ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, August 17, 2010

ಸರ್ಜನರ ಹೃದಯದಿ ಸಜ್ಜನರ ಕಂಡೆನು.....


ಸರ್ಜನರ ಹೃದಯದಿ ಸಜ್ಜನರ ಕಂಡೆನು.....

ಹೀಗೊಬ್ಬ ಬ್ಲಾಗಿಗ ಸಿಗಬಹುದೆಂದು ಕನಸುಮನಸಲ್ಲೂ ಎಣಿಸಿರಲಿಲ್ಲ. ನನ್ನ ಬ್ಲಾಗ್ ಶುರುವಾದ ಕೆಲವು ದಿನಗಳಲ್ಲಿ ಬ್ಲಾಗಾಡಿಗರಾಗಿ ಒಬ್ಬರು " ದೇವನೂರು ತಿರುಮಲಾಚಾರ್ ಕೃಷ್ಣಮೂರ್ತಿ " ಎನ್ನುವ ಹೆಸರಿನವರು ಬಂದು ಸೇರಿದರು. ಚಿತ್ರವಿಲ್ಲದ ಬರೇ ಮನುಷ್ಯಾಕೃತಿಯ ಬಿಂಬರೂಪದಲ್ಲಿ ಸೇರಿದ್ದರು. ದೇವರ ಬಗ್ಗೆ ಬರೆದಿದ್ದನ್ನು ನೋಡಿ ಯಾರೋ ಹೊಸ ಪೀಳಿಗೆಯ ಲ್ಯಾಪ್ಟಾಪ್ ಹಿಡಿದ ಪುರೋಹಿತರು ಬಂದಿದ್ದಾರೆ ಎಂದುಕೊಂಡೆ. ಆದರೆ ಅದು ನಿಜವಾಗಿರಲಿಲ್ಲ ಬದಲಿಗೆ ಒಬ್ಬ ಗಣಕಯಂತ್ರವನ್ನು ಉಪಯೋಗಿಸುವ ತಜ್ಞವೈದ್ಯರು ಅವರು ಎಂಬುದು ಅವರ ಪ್ರತಿಕ್ರಿಯೆಯ ಕೊಂಡಿ ಹಿಡಿದು ಹುಡುಕಿದಾಗಲೇ ಗೊತ್ತಾಗಿದ್ದು! ಅನುಮಾನವೋ ಅನುಮಾನ! ತಾನು ಕಣ್ಣು-ಮೂಗು-ಗಂಟಲು ತಜ್ಞ ಡಾಕ್ಟರು ಅಂತಾರೆ ಪ್ರೊಫೈಲ್ ನಲ್ಲಿ, ಸಾಮಾನ್ಯವಾಗಿ ಡಾಕ್ಟರುಗಳು ಬರೆಯುವ ಜನವಲ್ಲ, ಅವರು ಬರೆದ ಚಿಕಿತ್ಸಾ ಚೀಟಿಯನ್ನು ಓದುವ ಔಷಧಗಳ ಅಂಗಡಿಯವರು ಬ್ರಹ್ಮಲಿಪಿಯನ್ನೂ ಓದುವವರಾಗಿರುತ್ತಾರೆ! ಯಾಕೆಂದರೆ ವೈದ್ಯರು ಸಾಮಾನ್ಯವಾಗಿ ಬರೆದ ಯಾವುದೇ ಅಕ್ಷರವನ್ನೂ ಬಹುತೇಕರು ಓದಲಾಗುವುದಿಲ್ಲ. ಈ ನಿಟ್ಟಿನಲ್ಲಿ ಔಷಧಗಳ ಅಂಗಡಿಯ ಮಾಲೀಕರಿಗೆ ವಿಶೇಷವಾದ ಅವಾರ್ಡ್ ಕೊಟ್ಟು ಸತ್ಕರಿಸಬೇಕು! ಇರಲಿ. ಇಲ್ಲಿ ಇದು ಕಥೆಯೇ ಬೇರೆ, ನಿಜ್ವಾಗಿಯೂ ಹೇಳುತ್ತೇನೆ ಕೇಳಿ- ಇವರೋ ಒಂದೇ ವೈದ್ಯರೇ ಅಲ್ಲ ಅಥವಾ ಇವರು ಅಡ್ಡಕಸುಬಿ ವೈದ್ಯರು ಎಂಬೆಲ್ಲಾ ಹುರುಳಿಲ್ಲದ ಆಲೋಚನೆಗಳು ಮನಸ್ಸಲ್ಲಿ ಬಿಂಬಿತವಾಗಿದ್ದವು! ನನ್ನೊಳಗೇ ಇಬ್ಬರು ವಿ.ಆರ್.ಭಟ್ ಹುಟ್ಟಿಕೊಂಡು ಪರಸ್ಪರ ವಾಗ್ವಾದ ಶುರುವಾಗಿಬಿಟ್ಟಿತ್ತು ! ಒಬ್ನು " ಏ ಅವರು ಒಳ್ಳೆ ಡಾಕ್ಟ್ರು " ಅಂತಾ ಇದ್ರೆ ಇನ್ನೊಬ್ಬ " ಹೋಗಲೇ ನಿಂಗೇನ್ ಗೊತ್ತು ಡಾಕ್ಟ್ರೆಲ್ಲಾ ಬ್ಲಾಗ್ ಬರ್ಯಲ್ಲ, ಅವ್ರ್ಯಾವ್ ಸೀಮೆ ಡಾಕ್ಟ್ರು ಬ್ಲಾಗ್ ಬರ್ಯೋರು " ಈ ಪೀಕಲಾಟದಲ್ಲಿ ಸೋತು ಸುಣ್ಣವಾಗಿದ್ದೆ!

ಕಾಲವೇ ಹಲವಕ್ಕೆ ಉತ್ತರಹೇಳುತ್ತದಲ್ಲವೇ ? ಹೀಗಾಗಿ ತಾಳ್ಮೆಯಿಂದ ನೋಡುತ್ತಲೇ ಇದ್ದೆ. ಹತ್ತಿರ ಹತ್ತಿರ ಹತ್ತಿರ ಸೆಳೆಯುವ ಅವರ ಬ್ಲಾಗ್ ಮಂತ್ರ ಜಾಸ್ತಿ ಆಗುತ್ತಲೇ ಹೋಯಿತು! ಅವರ ಸಾಹಿತ್ಯಿಕ ಕೃತಿಗಳಲ್ಲಿ ಅಡಗಿರುವ ಅಂತಃಸ್ಸತ್ವ ನನ್ನನ್ನು ಬಿಡುತ್ತಲೇ ಇರಲಿಲ್ಲ. ಬರುಬರುತ್ತ ಅವರ ಜಿಜ್ಞಾಸೆಯ ಪ್ರತಿಕ್ರಿಯೆಗಳು ಅವರು ಹೊಸೆದ ಹೊಸಹೊಸ ಕವನಗಳು ನನ್ನ ಮನವನ್ನು ನಾಟಿದವು. ನೋಡಿ, ನಂಗೆ ಅವರ ಮಿಂಚಂಚೆಯಾಗಲೀ ಅವರ ಜಂಗಮ ದೂರವಾಣಿಯಾಗಲೀ ಗೊತ್ತಿರಲಿಲ್ಲ. ಒಮ್ಮೆ ಹೇಗಾದರೂ ಸಂಪರ್ಕಿಸಬೇಕೆಂಬ ಅವ್ಯಕ್ತ ಇಚ್ಛೆ ಮನದಲ್ಲಿ ಹೆಡೆಯಾಡುತ್ತಿತ್ತು. ನಾಗರಪಂಚಮಿ ಬಂತಲ್ಲ ಅದಕ್ಕೇ ಬಹುಶಃ ಈ ಹೆಡೆಯಾಡುವ ಪ್ರಕ್ರಿಯೆಯೆಲ್ಲಾ ಜಾಸ್ತಿ ಎಂದು ಸುಮ್ಮನಾಗಿದ್ದೆ! ಆದರೂ ನಮ್ಮೊಳಗಿನ ಆತ್ಮಕ್ಕೆ ಇರುವ ಅವಿನಾಭಾವ ಸಂಪರ್ಕದ ಕೊಂಡಿ ನಮ್ಮನ್ನು