ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, June 11, 2012

ಮಾತನಾಡಲು ಹೊರಟರೆ ಹೊತ್ತು ಕಳೆಯುವುದು ತಿಳಿಯುವುದಿಲ್ಲವಲ್ಲ ?

ಶ್ರೀ ಎದುರ್ಕಳ ಈಶ್ವರ ಭಟ್ ರ ಚಿತ್ರಋಣ: ಫೇಸ್ ಬುಕ್ 
ಮಾತನಾಡಲು ಹೊರಟರೆ ಹೊತ್ತು ಕಳೆಯುವುದು ತಿಳಿಯುವುದಿಲ್ಲವಲ್ಲ ?

ಬರೆಯದೇ ವಾರ ಕಳೆಯಿತು. ಬರವಣಿಗೆಯನ್ನು ನಿರೀಕ್ಷಿಸುವವರು ತುಂಬಾ ಜನ ಇದ್ದೀರಿ ಎಂಬುದು ಗೊತ್ತು. ಆದರೂ, ಹೊಸದಾಗಿ ಆರಂಭಗೊಂಡ ’ಉದ್ದಿಮೆ’ಯ ಕಡೆ ಗಮನ ಹರಿಸುತ್ತಿದ್ದೇನೆ. ಉದ್ದಿಮೆಯ ಬಗ್ಗೆ ನಿಮಗೆ ಮತ್ತೊಮ್ಮೆ ಹೇಳಿದರೆ ಜಾಸ್ತಿಯಾಗಬಹುದೇನೋ ಎಂಬ ಆತಂಕ, ಕಮ್ಮಿಯಾದರೆ ನಿಮಗದರಬಗ್ಗೆ ಮಾಹಿತಿ ಸಾಕಾಗದೇನೋ ಎಂಬ ಚಿಂತೆ, ಹೀಗೇ ಎರಡೂ ಮಗ್ಗಲುಗಳನ್ನು ಅವಲೋಕಿಸುತ್ತಾ ಉದ್ದಿಮೆಯ ಹೆಜ್ಜೆಗಳ ಬಗ್ಗೆ ಕಾರ್ಯಗತವಾಗಿ ಮುಂದಿನ ಹೆಜ್ಜೆ ಇಡುತ್ತಿದ್ದೆ. ಯಾವುದೇ ಉದ್ದಿಮೆದಾರರು, ವೃತ್ತಿಪರರು, ಸೇವೆಗಳನ್ನು ಒದಗಿಸುವವರು, ಕಲಾವಿದರು, ತಂತ್ರಜ್ಞರು ಮೊದಲಾದ ಎಲ್ಲಾ ರಂಗಗಳವರು ತಮ್ಮಬಗ್ಗೆ ಮತ್ತು ತಮ್ಮಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಸಾರ್ವಜನಿಕ ಗೊತ್ತುವಳಿ ಅಥವಾ ತಿಳುವಳಿಕೆ ಮೂಡಿಸುವ ಕೆಲಸವನ್ನು ನಮ್ಮ ಬಳಗದ ’ಉದ್ದಿಮೆ ಮೀಡಿಯಾ ನೆಟ್ವರ್ಕ್ಸ್’ ನಡೆಸುತ್ತದೆ. ಆ ನಿಟ್ಟಿನಲ್ಲಿ ಹಲವು ಕಾರ್ಯಯೋಜನೆಗಳನ್ನು ಹಮ್ಮಿಕೊಂಡ ನನಗೆ ಮಿತ್ರ ಶ್ರೀ ಶಿವಶಂಕರ್ ಅವರು ಫೋನಾಯಿಸಿ ಬ್ಲಾಗ್ ನಿರ್ಮಾಣದ ಬಗ್ಗೆ ಸಲಹೆ ಕೇಳಿದ್ದರೂ ಸಹಕರಿಸಲು ತನ್ಮಧ್ಯೆ ಸಾಧ್ಯವಾಗಿಲ್ಲ, ಇನ್ನೆರಡು ವಾರಗಳಲ್ಲಾದರೂ ಅವರನ್ನು ಕಂಡು ಅವರಿಗೆ ಅದರ ಬಗ್ಗೆ ತೋರಿಸಿಕೊಡುವ ತರಾತುರಿ ಮನಸ್ಸಿನಲ್ಲಿದೆ.

ಗೀತೆಯಲ್ಲಿ ಕಾಮ್ಯಕರ್ಮ ಮತ್ತು ನ-ಕಾಮ್ಯಕರ್ಮದ ಬಗ್ಗೆ ಉಲ್ಲೇಖವಿದೆ. ದಾರಿಯಲ್ಲಿ ಒಬ್ಬ ಹೋಗುತ್ತಿರುವಾಗ ಸಾವಿರ ರೂಪಾಯಿಗಳ ನೋಟೊಂದು ಬಿದ್ದಿರುವುದು ಕಾಣಿಸುತ್ತದೆ. ಆತ ಅದನ್ನು ಎತ್ತಿಕೊಂಡು ತನ್ನ ಯಾವುದೇ ಖರ್ಚಿಗೆ ಬಳಸಿಕೊಳ್ಳುತ್ತಾನೆ, ಇನ್ನೊಬ್ಬ ದಾರಿಹೋಕನಿಗೂ ಹಾಗೇ ಸಾವಿರ ರೂಪಾಯಿಗಳ ನೋಟು ಸಿಕ್ಕಿತು, ಆತನೂ ಅದನ್ನು ಎತ್ತಿಕೊಂಡು ಮುಂದೆಸಾಗಿ ಅನಾಥಾಶ್ರಮವೊಂದರ ಮಕ್ಕಳಿಗೆ ಅದರಿಂದಾಗುವ ಉಪಯೋಗ ಕಲ್ಪಿಸುತ್ತಾನೆ. ಮೊದಲನೆಯವನದು ಕಾಮ್ಯಕರ್ಮ, ಎರಡನೆಯವನದು ನ-ಕಾಮ್ಯಕರ್ಮ/ನಿಷ್ಕಾಮ್ಯ ಕರ್ಮ. ಮೊದಲನೆಯವ ಕ್ಷಣಿಕ ಫಲವನ್ನು ಪಡೆಯುತ್ತಾನೆ, ಎರಡನೆಯದಕ್ಕೆ ಪಾರಮಾರ್ಥಿಕ ಉತ್ತಮ ಫಲ ದೊರೆಯುತ್ತದೆ. ಇದನ್ನು ನನಗೆ ಇಷ್ಟು ಸರಳವಾಗಿ ತಿಳಿಸಿದವರು ಹೆಸರಾಂತ ಉದ್ಯಮಿ ಶ್ರೀ ಎದುರ್ಕಳ ಈಶ್ವರ ಭಟ್ಟರು. ನನ್ನ ಅಸಹಾಯಕತೆಯಲ್ಲಿ ಹಲವು ಬಾರಿ ನನಗೆ ಸಹಾಯ ನೀಡಿದ ಈ ಮಹನೀಯ ಬೆಂಗಳೂರಿನ ಪೀಣ್ಯ ಎರಡನೇ ಹಂತದಲ್ಲಿ, ತಮ್ಮದೇ ಆದ ಕಾರ್ಖಾನೆ ಹೊಂದಿದ್ದಾರೆ; ಕಷ್ಟ-ಸುಖಗಳ ಸ್ವಾನುಭವ ರಕ್ತದ ಕಣಕಣದಲ್ಲೂ ಇದೆ. ಎಲೆಮರೆಯ ಕಾಯಿಯಾಗಿ ಹಲವು ಜನರಿಗೆ ಗೀತೆಯ ಕುರಿತಾಗಿ ಬೋಧಿಸುತ್ತಾ, ಯಕ್ಷಗಾನ-ತಾಳಮದ್ದಳೆಗಳಲ್ಲಿ ತಮ್ಮ ಮಾತಿನ ಚಮತ್ಕಾರವನ್ನು ತೆರೆದಿಡುತ್ತಾ ಆಗಾಗ ಅಲ್ಲಲ್ಲಿ ಕಾಣಿಸಿಕೊಂಡರೂ, ಕೇವಲ ಪ್ರದರ್ಶನದ ಬೂಟಾಟಿಕೆ ಅವರದ್ದಲ್ಲ. ಸೋತು ಸಣ್ಣಗಾದ ಸಮಾಜದ ಹಲವು ವ್ಯಕ್ತಿಗಳಿಗೆ ಮಾರ್ಗದರ್ಶಿಸಿದ ಅವರ ಮನೋಗತವನ್ನು ಹತ್ತಿರವಿದ್ದು ಅನುಭವಿಸಿದ ವ್ಯಕ್ತಿ ನಾನು. ಪ್ರತಿಫಲವನ್ನು ಬಯಸದೇ ಹಲವು ಕೆಲಸಗಳನ್ನು ಮಾಡುವ ಮಂದಿ ಇವತ್ತು ತೀರಾ ಕಮ್ಮಿ.

