ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, October 31, 2013

ಮಂಗಳಮಯ ದೀಪವನ್ನು ಬೆಳಗುವ ಕಥೆ

ಮಂಗಳಮಯ ದೀಪವನ್ನು ಬೆಳಗುವ ಕಥೆ

ದೀಪಮೂಲೇ ತತೋ ಬ್ರಹ್ಮಾ ದೀಪಮಧ್ಯೆ ತತೋ ಹರಿಃ |
ದೀಪಾಗ್ರೇ ಶಂಕರಂ ಪ್ರೋಕ್ತ ದೀಪರಾಜಾಯತೇ ನಮಃ ||

ದೀಪವನ್ನು ಬೆಳಗುವುದು ಸನಾತನ ಜೀವನಧರ್ಮದಲ್ಲಿ ಎಲ್ಲಾ ಧಾರ್ಮಿಕ ವಿಧಿಗಳಲ್ಲೂ ನಡೆಯಬೇಕಾದ ಪ್ರಥಮ ಕಾರ್ಯ. ಕತ್ತಲೆಯ ವೈರಿ ಬೆಳಕು. ಬೆಳಕನ್ನು ದೃಷ್ಟಿಸುವುದರಿಂದ ನಮ್ಮ ಮನಸ್ಸು ಅರಳುತ್ತದೆ, ಪ್ರಪುಲ್ಲವಾಗುತ್ತದೆ. ಕತ್ತಲೆಗೆ ತಮಸ್ಸು ಎಂತಲೂ ಹೆಸರು. ದೀಪವೊಂದು ಉರಿಯುತ್ತಿದ್ದರೆ ಉರಿವ ದೀಪದ ಮೂಲದಲ್ಲಿ ಬ್ರಹ್ಮನೂ ಮಧ್ಯದಲ್ಲಿ ವಿಷ್ಣುವೂ ಮತ್ತು ತುದಿಯಲ್ಲಿ ಶಿವನೂ ಸನ್ನಿಹಿತರಾಗಿತ್ತಾರೆ ಎಂಬುದು ಶ್ಲೋಕದ ಹೇಳಿಕೆ. ಒಟ್ಟಂದದಲ್ಲಿ ದೇವರೆಲ್ಲಾ ಒಬ್ಬನೇ ಆದರೂ ನಾವು ಬಯಸುವ ರೂಪಗಳಲ್ಲಿ ನಮಗೆ ತೋರ್ಪಡಿಸಿಕೊಳ್ಳುವುದು ಅಥವಾ ನಾವು ಆತನನ್ನು ಆರಾಧಿಸುವುದು ನಡೆಯುತ್ತದೆ.

ಮಂಗಳಚಿಹ್ನೆಗಳಲ್ಲಿ ಪ್ರಥಮವಾಗಿ ಮಂಗಳದೀಪವನ್ನೇ ಹೇಳಲಾಗುತ್ತದೆ. ನಂತರ ಇತರ ಎಲ್ಲವೂ ಬರುತ್ತವೆ. ದೇವತೆಗಳ ಪೂಜೆಗೆ ಅವರನ್ನು ಆಹ್ವಾನಿಸುವಾಗ ಏನೆಲ್ಲಾ ಮಾಡಬೇಕೆಂಬುದೇ ಸಾಮಾನ್ಯವಾಗಿ ಇಲ್ಲಿ ಅರಿಯಬೇಕಾದ ಅಂಶ. ಯಾಕೆ ವಿವಿಧ ಪರಿಕರಗಳು ಉಪಯೋಗಿಸಲ್ಪಡುತ್ತವೆ, ಅವುಗಳ ಬಳಕೆಯ ಮಹತ್ವವನ್ನೂ ಸ್ಥೂಲವಾಗಿ ಅರಿಯಬಹುದಾಗಿದೆ. ಹಿಂದಕ್ಕೆ ನಮ್ಮ ಪೂರ್ವರ್ಜರೆಲ್ಲ ಗೋಮಯದಿಂದ ನೆಲವನ್ನು ಸಾರಿಸುತ್ತಿದ್ದರು. ಗೋಮಯವನ್ನು ಆಯ್ದುಕೊಳ್ಳುವಾಗ ಸಹ ವಿಶಿಷ್ಟ ನಿಯಮಗಳಿದ್ದವು. ಕರುಹಾಕಿರುವ ಹಸುವಿನ ತಾಜಾ ಸಗಣಿಯೇ ಗೋಮಯವಾಗುತ್ತಿತ್ತು; ಸೂರ್ಯನ ಕಿರಣದಡಿಯಲ್ಲಿ ಗೋಮಾಳಗಳಲ್ಲಿ ಮೇದುಬರುವ ದೇಸೀ ದನದಗಳ ತಾಜಾ ಸಗಣಿಯಲ್ಲಿ ಕ್ರಿಮಿನಾಶಕ ಅಂಶಗಳಿವೆ ಎಂಬುದು ವೈಜ್ಞಾನಿಕ. ನಮ್ಮ ಕಾರ್ಯಗಳಿಗೆ ಅಡಚಣೆ ಉಂಟುಮಾಡದಂತೇ ಉಪದ್ರವಕಾರೀ ಕೀಟಾಣುಗಳನ್ನು ದೂರವಿಡುವುದು ಅನಿವಾರ್ಯ; ಅವುಗಳ ಹನನವೇ ನಮ್ಮ ಉದ್ದೇಶವಲ್ಲ, ಆದರೆ ನಮಗರಿವಿಲ್ಲದೇ ಅವು ಹತವಾದರೆ ಅದಕ್ಕಾಗಿ ಸೃಷ್ಟಿಕರ್ತನನ್ನೇ ಸ್ಮರಿಸುವುದು ಸಂಪ್ರದಾಯ.

ಗೋಮಯದಿಂದ ಶುದ್ಧಿಗೊಂಡ ನೆಲದ ಮೇಲೆ ರಂಗೋಲಿ ಇಡುವುದು ಮಂಗಳದ ಇನ್ನೊಂದು ಚಿಹ್ನೆ. ನಿತ್ಯವೂ ನಾವು ವಾಸಿಸುವ ಸ್ಥಳಗಳ ಎದುರುಭಾಗದಲ್ಲಿ, ಸೂರ್ಯೋದಯಕ್ಕೂ ಮುಂಚೆ ನೀರು-ಗೋಮಯ ಹಾಕಿ ಸಾರಿಸಿ, ರಂಗೋಲಿ ಇಡುವುದು ನಡೆಯಬೇಕಾದ ಕೆಲಸ. ವಿಶೇಷ ದಿನಗಳಲ್ಲಿ ಮಾವಿನ ಎಲೆಗಳಿಂದ ಮತ್ತು ಬಾಳೆಯ ಗಿಡಗಳಿಂದ ಬಾಗಿಲನ್ನು ಅಲಂಕರಿಸಿ ದೇವತೆಗಳ ಆಹ್ವಾನಕ್ಕೆ ತಯಾರಿ ನಡೆಸಿಕೊಳ್ಳುವುದು ಮಂಗಳದ ಚಿಹ್ನೆ. ಮಂಗಳದ ಚಿಹ್ನೆಗಳನ್ನು ಅಪರ ಕಾರ್ಯಕ್ರಮಗಳಲ್ಲಿ ಬಳಸುವುದಿಲ್ಲ. ಪರ ಅಂದರೆ ದೇವಲೋಕವೆಂದರ್ಥ, ಅಪರ ಎಂದರೆ ಐಹಿಕ, ಲೌಕಿಕ ಎಂದರ್ಥ. ಸಾಮಾನ್ಯವಾಗಿ ಯಾರಾದರೂ ಮರಣಿಸಿದರೆ, ಅಥವಾ ಹಳೆಯಜನರ ಪುಣ್ಯತಿಥಿಯ ಆಚರಣೆಯಿದ್ದರೆ ಅಂತಹ ದಿನಗಳಲ್ಲಿ ಆ ಕಾರ್ಯಕ್ರಮಗಳಲ್ಲಿ ದೀಪವನ್ನುಳಿದು ಉಳಿದ ಮಂಗಳಚಿಹ್ನೆಗಳನ್ನು ಹೆಚ್ಚಾಗಿ ಬಳಸಲಾಗುವುದಿಲ್ಲ. ದೀಪವನ್ನೂ ಸಹ ದೇವರೆದುರು ಮಾತ್ರ ಹಚ್ಚಿ ಇಡಲಾಗುತ್ತದೆಯೇ ವಿನಃ ಶ್ರಾದ್ಧಾದಿಗಳು ನಡೆಯುವಲ್ಲಿ ದೀಪದ ಅಗತ್ಯತೆ ಇರುವುದಿಲ್ಲ ಅಥವಾ ನಿಷೇಧ.

 ಶಿವಂ/ಶುಭಂ  ಕರೋತಿ ಕಲ್ಯಾಣ ಆರೋಗ್ಯಂ ಧನಸಂಪದಂ |
ಮಮಶತ್ರು ಹತಾರ್ಥಾಯ ಸಂಧ್ಯಾಜ್ಯೋತಿರ್ನಮೋಸ್ತುತೇ ||

ಸಂಜೆಯಾಯ್ತೆಂದರೆ ಭಾರತೀಯ ನಾರಿಯರು ಹಿಂದೆಲ್ಲ ಮನೆಯೊಳಗಡೆ ದೀಪವನ್ನು ಮುಡಿಸಿ ಈ ಶ್ಲೋಕವನ್ನು ಹೇಳುತ್ತಿದ್ದರು. ಈ ಶ್ಲೋಕದಲ್ಲಿ ’ಮಮ ಶತ್ರು ಹತಾರ್ಥಾಯ’ ಎಂದರೆ ನಮ್ಮ ಶತ್ರು ಕತ್ತಲೆ ಎಂದರ್ಥ. ಈ ಜನ್ಮದಲ್ಲಿ ವ್ಯಾವಹಾರಿಕವಾಗಿ ನಮಗೆ ಆಗದ ಜನರನ್ನು ಶತ್ರುಗಳೆಂದು ಭಾವಿಸಬಾರದು, ಹಾಗೆ ಭಾವಿಸುವುದು ನಮ್ಮ ದುಷ್ಟತನವೆನಿಸಿಕೊಳ್ಳುತ್ತದೆ. ನಮಗೂ ಅವರಿಗೂ ಯಾವುದೋ ಕಾರ್ಯಕಾರಣದಿಂದ ಉಂಟಾದ ರಾಗದ್ವೇಷ ಆ ಕಾರಣಕ್ಕಾಗಿ ಮಾತ್ರ ಮೀಸಲಾಗಿರಲಿ; ಅಲ್ಲಿಂದಾಚೆಗೆ ಎಲ್ಲಾ ವಿಷಯಗಳಲ್ಲೂ ಅವರು ನಮ್ಮ ದ್ವೇಷಿಗಳೆಂದು ಭಾವಿಸದಿರುವುದು ಸನಾತನ ನೀತಿ. ಮಹಾಭಾರತದಲ್ಲಿ ರಣರಂಗದಲ್ಲಿ ತೊಡೆಮುರಿದು ಬಿದ್ದ ಧುರ್ಯೋಧನನನ್ನು ಭೀಮ ಕೃಷ್ಣನ ಅನುಜ್ಞೆಯ ಮೇರೆಗೆ ಕೊಂದುಹಾಕಿದ. ಸತ್ತ ಸುಯೋಧನನ ಶಿರವನ್ನು ಭೀಮ ಕಾಲಿನಿಂದ ತುಳಿದ. ಆಕ ಕೃಷ್ಣ ಒಂದು ಮಾತನ್ನು ಹೇಳಿದ್ದಾನೆ: "ಜೀವಿಗೆ ಶಿರದ ಭಾಗವೇ ಪ್ರಮುಖ. ಅದನ್ನು ತುಳಿದು ಅಪಮಾನಿಸಬಾರದು. ಜೀವವಿರಲಿ, ಇಲ್ಲದಿರಲಿ ಪ್ರತ್ಯಕ್ಷವಾಗಿ ಜೀವಿಯ ಭೌತಿಕ ಶರೀರ ಎದುರು ಕಂಡಾಗ, ಕಾಲಿನಿಂದ ತಲೆಯನ್ನು ತುಳಿಯಬಾರದು. ಹಿಂದೊಂದು ಜಾವದಲ್ಲಿ ಜೀವದಲ್ಲಿದ್ದ ಆ ಜೀವಿಗೆ ತಲೆಯೇ ಕೇಂದ್ರ ಸ್ಥಾನವಾಗಿತ್ತು. ತಲೆಯಿಲ್ಲದಿದ್ದರೆ ಜೀವಿ ಅಪೂರ್ಣ. ತಲೆಯಲ್ಲಿರುವ ಮೆದುಳಿನಿಂದ ಮನಸ್ಸಿನ ಚಟುವಟಿಕೆಗಳು ನಡೆಸಲ್ಪಡುತ್ತವೆ. ಹೀಗಾಗಿ ಭೀಮ ನೀನು ಸುಯೋಧನನ ಪಾರ್ಥಿವ ಶರೀರದ ಶಿರವನ್ನು ತಾಲಿನಿಂದ ತುಳಿದದ್ದು ತಪ್ಪು." ಇದು ಕೃಷ್ಣನ ಧರ್ಮಪಾಲನೆಯನ್ನು ತಿಳಿಸುತ್ತದೆ.