ಯಾವುದೋ ಮಾರ್ಗದಿಂದ ಬೆಸೆಯುತ್ತದೆ ಎಂಬುದು ಸುಳ್ಳಲ್ಲ, ಇಲ್ಲೂ ಅದೇ ರೀತಿಯಲ್ಲಿ ಈ ವೈದ್ಯರು " ನಾನು ೩ ದಿನಗಳ ಮಟ್ಟಿಗೆ ಬೆಂಗಳೂರಿಗೆ ಬರುತ್ತಿದ್ದೇನೆ, ನನ್ನ ದೂರವಾಣಿ ಇಂಥದ್ದು " ಎಂದು ನೇರವಾಗಿ ನನ್ನ ಪ್ರತಿಕ್ರಿಯೆಗೆ ಉತ್ತರಹಾಕಿದ್ದನ್ನು ಕಂಡ ನನ್ನೊಳಗಿನ ಕಚ್ಚದ ನಾಗಪ್ಪ ಅವರ ’ಕೊಳಲಿ’ಗೆ ಮನಸೋತು ಹೊರಬಂದಿದ್ದ! ಅದನ್ನು ನೋಡಿದ ಮರುಕ್ಷಣವೇ ನಾನವರಿಗೆ ಕರೆಮಾಡಿದೆ. ಬಿ.ಎಸ್.ಎನ್.ಎಲ್. ಜಂಗಮದೂರವಾಣಿಯ ಸಮಸ್ಯೆ ಒಂದರ್ಥದಲ್ಲಿ ಅತ್ತೆ-ಸೊಸೆ ಜಗಳದ ರೀತಿಯೇ! ಇದನ್ನೆಲ್ಲಾ ನೀವು ಅನುಭವಿಸಿರುತ್ತೀರಿ. ಮೂರ್ನಾಲ್ಕು ಸಲ ಕರೆ ಮಧ್ಯದಲ್ಲೇ ನಿಂತುಹೋಯಿತು. ಆದರೂ ನಾವು ತ್ರಿವಿಕ್ರಮ ಪ್ರಯತ್ನದಿಂದ ಮತ್ತೆ ಸಂಪರ್ಕಕ್ಕೆ ಬಂದೆವು. ಮರುದಿನ ಸಪ್ನಾ ಬುಕ್ ಹೌಸ್ ನಲ್ಲಿ ಸಂಧಿಸುವುದು ಎಂದು ಅಂದುಕೊಂಡೆವು.

ಬೆಳಗಾಯಿತು, ಬಹಳ ಬೇಗ ಸಮಯ ಸರಿದು ಹೋಯಿತು. ನನಗೆ ಭಾನುವಾರ ಸೋಮವಾರ ಅಂತೆಲ್ಲಾ ಇಲ್ಲವೇ ಇಲ್ಲ. ನಾನಾಯಿತು ನನ್ನ ಕೆಲಸವಾಯಿತು ಎಂದುಕೊಂಡು ಅಹರ್ನಿಶಿ ಕೆಲಸದಲ್ಲಿರುವ ಪ್ರವೃತ್ತಿ ನನ್ನದು. ಯಾಕೆಂದರೆ ಬ್ಲಾಗಿಗೆ ಬರೆಯುವ ಚಟ ಇದೆಯಲ್ಲ-ಇದು ಸಣ್ಣಸಾಮಾನ್ಯ ಚಟವಲ್ಲ! ಆದರೆ ಒಳ್ಳೆಯ ಚಟವೆನ್ನಿ! ನಮ್ಮನೆಯಲ್ಲಿ ನನಗೆ ’ಗಣಕಋಷಿ’ ಎನ್ನುವುದೊಂದು ಬಾಕಿ ಇದೆ. ಅಷ್ಟರಮಟ್ಟಿಗೆ ಗಣಕಯಂತ್ರದ ಮುಂದೆ ಸ್ಥಾಪಿತರಾದ ಹಲವರಲ್ಲಿ ನಾನೂ ಒಬ್ಬ! ಶನಿವಾರ ರಾತ್ರಿ ಬಹಳ ಬರೆಯುತ್ತ ಆದ ಆಯಾಸದಿಂದ ಹತ್ತು ನಿಮಿಷ ಆಳಸಿಯಾಗಿದ್ದಕ್ಕೆ ವೈದ್ಯರನ್ನು ತಲ್ಪಲು ಹನ್ನೊಂದೂವರೆಯಾಯ್ತು. ನನಗೆ ಬೇರೆ ಯಾವ್ಯಾವುದೋ ಕರೆಗಳು ಬಂದವು--ಅವುಗಳಿಗೆಲ್ಲಾ ನಾನು ಹೇಳಿದ್ದು "ನನಗಿವತ್ತು ಡಾಕ್ಟರ್ ಅಪಾಯಿಂಟ್ ಮೆಂಟ್ ಇದೆಯಪ್ಪಾ " ಎಂದು! ಹಾಗಂದ ತಕ್ಷಣ " ಏನಾಗಿದೆ ಸರ್, ಸಾರಿ ಸರ್, " ಎಂಬೆಲ್ಲಾ ಮರುತ್ತರಗಳು ಕೇಳಿಬಂದವು. ನನಗೆ ಒಳಗೊಳಗೇ ನಗು. ಅಂತೂ ನಾವು ಸಪ್ನಾದಲ್ಲಿ ಸೇರುವ ಹೊತ್ತಿಗೆ ವೈದ್ಯರು ಕೆಲವು ಒಳ್ಳೆಯ ಪುಸ್ತಕಗಳನ್ನು ಖರೀದಿಸುತ್ತಿದ್ದರು. ನಾನು ಇನ್ನೇನು ಒಳಗೆ ಅಡಿಯಿಡುವ ಹೊತ್ತು-ಮತ್ತೆ ಕರೆಮಾಡಿ ಬಾಗಿಲ ಹತ್ತಿರದಲ್ಲೇ ಇರುತ್ತೇನೆ ಅಂದರು. ಒಳಗೆ ಹೋದೆ.ನನಗೆ ಅವರ ಚಾಯಾಚಿತ್ರವನ್ನು ಇತ್ತೀಚೆಗೆ ಅವರ ಬ್ಲಾಗಿನಲ್ಲಿ ನೋಡಿದ್ದರಿಂದ ಹೇಗೂ ಹೀಗಿರುತ್ತಾರೆಂಬ ಚಹರೆ ಗೊತ್ತಿತ್ತು. ಪ್ರಾಯಶಃ ಅವರಿಗೂ ಕೀಟಲೆ ಬುದ್ಧಿಯ ನನ್ನ ಮುಖವನ್ನು ಬ್ಲಾಗ್ ನಲ್ಲಿ ಆಗಾಗ ನೋಡಿ ನೆನಪಿತ್ತು ಅನಿಸುತ್ತದೆ. ಅಡಿಯಿಡುವಾಗಲೇ ಹಸ್ತಲಾಘವ, ಆಮೇಲೆ ಆತ್ಮೀಯ ಅಪ್ಪುಗೆ. ನಾನು ಹೊಸದೊಂದು ಲೋಕದಲ್ಲಿದ್ದೆ! ಅವರ ಆತ್ಮೀಯತೆಯ ಕೊಳಲು ನನ್ನಲ್ಲಿ ಹಲವು ತರಂಗಗಳನ್ನು ಸೃಷ್ಟಿಸಿತ್ತು!

ಅದಾದ ಕೆಲವೇ ನಿಮಿಷಗಳಲ್ಲಿ ಇನ್ನೂ ಕೆಲವರಿಗೆ ಕರೆಮಾಡಿದ್ದೇನೆ, ಅವರೆಲ್ಲ ಬರುವವರಿದ್ದಾರೆ-ಇನ್ನೇನು ಬರುತ್ತಾರೆ ಎಂದರು. ಬರಲಿ ಎಂದು ಅಲ್ಲೇ ಕೆಲನಿಮಿಷಗಳ ಕಾಲ ಮಾತಾಡುತ್ತಿದ್ದಂತೆ ಪರಾಂಜಪೆಯವರ ಪ್ರವೇಶವಾಯಿತು! ಇಲ್ಲೂ ಅಷ್ಟೇ ಕಥೆ, ಬ್ಲಾಗಿನಲ್ಲಿ ಬಾಲತಪಸ್ವಿಯ ಚಿತ್ರ ಹಾಕಿದ್ದರಿಂದ ಪರಾಂಜಪೆಯವರು ಎದುರೇ ಹಾದುಹೋದರೂ ತಿಳಿಯದ ಪರಿಸ್ಥಿತಿ! ಆದರೂ ನಮಗೆ ಐದೂ ಅಂಗಗಳು ಅಪ್ ಟು ಡೇಟ್ ಕೆಲಸಮಾಡುತ್ತಿರುವುದರಿಂದ ಸೂಕ್ಷ್ಮಗ್ರಾಹಿಯಾಗಿ ನಾವು ಅವರ ಪತ್ತೆ ಹಚ್ಚಿಬಿಟ್ಟೆವು! ನಂತರ ಪ್ರವೀಣ್ ಗೌಡ ಬಂದರು, ಅವರ ಜೊತೆ ನಾಗರಾಜ್[ಪೆನ್ನು ಪೇಪರ್ ಬ್ಲಾಗ್] ಬಂದರು.ಪ್ರವೀಣ್ ಹಿಂದಿನದಿನ ವೈದ್ಯರನ್ನು ಭೇಟಿಯಾಗಿದ್ದರಿಂದ ಗುರುತು ಹಿಡಿಯುವ ಪ್ರಮೇಯವಿರಲಿಲ್ಲ. ಆಮೇಲೆ ಎಲ್ಲಾಸೇರಿ ಗಾಂಧಿನಗರದ ಅಡಿಗಾಸ್ ನಲ್ಲಿ ಚಹಾಕ್ಕೆ ಕೂತೆವು. ಅಲ್ಲಿ ಎಲ್ಲಿಲ್ಲದ ಲೋಕವನ್ನೇ ಸೃಜಿಸಿಕೊಂಡೆವು. ಸುಮಾರು ಎರಡು ಗಂಟೆಗಳ ಕಾಲ ಅಲ್ಲಿ ನಮ್ಮ ಹರಟೆ ನಡೆಯಿತು. ಆಮೇಲೆ ಊಟವನ್ನು ಕಾಮತ್ ಯಾತ್ರಿನಿವಾಸದಲ್ಲಿ ಪೂರೈಸಿದೆವು. ಊಟದಲ್ಲಿ ಏನುತಿಂದೆವು ಎಂದು ನೀವೀಗ ಕೇಳಿದರೆ ಹೇಳಲಾಗದಷ್ಟು ಹರಟುತ್ತಿದ್ದೆವು. ನಿಜವಾಗಿಯೂ ಸಾಹಿತ್ಯದಲ್ಲಿ ಸಕ್ರಿಯರಾದ ಸ್ನೇಹಿತರು ಸಿಕ್ಕರೆ ಅಲ್ಲಿ ಕಾಲಹೋಗಿದ್ದೇ ತಿಳಿಯುವುದಿಲ್ಲ! ಇನ್ನೂ ಹಲವು ಹತ್ತು ವಿವರಣೆಯನ್ನು ಮಿತ್ರ ಪರಾಂಜಪೆ ತಮಗೆಲ್ಲ ಈಗಾಗಲೇ ’ ಜೀವನ್ಮುಖಿ’ಯಲ್ಲಿ ಉಣಬಡಿಸಿದ್ದಾರೆ.

ಈಗ ಹೇಳುತ್ತೇನೆ ಕೇಳಿ. ಸರ್ಜನರಲ್ಲಿ ಒಬ್ಬ ಸಜ್ಜನನಿದ್ದಾನೆ ಅಂತ ಎರಡು-ಮೂರು ತಿಂಗಳ ಹಿಂದೆ ಅನ್ನಿಸಿತ್ತು. ಆದರೆ ನೋಡಿದೆನಲ್ಲ ಸರ್ಜನರಲ್ಲಿ ಒಬ್ಬನಲ್ಲ ಹಲವು ಸಜ್ಜನರೇ ಅಡಗಿದ್ದಾರೆ! ನಿಮಗೆ ಯಾರು ಬೇಕು ಹೇಳಿ ಅವರನ್ನು ಕರೆದು ಹೊರತೆಗೆಯುವ ಅದ್ಬುತ ಶಕ್ತಿ ಸರ್ಜನರಿಗಿದೆ! ನನಗೆ ವೈದ್ಯರನ್ನು