ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, June 21, 2010

ಡಿಫರೆಂಟಾಗಿ ಮೀಸೆ ಪುರಾಣ !!


[ಚಿತ್ರಗಳ ಕೃಪೆ : ಅಂತರ್ಜಾಲ ]

ಡಿಫರೆಂಟಾಗಿ ಮೀಸೆ ಪುರಾಣ !!

ವಕ್ರತುಂಡ ಮಹಾಕಾಯ

ಮಂಗತಿಂತೋ ಬಾಳೇಕಾಯ ||

-ಕ್ಷಮಿಸಿ ನಾವ್ ಹೇಳೋದೆಲ್ಲಾ ತಮಾಸೆಗಾಗಿ ಅಂತ ಉದ್ದುದ್ದ ಬೆಳೆದ ಗಡ್ಡ ನೀವುತ್ತ ಬಂದ ನಮ್ಮ ಕುಂದಾಪುರ ಆಚಾರಿ. ನೀವೇನೇ ಅಂದರೂ ನಮ್ಮ ಮೀಸೆ ಸುಬ್ರಾವ್ ಸಂಗಡ ನಾವೆಲ್ಲಾ ಸೇರಿಕೊಂಡರೆ ಆ ದಿನ್ನವೇ ಬ್ಬೇರೆ [ಇಲ್ಲಿ ಒತ್ತು ಕೊಟ್ಟು ಹೇಳಿರುವುದೇ ಅದಕ್ಕೆ!].ಮೀಸೆ ಅಂದಾಕ್ಷಣ ನೆನಪಿಗೆ ಹಲವರು ಬರುತ್ತಾರೆ, ಯಾಕೇಂತ ನಿಮಗೆ ಹೊಸದಾಗಿ ಹೇಳೊದೇನೂ ಬೇಡ! ಹುರಿಮೀಸೆ, ಕುರಿಮೀಸೆ, ಬೆಕ್ಕಿನ ಮೀಸೆ, ಜಿರಲೆ ಮೀಸೆ, ಗಿರಿಜಾ ಮೀಸೆ, ವಿರಜಾ ಮೀಸೆ, ಕಡ್ಡಿ ಮೀಸೆ, ಬಂಗಾರು ಮೀಸೆ, ಚಿಗುರು ಮೀಸೆ, ಮೊಟ್ಟೆ ಮೀಸೆ, ಪೊದೆಮೀಸೆ, ಫಿಲ್ಟರ್ ಮೀಸೆ ಹೀಗೇ ಮೀಸೆಗಳನ್ನು ಲಿಸ್ಟ್ ಹಾಕುತ್ತ ಹೋದರೆ ಮೀಸೆಯ ಬಹುದೊಡ್ಡ ಲೋಕ ತೆರೆದುಕೊಳ್ಳುತ್ತದೆ.

ಯಾಕೇಂದ್ರೆ ಬಹುತೇಕ ನಮ್ಮಲ್ಲಿನ ಗಂಡಸರ ಐನಾತಿ ಆಸ್ತಿಯೇ ಮೀಸೆ! "ಸಾ ಮೀಸೆ ಟ್ರಿಮ್ ಮಾಡ್ಲಾ?" ಅಂತ ಹಜಾಮ ಕೇಳದ್ರೆ ಹುಷಾರಪ್ಪಾ ಸ್ವಲ್ಪ ಎಡಕ್ಕೆ ಸ್ವಲ್ಪ ಬಲಕ್ಕೆ ಸ್ವಲ್ಪ ಮೇಲೆ ಸ್ವಲ್ಪ ಕೆಳಗೆ ಎಂದೆಲ್ಲ ಅವನ ಕತ್ತರಿಗೆ ನಾವು ಕನ್ನಡಿಯಲ್ಲಿ ನೋಡುತ್ತಾ ಗೈಡ್ ಮಾಡುವಷ್ಟು ಜಗದಗಲದ ಮೌಲ್ಯ ಪಡೆದಿರುವುದು ಮೀಸೆ!

