ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, June 13, 2010

ಕಥೆ ಬರೆಯುವರ ಕಥೆಯೊಳಗಿನ ಕಥೆ


ಕಥೆ ಬರೆಯುವರ ಕಥೆಯೊಳಗಿನ ಕಥೆ

ಕಥೆ ಬರೆಯಬೇಕೆಂದು ಕೂಚು ಭಟ್ಟರು ನಿರ್ಧರಿಸಿಬಿಟ್ಟರು. ಆದರೆ ಯಾವ ಕಥೆ ಬರೆಯಬೇಕೆಂಬುದೇ ಹೊಳೆಯಲಿಲ್ಲ. ಕಥೆಯ ಕಥೆಗಾಗಿ ಹುಡುಕಿ ಹುಡುಕಿ ಪರಿತಪಿಸಿದರು. ಕೊನೆಗೂ ಕಥೆಯ ಕಥಾವಸ್ತು ಸಿಗದ ಕಾರಣ ಏನುಬರೆಯಬೇಕೆಂದು ಆಲೋಚಿಸುತ್ತ ಬಹಳ ಚಿಂತಾಕ್ರಾಂತರಾಗಿದ್ದರು. ಹುಟ್ಟಿ ಬೆಳೆದು ಐವತ್ತು ವರುಷ ಕಳೆದು ಹೋಯಿತು, ಆದರೆ ಕಥೆ ಬರೆಯಲೇ ಇಲ್ಲವಲ್ಲ ಎಂಬುದು ಇನ್ನೊಂದು ಕಳವಳ. ಅಂತೂ ಬರೆಯಲು ಬಹಳ ಉತ್ಸುಕರಾಗಿದ್ದರು. ಇಂದು ಬರೆಯಬೇಕು ನಾಳೆ ಬರೆಯಬೇಕು ಎಂದೆಲ್ಲ ಎಣಿಕೆ ಮನದ ತುಂಬಾ. ಯಾರೋ ಹೇಳಿದರು "ಕೂಚು ಭಟ್ಟರೇ ನೀವು ಕಥೆಬರೆಯಲು ಒಂದು ಒಳ್ಳೆಯ ಮುಹೂರ್ತದಲ್ಲಿ ಶುರುಮಾಡಿ" ಎಂದು. ಭಟ್ಟರಿಗೂ ಅದು ಸಹಜವಾಗಿ ಹೌದೆನಿಸಿ ಅದಕ್ಕೆ ತಯಾರಿ ನಡೆಸುತ್ತಿದ್ದರು. ಪುರೋಹಿತರನ್ನು ಕೇಳಿ ಕಥೆ ಬರೆಯಲು ಒಂದು ಒಳ್ಳೆಯ ಮುಹೂರ್ತ ಮತ್ತು ಪ್ರಾರಂಭಿಕ ಪೂಜೆ ಒಂದನ್ನು ಗೊತ್ತು ಪಡಿಸಿಕೊಂಡರು. ದಿನ ಕಳೆಯುತ್ತ ಕಳೆಯುತ್ತ ಅಂತೂ ಭಟ್ಟರ ಕಥೆ ಬರೆಯುವಿಕೆಯ ಪ್ರಾರಂಭದ ದಿನ ಬಂದೇ ಬಿಟ್ಟಿತು. ಪೂಜೆಯೂ ನಡೆದೇ ಹೋಯಿತು. ಆದರೆ ಕಥೆಯ ಹೆಸರಾಗಲೀ ಕಥೆಯ ಕಥಾವಸ್ತುವಾಗಲೀ ಭಟ್ಟರಿಗೇ ತಿಳಿದಿರಲಿಲ್ಲ! ಅಂತೂ ಭಟ್ಟರು ಕಥೆ ಬರೆಯಲು ಕುಳಿತೇ ಬಿಟ್ಟರು!

ಹಾಗೂ ಹೀಗೂ ಒಂದು ಮರದ ಪೀಠಹತ್ತಿ ಕುಳಿತು ಕಥೆಬರೆಯುತ್ತಿದ್ದರು.

|| ಪೀಠಸ್ಥ ಕೂಚು ಭಟ್ಟಂ ದೃಷ್ಟ್ವಾ ಪುನರ್ಜನ್ಮಂ ನವಿದ್ಯತೇ ||
ಎನ್ನಬಹುದಾದ ಘನಗಾಂಭೀರ್ಯ ಪೀಠವೇರಿ ಕುಳಿತ ನಮ್ಮ ಕೂಚುಭಟ್ಟರದು. ಹಳೆಯ ಕಾಲದ ದೊಡ್ಡ ಋಷಿಗಳೆಲ್ಲ ಪುರಾಣ ಬರೆಯಲು ಕುಳಿತ ಹಾಗೇ ಶ್ರೀಮದ್ಗಾಂಭೀರ್ಯದ ಪೋಸುಕೊಡುತ್ತ ಬರೆಯುತ್ತಿದ್ದರು. ಠಾಕು ಠೀಕಾಗಿ ಕುಳಿತ ಕೂಚುಭಟ್ಟರಿಗೆ ಪೀಠದ ಕೀಲು ಕಟಕ್ ಎಂದು ತುಂಡಾಗಿದ್ದು ತಿಳಿಯಲೇ ಇಲ್ಲ. ಕ್ಷಣಾರ್ಧದಲ್ಲಿ ಭಟ್ಟರು ದುರ್ಯೋಧನ ಪೀಠದಿಂದ ಬಿದ್ದ ರೀತಿ ಪೀಠಸಮೇತ ಬಿದ್ದರು. ಸದ್ಯಕ್ಕೆ ಅಲ್ಲಿ ಯಾರೂ ಇರಲಿಲ್ಲವಾಗಿ ಯಾವುದೇ ಸಂಕೋಚವಿಲ್ಲದೇ ಸೊಂಟ ನೀವಿಕೊಂಡು ಎದ್ದು ನಿಂತಿತು ಸವಾರಿ! ಆದರೂ ಬಿದ್ದ ಕ್ಷಣದಲ್ಲಿ ಕಳಕ್ ಅಂತ ಸೊಂಟದಲ್ಲಿ ಎನೋ ಶಬ್ಧ ಬಂತಲ್ಲ, ಅದು ಬಂದಾಗ ಬಂದ ನೋವು ಇನ್ನೂ ಹೋಗಿರಲಿಲ್ಲ. ಉಜ್ಜುತ್ತ ಉಜ್ಜುತ್ತ ಗಂಟೆಯೇ ಕಳೆದರೂ ಭಟ್ಟರ ಸೊಂಟದ ಕಥೆ ದೊಡ್ಡ ಕಥೆಯಾಯಿತು; ಭಟ್ಟರಿಗೆ ವ್ಯಥೆಯಾಯಿತು. ಆದರೂ ಗುಣವಾದಮೇಲೆ ಮತ್ತೆ ಕಥೆಬರೆದರಾಯಿತು ಅಂದುಕೊಂಡರು.