|ಸರ್ವೇ ಗುಣಾಂ ಕಾಂಚನಮಾಶ್ರಯಂತಿ| ಎಂಬ ಕಲಿಯುಗ ಮಂತ್ರದಂತೇ ಕಾಂಚಾಣವಿದ್ದವರಿಗೇ ಈಗ ಕಾಲ. ಹಣವಿಲ್ಲದೆಯೂ ಶ್ರದ್ಧೆ, ಪರಿಶ್ರಮ, ಕಾರ್ಯಕ್ಷಮತೆ ಮತ್ತು ಉತ್ತಮ ಗುರಿ ಇದ್ದರೆ ಹೇಗೆ ಸಾಧಿಸಬಹುದೆಂಬುದಕ್ಕೆ ಉತ್ತಮ ಉದಾಹರಣೆಯಾಗಿ ನಿಲ್ಲುತ್ತಾರೆ ಈಶ್ವರ ಭಟ್ಟರು. ಹತಾಶ ಸ್ಥಿತಿಯನ್ನು ತಲುಪಿದ ಹಲವು ಉದ್ಯಮಿಗಳಿಗೆ ಮರಳಿ ಹೊಸಚಿಗುರನ್ನು ಹೊರಡಿಸಿದ ಸಾರ್ಥಕತೆ ಭಟ್ಟರದಾಗಿದೆ. ನನ್ನೆದುರು ಅರ್ಧಘಂಟೆ ಯಾರಿಗೋ ತಮ್ಮ ಚರದೂರವಾಣಿಯಲ್ಲಿ ಮಾರ್ಗದರ್ಶಿಸುವುದನ್ನು ಕಂಡೆ. ಈ ಲೋಕದಲ್ಲಿ ಸ್ಥಿರಾಸ್ತಿ ಎಂದು ನಾವಂದುಕೊಳ್ಳುವುದೆಲ್ಲಾ ಸ್ಥಿರವೇನಲ್ಲ, ಕಾಲಘಟ್ಟದಲ್ಲಿ ಯಾರ್ಯಾರದೋ ಆಗಿದ್ದ ಭೂಮಿ-ಮನೆಗಳು ಇಂದು ನಮ್ಮದಾಗಿವೆ, ನಾಳೆ ಇನ್ಯಾರದೋ ಕೈಗೆ ಸಾಗುತ್ತವೆ. ಗಳಿಸಿದ ಆಸ್ಥಿಯನ್ನು ಕಳೆದುಕೊಳ್ಳಬೇಕಾಗಿ ಬಂದಾಗ ಅದರಮೇಲಿನ ವ್ಯಾಮೋಹ ತೊರೆದು, ಮತ್ತೆ ಮುಂದಿನ ದಿನಗಳಲ್ಲಿ  ಮರಳಿ  ಆಸ್ಥಿಗಳಿಸುವಂಥಾ ಅವಕಾಶ ಒದಗಲೆಂಬ ಪ್ರಾರ್ಥನೆಯೊಂದಿಗೆ ಅದನ್ನು ವಿಲೇವಾರಿ ಮಾಡುವುದು, ಮಾರಿದ ಆಸ್ಥಿಯಿಂದ ಬಂದ ಹಣವನ್ನು ಕ್ಷಣಿಕವಾಗಿ ಉದ್ಭವಿಸಿದ ಆರ್ಥಿಕ ಅನಾನುಕೂಲತೆಗೆ ಪರಿಹಾರವಾಗಿ ಬಳಸಿಕೊಂಡು ಅದರಿಂದ ಮತ್ತೆ ಪುನರ್ಗಳಿಕೆಗೂ ದಾರಿಮಾಡಿಕೊಳ್ಳುವುದು ಸರಿಯಾದ ಕ್ರಮ. ಸಮಸ್ಯೆಗಳಿಗೆ ಹೆದರದೇ ಉತ್ತರಗಳನ್ನು ಹುಡುಕಿಕೊಳ್ಳುವುದನ್ನು ಅಭ್ಯಾಸಮಾಡಿಕೊಂಡರೆ ಜೀವನದ ಕಗ್ಗಂಟುಗಳು ಬಿಡಿಸಿಕೊಳ್ಳಲಾರಂಭಿಸುತ್ತವೆ. ಯಾವ ಮನುಷ್ಯನ ಹೃದಯದಲ್ಲಿ ಕಲ್ಮಶವಿಲ್ಲವೋ ಅಂತಹ ವ್ಯಕ್ತಿ ತನ್ನ ಶ್ರದ್ಧಾ ಭಕ್ತಿ ಪುರಸ್ಸರ ತೊಡಗಿಕೊಳ್ಳುವಿಕೆಯಿಂದ ಹೊಸಜೀವನವನ್ನು ಪಡೆಯಲು ಸಾಧ್ಯ ಎಂಬುದಕ್ಕೆ ಅನೇಕ ಜ್ವಲಂತ ಉದಾಹರಣೆಗಳು ಭಟ್ಟರ ತಾಬಾ ಇವೆ. ವ್ಯಕ್ತಿ ಸರಳವಾಗಿದ್ದಷ್ಟೂ ಸುಶೀಲನಾಗುತ್ತಾನೆ, ಸುಶೀಲನಾಗಿದ್ದಷ್ಟೂ ಸದೃಢನಾಗುತ್ತಾನೆ, ಸಫಲನಾಗುತ್ತಾನೆ; ಯಾವುದೇ ತೊಂದರೆಗಳನ್ನೂ ನಿಭಾಯಿಸುವ ದಾರ್ಷ್ಟ್ಯತೆ ಗಳಿಸುತ್ತಾನೆ.

ನೆನೆಯಬೇಕಾದ ಹಲವು ಜನರಲ್ಲಿ ಎದುರ್ಕಳ ಈಶ್ವರ ಭಟ್ಟರೂ ಒಬ್ಬರು. ಭಗವದ್ಗೀತೆಯ ಸಾರವನ್ನು ಬರೆದು,ತನ್ನ ಸ್ವಂತ ಖರ್ಚಿನಲ್ಲಿ ಅದನ್ನು ಡೈರಿಗಳನ್ನಾಗಿಸಿ, ಪುಸ್ತಿಕೆಗಳನ್ನಾಗಿಸಿ ಹಲವರಿಗೆ ಅವರು ನೀಡಿದ್ದಾರೆ. ಅ-ದ್ವೈತದ ಪರಬ್ರಹ್ಮನ ಭಾಗವೇ ನಾವು ಎನಿಸಿದಾಗ ನಮ್ಮ ಕಷ್ಟಗಳನ್ನು ನಿವಾರಿಸಬಲ್ಲವ ಆತನೊಬ್ಬನೇ, ನಿರಾಕಾರನಾದ ಆತನನ್ನು ಸಾಕಾರದಿಂದ ಹಲವುರೂಪಗಳಲ್ಲಿ ಪೂಜಿಸುವ, ಆರಾಧಿಸುವ ಭಕ್ತರಿಗೆ ಆಯಾಯ ರೂಪದಲ್ಲಿ ಅವರ ಭಾವಕ್ಕೆ ತಕ್ಕಂತೇ ಫಲವನ್ನು ನೀಡುತ್ತಾನೆ ಎನ್ನುವ ಭಟ್ಟರ ಮಾತು ನಿಜಕ್ಕೂ ಒಪ್ಪಿಕೊಳ್ಳಬೇಕಾದ ಅಂಶ; ಉದ್ಯಮಿಗಳಲ್ಲಿ ಈ.ಐ.ಭಟ್ಟರ ತೆರನಾದ ವ್ಯಕ್ತಿ ಸಿಗುವುದೇ ಇಲ್ಲ. ಉತ್ತಮ ವ್ಯಕ್ತಿತ್ವಕ್ಕೆ ಯಾರನ್ನು ಹೆಸರಿಸಬೇಕು ಎಂಬ ಪ್ರಶ್ನೆ ಉದ್ಭವಿಸಿದಾಗ ನನ್ನ ಮನಸ್ಸು ಸಹಜವಾಗಿ ವಾಲುವುದು ಅವರಕಡೆಗೆ.  |ವ್ಯಾಪಾರಂ ದ್ರೋಹ ಚಿಂತನಂ| ಎಂಬ ಮಾತೊಂದಿದೆ, ಆದರೆ ವ್ಯಾಪಾರದಲ್ಲೂ ಯಾವುದೇ ದ್ರೋಹವೆಸಗದೇ ಮಾಡುವ ವ್ಯಾಪಾರವಿದ್ದರೆ ಅದು ಈಶ್ವರ ಭಟ್ಟರಂಥವರಿಗೆ ಮಾತ್ರ ಸಾಧ್ಯ! ತಾವು ತಯಾರಿಸುವ ಬಹುವಿಧದ ಕೈಗಾರಿಕಾ ಆಯಸ್ಕಾಂತಗಳನ್ನು  ದೇಶ-ವಿದೇಶಗಳಿಗೆ ವ್ಯಾಪಾರಮಾಡುತ್ತಾರೆ. ಗುಣಮಟ್ಟದಲ್ಲಿ, ತಾಂತ್ರಿಕತೆಯಲ್ಲಿ  