ಇಂದು ಎಣ್ಣೆಯ ದೀಪಗಳ ಹಂಗಿಲ್ಲ, ದೇವರಿಗೂ ದೀಪವನ್ನು ಹಚ್ಚುವ ಪರಿಪಾಟ ಅನೇಕ ಮನೆಗಳಲ್ಲಿ ಇಲ್ಲ! ಹೀಗಾಗಿ ದೀಪಗಳ ಮಹತ್ವದ ಅರಿವಿಲ್ಲ. ದೀಪಗಳನ್ನು ಉರಿಸುವಾಗ ಅವುಗಳಿಂದ ಉತ್ಪತ್ತಿಯಾದ ಹೊಗೆ ವಾಯುವನ್ನು ಸೇರುತ್ತದೆ. ಹೀಗಾಗಿ ವಾಯುವನ್ನು ಮಲಿನಗೊಳಿಸುವ ಹೊಗೆ ಆದಷ್ಟೂ ಆಗದರೀತಿಯಲ್ಲಿ ದೀಪಗಳನ್ನು ಉರಿಸುತ್ತಿದ್ದರು. ಉದಾಹರಣೆಗೆ ಎಳ್ಳೆಣ್ಣೆಯ ದೀಪವನ್ನು ಉರಿಸುವುದರಿಂದ ಅದರ ಹೊಗೆ ಸುತ್ತಲಿನ ವಾತಾರಣವನ್ನು ಸೇರಿ-ಉಸಿರಾಟದ ಮೂಲಕ ನಮ್ಮೊಳಗೆ ಸೇರಿ, ಮನದ ಕ್ಲೇಶನಾಶಕ್ಕೆ ಕಾರಣವಾಗುತ್ತದೆ. ತುಪ್ಪದ ದೀಪ ಕೂಡ ಹಾಗೇ. ಸೀಮೆ ಎಣ್ಣೆ ದೀಪವನ್ನು ದೇವರಮುಂದೆ ಬೆಳಗುವುದಿಲ್ಲ ಏಕೆಂದರೆ ಕಲ್ಲೆಣ್ಣೆಯ ಹೊಗೆ ಆರೋಗ್ಯಕ್ಕೆ ಹಾನಿಕರ. ಮನುಷ್ಯ ಪರಿಶ್ರಮದಿಂದ ತಯಾರಿಸಿಕೊಂಡ ಕಡಲೆಕಾಯಿ ಎಣ್ಣೆ[ಶೇಂಗಾ ಎಣ್ಣೆ], ಹರಳೆಣ್ಣೆ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಇಂತಹ ಎಣ್ಣೆಗಳನ್ನು ಮಾತ್ರ ದೀಪಗಳಿಗೆ ಬಳಸಲಾಗುತ್ತದೆ.

ಕಾಲೇಜೊಂದರ ಉಪನ್ಯಾಸಕರೊಬ್ಬರಿಗೆ ವೇದಿಕೆಯ ಕಾರ್ಯಕ್ರಮಗಳಲ್ಲಿ ದೀಪವನ್ನು ಬೆಳಗುವುದು ಬಹಳ ಕೋಪವನ್ನು ತರಿಸುತ್ತಿತ್ತಂತೆ. ಸದರೀ ಉಪನ್ಯಾಸಕರು ತಮ್ಮ ಉಪನ್ಯಾಸಗಳಲ್ಲಿ ದೀಪಗಳನ್ನು ಬೆಳಗುವವರ ಕುರಿತು ವೈದಿಕ ಧರ್ಮದವರು, ಮೂಢನಂಬಿಕೆಯುಳ್ಳವರು ಎಂದೆಲ್ಲಾ ಗಂಟೆಗಟ್ಟಲೆ ಉಪನ್ಯಾಸ ಬಿಗಿಯುತ್ತಿದ್ದರಂತೆ. ಒಂದು ದಿನ ವಿಶೇಷ ಸಮಾರಂಭವೊಂದಕ್ಕೆ ವಿದೇಶೀ ವಿಶ್ವವಿದ್ಯಾನಿಲಯದ ಮುಖ್ಯಸ್ಥರೊಬ್ಬರು ಅತಿಥಿಗಳಾಗಿ ಬರುವವರಿದ್ದರು. ಆ ದಿನದ ಕಾರ್ಯಕ್ರಮದ ವೇದಿಕೆ-ವ್ಯವಸ್ಥೆಯನ್ನು ಕಾಲೇಜಿನ ಪ್ರಾಚಹಾರ್ಯರು ತಾವೇ ಸ್ವತಃ ನಿಂತು ಮಾಡಿಸಿದ್ದರಂತೆ. ದೀಪಬೆಳಗುವ ಕಾರ್ಯಕ್ರಮದಿಂದ ಉದ್ಘಾಟನೆಗೊಳ್ಳುವ ಕಾರ್ಯಕ್ರಮದಲ್ಲಿ ದೀಪ ಬೆಳಗುತ್ತಿರುವಾಗ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರು ಭಕ್ತಿಗೀತೆಯೊಂದನ್ನು ಹಾಡಿದರಂತೆ. ತಾವೇ ಹಚ್ಚಿದ ದೀಪವನ್ನು ಮತ್ತೆ ಮತ್ತೆ ನಿಂತು ನೋಡಿದ ವಿದೇಶೀ ಗಣ್ಯರು ಅದರ ಫೋಟೊಗಳನ್ನು ತೆಗೆದು ಕೊಡುವಂತೇ ಎದುರಿದ್ದ ಛಾಯಾಗ್ರಾಹಕನಲ್ಲಿ ವಿನಂತಿಸಿದರಂತೆ, ಜೊತೆಗೆ ತಮ್ಮ ಉಪನ್ಯಾಸದಲ್ಲಿ ದೀಪದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ How Beautiful..! ಎಂದು ಕೊನೆಯವರೆಗೂ ಉದ್ಗರಿಸುತ್ತಲೇ ಇದ್ದರಂತೆ. ದೀಪದಲ್ಲಿರುವ ದೈವತ್ವದ ಅರಿವು ಅವರಿಗಾಯ್ತೋ ಇಲ್ಲವೋ ಗೊತ್ತಿಲ್ಲ ಆದರೆ ದೀಪವೆಷ್ಟು ಸುಂದರ, ಮನಮೋಹಕ ಮತ್ತು ಎಷ್ಟು ಸಂತೋಷದಾಯಕ ಎಂಬುದನ್ನು ಅವರು ಅರಿತಿದ್ದರು. ಸಭಾಂಗಣದಲ್ಲಿ ಕುಳಿತು ಅವರ ಉಪನ್ಯಾಸವನ್ನು ಕೇಳುತ್ತಿದ್ದ ದೀಪ ವಿರೋಧಿ-ಉಪನ್ಯಾಸಕರಿಗೆ ತನ್ನ ಬಗೆಗೇ ಕೀಳರಿಮೆ ಹುಟ್ಟಲು ಆರಂಭವಾಯ್ತಂತೆ; ಮಾರನೇ ದಿನದಿಂದ ದೀಪ ಹಚ್ಚುವುದು ಮೂಢನಂಬಿಕೆ ಎಂದು ಭಾಷಣಬಿಗಿಯುವುದನ್ನು ನಿಲ್ಲಿಸಿದರಂತೆ.

ಅಮೇರಿಕಾದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬರಾಕ್ ಓಬಾಮಾ ತಮ್ಮ ಕಚೇರಿಯಲ್ಲಿ ಭಾರತೀಯ ಪುರೋಹಿತರಿಂದ ದೀಪವನ್ನು ಹಚ್ಚಿಸಿ "ಅಗ್ನಿ ಮೀಳೇ ಪುರೋಹಿತಂ....." ಎಂಬ ವೇದಮಂತ್ರವನ್ನು ಹೇಳಿಸಿ, ಕೇಳಿ ಖುಷಿಪಟ್ಟ ವಿಚಾರ ಜಗತ್ತಿನಾದ್ಯಂತ ಅನೇಕರಿಗೆ ತಿಳಿದಿದೆ. ಎಂದಾಗ ದೀಪದ ಮಹತ್ವ ಎಂಥದ್ದು ಎಂಬುದನ್ನು ನಾವು ಅರಿಯಬೇಕು.   

ದೀಪಗಳಲ್ಲಿ ವೈವಿಧ್ಯವಿದೆ, ಜ್ಯೋತಿಗೆ ನಿಗದಿತ ಆಕರವಿಲ್ಲದಿದ್ದರೂ ದೀಪವನ್ನು ಹಚ್ಚುವ ಹಣತೆಗಳಲ್ಲಿ, ದೀಪದ ಕಾಲು-ಕಂಬಗಳಲ್ಲಿ ವೈವಿಧ್ಯಗಳನ್ನು ಕಾಣಬಹುದು. ದೀಪದ ಕಾಲು-ಕಂಬದಮೇಲೆ ಮರದ ಟೊಂಗೆಗಳಂತೇ ಟಿಸಿಲಾಗುವ ಅಕಾರಗಳಿದ್ದು ಹತ್ತಾರು ಹಣತೆಗಳು ಅಲ್ಲಿರಬಹುದು. ರಥದ ಆಕಾರದಲ್ಲಿ ಸುತ್ತಮುತ್ತ ಹಣತೆಗಳಿರುವ ದೀಪದಕಂಬವಿರಬಹುದು. ಸಾಲಾಗಿ ಹಚ್ಚುವ ದೀಪಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಅದಕ್ಕೆಂತಲೇ ’ದೀಪಾವಳಿ’ ಎಂದೇ ಒಂದು ಹಬ್ಬವನ್ನು ಹೆಸರಿಸಿದರು.

