ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, May 21, 2010

ನೋಡೀ ಸಾಹೇಬ್ರೆ ನೋಟಿರೋದೇ ಹೀಗೆ !!

[ಚಿತ್ರ ಕೃಪೆ : ಫೋಟೋ ಸರ್ಚ್ ಡಾಟ್ ಕಾಂ ]

ನೋಡೀ ಸಾಹೇಬ್ರೆ ನೋಟಿರೋದೇ ಹೀಗೆ !!

ಪ್ಯಾಂಟಿನ ಜೇಬಿಗೆ ಕೈಹಾಕಿ ತೆಗೆದರೆ ಅದೆಂತದೋ ಕೆಟ್ಟ ವಾಸನೆ ಹೊಡೆಯುತ್ತಿತ್ತು! ಸಹಿಸಿಕೊಳ್ಳಲು ಆಗದ್ದು! ಒಗೆದು ಇಸ್ತ್ರಿ ಮಾಡಿ ಚೆನ್ನಾಗೇ ಇತ್ತಲ್ಲ ಹೇಗೆ ಬಂತು ಈ ವಾಸನೆ ? ವಾಸನಾ ಮೂಲವನ್ನು ಹುಡುಕುವ ಪ್ರಯತ್ನ ನಡೆಯಿತು. ವಾಸನೆಯ ಜಾಡು ಹಿಡಿದು ದಟ್ಟಕಾಡಲ್ಲಿ ಪ್ರಾಣಿಯನ್ನರಸಿ ಹೊರಟ ರೀತಿಯಲ್ಲಿ ಹೊರಟಾಯಿತು! ಅಲ್ಲಿ ಕೈಲಿ ರಕ್ಷಣೆಗೆ ಬಂದೂಕು ಇರುವಂತೆ ಇಲ್ಲಿ ಒಳ್ಳೆಯ ಸೆಂಟಿನ ಅವಶ್ಯಕತೆಯಿತ್ತು.


ಅಂದಹಾಗೇ ಕೆಲವರಿಗೆ ವಾಸನೆ ಎಂಬುದರ ಕಲ್ಪನೆಯೇ ಇರುವುದಿಲ್ಲ. ಅವರು ಅದರ ಮಧ್ಯದಲ್ಲೇ ಹಾಯಾಗಿರುತ್ತಾರೆ. ಕೆಲವರ ಮನೆಗೆ ನಾವು ಹೋದಾಗ ಅಲ್ಲಿ ಹಳೆಯ ನಾರುವ ಬಟ್ಟೆಯದ್ದೋ, ಕೊಳೆತ ಕಾಲುಚೀಲ[ಸಾಕ್ಸ್]ದ್ದೋ, ತೊಳೆಯದೇ ಬಿಸಕಿದ ಟವೆಲ್ಲಿನದೋ, ಮುಗ್ಗಿದ ಮಲ್ಟಿಪರ್ಪಸ್ ಒರೆಸುವ ಬಟ್ಟೆಯದೋ ಅಂತೂ ವಾಸನಾಲೋಕ ಅರಳಿಕೊಂಡು ನಮ್ಮ ಮೂಗಿಗೆ ತನ್ಮೂಲಕ ಮೈಮನಕ್ಕೆಲ್ಲ ಅಮರಿಕೊಂಡು ಅಲ್ಲಿಂದ ಕಾಲ್ಕಿತ್ತರೆ ಸಾಕೆನ್ನುವಷ್ಟಾಗಿಬಿಡುತ್ತದೆ, ಆದರೆ ಅವರು ಮಾತ್ರ ಎಂದಿನಂತೆ ತಮ್ಮಕಾರ್ಯ ಅದೇ ’ಪರಿಮಳ’ದಲ್ಲಿ ಮುಂದುವರಿಸಿರುತ್ತಾರೆ!

ನೋಡಿ ಸ್ವಾಮೀ, ಇಂದ್ರಿಯಗಳಲ್ಲಿ ಘ್ರಾಣೇಂದ್ರಿಯ ಇದೆಯಲ್ಲ, ಅಲ್ಲಿಂದ ಆಘ್ರಾಣಿಸಲ್ಪಟ್ಟ ವಾಸನೆ ನೇರವಾಗಿ ನಮ್ಮ ಆತ್ಮದವರೆಗೂ ತಲ್ಪುತ್ತದಂತೆ, ಅದಕ್ಕೆಂದೇ ಈರುಳ್ಳಿ ಮತ್ತು ಬೆಳ್ಳುಳ್ಳಿಗಳ ವಾಸನೆ ಕೂಡ ಸಲ್ಲ ಎಂದು ಸನ್ಯಾಸಧರ್ಮ ಹೇಳುತ್ತದೆ. ನಾವು ತಿಂದುಂಡು ತೇಗುವ, ಉಡುವ, ನೋಡುವ, ಮುಟ್ಟುವ,ಹಿಡಿಯುವ,ಅಪ್ಪುವ,ಒಪ್ಪುವ, ಎಲ್ಲಾ ವಸ್ತುಗಳಿಗೆ ಒಂದಿಲ್ಲೊಂದು ವಾಸನೆ ಇದ್ದೇ ಇರುತ್ತದೆಯಲ್ಲವೇ? ಕೆಲವು ಸುವಾಸನೆಯಾದರೆ ಇನ್ನು ಕೆಲವು ದುರ್ವಾಸನೆ. ಈ ವಾಸನೆಗಳ ಲೋಕ ತೆರೆದಿಡುವ ಜಗತ್ತೇ ಅತಿ ವಿಶಿಷ್ಟ! ಏನಿದ್ದರೂ ನಾವನುಭವಿಸುವ ವಸ್ತುಗಳು ಭೌತಿಕವಾಗಿ ನಮ್ಮ ಅನುಭೂತಿಗೆ ಸಿಗುವುದಾದರೆ ಅವುಗಳ ವಾಸನೆಗಳ ಛಾಯೆ ಅತ್ಮಕ್ಕೆ ಅಂಟಿಕೊಳ್ಳುವ ಅಂಶಕ್ಕೆ ಸೇರುತ್ತವಂತೆ! ಹೀಗಗಿ ಸಾವಿಲ್ಲದ ಆತ್ಮ ವಾಸನೆಗಳ ಮೂಲವನ್ನು ಹೊತ್ತುಕೊಂಡೇ ಸಾಗುತ್ತದೆ. ಅದಕ್ಕೇ ಆದಷ್ಟೂ ಸುವಸನಾಭರಿತ ಪದಾರ್ಥವನ್ನು ಬಳಸೋಣ ಎಂದು ಒಂದು ವಾದ!

