ಭಾಗೀರಥಿ ಬರಲಿಲ್ಲ ಎಂಬುದು ಎಲ್ಲರ ಮನಸ್ಸಿಗೆ ಬೇಸರತಂದಿತ್ತು. ಬಹಳಕಾಲದಿಂದ ಭಾಗೀರಥಿ ಎಂದರೆ ನಮ್ಮೆಲ್ಲರ ಮೆಚ್ಚುಗೆ ಪಡೆದಿದ್ದಳು. ಅವಳ ಅಪರೂಪದ ರೂಪ, ಅವಳ ಸೌಮ್ಯ ಸ್ವಭಾವ, ಸಮಯಪ್ರಜ್ಞೆ ಮತ್ತು ಶಿಸ್ತು ಇದನ್ನೆಲ್ಲ ನೋಡಿದರೆ ಇವಳಿಗ್ಯಾರು ಇಷ್ಟು ಚೆನ್ನಾಗಿ ಹೇಳಿಕೊಟ್ಟರು ಎಂಬುದೇ ಅರ್ಥವಾಗದ್ದು ನಮಗೆ! ಬಹುಶಃ ಪೂರ್ವಜನ್ಮದ ಸ್ಮರಣೆಯೋ ಏನೋ ಭಾಗೀರಥಿ ನಿಜವಾಗಿಯೂ ಕಾಶೀ ಭಾಗೀರಥಿಯ ಅಪ್ಪಟ ಸಂಯಮವನ್ನೂ, ಸಹನೆಯನ್ನೂ, ಗುಣಧರ್ಮವನ್ನೂ ಪಡೆದವಳು.
ಮಳೆಗಾಲದ ಕರಾವಳಿಯ ದಿನಗಳೇ ಹಾಗೆ. ಅಲ್ಲಿ ಧೋ ಎಂದು ಸುರಿವ ಮುಸಲಧಾರೆಗೆ ಕೆಲವೊಮ್ಮೆ ದಿನಗಟ್ಟಲೆ ಕೆಲವೊಮ್ಮೆ ವಾರಗಟ್ಟಲೆ ಬಿಡುವೇ ಇರುತ್ತಿರಲಿಲ್ಲ. ಮಳೆಗಾಲ ಬಂತೆಂದರೆ ಹಳ್ಳಿಯ ಜೀವನವೆಲ್ಲ ದ್ವೀಪವಾಸಿಗಳ ಜೀವನದ ರೀತಿ ಆಗಿ ಬಿಡುತ್ತಿತ್ತು. ಪಟ್ಟಣ ಮತ್ತು ಹಳ್ಳಿಗಳ ನಡುವೆ ಸಂಪರ್ಕವೇ ಕಡಿದ ರೀತಿ ಇರುತ್ತಿತ್ತು. ಆಕಾಲದಲ್ಲಿ ಅಷ್ಟಾಗಿ ಸ್ಥಿರದೂರವಾಣಿಗಳು ಎಲ್ಲಕಡೆ ಲಭ್ಯವಿರಲಿಲ್ಲ. ದಿನಪತ್ರಿಕೆ, ಟಿ.ವಿ. ಯಾವುದೂ ಇರಲಿಲ್ಲ. ಅಂದಿನ ಮಹೋನ್ನತ ವಾರ್ತಾಮಾಧ್ಯಮವೆಂದರೆ ರೇಡಿಯೋ. ಅದು ಬಿಟ್ಟರೆ ಗ್ರಾಮಲೆಕ್ಕಿಗರು, ಸರಕಾರೀ ದಾಯಿಗಳು[ಹೆಲ್ತ್ ಇನ್ಸ್ಪೆಕ್ಟರ್ ಅಂತಾಗಿದೆ ಈಗ], ಮಾಸ್ತರರು ಇಂಥವರೇ ಸುದ್ದಿಮಾಧ್ಯಮವಾಗಿ ಶಾಲೆಯ ಮಕ್ಕಳ ಮೂಲಕ, ತಿರುಗಾಟದಲ್ಲಿ ಅಲೊಮ್ಮೆ ಇಲ್ಲೊಮ್ಮೆ ಭೇಟಿಯಾಗುವ ಜನರ ಮೂಲಕ ವಾರ್ತಾಲಾಪ ತಿಳಿಸುತ್ತಿದ್ದರು. ಆಗೆಲ್ಲ ಜನಸಂಖ್ಯೆಯೂ ಇಷ್ಟೊಂದು ಇರಲಿಲ್ಲ. ಬಾಂಬು ಚಾಕು-ಚೂರಿ ಸಂಸ್ಕೃತಿ ನಮಗೆಲ್ಲ ಕೇಳರಿಯದ್ದು. ಹೀಗೇ ಬದುಕು ಇರುವಷ್ಟು ಪರಿಕರಗಳಿಂದ ಸಂತೃಪ್ತಿಯಲ್ಲಿ ಯಾವುದೇ ಗೋಜಲುಗಳಿಲ್ಲದೇ ನಡೆಯುತ್ತಿತ್ತು.
ಹಳ್ಳಿಗರಿಗೆ ಅನೇಕ ಗಿಡಮೂಲಿಕೆ ಔಷಧ ಕ್ರಮಗಳು ಗೊತ್ತಿದ್ದವು. ಅವುಗಳಿಂದ ಯಾವುದೇ ಅಪಾಯವಂತೂ ಇರುತ್ತಿರಲಿಲ್ಲ. ಹಲವು ಔಷಧಗಳು ಪರಿಣಾಮಕಾರಿಯಾಗಿ ಕೆಲಸಮಾಡುತ್ತಿದ್ದವು. ವೈದ್ಯರು ಬೇಕೆಂದರೆ ಹತ್ತು-ಹದಿನೈದು ಕೆಲವೊಮ್ಮೆ ಇಪ್ಪತ್ತು ಕಿಲೋಮೀಟರ್ ದೂರದ ಪಟ್ಟಣದಲ್ಲಿ ಇರುವ ಸರಕಾರೀ ಆಸ್ಪತ್ರೆಗೆ ಹೋಗಬೇಕು. ಕೆಲವರ್ಷಗಳ ನಂತರ ಇಂಗ್ಲೀಷ ಮೆಡಿಸಿನ್ ಓದಿದವರು ಬಂದು ಅಲ್ಲಲ್ಲಿ ತಾಸೆರಡು ತಾಸು ದವಾಖಾನೆಯನ್ನು ನಡೆಸಿ ಬೇರೆಲ್ಲಿಗೋ ತೆರಳುತ್ತಿದ್ದರು. ಆದರೂ ಇಂಗ್ಲೀಷ್ ಮೆಡಿಸಿನ್ ಬಳಕೆ ಅಂತಹ ಅನಿವಾರ್ಯ ಅಂತಾದರೆ ಮಾತ್ರವಾಗಿತ್ತು. ಚಿಕ್ಕ-ಪುಟ್ಟ ನಂಜಿನ ಜ್ವರ-ನೆಗಡಿ ಇದಕ್ಕೆಲ್ಲ ಯಾವತ್ತೂ ಕಷಾಯದ ಹೊರತು ಬೇರೆ ಏನೂ ಔಷಧ ಬೇಕಾಗುತ್ತಿರಲಿಲ್ಲ. ಹಳ್ಳಿಯಲ್ಲಿ ಸಿಗುವ ಮುಸ್ತಕ, ಒಂದೆಲಗ, ಕಡ್ಲಂಗಡ್ಲೆ, ಏಕನಾಯಕ,ಕಾಡು ಜೀರಿಗೆ, ಮೆಣಸಿನಕಾಳು, ಅಮೃತಬಳ್ಳಿ, ಕೊಡಸನ ಬೇರು, ನೆಗ್ಗಿನಮುಳ್ಳು, ತೆಂಗಿನಕೊನೆ ಇವೆಲ್ಲ ಗಿಡಮೂಲಿಕೆಗಳೂ ಸೇರಿದಂತೆ ಸಾವಿರಾರು ಮೂಲಿಕೆಗಳು ಹಲವಾರು ಔಷಧ ಪ್ರಕ್ರಿಯೆಗಳಾಗಿ ಬಳಸಲ್ಪಡುತ್ತಿದ್ದವು.