ಪೀಠ ಮುರಿದಿದ್ದು ಮನೆಯಲ್ಲಿ ಎಲ್ಲರಿಗೂ ಕಾಣುತ್ತಿತ್ತು. ಭಟ್ಟರ ಕ್ವಿಂಟಾಲು ತೂಕಕ್ಕೆ ಹಳೆಯ ಮರದ ಕೀಲು ಕಟ್ಟನೇ ತನ್ನ ಅವಸಾನವನ್ನು ಕಂಡುಕೊಂಡಿತ್ತು. ಭಟ್ಟರು ಅದಕ್ಕಾಗಿ ಪಶ್ಚಾತ್ತಾಪ ಪಟ್ಟವರಲ್ಲ; ಶಕುನವಾಗಲಿಲ್ಲವೆಂದು ಹಳವಡಿಸಲೂ ಇಲ್ಲ. ಆದರೂ ಬಿದ್ದಾಗ ಆದ ನೋವು ಆಗಾಗ ಮರುಕಳಿಸಿ ಭಟ್ಟರನ್ನು ಹಿಂಡಿ ಹಿಪ್ಪೆ ಮಾಡುತ್ತಿತ್ತು. ಆಡುವಂತಿಲ್ಲ-ಅನುಭವಿಸುವಂತಿಲ್ಲ! ಕಟ್ಟಾ ಸ್ವಾಭಿಮಾನಿಯಾದ ಕೂಚುಭಟ್ಟರು ಯಾರಲ್ಲಿಯೂ ತನ್ನ ಈ ದುಗುಡವನ್ನು ಹೇಳಿಕೊಳ್ಳಲಾರರು. ಆಯೊಡೆಕ್ಸ್ ಮತ್ತು ಇನ್ನೂ ಅನೇಕ ಎಲ್ಲಾ ಬ್ರಾಂಡಿನ ನೋವು ನಿವಾರಕ ತೈಲ-ಲೇಪನ ಪದಾರ್ಥಗಳನ್ನು ಹಚ್ಚಿ ನೋಡಿದ್ದಾಯಿತು. ಹಚ್ಚಿದಷ್ಟೇ ಹೊತ್ತು! ಅಮೇಲೆ ಮತ್ತೆ ಆ ಅಸಾಧ್ಯ ನೋವು ಹಾಜರು. ಕಾಣದ ದೇವರಿಗೆಲ್ಲ ಕಮುಗಿದು ಒಳಗೊಳಗೇ ಪ್ರಾರ್ಥನೆ-ಹರಕೆ ಎಲ್ಲವೂ ನಡೆಯಿತು. ಮನೆಯಲ್ಲಿ ಇನ್ಯಾರಿಗೂ ವಿಷಯ ಗೊತ್ತೇ ಇಲ್ಲ. ಹೇಳಿಕೊಳ್ಳಲು ಭಟ್ಟರೇನು ಇದಕ್ಕೆಲ್ಲ ಹೆದರುವ ಸಣ್ಣಮರಿಯೇ ? ಛೆ ಛೆ. ನಾಳೆ ಕಥೆಯನ್ನು ಬರೆಯುವ ಉದ್ಧಾಮ ಪಂಡಿತರು ಈ ಇಷ್ಟುಸಣ್ಣ ನೋವಿಗೆಲ್ಲ ದೊಡ್ಡದೇನೋ ಆದಂತೆ ಆಡುವುದೇ ? ಆ ಥರದ ವ್ಯಕಿಯೇ ಅಲ್ಲ ಭಟ್ಟರು! ಈ ನೋವೆಲ್ಲ ಏನೂ ಅಲ್ಲ ಅವರಿಗೆ. ಆದರೆ ನೋವು ಬಂದಾಗ ಮಾತ್ರ ತಿರುಪತಿ ವೆಂಕಟರಮಣ ಧರ್ಮಸ್ಥಳದ ಮಂಜುನಾಥ ಎಲ್ಲರೂ ನೆನಪಾಗುತ್ತಾರೆ!

