ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, April 12, 2010

ಮೇಕೆ ಹೋಗಿ ಮಂಗ ಬಂತು ಡುಂ ಡುಂ ಡುಂ ......

ಸಾಧಿಸಲಾರದ್ದು ಅಂತ ಯಾವುದೂ ಇಲ್ಲದೇ ಹೋಗಿರುವುದು ರಾಜಕೀಯದ ನೆಂಟಸ್ತನಗಳಲ್ಲಿ ಮಾತ್ರ ! ನಾವು ಯಾರನ್ನು ಯಾವಾಗ ಹೇಗೆ ಯಾಕೆ ಬೆಂಬಲಿಸಬೇಕು ಎಂದು ತಿಳಿಯದೇ ಬೆಪ್ಪರಾಗಿ ಕೂರುವುದು ಅಲ್ಲಿ ಮಾತ್ರ, ಯಾಕೆಂದರೆ ಕಂಡ ಅಮಾವಾಸ್ಯೆ ಕಾಣುವ ಹುಣ್ಣಿಮೆಯಾಗುವುದು ಅಲ್ಲಿನ ವೈಶಿಷ್ಟ್ಯಗಳಲ್ಲೊಂದು ! ಆಮೇಲೆ

  1. ಯಾರೂ ಶಾಶ್ವತವಲ್ಲ
  2. ಆಗಿದ್ದು ಆಗಿಹೋಯಿತು ಬಿಟ್ಬಿಡಿ
  3. ನನ್ನ ತೇಜೋವಧೆಮಾಡಲು ಯಾರೋ ಹೊಂಚುಹಾಕಿದ ಕ್ರಮ
  4. ನನ್ನ ವಿರುದ್ಧ ಉದ್ದೇಶ ಪೂರಿತವಾಗಿ ಮಾಡಿದ ರಾಜಕೀಯ ಷಡ್ಯಂತ್ರ
  5. ಇರಲಿ ಬಿಡಿ ಅವರಿಗೂ ಒಂದು ಕಾಲ ಬರತ್ತೆ
  6. ಈಗ ಎಲ್ಲ ಮರೆತು ಹೊಂದಿಕೊಂಡು ಹೋಗೋಣ
  7. ನಮ್ಮ ಒಗ್ಗಟ್ಟಿನ ಪ್ರಯತ್ನ ಸಾಲಲಿಲ್ಲ
  8. ಸತ್ಯಕ್ಕೆ ದೂರವಾದ ಆಪಾದನೆ
  9. ನನ್ನ ಇಮೇಜ್ ಹಾಳುಮಾಡಲು ಆಗದವರು ಕೈಗೊಂಡ ಕ್ರಮ
  10. ನನ್ನ ಜನರಿಗಾಗಿ ನಾನು ಹಗಲಿರುಳೂ ಶ್ರಮಿಸುತ್ತೇನೆ
  11. ನನ್ನದು ಪಾರದರ್ಶಕ ನಡವಳಿಕೆ
  12. ಎಷ್ಟೇ ತೊಂದರೆ ಬರಲಿ ನಮ್ಮ ನಾಗರಿಕರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಂಡು ಅವರ ಸೇವೆ ಮಾಡುತ್ತೇನೆ
---ಇವೆಲ್ಲಾ ರಾಜಕೀಯ ಲೈಬ್ರರಿಯ ಶಬ್ಧಕೋಶದ 12 ಸ್ಯಾಂಪಲ್ ಗಳು. ನಮ್ಮಲ್ಲಿ ಯಾರಾದರೂ ರಾಜಕೀಯ ಸೇರುವವರಿದ್ದರೆ ಈ ಮೇಲಿನದು ಸೇರಿದಂತೆ ಅನೇಕ ಒಕ್ಕಣೆಗಳನ್ನು ಮತ್ತು ಅವುಗಳನ್ನು ಬಾಂಬು ಹಾಕಿದಂತೆ ಎಲ್ಲೆಲ್ಲಿ ಯಾವ್ಯಾವಾಗ ಹಾಕಬೇಕು ಎಂಬುದನ್ನು ಚೆನ್ನಾಗಿ ಚೋರಗುರುವಿನಲ್ಲಿ ಚಾಂಡಾಲ ಶಿಷ್ಯವೃತ್ತಿಯಿಂದ ಕಲಿತು, ಪಳಗಿ, ಉರುಹೊಡೆದು ನಂತರ ಒಂದು ದೊಡ್ಡ ಗಂಟನ್ನು ರೆಡಿ ಮಾಡಿಕೊಂಡು ರಾಜಕೀಯ ಪ್ರವೇಶಮಾಡಬೇಕು, ಹೇಗೆ ಭರತನಾಟ್ಯಕ್ಕೆ, ಕೂಚಿಪುಡಿ, ಕಥಕ್ ಇವಕ್ಕೆಲ್ಲ ರಂಗಪ್ರವೇಶ ಇದೆಯೋ ರಾಜಕೀಯದಲ್ಲೂ ಹಾಗೇ ಕಾರ್ಪೊರೇಟರ್ ಅಥವಾ ಪಂಚಾಯ್ತಿ ಸದಸ್ಯತ್ವದಿಂದ ವೇದಿಕೆಯಲ್ಲಿ ಪ್ರದರ್ಶನ ಆರಂಭ.

