ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, November 4, 2011

ಭಾವ-ಜಾತ್ರೆ !


ಭಾವ-ಜಾತ್ರೆ !

ನೂರಾರು ಭಾವಗಳು ಭುಗಿಲೆದ್ದು ಭೋರ್ಗರೆದು
ತೂರಿಕೊಳ್ಳಲು ಹೊರಟ ಭಾವಜಾತ್ರೆಯಲಿ
ತೇರನೇರಿದ ಪ್ರಮುಖ ದೇವ ಭಾವವು ಕುಳಿತು
ಭಾರೀ ಮೆರವಣಿಗೆಯಲಿ ಸಾಗುತಿಹುದಿಲ್ಲಿ

ಆರೇಳು ಭಕ್ತ ಭಾವಗಳೆಲ್ಲ ಮೇಳೈಸಿ
ಜಾರಿಗೊಳಿಸಿದ ಸಮಯ ರಥವನೆಳೆವುದಕೆ
ಹಾರವರ ತೆರನಾದ ಭಾವಗಳು ಪೂಜಿಸಲು
ಜೋರಾಗಿ ಹಗ್ಗ ಹಿಡಿದೆಳೆದು ನಮಿಸಿದರು

ಸಾರ ಸಂಗೀತಮೇಳವನೊಲಿದ ಕೆಲಭಾವ
ಸಾರಂಗ ಪಂಚವಾದ್ಯಾದಿಗಳ ನುಡಿಸಿ
ದಾರಿಯುದ್ದಕು ಶಂಖ ಜಾಗಟೆಗಳಬ್ಬರವು
ಭೂರಿಭೋಜನ ನೋಳ್ಪ ಹಲಭಾವಗಳಿಗೆ

ಊರಹಬ್ಬಕೆ ಬಂದ ಅಕ್ಕ-ಭಾವ ಮಾವ
ಸೀರೆಯುಟ್ಟಾ ಗರತಿ ಭಾವಗಳ ಕಂಡು
ಭೇರಿ ತಟ್ಟುತ ನಡೆದ ಭಾವ ನಗುತಿತ್ತಲ್ಲಿ
ದೂರದಲಿ ಮಗು ಭಾವ ಬೆಚ್ಚಿನೋಡಿರಲು

ನಾರು ಮಡಿಯಲಿ ನಡೆದ ಆಗಮಿಕ ಭಾವಗಳು
ಧಾರಾಳ ವೇದಘೋಷವನಷ್ಟು ಮೊಳಗೆ
ಹಾರೆದ್ದು ಪಲ್ಲಕಿಗೆ ಸೇರಿದೇವರ ಭಾವ
ಆರತಿಯ ಸ್ವೀಕರಿಸಿ ಹರಸಿ ನಗುಮೊಗದಿ

ವಾರದುದ್ದಕು ನಡೆದ ಹಲವು ಕೈಂಕರ್ಯಗಳು
ವಾರಿಜನಾಭನಂತಹ ಭಾವಕಾಗಿ
ಮೂರುಲೋಕದ ಒಡೆಯ ಭಾವ ವಿಹರಿಸುತಿಲ್ಲಿ
ತೋರಿಬಂದಾಯ್ತೀಗ ಕವನರೂಪದಲಿ !