ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, February 24, 2011

ಚಂದವಿರುವುದೆಲ್ಲಾ ನಮದಾಗಬೇಕಿಲ್ಲ !


ಚಂದವಿರುವುದೆಲ್ಲಾ ನಮದಾಗಬೇಕಿಲ್ಲ !

ಮನುಷ್ಯ ಸಹಜ ಆಸೆಯೆಂದರೆ ಚೆನ್ನಾಗಿರುವುದೆಲ್ಲಾ ತನ್ನದಾಗಿರಲಿ ಎಂಬುದು. ಚಂದದ ಹೂವು, ಹಣ್ಣು, ಮನೆ, ಕಾರು, ವಸ್ತು, ಒಡವೆ, ಬಟ್ಟೆ, ಹೆಣ್ಣು ಯಾವುದೇ ಇರಲಿ ಅದು ತನ್ನದಾಗಿಬಿಡಲಿ ಎಂಬುದು ಬಹುತೇಕರ ಅಪೇಕ್ಷೆ. ಈ ಕಾರಣಕ್ಕಾಗಿಯೇ ಹಲವು ಜಗಳಗಳು, ದ್ವೇಷ-ವೈಷಮ್ಯಗಳು ಹುಟ್ಟಿಕೊಳ್ಳುತ್ತವೆ. ಚಂದವನ್ನು ದೂರದಿಂದ ನೋಡಿ ಆನಂದಿಸಬೇಕು. ಅವುಗಳಲ್ಲಿ ಸಹಜವಾಗಿ ನಮಗೆ ಧಕ್ಕುವುದು ಸಿಕ್ಕೇಸಿಗುತ್ತದೆ ಅದನ್ನೂ ಮೀರಿ ಚಂದದ ಯಾವುದನ್ನೋ ಪಡೆಯುವಲ್ಲಿ ಪೈಪೋಟಿಗೋ ದುಸ್ಸಾಹಸಕ್ಕೋ ಮುನ್ನುಗ್ಗಬಾರದು.

ಕೆಲವರಿಗೆ ಗಿಡದಲ್ಲಿ ಅರಳಿರುವ ಅಂದದ ಹೂವುಗಳಷ್ಟನ್ನೂ ಕೊಯ್ಯುವ ಜಾಯಮಾನ. ಪ್ರಾಯಶಃ ಸೃಷ್ಟಿಸಿದ ದೇವರೂ ಕೂಡ ಹೂಗಳನ್ನೆಲ್ಲವನ್ನೂ ತನಗೇ ಅರ್ಪಿಸಿ ಎಂದು ಕೇಳಲಿಕ್ಕಿಲ್ಲ ಆದರೆ ಇವರು ಮಾತ್ರ ಕೀಳದೇ ಬಿಡುವುದೇ ಇಲ್ಲ. ಇನ್ನು ಕೆಲವರಿಗೆ ಸವಿಮಾತನ್ನು ಉಲಿಯುವ ಗಿಳಿ ತಮ್ಮ ಮನೆಯಲ್ಲೇ ಗೂಡಿನಲ್ಲಿರಲಿ ಎಂಬ ಇಚ್ಛೆ. ಪಾಪ ಆ ಬಂಧಿತ ಗಿಳಿಗೆ ತನ್ನ ಬಾಂಧವರು ಮರಳಿ ಸಿಗುವರೇ? ಜೀವಮಾನದಲ್ಲೇ ಅದು ತನ್ನ ವರ್ಗದ ಎಲ್ಲರಿಂದಲೂ ದೂರವಾಗಿ ಜೀವಿಸಬೇಕೆಲ್ಲವೇ ? ಸ್ವಚ್ಛಂದವಾಗಿ ಎಂದಾದರೂ ಕಾಡಲ್ಲಿ ಹಾರಲು ಮತ್ತೆ ಬಿಡುವು ಸಿಗುವುದೇ? ಮಾನವ ಸಹಜ ಇನ್ನೊಂದು ಇಚ್ಛೆ ಚಾಪಲ್ಯಕ್ಕೂ ಚಂದವನ್ನೇ ಬಯಸುವುದು. ಕೊಬ್ಬಿದ ಕುರಿಯನ್ನೋ ಕೋಳಿಯನ್ನೋ ಕಂಡಾಗ ಅದು ತಮ್ಮ ಆಹಾರಕ್ಕೆ ಸಿಗಲಿ ಎಂಬುದು ಕೆಲವರ ಅಪೇಕ್ಷೆ. ಆ ಜೀವಿಗಳಿಗೂ ಅವರವರ ಬಂಧುಗಳಿಲ್ಲವೇ ? ಅವು ನೋವು-ನಲಿವನ್ನು ಹಂಚಿಕೊಂಡು ಬದುಕುವುದಿಲ್ಲವೇ ? ಕೆಲವು ಜನರಿಗೆ ಸಿರಿವಂತಿಕೆ ಹೆಚ್ಚಿಸುತ್ತವೆ ಎಂದು ನಂಬಿಸಲ್ಪಟ್ಟು ಮಾರುವ ಹಾವುಗಳು ಇಷ್ಟ. ಹಾಗಾದರೆ ಆ ಕುರುಡುಮಂಡೆ ಹಾವುಗಳಿಗೂ ಅವುಗಳದೇ ಆದ ಬದುಕಿಲ್ಲವೇ ?

ಶೋ ಕೇಸಿನಲ್ಲಿ ಇಡುವ ಸಲುವಾಗಿ ತರಾವರಿ ಅಲಂಕಾರಿಕ ಸಾಮಾನುಗಳನ್ನು ತರುವವರಿಗೆ ತುಸುವೂ ತೆರಪೇ ಇರುವುದಿಲ್ಲ! ಆಗಾಗ ಹೋದಲ್ಲಿ ಬಂದಲ್ಲಿ ಕಂಡಲ್ಲಿ ಸಿಗುವ ಚಂದದ ವಸ್ತುಗಳೆಲ್ಲಾ ಅವರ ಶೋ ಕೇಸಿಗೆ ಬಂದುಬಿಡಬೇಕು. ಒಡವೆಗಳಲ್ಲಿ ಮಾಟದ ಬದಲಾವಣೆ ಕಂಡ ನೀರೆಯರನೇಕರಿಗೆ ಮಾರನೇ ದಿನವೇ ಹಣವೆಷ್ಟಾದರೂ ಪರವಾಗಿಲ್ಲ ಅವು ಬೇಕು. ರೇಷ್ಮೆ ಸೀರೆಗಳ ಅಂದಕ್ಕಂತೂ ಮಾರುಹೋಗದ ಹೆಂಗಸರೇ ಇರುವುದು ಸುಳ್ಳು. ’ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು’ ಎಂಬ ಗಾದೆ ಇದೆಯಲ್ಲಾ ಅದರಂತೇ ಆಡಂಬರಕ್ಕಾಗಿ ಹಲವನ್ನು ಹೆಂಗಸರು ಬಯಸುತ್ತಾರೆ. ಗಂಡನ ಜೇಬು [ಕಿಸೆ] ಗಟ್ಟಿ ಇದ್ದರೆ ಬಚಾವು! ಇರದಿದ್ದರೆ ಸಾಲಮಾಡಿಯಾದರೂ ಕೆಲವನ್ನು ಪಡೆದೇ ತೀರಬೇಕು. ಈ ಕಾರಣಕ್ಕಾಗಿಯೇ ಕ್ರೆಡಿಟ್ ಕಾರ್ಡ್‍ಗಳು ಚಾಲ್ತಿಗೆ ಬಂದವು. ಮಾಮೂಲೀ ಹಣದ ದುಪ್ಪಟ್ಟು ಬಡ್ಡಿ ಕೊಟ್ಟರೂ ಪರವಾಗಿಲ್ಲ ತಕ್ಷಣಕ್ಕೆ ಖರೀದಿಸಲು ಆ ಸೌಲಭ್ಯಗಳು ಬೇಕು.