ದಶಕಂಠನಳಿದ ಮರುದಿನ
ಉಳಿದ ಕಪಿಗಳು ಸೇರಿ
ಅವನ ಮತ್ತವನ ಸೋದರ ಕುಂಭಕರ್ಣನ
ಹರವಾದ ಎದೆಯ ಮೆಲೆ ಹತ್ತಿ ಮನಸೋ ಇಚ್ಛೆ ಥಕಥಕ ತೈ
ಎಂದು ತಾವ್ ಕುಣಿದೂ...........
ಮಸಣವಾಗಿರ್ಪ ವಸುಧೆಯ ಭಾಗದೋಳ್
ಅಸುರ ಭುಜಬಲರು ನಿಸ್ಸಹಾಯರಾಗಿ ಮಲಗಿರಲು
ಗಸಗಸನೆ ಅವರ ಮೀಸೆಯಂ ಹಸಿ ಹುಲ್ಲು ಕೊಯ್ದಂತೇ ಕುಯ್ದು
ಮತ್ತೆ ಪ್ರೀತಿಯಿಂದವುಗಳಂ ತಂದು ನಾಟಿ ಮಾಡಿ ನೀರೆರೆಯಲ್ಕೆ
ನಸುನಕ್ಕ ರಾಮ ಕಪಿವೃಂದವಂ ಕರೆಯುತ್ತ ಏನದೇನೆನ್ನಲಾಗ
ಪಶುಗಳೈ ನೀವು ನಿಮಗ್ಯಾಕೆ ಮಂಡೆ ಸರಿಯಿಲ್ಲ
ಅಶುತೋಷ ಕೊಟ್ಟಿರ್ಪ ವರವಿಕ್ಕು ಪೆಂಡಿಂಗಲ್ಲಿ ಅದನ್ನು
ಖುಷಿಯಾಗಿ ನಿಮಗೀವೆ ನಡೆಯಿರೆಂದೆನಲು ಹರುಷಗೋಂಡಾ ಮಂಗಗಳ್
ಹಸನು ಮಾಡೆಮ್ಮ ಬದುಕ ನಮ್ಮನು ಮನುಜರಿಂ ಬೇರ್ಪಡಿಸು
ಅತಿಶಯದಿ ಅವರ್ಗೆ ಗುರುತಿರ್ಪಂತೆ ಪುಕ್ಸಟೆ ಬೆಳೆವಂತ ಪೊದೆ ಮೀಸೆಯಂ ಅನುಗ್ರಹಿಸಿ
ಅಶನವಶನಾದಿಗಳನೆಲ್ಲ ತೆಗೆದುಕೊಂಡಂತೆ ಮೀಸೆಯ ಬೆಳೆಯಗೊಡೆಂದು ಬೇಡಿದರು
ಕುಶಲದಲಿ ಭಕ್ತವತ್ಸಲ ತಾನು ಮುನ್ನಡೆದು
ಕೃಷವಾದ ದಣಿದ ಕಪಿಗಳನೆಲ್ಲ ಸಂತೈಸಿ
ಅಶರೀರವಾಗಿ ಅಡಗಿದ್ದು ಶರೀರದಲಿ
ಸಶರೀರಿಯಾಗಿ ಮೂಗಿನ ಕೆಳಗೆ ಬೆಳೆದು ನೆಲೆನಿಂತು
ಕಸದೋಪಾದಿಯಲಿ ಗರಿಕೆ ಹುಲ್ಲಿನಂದದಲಿ
ಮಿಸುನಿಗೂ ಮಿಕ್ಕ ಬೆಲೆ ಪಡೆದು ಬದುಕೆಂದು
ಹರಸಿ ಪರಮ ಸಂತೋಷದಿಂದಾ.....ಆಆಆಅ.....ಆಆಆಆಆ.....ಆ.

ಬೋಲೋ ಮೀಸೆಮಹಾರಾಜಕೀ ಜೈ.... [ಮೀಸೆ ಮಹಾರಾಜನ ಥರವೇ ಅಲ್ಲವೇ? ]