ಪತ್ರಿಕೆಯಲ್ಲಿ ಬರುವ ಹಲವು ಕಥೆಗಳನ್ನು ಓದಿದ್ದರು ಭಟ್ಟರು. ಇನ್ನೂ ಆಗಾಗ ಓದುತ್ತಲೂ ಇದ್ದರು. ಹಿರಿ-ಕಿರಿಯ ಸಾಹಿತಿಗಳ ನೆರೆ-ಕರೆಯ ಬರಹಗಳು,ಕಥೆಗಳು ಆಹಾ ಅದೇನಂತೀರಿ ಅದನ್ನೆಲ್ಲ ಚಾಚೂ ಬಿಡದೇ ಪ್ರಯತ್ನ ಪೂರ್ವಕ ಓದಿ ಮುಗಿಸುತ್ತಿದ್ದರು. ಅವುಗಳ ಪ್ರಭಾವದಿಂದಲಾದರೂ ತಾನು ಬರೆಯಬಹುದೇನೋ ಎಂಬ ಆಸೆ ಭಟ್ಟರಿಗೆ. ಛೆ ಎಂತೆಂಥಾ ದಡ್ಡರೆಲ್ಲ ಮುಂದೆ ಬಂದು ಬಿಟ್ಟರು, ತಾನು ಮಾತ್ರ ಬರೆಯಲೇ ಇಲ್ಲವಲ್ಲ ಎಂಬುದೇ ನಮ್ಮ ಕೂಚು ಭಟ್ಟರ ಇರಾದೆ. ಮನಸ್ಸಿಗೆ ಈ ಥರ ಬೇಸರವಾದಾಗ ಎಫ್ ಎಮ್ ರೇಡಿಯೋ ಹಾಕಿಕೊಳ್ಳುವರು. ಅಲ್ಲಿ ಮಾತನಾಡುವ ರೇಡಿಯೋ ಜಾಕಿಗೂ ತನಗೂ ಏನು ಅಭ್ಯಂತರ, ರೇಡಿಯೋದಲ್ಲಿ ಜಾಕಿ ಹೇಗೆ ಸುಲಲಿತವಾಗಿ ಮಜವಾಗಿ ಸನ್ನಿವೇಶಕ್ಕೆ ತಕ್ಕಂತೆ ಮಾತು ಹೊಸೆದು ಕಥೆ ಕಟ್ಟುತ್ತಾರೋ ಅದೇ ರೀತಿ ತಾನೂ ಕಥೆಬರೆಯಲೇಬೇಕೆಂದುಕೊಳ್ಳುವರು.ಅದು ಹೆಗೆ ಅವರಿಗೆಲ್ಲ ವಿಷಯ ಸಿಗುತ್ತದೆ ಎಂಬುದೇ ಇವರಿಗೆ ಅರ್ಥವಾಗಲಿಲ್ಲ! ಒಂದು ಗುಟ್ಟು- ಇದು ನಿಮ್ಮಲ್ಲೇ ಇರಲಿ --ಎಲ್ಲಾದರೂ ಯಾರಾದರೂ ಕಥೆ ಬರೆಯಲು ಹೇಳಿಕೊಡುವ ತರಗತಿ ನಡೆಸುತ್ತಿದ್ದರೆ ಭಟ್ಟರಿಗೆ ಸೇರಿಬಿಡೋಣವೆನ್ನಿಸಿತ್ತು! ಆದರೆ ಕಥೆಯನ್ನೋ ಕಾವ್ಯವನ್ನೋ ಬರೆಯಲು ತರಬೇತಿ ಕೊಡಲಾಗುವ ಶಾಲೆ ಮಾತ್ರ ಸಿಗಲೇ ಇಲ್ಲ. ಹೀಗಾಗಿ ಪಾಪಿ ಹೋದಲ್ಲಿ ಮೊಳಕಾಲು ನೀರು ಎಂದಂತೆ ಬಹಳ ಹತಾಶರಗಿದ್ದರು ನಮ್ಮ ಕೂಚು!--ಯಾರಿಗೂ ಹೇಳಬೇಡಿ, ಯಾಕೆಂದರೆ ಇದು ಅವರ ಮನೆಯವರಿಗೂ ಗೊತ್ತಿಲ್ಲ!