ಗರಿಷ್ಠ ಪರಿಮಾಣಗಳನ್ನು ಗಣನೆಯಲ್ಲಿರಿಸಿ ತಯಾರಿಸುವ ಅವರ ಉತ್ಫನ್ನಗಳು ಹಲವು ಕೈಗಾರಿಕೆಗಳಿಗೆ ಬಳಸಲ್ಪಡುತ್ತವೆ. ಉದ್ಯಮದ ಜೊತೆಗೆ ಹಲವರ ಜೀವನದಲ್ಲಿ ಬೆಳಕು ಮೂಡಿಸುತ್ತಾ ಪ್ರಚಾರಪ್ರಿಯರಾಗದೇ ಮರೆಯಲ್ಲೇ ಇರುವ ಅವರ ಮಾತೃಸದೃಶ ಹೃದಯಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು.

ನಿನ್ನೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದೆ. ಅಲ್ಲಿ ಬಂದದ್ದು ದೇಶದ/ರಾಜ್ಯದ ರಾಜಕೀಯ/ಸಾಮಾಜಿಕ ಸ್ಥಿತಿಗತಿಯ ಬಗ್ಗೆ. ಸಮಾಜದಲ್ಲಿ ಉತ್ತಮ ಅಧಿಕಾರಿಗಳೂ ತಮ್ಮ ಕಾರ್ಯಕ್ಷಮತೆಯನ್ನು ಮೆರೆಯಲು ಸುರಕ್ಷಿತ ದಿನಮಾನವಲ್ಲ ಎಂಬುದರ ಕುರಿತೂ ಮಾತನಾಡಿದೆವು. ರಾಜ್ಯದ ಬೊಕ್ಕಸಕ್ಕೆ ಹೆಗ್ಗಣಗಳ ಕಾಟ, ಭೂಮಿಗಾಗಿ ನಡೆದ ಡಿನೋಟಿಫಿಕೇಶನ್ ಗುದ್ದಾಟ ಇಂಥವುಗಳನ್ನು ನೋಡಿದಾಗ ಕರ್ನಾಟಕದಲ್ಲಿಯೂ ಗುಜರಾತ್ ರೀತಿಯ ಸರ್ಕಾರ ಬರಲು ಸಾಧ್ಯವೇ? ಸದ್ಯಕ್ಕಂತೂ ಸಾಧ್ಯವಿಲ್ಲವೇನೋ. ಆದರೂ ಯಡ್ಯೂರಪ್ಪನವರ ವಿಷಾದದ ಈ ಕಾಲ ಜನತೆಗೆ ಅನುಕೂಲಕರವಾಗಿದೆ ಎಂದರೆ ತಪ್ಪಲ್ಲ. ಸುಖಾಸುಮ್ನೇ ಯಾವುದೇ ಒಂದು ಪಕ್ಷವನ್ನು ಜರಿಯುವುದರಲ್ಲಿ ಅರ್ಥವಿಲ್ಲ. ನಮ್ಮ ದೇಶದ ರಾಜಕೀಯ ಸ್ಥಿತಿ ಪಕ್ಷಾತೀತವಾಗಿದೆ! ಎಲ್ಲಾ ಪಕ್ಷಗಳಲ್ಲೂ ಬ್ರಷ್ಟಾಚಾರಿಗಳು ಇದ್ದೇ ಇದ್ದಾರೆ. ಅದೇ ರೀತಿ ಎಲ್ಲಾ ಪಕ್ಷಗಳಲ್ಲೂ ಮುತ್ಸದ್ಧಿಗಳು, ದೇಶ/ರಾಜ್ಯಗಳ ಹಿತಚಿಂತಕರೂ ಇದ್ದಾರೆ-ಆದರೆ ಅಂಥವರು ಮೂಲೆಗುಂಪಾಗಿದ್ದಾರೆ. ಬರೇ ಗೋಧ್ರಾ ಪ್ರಕರಣವನ್ನೇ ಹಿಡಿದುಕೊಂಡು ನರೇಂದ್ರ ಮೋದಿಯನ್ನು ಇತರೆ ಪಕ್ಷಗಳು