ಸುಬ್ರಾಯ ಹೆಗ್ಡೇರು ಮನಸ್ಸು ಮಾಡಿ ಒಂದು ಆ ಕಾಲದಲ್ಲಿ ಲಭ್ಯವಿದ್ದ ಚಿಕ್ಕ ಲಾರಿಯ ಥರದ ವಾಹನವೊಂದನ್ನು ಖರೀದಿಸಿ ಹಳ್ಳಿಯಿಂದ ಪಟ್ಟಣಕ್ಕೆ ತೆರಳಲು ಸಾರ್ವಜನಿಕರ ಬಾಡಿಗೆಗೆ ಉಪಯೋಗಿಸುತ್ತಿದ್ದರು. ಅದರಲ್ಲಿ ಡ್ರೈವರ್ ಕ್ಯಾಬೀನಿನಲ್ಲಿ ಚಾಲಕ ಮತ್ತು ಯಜಮಾನರನ್ನು ಬಿಟ್ಟರೆ ಮೈಗೆ ಮೈತಾಗಿಸಿ ತಳುತ್ತ ಕುಳಿತರೆ ಒಬ್ಬ ಕೂರಬಹುದಿತ್ತು. ಮಿಕ್ಕಿದವರಿಗೆಲ್ಲ ವಾಹನದ ಹಿಂಬದಿಯಲ್ಲಿ ಟಾರ್ಪಾಲಿನ್ ಕಟ್ಟಿದ ಗೂಡಿನಲ್ಲಿ ಇಕ್ಕೆಲಗಳಲ್ಲಿ ಎಅಡು ಉದ್ದನೆಯ ಮರದ ಬೆಂಚುಗಳು ಇದ್ದವು. ಅದೂ ಭರ್ತಿಯಾದ ಮೇಲೆ ಜನ ನಿಂತುಕೊಂಡೇ ಕೈಗೆ ಸಿಗುವ ಗೂಡಿನ ಮೇಲ್ಚಾವಣಿಗೆ ಕಟ್ಟಿರುವ ಗಳವನ್ನೇ ಹಿಡಿದು ತೂಗಾಡುತ್ತ ಪಟ್ಟಣ ಸೇರಬೇಕಾಗಿತ್ತು. ಅವರು ಬೆಳಿಗ್ಗೆ ಹಳ್ಳಿಗರನ್ನು ಪಟ್ಟಣಕ್ಕೆ ಕರೆದೊಯ್ದು ಬಿಟ್ಟರೆ ಸರಿ ಸುಮಾರು ಮಧ್ಯಾಹ್ನ ಮೂರು ಗಂಟೆಗೆ ಅಲ್ಲಿಂದ ಮರಳಿ ಹೊರಡುತ್ತಿದ್ದರು. ಬರುಬರುತ್ತ ಅವರಿಗೆ ಗಿರಾಕಿ ಜಾಸ್ತಿಯಾಗಿ ಮತ್ತೆರಡು ವಾಹನಗಳನ್ನು ಪಾಳಿಯ ರೀತಿಯಲ್ಲಿ ಬಿಡುತ್ತಿದ್ದರು. ದಿನಸಿ ಸಾಮಾನು, ಪಾತ್ರೆ-ಪಗಡೆ ಇತ್ಯಾದಿ ಮನೆಬಳಕೆಯ ಸಾಮಾನುಗಳನ್ನು ಹಳ್ಳಿಗರು ಅಲ್ಲಿಂದ ತರೋರು. ತರಕಾರಿಯನ್ನು ಕೊಂಡುಕೊಳ್ಳುವ ವಹಿವಾಟು ಮೊದಲಿಗಿರಲಿಲ್ಲ.
ಬಿದ್ದ ಮಳೆಗೆ ಕೆರೆಕಟ್ಟೆಗಳೆಲ್ಲ ತುಂಬಿ ಎಲ್ಲಿ ನೋಡಿದರೂ ಹಳದಿ ಅಥವಾ ಮಣ್ಣಿನ ಬಣ್ಣದ ನೀರು ಕಾಣಿಸುತ್ತಿತ್ತು. ಕೆಲವೇ ದಿನಗಳಲ್ಲಿ ಗುಡ್ಡ ಬೆಟ್ಟಗಳೆಲ್ಲ ಹಸಿರು ಹುಲ್ಲನ್ನು ಹೊದ್ದು, ಗಿಡ-ಮರಗಳೆಲ್ಲ ಉದ್ದಿನವಡೆ ಊದಿದಂತೇ ಹುಲುಸಾಗಿ ಬೆಳೆಯುತ್ತಿದ್ದವು. ಅಲ್ಲಲ್ಲಿ ಗಿಳಿ-ಗೊರವಂಕದಾದಿಯಾಗಿ ಹಲವು ಹಕ್ಕಿಗಳು ಉಲಿವ ದನಿ ಇಂಪಾಗಿ ಕೇಳುತ್ತಿತ್ತು. ಬಣ್ಣ ಬಣ್ಣದ ಎಲೆಗಳು ಚಿಗುರಿ, ಹೂಗಳು ಅರಳಿ ನಿಸರ್ಗಪ್ರೇಮಿಗಳಿಗೆ ಅದೊಂದು ಹಬ್ಬದ ವಾತಾವರಣ. ಬದುಕಿನಲ್ಲಿ ಇದಕ್ಕಿಂತ ಇನ್ನೇನು ಬೇಕು ಎಂಬಷ್ಟು ಕಂಟೆಂಟ್ಮೆಂಟ್ ಇದ್ದ ಜನ ಅವತ್ತಿಗಿದ್ದರು! ರಾಜಕೀಯ ಬೆಳೆದಿರಲಿಲ್ಲ. ನ್ಯಾಯ ಎಲ್ಲರಿಗೂ ಒಂದೇ ರೀತಿ ಇತ್ತು. ಯಾರೂ ಯಾರನ್ನೂ ಹತ್ತಿ ತುಳಿಯುತ್ತಿರಲಿಲ್ಲ. ಅವರವರ ಕೆಲಸವಾಯಿತು, ಅವರ ಪಾಡಾಯಿತು. ದಿನಗೂಲಿ ಮಾಡುವ ಜನರಲ್ಲೂ ಜಮೀನುದಾರರಲ್ಲೂ ಒಡೆಯ-ಒಕ್ಕಲಿನ ಹಿತವಾದ ಬಾಂಧವ್ಯವಿತ್ತು. ಕೂಲಿಯ ಜನರ ಊಟ-ತಿಂಡಿಗಳೆಲ್ಲ ಬಹುತೇಕ ಒಡೆಯನಮನೆಯಲ್ಲೇ ನಡೆದುಹೋಗುತ್ತಿತ್ತು. ಸಾಯಂಕಾಲ ಮನೆಗೆ ಹೋಗುವಾಗ ಕೂಡ ಅಷ್ಟಿಷ್ಟು ಆಹಾರ ಪದಾರ್ಥಗಳನ್ನು ಅವರು ತೆಗೆದುಕೊಂಡು ಹೋಗುತ್ತಿದ್ದರು. ಅವರಿಗೆ ಕೂಲಿಯ ಹಣವನ್ನು ಮುಂಗಡವಾಗಿ ಕೆಲವರು ಅದಕ್ಕೆ ಇದಕ್ಕೆ ಅಂತ ಪಡೆದರೆ ಕೆಲವರು ಕೈಗಡ ಅಂತ ಸಾಲಪಡೆದು ಆಮೇಲೆ ಕಂತಿನ ರೂಪದಲ್ಲಿ ದುಡಿದ ಕೂಲಿಯಲ್ಲಿ ಆದಷ್ಟು ಆದಷ್ಟು ಮರಳಿ ಕಟ್ಟೋರು. ಕೂಲಿಯವರ ಮಕ್ಕಳಿಗೆ ಶಾಲೆ ಓದಲು ಖರ್ಚಿಗೆ, ಅವರಿಗೆ ಕೆಲ ಬಟ್ಟೆ-ಬರೆಗಳು, ಹಳೆಯ ಪುಸ್ತಕಗಳು ಇವೆಲ್ಲವನ್ನೂ ಕೊಡುತ್ತಿದ್ದರು. ಶಾಲೆಗಳಲ್ಲಿ ಕೂಲಿಮಾಡುವವರ ಮಕ್ಕಳು- ಜಮೀನುದಾರರ ಮಕ್ಕಳು ಎಂಬ ಭೇದವಿರಲಿಲ್ಲ. ಎಲ್ಲರೂ ಸ್ನೇಹಿತರಾಗಿ ಓದುತ್ತಿದ್ದೆವು.