ನೋಡಿದಾಗ ನೆನಪಾಗಿದ್ದು ಕವಿ ದಿ| ಶ್ರೀ ಪುತಿನ ಬರೆದ ’ಹರಿಯ ಹೃದಯದಿ ಹರನ ಕಂಡೆನು ಹರನ ಹೃದಯದಿ ಹರಿಯನು ’ ಕವನ. ತಾವೆಲ್ಲಾ ಇದನ್ನು ಒಂದಾವರ್ತಿಯಾದರೂ ಕೇಳಿಯೇ ಇರುತ್ತೀರಿ. ಹಾಡನ್ನು ಸ್ವಲ್ಪ ಬದಲಾಯಿಸೋಣ--" ಸರ್ಜನರ ಹೃದಯದಿ ಸಜ್ಜನರ ಕಂಡೆನು ಸಜ್ಜನರು ತುಂಬಿದ ಈ ಸರ್ಜನರನು ". ಮುಖಸ್ತುತಿಗೆ ಬೇಕಾಗಿ ಹೇಳುವ ಮಾತಲ್ಲ ನೀವೆಲ್ಲಾ ಒಮ್ಮೆ ನೇರ ಸಂಪರ್ಕಕ್ಕೆ ಬಂದು ತಿಳಿದುಕೊಳ್ಳಬೇಕಾದ ಅಪರೂಪದ ಸಜ್ಜನ ಸರ್ಜನ್ ಡಾ| ಡಿ.ಟಿ.ಕೆ. ತಮ್ಮ ’ಕೊಳಲು’ ಬ್ಲಾಗಿನ ಮೂಲಕ ನಮ್ಮೆಲ್ಲರ ಮನಗಳಲ್ಲಿ ಸ್ಥಾನವನ್ನು ಸಹಜವಾಗಿ ಪಡೆದುಕೊಂಡ ನವ್ಯ ಕವಿಯೋರ್ವನನ್ನು ಕಂಡೆ. ನಗುವ ನಗಿಸುವ ಮನೋಭಾವದ ಹಾಸ್ಯಕಲಾವಿದನನ್ನು ಕಂಡೆ. ಪ್ರೀತಿಯನ್ನು ಹರಿಬಿಟ್ಟು ದಾಂಪತ್ಯದ ಅನ್ಯೋನ್ಯತೆಯನ್ನು ಮೆಲುಕುಹಾಕುವ ಯಜಮಾನನ್ನು ಕಂಡೆ. ಮಗಳು ಕೊಡಿಸಿದ್ದೆಂದು ಹೊಸ ಮೊಬೈಲ್ ಹಿಡಿದು ಅಭಿಮಾನದಿಂದ ಹೇಳಿಕೊಳ್ಳುವ ಅಪ್ಪನನ್ನು ಕಂಡೆ. ನೀವು ಕಾರ್ಗಲ್ಲಿಗೆ ಬಂದು ನಮ್ಮ ಆತಿಥ್ಯ ಸ್ವೀಕರಿಸಿ ಎಂದ ಸದ್ಗೃಹಸ್ಥನೊಬ್ಬನನ್ನು ಕಂಡೆ. ವೈದ್ಯನೆಂಬ ಹಮ್ಮಿಲ್ಲದೇ ಹಲವು ವೈದ್ಯಕೀಯ ಚಿಕಿತ್ಸಾ ಕ್ರಮಗಳನ್ನು ವಿಶ್ಲೇಷಿಸಿದ-ನಮೆಗೆಲ್ಲಾ ಅರ್ಥವಾಗುವ ಹಾಗೆ ತೆರೆದಿಟ್ಟ ’ನಮ್ಮನೆಯ ವೈದ್ಯ’ರನ್ನು ಕಂಡೆ. ಒಬ್ಬ ಅದ್ವಿತೀಯ ಆತ್ಮೀಯತೆ ತೋರುವ ಆಪ್ತ ಸ್ನೇಹಿತನನ್ನು ಕಂಡೆ. ಇನ್ನೂ ಹಲವು ಹತ್ತು ಮುಖಗಳುಳ್ಳ ಶ್ರೀಯುತರು ಹಲವು ಸಜ್ಜನರನ್ನು ಮೇಳೈಸಿದ ಏಕರೂಪ ಎಂದರೆ ತಪ್ಪೇ ?