ಲಂಚಾಧಿಪ ನಮಸ್ತುಭ್ಯಂ ಪ್ರಜಾನಾಂ ಸಂಕಷ್ಟದಾಯಕಃ |
ಕೊಂಚವೂ ಬಿಡದೆ ನೆಕ್ಕುತ್ತ ಅರ್ಥ ಸಂಚಯನಂ ಕುರು ||

---ಇದು ಅವರ ಮೂಲ ಮಂತ್ರವಾಗಿರುತ್ತದೆ, ಇದನ್ನು ಉಪದೇಶವಿಲ್ಲದೇ ಹಾಗೇ ಬಳಸುವಂತಿಲ್ಲ ! ಹೀಗಾಗಿ ರಾಜಕೀಯಕ್ಕೆ ಉಪದೇಶವೂ ಬೇಕು. ಇಂತಹ ರಾಜಕೀಯದ ಹಲವು ಡೊಂಬರಾಟಗಳನ್ನು ನಾವು ಸದಾ ನೋಡುತ್ತಿರುತ್ತೇವೆ. ಕ್ಷಮಾಶೀಲರಾದ ನಮ್ಮ ಸಹಜ ಮನೋವೃತ್ತಿ ಎಲ್ಲವನ್ನೂ ಕ್ಷಮಿಸಿ ಸಹಿಸುತ್ತ ಖೂಳರ ಬೆಳವಣಿಗೆಗೆ ಸುಗಮ ಹಾದಿಯನ್ನು ಕಲ್ಪಿಸುತ್ತದೆ. ಸಾಲದ್ದಕ್ಕೆ ಇಂದಿನ ಹೊಸ ತಂತ್ರಜ್ಞಾನ ಪೂರಕದಷ್ಟೇ ಮಾರಕವೂ ಆಗಿರುವುದರಿಂದ ಅದನ್ನೇ ಏಟಿಗೆ ತಿರುಗೇಟಾಗಿ, ಬ್ರಹ್ಮಾಸ್ತ್ರಕ್ಕೆ ಸರ್ಪಾಸ್ತ್ರವಾಗಿ ಉಪಯೋಗಿಸುತ್ತಾ ಸಡ್ಡುಹೊಡೆದು ಎದ್ದು ನಿಲ್ಲಲು ಅವಕಾಶ ಸಿಗುತ್ತದೆ. ದೃಶ್ಯ ಮಾಧ್ಯಮದಲ್ಲಿ ಕಾಣುತ್ತಿರುವ ದೃಶ್ಯಗಳಲ್ಲಿ ನನ್ನ ಫೋಟೋ ಬಳಸಿಕೊಂಡು ಅನಿಮೇಷನ್ ನಿಂದ ತಿರುಚಲಾಗಿದೆ--ತಕ್ಕಳ್ರಪ್ಪಾ ಮುಗಿದೇ ಹೋಯಿತು, ಇದೂ ಒಂದು ಬಾಂಬು! ಹೀಗೆ ವರ್ಷಗಳ ಹಿಂದೆ ಹೂತಿಟ್ಟ ಒಂದು ಬಾಂಬು ನಿನ್ನೆ ಸಿಡಿದಿದೆ ! ಮೂರು-ನಾಲ್ಕುವರ್ಷಗಳಿಂದ ನಡೆದುಕೊಂಡು ಬಂದಿದ್ದ ಕೇಸು ಪರಸ್ಪರರ ಆಪಸ್ನಾತೀ ಮಾತುಕತೆಯಿಂದ ರಾಜಿಯಾಗಿದೆ,ಕೇಸು ಖುಲಾಸೆಗೊಂಡಿದೆ ! ಇದರಲ್ಲಿ ಸೋತವರು ಪ್ರಜೆಗಳೇ ವಿನಃ ರಾಜಕೀಯವೂ ಅಲ್ಲ, ವಾದಿ-ಪ್ರತಿವಾದಿಗಳೂ ಅಲ್ಲ. ಯಾವುದನ್ನು ಸತ್ಯ ಅಂತ ನಿರ್ಧರಿಸಿ ಬೆಂಬಲಿಸಿ ಇಲ್ಲಿಯವರೆಗೆ ತಲೆಯಮೇಲೆ ಹೊತ್ತರೋ ಅದನ್ನು " ಸತ್ಯಾಸತ್ಯದ ಮಾತು ನಮಗ್ಯಾಕೆ, ಬನ್ನಿ ಹೋಗೋಣ ಸಾಕು " ಎಂಬ ರೀತಿಯಲ್ಲಿ ಒಂದೇ ನಿಮಿಷದಲ್ಲಿ ಇಬ್ಬರೂ ಸೇರಿಕೊಂಡು ಉಳಿದವರನ್ನು ಮಂಗಗಳ ಥರ ನೋಡಿ ನಗುತ್ತಿದ್ದಾರೆ ! ಎಂತಹ ವೈಪರೀತ್ಯ ನೋಡಿ ! ಇದನ್ನು ನೋಡಿದ ನಮ್ಮ ಗೀ ಗೀ ಮೇಳ ತಂಬೂರಿ ಮೀಟುತ್ತ ಹೀಗೆ ಹಾಡಿತು .........