ನಮ್ಮಲ್ಲಿ ಹಿಂದಕ್ಕೆ ಒಬ್ಬ ಬೇಳೆರಾಯ ಅಂತಿದ್ದ! ಬೇಳೆ ದರ ಜಾಸ್ತಿ ಅಂತ ಹೇಳುತ್ತಿಲ್ಲ. ನಿಜವಾಗಿಯೂ ಆ ಹೆಸರಿನ ವ್ಯಕ್ತಿಯೊಬ್ಬನಿದ್ದ. ಅವನು ಬೇಳೆ ಮಾರುತ್ತಿದ್ದುದೇನೂ ಕಂಡು ಬಂದಿಲ್ಲ, ಆದರೂ ಅವನಿಗೆ ಅದ್ಯಾಕೆ ಆ ಹೆಸರೋ ಗೊತ್ತಿಲ್ಲ! ಇರಲಿ, ನಮ್ಮ ಕಣ್ಣಿರೋದು ಸದ್ಯ ಅವನ ಮೀಸೆ ಮೇಲೆ! ಅವನಿಗೆ ಫಿಲ್ಟರ್ ಮೀಸೆ ಇತ್ತು. ನಾವೆಲ್ಲ ಆತ ನಮ್ಮನೆಗೆ ಬಂದಾಗ ಚಾ ಮಾಡಿದರೆ ಸೋಸದೇ ಹಾಗೇ ಕೊಡಿ ಬೇಳೆರಾಯರಿಗೆ ಅಂತ ತಮಾಷೆ ಮಾಡುತ್ತಿದ್ದೆವು. ಆತನ ಮೀಸೆಯ ಒರಿಜಿನಲ್ ಕಲರ್ ಬೆಳ್ಳಗಿದ್ದರೂ [ಆತ ಎಡಮುದುಕನಾಗಿದ್ದ] ಮೀಸೆ ಫಿಲ್ಟರ್ ಕೆಲಸ ಮಾಡೀ ಮಾಡೀ ಕಲರ್ ಕಲರ್ ವ್ಹಾಟ್ ಕಲರ್ ಅನ್ನೋ ರೀತಿ ಆಗುತ್ತಿತ್ತು. ಅದರಲ್ಲೂ ಆತ ಬ್ರಹ್ಮಾನಂದದಿಂದ ಎಲೆ ಅಡಿಕೆ ಹಾಕಿಕೊಂಡು ಅಗಿದಗಿದು ಆಗಾಗ ಪ್ಸೋ ಪ್ಸೋ ಪ್ಸೋ ಪ್ಸೋ ಪು ಅಂತ ಅದನ್ನು ಉಗುಳುವಾಗ ಶೇಕಡಾ ೨೦ ಮೀಸೆಯಲ್ಲಿ ಪಾಸಾಗದೇ ಮರಳುತ್ತಿತ್ತು. ಹೀಗೆ ಹೊರಳಿ ಮರಳುವ ಮಧ್ಯೆ ಮೀಸೆಗೆಲ್ಲ ಕೆಂಪು ಬಣ್ಣವನ್ನು ಕೊಟ್ಟು ಮೇಲರ್ಧಬಿಳಿ-ಕೆಳಾರ್ಧ ಕೆಂಪು ಆಗಿರುವ ಮೀಸೆಯನ್ನು ನೋಡಿದರೆ ಸ್ಕೂಲ್ ಹುಡುಗರ ಯುನಿಫಾರ್ಮ್ ನೆನೆಪಾಗುತ್ತಿತ್ತು! ಅಂತಹ ಅದ್ಬುತ ಮೀಸೆಯನ್ನು ಹದವಾಗಿ ಸ್ನಾನ ಮಾಡಿಸಿ,ಕೊಬ್ಬರಿ ಎಣ್ಣೆ ಉಜ್ಜಿ ನಯವಾಗಿ ಹೊಳೆವಂತೆ ಮಾಡಿ, ಅದರ ಹಿಂಡಲ್ಲೇ ಬಾಯಗಲಿಸಿ ನಗುವ ನಗುವಿನ ಸೌಂದರ್ಯವೇ ಬ್ಬೇರೆ!

"ಏನ್ ರಾಯ್ರೇ ಬರಲೇ ಇಲ್ಲ ಬಹಳ ದಿವ್ಸ ಆಯ್ತು" ಅಂದ್ರೆ

"ಆರಾಮಿರ್ಲಿಲ್ಲ, ಘಟ ಇದ್ರೆ ಮಠ ನೋಡ್ಕಂಡ ಬಿಡು,ಶರೀರ ಮುಖ್ಯ ಅಲ್ಲವೇ " ಎಂದುಕೊಂಡು
ನಕ್ಕು ಬಿಟ್ಟರೆ ರಾಯರ ಫಿಲ್ಟರ್ ಮೀಸೆಗೆ ಬೀಳದ ಜನವೇ ಇಲ್ಲ! ಇರ್ಲಿ ಪಾಪ ಮುದುಕ ಈಗಿಲ್ಲ, ಬನ್ನಿ ಹೀಗೆ ಮತ್ಯಾವ್ದೋ ಕೇಸ್ ನೋಡೊಣ-