ಭಟ್ಟರ ಹೆಂಡತಿ ವಿಶಾಲಾಕ್ಷಮ್ಮ ಮಹಾ ಸಾಧ್ವಿ. ಯಾವಾಗಲೂ ತಾನಾಯಿತು ತನ್ನ ಕೆಲಸವಾಯಿತು ಅಂತ ಇರುವವಳು. ಎಂದೂ ತನಗೆ ಅದು ಬೇಕು ಇದು ಬೇಕು ಎಂದು ಕೇಳಿದವಳಲ್ಲ. ಗಂಡ ಹೊಸ ಸೀರೆ ಕೊಡಿಸದೇ ವರುಷವೇ ಕಳೆದಿದ್ದರೂ ಅದಕ್ಕಾಗಿ ತಲೆಕೆಡಿಸಿಕೊಂಡವಳಲ್ಲ,ಮರುಗುವವಳೂ ಅಲ್ಲ. ಹೇಗೂ ಗಂಡನ ವ್ಯಕ್ತಿತ್ವದ ಅರಿವಿದೆ. ಗಂಡನ ಹತ್ತಿರ ಕೇಳಿ ಸುಮ್ಮನೇ ಬೈಸಿಕೊಳ್ಳುವುದಕ್ಕಿಂತ ಕೇಳದಿರುವುದೇ ವಾಸಿ ಎಂಬುದು ಅವಳ ಅನಿಸಿಕೆ. ಹೀಗಾಗಿ ಅವಳು ಆದಷ್ಟೂ ಅಂತರ್ಮುಖಿಯಾಗಿಯೇ ಇರುತ್ತಿದ್ದಳು. ಭಟ್ಟರಿಗೆ ಅವಳ ಕೂಡ ಮಾತನಾದಲು ಪುರುಸೊತ್ತೆಲ್ಲಿದೆ? ಕಥೆಬರೆಯುವ ಹಂಬಲದಲ್ಲಿರುವ ಮಹಾನ್ ಲೇಖಕ ಅವರು ಹೀಗಾಗಿ ಯಾರೊಂದಿಗೆ ಸುಖಾಸುಮ್ಮನೇ ಲೋಕಾಭಿರಾಮವಾಗಿ ಎರಡು ಸಿಹಿಮಾತು ಹಂಚಿಕೊಳ್ಳುವ ಪ್ರವೃತ್ತಿ ನಮ್ಮ ಕೂಚಿನದ್ದಲ್ಲ! ಕುಂಬಳಕಾಯಿ ಮಜ್ಜಿಗೆ ಹುಳಿ ಎಂದರೆ ಗಂಡನಿಗೆ ಪ್ರೀತಿ ಎಂಬುದು ಅವಳಿಗೆ ಗೊತ್ತಿರುವ ಆಪ್ತ ವಿಷಯಗಳಲ್ಲೊಂದು. ಹೀಗಾಗಿ ಭಟ್ಟರ ಅವಕೃಪೆಗೆ ಪಾತ್ರಳಾಗದಿರಲೆಂದುಕೊಂಡು ಆಗಾಗ ಮಜ್ಜಿಗೆ ಹುಳಿ ಮಾಡೋಳು. ಭಟ್ಟರು ಈ ವಿಷಯದಲ್ಲಿ ಮಾತ್ರ ತುಂಬಾ ತೃಪ್ತರು. ಊಟಮಾಡುವಾಗ ಯಾವುದೋ ಯಂತ್ರದ ಥರ ಸೊರ ಸೊರ ಸೊರ ಎಂದು ದೊಡ್ಡ ಸದ್ದು ಮಾಡುತ್ತ ಮಾಡುವುದು ನಮ್ಮ ಕೂಚಿನ ವೈಖರಿ. ಹೆಂಡತಿ ಮಜ್ಜಿಗೆ ಹುಳಿ ಮಾಡಿದ ದಿನ ಎಅಡು ತುತ್ತು ಜಾಸ್ತಿಯೇ ಉಂಡು ಬಲಗೈಯ ಎಲ್ಲಾ ಬೆರಳುಗಳನ್ನೂ ಗಂಟಲವರೆಗೆ ಎಳೆದುಕೊಂಡು ಚೀಪಿದರಷ್ಟೇ ಅವರ ಊಟ ಮುಗಿಯುತ್ತಿತ್ತು!ಊಟದ ನಂತರ ಮಾಳಿಗೆಯ ಕೋಣೆಯ ಮಂಚದಮೇಲೆ ಕಾಲು ಚಾಚಿ ಮಲಗಿದರೆ ’ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ’! ನಂತರ ಚಾಲೂ ಹಚ್ಚುವ ಗರಗಸ ಕಾಮಗಾರಿ [ಗೊರಕೆ] ಗೊಂಡಾರಣ್ಯದಲ್ಲಿ ದಪ್ಪನೆಯ ದಿಮ್ಮಿಯನ್ನು ಹಲಗೆಯಾಗಿ ಕತ್ತರಿಸುವಾಗ ಆಗುವಂತ ಸದ್ದು!

’ಮಾವಿನ ಹಣ್ಣಿನ ಸೀಕರಣೆ’ ಎಂದು ಹೆಸರಿಡಲೇ ಓ ಬೇಡ ಬೇಡ ಹಾಗಾದ್ರೆ ’ಮಣ್ಣಿನಮಗ’ ಎಂದು ಆರಂಭಿಸಲೇ ಛೆ ಛೆ ಬೇಡವೇ ಬೇಡ....ಮತ್ತೆ ಹಾಗಾದ್ರೆ ’ದೋಣಿಸಾಗಲಿ ಮುಂದೆ ಹೋಗಲಿ’ ಎಂದು ಬರೆಯಲೇ ಹೀಗೇ ಕಥೆಗೊಂದು ನಾಮಕರಣ ಮಾಡಿಕೊಂಡು ಬರೆಯಲು ಪ್ರಯತ್ನಿಸುತ್ತಿದ್ದರು. ಕಥೆ ಎರಡು ಪುಟ ಅಬ್ಬಬ್ಬ ಅಂದ್ರೆ ಮೂರು ಪುಟಗಳಲ್ಲಿ ಮುಗಿದು ಹೋಗಬೇಕೆಂಬ ಆಸ್ತೆಯಿದ್ದ ಆಜಾನುಭಾಹು ನಮ್ಮ ಕೂಚು ಭಟ್ಟರು, ಓದಿ ಓದಿ ಓದಿ ಮರುಳಾದೆಯಾ ಕೂಚು ಭಟ್ಟ ಅಂತಾರಲ್ಲ ಬಹುಶಃ ಆ ಗಾದೆ ಈ ಭಟ್ಟರಿಂದಾಗಿಯೇ ಹುಟ್ಟಿರಬೇಕು! ಕಥೆಯಲ್ಲಿ ಸಸ್ಪೆನ್ಸ್ ಇರಬೇಕು, ಕಥೆ ಮಾದಕವಾಗಿರಬೇಕು, ಕಥೆಯಲ್ಲಿ ಬರುವ ಪಾತ್ರಗಳು ಜನರ ಮನಸ್ಸನ್ನು ಬಹಳ ಆಕರ್ಷಿಸಬೇಕು.ಕಥೆ ಮಾರ್ದವತೆಯಿಂದ ಕೂಡಿರಬೇಕು, ಕಥೆಯಲ್ಲಿ ಆದರ್ಶಗಳಿರಬೇಕು, ಕಥೆಯಲ್ಲಿ ಒಂದು ಕ್ಲೈಮ್ಯಾಕ್ಸ್ ಇರಬೇಕು....ಒಂದೇ ಎರಡೇ ನಮ್ಮ ಭಟ್ಟರ ಕಥೆಯಲ್ಲಿನ ಸಾಧ್ಯತೆಗಳ ಕಲ್ಪನೆ. ಅದ್ಭುತ ಪರಿಕಲ್ಪನೆ ನಮ್ಮ ಕೂಚಿನದು!

