕಾಲನ ಕರೆಯಲ್ಲಿ ಕಾಲವಾದರು. ಕಿರಿಯರು ಬೆಳೆಯುತ್ತಾ ಹಿರಿಯರಾದರು. ಬೀಜ ಮೊಳಕೆಯೊಡೆದು, ಸಸಿಯಾಗಿ, ಗಿಡವಾಗಿ, ಮರವಾಗಿ,ಅದರಲ್ಲಿ ಮೊಗ್ಗರಳಿಸಿ ಹೂವಾಗಿ, ಕಾಯಾಗಿ, ಹಣ್ಣಾಗಿ ಆ ಹಣ್ಣಿನಲ್ಲಿ ಮತ್ತೆ ಬೀಜರೂಪ ಕಂಡೆವು! ಕಾಂಡವ ವನವನ್ನು ಅಗ್ನಿ ತನ್ನ ಕೆನ್ನಾಲಿಗೆಯಿಂದ ಆಹಾರವಾಗಿ ಸ್ವೀಕರಿಸಲು ಸಾಕಷ್ಟು ಸಮಯ ಹಿಡಿಯಿತಂತೆ. ಆದರೆ ಇಂದಿನ ನಮ್ಮ ರಾಜಕಾರಣಿಗಳು, ಕಾಡುಗಳ್ಳರು ಇಡೀ ವಿಶ್ವದ ಕಾಡನ್ನೆಲ್ಲಾ ನೈವೇದ್ಯವಾಗಿ ಸ್ವೀಕಾರಮಾಡುವ ವೇಗವನ್ನು ನೋಡಿದರೆ ಕೆಲವೇ ವರ್ಷಗಳಲ್ಲಿ ಕಾಡು ಎಂಬುದು ಕಥೆಯಾಗುತ್ತದೆ!

೩೦ ವರ್ಷಗಳಲ್ಲಿ ಆದ ಪರಿಸರದ ಬದಲಾವಣೆಯೇ ನಮ್ಮನ್ನೆಲ್ಲಾ ತಲ್ಲಣಗೊಳಿಸಿದೆ ಮಿತ್ರಾ. ನಾವೆಲ್ಲಾ ಚಿಕ್ಕವರಿದ್ದಾಗ ಬೇಸಿಗೆಯೇ ಇದ್ದರೂ ಹರಿವತೊರೆಗಳಿದ್ದವು. ಅಲ್ಲಿಂದ ಹರಿವ ನೀರನ್ನು ಹಲವು ಮೃಗ,ಪಕ್ಷಿ,ಪಶುಗಳು ಕುಡಿಯುವುದರ ಜೊತೆಗೆ ಕೃಷಿಕರೂ ಅಲ್ಲಲ್ಲಿ ಬಳಸುತ್ತಿದ್ದರು. ನೂರಾರು ಜಾತಿಯ, ಬಣ್ಣದ, ಗಾತ್ರದ, ರೂಪದ ಹಕ್ಕಿಗಳು ಆ ತೊರೆಗಳ ಬದುವಿನಲ್ಲಿ ಇರುವ ಮರಗಳಲ್ಲಿ ಗೂಡುಕಟ್ಟಿಕೊಂಡು ಸ್ವಚ್ಛಂದವಾಗಿ ವಿಹರಿಸುತ್ತಾ ಆರಾಮಾಗಿದ್ದವು. ಬರುಬರುತ್ತಾ ಆ ಎಲ್ಲಾ ಹರಿವ ತೊರೆಗಳು ಬರಿದಾದವು, ಅವೂ ಕಾಲಗರ್ಭದಲ್ಲಿ ಕಥೆಯಾದವು. ಗಿಡಮರಗಳು ಕಡಿಯಲ್ಪಟ್ಟವು, ಅವುಗಳನ್ನಾಶ್ರಯಿಸಿದ ಜೀವಸಂಕುಲಗಳು ಅಲ್ಲಿಂದ ಎಲ್ಲಿಗೋ ಹೋದವೋ ನಾಶವಾದವೋ ತಿಳಿಯದಾದೆವು-ಅಂತೂ ಕಾಣದಾದವು.