ಮೀಸೆ ಅಂದುಬಿಟ್ಟರಾಯಿತೇ, ನೀವೇ ಹೇಳಿ ನೋಡುವಾ, ನಮ್ಮ ಬಂಗಾರು ಆಡಳಿತದಲ್ಲಿದ್ದಾಗ ಬಹಳಮಂದಿ ಅವರ ಭಕ್ತರೆಲ್ಲ ಅದೇ ಥರ ಮೀಸೆ ಬೆಳೆಸಿದ್ದರು. ಇನ್ನೂ ಕೆಲವರು ಅವರ ಥರ ಮಾಡಲು ಹೋಗಿ ಅದು ಆಕಡೆಗೂ ಈಕಡೆಗೂ ಇಲ್ಲದೇ ಏನೋ ವಿಚಿತ್ರ ಶೇಪ್ ಪಡೆದಾಗ ಸದ್ಯ ಬೇಡ ಬಿಡು ಎಂದು ಸಂಪೂರ್ಣ ಬೋಳಿಸಿಕೊಂಡಿದ್ದರು!

ಅಣ್ಣಾವ್ರ ಸಿನಿಮಾ ಪಾತ್ರಗಳಲ್ಲಿರುವ ಕೆಲವು ಮೀಸೆಯ ಇಷ್ಟೈಲ್ ನೋಡಿ ತಾವೂ ಅದೇ ರೀತಿ ಬಿಟ್ಟುಕೊಂಡವರು ಕೆಲವರಾದರೆ, ಅಂಬರೀಸು ಜೈಜಗದೀಸು ರಜನೀಕಾಂತು ಇವ್ರದ್ದೆಲ್ಲ ಒಂದೊಂದ್ಕಿತಾ ಒಂದೊಂದು ಪಾರ್ಟ್ ಬಂದಾಗ ಅರ್ಜಿನಮೂನೆ ಅಂದಾಂಗೆ ಅದೇ ನಮೂನೆ ಮೀಸೆ ಹೊತ್ತ ಮಹನೀಯರು ಹಲವರು.

ಅದೇ ಕಾಲಕ್ಕೆ ’ಮೀಸೆ ಹೊತ್ತ ಗಂಡಸಿಗೇ ಡಿಮಾಂಡಪ್ಪೋ ಡಿಮಾಂಡು....’ ಹಾಡು ಬರುತ್ತಿತ್ತು. "ಏನೂ ಇರ್ಲಿ ಒಂದ್ ಇಷ್ಯ ಗ್ಯಾರಂಟಿ ಮೀಸೆ ಇಲ್ದೇ ಇದ್ರೆ ಅಂವ ಗಂಡಸೇ ಅಲ್ಲ" ಅಂತ ಕಿವಿಯಲ್ಲಿ ಗುಟ್ಟಾಗಿ ಹೇಳಿದ್ದ ಕುಂದಾಪುರ.

ಇನ್ನು ನಾವು ಮದುವೆಗೆ ಹೋದಾಗ ಬಹಳ ಸಮಯ ಸಿಗುತ್ತಿತ್ತು. ಊಟಕ್ಕೆ ತಯಾರಾಗುವವರೆಗೆ ಯಾಉ ಯಾವ ರೀತಿ ಮೀಸೆ ಬಿಟ್ಟಿದ್ದಾರೆ, ಯಾರಿಗೆ ಅದು ಯಾವರೀತಿ ಕಾಣುತ್ತದೆ ಎಂಬೆಲ್ಲ ವಿಷಯದ ಮೇಲೆ ಮನದಲ್ಲೇ ಪ್ರಬಂಧ ಬರೆಯಲ್ಪಡುತ್ತಿತ್ತು. ಒಮ್ಮೆ ಒಬ್ಬ ಸುಮಾರು ೨೪-೨೫ ವರ್ಷದ ಹುಡುಗ ಅಂತ್ರಟಿಕೆ ಮೀಸೆ ಬಿಟ್ಟಿದ್ದನ್ನು ಕಂಡಿದ್ದು ಇನ್ನೂ ನೆನೆಪಿದೆ! ಅಂತ್ರಟಿಕೆ ಅಂದ್ರೆ ಅರ್ಥ ಆಯ್ತೇ? ಅದು ಮೂಗಿಗೂ ಮೇಲ್ದುಟಿಗೂ ಇರುವ ಜಾಗವನ್ನು ಭೂಮಧ್ಯರೇಖೆ ಹಾದುಹೋದ ಹಾಗೇ ಮಧ್ಯದಲ್ಲಿ ಒಂದು ನಾಮ ಎಳೆದ ರೀತಿ ಇತ್ತು.[ಅಂತ್ರಟಿಕೆ ಅಂದರೆ ಮೇಲೂ ಅಲ್ಲ ಕೆಳಗೂ ಅಲ್ಲ ಅಂತ] ಆತನನ್ನು ನೋಡಿದರೇ ನಗುಬರಿಸುತ್ತಿತ್ತು! ಬಹಳ ಜನ ಆತನನ್ನು ನೋಡಿ ನಗುತ್ತಿದ್ದರೂ ಆತನೂ ನಗುತ್ತಿದ್ದ, ಆದರೆ ವಿಷಯ ಆತನ ಮೀಸೆಯೇ ಆಗಿತ್ತು!ಅದು ಅವನಿಗೆ ತಿಳಿದಿರಲಿಲ್ಲ. ಬಿಟ್ಟಾಕಿ ಮಾಣಿ ಪೋರ ಪಾಪ ಹೋಗ್ಲಿ.

ಸಾಹಿತಿಗಳೂ ಮೀಸೆಯಲ್ಲೇನೂ ಕಮ್ಮಿ ಇಲ್ಲ. ಹಿರಿಯ ಕವಿಗಳಲ್ಲಿ ಪೊದೆ ಮೀಸೆಯ ಕವಿಗಳನ್ನೂ, ಕಡ್ಡಿ ಮೀಸೆಯ ಕವಿಗಳನ್ನೂ ಕಾಣಬಹುದಾಗಿದೆ. ಪೊದೆ ಮೀಸೆ ಎಂದರೆ ಅದು ಹದವಗಿ ಪಾರ್ಕಿನಲಿ ಬೆಳೆಸಿದ ಕ್ರೋಟನ್ ಸಸ್ಯದ ಥರ ಇರುತ್ತದೆ,ಆಕಾರದಲ್ಲಿ ಗಿಡಗಳ ಪೊದೆಯನ್ನೇ ಹೋಲುವುದರಿಂದ ಅನ್ವರ್ಥನಾಮವನ್ನು ಕೊಡಲಾಗಿದೆ! ಕಡ್ಡಿ ಮೀಸೆ ಎಂದರೆ ತುಟಿಯ ಮೇಲ್ಭಾಗದಲ್ಲಿ ಇನ್ನೇನು ಒಂದು ಎಮ್ ಎಮ್ ಕೆಳಗೆ ಬಂದರೆ ತುಟಿಯೇ ಎಂಬಲ್ಲಿ ಸ್ಥಾನ ಪಡೆದಿರುವ ವಕ್ರ ರೆಖಾಕಾರದ ಮೀಸೆ. ಅವರಿಗೆ ಮೀಸೆ ಬೇಕು ಆದರೆ ಜಾಸ್ತಿ ಬೇಡ. ಹದವಾಗಿ ರಂಗೋಲಿ ಎಳೆ ಬಿಟ್ಟ ಹಾಗೇ ಒಂದೇ ಕಡ್ಡಿಯನ್ನು ತಲೆಕೆಳಗಾದ ಆಂಗ್ಲ ಸಿ ಅಕ್ಷರದಂತೆ ಇಟ್ಟುಕೊಳ್ಳುವುದು. ಇದನ್ನು ಬಹಳಕಡೆ ನೋಡಿದ್ದಿದೆ.

ಗಿರಿಜಾಮೀಸೆಯನ್ನು ಬಿಡುವವರು ವೀರಪ್ಪನ್ ಅಥವಾ ಅದೇ ರೀತಿಯ ಮೀಸೆಯನ್ನೇ ಬಲವಾಗಿ ನೀವಿಕೊಳ್ಳುತ್ತ ಅದರ ಆಕಾರದಲ್ಲೇ ಹೆದರಿಸುವವರು. ನೋಡಿ ವೀರಪ್ಪನ್ ನನ್ನು[ಫೋಟೊ ನೋಡಿ ಆತ್ ಈಗಿಲ್ಲ!] ನೋಡಲು ಗಾಳಿಗೆ ಹಾರಿ ಹೋಗುವಂತಿದ್ದರೂ ತುಂಬಾಲೆಯ ಶರೀರವಾದರೂ ಕೆ.ಜಿಯಷ್ಟು ಮೀಸೆ ಹೊತ್ತಿದ್ದ! ಜನ ಆ ಮೀಸೆಯನ್ನು ನೋಡಿಯೇ ಗಡ ಗಡ ಗಡ ಗಡ ...ಎನ್ನುತ್ತಿದ್ದರು. ನಮ್ಮ ಪೋಲೀ ಸಣ್ಣಗಳೆಲ್ಲ ಚಡ್ಡಿಯಲ್ಲಿ ಚೇಳು ಕುಟುಕಿದ ಹಾಗೇ ಯಮಯತಾನೆ ಪಡುತ್ತಿದ್ದರು. ಇತ್ತ ಕರ್ತವ್ಯ ಅತ್ತ ಜೀವಭಯ ! ಉಸ್ಸಪ್ಪಾ ವೀರಪ್ಪಾ ಸದ್ಯ ಸತ್ಯಲ್ಲ!

ಕೆಲವರಿಗೆ ಬೆಕ್ಕಿನ ಪ್ರವೃತ್ತಿ, ಉಣ್ಣುವುದು-ತಿನ್ನುವುದು ಎಲ್ಲಾ ಬೆಕ್ಕಿನ ಥರವೇ! ಅವರ ಮೀಸೆ ಕೂಡ ಹಾಗೇ. ಯಾಕೆಂದರೆ ಪಾಪ ಅವರಿಗೆ ಜಾಸ್ತಿ ಮೀಸೆ ಬೆಳೆಯೋದಿಲ್ಲ, ಆದಕಾರಣ ಅವರು ಮೀಸೆಯ ಜಾಗದಲ್ಲಿ ಅಡ್ಡಡ್ಡ ತಿರುವಿದ ಉದ್ದನೆಯ ಕೆಲವು ಕೂದಲನ್ನು ಬಿಟ್ಟಿರುತ್ತಾರೆ. ಇಂಥವರಿಗೆ ತಲೆಯೂ ಕೂಡ ನವಿಲು ಕೋಸಿನಥರ ಅದರ ಮೇಲೆ ನಾಲ್ಕೇ ನಾಲ್ಕು ಕೂದಲು.

ಜಿರಲೆ ಮೀಸೆ ಇನ್ನೂ ವಿಚಿತ್ರ, ಅಲ್ಲಿ ಮೀಸೆ ಒಮ್ಮೆ ಅಡಗುತ್ತದೆ ಇನ್ನೊಮ್ಮೆ ಹೌದೋ ಅಲ್ಲವೋ ಎಂಬಂತೆ ಕಾಣಿಸುತ್ತದೆ, ಇದು ಜಿರಲೇ ಮೀಸೆ. ಜಿರಲೆ ತಿಂದ ಮೀಸೆ ಬೇರೆ- ಮೀಸೆಯ ಮಧ್ಯೆ ಮಧ್ಯೆ ಗ್ಯಾಪ್ ಬಿಟ್ಟಿದ್ದರೆ ಅದು ಜಿರಲೆ ತಿಂದ ಮೀಸೆ!

ಉತ್ತರ ಕರ್ನಾಟಕದ ಭಾಗಗಳಲ್ಲಿ ಕಾಣಸಿಗುವ ನಾ ಮೇಲೋ ತಾ ಮೇಲೋ ಎಂದು ತಿರು ತಿರುವಿ ಬಿಡುವ ತುದಿ ಮೇಲಾದ ಮೀಸೆ ಹುರಿ ಮೀಸೆ!ಉದ್ದ ಹುರಿಯಂತೆ ತಿರುತಿರುವಿ ಬಿಡುವ ಈ ಮೀಸೆಯಲ್ಲಿ ಎನೋ ಸಾಧಿಸಿದ ಹಂಬಲವಿರುತ್ತದೆ-ಸಾಧನೆ ಶೂನ್ಯವಾದರೂ ಮೀಸೆಗೇನ್ರಿ ಬಂತು ಬರಗಾಲ, ಅದೇ ಬರಗಾಲ ಬಂದ್ರೂ ಮೀಸೆಗೆ ಬರಗಾಲವಿಲ್ಲ ಅಲ್ಲಿ!

ಕೆಲವರದು ಮೊಟ್ಟೆ ಮೀಸೆ-ಥೇಟ್ ಕೋಳಿ ಮೊಟ್ಟೆಯ ಹಾಗೇ ಸಕತ್ ಮಿಲಿಟ್ರಿ ಕಟ್ ಮಾಡಿಸಿ ಕಾಪಿಡುವ ಮೀಸೆ ಮೊಟ್ಟೆ ಮೀಸೆ, ಈ ಮೀಸೆ ಪೊದೆ ಮೀಸೆಯ ಒಡಹುಟ್ಟಿದ ಮೀಸೆ ಎನ್ನಬಹುದು!