ಅಗಾಗ ನಮ್ಮ ಕೂಚು ಭಟ್ಟರಿಗೆ ಕಾಪಿ ಕುಡಿಯುವ ಚಟ, ಒಂದು ಸಿಪ್ಪು ಕಾಪಿ ಹೀರಿ, ತಟಕ್ಕನೆ ಲೈಟರ್ ಒತ್ತಿ ಸಿಗರೇಟು ಹಚ್ಚಿದರೆ ಪರಮಾತ್ಮನಾದಷ್ಟು ಸುಖ! ಸುಖವೆಂದರೆ ಇದೇ ಏನೋ ಅನ್ನಿಸಿಬಿಟ್ಟಿತ್ತು ನಮ್ಮ ಕೂಚಿಗೆ! ಮಕ್ಕಳು ಎದುರು ಬಂದರೆ ದುರುಗುಟ್ಟುವ ಹವ್ಯಾಸಿ ಕಲಾವಿದ ನಮ್ಮ ಕೂಚು! ಅಡ್ಡ ಕಸುಬಿಗಳೆಲ್ಲ ಹಾಗೇ ಅಂದುಕೊಳ್ಳಬೇಡಿ ನಮ್ಮ ಕೂಚು ಅಡ್ಡ-ಉದ್ದ ಎರಡನ್ನೂ ಬಲ್ಲವರು. ಪೋರಗಳು ಪಕ್ಕದ ಮನೆಯಲ್ಲೋ ಪಕ್ಕದ ಬೀದಿಯಲ್ಲೋ ಪೋಲಿ ಅಲೆಯುವುದು ಸಹಿಸಲಾರದ ನಗ್ನ ಸತ್ಯವಾಗಿ ಭಟ್ಟರನ್ನು ಕಾಡುತ್ತಿತ್ತು. ಆಗಾಗ ಒಳಗೊಳಗೇ ಸಿಗರೇಟು ಉರಿದಂತೆ ಉರಿದುಹೋಗುತ್ತಿದ್ದರು.

ಅಂತೂ ನಮ್ಮ ಭಟ್ಟರು ’ರಾಧಿಕಾ-ಕುಮಾರಕೃಷ್ಣ’ ಆಖ್ಯಾಯಿಕೆಯನ್ನು ಬರೆಯತೊಡಗೇ ಬಿಟ್ಟರು! ಪ್ರಾಯಶಃ ಎಲ್ಲೋ ಯಾವುದೋ ಅಡ್ಡವಾಸನೆ ಬಂದಿತ್ತೋ ಏನೋ ಅಂತೂ ನಮ್ಮ ಕೂಚು ತೆರೆಯಿತು ಬಾಟಲಿಯ ಬೂಚು! ಕಥೆಯಲ್ಲಿ ರಾಧಿಕಾ ಎಂಬ ಹೆಣ್ಣು ಮಗಳನ್ನೂ ಮತ್ತು ಕುಮಾರಕೃಷ್ಣ ನೆಂಬ ಕೃಷ್ಣನ ಪ್ರಾಯವನ್ನೂ ಬಣ್ಣಿಸಬೇಕೆಂಬುದು ಭಟ್ಟರ ಬಯಕೆ. ನಡುನಡುವೆ ಹಾಸ್ಯಮಿಶ್ರಿತ ತಹಬಂದಿಯಿರಲಿ ಎಂಬುದು ಕೂಚು ಅವರ ತಹತಹ. ಪ್ರಾಯವನ್ನು ವರ್ಣಿಸಲು ತೊಡಗಬೇಕು. ರಾಧಿಕೆಯ ಬಳುಕುವ ಸೊಂಟವನ್ನು ಹಿಡಿದುಕೊಂಡಿದ್ದರು [ಕಥೆಯ ಆ ಭಾಗದಲ್ಲಿ] ಅಷ್ಟರಲ್ಲಿ ಭಟ್ಟರ ಸೊಂಟದ ನೋವು ತೀವ್ರ ಉಲ್ಬಣವಾಯಿತು. ಕುಮಾರಕೃಷ್ಣನ್ ಪ್ರವೇಶವೇ ಇನ್ನೂ ಆಗಿರಲಿಲ್ಲ, ಆಗಲೇ ಆತಂಕ,ಗಡಿಬಿಡಿ. ಮಧ್ಯೆ ಮಧ್ಯೆ ತನಗೆ ತಾನೇ ಅಂದುಕೊಳ್ಳುವರು " ಆಯೊಡೆಕ್ಸ್ ಹಚ್ಚಿರಿ ಮತ್ತೆ ಓಡಾಡಿರಿ [೩ ಸರ್ತಿ ರಿಪೀಟ್ ಮಾಡಿ! ]" ಶಿವಪೂಜೆಯಲ್ಲಿ ಕರಡಿ ಬಂದಹಾಗೇ ಕಥೆಬರೆಯುವಾಗ ಈ ಹಾಳಾದ ಸೊಂಟನೋವೊಂದು ಬಿಡುವುದಿಲ್ಲವಲ್ಲ ಎಂಬುದು ಕೂಚಿನ ಅಹವಾಲು.