ಜೀವನದ ಗತಿಯೂ ಆ ದಿಸೆಯಲ್ಲೇ ನಡೆದಿದೆ. ಮಾರುವ ಜನ ಕೊಳ್ಳುವ ಜನರ ನಾಡಿಮಿಡಿತವನ್ನು ಯಾವುದೇ ಆಯುರ್ವೇದ ವೈದ್ಯನಿಗಿಂತಾ ಚೆನ್ನಾಗಿ ಅರಿತವರು. ವೈದ್ಯರು ಮುಟ್ಟಿ ಪರೀಕ್ಷಿಸಿದರೆ ಮಾರುವ ಜನ ದೂರದಿಂದಲೇ ನಾಡಿಯನ್ನು ತಿಳಿಯುವ ಕಸರತ್ತುಳ್ಳವರು! ಥರಥರದ ಮಾರಾಟ ಶೈಲಿ, ಒಂದಕ್ಕೊಂದು ಬಿಟ್ಟಿಯಲ್ಲಿ ಎಂಬ ಘೋಷಣೆ! ದರದಲ್ಲಿ ರಿಯಾಯತಿಯ ತೋರಿಕೆ, ಹಳೇ ವಸ್ತುಗಳ ಬದಲಿಗೆ ಹೊಸದನ್ನು ಕೊಳ್ಳುವ ಸೌಭಾಗ್ಯವೆಂಬ ಉದ್ಘೋಷ! ಬೇರೆಲ್ಲೂ ಸಿಗದ ಮಾಲು ತಮ್ಮಲ್ಲಿ ಮಾತ್ರ ಸಿಗುತ್ತದೆ ಎಂಬ ಹೆಗ್ಗಳಿಕೆಯ ಹೇಳಿಕೆ, ದರದಲ್ಲಿ ನಮ್ಮಷ್ಟು ಕಮ್ಮಿ ಯಾರೂ ನೀಡರು ಎಂಬ ಜಾಹೀರಾತು, ಪರಿಶುದ್ಧ ಹಾಗೂ ಪರಿಪೂರ್ಣತೆ ಎಂಬ ಸ್ವಯಂ ವರ್ಣನೆ ಹೀಗೇ ಹಲವಾರು ದಾರಿಗಳಿಂದ ಬಿಡುವ ಅಸ್ತ್ರಗಳಲ್ಲಿ ಕೆಲವಾದರೂ ಗ್ರಾಹಕರಿಗೆ ನಾಟುವುದು ಖಚಿತ; ಈ ಮಾತು ನಿಜವಾಗಿಯೂ ಇಲ್ಲಿ ಉಚಿತ!