ಜರಿದೇ ಜರಿದವು. ಆದರೆ ಅಲ್ಲಿ ನಿಜವಾಗಿಯೂ ಮೋದಿಯ ಪಾತ್ರವಿತ್ತೇ? ಇರಲಿಲ್ಲ. ಮೋದಿ ಎಂದೂ ಸಮಾಜ ಘಾತುಕ ಕೆಲಸವನ್ನು ಬಯಸಿದವರಲ್ಲ, ಮಾಡಿದವರಲ್ಲ. ಕೇವಲ ಮತ-ಧರ್ಮಗಳ ಆಧಾರದ ಮೇಲೆ ಒಡೆದು ಆಳುವ ನೀತಿಯನ್ನು ಜಾರಿಯಲ್ಲಿಟ್ಟವರೂ ಅಲ್ಲ. ಅವರ ಚಿಂತನೆಯಲ್ಲಿ ಅಡಕವಾಗಿರುವ ಅಂಶವೇ ಸಮಾಜಕ್ಕೆ ಉತ್ತಮ ಆಡಳಿತ ನೀಡುವುದು.

ಗುಜರಾತ್ನಲ್ಲಿ ಸರ್ಕಾರಿ ಅಧಿಕಾರಿಗಳು, ಮಂತ್ರಿಮಹೋದಯರು ಲಂಚ ಪಡೆಯಲು ಹೆದರಿ ಕೈಬಿಟ್ಟಿದ್ದರೆ ಅದಕ್ಕೆ ಮೋದಿಯೇ ಕಾರಣ. ನಿಷ್ಕಳಂಕ, ನಿರ್ಭೀತ ನಡತೆಯ ಮೋದಿ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣ ಪಾರದರ್ಶಕತೆಗೆ ಒಳಪಡಿಸಿದವರು. ಜನಜೀವನದಲ್ಲಿ ಯಾವುದರ ಕೊರತೆ ಇದೆ? ಯಾವುದು ಅನಿವಾರ್ಯ ಎಂಬುದನ್ನು ಆಮೂಲಾಗ್ರ ಪರಿಶೀಲಿಸಿ, ಕಂಡುಬರುವ ಸಮಸ್ಯೆಗಳಿಗೆ ಉತ್ತಮವಾದ ಪರಿಹಾರೋಪಾಯಗಳನ್ನು ಕಂಡುಕೊಳ್ಳುವಲ್ಲಿ ಮೋದಿ ಯಶಸ್ವೀ ಹೆಜ್ಜೆಗಳನ್ನಿಟ್ಟು ತಾವು ಆಡಳಿತ ಸಮರ್ಥ ಎಂಬುದನ್ನು ಸಾಬೀತುಪಡಿಸಿದ್ದಾರೆ. ನರ್ಮದಾ ಕಾಲುವೆಗಳಗುಂಟ ಸೌರಶಕ್ತಿ ಶೇಖರಣಾ ಘಟಕಗಳನ್ನು ಸ್ಥಾಪಿಸಿ ಬೇಕಾದ ವಿದ್ಯುತ್ತಿನ ಕೊರತೆ ನೀಗಿಸಲು ಮುಂದಾಗುವುದರ ಜೊತೆಗೆ ಕಾಲುವೆಯ ನೀರು ಬಿಸಿಲಿನ ಝಳಕ್ಕೆ ಇಂಗಿಹೋಗದಂತೇ ತಡೆಯುವಲ್ಲೂ ಸಫಲರಾದರು. ಏಕಕಾಲಕ್ಕೆ ಎರಡು ಉದ್ದೇಶಗಳು ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಏರ್ಪಾಟಾಗಿರುವುದರಿಂದ ಜನ ಮೋದಿಯ ಜಾಣ್ಮೆಯನ್ನು ಗುರುತಿಸಿ  ವಿಶಿಷ್ಟರೀತಿಯ ಸಾಧನೆಗೆ ಮುಂದಾಗಿರುವ ಅವರನ್ನು ಪ್ರೋತ್ಸಾಹಿಸುತ್ತಿದ್ದಾರೆ.

