ಆಧ್ಯಾತ್ಮ-ವಿಜ್ಞಾನ
ಹಾರುವ ಮೊಲವನ್ನು ಕಂಡು
ಮೂರೇ ಕಾಲು ಎಂದರು !
ಬಾರಿ ಬಾರಿ ಸಾರಿ ಹೇಳೆ
ಯಾರೂ ಅರಿಯದಾದರು !
ಜಾರುವ ಬಂಡೆಯಮೇಲೆ
ಏರಬೇಡಿರೆಂದರೂ
ನೀರಪಸೆಯ ಕಂಡೂ ಕಂಡೂ
ದಾರಿತುಳಿದು ಬಿದ್ದರು !
ಊರ ಜನರ ಅಂಬೋಣಕೆ
ಮಾರಿಕೊಳ್ಳಬೇಡೆನೆ
ಖಾರವಾದ ಮಾತನಾಡಿ
ಹಾರಿ ಹಾಯ್ದುಬಂದರು
ಹಾರಿದಾ ವಿಮಾನವಿಳಿಯೆ
ಮಾರಜನಕ ದಯೆಯದು
ನೀರಿಗಿಳಿದ ಹಡಗು ಮರಳಿ
ದೂರದಡವ ಸೇರ್ವುದು !
ದಾರಿಕಂಡ ಋಷಿಮುನಿಗಳು
ಧಾರೆಯೆರೆದ ಜ್ಞಾನಕೇ
ಖಾರ-ಉಪ್ಪು-ಹುಳಿಯ ಹುಡುಕಿ
ತೋರಿಸೆಂಬ ನಿಲುವೇಕೆ ?
ಬೇರೆಯದೇ ಲೋಕವಿಹುದು
ತೂರಿಕೊಳ್ಳಲದರಲಿ
ಮೇರೆ ಮೀರಿದಂತ ಸುಖವು
ಭೂರಿಭೋಜನವಲಿ