ವಾಸನೆ ಅಂದ ತಕ್ಷಣ ನೆನಪಾಗುವುದು ಮೂಗು. ಮೂಗಿನ ಮ್ಯಾನುಫ್ಯಾಕ್ಚರಿಂಗ ನಲ್ಲಿ ಹಲವು ವೈವಿಧ್ಯಮೆರೆವ ಭಗವಂತ ಕೆಲವರಿಗೆ ಬಂದೂಕಿನ ನಳಿಗೆಯ ಥರದ ಮೂಗು ಕೊಟ್ಟರೆ ಇನ್ನು ಕೆಲವರಿಗೆ ಸಂಪಿಗೆಯ ಎಸಳಿನ ನಾಸಿಕ, ಮತ್ತೆಕೆಲವರಿಗೆ ಹಂದಿಯ ಮೂತಿಯ ಥರದ್ದಾದರೆ ಇನ್ನೂ ಕೆಲವರಿಗೆ ಬೆಕ್ಕಿನ ಮೂಗಿನ ಹಾಗೇ ಚಪ್ಪಟೆ ಮೂಗು ಕೊಟ್ಟಿರುತ್ತಾನೆ! ಹಾವಿನ ಮುಖದ ಮೂಗು ಕೆಲವರಿಗಾದರೆ ಗೋವಿನಹಾಗೇ ದೊಡ್ಡ ಹೊಳ್ಳೆಯ ಮೂಗು ಕೆಲವರಿಗೆ! ತಾವು ನೈಜೀರಿಯಾ ಮೂಲದವರನ್ನು ನೋಡಿ, ಸಾಕ್ಷಾತ್ ಕಾಡುಕೋಣದ ಹೂಂಕರಿಸುವ ಮೂಗು ಅವರದ್ದು!ಅಪರೂಪದಲ್ಲಿ ಕೆಲವರಿಗೆ [ಶೂರ್ಪನಖಿಯ ನೆನಪು ಸದಾ ಇರಲೆಂದು ಇರಬೇಕು!]ಕತ್ತರಿಸಿದ ಹಾಗಿರುವ ಮೂಗು!ಕೆಲವರಿಗೆ ಕಾಲು ಕೇಜಿ ನಶ್ಯ ತುಂಬಿಡುವಷ್ಟು ದೊಡ್ಡಗಾತ್ರದ ಡಬ್ಬದ ರೀತಿಯ ಮೂಗು!ಕೆಲವರಿಗೆ ಮಣ್ಣಿನಿಂದ ಮಾಡಿದ ವಿಗ್ರಹಗಳಿಗೆ ಲಾಸ್ಟ್ ಮಾಮೆಂಟ್ ನಲ್ಲಿ ಕಲಾವಿದ ಜೋಡಿಸಿದಂತೆ ಬ್ರಹ್ಮ ಜೋಡಿಸಿದ್ದಾನೇನೋ ಅಂತನ್ನಿಸುವಮೂಗು. ಆಮೇಲೆ ಸೊಟ್ಟಮೂಗು, ಉದ್ದಮೂಗು, ಮೊಂಡು ಮೂಗು, ಗಿಣಿ ಮೂಗು, ಗರುಡ ಮೂಗು, ಕಪ್ಪೆ ಒತ್ತಿಟ್ಟ ಹಾಗಿನ ಮೂಗು ಇವೆಲ್ಲ ಮಿಕ್ಕುಳಿದ ಸಾಮಾನ್ಯ ಪ್ರಭೇದಗಳು!ಸದ್ಯಕ್ಕೆ ಆನೆಯ ಮೂಗಿನ ಥರದ ಮೂಗನ್ನು ಮಾತ್ರ ಕೊಟ್ಟಿಲ್ಲವಲ್ಲ ಎಂದುಕೊಳ್ಳಬೇಕು ಏನಂತೀರಾ? ಪುಣ್ಯಾತ್ಮ ದೇವರು ಮೂಗಿನ ಆಕಾರದಂತೆ ಆಘ್ರಾಣ ಶಕ್ತಿಯನ್ನೂ ಪರ್ಸಂಟೇಜ್ ನಲ್ಲಿ ಕರುಣಿಸಿದ್ದಾನೇನೋ ಅನಿಸುತ್ತಿದೆ. ಹೇಳಿದೆನಲ್ಲ-ಕೆಲವರಿಗೆ ವಾಸನೆಗಳಲ್ಲಿ ಭೇದವೇ ಇಲ್ಲ!

ನಶ್ಯಂ ವಶ್ಯಕರಮ್ ವಸ್ತ್ರೆಲ್ಲ ಸಿಂಬ್ಳಾಕರಮ್ --ಅಂತ ಯಾರೋ ಹೇಳಿದಹಾಗಯ್ತು, ಯಾಕೆ ಗೊತ್ತೇ ಈ ನಶ್ಯದವರು ಇರುತ್ತಾರಲ್ಲ ಅವರ ಹಿಂದೆ-ಮುಂದೆ ಇರುವವರು ತುಂಬಾ ಹುಷಾರಾಗಿರಬೇಕು. ತಟಕ್ಕನೆ ಮಿಂಚಿ-ಗುಡುಗಿದಂತೆ ಯಾವಾಗಲಾದರೂ ಅವರು ಆಆಆಆಆಆಅ ಕ್ಷೀಈಈಈಈಈಈಈ ಅಂದುಬಿಡುತ್ತಾರೆ, ಅವರ ಆ ಊಊಊಊಊಊಊದ್ದ ಸೀನಿನೊಟ್ಟಿಗೆ ಹಿಂದೆ-ಮುಂದೆ ಇರುವವರ ಬಟ್ಟೆಯ ’ಸೀನು’ ಬದಲಾಗಿಬಿಡಬಹುದು! ನಶ್ಯವನ್ನು ಉಪಯೋಗಿಸುವ ಯಾರೇ ಪುಣ್ಯಾತ್ಮನನ್ನು ಕೇಳಿ ಆತ ಮೂಗಿರುವುದೇ ಅದಕ್ಕೆ ಅಂದರೆ ಆಶ್ಚರ್ಯವಿಲ್ಲ! ನನಗೆ ಗೊತ್ತಿರುವ ಹಾಗೆ ಸಿಗರೇಟು ಸೇದುವ ಒಬ್ಬ ಮಹಾನುಭಾವ ಅದರ ಕುರಿತು ವ್ಯಾಖ್ಯಾನಿಸುತ್ತ ಸಿಗರೇಟಿನ ಹೊಗೆ ಶರೀರದ ಒಳಗಿರುವ ಕೀಟಾಣುಗಳನ್ನೆಲ್ಲ ಹೊಡೆದೋಡಿಸುತ್ತದೆ ಎನ್ನುತ್ತಿದ್ದ...ಬಹುಶಃ ಮನೆಗಳಲ್ಲಿ ಧೂಪದ ಹೊಗೆ ಹಾಕುತ್ತಾರಲ್ಲ ಹಾಗೇ ಇರಬೇಕು ಏನಂತೀರಿ?!!