ಮಿಥಿಲೆಯ ಜನಕನನ್ನು ಒಮ್ಮೆ ಒಂದು ಸಂದೇಹ ಬಲವಾಗಿ ಕಾಡಿತು. ರಾಜಗುರುಗಳಾದ ಯಾಜ್ಞವಲ್ಕ್ಯರನ್ನು ಕರೆಸಿದ ಆತ ಅವರಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡ. ಪುರುಷನಿಗೆ ನಿಜವಾದ ಜ್ಯೋತಿ ಯಾವುದು ಎಂಬುದೇ ಆತನ ಸಮಸ್ಯೆ. ಯಾಜ್ಞವಲ್ಕ್ಯರು ಉತ್ತರಿಸುತ್ತಲೇ ಹೋದರು: ಮೊದಲು ಆದಿತ್ಯನೆಂದರು, ಜನಕ ಕೇಳಿದ: ಹಗಲಲ್ಲಿ ಸೂರ್ಯನಿರುತ್ತಾನೆ, ರಾತ್ರಿಯಲ್ಲಿ? ಜನಕರು ಹೇಳಿದರು: "ಚಂದ್ರ."  "ಇಬ್ಬರೂ ಇಲ್ಲದಾಗ ಗುರುಗಳೇ?" -ಅರಸ ಮತ್ತೆ ಕೇಳಿದ. "ಅಗ್ನಿಯೇ ಜ್ಯೋತಿ" ಎಂದರು ಗುರು ಯಾಜ್ಞವಲ್ಕ್ಯರು. "ಗ್ನಿಯೂ ಶಾಂತವಾದಾಗ ಯಾವುದು?" ಎಂಬ ಜನಕನ ಪ್ರಶ್ನೆಗೆ "ವಾಕ್, ಕತ್ತಲೆಯಲ್ಲಿ ಯಾವ ದಿಕ್ಕಿನಿಂದ ಪರಿಚಿತ ಧ್ವನಿ ಕೇಳಿಬರುವುದೋ ಆ ಕಡೆಗೆ ಮನುಷ್ಯ ಗಮನಕೊಡುತ್ತಾನಲ್ಲಾ, ಆಗ ಅದೇ ಜ್ಯೋತಿ."  ಅಷ್ಟಕ್ಕೇ ಜನಕನಿಗೆ ಸಮಾಧಾನವಾಗಲಿಲ್ಲ, ಆತ ಮತ್ತೆ ಕೇಳಿದ: "ಒಂದೊಮ್ಮೆ ಸೂರ್ಯ, ಚಂದ್ರ, ಅಗ್ನಿ, ವಾಕ್ ಯಾವುದೂ ಇಲ್ಲವಾದರೆ, ಪುರುಷ ಮಲಗಿ ನಿದ್ರಿಸುತ್ತಿದ್ದರೆ ಅಥವಾ ಕನಸು ಕಾಣುತ್ತಿದ್ದರೆ ಆಗ ಯಾವುದು ಜ್ಯೋತಿ?" ಯಾಜ್ಞವಲ್ಕ್ಯರು ಉತ್ತರಿಸಿದರು: "ಆಗ ಪುರುಷನಿಗೆ ಒಳಗಿನ ಆತ್ಮವೇ ಜ್ಯೋತಿ."  ಜನಕ ಸುಮ್ಮನಿರುವನೇ ಆತ್ಮನ ಬಗ್ಗೆ ಕೇಳಿತಿಳಿದುಕೊಳ್ಳಲು ಆರಂಭಿಸಿದ: "ಆತ್ಮನಾದರೂ ಯಾರು? ಆತ ಹೇಗಿದ್ದಾನೆ?"

ಆತ್ಮನ ಸ್ವರೂಪವನ್ನು ಪದಗಳಲ್ಲಿ ವರ್ಣಿಸುವುದು ಬಹಳ ಕಷ್ಟ; ಅದು ಅನುಭವಕ್ಕೆ ನಿಲುಕುವ ವಿಷಯವೇ ಹೊರತು ಹೇಳಲು ಬರುವಂಥದ್ದಲ್ಲ. ಆದರೂ ಕ್ಲಿಷ್ಟವಾದ ವಿಷಯವನ್ನು ಸರಳವಾಗಿ ಸ್ವಲ್ಪದರಲ್ಲಿ ಹೋಲಿಕೆಯ ಮೂಲಕ ಯಾಜ್ಞವಲ್ಕ್ಯರು ತಿಳಿಸಿಕೊಟ್ಟರು. ಹೊರಗಿನ ವ್ಯವಹಾರಗಳಿಗೇ ಆಗಲಿ ಅಥವಾ ಮಾನಸಿಕ ಕ್ರಿಯೆಗಳಿಗಾಗಲೀ ಬೆಳಕೆಂಬುದು ಬೇಕೇ ಬೇಕು. ಬೆಳಕು ಸ್ವಯಂಪ್ರಕಾಶಗೊಳ್ಳುವಂಥದ್ದಿರಬೇಕು. ಅಂತಹ ಬೆಳಕೇ ಪರಬ್ರಹ್ಮ, ಆತನೇ ಪರಂಜ್ಯೋತಿ. ಸೂರ್ಯ, ಚಂದ್ರ, ನಕ್ಷತ್ರ, ಬೆಂಕಿ, ವಿದ್ಯುತ್[ಮಿಂಚು], ದೀಪ ಇವುಗಳೆಲ್ಲಾ ಪ್ರಾಕೃತಿಕವಾಗಿರುವ ಜ್ಯೋತಿಗಳು. ನಾವು ಮನೆಗಳಲ್ಲಿ ಹಚ್ಚುವ ದೀಪಗಳು ಆ ಪರಂಜ್ಯೋತಿಯ ಪ್ರತೀಕಗಳು. ಅವುಗಳನ್ನು ಪೂಜಿಸುವುದು, ಗೌರವಿಸುವುದು ಪರಂಜ್ಯೋತಿಗೆ ನಾವು ಸಲ್ಲಿಸ ಬಹುದಾದ ಪ್ರಾಥಮಿಕ ಪೂಜೆ. ಪ್ರತಿಯೊಂದು ಮಂಗಳ ಕಾರ್ಯದಲ್ಲಿ ಸ್ವಸ್ತಿಕ ಬರೆಯುವುದರಿಂದ ಭೂತತ್ತ್ವವೂ ಮತ್ತು ಕಲಶ ಸ್ಥಾಪನೆಯಿಂದ ಜಲತತ್ತ್ವವೂ ಅರ್ಚಿಸಲ್ಪಡುತ್ತದೆ. ನಂದಾದೀಪಗಳ ಬೆಳಗುವಿಕೆಯಿಂದ ಜ್ಯೋತಿ ತತ್ತ್ವವು ಪೂಜೆಗೊಳ್ಳುತ್ತದೆ.

ಸಾಜ್ಯಂ  ತ್ರಿವರ್ತಿ ಸಂಯುಕ್ತಂ ವಹ್ನಿನಾಯೋಜಿತಂ ಮಯಾ |
ದೀಪಂ ಗ್ರಹಾಣ ದೇವೇಶ ತ್ರೈಲೋಕ ತ್ರಿಮಿರಾಪಃ ||

ತುಪ್ಪದೊಂದಿಗೆ ಮೂರು ಬತ್ತಿಗಳನ್ನಿಟ್ಟು, ಅಗ್ನಿಯಿಂದ ಅದನ್ನು ಹಚ್ಚಿ, ನಿನಗಾಗಿ ದೀಪವೊಂದನ್ನು ಕೊಡುತ್ತಿದ್ದೇನೆ ದೇವಾ, ಮೂರುಲೋಕವನ್ನೂ ಬೆಳಗುವ ನಿನಗಿದೋ ಅರ್ಪಣೆ ಎಂಬರ್ಥದಲ್ಲಿ ನಾವು ಆರತಿಯನ್ನು ಆರಂಭಿಸುತ್ತೇವೆ. ದೀಪಗಳ ಪೈಕಿ ಮಂಗಲಾರತಿಯೂ ಸಹ ಒಂದು. ಮಂಗಲಾರತಿ ನಡೆಯುವುದನ್ನು ನೋಡಿ ಕಣ್ದುಂಬಿಕೊಂಡು ನಮಸ್ಕರಿಸಿದರೆ ಸ್ವತಃ ಪೂಜೆಮಾಡಿದಷ್ಟೇ ಪುಣ್ಯ ಪ್ರಾಪ್ತವಾಗುತ್ತದೆ ಎಂಬುದು ಪ್ರಾಜ್ಞರ ಅಭಿಮತ. ದೇವರಿಗೆ ಗುಡಿಯೊಂದನ್ನು ಕಟ್ಟಿಕೊಡುತ್ತೇನೆ, ದೀಪವನ್ನು ಹಚ್ಚಿ ಬೆಳಕು ತೋರಿಸುತ್ತೇನೆ, ಹಸಿವು ನಿವಾರಿಸಿಕೊಳ್ಳಲು ನೈವೇದ್ಯ ನೀಡುತ್ತೇನೆ, ತೃಷೆಗಾಗಿ ಮಧುರ ರಸಭರಿತ ಪಾನೀಯಗಳನ್ನು ನೀಡುತ್ತೇನೆ ಎಂಬುದೆಲ್ಲಾ ಕೇವಲ ನಮ್ಮ ವಿನಮ್ರ ಭಾವನೆಯಷ್ಟೆ. ಧನಿಕನೊಬ್ಬನಿಗೆ ಏನನ್ನೋ ಉಡುಗೊರೆಕೊಟ್ಟಂತೆ, ಬ್ರಹ್ಮಾಂಡಕ್ಕೇ ನಾಯಕನಾದವನಿಗೆ ಆ ಧನಿಕನಿಗೆ ಅವುಗಳನ್ನೆಲ್ಲಾ ನಾವು ಕೊಟ್ಟು ಪೂರೈಸಲಾದೀತೇ? ಅಷ್ಟಕ್ಕೂ ಅವೆಲ್ಲಾ ಅವನ ಕೊಡುಗೆಗಳೇ. ಇಲ್ಲಿ ಮತ್ತೆ ’ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬ ತತ್ತ್ವ ಅಡಗಿರುವುದನ್ನು ನಾವು ಗಮನಿಸಬೇಕು. ಭಗವಂತನಿಗೆ ನಮ್ಮಿಂದ ಏನೂ ಬೇಕಾಗಿಲ್ಲ, ಆದರೆ ನಾವು ಭಕ್ತಿ, ಶ್ರದ್ಧೆ ಮತ್ತು ಶರಣಾಗತಿಯಿಂದ ಕೊಡುವ ಅಲ್ಪವನ್ನೂ ಸಹ ಆತ ಗಮನಿಸಬಲ್ಲ! ಅಲ್ಪವನ್ನೇ ಬೃಹತ್ ಎಂದು ಪರಿಗಣಿಸುವುದು ಆತನ ಔದಾರ್ಯ ಮತ್ತು ಸೌಜನ್ಯ. ನಮ್ಮಿಂದ ಸಲ್ಲಿಸಲ್ಪಟ್ಟ ಗೌರವಕ್ಕೆ ಆತ ನಮ್ಮ ಮೇಲೆ ಅನುಕಂಪಿತನಾಗುತ್ತಾನೆ. "ಪರವಾಗಿಲ್ಲಪ್ಪಾ, ನನ್ನನ್ನು ನೆನಪಿನಲ್ಲಿಟ್ಟುಕೊಂಡಿದ್ದಾನೆ" ಎಂದುಕೊಳ್ಳುತ್ತಾನೆ! ಹಾಗೆ ಚಿಕ್ಕದೀಪವನ್ನಾದರೂ ಹಚ್ಚಿ ಪರಂಜ್ಯೋತಿಗೆ ಅದನ್ನು ಅರ್ಪಿಸುವುದರ ಮೂಲಕ ಆತನ ಅನುಗ್ರಹಕ್ಕೆ ಪಾತ್ರರಾಗುವುದು ಸಾಧ್ಯ; ಹಾಗೆ ಮಾಡುವುದು ಸುಸಂಸ್ಕೃತರ ಕರ್ತವ್ಯ. ’ತಮಸೋಮಾ ಜ್ಯೋತಿರ್ಗಮಯ’-ಕತ್ತಲೆಯಿಂದ ಬೆಳಕಿನೆಡೆಗೆ ನಡೆಸು ಎಂಬುದು ಇಂದು ನಿನ್ನೆಯ ಪ್ರಾರ್ಥನೆಯಲ್ಲ, ಸಹಸ್ರಾರು ವರ್ಷಗಳಿಂದ ಸಾಗಿಬಂದ ಪ್ರಾರ್ಥನೆ. ಇಷ್ಟನ್ನು ಶೋಧಿಸಿದ ಮಹನೀಯ ಮಹರ್ಷಿಗಳ ಮಹತ್ಕಾರ್ಯ ನಿಜಕ್ಕೂ ನಿತ್ಯ ಸ್ಮರಣೀಯ, ನಿತ್ಯ ಮನನೀಯ, ನಿತ್ಯ ರಮಣೀಯವೂ ಕೂಡಾ.    ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು. 
 