ಕಲಾಂ ಮೇಷ್ಟ್ರ ಬಗ್ಗೆ ಹೇಳುವುದೇ ಬೇಡ. ರಾಷ್ಟ್ರಪತಿ ಸ್ಥಾನಕ್ಕೆ ನಾನು ನೇರವಾಗಿ ಬೆರಳುಮಾಡಿ ತೋರಿಸಬಹುದಾದರೆ ಅದು ಅಬ್ದುಲ್ ಕಲಾಂ ಮಾತ್ರ! ದೇಶಸೇವೆಗೆ ತೊಡಗಿಸಿಕೊಳ್ಳುವ ವ್ಯಕ್ತಿಗೆ ಸ್ವಾರ್ಥ ಎಂಬ ವಿಷಯ ಹತ್ತಿರ ಸುಳಿಯದಿದ್ದರೆ ಒಳ್ಳೆಯದು. ಜೊತೆಗೆ ದೇಶದ ಬಗ್ಗೆ, ದೇಶದ ಜನತೆಯ ಬಗ್ಗೆ ಅಪಾರ ಕಾಳಜಿ ಇರಬೇಕು; ದೇಶದ ಸಂಸ್ಕೃತಿಯ ಬಗ್ಗೆ ಅಪಾರ ಗೌರವ ಇರಬೇಕು. ದೇಶದ ಆರ್ಥಿಕತೆ, ವೈಜ್ಞಾನಿಕತೆಯ ಬಗ್ಗೆ ಗಮನವಿರಬೇಕು. ರಾಷ್ಟ್ರಪತಿ ಎಂಬ ಹುದ್ದೆ ರಬ್ಬರ್ ಸ್ಟಾಂಪ್ ಆಗಿರುವುದರ ಬದಲು ಅಲ್ಲಿ ಕುಳಿತ ವ್ಯಕ್ತಿ ಲೋಕಮುಖಿಯಾಗಿದ್ದು ಚೈತನ್ಯದಾಯಿಯಾಗಿದ್ದರೆ ಅದು ದೇಶಕ್ಕೆ ಬಲುಹಿತ. ಇದನ್ನು ಗಮನಿಸಿಯೇ ಅಂದಿನ ಎನ್.ಡಿ.ಏ ಸರಕಾರ ಕಲಾಂ ಅವರನ್ನು ರಾಷ್ರ್ಟ್ರಪತಿಯನ್ನಾಗಿ ನೇಮಿಸಿತು. ಸ್ವಾತಂತ್ರ್ಯಾ ನಂತರ ಬಂದ ಕಾಂಗ್ರೆಸ್ಸೇತರ ಸರಕಾರದಲ್ಲಿ ಕೇವಲ ಶ್ರೀಮಾನ್ ಅಟಲ್ ಬಿಹಾರಿ  ವಾಜಪೇಯಿಯವರ ನೇತೃತ್ವದ ಎನ್.ಡಿ.ಎ ದೇಶಕ್ಕೆ ಹೊಸಬೆಳಕು ನೀಡುವಲ್ಲಿ ಶ್ರಮಿಸಿದ್ದು ಸುಳ್ಳಲ್ಲ. ಅಂದು ನಿರ್ಮಾಣವಾದ ದಕ್ಷಿಣೋತ್ತರ ಮತ್ತು ಪೂರ್ವಪಶ್ಚಿಮವನ್ನು ಬೆಸೆಯುವ ರಾಷ್ಟ್ರೀಯ ಹೆದ್ದಾರಿಗಳು ದೇಶದ ಸಂವಹನ ಕ್ರಮವನ್ನೇ ಬದಲಿಸಿ, ಸಾಗಾಟವನ್ನು ಸರಳವಾಗಿ ಮತ್ತು ಶೀಘ್ರವಾಗಿ ಆಗುವಂತೇ ಮಾಡಿದ ಸಾಧನೆಯನ್ನು ಯಾರೂ ಮರೆಯುವಂತಿಲ್ಲ. ಒಂದೇ ಮನೆಯಲ್ಲಿ ಮನೆಮಂದಿ ಸೇರಿ ನಡೆಯುವುದು ಕಷ್ಟವಾದ ಇಂದಿನ ಕಾಲದಲ್ಲಿ ಸರಿಸುಮಾರು ಇಪ್ಪತ್ತು ಪಕ್ಷಗಳ ಬೆಸುಗೆಯ ಎನ್.