ಓಡಾಟಕ್ಕೆ ರಸ್ತೆಬೇಕು ನಿಜ. ನಮ್ಮ ಸಂಖ್ಯೆಯ ಅತೀವ ಹೆಚ್ಚಳದಿಂದ ಮತ್ತು ನಮ್ಮ ಓಡಾಟದ ಹುಚ್ಚಿನಿಂದ ತಿರುಗಾಟ ಜಾಸ್ತಿಯಾಯಿತು. ತಿರುಗಲು ವಾಹನಗಳು ಬಂದವು, ಎಲ್ಲಾ ಕೆಲಸಗಳಿಗೂ ಯಂತ್ರಗಳು ಬಂದವು. ನಮ್ಮ ಅವಸರಗಳಿಗೆ ತಕ್ಕಂತೇ ವಾಹನಗಳ ಭರಾಟೆ ಅತಿಯಾಗಿದ್ದರಿಂದ ಈಗ ಇದ್ದ ರಸ್ತೆಗಳೆಲ್ಲಾ ಆಗಲಗಲ ಅಗಲಗಲವಾಗುತ್ತಾ ಚತುಷ್ಪಥ, ಪಂಚಪಥ, ಷಷ್ಟಪಥ, ಅಷ್ಟಪಥಗಳಾಗುತ್ತಾ ಮುಂದೊಮ್ಮೆ ಜಾಗವೆಲ್ಲಾ ರಸ್ತೆಗಳಿಗೇ ಮೀಸಲಾಗುವ ಕಾಲವನ್ನು ನಾವೇ ಕೈಯಾರೆ ತಂದುಕೊಳ್ಳುವೆವು. ಕೇವಲ ೩೦ ವರ್ಷಗಳ ಹಿಂದೆ ಜೀವನಕ್ರಮದಲ್ಲಿ ಇಷ್ಟೆಲ್ಲಾ ತ್ವರಿತಗತಿಯಿರಲಿಲ್ಲ. ಜನರಲ್ಲಿ ಪರಸ್ಪರ ಅನ್ಯೋನ್ಯತೆಯಿತ್ತು. ಯಂತ್ರಗಳ ಬಳಕೆ ತೀರಾ ಕಮ್ಮಿಯಿತ್ತು. ಜನರು ಉಪಜೀವನಕ್ಕೆ ಬೇಕಾಗಬಹುದಾದ ಆಹಾರ-ವ್ಯವಹಾರಗಳಲ್ಲಷ್ಟೇ ತೊಡಗಿದ್ದರು.

ಏನಾಯಿತು ಎಂದು ಚಕಿತರಾಗಿ ನೋಡುತ್ತಿರುವಂತೇ ಜೀವನದ ಮೌಲ್ಯಗಳೇ ಬುಡಮೇಲಾದವು. ಝಣ ಝಣ ಕಾಂಚಾಣಕ್ಕೆ ತೀರಾ ಪ್ರಾಮುಖ್ಯತೆ ಕೊಡಲಾಯಿತು. ಮಾನವನ ಗುಣ-ಸ್ವಭಾವಗಳಿಗೆ ಯಾವ ಮಹತ್ವವೂ ಕಾಣಲಿಲ್ಲ. ಎಲ್ಲರಿಗೂ ತಾನು ಬೇಗ ಬೇಗ ಹಣವನ್ನು ಬಾಚಿ ಸಿರಿವಂತನಾಗಬೇಕು ಎಂಬ ಹಪಹಪಿಕೆ ಬಂತು. ನಮ್ಮಲ್ಲೇ ಹಲವರು ಅಡ್ಡದಾರಿಯಲ್ಲಿ ದುಡ್ಡುಮಾಡಲು ತೊಡಗಿದೆವು, ಗಣಿಗಳನ್ನು ಮಾಡಿದೆವು, ಕಾಡುಕಡಿದೆವು, ತೊರೆನೆರೆಗಳನ್ನೆಲ್ಲಾ ಮುಚ್ಚಿಹಾಕಿ ಕಟ್ಟಡಗಳನ್ನೋ ಕೈಗಾರಿಕಾ ವಸಾಹತುಗಳನ್ನೋ ಕೃಷಿಭೂಮಿಯನ್ನೋ ಆಗಿ ಪರಿವರ್ತಿಸಿದೆವು. ಪರಿಸರದಮೇಲೆ ಈ ನಮ್ಮ ದಾಳಿ ನಿತ್ಯವೂ ನೀನು ಉದಯಿಸಿದಷ್ಟೇ ಸತ್ಯವಾಯಿತು. ಅಳಿದುಳಿದ ಜೀವಸಂಕುಲಗಳು ತಮ್ಮ ಉಳಿವಿಗಾಗಿ ಇರುವ ಚೂರುಪಾರು ಕಾಡುಗಳಲ್ಲಿ ಸೇರಿಕೊಂಡವು. ಆದರೆ ಅಲ್ಲಿ ಅವುಗಳಿಗೆ ಆಹಾರವೇ ಸಾಲದಾಯಿತು!