ಅಂತೂ ಕುಮಾರಕೃಷ್ಣನ ಪ್ರವೇಶ ಯಾರಿಗೂ ತಿಳಿಯದ ರೀತಿಯಲ್ಲಿದ್ದರೂ ತಿಳಿದು ಆಯಿತು! ಕುಮಾರ ದೂರದಿಂದ ರಾಧಿಕೆಯನ್ನು ಕಂಡಿದ್ದೂ ಆಯಿತು. ರಾಧಿಕೆಯನ್ನು ಕಂಡ ಕುಮಾರ ಮನದ ತುಂಬ ಅವಳ ಸೌಂದರ್ಯವನ್ನೇ ತುಂಬಿಕೊಂಡು ಆ ದಿನದ ಮಟ್ಟಿಗೆ ಕೈಗೆ ಸಿಗಲಿಲ್ಲವಲ್ಲ ಎಂದು ಹಪಹಪಿಸಿದ್ದೂ ಆಯಿತು. ಇದಕ್ಕೇನಾದರೂ ಮಾಡಬೇಕೆಂದು ಮನದಲ್ಲೇ ಪ್ಲಾನು ಮಾಡಿ ಕೈನಡೆಯುವಾಗ ಅಧಿಕಾರದಲ್ಲಿರುವಾಗ ಇದಕ್ಕೊಂದು ಮಾರ್ಗಸೂಚಿ ಹಾಕಿಕೊಳ್ಳೋಣವೆಂದು ತೀರ್ಮಾನಿಸಿ ರಾಧಿಕೆಯ ಬೆನ್ನ ಹಿಂದೆ ಅನೇಕ ರೀತಿಯಲ್ಲಿ ಬೆನ್ನಟ್ಟಿ ಹೋಗಿದ್ದೂ ಆಯಿತು. ಅಂತೂ ಹಾಗೂ ಹೀಗೂ ತಂತ್ರ ಪ್ರತಿತಂತ್ರದಿಂದ ರಾಧಿಕೆಯನ್ನು ತನ್ನ ವಶಕ್ಕೆ ಪಡೆದ ಕುಮಾರಕೃಷ್ಣ ಅವಳಿಗಾಗಿ ಇರಲಿ ಎಂದು ಉಡುಗೊರೆಯಾಗಿ ವೈಭವೋಪೇತ ಮಹಲೊಂದನ್ನು ಕಟ್ಟಿಸಿಕೊಟ್ಟ. ಎಂದೂ ತನ್ನ ಆಪ್ತ ಗೋಪಿಕೆಯೊಡನೆಯೂ ಅಷ್ಟಾಗಿ ನಗದ ಕುಮಾರ ರಾಧಿಕೆಗಾಗಿ ತನ್ನ ಬಾಯಗಲಿಸಿ ನಕ್ಕ! ನವಿಲುಗರಿಯಂತೆ ಎದ್ದಿರುವ ಎರಡೇ ಕೂದಲನ್ನು ನೋಡಿ ರಾಧಿಕೆ ಎಣ್ಣೆಮುಖದ ಕುಮಾರಕೃಷ್ಣನನ್ನು ಪ್ರೀತಿಸಲು ಒಡಂಬಡಿಕೆಯಾಯಿತು. ಪ್ರೀತಿ ಬೆಳೆದು ಬೆಳೆದು ಹತ್ತಿರ ಹತ್ತಿರ ಹತ್ತಿರವಾಗಿ ರಾಧಿಕಾ-ಕುಮಾರಕೃಷ್ಣರ ಮಿಲನ ಮಹೋತ್ಸವವಾಯ್ತು! ಛೆ ಛೆ ಸಿಟ್ಟು ಬಂತು ಅಂತ ತನ್ನತನವನ್ನು ಅವರು ಕಳೆದುಕೊಳ್ಳುತ್ತಾರೆಯೇ? ಕೂಚು ಭಟ್ಟರು ಅದನ್ನೆಲ್ಲ ಮೆಟ್ಟಿನಿಂತ ಮಹನೀಯರಲ್ಲವೇ ಎಂಬುದು ನೆನೆಪಾದ ತಕ್ಷಣ ಮತ್ತೆ ಮಾಮೂಲೀ ಕೂಚು ಭಟ್ಟರ ರೂಪಕ್ಕೆ ವರ್ಗಾವಣೆ.

ತನ್ಮಧ್ಯೆ ನಮ್ಮ ಕೂಚು ಭಟ್ಟರಿಗೆ ಸೊಂಟನೋವು ಜಾಸ್ತಿಯಾಯಿತು. ಕೋಪಗೊಂಡ ಕೂಚು " ಆ ಒಂದು ಆ ಎರಡು ಆ ಮೂರು " ಎನ್ನುತ್ತ ಆಚೀಚೆ ಸುಮ್ಮನೇ ಹೆಜ್ಜೆ ಹಾಕಿದರು. ಎಫ್ ಎಮ್ ನಲ್ಲಿ ರಾಧಿಕೆ ನಿನ್ನ ಸರಸವಿದೇನೆ ... ಹಾಡು ಅನಿರೀಕ್ಷಿತವಾಗಿ ತೇಲಿಬಂದಿತ್ತು. ಆದರೆ ಹಾಳಾದ ಸೊಂಟನೋವಿನಲ್ಲಿ ರೇಡಿಯೋವನ್ನೇ ಕಿತ್ತು ಪಕ್ಕದ ರಸ್ತೆಗೆ ಬಿಸುಡುವಷ್ಟು ಸಿಟ್ಟು. ತೈಲಧಾರೇ ಯಂತೆ ಮನಸು ಕೊಡೊ ಕಥೆಯಲ್ಲಿ ಶಂಭೋ ಎಂದು ತಮಾಷೆಗಾಗಿ ಹಾಡುತ್ತ ಸ್ವಲ್ಪ ಸಮಯದಲ್ಲಿ ನೋವು ಕಮ್ಮಿಯಾದಾಗ ಮತ್ತೆ ಕಥೆಯ ಮುಂದುವರಿಕೆ!