Saturday, October 19, 2013

ಸಂಸ್ಕೃತಿ ಮತ್ತು ನಾಗರಿಕತೆಗಳ ವ್ಯತ್ಯಾಸ

ಚಿತ್ರಋಣ: ಅಂತರ್ಜಾಲ

ಸಂಸ್ಕೃತಿ ಮತ್ತು ನಾಗರಿಕತೆಗಳ ವ್ಯತ್ಯಾಸ

ಸಂಸ್ಕೃತಿ ಎಂದರೇನು? ಎಂದು ಹುಡುಕುತ್ತಾ ಹೋದರೆ ಸಂಸ್ಕಾರಗಳನ್ನು ಹೊಂದಿ ಬದುಕುವ ಪ್ರಕ್ರಿಯೆ ಎಂದು ಸರಳವಾಗಿ ಹೇಳಬಹುದಷ್ಟೆ. ನಮ್ಮ ಸ್ವಭಾವ-ನಡವಳಿಕೆಗಳನ್ನೇ ಪರ್ಯಾಯವಾಗಿ ಸಂಸ್ಕೃತಿ ಎನ್ನಬಹುದು. ಹೇಗಿದ್ದರೆ ಸರಿ, ಹೇದಿದ್ದರೆ ತಪ್ಪು, ಹೇಗೆ ನಡೆದುಕೊಳ್ಳುವುದು ಉತ್ತಮ, ಹೇಗೆ ಪರರಿಗೆ ತೊಂದರೆಯಾಗದಂತೇ ಬದುಕಬೇಕು ಎಂಬಂತಹ ಅಂಶಗಳನ್ನು ಸಂಸ್ಕೃತಿ ಬೋಧಿಸುತ್ತದೆ. ಶುಭ್ರವಾದ ಬಟ್ಟೆಯನ್ನು ಧರಿಸಿದ ಮಾತ್ರಕ್ಕೆ ಉತ್ತಮ ಸಂಸ್ಕೃತಿ ಎನ್ನಬಹುದೇ? ಅದು ಉತ್ತಮ ಸಂಸ್ಕೃತಿಯ ಒಂದು ಭಾಗವಷ್ಟೆ. ಶುಭ್ರವಾದ ಬಟ್ಟೆಯನ್ನು ತೊಟ್ಟ ವ್ಯಕ್ತಿಯ ಹೃದಯವೂ ಸಹ ಶುದ್ಧವಾಗಿರಬೇಕು. ಹೆಂಡತಿಯನ್ನು ಬಿಟ್ಟು ಮಿಕ್ಕುಳಿದ ಮಹಿಳೆಯರನ್ನೆಲ್ಲಾ ತಾಯಿಯಂತೇ ನೋಡುವುದು ನಮ್ಮ ಸನಾತನ ಸಂಸ್ಕೃತಿ. ತಾಯಿ ಎಂಬ ಕ್ರಿಯೆಯಲ್ಲಿ ಎರಡು ಪ್ರಕ್ರಿಯೆಗಳು ಅಡಕವಾಗಿವೆ: ವ್ಯಕ್ತಿ ಹೆಣ್ಣೆಂಬುದು ಭೌತಿಕವಾದ ಸತ್ಯ. ಆಕೆ ತಾಯಿ ಎಂಬುದು ಭಾವನಾತ್ಮಕ ಸತ್ಯ. ಶಿಲೆಯೆಂಬುದು ಭೌತಿಕ ಸತ್ಯ, ಗರ್ಭಗುಡಿಯಲ್ಲಿರುವ ಶಿಲೆಯ ವಿಗ್ರಹ ದೇವರೆಂಬುದು ಭಾವನಾತ್ಮಕ ಸತ್ಯ. ನಾಗರಿಕತೆಯೆಂಬುದು ಭಾವನೆಗಳ ಬಗೆಗೆ ವ್ಯಾಪಕವಾಗಿ ಹೇಳುವುದಿಲ್ಲ, ಅದು ಕೇವಲ ಶಿಷ್ಟಾಚಾರದವರೆಗೆ ಮಾತ್ರ ಬಂದು ನಿಲ್ಲುತ್ತದೆ. ಸಂಸ್ಕೃತಿ ಹಾಗಲ್ಲ, ಅದು ತನ್ನೊಳಗೆ ನಾಗರಿಕತೆಯನ್ನು ಅಡಗಿಸಿಕೊಂಡೇ ಹೆಚ್ಚುವರಿಯಾಗಿ ಭಾವನಾತ್ಮಕ ನಡೆಗಳನ್ನು ತಿಳಿಸುತ್ತದೆ.

ಅಪ್ಪ-ಅಮ್ಮಂದಿರಿಗೆ ಮತ್ತು ಹಿರಿಯರಿಗೆ ಕಾಲುಮುಟ್ಟಿ ನಮಸ್ಕಾರಮಾಡುವುದು ನಮ್ಮ ಸಂಸ್ಕೃತಿ. ಬಾಯಲ್ಲಿ ಥ್ಯಾಂಕ್ಸ್ ಎನ್ನುವುದು ವಿದೇಶೀಯರ ಸಂಸ್ಕೃತಿ. ಸಂಸ್ಕೃತಿ ಸಂಸ್ಕಾರ ವಾಚಕವಾಗಿರುತ್ತದೆ. ನಾಗರಿಕತೆ ಶಿಷ್ಟಾಚಾರ ವಾಚಕವಾಗಿರುತ್ತದೆ. ಕೆಲವೊಮ್ಮೆ ಸಂಸ್ಕೃತಿ ಮತ್ತು ನಾಗರಿಕತೆಗಳ ನಡುವೆ ಕೂದಲ ಎಳೆಯಷ್ಟು ಅಂತರವಿರುತ್ತದೆ; ಆದರೂ ಸಂಸ್ಕೃತಿ ನಾಗರಿಕತೆಗಿಂತ ಭಿನ್ನವೆಂಬುದು ಸ್ಪಷ್ಟವಾಗುತ್ತದೆ. ಸಂಸ್ಕೃತಿಯೆಂಬ ಪದ ತಡವಾಗಿ ಬಳಕೆಗೆ ಬಂದಿದ್ದರೂ ನಾಗರಿಕತೆಯೆಂಬ ಪದವೂ ಬಳಕೆಯಿಲ್ಲದ ಕಾಲದಲ್ಲಿ ಸಂಸ್ಕೃತಿ ಇತ್ತು ಎಂಬುದು ರಾಮಾಯಣ-ಮಹಾಭಾರತಗಳಿಂದ ನಮಗೆ ಗೊತ್ತಾಗುತ್ತದೆ. ಸಂಸ್ಕೃತಿ ಮತ್ತು ನಾಗರಿಕತೆಗಳನ್ನು ಕೆಲವು ನಿದರ್ಶನಗಳ ಮೂಲಕ ನೋಡುತ್ತ ಹೋಗೋಣ.

ನಾಗರಿಕತೆಯ ಬಗ್ಗೆ ನಮಗೆ ಸಾಕಷ್ಟು ಮಾಹಿತಿ ಸಿಗುತ್ತದೆ. ಅದರಲ್ಲಂತೂ ಭಾರತೀಯ ಇತಿಹಾಸದಲ್ಲಿ ಹರಪ್ಪ-ಮೊಹೆಂಜೊದಾರೋ ಮೊದಲಾದೆಡೆಗಳಲ್ಲಿ ಉತ್ಖನನ ಮಾಡಿದಾಗ ಸಾವಿರಾರು ವರ್ಷಗಳ ಹಿಂದಿನ ಜೀವನಕ್ರಮಗಳ ಕುರಿತಾದ ಮಾಹಿತಿಯನ್ನು ಸಾರುವ ಬಳಕೆಯ ಪರಿಕರಗಳ ಪಳೆಯುಳಿಕೆಗಳು ಸಿಕ್ಕಿವೆ. ಸಂಸ್ಕೃತಿಗೆ ಪ್ರತ್ಯೇಕ ಆಧಾರ ಬೇಕಾಗಿಲ್ಲ. ಬಳಸಿದ ವಸ್ತುಗಳನ್ನೇ ಆಧರಿಸಿ ಸಾಮಾನ್ಯವಾಗಿ ಆ ಜನ ಹೇಗೆ ಬದುಕುತ್ತಿದ್ದರು, ಯಾವುದನ್ನೆಲ್ಲಾ ಬಳಸುತ್ತಿದ್ದರು, ಯಾವ ಉದ್ದೇಶದಿಂದ ಬಳಸಿರಬಹುದು ಇವುಗಳನ್ನೆಲ್ಲಾ ಊಹಿಸುವಾಗ ಅವರ ಸಂಸ್ಕೃತಿಯ ಬಗ್ಗೆ ಸ್ಥೂಲವಾದ ಮಾಹಿತಿ ಸಿಗುತ್ತದೆ. ಈ ಭೂಮಿಯಮೇಲೆ ಕೆಲವೊಂದು ಪ್ರದೇಶಗಳಲ್ಲಿ ನಿಗದಿತ ವ್ಯವಸ್ಥೆಗಳನ್ನು ನಿರ್ಮಿಸಿಕೊಂಡು ಬದುಕುವುದು ನಾಗರಿಕತೆ ಎನ್ನಿಸಿದೆ. ಹಾಗೆ ಬದುಕುವಾಗ ಸಹಜೀವಿಗಳಿಗೆ, ಪ್ರಕೃತಿಗೆ ತೊಂದರೆಯಾಗದಂತೇ ಹೇಗೆ ಬದುಕಬೇಕು ಎಂಬ ನಿಗದಿತ ವ್ಯವಸ್ಥೆಗಳನ್ನು ಪರಿಕಲ್ಪಿಸುವುದು ಸಂಸ್ಕೃತಿಯೆನಿಸುತ್ತದೆ.

