ಕೋಂಪ್ಲಾನ್ ಬಾಯ್ ಬೋರ್ನವೀಟಾ ಕುಡಿದ ಸಂಭ್ರಮ !
ಬ್ಲಾಗಿಗ ಮಿತ್ರರಿಗೆ ಕೋಂಪ್ಲಾನ್ ಬಾಯ್ ಬಗ್ಗೆ ಹೊಸದಾಗಿ ಹೇಳುವುದು ಬೇಕಾಗಿಲ್ಲವೇನೋ, ಯಾಕೆಂದರೆ ಅವರು ಅಷ್ಟು ಪರಿಚಿತರು. ವಯಸ್ಸು ಕೇವಲ ೭೫ ಹುಮ್ಮಸ್ಸು ೨೫ರದ್ದು! ಛಾಯಾಚಿತ್ರ ಜಗತ್ತಿನಲ್ಲಿ ಅವರದ್ದೇ ಆದ ವಿಭಿನ್ನ ಛಾಪು ಮೂಡಿಸಿದ ವ್ಯಕ್ತಿ. ೨೦೧೦ ಆಗಷ್ಟ್ ತಿಂಗಳ ಬ್ಲಾಗಿಗರ ಕೂಟದಲ್ಲಿ ತಮಾಷೆಗಾಗಿ ಆಯೋಜಿಸಿದ್ದ ಸರ್ಪ್ರೈಸ್ ಗಿಫ್ಟ್ ನಲ್ಲಿ ಕೋಂಪ್ಲಾನ್ ಪಡೆದು ಅದನ್ನು ಕೈಯ್ಯಲ್ಲಿ ಎತ್ತಿಹಿಡಿದು ನಗೆಯಾಡಿದವರು. ಈಗಲಾದರೂ ನೆನಪಾಯಿತಲ್ಲ : ಎಮ್.ಶ್ರೀನಿವಾಸ ಹೆಬ್ಬಾರ ಎಂಬುದು ನಾಮಧೇಯ. ಅವರಿಗೆ ಮೊನ್ನೆ ಭಾರತೀಯ ವಿದ್ಯಾಭವನದಲ್ಲಿ ಈ. ಹನುಮಂತರಾವ್ ಸ್ಮಾರಕ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಇದು ನಮ್ಮ ಕೋಂಪ್ಲಾನ ಬಾಯ್ ಬೋರ್ನವೀಟಾ ಕುಡಿದ ಕ್ಷಣವೇನೋ ಅನ್ನಿಸಿತು !
ಸುಮಾರು ೧೯೫೦ರ ದಶಕದಿಂದ ಆರಂಭಿಸಿ ೧೯೯೦ರ ದಶಕದ ವರೆಗೂ ತಮ್ಮ ಛಾಯಾಗ್ರಹಣವನ್ನು ನಡೆಸಿದ್ದ ಹೆಬ್ಬಾರರು ಗಣ್ಯ ಹಿರಿಯ ತಲೆಗಳಿಗೆ ಚೆನ್ನಾಗಿ ಪರಿಚಿತರು. ಹಲವರಿಗೆ ಫೋಟೋಗ್ರಫಿ ಮಾಡಿಕೊಟ್ಟ ಹೆಗ್ಗಳಿಕೆ ಅವರದು. ಅದಲ್ಲದೇ ಫೋಟೋಗ್ರಫಿಯಲ್ಲಿ ಕಲೆಯನ್ನು ಹೊರಸೂಸುವ ಚಾಕಚಕ್ಯತೆ ಅವರಿಗೆ ಆ ಕಾಲದಲ್ಲೇ ಮೈಗೂಡಿತ್ತು. ಅಂದಿನ ಕ್ಯಾಮೆರಾಗಳು ಮೆಕಾನಿಕಲ್ ಸ್ಟಿಲ್ ಕ್ಯಾಮೆರಾಗಳು. ತೆಗೆಯುವ ಚಿತ್ರಗಳು ರೀಲ್ ಅಥವಾ ಫಿಲ್ಮ್ ರೋಲ್ ಮೇಲೆ ಕೇವಲ ನೆಗೆಟಿವ್ ಬಿಂಬಗಳಾಗಿ ಮೂಡುವಂತಹ ದಿನಗಳು. ಚಿತ್ರಗಳ ಗ್ರಹಣ ಮುಗಿದಮೇಲೆ ಖಗ್ರಾಸ ಗ್ರಹಣಹಿಡಿದ ಕೊಠಡಿಯಲ್ಲಿ ನಿಂತು ಕಪ್ಪು ಬಟ್ಟೆಯ ಒಳಗೆ ನಿಧಾನಕ್ಕೆ ಫಿಲ್ಮ ರೋಲ್ ಕ್ಯಾಮೆರಾದಿಂದ ಹೊರತೆಗೆದು ಅದನ್ನು ಸಂಬಂಧಿಸಿದ ಕೆಮಿಕಲ್ ನಲ್ಲಿ ಹಾಕಿ ಆಮೇಲೆ ಅದನ್ನು ಪಾಸಿಟಿವ್ ಆಗಿ ಇನ್ನೊಂದು ಫಿಲ್ಮ್ ಕಾಗದದಮೇಲೆ ಅಚ್ಚಿಸಬೇಕಾಗುತ್ತಿತ್ತು. ಇದನ್ನು ತೊಳೆಯುವ ಕೆಲಸ ಎನ್ನುತ್ತಿದ್ದರು! ತೊಳೆಯುವ ಕೆಲಸದಲ್ಲಿ ತುಸು ವ್ಯತ್ಯಾಸವಾದರೆ ಚಿತ್ರಗಳು ಸ್ಫುಟವಾಗಿ ಮೂಡುತ್ತಿರಲಿಲ್ಲ. ಚಿತ್ರಗಳು ಅಚ್ಚಾದಮೇಲೆ ಮತ್ತೆ ಅವುಗಳನ್ನು ತಿದ್ದಲು ಇಂದಿನಂತೇ ಫೋಟೋಶಾಪ್ ತಂತ್ರಾಂಶ ಇರುವ ಕಾಲ ಅದಲ್ಲ! ಹೀಗಾಗಿ ಫೋಟೊಗ್ರಾಫರ್ ಆಗಿದ್ದವರು ಚಿತ್ರಗಳ ಡೆವಲಪ್‍ಮೆಂಟ್ ಮತ್ತು ಪ್ರಾಸೆಸಿಂಗ್‍ನಲ್ಲಿ ಸಾಕಷ್ಟು ಪರಿಣತರಾಗಿರಬೇಕಾಗುತ್ತಿತ್ತು. ಅಂದು ನಿಜಕ್ಕೂ ಅದು ಕೇವಲ ಕೆಲವರಿಗಷ್ಟೇ ಮೀಸಲಾದ ಸಾಧನೆ. ಆ ಸಾಧಕರು ಫೋಟೋಗ್ರಫಿಯಲ್ಲಿ ತಪಸ್ಸನ್ನು ಮಾಡುವವರಾಗಿದ್ದರು. ಅಂತಹ ಸಾಧಕರಲ್ಲಿ ಹೆಬ್ಬಾರರೂ ಒಬ್ಬರು.