ಕೆಲವರ ಮುಖ ಬೆಳಿಗ್ಗೆ ನೋಡಿದರೆ ಕೆಲಸವೇ ಆಗುವುದಿಲ್ಲ ಎಂಬ ಇನ್ನೂ ಕೆಲವರ ಅಂಬೋಣ ಕಾರಣ ನನಗೀಗ ಸಿಕ್ಕಿದೆ! ಆ ನಸೀಬುಗೆಟ್ಟ ಮುಖಗಳವರು ಸರಿಯಾಗಿ ಮುಖಮಾರ್ಜನೆ,ನಿತ್ಯ ನೈಮಿತ್ತಿಕ ಸ್ವಚ್ಛತಾಕೆಲಸಗಳನ್ನು ಮಾಡದೇ ಆಳಸಿಗಳಾಗಿ ಅದೀಗತಾನೇ ಹಾಸಿಗೆಯಿಂದ ಎದ್ದು ಬಂದವರ ಮುಖ ಹೊತ್ತಿರುತ್ತಾರೆ. ಜೀವನದಲ್ಲಿ ಏನಿದೆ ಮಹಾ ಎಂಬ ತತ್ವೋಪದೇಶ ನೀಡುವ ಅಂಥವರು ಅಲ್ಲಿಲ್ಲಿ ಸುತ್ತುತ್ತ ಹಾಗೂ ಹೀಗೂ ಜೀವಿಸುತ್ತಾರೆ! ಅವರು ಮಾಡಿದ್ದೆಲ್ಲ ಸರಿ ಎಂಬ ಧೋರಣೆ ತಳೆದಿರುವ ಅವರಲ್ಲಿ ಮಾಡಿದ್ದನ್ನು ಪ್ರಶ್ನಿಸಲು ಬೇರೆಯವರಿಗೆ ಅವಕಾಶವೇ ಇಲ್ಲ! ಇಂತಹ ಜನ ಎದುರಾಗಿ ಸಿಕ್ಕರೆ ಅವರು ಬೇರೆಯವರ ಮೂಡ್ ಕೆಡಿಸಿಬಿಡುತ್ತಾರೆ! ಮೂಡ್ ಕಳೆದುಕೊಂಡ ಜನ ಅದಕ್ಕೆ ಕಾರಣೀಭೂತರಾದ ’ಭೂತ’ಗಳನ್ನು ಬೈಯ್ಯುವುದರಲ್ಲಿ ತಪ್ಪೇನಿದೆ? ಇನ್ನು ಕೆಲವರು ಐಏಎಸ್,ಡಾಕ್ಟರೇಟ್ ಎಲ್ಲಾ ಮಾಡಿರುತ್ತಾರೆ--ಆದರೆ ಅವರ ಬಟ್ಟೆಬರೆ-ಅವರು ಮನೆಯಲ್ಲಿ-ಹತ್ತಿರದವರೊಡನೆ ನಡೆದುಕೊಳ್ಳುವ ರೀತಿಗೆ ಮಾತ್ರ ಮತ್ತೆ ಅವರಿಗೆ ಈ ವಿಷಯಗಳಲ್ಲಿ ಐಏಎಸ್,ಡಾಕ್ಟರೇಟ್ ಮಾಡಿಸಬೇಕಾಗುತ್ತದೆ!