ಹಾಗಂತ ಕಾಲಕ್ಕೆ ತಕ್ಕ ಆವಶ್ಯಕ ವಸ್ತುಗಳು ಮತ್ತು ಪರಿಕರಗಳ ಕೊಳ್ಳುವಿಕೆ ಸರಿಯಾಗೇ ಇದೆ. ಆದರೆ ಬರೇ ಅಂದಕ್ಕಾಗಿ ಕೊಳ್ಳುವುದಿದೆಯಲ್ಲಾ ಅದು ಆಕ್ಷೇಪಾರ್ಹ. ಒಬ್ಬರು ಮಾಡುತ್ತಾರೆ ಎಂದು ಇನ್ನೊಬ್ಬರೂ ಮಾಡಲು ಹೊರಡುತ್ತಾರೆ. ಆ ಇನ್ನೊಬ್ಬರಲ್ಲಿ ಕೆಲವರು ಆರ್ಥಿಕವಾಗಿ ನಿಜವಾಗಿಯೂ ಸಮರ್ಥರಾಗಿರುವುದಿಲ್ಲ. ಸಾಲಮಾಡಿಯಾದರೂ ಮಾಡಹೊರಟ ಖರೀದಿಯ ತಪ್ಪಿಗೆ ಕೊನೆಗೊಮ್ಮೆ ತೀರಿಸಲಾಗದ ಸಾಲದಲ್ಲಿ ಬಿದ್ದು ಮಾನಸಿಕ ಖಿನ್ನತೆಗೂ ಒತ್ತಡಕ್ಕೂ ಒಳಗಾಗಿ ನಾನಾಥರದ ಕಾಯಿಲೆಗಳನ್ನು ಅನುಭವಿಸಬೇಕಾಗಿ ಬರುತ್ತದೆ. ಇದ್ದುದರಲ್ಲಿ ತೃಪ್ತಿಪಡೆಯುವ ಸ್ವಭಾವದಿಂದ ಇಂತಹ ಕೆಲವು ಕಾಯಿಲೆಗಳನ್ನು ದೂರವಿಡಬಹುದು. ಯಾರೋ ದಾರಿಯಲ್ಲಿ ಮಾತನಾಡುವುದನ್ನು ಕೇಳಿದೆ. "೪೦ ಆಯ್ತು ಅಂದ್ರೆ ಬಿ.ಪಿ.ಶುಗರು ಎಲ್ಲಾ ಅಂಟಿಕೊಂಡುಬಿಡುತ್ತವೆ "ಅಂತ. ಆದರೆ ನಿಜವಾಗಿಯೂ ಅವೆರಡೂ ಕಾಯಿಲೆಗಳಲ್ಲ ಬದಲಿಗೆ ನಮ್ಮ ಒತ್ತಡಗಳಿಗೆ ಶರೀರ ಸ್ಫಂದಿಸುವ ರೂಪಗಳು! ಇನ್ನು ಅಪರೂಪಕ್ಕೆ ತೀರಾ ಎಳೆಯರಲ್ಲೂ ಈ ನ್ಯೂನತೆಗಳು ಕಂಡುಬಂದರೆ ಅದಕ್ಕೆ ಅವರ ಆಹಾರ-ವ್ಯವಹಾರ ಕಾರಣವಿರಬಹುದು ಅಥವಾ ಇನ್ಯಾವುದೋ ರಾಸಾಯನಿಕ ಮಿಶ್ರಿತ ಆಹಾರ ಸೇವನೆಯ ದುಷ್ಪರಿಣಾಮ ಇರಬಹುದು.

ಚಂದದ ಹುಡುಗಿಯರ ಬಗ್ಗೆಯಂತೂ ಬರೆಯುವುದೇ ಬೇಡ. ಅವರು ಚಂದವಿದ್ದಾರೆಂದು ಅವರಿಗೇ ಪ್ರಾಯಕ್ಕೆ ಬರುವಾಗ ತಿಳಿದು ಹೋಗಿರುತ್ತದೆ. ದಿನಂಪ್ರತಿ ಹಲವಾರು ಗಂಟೆ ನಿಲುಗನ್ನಡಿಯ ಮುಂದೆ ನಿಂತು ಆತ್ಮರತಿಯಲ್ಲಿ ತೊಡಗುತ್ತಾರೆ. ’ಕೇವಲ ಮೊದಲನೋಟದಲ್ಲೇ ಪ್ರೇಮ’ ಎಂಬ ಜನ ಅವರುಗಳ ಹಿಂದೆ ಬೀಳುತ್ತಾರೆ. ಈ ಹುಡುಗಿಯರು ತೊಡುವ ತರಾವರಿ ಬಟ್ಟೆಗಳೂ ಕೂಡ ಎಲ್ಲವನ್ನೂ ’ಅಪಾರ’ದರ್ಶಕವಾಗಿಸುವತ್ತ ಹೋಗುತ್ತಿರುವಾಗ ಬೇಡವೆಂದರೂ ಹುಡುಗಿಯರ ಬಟ್ಟೆಗಳೇ ಹಲವೊಮ್ಮೆ ಹಲವು ಹುಡುಗರನ್ನು ಸೆಳೆಯುತ್ತವೆ, ಏಕಕಾಲಕ್ಕೆ ಅನೇಕ ಪ್ರೇಮಕೊಂಡಿಗಳು ಕುದುರುತ್ತವೆ. ದ್ವೇಷ-ಕೊಲೆಗಳಲ್ಲಿ ಅವುಗಳ ಪರ್ಯವಸಾನವಾಗುತ್ತದೆ. ಚಂದದ ಹುಡುಗಿಯರನ್ನು ಬೆಳೆಸುವ ಅಪ್ಪ-ಅಮ್ಮರಿಗೆ ಖರ್ಚೇನೂ ಸಣ್ಣಾಟದ್ದಲ್ಲ ! ಅವರುಗಳ ಹಲವು ಥರದ ಬಟ್ಟೆಗಳು, ಬಣ್ಣಗಳು, ಕ್ರೀಮುಗಳು, ಮಾರ್ಜಕಗಳು, ಅತ್ತರುಗಳು ಒಂದೇ ಎರಡೇ ? ಸುಮಾರಿನ ಅಪ್ಪ ಅಯ್ಯಯ್ಯಪ್ಪ !