ನನಗನಿಸಿದ್ದು ಇಂಥಾ ’ಮನುಷ್ಯ’ ವೈದ್ಯರೂ ಇದ್ದಾರ್ಯೇ ನಮ್ಮ ಇಂದಿನ ದಿನದಲ್ಲಿ! ಇರಬೇಕ್ರೀ ಇಂಥವರು. ಸೇವೆಯೆಂಬ ಸೋಗಿನಲ್ಲಿ ಹಣವನ್ನೇ ಪರಿಗಣಿಸಿ ಬಹುಮಹಡಿಗಳ ಹಾಸ್ಪಿಟಲ್ ಕಟ್ಟುವ ಹಾಗೂ ವೈದ್ಯ ವೃತ್ತಿಯನ್ನೇ ಕಂಪ್ಲೀಟ್ ಕಮರ್ಷಿಯಲೈಸ್ ಮಾಡಿರುವ ಅಸಂಖ್ಯಾತ ವೈದ್ಯರುಗಳ ನಡುವೆ ಕೇವಲ ಬೆರಳೆಣಿಕೆಯಷ್ಟು ವೈದ್ಯರು ಈ ರೀತಿ ಇರುತ್ತಾರೆ. ಅಪರೂಪಕ್ಕೆ ಪರಮಾತ್ಮ ಅವರನ್ನೂ ಹುಟ್ಟಿಸುತ್ತಾನೆ. ಯಾಕೆಂದರೆ ಯಾರಾದರೂ ಬಡವರು ಕಾಸಿಲ್ಲದವರು ಬಂದರೆ ಸರಕಾರೀ ಆಸ್ಪತ್ರೆಗಳಲ್ಲಿ ಕುಳಿತು ಸುಲಿಯುವ ಹಲವು ವೈದ್ಯರಿಲ್ಲವೇ ? ಅವರೆಲ್ಲರ ನಡುವೆ ಗೀತೆಯ ಬೋಧೆಯಂತೇ " ತದಾತ್ಮಾನಾಮ್ ಸೃಜಾಮ್ಯಹಮ್" --ತನ್ನ ಆತ್ಮವನ್ನೇ ಹಲವು ಹಂತಗಳಲ್ಲಿ, ಹಲವು ರೂಪಗಳಲ್ಲಿ, ಹಲವು ಪರಿಚ್ಛೇದಗಳಲ್ಲಿ ಸೃಷ್ಟಿಸುತ್ತೇನೆ ಎಂದು ಪರಮಾತ್ಮ ಹೇಳಿದ್ದಾನೆ. ಅವನ ಸೃಷ್ಟಿಯ ಒಂದು ರೂಪ ಇದೂ ಸಹಾ ಅಂದರೆ ತಪ್ಪಲ್ಲವಲ್ಲ. ’ಕೃಷ್ಣ’ನೆಂಬ ಹೆಸರನ್ನೇ ಹೊತ್ತಿದ್ದರೂ ಯಾವುದೇ ಕುಟಿಲ ಕಾರಸ್ಥಾನವಿಲ್ಲದ ’ರಾಮ’ನಾದ ಈ ವೈದ್ಯರಲ್ಲಿ ಸಿಗದ ಪರಿಹಾರವೇ ಇಲ್ಲ. ನಾನು ಆಯುರ್ವೇದವೆಂದೆ-ಅದರಬಗ್ಗೆ ಮಾತನಾಡಿದರು, ಯೋಗವೆಂದೆ-ಅದನ್ನೂ ಅಳವಡಿಸಿಕೊಂಡಿದ್ದಾಗಿ ತಿಳಿಸಿದರು, ಧ್ಯಾನವೆಂದೆ- ಅದು ಬೇಕೇಬೇಕು ಎಂದರು, ಪರಾತತ್ವದಲ್ಲಿ ನಂಬಿಕೆಯೆಂದೆ-ತಾನು ನಾಸ್ತಿಕನಾಗಿದ್ದಾಗಿನಿಂದ ಆಸ್ತಿಕತೆಗೆ ಬಂದ ಎಲ್ಲಾ ಹಂತಗಳನ್ನೂ ವಿವರಿಸಿದರು. ಕಾವ್ಯದಲ್ಲಿ ತನ್ನನ್ನೇ ತಾನು ಮರೆಯುವ ತಾಕತ್ತು ಇದೆಯೆಂಬ ನಿತ್ಯಸತ್ಯವನ್ನು ಉಸುರಿದ ಈ ವೈದ್ಯರು ತಮ್ಮ ಬಿಡುವಿನ ವೇಳೆಯಲ್ಲಿ ಸ್ವಸಂತೋಷಕ್ಕಾಗಿ ಹಾಗೂ ನಮಗೆಲ್ಲರಿಗಾಗಿ ಕಾವ್ಯ ರಚನೆಯಲ್ಲಿ ತೊಡಗುತ್ತಾರೆ! [ refer : http://dtkmurthy.blogspot.com] ಐ ಸೆಲ್ಯೂಟ್ ದಿ ಒನ್ ವ್ಹೂ ಸ್ಟ್ಯಾಂಡ್ಸ್ ಔಟ್ ಆಫ್ ದಿ ಕ್ರೌಡ್.