ಬಹುಶಃ ಈ ವಾಸನಾ ಗ್ರಹಿಕೆ ಎಂಬುದಿದೆಯಲ್ಲ ಅದು ರ್‍ಊಟ್ ಕಲ್ಚರ್ ಅಂದರೆ ತಪ್ಪಲ್ಲವೇನೋ! ಮೂಲ ಸಂಸ್ಕಾರವಿಲ್ಲದಿದ್ದರೆ ವಾಸನೆಗಳೆಲ್ಲ ಅರ್ಥಹೀನವೇನೋ! ಪಟ್ಟಣಗಳಲ್ಲಿ ತಿಪ್ಪೆ ಎತ್ತುವ ಗಾಡಿಗಳಲ್ಲಿ ಕೆಲಸಗಾರರು ಹಾಯಾಗಿ ಹಾಡುಹೇಳಿಕೊಂಡು ಹೋಗುತ್ತಿರುವುದಿಲ್ಲವೇ ? ಮೀನು-ಕೋಳಿ-ಮಟನ್ ಮಾರುವ ಜನರಿಗೆ ಮೂಗಿಲ್ಲವೇ? ಕೆಲವು ಮೀನು ಸಾಗಾಣಿಕೆಯ ಲಾರಿಗಳನ್ನು ನೆನೆಸಿಕೊಂಡರೆ ದಿನವಿಡೀ ವಾಂತಿ ಫ಼್ರೀ! ಒಮ್ಮೆ ಹೀಗಾಯ್ತು- ಮೀನುಮರುವ ಹೆಂಗಸರು ಪೇಟೆಯಿಂದ ಅವರ ಹಳ್ಳಿಗೆ ರಾತ್ರಿ ವಾಪಸ್ಸಾಗಬೇಕಾಗಿತ್ತು ಆದರೆ ಆಅ ದಿನದ ಕೊನೆಯ ಬಸ್ ಆಗಲೇ ಹೋಗಿಬಿಟ್ಟಿದ್ದರಿಂದ ಅವರು ಶಹರದ ಬಸ್ ಶೆಲ್ಟರ್ನಲ್ಲೇ ರಾತ್ರಿ ಮಲಗುವ ಪ್ರಮೇಯ ಬಂತು. ಅಲ್ಲಿ ಮಲ್ಲಿಗೆ ಮಾರುವ ಹೆಂಗಸರು ಹಗಲು ಹೊತ್ತು ಮಲ್ಲಿಗೆ ಮಾರಿದ್ದರಿಂದ ಅಲ್ಲಲ್ಲಿ ಮಲ್ಲಿಗೆಯ ಪಕಳೆಗಳು ಬಿದ್ದಿದ್ದು ಮಲ್ಲಿಗೆಯ ಪರಿಮಳ ಘಮ್ಮೆಂದು ಒಸರುತ್ತಿತ್ತು. ಮೀನುಗಾರ್ತಿಯರಿಗೆ ಬಹಳ ಹೊತ್ತು ನಿದ್ದೆಯೇ ಬರಲಿಲ್ಲವಂತೆ! ಕಾರಣ ಇಷ್ಟೇ ಮಲ್ಲಿಗೆಯ ಕೆಟ್ಟ ವಾಸನೆ ಅವರ ಮೂಗಿಗೆ ಸೋಕುತ್ತಲೇ ಇತ್ತು! "ಅಕ್ಕಾ ನಂಗೆ ನಿದ್ದೆನೇ ಬಂದಿಲ್ಲ ಕಣೇ, ಆ ಮಲ್ಗೇ ವಾಸ್ನೆ ಐತಲ್ಲಾ ಹಾಳಾದ್ದು, ಏನ್ಮಾಡೂದು ಇವಾಗ?" ಅಂತ ಒಬ್ಬಾಕೆ ಇನ್ನೊಬ್ಬಳಿಗೆ ಕೇಳಿ ಅವರಲ್ಲೇ ಪ್ಲಾನು ಹೊಳೆದು ಮೀನುಹಾಕಿದ ಬುಟ್ಟಿಯನ್ನು ಮುಖಕ್ಕೆ ಮುಚ್ಚಿಕೊಂಡು ಮಲಗಿದಮೇಲೆ ಜಗತ್ತಿಗೇ ನಿದ್ದೆ ಆವರಿಸಿದಂತೇ ಏನು ನಿದ್ದೆ ಅಂತೀರಿ! ಅಂತೂ ವಾಸನೆಗಳನ್ನು ಅಘ್ರಾಣಿಸಲು ಕೊಟ್ಟ ಯಂತ್ರದ ಮಹಿಮೆ ಅಪಾರ!