ಹತ್ತು ಹಣ್ಣುಗಳನ್ನು ಬುಟ್ಟಿಯಲ್ಲಿಟ್ಟಾಗ ಕೊಳ್ಳುವ ಗಿರಾಕಿ ಚೆನ್ನಾಗಿರುವುದನ್ನು ಆಯುವುದು ಸಹಜ. ಆದರೆ ಅದೇ ಹಣ್ಣು ಹಲವರ ಆಯ್ಕೆಯಾದಾಗ ಅದಕ್ಕೆ ಬೇಡಿಕೆ ಹೆಚ್ಚಾಗಿ ದುಬಾರಿಯಾಗಬಹುದು. ಚಂದದ ಹಣ್ಣು ಮತ್ತೆ ಬರುತ್ತದೆ, ಅದು ಮುಗಿದುಹೋದ ಅಧ್ಯಾಯವೇನೂ ಅಲ್ಲವಲ್ಲ. ಹಾಗಾಗಿ ಅದಕ್ಕಾಗಿ ಕರುಬುವುದು ಬೇಡ. ಅದು ಬರದಿದ್ದರೂ ಪರವಾಗಿಲ್ಲ. ಅದನ್ನು ಕೊಂಡು ತಿಂದಷ್ಟೇ ಖುಷಿಯಾಗಿರೋಣ. ಅದಕ್ಕಾಗಿ ಏನು ಮಾಡಬೇಕೆನ್ನುತ್ತೀರಿ ? ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕು. ನಿಗ್ರಹದ ಒಂದು ಭಾಗ ಇದು. ಮನಸ್ಸು ನಮ್ಮ ಹಿಡಿತದಲ್ಲಿರಬೇಕೇ ವಿನಃ ಮನಸ್ಸಿನ ಕೈಗೆ ನಮ್ಮನ್ನು ನಾವು ಕೊಟ್ಟುಕೊಳ್ಳಬಾರದು. ಇದಕ್ಕೊಂದು ಉದಾಹರಣೆ ನೀಡಿ ಈ ಲೇಖನವನ್ನು ಮುಗಿಸುತ್ತೇನೆ :