ಅವರದೇ ಮಾತಿನಲ್ಲಿ ಹೇಳುವುದಾದರೆ ತೆಗೆದ ಚಿತ್ರಗಳನ್ನು ಸರಿಯಾಗಿ ಒಪ್ಪಿಸಬೇಕಾದರೆ ಪ್ರಾಸೆಸಿಂಗ್ ಹಂತದಲ್ಲಿ ಸಮಾಧಾನವಾಗುವವರೆಗೂ ನಾಕಾರು ಸರ್ತಿ ಮರುಪ್ರಯತ್ನಮಾಡಿ ಚಿತ್ರಗಳ ಗುಣಮಟ್ಟವನ್ನು ಉತ್ತಮವಾಗಿಸಬೇಕಾಗುತ್ತಿತ್ತು. ಹೀಗೆ ತೆಗೆದ ಅಂದಿನ ಹಲವು ಕಪ್ಪು-ಬಿಳುಪು ಚಿತ್ರಗಳು ಇಂದಿಗೂ ನಳನಳಿಸುತ್ತಿವೆ. ವಿಷಾದವೆಂದರೆ ಮೊನ್ನೆಮೊನ್ನೆ ಕೆಲವರು ತೆಗೆದ ಬಣ್ಣದ ಚಿತ್ರಗಳು ಅದಾಗಲೇ ಅಳುತ್ತಿವೆ !! ಬಣ್ಣಗಳ ಮೇಲೆ ಅದೇನೋ ಹೊಸ ಕಲೆಗಳು ಮೂಡಿ ಮೂಲ ಚಿತ್ರ ಕಳೆಗುಂದಿ ಚಿತ್ರಗಳಲ್ಲಿರುವ ಕಲೆ ಮಾಯವಾಗಿದೆ. ಫೋಟೋಗ್ರಾಫರ್ ಕೇವಲ ವೃತ್ತಿಗಾಗಿ ಅದನ್ನು ಆಯ್ದುಕೊಂಡವನಾಗಿರದೇ ಆವನೊಬ್ಬ ಕಲಾವಿದನೂ ಕಲಾರಸಿಕನೂ ಆಗಿದ್ದರೆ ಆತ ತೆಗೆಯುವ ಚಿತ್ರಗಳಲ್ಲಿ ನೋಡುವಂತಹ ’ಜಾದೂ’ ಇರುತ್ತದೆ. ಇದು ಸಿನಿಮಾ ಚಿತ್ರೀಕರಣ ಮಾಡಿದ ಕೆಲವು ಮಹಾನುಭಾವರಿಗೂ ಅನ್ವಯವಾಗುತ್ತದೆ. ಒಳಗಿನ ಕಲಾವಿದನನ್ನು ಓಲೈಸಿ ಪಡೆದ ಚಿತ್ರಗಳಾದರೆ ಆ ಚಿತ್ರಗಳು ನೋಡುಗರ ಹೃದಯವನ್ನು ಸೂರೆಗೈಯ್ಯುವುದರಲ್ಲಿ ಸಂದೇಹವಿರುವುದಿಲ್ಲ. ಬದಲಿಗೆ ಎಲ್ಲರೂ ಮಾಡುತ್ತಾರೆ ಅದೇನು ಮಹಾ ಎಂದು ಫೋಟೋ ತೆಗೆಯುತ್ತಿದ್ದರೆ ಅದು ’ಫೋಟೋ ಜಾತಿ’ಯೇ ’ಜಾತಿ ಫೋಟೋ’ ಆಗುವುದಿಲ್ಲ !
ಇಂದಿನ ಆಧುನಿಕ ಕಾಲಮಾನದಲ್ಲಿ ವಿದ್ಯುನ್ಮಾನದ ನಾನಾಹಂತದ ಆವಿಷ್ಕಾರಗಳಿಂದ ಮಿರರ್ ಲೆಸ್ ಕ್ಯಾಮೆರಾಗಳವರೆಗೂ ತಾಂತ್ರಿಕತೆ ಹಬ್ಬಿದೆ ! ಡಿಜಿಟಲ್ ಕ್ಯಾಮೆರಾಗಳು ಬಂದಮೇಲಂತೂ ಎಂಥಾ ಹುಚ್ಚನೂ ಛಾಯಾಚಿತ್ರ ತೆಗೆಯಬಹುದಾದಷ್ಟು