ಮೇಕೆ ಹೋಗಿ ಮಂಗ ಬಂತು ಡುಂ ಡುಂ ಡುಂ ......
[ ರೇಣುಕಾ ಮಹಾತ್ಮೆ-ಭಾಗ ]

ನಾವು ಬಂದೇವ ನಾವು ಬಂದೇವ ನಾವು ಬಂದೇವ ಕೇಸನ್ನು ನೋಡುದಕ್ಕ
ಮತ್ತೆ ವಾಪಸ್ ಪಡೆದು ರಾಜಿಯಾಗುದಕ್ಕ ಗೀಯ ಗೀಯ ಗಾಗೀಯ ಗೀಯ
ಗೀಯ ಗೀಯ ಗಾಗೀಯ ಗೀಯ.......


ಏನ್ರಪಾ ಎನಾತು ರಾಜೀ ಮಾಡ್ಕೊಳ್ಲಾಕ ಹತ್ತೀರಲ್ಲ ಅಂದ್ರ........ ಪೆದ್ರಾಂಗ ನಕ್ರಂತ..............
ಹಿರೀಕರು ಹೇಳ್ಯಾರಂತ .......ಎಂತಾ ನಗ್ತಾ ನಡೆದರಂತ............ ವಾರೆವ್ಹಾ ನಗ್ತಾ ನಡೆದರಂತಾ ತಾ ತಾ ತಾತಾ ಗೀಯ ಗೀಯ ಗಾಗೀಯಗೀಯ.......


ಎಂದೂ ಇಲ್ದಂತಾ ಖುಸಿ ಇಂದು ಮುಸುಡಾಗ್ ಬಂದು ನಾವು ಒಂದೇ ಎಂದರಂತ............. ಜನಾ ಕೇಳ್ರಿ ಮುಂದೆ ನಾವು ಒಂದೇ ಅಂದರಂತ........... ಯಾಕ್ರಪಾ ಏನಾತು ? ಮಠದೋರು ಹೇಳ್ಯಾರಂತ........ ಸುಮ್ನೇ ಒಂದಾಗಿ ಇರಿ ಅಂತ ಅದ್ಕೇ ಸುಮ್ನೇ ಒಂದಾಗುತಾರಂತ......... ಅದ್ಕೇ ಸುಮ್ನೇ ಒಂದಾಗುತಾರಂತಾ......... ತಾ ತಾ ತಾತಾ ಗೀಯ ಗೀಯ ಗಾಗೀಯ ಗೀಯ.......