ಒಬ್ಬ ಸನ್ಯಾಸಿಯಿದ್ದ. ಹೇಳೀ ಕೇಳೀ ಸನ್ಯಾಸಿ ಎಂದರೆ ಯಮ, ನಿಯಮ, ಆಸನ ಮೊದಲಾದವುಗಳಿಂದ ದೇಹವನ್ನು ದಂಢಿಸುವಾತ. ಅತೀವ ತಪಸ್ಸಿನಲ್ಲಿ ತೊಡಗಿದ್ದ ಆತ ತಪಸ್ಸಿನಿಂದ ಆಚೆಬಂದ ಹೊತ್ತಿನಲ್ಲಿ ಸಿಹಿಯಾದ ಪೇಡೆಗಳನ್ನು ತಿನ್ನುವ ಇಚ್ಛೆಯಾಯಿತಂತೆ. ಸನ್ಯಾಸಿಯೂ ಮನುಷ್ಯನೇ ತಾನೇ ? ಪೇಡೆಯ ನೆನಪಾಗಿ ಬಾಯಲ್ಲಿ ನೀರೂರಿತು. ಅದೇ ಮನಸ್ಸಿನಲ್ಲಿ ಸನ್ಯಾಸಿ ಹೊಳೆಯ ದಂಡೆಗೆ ಸ್ನಾನಕ್ಕೆ ತೆರಳಿದ. ಹಾಗೆ ಹೋದಾತ ಮಾರನೇದಿನದವರೆಗೂ ಬರಲೇ ಇಲ್ಲ! ಇತ್ತ ಆತನ ಶಿಷ್ಯರು ಆತ ಬರುತ್ತಾನೆಂದು ಕಾದೇ ಕಾದರು. ಆದರೂ ಬರಲಿಲ್ಲವಲ್ಲಾ ಎಂದು ಕಳವಳಿಸುತ್ತಾ ಹುಡುಕುತ್ತಾ ಮಾರನೇ ಬೆಳಿಗ್ಗೆ ಆ ನದಿಯ ದಡಕ್ಕೆ ಬಂದರು. ದೂರದಲ್ಲಿ ಬರುತ್ತಿರುವ ಶಿಷ್ಯರನ್ನು ಕಂಡು ಸನ್ಯಾಸಿ ಜೋರಾಗಿ ಹೇಳಲಾರಂಭಿಸಿದ " ನೋಡು ನನ್ನ ಶಿಷ್ಯರೆಲ್ಲಾ ಹೆದರಿಕೊಂಡು ಹುಡುಕುತ್ತಾ ಬರುವ ಹಾಗೇ ಮಾಡಿದಿಯಲ್ಲ ಬಡ್ಡೀ ಮಗನೆ ಇನ್ನಾದರೂ ಪೇಡೆ ತಿನ್ನುವ ಚಪಲವನ್ನು ಬಿಡು " ಸನ್ಯಾಸಿಯ ಜೊತೆಗೆ ಯಾರೂ ಇರಲಿಲ್ಲದಿದ್ದರೂ ಸನ್ಯಾಸಿ ಬೈಯ್ಯುತ್ತಿರುವುದನ್ನು ಶಿಷ್ಯರು ಕಾಣುತ್ತಿದ್ದರು. ಆಮೇಲೆ ಗುರುವನ್ನು ಸಮೀಪಿಸಿ ಕೇಳಿದಾಗ ಆತ ಅತ್ಯಂತ ಸಂತೋಷದಿಂದ ನಗುತ್ತಾ ಹೇಳಿದ " ನನ್ನೊಳಗಿನ ಬಡ್ಡೀಮಗನಿಗೆ ಪೇಡೆ ತಿನ್ನುವ ಚಪಲ ಜಾಸ್ತಿಯಾಗಿಬಿಟ್ಟಿತ್ತು. ಏನೇ ಹೇಳಿದರೂ ಕೇಳುತ್ತಿರಲಿಲ್ಲ. ಅದಕ್ಕೇ ನೀರಲ್ಲಿ ಸ್ನಾನಮಾಡಿಸಿ ನಿನ್ನೆಯಿಂದ ಇಲ್ಲೇ ಕಟ್ಟಿಹಾಕಿದ್ದೆ. ಈಗ ಪೇಡೆಯೇನೂ ಬೇಡ ಎನ್ನುತ್ತಿದ್ದಾನೆ, ನಡೀರಿ ಹೋಗೋಣ "

ಸಮಾಜಕ್ಕೆ ಸನ್ಯಾಸಿಗಳು ಮಾರ್ಗದರ್ಶಕರು. ಆಚರಿಸಿ ತೋರಿಸುವುದರಿಂದ ಅವರುಗಳನ್ನು ಆಚಾರ್ಯರು ಎನ್ನುತ್ತೇವೆ. ಚಂದದ್ದೆಲ್ಲಾ ನಮ್ಮದಾಗಬೇಕೆಂಬ ಬಯಕೆಯ ವಿಷಯದಲ್ಲಿ ಈ ಸನ್ಯಾಸಿಯಿಂದ ಆ ಒಂದು ತತ್ವವನ್ನು ತಿಳಿದ ನಾವು ಅದನ್ನು ಹತ್ತಂಶದಷ್ಟಾದರೂ ಅಳವಡಿಸಿಕೊಂಡರೆ ನಮಗೇ ಒಳಿತಲ್ಲವೇ ?