ಜಯತು ಕೊಳಲಿನ ಕೃಷ್ಣ ಮೂರುತಿ
ಹರಸಿ ಬನ್ನಿ ಅನುದಿನ
ನಮ್ಮ ಬ್ಲಾಗಲಿ ಹಾಡು ಬರೆಯಲು
ನೀಡಿ ನಮಗೆ ಚೇತನ

ನಮ್ಮೊಡನೆ ಅಂದು ಸ್ನೇಹ ಕೂಟದಲ್ಲಿ ಪಾಲ್ಗೊಂಡಿದ್ದ ಶ್ರೀ ಪರಾಂಜಪೆ, ಶ್ರೀ ಪ್ರವೀಣ್ ಆರ್. ಗೌಡ, ಶ್ರೀ ನಾಗರಾಜ್ ನಿಮಗೆಲ್ಲರಿಗೂ ಒಂದನೆಗಳು. ಎಲ್ಲರೂ ಬಹಳ ಉತ್ತಮ ಸಂಸ್ಕೃತಿಯನ್ನು ಹೊಂದಿದವರೇ, ಒಳ್ಳೆಯ ಬರಹಗಾರರೇ. ಆದರೂ ನಮ್ಮೆಲ್ಲಾ ಸಾಮಾನ್ಯರಲ್ಲಿ ಅವರೊಬ್ಬ ಸರ್ಜನ್ ನಡುವೆ ತೂರಿಕೊಂಡು ಅತ್ಯಂತ ವಿಶಿಷ್ಟವಾಗಿ ಕಾಣುತ್ತಾರೆ! ಹೀಗಾಗಿ ನಮ್ಮೆಲ್ಲರ ಬಗ್ಗೆ ಪರಾಂಜಪೆಯವರೇ ಬರೆದಿರುವುದರಿಂದ ಮತ್ತೆ ಹೊಸದಾಗಿ ಅದನ್ನೇ ಹಾಡಲಿಲ್ಲ. ಎಲ್ಲರ ಬಗ್ಗೆಯೂ ಕಳಕಳಿ, ಗೌರವ ಇದ್ದೇ ಇದೆ. ಎಲ್ಲರನ್ನೂ ಮೊದಲೇ ಹೃದಯದಲ್ಲಿ ಹುದುಗಿಸಿಕೊಳ್ಳುವಷ್ಟು ಜಾಗ ಮಾಡಿಕೊಂಡು ವೀ. ಆರ್. ಭಟ್ [we are bhat]ಆಗಿದ್ದೇನೆ, ನಿಮ್ಮೆಲ್ಲರ ಸ್ನೇಹದ ಕಾರಂಜಿ ಸದಾ ಚಿಮ್ಮುತ್ತಿರಲಿ, ಹಾಗೇ ಆ ಕಾರಂಜಿಯ ಹಾರುವ ತುಂತುರು ಹನಿಗಳು ಸಾವಿರ ಸಾವಿರ ಕವನಗಳಾಗಿ ಎಲ್ಲ ಬ್ಲಾಗಿಗರ ಅಂಗಳಗಳಲ್ಲಿ ರಾರಾಜಿಸಲಿ, ಹಿತವಾದ ’ಕೊಳಲ’ಗಾನ ಗಾಳಿಯಲ್ಲಿ ತೇಲಿ ತೇಲಿ ಬಂದು ಕರ್ಣಾನಂದಕರವಾಗಿ ಪರಿಣಮಿಸಲಿ ಎಂದು ಹಾರೈಸುತ್ತೇನೆ, ಎಲ್ಲರಿಗೂ ನಮಸ್ಕಾರ.