[ಆಯಾಯ ಕಾಲಕ್ಕೆ ಬೇರೆ ಬೇರೆ ಹಣ್ಣು-ಕಾಯಿ ಪದಾರ್ಥಗಳು ನೈಸರ್ಗಿಕವಾಗಿ ಬೆಳೆದಿದ್ದನ್ನು ಯಜಮಾನರುಗಳೂ ಕೂಲಿಗಳೂ ಎಲ್ಲರೂ ಉಪಯೋಗಿಸುತ್ತಿದ್ದರು. ವಾಸ್ತವವಾಗಿ ಕೂಲಿಗಳ-ಜಮೀನ್ದಾರರ ನಡುವೆ ಅದೆಂತಹ ಆತ್ಮೀಯತೆ ಇತ್ತು ಎಂದರೆ ಅದನ್ನು ಈ ಕಾಲದಲ್ಲಿ ಹಳ್ಳಿಗಳಲ್ಲಾಗಲೀ, ಪಟ್ಟಣಗಳಲ್ಲಾಗಲೀ ನೋಡಲು ಸಾಧ್ಯವಿಲ್ಲ. ಕೂಲಿಜನರನ್ನು ಅವರು ಕೂಲಿಗಳು ಎನ್ನುವ ಬದಲು ಮನೆಮಂದಿಯ ರೀತಿಯಲ್ಲೇ ನಡೆಸಿಕೊಂಡ ಕಾಲಘಟ್ಟವದು. ಆ ನಂತರ ರಾಜಕೀಯ ಪ್ರವೇಶದಿಂದ ಹಳ್ಳಿಗಳು ಎಂದಿನ ಮಾರ್ದವತೆಯನ್ನೂ ಆ ಆಹ್ಲಾದಕರ ವಾತವರಣವನ್ನೂ ಆ ಪ್ರೀತಿ-ವಿಶ್ವಾಸವನ್ನೂ ಕಳೆದುಕೊಂಡು ಪಟ್ಟಣದ ಸಂಸ್ಕೃತಿಗೆ ಹಳ್ಳಿ ತನ್ನನ್ನು ಮಾರಿಕೊಂಡಿತು. ಎಲ್ಲೆಲ್ಲಿಯೂ ದುಡ್ಡೇ ದೊಡ್ಡಪ್ಪಗಳಾದವು! ಮೂಲ ವೃತ್ತಿಯನ್ನು ಬಿಟ್ಟು ಜನ ದುಡ್ಡು ಹೆಚ್ಚು ಬರುವ ದಂಧೆಗೆ ಇಳಿಯ ತೊಡಗಿದರು. ವಾತಾವರಣ ಕ್ರಮೇಣ ಕಲುಷಿತವಾಗಿ ಗ್ರಾಮೀಣ ಸೊಗಡನ್ನು ಕಳೆದುಕೊಂಡಿತು. ಮುಖದಲ್ಲಿ ನಗುಹೊತ್ತ ಜನಸಮುದಾಯ ಹೋಗಿ ಮುಖ ಅಡ್ಡಹಾಕಿ ತಿರುಗುವ ಕೆಟ್ಟ ಸಂಸ್ಕೃತಿ ಕಾಲಿಟ್ಟಿತು.]
ಬೇಸಿಗೆಯಲ್ಲಿ ಮಾಡಿ ಪೇರಿಸಿ ಇಟ್ಟ ಹಲಸಿನ ಹಪ್ಪಳಗಳು ಮಳೆಗಾಲದಲ್ಲಿ ಬಹಳ ರುಚಿಕಟ್ಟಾಗಿರುತ್ತಿದ್ದವು. ಅವುಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಕರಿದೋ, ಕೆಂಡದ ಒಲೆಯಲ್ಲಿ ಸುಟ್ಟಿ ಕೊಬ್ಬರಿ ಎಣ್ಣೆ ಸವರಿಯೋ ಬಳಸುತ್ತಿದ್ದರು. ಜೊತೆಗೆ ತೆಂಗಿನಕಾಯಿತುರಿ ಹಚ್ಚಿದ ಈ ಹಪ್ಪಳಗಳು ಅಲ್ಲಿನ ಮಳೆಗಾಲಕ್ಕೆ ಹೇಳಿಮಾಡಿಸಿದ ವ್ಯಂಜನಗಳು! ಕರಿದ ಹಲಸಿನ ಹಪ್ಪಳವನ್ನು ನುರಿದು ಅದಕ್ಕೆ ಒಗ್ಗರಣೆ ಹಾಕಿ, ಕಾಯಿತುರಿಯೊಂದಿಗೆ ಸ್ವಲ್ಪ ಖಾರ ಮತ್ತು ಬೆಲ್ಲ ಸೇರಿಸಿದರೆ ಅದನ್ನು ಮೆಲ್ಲುವಾಗಿನ ಆನಂದ ಇಂದಿನ ನಮ್ಮ ಪಿಝ್ಝಾ ಕಾಲದಲ್ಲಿ ಬರೇ ನೆನೆಪು ಮಾತ್ರ. ಹಲಸಿನ ತೊಳೆಯನ್ನು ಸೀಳಿ ಕರಿದು, ಉಪ್ಪು-ಖಾರ ಹದವಗಿ ಹಾಕಿದ ಚಿಪ್ಸು ಇನ್ನೊಂದು ಅದ್ಬುತ ವ್ಯಂಜನ. ನೆನಪುಗಳ ಮಾಯಲೋಕದಲ್ಲಿ ನಾವು ಕೆದಕೂಪದ ಕೈಕೋಲಿನಂತೇ ನಮ್ಮ ಯೋಚನೆಯನು ಹರಿಬಿಟ್ಟರೆ ಅಂದಿನ ದಿನಗಳ ವಿಚಾರ ಅದು ಮರೆಯಲಾಗದ ಆಚಾರ. ಅಮಿತ ಸಹಜ ಆನಂದದ ಆಗರ.
ಸುರಿವ ಮಳೆಯ ದಿನಗಳಲ್ಲಿ ಕರಿದ ಹಪ್ಪಳವನ್ನು ತಿನ್ನುತ್ತ ಅಜ್ಜ-ಅಜ್ಜಿ-ಕೂಲಿಯಾಳುಗಳು ಹೇಳುವ ಕಥೆಗಳನ್ನು ಕೇಳುತ್ತಿದ್ದರೆ ಅದು ಮನಸ್ಸಿಗೆ ಸಿಗುವ ಮತ್ತೊಂದು ವ್ಯಂಜನ. ಜನಸಾಮಾನ್ಯರ ಬದುಕಲ್ಲಿ ನಡೆದ, ನಡೆಯಬಹುದಾದ ಹಲವು ಘಟನೆಗಳನ್ನು ಕಥಾರೂಪದಲ್ಲಿ ಮಕ್ಕಳಿಗೆ ಹೇಳುವ ಅಂದಿನ ಕ್ರಮ ಅತ್ಯಂತ ಅನುಭವವನ್ನು ತರುವಂಥದ್ದೂ ಮತ್ತು ಜೀವನ ನಿರ್ವಹಣೆಗೆ ಮಾರ್ಗದರ್ಶಿಯೂ ಆಗುತ್ತಿತ್ತು. ಅಜ್ಜ-ಅಜ್ಜಿಯರು ರಾಮಯಣ ಮಹಾಭಾರತದ ಕಥೆಗಳನ್ನು ಹೇಳಿದರೆ ಕೂಲಿಯ ಮಾದೇವ, ಹನಮಂತ, ನಾಗು, ಈಶ್ವರ, ಸಣಕೂಸ, ಅಮಗೂಸ ಇವರೆಲ್ಲ ಥರಾವರಿ ಕಥೆಗಳನ್ನು ಹೇಳುತ್ತಿದ್ದುದುಂಟು. ನಾವು ಮಕ್ಕಳು ಅವರು ತೋಟ-ತುಡಿಕೆಗಳಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿಗೇ ಹೋಗಿ ಅವರನ್ನು ಕೇಳಿಕೊಂಡರೆ ಅವರಿಗೂ ಕೆಲಸದ ಆಯಾಸ ಗಮನಕ್ಕೆ ಬರುತ್ತಿರಲಿಲ್ಲ, ನಮಗೂ ಕಥೆಕೇಳಿ ಮನಸ್ಸು ಮಜಾ ಅನುಭವಿಸುತ್ತಿತ್ತು. ಈ ಕಥೆಗಳಲ್ಲಿ ಒಬ್ಬೊಬ್ಬರ ಕಥೆ ಹೇಳುವ ಕ್ರಮಗಳೂ ಅತಿ ವಿಶಿಷ್ಟವಾಗಿರುತ್ತಿದ್ದವು. ಆಯಾಯ ಕಥೆಗಳನ್ನು ಅವರವರ ಬಾಯಿಂದಲೇ ಕೇಳಿದರೇ ಚೆನ್ನ ಎನಿಸುತ್ತಿತ್ತು. ಒಂದರ್ಥದಲ್ಲಿ ಅವರಲ್ಲೆಲ್ಲಾ ಒಬ್ಬೊಬ್ಬ ಕಥೆಗಾರನಿದ್ದ! ಕಲಾವಿದನೂ ಇದ್ದ! ಸಂಗೀತಗಾರನೂ ಇದ್ದ! ಕೂಲಿಗಳ ಜೀವನ ಕ್ರಮದಲ್ಲಿ ಸ್ನಾನ ದಿನಾಲೂ ಸಂಜೆ ಇರುತ್ತಿತ್ತು, ಹಗಲೆಲ್ಲಾ ಜಮೀನಿನಲ್ಲಿ ದುಡಿದು ಹೈರಾಣಾದ ಮೈ-ಮನಕ್ಕೆ ಮರದ ಕುಂಟೆ ಹೆಟ್ಟಿ ತಿರುವಿದ ಸತತ ಉರಿವ ಬೆಂಕಿಯಲ್ಲಿ ಕಾಯಿಸಿದ ಹಂಡೆಯ ಮರಳುವ ನೀರಿನಲ್ಲಿ ಸ್ನಾನಮಾಡಿಬಿಟ್ಟರೆ ಆ ದಿನದ ಆಯಾಸವೆಲ್ಲ ಪರಿಹಾರವಾದಂತೇ. ಅವರು ಸ್ನಾನ ಮಾಡುವಾಗ ಕೂಡ ನಾವು ಕಥೆಗಾಗಿ ಬೆನ್ನುಹತ್ತಿತ್ತಿದ್ದುದುಂಟು!
ಮಳೆಗಾಲದಲ್ಲಿ ಅಡಿಕೆತೋಟಗಳಲ್ಲಿ ಕೊಳೆಮದ್ದು[ಮೈಲುತುತ್ತು-ಕಾಪರ್ ಸಲ್ಫೇಟ್+ಸುಣ್ಣ] ಸಿಂಪಡಿಸಲು ಹೋದ ಕೂಲಿ ಜನ ಬಂದಿಳಿದು ಮೈಗೆಲ್ಲ ಮೆತ್ತಿದ ಕೊಳೆಮದ್ದಿನ ದ್ರಾವಣದ ಕಲೆಗಳನ್ನು ಕೊಬ್ಬರಿ ಎಣ್ಣೆ ನೀವಿಕೊಳ್ಳುತ್ತ ಹುಣಿಸೇ ಹಣ್ಣಿನಿಂದ ಉಜ್ಜಿ ತೊಳೆದುಕೊಳ್ಳುತ್ತ ಬಾಯಿಂದ ಉಸ್ ಉಸ್ ಉಸ್ ಎನ್ನುವಾಗ ನಮಗೂ ಒಂಥರಾ ಸ್ನಾನಮಾಡಿಬಿಡಬೇಕೆನ್ನುವ ಆಸೆ ಅಮರಿಕೊಳ್ಳುತ್ತಿತ್ತು. ಚಳಿ ಹಿಡಿವ ಮಳೆಗಾಲದಲ್ಲಿ ಹಂಡೆಯಲ್ಲಿ ಮರಳುವ ಬಿಸಿ ನೀರು ಯಾರಿಗೆ ಬೇಡ ಹೇಳಿ? ಸ್ನಾನ ಮಾಡಿದ ತರುವಾಯ ಅವರು ಬಟ್ಟೆಗಳನ್ನೆಲ್ಲ ಆಲ್ಲೆಲ್ಲೋ ಹೊರಗೆ ಬಿದಿರಗಳಗಳ ಮೇಲೆ ಹರವುತ್ತಿದ್ದರು. ದೇವರನ್ನು ನೆನೆದು ಕೈಮುಗಿದು ಮನೆಯ ಜಗುಲಿಯಲ್ಲಿ ಬಂದು ಕೂತರೆ ಅವರಿಗೆ ಬಿಸಿ ಬಿಸಿ ಊಟ ರೆಡಿ. ಬೆಳಿಗ್ಗೆ ಮೂರಾವರ್ತಿ ತಿಂಡಿ ತಿನ್ನುವ ಈ ಜನ ಹೊಟ್ಟೆ ಭಾರವಾದರೆ ಕೆಲಸಮಾಡಲಗದೆಂದು ಊಟವನ್ನು ಸಾಯಂಕಾಲಕ್ಕೆ ಇಟ್ಟುಕೊಳ್ಳುವುದು ಸರ್ವೇಸಾಮಾನ್ಯವಾಗಿತ್ತು. ನಾಗಪ್ಪ ಶೆಟ್ಟಿ ಎಂಬ ೫೫ ವಯಸ್ಸಿನ ವ್ಯಕ್ತಿ ದೂರದ ಊರಿಂದ ನಮ್ಮೂರಿಗೆ ಕೊಳೆಮದ್ದು ಸಿಂಪಡಿಸಲಾಗಿಯೇ ಬರುತ್ತಿದ್ದ. ನಾಗು ಅಥವಾ ನಾಗಪ್ಪಜ್ಜ ವಾರಕಾಲ ನಮ್ಮಲ್ಲೆ ಠಿಕಾಣಿ ಹೂಡಿ ಮದ್ದಿನಕೊಯ್ಲು ಮುಗಿದಮೇಲೆಯೇ ಮನೆಗೆ ತೆರಳುತ್ತಿದ್ದ. ಆತ್ ಇದ್ದಷ್ಟು ದಿನ ಆತನೊಡನೆ ಕಥೆ ಕೇಳದ ದಿನಗಳೇ ಇಲ್ಲ! ಪುಸು ಪುಸು ಬೀಡಿ ಸೇದುತ್ತ ಉಜ್ಜದೇ ಹಾಳುಬಿದ್ದ ಮುರುಕು ಹಲ್ಲುಗಳ ಮಧ್ಯೆ ನಾಲಿಗೆ ಇಟ್ಟು ಆತ ನಗುವುದು ನಮಗೆಲ್ಲ ಇಷ್ಟವಾದ ವಿಷಯ! ಬೀಡಿಯ ನಾತ ರುಚಿಸದಿದ್ದರೂ ಬೀಡಿ ಸೇದುವವರು ನಮ್ಮ ದೋಸ್ತರಾಗಿರುವಾಗ ನಾವು ಬೀಡಿ ಸೇದಬೇಡ ಎಂದು ಹೇಳಲುಂಟೇ? ಹಾಗೊಮ್ಮೆ ಹೇಳಿದರೆ ಕೋಪಿಸಿಕೊಂಡು ಹೇಳಬೇಕಾದ ಕಥೆಗೇ ಸಂಚಕಾರ ಕೊಟ್ಟರೆ? ನಾಗು ಊಟಮಾಡುವಾಗ ಅದೂ ಇದೂ ಬಡಿಸುವ ನೆಪದಲ್ಲಿ ನಮ್ಮ ಸ್ನೇಹಸಂಪಾದನೆ ಆಗುತ್ತಿತ್ತು. ಕಥೆಯೇನು ಪುಕ್ಸಟೆ ಬರುತ್ತದೆಯೇ ಹಾಗಂತ ಅದು ದುಡ್ಡು ಕೊಟ್ಟರೂ ಸಿಗುವಂಥದ್ದಾಗಿರಲಿಲ್ಲ! " ತಮಾ ಏನ್ರ ಅಜ್ಜನ್ ಮನಿಗೆ ಹೋಗ್ಲಿಲ್ವನ ? " ನಾಗಣ್ಣ ಈ ಸ್ವರ ಎತ್ತಿದರೆ ಆತನ ಫ್ರೆಂಡಶಿಪ್ ಗಟ್ಟಿ ಎಂದರ್ಥ, ನಾಗು ಏನೂ ಮಾತನಾಡದೇ ಸುಮ್ಮನಿದ್ದರೆ ಅವನಿಗ್ ಕಥೆ ಹೇಳುವ ಮನಸ್ಸು ಇಲ್ಲ ಎಂದರ್ಥ. ಆತನ ಮುಖಚರ್ಯೆ ನೋಡಿಯೇ ಅರ್ಥಮಾಡಿಕೊಳ್ಳುತ್ತಿದ್ದ ನಮಗೆ ಸಮಯ ಸಂದರ್ಭ ನೋಡಿ ಲಂಚಕೊಟ್ಟು ಸಹಿಮಾಡಿಸಿಕೊಳ್ಳುವ ಸರಕಾರೀ ಅಧಿಕರಿಗಳ ಜೊತೆ ಸಹವಾಸ ಇಟ್ಟುಕೊಂಡಿರುವವರ ರೀತಿ, ಕಥೆ ಕೇಳುವಿಕೆಯ ಪ್ರಸ್ತಾವನೆಯಾಗುತ್ತಿತ್ತು. ಕಥೆ ಪ್ರಾರಂಭವಾದರೆ ರಾತ್ರಿ ದೊಡ್ಡವರು ಬೈಯ್ದು ಊಟಕ್ಕೆ ಹೊತ್ತಾಯ್ತು ಅಂತ ಗದರಿಸುವವರೆಗೂ ಕಥಾಕಾಲಕ್ಷೇಪ ನಡೆದೇ ಇರುತ್ತಿತ್ತು! ಇಂತಹ ನಾಗು ಊರಿಗೆ ಹೋದಮೇಲೆ ಕೆಲದಿನ ನಮಗೆ ಬೇಜಾರಾಗುತ್ತಿತ್ತು.
ಇಂತಹ ಮಳೆಗಾಲದಲ್ಲಿ ಕಂಬಳಿಗೊಪ್ಪೆಯನ್ನೋ ಗುರುಬನ್ನೋ [ತಾಳಿಗರಿಯಿಂದ ಮಾಡಿದ್ದು] ಹಾಕಿಕೊಂಡು ತೋಟ-ಗದ್ದೆಗಳಲ್ಲಿ, ಬೆಟ್ಟ್-ಬೇಣಗಳಲ್ಲಿ ಹತ್ತಾಡಿ ಸುತ್ತಿಳಿದು ಹರುಷಪಡೆವ ಮಕ್ಕಳು ನಾವಾಗಿದ್ದೆವು. ಬೇಸಿಗೆಯಲ್ಲಿ ಕಸುವಿನಿಂದ ಬೀಸಿ ಎಶೆದ ಕಲ್ಲಿಂದ ಬಿದ್ದ ಮಾವಿನ ಮಿಡಿಯನ್ನು ಅಂಗಿಯ ಕೆಳಬಾಗದಲ್ಲಿ ಸುತ್ತಿ, [ಕಚ್ಚಿ ತುಂಡುಮಾಡಿ] ಕಾಗೆ ಎಂಜಲು ಮಾಡಿ ಹಂಚಿಕೊಂಡು ತಿನ್ನುತ್ತಿದ್ದ ನಾವುಗಳು ಈಗೀಗ ಒಂದೇ ಕಂಬಳಿಗೊಪ್ಪೆಯಲ್ಲಿ ಇಬ್ಬಿಬ್ಬರು ತೂರಿಕೊಂಡು ಹೋಗಿ ಆಡುವುದಿತ್ತು.ಮಳೆ ಬಿಡುವುಕೊಟ್ಟಾಗ, ಶಾಲೆಗೆ ರಜೆ ಸಿಕ್ಕಿದಾಗ ಆಡುವ ಕಬಡ್ಡಿ, ಮರಕೋತಿ, ಕಳ್ಳ-ಪೋಲೀಸ್, ಚಿನ್ನಿ-ದಾಂಡು[ನಮ್ಮಲ್ಲಿ ಇದಕ್ಕೆ ಹಾಣೆಗೆಂಡೆ ಅಥವಾ ಹಾಣೇಕೋಲು ಎನ್ನುತ್ತಿದ್ದರು!] ಇವುಗಳಿಗೇನೂ ಕೊರತೆ ಇರಲಿಲ್ಲ. ಇವತ್ತು ದೋಸ್ತಿ ಇದ್ದರೆ ನಾಳೆ ಬದ್ಧ ವೈರಿಗಳಂತೇ ಆಗುವ ಮಕ್ಕಳ ನಡುವಿನ ಕ್ಷಣಿಕ ನಿಷ್ಠುರದ ಘಟನೆಗಳು ಬಹಳವೇ ಇದ್ದವು. ಅದೇನೇ ಇದ್ದರೂ ರಜಾಸಿಕ್ಕಾಗ ಆಡಲು ವೈರತ್ವವನ್ನು ಮರೆತು ಕೈಯ ತೋರುಬೆರಳು-ಮಧ್ಯಬೆರಳು ಎರಡ್ನ್ನು ಸೇರಿಸಿ ಹಿಡಿದರೆ ಅಲ್ಲಿಗೆ ರಾಜಿಯಾಗಿಬಿಡುತ್ತಿತ್ತು! ನಮ್ಮ ಆಟಗಳ ನಡುವೆ ಹಲವಾರು ಗ್ರಾಮೀಣ ಸಾಮಗ್ರಿಗಳಿರುತ್ತಿದ್ದವು. ನಮಗೂ ದನ-ಕರುಗಳಿಗೂ ಕೂಡ ಆಟದ ಪ್ರೀತಿಯ ನಂಟು! ಸ್ನಾನಕ್ಕೂ ಮುನ್ನ ಮನೆಯಲ್ಲಿ ರಜದಲ್ಲಿ ಕೊಟ್ಟಿಗೆಗೆ ಹೋಗಿ ಅಲ್ಲಿರುವ ಸಣ್ಣ ಕರುಗಳನ್ನೋ ಅನಾರೋಗ್ಯದಿಂದ ಗೋಮಾಳಕ್ಕೆ ತೆರಳದೇ ಅಲ್ಲೇ ಇರುವ ದನವನ್ನೋ ಮಾತಾಡಿಸುತ್ತ, ಹುಲ್ಲು ನೀಡುವುದು, ಮೈ ಉಜ್ಜುವುದು ಆಮೇಲೆ ಪ್ರೀತಿಯಿಂದ ಅವುಗಳು ನಾವು ಅಂಗಿ ತೆಗೆದು ಕುಳಿತರೆ ಮೈಯ್ಯನ್ನೆಲ್ಲ ನೆಕ್ಕುತ್ತಿದ್ದವು. ಅವು ಹಾಗೆ ನೆಕ್ಕುವಾಗ ತರಿತರಿಯಾದ ಅವುಗಳ ನಾಲಿಗೆ ತಗಿದರೆ ಕಚಗುಳಿಯಗುತ್ತಿತ್ತು. ಇದನ್ನೆಲ್ಲಾ ಅನುಭವಿಸಲು ನಮಗೆ ರಜವೇ ಸಿಗುವುದಿಲ್ಲ ಎನ್ನುವ ಬೇಸರವೂ ಆಗುತ್ತಿತ್ತು. ಯಾರದರೂ ರಾಜಕೀಯದವರು ಸತ್ತರೆ ನಮಗೆ ಶೋಕಾಚರಣೆಗಿಂತ ರಜೆಸಿಕ್ಕುವುದಕ್ಕೆ ಆನಂದವಾಗುತ್ತಿತ್ತು! ಹೀಗಾಗಿ ನಾವು ಮಕ್ಕಳು ನಮಗೇನು ಗೊತ್ತು- ಯಾರಾದರೂ ರಾಜಕಾರಣಿಗಳು ಸಾಯುವುದನ್ನೇ ಕಾಯುತ್ತಿದ್ದೆವು!
ನಮ್ಮಲ್ಲಿ ಆಗ ೩೪-೩೫ ಆಕಳ ಬಾಲಗಳು ಇದ್ದವು! [ನೆನಪಿಡಿ ಆಕಳುಗಳನ್ನು ಬಾಲದ ಲೆಕ್ಕಾಚಾರದಲ್ಲಿ ಎಣಿಸುತ್ತಿದ್ದರು ಎಂದು ಹಿಂದೊಮ್ಮೆ ಹೇಳಿದ್ದೇನೆ] ಗೀತಾ, ಕಮಲಿ, ರೆಣುಕಾ, ಲಲಿತಾ, ವಸುಂಧರೆ....ಹೀಗೆಲ್ಲ. ಅವುಗಳ ಪೈಕಿ ಭಾಗೀರಥಿ ಎಂಬುದು ಹಿರಿಯಜ್ಜಿ. ಭಾಗೀರಥಿ ಬಹಳ ಅಚ್ಚುಮೆಚ್ಚಿನ ದನ. ಗೋವು ಅಂದರೆ ಗೋವು! ಅದರ ಮುಖದ ಲಕ್ಷಣವೇ ಹಾಗಿತ್ತು. ಉದ್ದನೆಯ ಕೊಂಬು ಮೇಲೆದ್ದು ಒಂದಕ್ಕೊಂದು ಒಳಬಾಗಿ ಅವಳ ನೆತ್ತಿಯಮೇಲೆ ಪೂರ್ಣ ಚಂದ್ರಾಕಾರವನ್ನು ಸೃಷ್ಟಿಸಿದ್ದವು. ಬಾಲದ ಕೊನೆಯಲ್ಲಿ ಗೊಂಡೆಯಂತಿರುವ ಕೂದಲಿನ ಗುಚ್ಚವಿತ್ತು. ಮಕ್ಕಳು ಕಾಲ್ಕೆಳಗೆ ತೂರಿ ಆಛೆ ಹೋಗಲಿ, ಬಾಲ ಹಿಡಿದು ಆಡಲಿ.... ಕಮಕ್ ಕಿಮಕ್ ಎನ್ನದ ಸಭ್ಯ ದನ ಅದಾಗಿತ್ತು. ನಾವು ಹೆಚ್ಚಗಿ ಪ್ರೀತಿಯಿಂದ ಎಲ್ಲಾ ಆಕಳು ಮತ್ತು ಹೋರಿಗಳನ್ನು ಅವಳು-ಅವನು ಎಂದೇ ಮನುಷ್ಯರನ್ನು ಟ್ರೀಟ್ ಮಾಡಿದ ಹಾಗೇ ಮಾಡುತ್ತಿದ್ದೆವು. ಬೆಳಿಗ್ಗೆ ಎದ್ದು ಮಲ-ಮೂತ್ರ ವಿಸರ್ಜಿಸಿ, ಅಜ್ಜಿಯಿಂದ ಸ್ನಾನ ಪೂಜೆ ಪಡೆವ ಭಾಗೀರಥಿ ನಂತರ ಅಜ್ಜಿ ಶಾಸ್ತ್ರೋಕ್ತವಾಗಿ ಕೊಡುವ ಬಾಳೆಲೆಯಲ್ಲಿ ಮಡಚಿ ಕಟ್ಟಿದ ತೊಳೆದ ಅಕ್ಕಿಯನ್ನು ತಿನ್ನುತ್ತಿದ್ದಳು. ನಂತರ ಅಕ್ಕಚ್ಚು-ಹಿಂಡಿ ಇವುಗಳನ್ನು ಪಡೆದು ಸರಿಸುಮಾರು ೯ ಗಂಟೆಗೆ ತನ್ನ ಮಕ್ಕಳು-ಮರಿಮಕ್ಕಳು ಎಲ್ಲರನ್ನೂ ಕಟ್ಟಿಕೊಂಡು ಗುಂಪಿನ ನಾಯಕಿಯಾಗಿ ಎಲ್ಲರನ್ನೂ ಸಾಲಾಗಿ ಶಾಲೆಗೆ ಹೋಗುವ ಮಕ್ಕಳಂತೇ ನಡೆಸುತ್ತ ಗೋಮಾಳಕ್ಕೆ ಮೇಯಲು ತೆರಳುವಳು. ಅವಳು ಹಾಗೆ ಹೋಗುವಾಗ ದನಗಳಲ್ಲಿ ವಯಸ್ಸಿಗೆ ಅನುಗುಣವಾಗಿ ಅನುಕ್ರಮವಾಗಿ ಅವಳನ್ನು ಅವುಗಳು ಸಾಲಾಗಿ ಹಿಂಬಾಲಿಸುತ್ತಿದ್ದುದು ನಮಗೆ ಆಶ್ಚರ್ಯವೂ ಮತ್ತು ಖುಷಿಕೊಡುವ ವಿಚಾರವೂ ಆಗಿತ್ತು. ತಮಾಷೆಗೆ ನವು ಗಣಿತದ " ಏರಿಕೆಯೆ-ಇಳಿಕೆಯ ಕ್ರಮವನ್ನು ನೋಡೋ " ಎಂದುಕೊಂಡು ನಗುತ್ತಿದ್ದೆವು.