ಛೆ ಛೆ... ನಾನು ಎಲ್ಲೋ ಬಂದುಬಿಟ್ಟೆನಲ್ಲಾ... ಅಂದಹಾಗೇ ಅಂತೂ ತೊಳೆದು ಉಟ್ಟ ಪ್ಯಾಂಟಿನ ಜೇಬಿನ ವಾಸನೆಗೆ ಮೂಲ ಅದರಲ್ಲಿ ಹಾಕಿದ್ದ ಹರಕಲು ನೋಟು!

ನೋಟು ಹಳೆಯದಾದರೇನು ನೋಟ ನವನವೀನ!
ಮನದ ಭಾವ ಕೆರಳುವುದಕೆ ವಾಸನೆಗಳು ಜಾಣಾ !


ಅಯ್ಯಯ್ಯೋ ನೋಟು ಎಂದರಾಗಲಿಲ್ಲ, ಅದರ ಆತ್ಮಕಥೆಯೇ ಬೇರೆ! ಅದನ್ನು ಇನ್ನೊಮ್ಮೆ ಇಟ್ಟುಕೊಳ್ಳೋಣ! ಐದು ರೂಪಾಯಿಯಿಂದ ಹಿಡಿದು ಸಾವಿರ ರೂಪಾಯಿಗಳ ೭-೮ ನಮೂನೆಯ ನೋಟುಗಳಿವೆ ಅಲ್ಲವೇ? ಆದರೆ ನಮ್ಮಲ್ಲಿ ಏಳೆಂಟು ನೂರು ವಿಧದ ನೋಟುಗಳಿವೆ! ಒಂದೇ ದೇಶ, ಒಂದೇ ಕಾಯಿದೆ ಅದು ಹೇಗೆ ಅಂತೀರಾ ಹಾಗಾದ್ರೆ ನಿಧಾನವಾಗಿ ನೆನಪುಮಾಡಿಕೊಳ್ಳಿ. ಮೊನ್ನೆ ನೀವು ಬಸ್ಸಿನಲ್ಲಿ ಬರುವಾಗ ಕಂಡಕ್ಟರ್ ಗೆ ಐನೂರರ ನೋಟು ಕೊಟ್ಟು ಆತ ಬೆರಳಿಗೆ ಎಂಜಲನ್ನು ತಾಗಿಸಿಕೊಂಡು ಚಪ ಚಪ ಚಪನೆ ಎಣಿಸಿದ ಚಿಲ್ಲರೆ ಪಡೆದದ್ದರಲ್ಲೇ ಹಲವು ಥರದ ನೋಟುಗಳಿವೆ! ಒಂದೊಂದ ಮಹಾತ್ಮೆಯೇ ಒಂದೊಂದು ಥರ! ಒಂದು ಎಣ್ಣೆಯ ಅಭ್ಯಂಜನ ಮಾಡಿದ್ದು, ಇನ್ನೊಂದು ಮಳೆಯಲ್ಲಿ ನೆನೆದ ಹಂದಿಯಹಾಗೆ ಆಗಿದ್ದು, ಮತ್ತೊಂದು ಕುಂಕುಮ ಅಂಟಿಸಿಕೊಂಡ ಸುಮಂಗಲೆ, ಇನ್ನೊಂದು ಅರಿಶಿನದಲ್ಲಿ ಅದ್ದಿದ್ದು, ಹಾಗೇ ಮತ್ತೊಂದು ಮೇಲಿಂದ ನೀಲಿ ಇಂಕು ಪೇರಿಸಿಕೊಂಡಿದ್ದು, ಮತ್ತೊಂದು ಕಪ್ಪು ಕಲೆಯನ್ನು ಹಚ್ಚಿದ್ದು, ಇನ್ನೂ ಒಂದು ಹೆಸರು ಬರೆಸಿಕೊಂಡಿದ್ದು,ಮಗುದೊಂದು ಹಾಲು ಕುಡಿದಿದ್ದು,ಮತ್ತಾಮಗುದೊಂದು ಗಡ್ಡದ ಕ್ರೀಮ್ ನ್ನು ಹಚ್ಚಿಸಿ ಗಡ್ಡಮಾಡಿಸಿಕೊಂಡಿದ್ದು, ಕೊನೆಯದಾಗಿ ಪಾನೀಪೂರಿಯವನ ಕೈಲಿ ಪಾನೀ ಕುಡಿದಿದ್ದು,ಮಸಾಲ ಪೂರಿ ತಿಂದಿದ್ದು---ಇವೆಲ್ಲಾ ವೈವಿಧ್ಯಗಳು! ಮೌಲ್ಯ ಏನೇ ಇದ್ದರೂ ಭಾರತೀಯತೆ ಮೆರೆಯುತ್ತೇವೆ --ವಿವಿಧತೆಯಲ್ಲಿ ಏಕತೆ, ಏಕದರಲ್ಲಿ ಅನೇಕತೆ!