ಬೆಳ್ಳಗಿನ ರಾಧಿಕೆಗೂ ಕರ್ರಗಿನ ಕುಮಾರಕೃಷ್ಣನಿಗೂ ಎತ್ತಣಿಂದೆತ್ತಣ ಸಂಬಂಧವಯ್ಯಾ ಎಂದಿರೇ ಈ ಲೋಕವೇ ಹೀಗೆ. ದುಡ್ಡಿನ ಮುಂದೆ ಸಕಲವೂ ನಗಣ್ಯ. ಕೇವಲ ಕಾಂಚಾಣದ ಝಣ ಝಣವೇ ಎಲ್ಲಕ್ಕೂ ಮಾನ್ಯ ಅಲ್ಲವೇ? ಅಂತೂ ರಾಧಿಕೆಯನ್ನು ಅಪ್ಪಿ ಮುದ್ದಾಡಿದ ಕುಮಾರ ಬಗ್ಗೆ ಸಮಾಜ ಬಹಳ ಆಡಿಕೊಂಡಿತು. ಮನೆಯಲ್ಲಿ ಭಾಮಾನಿತ ಅರ್ಥಾತ್ ಸತ್ಯಭಾಮೆ ದೊಡ್ಡ ರಂಪವನ್ನೇ ಮಾಡಿದಳು. ಹಲವರ ಬಾಯಿಂದ ಕೇಳಿದ್ದಳಾದರೂ ಗಂಡ ತನ್ನನ್ನು ಕಡೆಗಣಿಸಿ ರಾಧಿಕೆಯನ್ನು ಸೇರುತ್ತಾನೆಂದು ಕನಸಲ್ಲೂ ಎಣಿಸಿರಲಿಲ್ಲ. ಕುಮಾರಕೃಷ್ಣ ಇದಕ್ಕೆಲ್ಲ ಸಿದ್ಧನಾಗಿಯೇ ಇದ್ದ. ಆತನಿಗೆ ಯಾವ ನಲ್ಲಿ ತಿರುಗಿಸಿದರೆ ಎಲ್ಲಿ ನೀರು ಬರುತ್ತದೆಂಬುದು ಗೊತ್ತಿತ್ತು. ಹೀಗಾಗಿ ಭಾಮಾನಿತ ಸುಮ್ಮನಿರುವಂತೆ ಅವಳಿಗೊಂದು ವ್ಯವಸ್ಥೆ ಕಲ್ಪಿಸಿ ಅಲ್ಲಿ ಆಕೆ ಮುಂಚೂಣಿಯಲ್ಲಿದ್ದು ಎಲ್ಲವನ್ನೂ ನೋಡಿಕೊಳ್ಳಲು ಕೆಲಸ ಒಪ್ಪಿಸಿದ. ಅಲ್ಲಿ ಆಕೆ ಬ್ಯುಸಿಯಾಗಿರುವಾಗ ಇಲ್ಲಿ ತಾನು ಹಸ್ತಿನಾಪುರದ ರಾಜಕಾರ್ಯವನ್ನು ಬೇರೆಯವರಿಗೆ ವಹಿಸಿಕೊಟ್ಟಾಗ ಕುಮಾರಕೃಷ್ಣನಿಗೆ ಇನ್ನೇನು ಕೆಲಸ? ಆತ ನೆನಪಾದಾಗೆಲ್ಲ ರಾಧಿಕೆಯ ಮನೆಗೆ ನಡೆದ. ಆಕೆಯನ್ನು ಯಥೇಚ್ಛ ಭೋಗಿಸಿದ. ಹರುಷಗೊಂಡ. ಆಕೆ ಕರೆದಲ್ಲಿಗೆ ಪೂಜೆ-ಪುನಸ್ಕಾರ, ನಾಗಬನ-ದೇವಸ್ಥಾನವೆಂದು ತಿರುಗಿದ. ಕೊನೆಗೂ ಅನಾಯಾಸವಾಗಿ ರಾಧಿಕೆಗೆ ಮಗುವೊಂದನ್ನು ಕರುಣಿಸಿದ! ರಾಜಕಾರ್ಯದಲ್ಲಿ ಬಿಡುವಿರುವಾಗ ಮಾಡುವ ಮಹೋನ್ನತ ಕೆಲಸಗಳಲ್ಲಿ ಇದೂ ಒಂದು ತಾನೇ?