ರಾಮಾಯಣದಲ್ಲಿ ದಶರಥ ಮಹಾರಾಜ ಮಡದಿ ಕೈಕೇಯಿಗೆ ವರವನ್ನು ಕೊಟ್ಟಿದ್ದ. ಸಮಯಬಂದಾಗ ಪಡೆದ ವರಗಳನ್ನು ಬಳಸಿಕೊಳ್ಳುವುದಾಗಿ ಆಕೆ ಹೇಳಿದ್ದಳು. ಅಶ್ವಮೇಧಯಾಗದ ಜೊತೆ ಪುತ್ರಕಾಮೇಷ್ಠಿಯಾಗವನ್ನು ಪೂರೈಸಿ ತನ್ಮೂಲಕ ಪ್ರಾಪ್ತವಾದ ಪಾಯಸವನ್ನು ಮೂರು ರಾಣಿಯರಿಗೂ ಹಂಚಿ, ರಾಣಿಯರಿಂದ ನಾಲ್ಕು ಮಕ್ಕಳನ್ನು ಪಡೆದ. ನಾಲ್ಕೂ ಮಕ್ಕಳು ಶುಕ್ಲಪಕ್ಷದ ಬಿದಿಗೆಯ ಚಂದ್ರಮನಂತೇ ಬೆಳೆದರು. ಪ್ರಾಪ್ತವಯಸ್ಕರಾಗಿ ವಿದ್ಯಾಭ್ಯಾಸಗಳನ್ನೆಲ್ಲಾ ಪೂರೈಸಿ, ಎಲ್ಲರ ವಿವಾಹವೂ ನೆರವೇರಿತು. ನಂತರ ಯುವರಾಜನನ್ನು ಆರಿಸಿ ಪಟ್ಟಾಧಿಕಾರ ಕೊಡುವ ಹಂತಕ್ಕೆ ದಶರಥ ನಡೆದಾಗ, ಮಂಥರೆ ಎಂಬ ಸೇವಕಿ ಕೈಕೇಯಿಗೆ ಕಿವಿಯೂದಿದಳು-ಅದು ಮಂಥರೆಯ ವಿಕೃತಿ. ಅದರಿಂದ ವಿವೇಚನೆ ಕಳೆದುಕೊಂಡು  ಸ್ವಾರ್ಥಪರಳಾದ ಕೈಕೇಯಿ, ಗಂಡ ಕೊಟ್ಟಿದ್ದ ವರಗಳನ್ನು ಆಗ ಕೇಳಿದಳು. ವರಗಳ ಬಳಕೆಯಲ್ಲಿ ರಾಮ ಹದಿನಾಲ್ಕುವರ್ಷ ವನವಾಸಕ್ಕೆ ತೆರಳಬೇಕೆಂಬುದು ಒಂದು ಬೇಡಿಕೆ. ರಾಣಿಯ ಬೇಡಿಕೆ ಕೇಳಿ ದಶರಥ ಕಂಗೆಟ್ಟ, ದಿಗ್ಮೂಢನಾದ. ಮಗ ಶ್ರೀರಾಮನಲ್ಲಿ ವಿಷಯವನ್ನಾತ ಪ್ರಸ್ತಾಪಿಸಲಾರದೇ ಹೋದ. ಆದರೆ ತಂದೆಯ ಮೂಕ ಆಜ್ಞೆಯನ್ನು ಮಗ ತಂದೆಯ ಬಾಯಿಂದ ಕೇಳದೇ ಅರಿತು ನಡೆಸಲು ಉದ್ಯುಕ್ತನಾದ. ಇಲ್ಲಿ ಮೂರು ಸಂಗತಿಗಳನ್ನು ಗಮನಿಸಬೇಕು. ಮುಪ್ಪಿನ ರಾಜ ಯುವರಾಜನನ್ನು ಆಯ್ಕೆಮಾಡಿ ಪಟ್ಟಾಭಿಷೇಕ ಮಾಡುವುದು ನಾಗರಿಕತೆ. ಯಾರನ್ನು ಆಯ್ಕೆಮಾಡಬೇಕು ಎಂಬುದು ಸಂಸ್ಕೃತಿ. ರಾಣಿಗೆ ಕೊಟ್ಟ ವರಗಳನ್ನು ಆಕೆ ತನ್ನ ಹಕ್ಕಿನಿಂದ ಉಪಯೋಗಿಸಿದ್ದು ನಾಗರಿಕತೆ, ಆಯಕಟ್ಟಿನ ಸಂದರ್ಭದಲ್ಲಿ ದಶರಥನನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಅವಳ ವಿಕೃತಿ. ಕೊಟ್ಟ ವರಗಳನ್ನು ಇಲ್ಲವೆಂದು ತಿರಸ್ಕರಿಸದೇ ಮಗ ಶ್ರೀರಾಮನಲ್ಲಿ ನಡೆದುದನ್ನು ಹೇಳಲೂ ಆರದೇ ಇದ್ದ ದಶರಥನ ಸ್ಥಿತಿ-ಅವನ ಸಂಸ್ಕೃತಿ. ಅಪ್ಪ ಹೇಳದಿದ್ದರೂ ಅಪ್ಪನ ಮನವನ್ನರಿತು ಅದನ್ನೇ ಆಜ್ಞೆಯೆಂದು ಸ್ವೀಕರಿಸಿ ರಾಮ ಕಾಡಿಗೆ ಹೋದದ್ದು ಸಂಸ್ಕೃತಿ. ಸಂಸ್ಕೃತಿ-ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆ ಆಗಿರಬಹುದು.

ದೇಶದ ರಾಜಕೀಯದಲ್ಲಿರುವ ಜನ ದಾಖಲೆಗಳಲ್ಲಿ ಲಂಚವನ್ನು ಸ್ವೀಕರಿಸದೇ ಉತ್ತಮರಾಗಿ ಕಾಣುವುದು  ನಾಗರಿಕತೆಯನ್ನು ಹೇಳುತ್ತದೆ; ಕದ್ದುಮುಚ್ಚಿ ಲಂಚವನ್ನು ಸ್ವೀಕರಿಸುವುದು ಅವರ ಸಂಸ್ಕೃತಿಯನ್ನು ಹೇಳುತ್ತದೆ.

ಯುದ್ಧಭೂಮಿಯ ಈ ಉದಾಹರಣೆ ನೋಡಿ :

ಯುದ್ಧಭೂಮಿಯಲ್ಲಿ ಎರಡೂ ಕಡೆಯ ಸೈನ್ಯಗಳ ನಡುವೆ ಘನಘೋರ ಕಾಳಗ ನಡೆಯುತ್ತಿತ್ತು. ಸೈನಿಕನೊಬ್ಬ ತನ್ನ ಸಹೋದ್ಯೋಗಿ-ಸ್ನೇಹಿತ ದೂರದಲ್ಲಿ ಕಂದಕದಲ್ಲಿ ಕೆಳಗೆ ಬೀಳುತ್ತಿರುವುದನ್ನು ನೋಡಿದ. ಕಂದಕದಲ್ಲಿ ಬಿದ್ದ ಸೈನಿಕನ ಮೇಲೆ ಶತ್ರುಗಳು ಗುಂಡಿನ ಸುರಿಮಳೆಗರೆಯುತ್ತಲೇ ಇದ್ದರು.

ನೋಡುತ್ತಿದ್ದ ಈ ಸೈನಿಕ ತನ್ನ ಲೆಪ್ಟಿನಂಟ್ ರಲ್ಲಿ "ಎರಡು ಕಂದಕಗಳ ನಡುವೆ ಜನರಿಲ್ಲದ ಜಾಗದಲ್ಲಿಳಿದು  ಹೋಗಿ ನನ್ನ ಸ್ನೇಹಿತನನ್ನು ಕರೆತರಬಹುದೇ?" ಎಂದು ಕೇಳಿದ.

"ಆಗಬಹುದು, ಆದರೆ ಹಾಗೆ ಮಾಡುವುದು ಫಲಕಾರಿ ಎಂದು ನನಗೇನೂ ಅನಿಸುವುದಿಲ್ಲ, ನಿನ್ನ ಸ್ನೇಹಿತ ಶತ್ರುಗಳ ಗುಂಡೇಟಿನಿಂದ ಈಗಾಗಲೇ ಮಡಿದಿರಬಹುದು. ನೀನು ಅಲ್ಲಿಯೇ ಜೀವ ತೆರುವ ಪ್ರಸಂಗ ಕೂಡ ಬರಬಹುದು."

ಲೆಪ್ಟಿನೆಂಟ್ ಒಪ್ಪಿಗೆ ಕೊಟ್ಟಿದ್ದನ್ನು ಕೇಳಿದ್ದು ಬಿಟ್ಟರೆ, ಮತ್ತಿನ್ನೇನೋ ಹೇಳಿದ್ದು ಈ ಸೈನಿಕನಿಗೆ ಕೇಳಲೇ ಇಲ್ಲ ಎನ್ನುವ ರೀತಿಯಲ್ಲಿ ಈ ಸೈನಿಕ ಕಂದಕದಲ್ಲಿ ಬಿದ್ದ ತನ್ನ ಸ್ನೇಹಿತನತ್ತ ನಡೆದೇಬಿಟ್ಟ. ಪವಾಡದ ರೀತಿಯಲ್ಲಿ ಸ್ನೇಹಿತನಿದ್ದೆಡೆ ತಲ್ಪುವಲ್ಲಿ ಈತ ಯಶಸ್ವಿಯೂ ಆದ! ಕೆಳಗೆ ಬಿದ್ದಿದ್ದ ಸ್ನೇಹಿತನನ್ನೆತ್ತಿ ಹೆಗಲಮೇಲೆ ಹಾಕಿಕೊಂಡು ಮರಳಿ ಅತಿ ವೇಗದಲ್ಲಿ ತಾವಿರುವ ಕಂದಕದೆಡೆಗೆ ಧಾವಿಸಿದ. ಅವರಿಬ್ಬರೂ ತಮ್ಮ ಕಂದಕದ ತಳಭಾಗದ ವರೆಗೆ ಪರಸ್ಪರ ಉರುಳುತ್ತ ಹೋದರು. ಅಲ್ಲಿದ್ದ ಅಧಿಕಾರಿ [ಲೆಪ್ಟಿನಂಟ್] ಗಾಯಾಳುವಾಗಿದ್ದ ಸೈನಿಕನೆಡೆಗೆ ಸರಿಯಾಗಿ ನೋಡಿದ.

"ನಾನು ಹೇಳಿದ್ದೆನಲ್ಲ...ಏನೂ ಪ್ರಯೋಜನವಿಲ್ಲ ಎಂದು, ನಿನ್ನ ಸ್ನೇಹಿತ ಸತ್ತಿದ್ದಾನೆ, ನೀನು ಮಾರಣಾಂತಿಕ ಗಾಯಗಳಿಂದ ಬಳಲುತ್ತಿದ್ದೀಯ."

"ಆದರೂ ಪ್ರಯೋಜನವಿತ್ತು ಸರ್."

"ಪ್ರಯೋಜನ ಎಂದರೇನರ್ಥ? ನಿನ್ನ ಸ್ನೇಹಿತ ಸತ್ತಿದ್ದಾನಲ್ಲ."

"ಹೌದು ಸರ್, ಆದರೂ ಅದು ಪ್ರಯೋಜನಕ್ಕೆ ಬಂತು ಯಾಕೆಂದರೆ ನಾನು ಅಲ್ಲಿಗೆ ಹೋದಾಗ ನನ್ನ ಸ್ನೇಹಿತ ಇನ್ನೂ ಜೀವದಿಂದಿದ್ದ. ಕೊನೆಯದಾಗಿ ಆತ "ಜಿಮ್, ನೀನು ಬರುತ್ತೀಯ ಎಂಬುದು ನನಗೆ ಗೊತ್ತಿತ್ತು" ಎಂದು ಹೇಳಿದ್ದನ್ನು  ಕೇಳಿದ ಸಂತೃಪ್ತಿ ನನಗಿದೆ."