ದಿನವೂ ಉದಯಿಸುವ ಮತ್ತು ಎಲ್ಲರ ಯೋಗಕ್ಷೇಮವನ್ನು ನೋಡಿಕೊಳ್ಳುವ ನೀನು ಇದನ್ನೆಲ್ಲಾ ಗಣಿಸದಾದೆಯೋ ಅಥವಾ ಗಣಿಸಿಯೂ ಸುಮ್ಮನಾದೆಯೋ ತಿಳಿಯದಾಯಿತು. ವರ್ಷಕ್ಕೆ ಎರಡಾವರ್ತಿ ಪಥಬದಲಿಸುವ ನಿನ್ನ ಪರಿಕ್ರಮವೇನೋ ಸರಿಯೇ ಆದರೆ ಇನ್ನೆಷ್ಟು ದಿನ ಈ ಭೂಮಿಯಲ್ಲಿ ಮಿಕ್ಕುಳಿದ ಜೀವಸಂಕುಲಗಳಿಗೆ ಅವಕಾಶ ಎಂಬುದು ತಿಳಿಯದಾಯಿತಾಲ್ಲ ಮಿತ್ರಾ. ಈಗಿನ ತೀವ್ರತರ ಬದಲಾವಣೆಗಳನ್ನು ಕಂಡರೆ ಭೂಮಿ ಗುಂಡಗಿದೆ ಎಂದು ಬೋಳುಭೂಮಿಯನ್ನು ಕಾಣುವ ದಿನ ಹತ್ತಿರವೇ ಬರುತ್ತಿದೆಯೇನೋ ಅನಿಸುತ್ತಿದೆ. ಅದೇನೋ ಓಝೋನ್ ಪದರ ಅಂತ ನಮ್ಮಲ್ಲೇ ಕೆಲವರು ಒಂದಷ್ಟು ದಿನ ಕುಣಿದಾಡಿದರು. ಯಾವುದು ಓಝೋನ್ ಪದರವೋ ಯಾವುದು ಅತ್ಯಾವಶ್ಯಕವೋ ಅದರ ಅರಿವನ್ನು ನಾವು ಪಡೆಯುವ ಮೊದಲೇ ಝಣ ಝಣದ ಝಣತ್ಕಾರಕ್ಕೆ ನಮ್ಮನ್ನೇ ನಾವು ಮಾರಿಕೊಳ್ಳಹತ್ತಿದೆವು!

ನಿನ್ನ ಕಿರಣಗಳು ಸುಂದರ ಹಸಿರು ಗಿಡಮರಗಳಮೇಲೆ, ಹುಲ್ಲುಗಾವಲಿನಮೇಲೆ ಬೀಳುವುದನ್ನು ನೋಡಬೇಕು, ಅಲ್ಲಿ ಬಣ್ಣಬಣ್ಣದ ಜೀವಸಂಕುಲಗಳು ಆಡುವುದನ್ನು, ಬದುಕುವುದನ್ನು ಕಾಣಬೇಕೆಂಬ ನಮ್ಮ ಕೆಲವರ ಅಪೇಕ್ಷೆ ಕೇವಲ ಮನಸ್ಸಿನಲ್ಲಿಯೇ ಉಳಿಯಿತು. ದೂರದಿಂದಲೇ ತನ್ನ ಪಥವನ್ನು ಬದಲಿಸುವೆನೆಂದು ಟಾಟಾ ಮಾಡಿ ಹೋಗುವ ನಿನ್ನಲ್ಲಿ ಒಂದೇ ಪ್ರಶ್ನೆ ಮಿತ್ರಾ .......ಬರಿದಾಗಬಹುದಾದ ಈ ಭೂಮಿಯಲ್ಲಿ ಅಳಿದುಹೋದ ಗಿಡಮರಗಳ, ಜೀವಸಂಕುಲಗಳ ಮರುಹುಟ್ಟು ಸಾಧ್ಯವೇ? ಯುಗದ ಪಾದದಲ್ಲೇ ಇರುವಾಗ ಇಷ್ಟಾದರೆ ಯುಗಾಂತ್ಯವಾಗುವ ಹೊತ್ತಿಗೆ ಇನ್ನೇನು ಉಳಿಯಲು ಸಾಧ್ಯ? ತುಂಬೇ ಗಿಡಕ್ಕೆ ಏಣಿಹಾಕುವ ಆಕಾರಕ್ಕೆ ಮಾನವ ರೂಪತಳೆಯುತ್ತಾನೆ-ಆಗ ಈ ಯುಗಾಂತ್ಯವಾಗುತ್ತದೆ ಎನ್ನುತ್ತವೆ ವೇದಾಂತಗಳು! ಆದರೂ ಗೆಳೆಯಾ ನಿನ್ನಲ್ಲಿ ಒಂದು ಅರಿಕೆ.... ನಮ್ಮ ಜೀವನದಲ್ಲಿ ಒಂದಷ್ಟು ಗಿಡಮರಗಳೂ ಉಳಿದ ಜೀವಸಂಕುಲಗಳೂ ಅಳಿಯದಂತೇ ಏನಾದರೂ ನಿನ್ನದಾದ ಬೇಲಿವ್ಯವಸ್ಥೆ ಮಾಡುತ್ತೀಯಾ ? ಋಣವಿದ್ದರೆ ಮತ್ತೆ ನಿನ್ನನ್ನೂ ನಿನ್ನ ಹೊಳೆಯುವ ಎಳೆಯ ಕಿರಣಗಳನ್ನೂ ಸದಾ ಆ ಹಸಿರುದ್ಯಾನಗಳ ಮೇಲೆ ಕಾಣಬಯಸುತ್ತೇವೆ, ಕೇಳಿಸಿಕೊಂಡೆಯಲ್ಲ? ನಮಸ್ಕಾರ.