ಹೊನ್ನಾಳಿ ಪ್ಯಾಟ್ಯಾಗ ಪಡಗಾ ಹಿಡಿದು ಹಾನಾ ತಗೀತೀನಂತ ಕುಂತಿದ್ಳಲ್ಲ ಯವ್ವ ಆಕಿ ಕರಾಮತ್ತು ಎಲ್ಲಿಗೋತ ? .........ಸುಮ್ಕಿರಪ್ಪಾಸಿವಾ ನಿಂಗೊತ್ತಾಗಾಕಿಲ್ಲ.............. ಅವೆಲ್ಲ ಬರೇ ಡೊಂಬರಾಟ ನೋಡಂತ ಸುಮ್ಕೇ ಅದು ಡೊಂಬರಾಟ ನೋಡಂತ ................ತಾ ತಾ ತಾತಾ ಗೀಯಗೀಯ ಗಾಗೀಯ ಗೀಯ.......


ಯಪ್ಪಗ ಈಗ ಮಂಕ್ರಿಯಪ್ಪನ ಜಾಗ ಸಿಕ್ಕಾವಂತ ಬಕಾರಿ ಮಂಕ್ರಿಯಂತ
ಹಾಂಗಂದ್ರೇನಪಾ
ಸಿವಾ .........ಸಾರಾಯಿ ಹಿಡ್ಯೊದಂತ ........ಕಳ್ಳ ಭಟ್ಟಿ ನಿಲ್ಸೋದಂತ ಊರೂರು ಕೇರೀಲಿ ಅಲ್ದಾಡಿ ಸಾರಾಯಿ ನಿಲ್ಸೊದಂತಾ ತಾ ತಾ ತಾತಾ ಗೀಯ ಗೀಯ ಗಾಗೀಯಗೀಯ.......


ಯಕ್ಕನ್ನ ಕರಸ್ಕೊಂಡು ಬುದ್ಧಿ ಹೇಳಿದ್ರಂತ............. ಈಗ ಅಧಿಕಾರ ಐತಿ ನೋಡ ...........ಅದ್ಕ ಹೊಂದಾಣ್ಕಿ ಮಾತನಾಡ............... ನಿಂಗಒಳ್ಳೇದಾಗುತೈತ ............ಮತ್ತೆ ಸುಖಾ ಸಿಗುವುದೆಂತ ........ಒಹೋಹೋ ಅದ್ಕ ರಾಜಿ ಆತೇನು ? ....ಹುಂ ಮತ್ತ .............ಖುರ್ಚಿ ದುಡ್ಡು ಇರುವುದೆಂತ........ಅರಿತು ನಡೆದಾಗ ಖುಸಿಯಂತಾ ......ತಾ ತಾ ತಾತಾ ಗೀಯ ಗೀಯ ಗಾಗೀಯ ಗೀಯ.......


ನರ್ಸಮ್ಮ ಆಚಾರಪ್ಪ ಒಂದೇ ಕಾರಲ್ಲಿ ಸದ್ಯ ಹೋಗಿಲ್ವಂತ ಮತ್ತೆ ಅದು ಮುಂದೀನ ಎಪಿಸೋಡ ಒಳ್ಳೆ ಬಣ್ಣಾದ ಎಪಿಸೋಡ ಕಣ್ಣುತಂಪಾಗೋ ಎಪಿಸೋಡ.............. ಯಾಕ್ರಪ್ಪಾ ಅಚಾರಪ್ಪಂಗ ತಡ್ಕೊಳ್ಳಾಕಾತೇನು?....ಸ್ವಲ್ಪ ತಡ್ಕೊಂಡು ಹೋದನಂತ ..ಹೆಂಗೂಗೊತ್ತಿರೋ ಮಾಲು ಅಂತ ......ರಾತ್ರಿ ಮತ್ತೆ ಸಿಗುವ ಅಂತಾ ........ತಾ ತಾ ತಾತಾ ಗೀಯ ಗೀಯ ಗಾಗೀಯ ಗೀಯ.......