ಎಷ್ಟೋ ಸಲ ಜೀವನದಲ್ಲಿ, ಮಾಡುವ ಕೆಲಸಗಳು ತಪ್ಪೋ ಸರಿಯೋ, ಅದನ್ನು ನೋಡುವ ದೃಷ್ಟಿಯಲ್ಲಿ ಅದು ನಿರ್ಧಾರವಾಗುತ್ತದೆ. ನಿಮ್ಮಲ್ಲಿರುವ ಉತ್ಸಾಹದ ರೆಕ್ಕೆಗಳನ್ನು ಅಗಲಿಸಿಕೊಂಡು ನಿಮ್ಮ ಹೃದಯ ಮಾಡು ಎಂದು ಹೇಳುವ ಕೆಲಸವನ್ನು ಮಾಡಲು ಮುಂದಾಗಿ, ಹಾಗೆ ಮಾಡಿದರೆ, ಹೃದಯ ಚೀರಿದರೂ ನಾನದನ್ನು ಮಾಡಲಿಲ್ಲವಲ್ಲ ಎಂಬ ಪಶ್ಚಾತ್ತಾಪ ಇರುವುದಿಲ್ಲ. ಜಗತ್ತೆಲ್ಲಾ ನಿಮ್ಮನ್ನಗಲಿ ದೂರವಿಡುವಾಗ ನಿಮ್ಮ ಜೊತೆಗಾರನಾಗಿ ನಿಲ್ಲುವವನೇ ನಿಜವಾದ ಗೆಳೆಯ. ಯುದ್ಧ ಯಾರು ಉತ್ತಮರೆಂಬುದನ್ನು ನಿರ್ಧರಿಸುವುದಿಲ್ಲ, ಯಾರು ಉಳಿದುಕೊಂಡರು ಎಂಬುದನ್ನಷ್ಟೇ ತೋರಿಸುತ್ತದೆ. ಯಾರು ಉತ್ತಮರು ಎಂದು ತೋರಿಸುವುದು ಸಂಸ್ಕೃತಿ, ಯಾರು ಗೆದ್ದರು ಎಂದು ತೋರಿಸುವುದು ನಾಗರಿಕತೆ.

ಜೋಗ್ ಫಾಲ್ಸ್ ಸಹಜವಾಗಿ ಇದ್ದಿದ್ದು ಪ್ರಕೃತಿ. ವಿಶ್ವೇಶ್ವರಯ್ಯನವರು ಜೋಗ್ ಫಾಲ್ಸ್ ಕಂಡಾಗ ಎಲ್ಲರಂತೇ ಮೂಕವಿಸ್ಮಿತರಾಗದೇ ವಿಭಿನ್ನ ರೀತಿಯಿಂದ ಅದನ್ನು ಬಳಸಿಕೊಳ್ಳಲು ಚಿಂತಿಸಿರುವುದು ಶ್ರೇಷ್ಠ ಸಂಸ್ಕೃತಿ. ಅಣೆಕಟ್ಟೆ ಕಟ್ಟಿ ನದಿಯ ನೀರನ್ನು ಬಳಸಿಕೊಳ್ಳುವುದು ನಾಗರಿಕತೆ.

ಸಂಸ್ಕೃತಿ ಎಂಬುದು ಕೇವಲ ಔಪಚಾರಿಕ ಆಚರಣೆಯಲ್ಲ. ಅದು ಕೇವಲ ಮನಸ್ಸಿಗೆ ಸಂಬಂಧಿಸಿದ ವ್ಯವಹಾರವಲ್ಲ, ಕೇವಲ ದೇಹಕ್ಕೆ ಸಂಬಂಧಿಸಿದ ವ್ಯವಹಾರವೂ ಅಲ್ಲ. ಹಾಗಾದರೆ ದೇಹ-ಮನಸ್ಸುಗಳ ಸಂಗಮದ ವ್ಯವಹಾರವೇ ಎಂದರೆ ಅಷ್ಟಕ್ಕೇ ಸೀಮಿತವೂ ಅಲ್ಲ. ಮನಸ್ಸು-ಬುದ್ಧಿ-ಚಿತ್ತ-ಅಹಂಕಾರ ಎಂಬ ನಾಲ್ಕುಸ್ತರಗಳ ಮನೋಭೂಮಿಕೆಯ ಜೊತೆಗೆ ದೈಹಿಕವಾಗಿಯೂ ಒಪ್ಪಿ ಆಚರಿಸುವ ಜೀವಾತ್ಮನ ನಡೆಗಳು ಸಂಸ್ಕೃತಿಯೆನಿಸುವುದು. ಸಂಸ್ಕೃತಿ ಒಂದೊಂದು ದೇಶದಲ್ಲಿ ಒಂದೊಂದು ರೀತಿ ಇರಬಹುದು, ಆದರೆ ಸನಾತನ ಸಂಸ್ಕೃತಿಯ ವೈಶಿಷ್ಟ್ಯವೆಂದರೆ ಸ್ವಹಿತದೊಡನೆ ಪರಹಿತವನ್ನೂ ಲೋಕಹಿತವನ್ನೂ ಬಯಸಿ, ಅದಕ್ಕೆ ಒಪ್ಪಿತವಾಗಿ ನಡೆದು ಜೀವನ ನಡೆಸುವುದು-ಇದು ಜಗತ್ತಿನ ಇನ್ನಾವ ದೇಶದಲ್ಲೂ ಕಾಣದ ವಿಶೇಷ. 

ತಾನು ಬರೆದದ್ದನ್ನೇ ಸತ್ಯ ಮತ್ತು ಅಂತಿಮವೆಂದು ಓದಲು ಹೇಳುವುದು ಇಂದಿನ ಕೆಲವು ಬರಹಗಾರರ ವಿಕೃತಿ. ಕುಮಾರವ್ಯಾಸನಂತಹ ಮಹಾಕವಿಗಳು ಹೇಗೆ ನಡೆದುಕೊಂಡರು ಎಂದೊಮ್ಮೆ ನೋಡೋಣ:

ಕೃತಿಯನವಧರಿಸುವುದು ಸುಕವಿಯ
ಮತಿಗೆ ಮಂಗಳವೀವುದಧಿಕರು
ಮಥಿಸುವುದು ತಿದ್ದುವುದು ಮರೆವುದು ಲೇಸ ಸಂಚಿಪುದು |
ನುತಗುಣರು ಭಾವುಕರು ವರಪಂ
ಡಿತರು ಸುಜನರು ಸೂಕ್ತಿಕಾರರು
ಮತಿಯನೀವುದು ವೀರ ನಾರಾಯಣನ ಕಿಂಕರಗೆ ||

ಈ ಮಹಾಕವಿ ಅದೆಷ್ಟು ವಿನಯ ಗುಣ ಸಂಪನ್ನ ಎಂಬುದು ಇಲ್ಲಿ ಸ್ಪಷ್ಟವಾಗಿದೆ. ಕೃತಿಯನ್ನೋದಿದ ಪಂಡಿತರು, ಪದ ನಿಷ್ಣಾತರು, ಕವಿ-ಕಾವ್ಯ ಕೋವಿದರು, ಸೂಕ್ತಿಕಾರರು, ಭಾವುಕರು ಏನಾದರೂ ತಪ್ಪು ಕಂಡರೆ ತಿದ್ದಿ, ಕ್ಷಮಿಸಿ, ಈ ವೀರನಾರಾಯಣನ ಕಿಂಕರನಿಗೆ ಬುದ್ಧಿಹೇಳಿ ಎಂಬ ಕೋರಿಕೆಯಲ್ಲಿ ಅನನ್ಯಭಾವ ಕಾಣುತ್ತದೆ. ಬರೆಯುವುದು ನಾಗರಿಕತೆ. ಬರಹಗಳಲ್ಲಿ ಮೌಲಿಕವಾದುದನ್ನು ಬರೆಯುವುದು ಸಂಸ್ಕೃತಿ. ಸಂಸ್ಕೃತದ ವ್ಯಾಸಮಹಾಭಾರತವನ್ನೇ ಆಧರಿಸಿ ಕನ್ನಡದಲ್ಲಿ ಅದನ್ನು ಬರೆಯಹೊರಟ ಕುಮಾರವ್ಯಾಸನಿಗೆ ಪದಗಳ ಕೊರತೆಯಿರಲಿಲ್ಲ. ಭಾಮಿನಿ ಷಟ್ಪದಿಯೆಂಬ ಹೊಸದೊಂದು ಶೈಲಿಯನ್ನು ಆತನೇ ಹುಟ್ಟುಹಾಕಿದನೆನ್ನಬೇಕು. ಪ್ರಾಸಬದ್ಧವಾಗಿ, ಸರ್ವಾಂಗಶುದ್ಧವಾಗಿ ಬರೆದಿದ್ದರೂ, ಅಹಂಕಾರ ರಹಿತನಾಗಿ, ತನ್ನ ಕಾವ್ಯದಲ್ಲಿ ತಪ್ಪುಗಳಿದ್ದರೆ ಅರಿತವರು, ಕಾವ್ಯಾಸಕ್ತ ಬುಧಜನರು ಅದನ್ನು ತಿದ್ದಬಹುದು ಎಂಬ ಸ್ವಾತಂತ್ರ್ಯವನ್ನು ಕೊಡುತ್ತಾನೆ!-ಇದು ಕುಮಾರವ್ಯಾಸನ ಉತ್ಕೃಷ್ಟ ಸಂಸ್ಕೃತಿಯಾಗಿದೆ.

ಮಹಾತ್ಮ-ಕವಿ ಡಿವಿಜಿ ತಮ್ಮ ಕೃತಿಗಳುದ್ದಕ್ಕೂ ಸಂಸ್ಕೃತಿಯ ಬಗ್ಗೆ ಅಪಾರವಾಗಿ ಹೇಳುತ್ತಾರೆ. ಡಿವಿಜಿಯವರು ಬದುಕಿದ ರೀತಿ ಒಂದು ಅತ್ಯುಕೃಷ್ಟ ಸಂಸ್ಕೃತಿ. ಅವರು ತಮ್ಮ ಸಾಹಿತ್ಯದಿಂದ ಸಮಾಜಸೇವೆ ಮಾಡಿದರು. ಬಹುಮೌಲ್ಯಯುತವಾದ ಮತ್ತು ಸಾರ್ವಕಾಲಿಕವಾದ ಅವರ ಬರಹಗಳಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ತಮ್ಮ ಜೀವನದ ಕಡು ಬಡತನದ ಅನಿವಾರ್ಯತೆಗಳಲ್ಲೂ ಅವರು ಸಾಹಿತ್ಯವನ್ನು ಮಾರಲಿಲ್ಲ. ಮೈಸೂರು ಸರಕಾರಕ್ಕೆ ಕೊಡುತ್ತಿದ್ದ ತಮ್ಮ ಸಲಹೆಗಳಿಗೆ ದಿವಾನರಾಗಿದ್ದ ಸರ್. ಎಂ. ವಿಶ್ವೇಶ್ವರಯ್ಯನವರು ಕೊಡಿಸಿದ ಚೆಕ್ಗಳನ್ನೂ ಸಹ ಅವರು ನಗದಾಗಿ ಪರಿವರ್ತಿಸಿಕೊಳ್ಳಲಿಲ್ಲ! ರಾಜ್ಯದ/ರಾಷ್ಟ್ರದ ಹಿತ ಕಾಪಾಡುವುವ ಸಲುವಾಗಿ ಆಳರಸರಿಗೆ ನೀಡಿದ ಸಲಹೆಗೆ ಪ್ರತಿಫಲ ಬೇಡವೆಂಬುದೇ ಅವರ ಅಭಿಪ್ರಾಯವಾಗಿತ್ತು. ಅವರ ಜೀವನಚರಿತ್ರೆ ನಿಜಕ್ಕೂ ಎಲ್ಲರಿಗೊಂದು ಸಂಸ್ಕೃತಿ ಬೋಧಕ ಪಾಠವಾಗಿದೆ. ನಡೆಯಲ್ಲೂ ನುಡಿಯಲ್ಲೂ ಏಕರೀತಿಯನ್ನು ತೋರಿದ ಅವರು ನುಡಿದಂತೆಯೇ ನಡೆದುಕೊಳ್ಳುವ ಸ್ವಭಾವದರಾಗಿದ್ದರು. ಬಡತನವೆಂಬ ಕಾರಣಕ್ಕೆ ಯಾರೋ ಹಣಕೊಟ್ಟರೆ, ಬಂಗಾರಕೊಟ್ಟರೆ ಸ್ವೀಕರಿಸುವ ಮನೋಭಾವ ಅವರಲ್ಲಿ ಇರಲೇ ಇಲ್ಲ; ಬದಲಾಗಿ ತನ್ನಲ್ಲಿರುವುದನ್ನು ಅರ್ಹರೊಡನೆ ಹಂಚಿಕೊಂಡು ಬದುಕಿದ ಜೀವ ಅದು. ಡಿವಿಜಿಯವರು ತಮ್ಮ ಕೃತಿಗಳಲ್ಲಿ ಸಾರುತ್ತಾರೆ:

"ಕಾಡಿನಲ್ಲಿರುವ ಸಂಪಿಗೆ, ಕೇದಿಗೆ, ಮಲ್ಲಿಗೆ, ಪಾದರಿ, ಸುರಗಿ, ಹೊನ್ನೆ ಮುಂತಾದ ನೂರಾರು ಜಾತಿಯ ವನಪುಷ್ಪಗಳ ಸೌರಭಗಳನ್ನು ಗಾಳಿಯು ಒಂದಾಗಿ ಬೆರೆಸಿ , ದೂರದಲ್ಲಿರುವವನಿಗೆ  ಹೆಸರಿಸಲಾಗದ ಒಂದು ವಿಜಾತೀಯ ಪರಿಮಳಭಾರವನ್ನು ಬೀರುತ್ತದೆ. ಕಾಡುಬೆಟ್ಟಗಳಲ್ಲಿರುವ ಹಲವು ಹದಿನಾರು ಮೂಲಿಕೆಗಳ ಸಾರವನ್ನು ವೈದ್ಯನು ಪುಟಪಾಕದಲ್ಲಿರಿಸಿ ಒಂದೇ ಹೊಸ ಸಂಜೀವಿನಿ ರಸವನ್ನಾಗಿ ಇಳಿಸುತ್ತಾನೆ. ಸಂಸ್ಕೃತಿ ಎಂಬುದು ಹಾಗೆಯೇ. ಸಂಗೀತ ಸಾಹಿತ್ಯಾದಿ ನಾನಾ ಕಲಾನುಭವಗಳ ಮತ್ತು ನಾನಾ ಶಾಸ್ತ್ರ ಶಿಕ್ಷಣಗಳ ಫಲಿತಾಂಶಗಳ ಸಾರ ಸಮ್ಮೇಳನ ಅದು.

ಸಂಸ್ಕೃತಿಯು ಒಂದು ಪುರಾತನಕಾಲದ ಆಲದ ಮರದಂತೆ. ಆಮರದ ಪಾದವು ಒಂದೆರಡು ಗಜ ಅಗಲದಷ್ಟು ನೆಲದಲ್ಲಿ ನಿಂತು ಆ ಒಂದೇ ಕಡೆ ಸ್ಥಿರವಾಗಿಬಿಡುತ್ತದೆ. ಅದರ ತಲೆಯ ಕಡೆಯಾದರೋ, ನೂರಾರು ಶಾಖೋಪಶಾಖೆಗಳು  ಅಂತರಿಕ್ಷದ ಎಂಟುದಿಕ್ಕುಗಳಿಗೂ ವಿಸ್ತಾರವಾಗಿ ಚಾಚಿಕೊಂಡು ನೂರಾರು ಪ್ರದೇಶಗಳ ಗಾಳಿಯಿಂದ ಸಾರವನ್ನು ಹೀರಿಕೊಳ್ಳುತ್ತ  ಸಾವಿರಾರು ತರದ ಪಕ್ಷಿಗಳಿಗೆ ಆಶ್ರಯವಾಗಿರುತ್ತದೆ. ಮೂಲದಲ್ಲಿ ಅದು ನಿಯತ, ಶಿರೋಭಾಗದಲ್ಲಿ ಅದು ಯಥೇಷ್ಟ. ಸಂಸ್ಕೃತಿಯೂ ಅದರಂತೆಯೇ, ಮೂಲದಲ್ಲಿ ಅದು ಏಕವರ್ಗದ್ದು, ಏಕ ಸಮಾಜದ್ದು, ಏಕ ದೇಶದ್ದು. ಆದರೆ ಫಲಪರಿಣಾಮದಲ್ಲಿ ಅದು ಬಹುವರ್ಗ ಸಂಸರ್ಗದ್ದು, ನಾನಾ ಸಮಾಜ ಸಂಘಟಿತವಾದದ್ದು, ವಿಶ್ವವಿಸ್ತಾರವಾದದ್ದು. ಅದು ವ್ಯಷ್ಟಿ[ವ್ಯಕ್ತಿ]ಯನ್ನು ಸಮಷ್ಟಿ[ಸಮಾಜ]ದೊಡನೆ ಕೂಡಿಸುತ್ತದೆ. ಅದರ ಒಂದು ಕೊನೆ ವ್ಯಕ್ತಿ ಇನ್ನೊಂದು ಕೊನೆ ವಿಶ್ವ-ಪ್ರಪಂಚ..." 

ಯಾವುದು ಸನಾತನ ಜೀವನ ಧರ್ಮವೆಂದು ತಿಳಿಯುತ್ತೇವೋ ಅದು ಸಂಸ್ಕೃತಿಯ ಒಂದು ಅಂಶ; ಭಾರತದಲ್ಲಿ ಅದು ಪೂರ್ಣಪ್ರಮಾಣದ ಧರ್ಮ ಎನಿಸಿಕೊಂಡರೆ ಅನ್ಯ ರಾಷ್ಟ್ರಗಳಲ್ಲಿ ಅದು ನಮ್ಮ ಸಂಸ್ಕೃತಿಯಾಗಿ ಗೋಚರಿಸುತ್ತದೆ. ನಮ್ಮಲ್ಲಿ ಕಲೆ-ಸಾಹಿತ್ಯ-ಸಂಗೀತ-ಶಿಲ್ಪ-ವಿಜ್ಞಾನ ಮುಂತಾದ ಇತರ ಸಂಸ್ಕೃತಿಕ ಅಂಶಗಳು ಧರ್ಮಕ್ಕೆ ಅಧೀನವಾಗಿವೆ. ಧರ್ಮದ ಮೂಲಗುರಿಯನ್ನು ಸೇರಲು ಸಾಧನಗಳಾಗಿವೆ. ಧರ್ಮದ ಮೂಲ ಆದರ್ಶಗಳನ್ನು ಬದುಕಿನ ವಿವಿಧ ಕ್ಷೇತ್ರಗಳಲ್ಲಿ ಅಭಿವ್ಯಕ್ತಗೊಳಿಸುವ ಮಾರ್ಗಗಳಾಗಿವೆ. ಇಲ್ಲಿ ಧರ್ಮವೇ ಪ್ರಧಾನ, ಧರ್ಮವೇ ಗುರು, ಉಳಿದವು ಪರಿವಾರ. ಆದರಿಂದಲೇ ಸನಾತನ ಸಂಸ್ಕೃತಿಯನ್ನು ಧರ್ಮ ಪ್ರಧಾನವೆಂದು ಪರಿಗಣಿಸಲಾಗುತ್ತದೆ.

ನಾಗರಿಕತೆ ಎಂಬ ಪದದ ಮೂಲವನ್ನು ಹುಡುಕಿದರೆ, ಮೊದಲೇ ಹೇಳಿದ ಹಾಗೇ ಅದು ನಗರವಾಸಿಗಳು ಬದುಕುವ  ಬಗೆ. ಸಿಟಿ ಎಂದರೆ ನಗರ, ಸಿಟಿಝೆನ್ ಎಂದರೆ ನಾಗರಿಕ, ಸಿವಿಲೈಸೇಶನ್ ಎಂದರೆ ನಾಗರಿಕತೆ-ಇದು ಮನುಷ್ಯ ಮಾಡಿಕೊಂಡ ಕಲ್ಪನೆಗಳು. ನಗರಗಳನ್ನು ಬಿಟ್ಟು ಹಳ್ಳಿಗಳಲ್ಲಿ ವಾಸಿಸುವ ಜನರಲ್ಲಿ ನಾಗರಿಕತೆಯಿಲ್ಲವೇ? ಖಂಡಿತಕ್ಕೂ ಉಂಟು. ಆದರೆ ಹಿಂದೆ ಹಳ್ಳಿಗಳ ವಾಸವನ್ನು ಅನಾಗರಿಕವೆಂದು ಆಂಗ್ಲ ಜನ ಪರಿಗಣಿಸಿದ್ದರ ಪರಿಣಾಮವಾಗಿ ’ನಾಗರಿಕತೆ’ ಅಥವಾ ಸಿವಿಲೈಸೇಶನ್ ಎಂಬ ಪದ ಹುಟ್ಟಿಕೊಂಡಿತು ಎನ್ನಬಹುದು.

ಸಂಸ್ಕೃತಿಯೆಂಬುದು ಪ್ರತೀ ವ್ಯಕ್ತಿಯ ಅಂತರಂಗದ ಶೀಲ ಅಥವಾ ಸಂಪತ್ತು ನಾಗರಿಕತೆಯೆಂಬುದು ಸಮಾಜದ ಶೀಲ ಅಥವಾ ಬಾಹ್ಯ ಸಂಪತ್ತು. ಹಣ್ಣೊಂದರ ಒಳಭಾಗವನ್ನು ಸಿಪ್ಪೆರಕ್ಷಿಸುತ್ತಿರುತ್ತದೆ; ಒಳಭಾಗ ಸಂಸ್ಕೃತಿ ಮತ್ತು ಸಿಪ್ಪೆಯೆನಿಸಿದ ಭಾಗ ನಾಗರಿಕತೆ. ಸಂಸ್ಕೃತಿ ಮತ್ತು ನಾಗರಿಕತೆಗಳು ಗಿಡ ಮತ್ತು ಬಳ್ಳಿಗಳಂತೇ ಒಂದನ್ನು ಇನ್ನೊಂದು ಆಶ್ರಯಿಸಿದೆ. ಮಾವಿನ ಮರವೊಂದರಲ್ಲಿ ಹಣ್ಣುಗಳು ಸಿಗಬೇಕಾದರೆ, ತೆಂಗಿನಮರವೊಂದರಲ್ಲಿ ಕಾಯಿ ಸಿಗಬೇಕಾದರೆ ಅದನ್ನು ಅನೇಕವರ್ಷಗಳಕಾಲ ನೀರು, ಗೊಬ್ಬರ ಮೊದಲಾದವುಗಳನ್ನಿತ್ತು ರಕ್ಷಣೆಮಾಡಿ ಕಾಲಕಾಲಕ್ಕೆ ಮಾಡಬೇಕಾದ ಕೃಷಿಕೆಲಸಗಳನ್ನು ನಡೆಸಬೇಕಾಗುತ್ತದೆ. ಅದರ ಫಲವನ್ನು ಅನೇಕ ವರ್ಷಗಳ ನಂತರ ನಾವು ಕಾಣುತ್ತೇವೆ. ಸಂಸ್ಕೃತಿ ಮತ್ತು ನಾಗರಿಕತೆಗಳೂ ಸಹ ಯಾವುದೋ ಕಾಲಘಟ್ಟದಲ್ಲಿ ವ್ಯಕ್ತಿಯೊಬ್ಬ ಮಾಡಿದ ನೀತಿಗಳಲ್ಲ; ಬಹಳವರ್ಷಗಳಲ್ಲಿ ಅನೇಕಜನರು ಬದುಕಿದ ರೀತಿಗಳನ್ನು ಆಧಾರವಾಗಿ ಸ್ವೀಕರಿಸಿ, ಪರಿಷ್ಕರಿಸಿ, ಅನುಭವಗಳನ್ನು ಶೇಖರಿಸಿ, ಅವುಗಳಲ್ಲಿ ಉತ್ತಮವಾದ ಅಂಶಗಳನ್ನು ಆಯ್ದುಕೊಂಡು ಅನುಸರಿಸುವುದು ಸಂಸ್ಕೃತಿಯಾಗುತ್ತದೆ. ಸಂಸ್ಕೃತಿಯನ್ನು ರಕ್ಷಿಸುವುದು ನಾಗರಿಕತೆಯಾಗುತ್ತದೆ.