ಮಡಚಿದ್ದು, ನಾಲ್ಕು ಭಾಗಮಾಡಿ ಪ್ಲಸ್ ಪ್ಲಾಸ್ಟರ್ ಹಾಕಿದ್ದು, ಜಗತ್ತಿಗೇ ದುರ್ಬೀನು ಹಿಡಿವಂತೆ ತೂತಾಗಿರುವುದು, ಅನೇಕಬಾರಿ ಪಿನ್ನುಮಾಡಿಸಿಕೊಂಡು ಮಸಾಲೆ ದೋಸೆಯಂತೆ ತೂತಾಗಿದ್ದು, ಅಸಲಿಗೆ ಗುರುತಿನ ಸಂಖ್ಯೆಯೇ ಬೇರೆಯಾಗಿದ್ದು, ನೀರಿಲ್ಲದೇ ಬಿಸಿಲಲ್ಲಿ ಒಣಗಿ ಒಡೆದ ಗದ್ದೆಯ ಮೇಲ್ಮೈಥರದ್ದು, ಮಣ್ಣಲ್ಲೇ ಹುಟ್ಟಿ ಮಣ್ಣಲ್ಲೇ ಸಾಯ್ವ ತತ್ವ ಓದಿದ್ದು--ಹೀಗೆ ಇವೆಲ್ಲ ಇತರ ಪ್ರಭೇದಗಳು! ಇಲ್ಲೂ ಅದೇ ವಿವಿಧತೆಯಲ್ಲಿ ಏಕತೆ!

ಹೀಗೇ ಇಂತಹ ಯವುದೋ ಮೂಲದಿಂದ ಬಂದ ನೋಟೊಂದು ಒಂದೆರಡು ನೋಟುಗಳ ಮಧ್ಯೆ ಕೆಲಕಾಲ ಬಂದು ನನ್ನ ಪ್ಯಾಂಟಿನ ಜೇಬಿನಲ್ಲಿ ವಾಸ್ತವ್ಯ ಹೂಡಿತ್ತು! ಅದು ಹಾಗೇ ಕೆಲನಿಮಿಷಗಳಲ್ಲೇ ಮತ್ಯಾರದೋ ಕೈಗೆ ಸರಿದು ಹೋಗಿತ್ತು! ಆದರೆ ಅದರ ಬಂದು ಹೋಗುವ ನಡುವೆ ತನ್ನ ’ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ಎಂಬ ನಿಜದ ಅರಿವನ್ನು ಮೂಡಿಸಿಯೇ ಹೋಗಿತ್ತು!ಇದ್ದರೆ ಇರಬೇಕು ವಾಸನೆಯ ನೋಟಿನ ರೀತಿ ಎಂದು ನೆನಪಿಸಿಕೊಳ್ಳಲೋ ಎಂಬಂತೆ ಅದರ ವಾಸನಾಬಲ ನನ್ನ ಮೂಗನ್ನಡರಿ ನನ್ನ ಜಂಘಾಬಲವನ್ನೇ ನುಂಗಿಹಾಕಿತ್ತು! ಹೊರಗಿನಿಂದ ಯಾರದೋ ಕೈಲಿರುವ ಆ ನೋಟು ಸಿನಿಮಾ ಹಾಡೊಂದನ್ನು ಹಾಡಿದ ಹಾಗೇ ಅನಿಸುತ್ತಿತ್ತು.....ಜನ್ಮ ಜನ್ಮದಾ ಅನುಬಂಧ.. ನೋಟು ಜೇಬುಗಳ ಪ್ರೇಮಾನುಬಂಧ!