ಭಾಗೀರಥಿ ನಮ್ಮನೆಯ ಅಜ್ಜಿ ಹೇಗೋ ಹಾಗೇ ಆ ಅಕಳ ಮಂದೆಗೆಲ್ಲ. ಆಕೆ ಕೂಗಿದರೆ ಎಲ್ಲವೂ ಸೇರುತ್ತಿದ್ದವು, ಆಕೆ ಹೊರಟರೆ ಅವಳ ಜೊತೆ ಎಲ್ಲವೂ ಹೊರಟುಬಿಡುತ್ತಿದ್ದವು. ಸಾಯಂಕಾಲ ೫ಗಂಟೆಗೆಲ್ಲ ಈ ಭಾಗೀರಥಿ ವಾಪಸ್ಸು ಕೊಟ್ಟಿಗೆಗೆ ಬರೋಳು, ತನ್ನ ಪರಿವಾರವನ್ನು ಕಾಳಜಿಯಿಂದ ಸಾಲಾಗಿ ಕರೆತರೋಳು. ಊರ ಪರವೂರ ಹತ್ತಾರು ಜನ ನಮ್ಮನೆಯ ದನಗಳ ದೈನಂದಿನ ಈ ಮಿಲಿಟರಿ ಶಿಸ್ತನ್ನು ಆಗಾಗ ನಿಂತು ನೋಡುತ್ತಿದ್ದರು. ನಮ್ಮೊಡನೆ ಬಹಳ ಜನ ಈ ಕುರಿತು ಸಂತಸ ವ್ಯಕ್ತಪಡಿಸಿದ್ದೂ ಉಂಟು. ನಾವೇ ಕೇಳಿ ತಿಳಿದಿದ್ದು-ನಮ್ಮನೆಯ ಕೊಟ್ಟಿಗೆಯ ಪರಂಪರೆಯಲ್ಲಿ ಪಡೆಯ ಮುಖ್ಯಸ್ಥೆ/ಮುಖ್ಯಸ್ಥ ಸತ್ತ ಮೇಲೆ ನಂತರ ಸೀನೆಯಾರಿಟಿಯಲ್ಲಿ ಮುಂದಿರುವವರು ಅದನ್ನು ನಿಭಾಯಿಸುತ್ತಿದ್ದರು. ಯಾವುದಾದರೂ ಆಕಳು-ಕರು ಸತ್ತರೆ ಇಡೀ ಕೊಟ್ಟಿಗೆಯಲ್ಲಿ ಮೌನರೋದನ ಕಂಡುಬರುತ್ತಿತ್ತು. ಎಲ್ಲಾ ಆಕಳುಗಳ ಕಣ್ಣಿಂದ ನೀರು ಸುರಿದ ಹಸಿ ಕಲೆಯನ್ನು ನಾವು ಗುರುತಿಸಬಹುದಿತ್ತು!ಹೀಗೇ ಅತ್ಯಂತ ಮುತುವರ್ಜಿಯಿಂದ ತನ್ನ ಮೇಳನಡೆಸಿಬಂದ ಭಾಗೀರಥಿ ಮಳೆಗಾಲದ ಒಂದು ಸಂಜೆ ಮರಳಲೇ ಇಲ್ಲ.
ಹರೆಯದ ದಿನತುಂಬಿದ ದನಗಳು ಕೆಲವೊಮ್ಮೆ ತನ್ನನ್ನು ಮೇಯಲು ಬಿಡು ಎನ್ನುತ್ತ ಹಗ್ಗವನ್ನು ಎಳೆದೆಳೆದು ಸಾಂಕೆತಿಕವಾಗಿ ತೋರುತ್ತ ಹಠಮಾಡಿಕೊಂಡು ಮೇಯಲು ಹೋಗಿ ಗುಡ್ಡ-ಬೆಟ್ಟಗಳಲ್ಲಿ ಕರು ಹಾಕಿಬಿಡುವುದು ಒಮ್ಮೊಮ್ಮೆ ನಡೆದುಬಿಡುತ್ತಿತ್ತು. ಆ ರಾತ್ರಿ ಅವುಗಳು ವಾಪಸ್ ಬರದಾಗ ಭಾಗೀರಥಿ ಏನನ್ನೋ ತನ್ನ ಭಾಷೆಯಲ್ಲಿ ಹೇಳುತ್ತಿದಳು, ಅದು ನಮಗೆ ತಿಳಿಯುತ್ತಿರಲಿಲ್ಲ. ಆದರೂ ಮಾರನೇ ದಿನ ಹುಡುಕಿದರೆ ಕರುಹಾಕಿದ ದನಗಳು ತಮ್ಮ ಕಂದಮ್ಮನನ್ನು ಹೊಟ್ಟೆಯಕೆಳಭಾಗ ಇರಿಸಿಕೊಂಡು ನಾಯಿ-ನರಿ ಇತ್ಯಾದಿ ಪ್ರಾಣಿಗಳಿಂದ ಹಗಲಿರುಳೂ ನವು ಹೋಗಿ ಕರೆತರುವವರೆಗೂ ಕಾಯುತ್ತಿದ್ದವು! ಉಪವಾಸವಿದ್ದರೂ ಚಿಂತೆಯಿಲ್ಲ ಕರುವನ್ನು ಬಿಡುತ್ತಿರಲಿಲ್ಲ! ಆಮೇಲೆ ಹುಡುಕುವ ನಮ್ಮ ಮನೆಯವರಿಗೋ ಕೆಲಸದವರಿಗೋ ಅಲ್ಲೆಲ್ಲೋ ಕಂಡು ಕೂಗುತ್ತ ನಂತರ ತಾಯಿ-ಕರು ಇಬ್ಬರನ್ನೂ ಕರೆತರುವುದಾಗಿರುತ್ತಿತ್ತು. ಆದರೆ ಅಂದು ಸಂಜೆಯ ಸ್ಥಿತಿ ಅದಾಗಿರಲಿಲ್ಲ. ಅಜ್ಜಮ್ಮ ಭಾಗೀರಥಿ ಬಂದಿರಲಿಲ್ಲ. ಮುದುಕಾದೆಯಮ್ಮ--ನೀನು ಮೇಯಲು ಹೊರಗಡೆ ಹೋಗುವುದು ಬೇಡ ಎಂದರೂ ಹಠಮಡಿಕೊಂಡು ಹೋಗುತ್ತಿದ್ದಳಾಕೆ! ದನ-ಕರು ನಿಂತಲ್ಲೆ ಇದ್ದರೆ ಮೈಯ್ಯೆಲ್ಲ ಜಡ್ಡು ಹತ್ತುತ್ತದೆ ಎಂಬ ಇನ್ನೊಂದು ಕಾರಣಕ್ಕೂ ಅಡ್ಡಾಡಿಕೊಂಡು ಬರಲಿ ಎಂದು ಅವಳನ್ನು ಮೇಯಲು ಬಿಡುತ್ತಿದ್ದರು.