ಒಳ್ಳೆಯೆ ದರ್ಜಿ, ಮೋಚಿ ಮತ್ತು ನಾಪಿತ ಮೂರು ಜನರಿದ್ದರೆ ಹೊರಗಿನಿಂದ ಎಂಥವರನ್ನಾದರೂ ಚೆನ್ನಾಗಿ ಕಾಣುವಂತೇ ಮಾಡಬಹುದೆಂದು ಕವಿ ಕುವೆಂಪು ಹೇಳುತ್ತಾರೆ. ದರ್ಜಿ ಒಳ್ಳೆಯ ಬಟ್ಟೆಗಳನ್ನು ಹೊಲಿದುಕೊಡುತ್ತಾನೆ, ಮೋಚಿ ಸುಂದರ ಚಪ್ಪಲಿಗಳನ್ನು ತಯಾರಿಸಿಕೊಡುತ್ತಾನೆ, ನಾಪಿತ ನೆರೆತ ಕೂದಲನ್ನು ಕತ್ತರಿಸಿ ಹಿತಮಿತವಾಗಿ ಕಾಣುವಂತೇ ಮಾಡುತ್ತಾನೆ. ಇದರಿಂದ ವ್ಯಕ್ತಿ ಹೊರಗಿನಿಂದ ನಾಗರಿಕನೆನಿಸಿಕೊಳ್ಳುತ್ತಾನೆ. ಆದರೆ ಆತ ನುಡಿದಂತೇ ನಡೆದುಕೊಳ್ಳುವನೋ ಅಥವಾ ಸುಳ್ಳುಗಳನ್ನು ಹೇಳುತ್ತಾ ಮೋಸಮಾಡುವನೋ ಎಂಬುದು ಹೊರಗಿನಿಂದ ನೇರವಾಗಿ ಅನುಭವಕ್ಕೆ ಬರುವುದಿಲ್ಲ. ಆತ ನುಡಿದಂತೇ ನಡೆದರೆ ಆತನನ್ನು ಸುಸಂಸ್ಕೃತನೆಂದೇ ಹೇಳಬೇಕಾಗುತ್ತದೆ. ರಾಮಾಯಣದ ಲಂಕೆಯೆಂಬುದು ಬಹಳ ಸಂಪದ್ಭರಿತವಾಗಿತ್ತು ಮತ್ತು   ಉಚ್ಚ ನಾಗರಿಕತೆಯಿಂದ ಕೂಡಿತ್ತು ಎಂಬುದು ತಿಳಿದುಬರುತ್ತದೆ; ಆದರೆ ರಾವಣನಿಗೆ ಸಂಸ್ಕೃತಿಯಿರಲಿಲ್ಲ-ಆತ ವಿಕೃತನಾಗಿದ್ದ. ಬಹುಕಾಲ ರಾಮನ ಬರುವಿಕೆಯನ್ನು ಕಾದು ಆತನ ಪಾದವನ್ನು ತೊಳೆದು ನದಿ ದಾಟಿಸಿದ ಗುಹ ಸಂಸ್ಕೃತಿಗೆ ಪ್ರತೀಕ. ರಾಮನಿಗೆ ಮಧುರರಸ ಭರಿತ ಹಣ್ಣುಗಳನ್ನು ಮಾತ್ರ ಕೊಡಬೇಕೆಂದು ಅವುಗಳನ್ನು ಸ್ವಲ್ಪಮಾತ್ರ ಕಚ್ಚಿ ನೋಡಿ ರಾಮನಿಗಾಗಿ ಬಹುಭಕ್ತಿ-ಪ್ರೀತಿ-ಶ್ರದ್ಧೆಯಿಂದ ಆಯ್ದುಕೊಟ್ಟಿದ್ದು ಶಬರಿಯ ಸಂಸ್ಕೃತಿ. ನಾಗರಿಕತೆಯ ದೃಷ್ಟಿಯಿಂದ, ಗುಹ ಮತ್ತು ಶಬರಿ ಈರ್ವರೂ ಸಹ ಅಕ್ಷರಸ್ಥರಲ್ಲ; ಆದರೆ ಉತ್ತಮ ಸಂಸ್ಕಾರಗಳನ್ನು ಹೊಂದಿದವರು.

ಅನ್ನವನ್ನು[ತಿನ್ನುವ ವಸ್ತುಗಳನ್ನು]ವಿಕ್ರಯಿಸುವುದನ್ನು ಸನಾತನ ಮೂಲ ಸಂಸ್ಕೃತಿ ಒಪ್ಪುವುದಿಲ್ಲ. ಆದರೆ ಇಂದು ರೆಸ್ಟಾರೆಂಟುಗಳದ್ದೇ ದೊಡ್ಡ ಉದ್ಯಮ. ಧಾವಂತದ ಜೀವನದಲ್ಲಿ ಹಲವು ಆದರ್ಶಗಳನ್ನು ಜನ ಲೆಕ್ಕಿಸುತ್ತಿಲ್ಲ. ತೋಟವೊಂದರ ಮಾಲೀಕನಾದವ ತಾನು ಬೆಳೆದು ಹಣ್ಣುಗಳನ್ನು ತಾನೊಬ್ಬನೇ ತಿನ್ನುವುದು ನಾಗರಿಕತೆ, ಒಂದಷ್ಟು ಜನರಿಗೆ ಹಂಚಿಕೊಂಡು ತಿನ್ನುವುದು ಸಂಸ್ಕೃತಿ, ಸಾಧ್ಯವಾದಷ್ಟೂ ಜನರಬಾಯಲ್ಲಿ ಹಣ್ಣಿನ ಹೋಳುಗಳು ಬೀಳಲಿ ಎಂಬ ಮಹತ್ವಾಕಾಂಕ್ಷೆಯಿಂದ ಬೆಳೆದರೆ ಅದು ಸುಸಂಸ್ಕೃತಿ-ಅದು ಅತ್ಯಂತ ಆದರ್ಶಮಯ ಕಾರ್ಯ. ಪ್ರಯಾಣ ಸಮಯದಲ್ಲಿ ಯಾರದೋ ಚಿಕ್ಕಮಕ್ಕಳ ಎದುರು ತಿನಿಸುಗಳನ್ನು ಅವರಿಗೆ ಕಾಣುವಂತೇ ತಿನ್ನುತ್ತಾ ಅವರಿಗೆ ಕೊಡದಿರುವುದು ಅಧುನಿಕ ನಾಗರಿಕತೆ; ಎಷ್ಟೇ ಅನಾನುಕೂಲವಿದ್ದರೂ ಸ್ವಲ್ಪವನ್ನಾದರೂ ಆ ಮಕ್ಕಳಿಗೆ ಕೊಟ್ಟು ಆಮೇಲೆ ತಾವು ತಿನ್ನುವುದು ಸಂಸ್ಕೃತಿ. ಹಡೆದಮ್ಮ ಹಾಲೂಡುವುದು ಹೆಚ್ಚೆಂದರೆ ಎರಡುವರ್ಷಗಳ ಕಾಲ, ಗೋವು ಹಾಲೂಡುವುದು ನಮ್ಮ ಉಸಿರಿರುವಷ್ಟುಕಾಲ-ಅಂತಹ ಗೋವನ್ನು, ಗೋ-ಕುಲವನ್ನು ಪೂಜಿಸಿ ಪೊರೆಯುವುದು ನಮ್ಮ ಸಂಸ್ಕೃತಿ, ಹಾಲುಣಿಸಿದ ಗೋವನ್ನೇ ಮಾಂಸಕ್ಕಾಗಿ ವಧಿಸುವುದು ವಿಕೃತಿ. ಉತ್ತಮವಾದ ಶಿಲೆಯನ್ನು ಕಂಡ ಶಿಲ್ಪಿ ಅದರಲ್ಲಿ ಮೂರ್ತಿಯನ್ನು ಕಲ್ಪಿಸಿಕೊಳ್ಳುವುದು ಸಂಸ್ಕೃತಿ. ಮೂರ್ತಿಯನ್ನು ಕಡೆಯುವುದು  ಸಂಸ್ಕೃತಿಯ ಮುಂದರಿಕೆ. ಶಿಲ್ಪಿ ಕೆತ್ತಿದ ವಿಗ್ರಹವನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ-ಅದರಲ್ಲಿ ದೇವರನ್ನೇ ಕಾಣುವುದು ಇನ್ನೂ ಮುಂದುವರಿದ ಸಂಸ್ಕೃತಿ. ವಿಗ್ರಹದಲ್ಲಿ ದೇವರಿಲ್ಲ ಎಂದು ವಿಗ್ರಹವನ್ನೇ ಧ್ವಂಸಮಾಡುವುದು ವಿಕೃತಿ.

ಇಂದು ನಾವು ಹಡಗು, ವಿಮಾನ, ರೈಲು, ಬಸ್ಸು ಮೊದಲಾದವುಗಳನ್ನು ಸಂಚಾರಕ್ಕೆ ಬಳಸುತ್ತೇವೆ. ಚರದೂರವಾಣಿ-ಸ್ಥಿರದೂರವಾಣಿಗಳನ್ನೂ ಮಿಂಚಂಚೆಗಳನ್ನೂ ಸಂಪರ್ಕಕ್ಕೆ ಬಳಸುತ್ತೇವೆ. ರೇಡಿಯೋ, ಟಿವಿ, ಪತ್ರಿಕೆಗಳನ್ನೆಲ್ಲ ಸುದ್ದಿ ಮಾಧ್ಯಮಗಳನ್ನಾಗಿ ಬಳಸುತ್ತೇವೆ.  ಆದರೆ ರಾಮಾಯಣ ಕಾಲದಲ್ಲಿ ಇವೆಲ್ಲವೂ ಇರದಿದ್ದರೂ ಅವರು ಅತ್ಯುತ್ತಮ ಸಂಸ್ಕೃತಿಯನ್ನು ಹೊಂದಿದ್ದರು. ಇಂದು ಇವೆಲ್ಲವುಗಳನ್ನು ಬಳಸಿಕೊಂಡು ಭಯೋತ್ಪಾದನೆಯಂತಹ ವಿಕೃತಿಗಳಲ್ಲಿ ತೊಡಗಿಕೊಂಡವರನ್ನು ಕಾಣುತ್ತೇವೆ! ಹಣ್ಣು-ಕಾಯಿಗಳಲ್ಲಿ ಸಿಪ್ಪೆಯೇ ಪ್ರಮುಖವಲ್ಲ. ಒಳಗಿನ ತಿರುಳನ್ನು ನಾವು ಗಣಿಸಬೇಕಾಗುತ್ತದೆ. ನಾಗರಿಕತೆ ಬೆಳೆದಂತೇ ಸಂಸ್ಕೃತಿಯೂ ಬೆಳೆಯಬೇಕು. ಹೇಗೆ ನಡೆದುಕೊಂಡರೆ ಉತ್ತಮ ಎಂಬುದನ್ನು ಜನತೆ ಅರಿತುಕೊಳ್ಳಬೇಕು. ಇದೇ ಸನಾತನತೆಯ ಆದರ್ಶ.