ಕಿಟಾರನೆ ಕೀಚುತ್ತ ಬಾಗಿಲು ಡಬ್ಬೆಂದು ಮುಚ್ಚಿಕೊಂಡಿತು.ಗಾಳಿಗೆ ಇರಬೇಕು ಎಂದುಕೊಂಡರು ಕೂಚು. ಅದು ಹಾಗಾಗಿರಲಿಲ್ಲ. ಬದಲಿಗೆ ಅವರ ಮಗಳು ಶಾಲಿನಿ ಹಾಗಿಂದ ಅಲ್ಲೇಲ್ಲೋ ಹೋಗುವಾಗ ರೂಮಿನ ಬಾಗಿಲಿಗೆ ಕೈ ತಾಗಿ ಬಾಗಿಲು ಮುಂದೆ ಬಂದು ಬಡಿದುಕೊಂಡಿತ್ತು. ಶಾಲಿನಿಗೂ ಮದುವೆಯ ವಯಸ್ಸು ಹತ್ತಿರ ಬಂದಿದೆ. ಡಿಗ್ರಿ ಮುಗಿಸಿ ಮನೆಯಲ್ಲೇ ಇದ್ದಾಳೆ. ಜಾಬಿಗೆಲ್ಲ ಕಳಿಸುವಷ್ಟು ಕೆಳದರ್ಜೆ ಮನುಷ್ಯರಲ್ಲ ನಮ್ಮ ಕೂಚು. ಮೇಲಾಗಿ ಹುಡುಗಿಯರು ಹೊರಗೆ ಕೆಲಸಮಾಡುವಾಗ ಸಹೋದ್ಯೋಗಿಗಳ ಕಾಟ, ಅಕಸ್ಮಾತ್ ಸಲುಗೆ ಬೆಳೆದರೆ ಲವ್ ಮ್ಯಾರೇಜ್ ಇದೆಲ್ಲಾ ಯಾಕೆ ಅಂತ ಆ ವಿಚಾರವನ್ನೇ ಬದಿಗಿಟ್ಟು " ಮಗಳೇ ನೀನು ಇಲ್ಲಿರುವಷ್ಟು ದಿನ ಆರಾಮಾಗ್ ಇದ್ದು ಬಿಡು, ಮುಂದೆ ಮದುವೆ ಆದ ಮೇಲೆ ನೌಕರಿಗೆ ಹೋಗಬೇಕಾಗಿ ಬಂದರೆ ಅನಿವಾರ್ಯ ಆಗ ಯಜಮಾನರನ್ನು ಕೇಳಿ ಹೋಗು" ಎಂದುಬಿಟ್ಟಿದ್ದರು. ಅವರು ಕಡ್ಡಿ ತುಂಡು ಮಾದಿದ ಹಾಗೇ ಹೇಳಿದಮೇಲೆ ಮುಗಿದೇ ಹೋಯಿತು. ಸಾಕ್ಷಾತ್ ಪರಶಿವನೇ ಬಂದರೂ ಭಟ್ಟರ ನಿರ್ಧಾರದಲ್ಲಿ ಬದಲಾವಣೆ ಇರುವುದಿಲ್ಲ!ಬಾಗಿಲ ಸದ್ದಾಯಿತಾದರೂ ಮಗಳು ಕೋಣೆಯೊಳಗೆ ಬರಲಿಲ್ಲ. ಬದಲಾಗಿ ಬಾಗಿಲು ಬಡಿದುಕೊಂಡಿದ್ದಕ್ಕೆ ದೂರದಿಂದಲೇ ಕ್ಷಮೆ ಕೇಳಿಕೊಂಡು ಹೋದಳು. ತಂದೆಯ ಹತ್ತಿರ ಜಾಸ್ತಿ ಹೋದರೂ ಕಷ್ಟ, ಅವರು ಯಾವಾಗ ಜಮದಗ್ನಿ, ಯಾವಾಗ ದೂರ್ವಾಸ ಎಂದು ತಿಳಿಯುವುದಿಲ್ಲ! ಅಕಸ್ಮಾತ ದೂರ್ವಾಸರೂಪತಾಳಿದ್ದರೆ ಅಂದಿಗೆ ಒಮ್ಮೆ ಅಲ್ಲಿ ಕಪಾಳಮೋಕ್ಷ ಕಟ್ಟಿಟ್ಟ ಬುತ್ತಿ! ಹೀಗಾಗಿ ಭಟ್ಟರ ಕೋಣೆಗಾಗಲೀ ಅವರು ಕುಂತಾಗ ಅವರ ಹತ್ತಿರವಾಗಲೀ ಸಾಧ್ಯವಾದಷ್ಟು ಮನೆಯವಯಾರೂ ಹೋಗುತ್ತಿರಲಿಲ್ಲ.

ಕೂಚು ಪೆನ್ನು ನಿಲ್ಲಿಸಿದರು. ಮತ್ತದೇ ಸೊಂಟನೋವು! ನಗುವಾಗ ನೂರು ನೆಂಟರು ಅಳುವಾಗ ಯಾರು ಇಲ್ಲಾ.. ಎಫ್ ಎಮ್ ನಲ್ಲಿ ಹಾಡು! ಕಥೆ ಬರೆದ ಸಂತೋಷವನ್ನು ಹಂಚಿಕೊಳ್ಳುವುದಾದರೆ ಹಲವರು ಬರುತ್ತಾರೆ. ಆದರೆ ಸೊಂಟನೋವಿನಲ್ಲಿ ನಾನು ಬಳಲುವಾಗ ಯಾರೂ ಬರುವುದಿಲ್ಲ. ಅಂದಮೇಲೆ ಈ ಜಗತ್ತು ಬರೇ ಸ್ವಾರ್ಥಿಗಳಿಂದ ಕೂಡಿದೆ. ಇಂತಹ ಸ್ವಾರ್ಥ ಜನರಿಗೆ ನಾನಾಗಿ ಯಾಕೆ ಕಥೆಬರೆದುಕೊಡಲಿ ಎಂಬ ಅಲೆ ಮನದಲ್ಲಿ ಬಂದ ತಕ್ಷಣ ಕೂಚು ಎದ್ದು ಕಿಟಕಿಯಲ್ಲಿ ಆಚೆ ನೋಡುತ್ತಿದ್ದರು. ದೂರದಲ್ಲಿ ಕಾಗೆಯೊಂದು ಸತ್ತ ಹೆಗ್ಗಣವನ್ನು ಕುಕ್ಕಿ ತಿನ್ನುವುದನ್ನು ಕಂಡು ಮತ್ತಷ್ಟು ಗಂಭೀರನಾದ ಕೂಚು ಕಥೆಯಲ್ಲಿರುವ ಭಾವಗಳನ್ನು ಅವಲೋಕಿಸಿದರು. ಜೋರಾಗಿ ತನಗೆ ತಾನೇ ಹೇಳಿಕೊಂಡರು " ಇನ್ನೇನಾದರೂ ಕಥೆ ಬರೆದರೆ ಅದು ನನಗೆ, ಕೇವಲ ನನಗೆ ಹೊರತು ಬೇರೆ ಯಾರಿಗೂ ಅಲ್ಲ,ಸ್ವಸಂತೋಷಕ್ಕಾಗಿ ನನಗಾಗಿ ನಾನು ಬರೆದುಕೊಳ್ಳುವುದೇ ಹೊರತು ಯಾರೋ ಖುಷಿಪಟ್ಟರೆ ನನಗೇನು ಸಿಕ್ಕೀತು " ಎಂದು ತಾನೂ ಸ್ವಾರ್ಥಿಯಾದರು,ಕಥೆಯನ್ನು ತನಗೆ ಬೇಕಾದ ರೀತಿ, ಬೇಕಾದ ಹಾಗೆ ಬರೆಯಲು ಉಪಕ್ರಮಿಸಿದರು.