ಡಿ.ಎ ಪಕ್ಷದ ನಾವಿಕನಾಗಿ ನೌಕೆಯನು ನಾಲ್ಕೂವರೆ ವರ್ಷ ನಡೆಸಿ, ದೇಶದಲ್ಲಿ ಕ್ಷಿಪ್ರಬದಲಾವಣೆಗಳನ್ನು ತಂದು ತೋರಿಸಿದ ಹೆಗ್ಗಳಿಕೆ ಅವರದ್ದು; ಇನ್ನೂ ಚುನಾವಣೆಗೆ ಆರು ತಿಂಗಳ ಅವಕಾಶ ಇರುವಾಗಲೇ ಸರಕಾರವನ್ನು ವಿಸರ್ಜಿಸಿ ಜನರಿಗೆ ಹೊಸ ಆಯ್ಕೆಗೆ ಅವಕಾಶ ಮಾಡಿಕೊಟ್ಟ ವಿಶಿಷ್ಟ ಮಾರ್ಗ ಕೂಡಾ ವಾಜಪೇಯಿಯವರದ್ದು. 

ಪ್ರಸಕ್ತ ದಿನಗಳಲ್ಲಿನ ಧನಾತ್ಮಕ ಆಡಳಿತ ಕ್ರಮಗಳನ್ನು ನೋಡಿದರೆ ಕೇಂದ್ರದಲ್ಲಿ ಒಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಿ ಮತ್ತು ಕಲಾಂ ಮೇಷ್ಟ್ರು ಮತ್ತೊಮ್ಮೆ ರಾಷ್ಟ್ರಪತಿಯಾಗಿ ಒಂದೈದು ವರ್ಷ ಆಡಳಿತ ನಡೆಸಿದರೆ ಅದು ದೇಶದ ಪರಮಭಾಗ್ಯ ಎನಿಸುತ್ತದೆ. ದೇಶದ ಪ್ರತಿಯೊಬ್ಬ ನಾಗರಿಕ ತನ್ನ ಅರ್ಹತೆಯನ್ನರಿತು, ತನಗೆ ಸಿಗಬೇಕಾದ ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆಯಲು ಎಲ್ಲಾ ಅನುಕೂಲಗಳತೆಗಳು ಕಲ್ಪಿತವಾಗುತ್ತವೆ ಎಂಬುದು ನನ್ನ ಅನಿಸಿಕೆಯಾಗಿದೆ. ಒಂದೊಮ್ಮೆ ಹಾಗೇನಾದರೂ ಆದರೆ, ನಮ್ಮ ವಯಸ್ಸಿಗರ ಜೀವಮಾನದಲ್ಲಿಯೇ ಅದು ಒಮ್ಮೆ ಮಾತ್ರ ಕಾಣಬಹುದಾದ ಉತ್ತಮ ರಾಜಕೀಯ ಬೆಳವಣಿಗೆ ಎಂಬುದನ್ನು ಉಲ್ಲೇಖಿಸಲು ಮರೆಯುವುದಿಲ್ಲ. ಮಾತಾಡುತ್ತಿದ್ದರೆ, ಹರಟುತ್ತಿದ್ದರೆ ಸಮಯ ಹೋಗಿದ್ದು ತಿಳಿಯುವುದೇ ಇಲ್ಲವಾದ್ದರಿಂದ ಇಲ್ಲಿಗೇ ನಿಮ್ಮನ್ನು ನಿಲ್ಲಿಸಿ ಮತ್ತೊಮ್ಮೆ ಸಿಗೋಣವೆಂದು ತಿಳಿಸುವುದನ್ನೂ ಮರೆಯುವಹಾಗಿಲ್ಲ!