ಹಳ್ಳಿಯಲ್ಲಿ ಗುಂಯ್ಗುಡುವ ದೊಡ್ಡ ನೊಣವನ್ನು ನೋಡಿರುತ್ತೀರಿ, ಇಂಥ ನೊಣ ತಲೆಕೆಳಗಾಗಿ ಅಥವಾ ತಲೆ ಮೇಲಾಗಿ ಮೂಗಿನ ಕೆಳಗೆ ಏನೋ ತಿನ್ನುತ್ತ ಕೂತ ಸ್ಟೈಲಿನ ಮೀಸೆಯೊಂದಿದೆ. ಅದನ್ನು ಫ್ರೆಂಚ್ ಮೀಸೆ ಎನ್ನುತ್ತಾರಂತೆ! ನೊಣದಷ್ಟೇ ಜಾಗದಲ್ಲಿ ಬೆಳೆಸಿ ಬಾಕಿ ಎಲ್ಲಾ ಜಾಗವನ್ನೂ ನುಣ್ಣಗೆ ಬೋಳಿಸಿ ಬೆಳೆಸುವ ಕಲಾವಿದರಿಗೆ ರಾಜ್ಯಪ್ರಶಸ್ತಿ ಕೊಟ್ಟರೂ ಕಮ್ಮಿಯೇ!

ಕುಡಿಮೀಸೆ ಗಂಡು ಬಲು ಅಂದ....ಹಾಡನ್ನು ಸ್ವಲ್ಪ ಹಳಬರು ಕೇಳಿದ್ದಾರೆ, ಈಗೆಲ್ಲ ಅವು ಬಾಕ್ಸ್ ಗಳಲ್ಲೂ ಇರುವುದು ಡೌಟು! ಈಗೇನಿದ್ದರೂ ಈ ಟಚ್ಚಲಿ ಏನೋ ಇದೆ ಅಲ್ಲವೇ? ಕಾಲಾಯ ತಸ್ಮೈ ನಮಃ || ಕುಡಿ ಮೀಸೆ ಎಂದರೆ ಆಗತಾನೇ ಕುಡಿಯೊಡೆಯತೊಡಗಿದ್ದು. ಅದು ಎಷ್ಟರ ಮಟ್ಟಿಗೆ ಅಂದವೋ ಹುಡುಗಿಯರನ್ನೇ ಕೇಳಬೇಕು.

ಮರೆತೇ ಬಿಟ್ಟಿದ್ದೆ--ಈಗೀಗ ಕುದುರೆ ಲಾಳಾಕೃತಿಯ ಮೀಸೆ ಬೆಳೆಸಿ ಅದನ್ನು ಗಡ್ಡಕ್ಕೂ ಸೇರಿಸಿ ಮಧ್ಯದಲ್ಲಿ ಸಣ್ಣ ಬಕ್ರೀ ಕಾ ದಾಡಿ ಎಂಬ ಕುರಿ ಗಡ್ಡವನ್ನು ಕೆಳತುಟಿಯ ಇಮ್ಮೀಡಿಯೇಟ್ ಕೆಳಗೆ ಬಿಟ್ಟು ಜುಗಲ್ ಬಂದಿ ಮಾಡುವ ಕಾರ್ಪೋರೇಟ್ ಕಲಾವಿದರಿದ್ದಾರೆ ! ನಿಜವಾಗಿಯೂ ಜಗದಲ್ಲಿ ಕುಶಲಕರ್ಮಿಗಳಿಗೆ ಅವಾರ್ಡ್ ಇದ್ದರೆ ಅದನ್ನು ಇವರಿಗೇ ಮೀಸಲಿಡಬೇಕು!

ಎಲ್ಲದರಲ್ಲೂ ಪ್ರಾಧಾನ್ಯತೆ, ಮೀಸಲಾತಿ, ಒಳಮೀಸಲಾತಿ ಎನ್ನುವ ಹೆಂಗಸರೂ ಕಮ್ಮಿ ಎಂದು ತಿಳಿದರೆ ನಮಗಿಂತಾ ಪೆದ್ದರು ಬೇರೆ ಇಲ್ಲ! ಹೆಂಗಸರಿಗೂ ಮೀಸೆ ಇದೆ ಕಣ್ರೀ! ಆದರೆ ಪಾಪ ಈ ವಿಷಯದಲ್ಲಿ ಮಾತ್ರ ಅವರು ಮೀಸೆಲಾತಿ ಕೇಳೋದಿಲ್ಲ. ಇದ್ರಲ್ಲಾದ್ರೂ ಆ ಗಂಡಸ್ರು ಏನಾದ್ರೂ ಮಾಡ್ಕೊಂಡು ಹಾಳಾಗ್ ಹೋಗ್ಲಿ ಅಂತ ಬಿಟ್ಟುಬಿಟ್ಟಿದ್ದಾರೆ. ಅಪರೂಪಕ್ಕೆ ಬಂದರೆ ಅದನ್ನು ನಿವಾಳಿಸಿ ಕಿತ್ತೆಸೆಯಲು ವ್ಯಾಕ್ಸಿಂಗ್ ಮೊರೆ ಹೊಕ್ಕಿದ್ದಾರೆ! ಕಾಣುತ್ತಿಲ್ಲವೇ ನಿಮಗೆ ವೀಟ್ ಎಂಬ ಕ್ರೀಮಿನ ಜಾಹೀರಾತಿನಲ್ಲಿ ಕತ್ರೀನಾ ಕಬಡ್ಡಿ!

ಇದ್ದುದನು ಹೋಗಾಡೆ ಎದ್ದು ಮತ್ತೆ ತಾ ಬಕ್ಕು
ಮುದ್ದು ಮುಖದಲಿ ಕೆಲವರ್ಗೆ ಸೊಕ್ಕು ಮಿಕ್ಕೆಲವರ್ಗೆ
ಬಿದ್ದು ನಗಿಸುವ ಅಸಹ್ಯಕರ ತಾನಕ್ಕು
ಮುದ್ದೆ ತಿಂದರೂ ನಿದ್ದೆ ಮರೆತರೂ ಕದ್ದಾದರೊಮ್ಮೆ
ಮೀಸೆಯ ಮುಟ್ಟಿ ನೋಡಿಕೋ ಎಂದ | ಮರ್ಮಜ್ಞ

ಕೋಟಿ ವಿದ್ಯೆಗಳಲ್ಲಿ ಮೇಟಿವಿದ್ಯೆಯೆ ಮೇಲು
ನೀಟಾಗಿ ಮೀಸೆಬಿಟ್ಟವ ಮೇಲು ಮೀಸೆಯಂ
ಘಾಸಿಗೊಳಿಸಿದರೆ ಮುಖದ ಅಂದವೇ ಕೆಡುಗು| ಮರ್ಮಜ್ಞ


ನೆರೆಬಂದ ಕಾಲಕ್ಕೆ ಕರೆದು ದಾನವ ಮಾಡು
ಹುರಿಮೀಸೆ ತಿರುವಿ ಮನಸಾರೆ ಆ ’ಕೈ’ಗೆ
ಬರಬರನೆ ಸುರಿಯೆ ಸಂಪದವಕ್ಕು ಬೇಕಾದರ್ಗೆ
ಹರಿಯ ರೂಪದ ನರಿಯು ನೋಡ | ಮರ್ಮಜ್ಞ

ಮೀಸಾ ಯಾಕ್ಟು ಹಾಕಿದ್ದ ನಮ್ಮ ಇಂದ್ರಮ್ಮ ನಮಗೆಲ್ಲ ಮೀಸೆಯನ್ನು ನೆನಪಿಟ್ಟುಕೊಳ್ಳಲು ಆ ಕಾಯ್ದೆಗೇ ಹಾಂಗೆಸ್ರು ಇಟ್ಟುಬುಟ್ಟವ್ರೇ ಕಣ್ಲಾ ಅಂದ ಮೀಸೆ ಎಳ್ಕೋತ ಕಣ್ತಿರುವಿ ಲೂಸ್ ಮಾದ!

|| ಇತಿ ಶ್ರೀ ಮೀಸೆ ಪುರಾಣಕ್ಕೆ ಸದ್ಯಕ್ಕೆ ಪೂರ್ಣವಿರಾಮಂ ||

[ಮೀಸೆ ಪುರಾಣದ ಮುಂದಿನ ಭಾಗಕ್ಕಾಗಿ ಕಾದಿರಿ , ಮುಂದಿನವಾರದಲ್ಲಿ !]