ಬಾರದ ಭಗೀರಥಿಗಾಗಿ ಬೆಳಕು ಹರಿವವರೆಗೂ ನಂತರವೂ ಬ್ಯಾಟರಿ,ಬೆಂಕಿ ಹಚ್ಚಿದ ಸೂಡಿ[ತೆಂಗಿನ ಒಣಗರಿಗಳ ಕಟ್ಟು],ಹಗರ ಸೂಡಿ[ಅಡಿಕೆ ಮರದ ದಬ್ಬೆಯನ್ನು ಸಣ್ಣಗೆ ಉದ್ದುದ್ದಾಗಿ ಸೀಳಿ,ಏಳೆಂಟು ಸೇರಿಸಿ ಕಟ್ಟಿದ ಕಟ್ಟು] ಮತ್ತು ದೊಂದಿಯ ಸಹಾಯದಿಂದ ಸಮರೋಪಾದಿಯಲ್ಲಿ ಹುಡುಕಾಟ ನಡೆಯಿತು. ಭಾಗೀರಥಿಯ ಕುರುಹೇ ಇರಲಿಲ್ಲ, ಅವಳ ಸುಳಿವೇ ಎಲ್ಲೂ ಸಿಕ್ಕಿರಲಿಲ್ಲ. ಅವತ್ತಿನ ದಿನ ಬೆಳಿಗ್ಗೆ ಅವಳನ್ನು ಹಗ್ಗಬಿಡಿಸಿ ಕಳಿಸಿದ್ದಕ್ಕೆ ನಮ್ಮಮ್ಮ ತನ್ನನ್ನೇ ಕಾರಣಮಾಡಿಕೊಂಡು ತಾನೇ ಬಹಳ ಅತ್ತು ಕರೆದು ಮಾಡಿದ್ದೂ ಆಯಿತು. ಆದರೆ ಅದರಿಂದ ಭಾಗೀರಥಿ ಬರುವುದು ಸಾಧ್ಯವೇ? ಎಲ್ಲಾದರೂ ದಿಕ್ಕು ತಪ್ಪಿ ಹೋಹಿರಬಹುದೇ? ಎಲ್ಲಾದರೂ ಸುಸ್ತಾಗಿ ಮಲಗಿ ಬಿಟ್ಟಿರಬಹುದೇ ? ಎಲ್ಲಾದರೂ ಏಟುಮಾಡಿಕೊಂಡು ಮನೆಯಿಂದ ಯಾರಾದರೂ ಬರಬಹುದೆಂದು ಸಹಾಯಕ್ಕಾಗಿ ಕಾತರಿಸುತ್ತಿರಬಹುದೇ? ಬಾಯಾರಿಕೆಗೆ ನೀರು ಕುಡಿಯಲು ಎಲ್ಲೋ ಮಡುವಿಗಿಳಿದು ಮುಳುಗಿ ಹೋಗಿರಬಹುದೇ? ಒಂದಲ್ಲ ಎರಡಲ್ಲ....ಪ್ರಶ್ನೆಗಳಿಗೆ ಲೆಕ್ಕವೇ ಇಲ್ಲ. ಎಲ್ಲಾ ಬೇಡದ ಕೆಟ್ಟ ಆಲೋಚನೆಗಳದೇ ರಾಶಿ. ನಾವು ಮಕ್ಕಳು-ನಮಗೆ ಕೊಟ್ಟಿಗೆಯ ಅಜ್ಜಮ್ಮನನ್ನು ಕಾಣದ ಆದರೆ ಏನೂ ಮಾಡಲರದ ಸ್ಥಿತಿ. ಏನು ಮಾಡೋಣ? ದೊಡ್ಡವರೆಲ್ಲ ತಲೆನೋವಲ್ಲಿದ್ದಾರೆ, ಕಥೆಹೇಳುವ ನಮ್ಮ ದೋಸ್ತರೆಲ್ಲ ಮುಖವೂದಿಸಿಕೊಂಡು ಸುಮ್ಮನೇ ನಿಂತಿದ್ದಾರೆ, ಕೆಲವರು ಅಲ್ಲಿಲ್ಲಿ ಹುಡುಕುತ್ತ ಹೋಗಿದ್ದಾರೆ, ಮನೆಯವರಲ್ಲಿ ಗಟ್ಟಿಗರು ಹುಡುಕುತ್ತ ಹೋಗಿದ್ದಾರೆ, ನಮ್ಮನೆಯ ಹತ್ತಿರದ ಊರಲ್ಲಿ ವಾಸಿಸುವ ಬಂಧು-ಬಳಗದ ಜನ ಅದು ಹೇಗೋ ಸುದ್ದಿ ತಿಳಿದು ಹುಡುಕಲು ಮುಂದಾಗಿದ್ದಾರೆ....ಹೀಗೇ ಭಾಗೀರಥಿ ಎಲ್ಲರಿಗೂ ಬೇಕಾಗಿದ್ದ, ಒಬ್ಬ ಸಾಮನ್ಯ ಮನುಷ್ಯನಿಗಿಂತ ಹೆಚ್ಚಿನ ತಲೆಯುಳ್ಳ ದನವಾಗಿದ್ದಳು. ಎಲ್ಲರೂ ಪರಿತಪಿಸಿದವರೇ. ಅಂತೂ ಮಾರನೇ ದಿನ ಅಪರಾಹ್ನ ಮೂರು ಗಂಟೆಯ ಹೊತ್ತಿಗೆ ಯಾರೋ ಒಬ್ಬರು ಓಡುತ್ತಾ ಬಂದರು. ಅವರು ಬಹಳ ಗಾಬರಿಗೊಂಡಿದ್ದರು ಎಂದು ಅವರ ಮುಖನೋಡಿಯೇ ಹೇಳಬಹುದಿತ್ತು.ಬಂದ ಆ ವ್ಯಕ್ತಿ ನಮ್ಮ ಪರವೂರ ಬಂಧುವೊಬ್ಬರಾಗಿದ್ದರು " ನಿಮ್ಮನೆ ಭಾಗೀರಥಿ ಕಾಶಿ ವಿಶ್ವೇಶ್ವರನ ಸನ್ನಿಧಿ ಸೇರಾಯ್ತು" ಅನ್ನುತ್ತ ಅಳುತ್ತಿದ್ದರು. ಮನೆಯವರೆಲ್ಲ ಬಹಳ ಅತ್ತರು. ನಾವು ಅತ್ತೆವೆಂದು ಬೇರೆ ಹೇಳಬೇಕೆ? ಭಾಗೀರಥಿ ಗುಡ್ಡದ ಒಂದು ಪಕ್ಕದಿಂದ ಇನ್ನೊಂದು ಗುಡ್ಡದ ಪಕ್ಕಕ್ಕೆ ಹೋಗುವಾಗ ಮಧ್ಯೆ ಯಾವುದೋ ಕಾಲದಲ್ಲಿ ನಿರ್ಮಿತವಾದ ಆಳ ಕಂದಕದಲ್ಲಿ ಕಾಲು ಜಾರಿ ಬಿದ್ದಿದ್ದಳು, ಕಂದಕದ ದಡದ ಮೇಲಿನ ಹುಲ್ಲನ್ನು ತಿನ್ನಲು ಹೋದಳೊ ಅಥವಾ ಈ ಬದಿಯಿಂದ ಆ ಬದಿಗೆ ಹಾರಲು ಹೊರಟಿದ್ದಳೋ ದೇವರಿಗೇ ಗೊತ್ತು. ಬಿದ್ದ ಭಾಗೀರಥಿ ಬಹಳ ಕಾಲ ಉಳಿದಿರಲಿಕ್ಕಿಲ್ಲ. ಅದೂ ಮಳೆಗಾಲವಾದ್ದರಿಂದ ಕೆಳಗೆ ನೀರು ಹರಿಯುತ್ತಿತ್ತು. ಎರಡು ಕಲ್ಲುಗಳ ಮಧ್ಯೆ ಬಿದ್ದು ತಡೆದು ನಿಂತು ಇಹಲೋಕ ಯಾತ್ರೆ ಪೂರೈಸಿದ ಭಾಗೀರಥಿ ನಿಜವಾಗಿಯೂ ಕಾಶೀ ವಿಶ್ವನಾಥನ ಸನ್ನಿಧಾನ ಸೇರಿ ನಮ್ಮೆಲ್ಲರ ಮನದಲ್ಲಿ ಅಮರಳಾಗಿದ್ದಳು;ಚಿರಸ್ಥಾಯಿಯಾಗಿದ್ದಳು.