ಸಲೀಸಾಗಿದೆ. ಮೊದಲಿನ ಫೋಟೋಗ್ರಾಫರ್ಸ್ ಅನುಭವಿಸದ ಕಷ್ಟ ಈಗಿನವರಿಗಿಲ್ಲ. ನೋಡುಗನಿಗೊಂದು ಒಳ್ಳೆಯ ದೃಷ್ಟಿಕೋನವಿದ್ದರೆ ಚಿತ್ರಗಳು ಸುಂದರವಾಗಿ ಬಂದುಬಿಡುತ್ತವೆ. ಮೇಲಾಗಿ ತೆಗೆದ ಚಿತ್ರಗಳನ್ನು ತಕ್ಷಣ ನೋಡಬಹುದಾಗಿದೆ, ಸರಿಬಂದಿಲ್ಲವಾದರೆ ಮತ್ತೊಮ್ಮೆ ಪ್ರಯತ್ನಿಸಿ ಸರಿಪಡಿಸಬಹುದಾಗಿದೆ. ಆದರೂ ಕೆಲವರು ಎಡವುತ್ತಾರೆ. ಕೆಲವು ಚಿತ್ರಗಳಲ್ಲಿ ಯಾರದ್ದೋ ತಲೆಗಳನ್ನೇ ಹಾರಿಸಿರುತ್ತಾರೆ, ಇನ್ಯಾರಿಗೋ ಕೈಕಾಲುಗಳೇ ಇರುವುದಿಲ್ಲ, ಇನ್ನಷ್ಟು ಫೋಟೋಗಳು ತಮ್ಮದೇ ಹೌದೋ ಎಂದು ತೆಗೆಸಿಕೊಂಡವರು ಸಂಶಯಾಸ್ಪದವಾಗಿ ನೋಡುವಹಾಗೇ ಮುಖ ಊದ್ದುದ್ದವೋ ಅಡ್ಡಡ್ಡವೋ ಬಂದಿರುವಂತೇ ತೆಗೆಯುತ್ತಾರೆ. ಒಟ್ಟಾರೆ ಹೇಳುವುದಾದರೆ ಇವತ್ತಿಗೆ ಫೋಟೋಗ್ರಾಫಿ ಕಷ್ಟದಾಯಕವಲ್ಲ. ’ಇಂಗು ತೆಂಗು ಎರಡಿದ್ದರೆ ಮಂಗಮ್ಮನಾದರೂ ಅಡುಗೆಮಾಡುತ್ತದಂತೆ’ ಎಂಬ ಗಾದೆಯೊಂದು ನಮ್ಮಲ್ಲಿ ವಾಡಿಕೆಯಲ್ಲಿದೆ. ಅದೇ ರೀತಿ ತಕ್ಕಮಟ್ಟಿಗೆ ಉತ್ತಮವಾದ ಡಿಜಿಟಲ್ ಕ್ಯಾಮೆರಾವೊಂದಿದ್ದರೆ, ಫೋಟೋಗೆ ತಕ್ಕುದಾದ ಪರಿಸರವಿದ್ದರೆ ಚಿತ್ರಗಳು ಬಹುತೇಕ ಚೆನ್ನಾಗಿ ಬಂದಂತೆಯೇ.
ಇವತ್ತಿನ ಕಮರ್ಷಿಯಲೈಸೇಶನ್ ನಲ್ಲಿ ಎಲ್ಲವೂ ಹರಿಬಿರಿ, ಈಗ ತೆಗೆದ ಚಿತ್ರಗಳನ್ನು ಗಂಟೆಯೊಂದರಲ್ಲೇ ಪಡೆದುಬಿಡುತ್ತೇವೆ! ಆದರೆ ಚಿತ್ರಗಳ ಕಾಗದ ಮತ್ತು ಬಣ್ಣಗಳ ಗುಣಮಟ್ಟ ಪಸಂದಾಗಿರುವುದಿಲ್ಲ. ಕೊಡ್ಯಾಕ್ ಕಂಪನಿಯಂತಹ ಕೆಲವು ಫೋಟೋ ಮಾರ್ಟ್ ಕಂಪನಿಗಳು ಹಲವು ಪ್ರಾಸೆಸಿಂಗ್ ಯಂತ್ರಗಳನ್ನು ತಯಾರಿಸಿದ್ದಾರೆ. ಆದರೆ ಅವರು ಹೇಳಿದ ಉತ್ತಮ ವಸ್ತುಗಳನ್ನು ಬಳಸದೇ [ಹಣವುಳಿಸುವ ಉದ್ದೇಶದಿಂದ] ಕೀಳುಗುಣಮಟ್ಟದ ವಸ್ತುಗಳನ್ನು ಬಳಸುವುದರಿಂದ ಚಿತ್ರಗಳು ಬಹುಬೇಗ ಕೆಡುತ್ತವೆ! ಕೆಲವು ಲ್ಯಾಬ್ ಗಳಲ್ಲಿ ಚಿತ್ರಗಳಿಗೆ ಬಣ್ಣಹಚ್ಚುವ ಯಂತ್ರಗಳಲ್ಲಿ ಅವುಗಳ ಗಾಢಾಂಶ [ಥಿಕ್‍ನೆಸ್] ನಿಯಂತ್ರಕದಲ್ಲಿ ಕಮ್ಮಿ ಆಯ್ಕೆಮಾಡಿ ತೆಳುವಾಗಿ ಬಣ್ಣಲೇಪಿಸುವುದರಿಂದಲೂ ಚಿತ್ರಗಳು ಕೆಡುತ್ತವೆ ಅಥವಾ ಮಾಸಲು ಚಿತ್ರಗಳಾಗಿ ಕಾಣುತ್ತವೆ. ಇವುಗಳನ್ನು ಪ್ರತ್ಯಕ್ಷವಾಗಿ ಅನುಭವಿಸಿ ಹೇಳುತ್ತಿದ್ದೇನೆ. ಬೆಂಗಳೂರಿನ ಹೆಸರಾಂತ ಜಿ.ಕೆ.ವೇಲ್ ನಲ್ಲಿ ಅಚ್ಚಿಸಿದ ಚಿತ್ರಗಳಿಗಿಂತ ಕುಂದಾಪುರದಲ್ಲಿ ಅಚ್ಚಿಸಿದ ಚಿತ್ರಗಳು ಬಹಳ ಮುದ್ದಾಗಿ ಕಾಣುತ್ತವೆ. ಈ ಅನುಭವ ನಿಮ್ಮದಾಗಬೇಕಾದರೆ ನಾಕಾರು ಲ್ಯಾಬ್ ಗಳಲ್ಲಿ ಒಮ್ಮೊಮ್ಮೆ ಚಿತ್ರ ಅಚ್ಚಿಸಿ ಪಡೆದು ನೋಡಬೇಕಾಗುತ್ತದೆ, ಸರ್ವ ಕಾಂಚಾಣಮಯಂ ಜಗತ್ ! ಭೌಗೋಳಿಕ ಸನ್ನಿವೇಶಗಳು ಮತ್ತು ವಾತಾವರಣಗಳೂ ಚಿತ್ರಗಳಮೇಲೆ ಪರಿಣಾಮ ಬೀರುತ್ತವೆ. ಕರಾವಳಿಯಲ್ಲಿ ಇಂದಿನ ಕಲರ್ ಚಿತ್ರಗಳು ಬಹುಬೇಗ ಹಾಳಾಗುತ್ತವೆ. ಅಲ್ಲಿನ ಹವೆಯಲ್ಲಿನ ಉಪ್ಪಿನಂಶವೂ ಅದಕ್ಕೆ ಕಾರಣವಿರಬಹುದು. ಆದರೆ ೪೦-೫೦ ವರ್ಷ ಹಳೆಯ ಕಪ್ಪು-ಬಿಳುಪು ಚಿತ್ರಗಳು ಇನ್ನೂ ಚೆನ್ನಾಗಿದ್ದುದುದು ನನ್ನ ಅಶ್ಚರ್ಯಕ್ಕೆ ಕಾರಣವಾಗಿದೆ.
ಇನ್ನು ಹೆಬ್ಬಾರರ ಬಗ್ಗೆ ಒಂದೆರಡು ಮಾತು. ಸಹೃದಯೀ ಹೆಬ್ಬಾರರು ’ಅರುಣ ಚೇತನ’ ಎಂಬ ಅಂಗವಿಕಲರ ಶಾಲೆಯೊಂದನ್ನು ನಡೆಸುತ್ತಿದ್ದಾರೆ. ಅದರಲ್ಲಿ ಮಾಂಸದಮುದ್ದೆಯಂತಹ ಅಂಗವಿಕಲ ಹಸುಗೂಸುಗಳನ್ನು ತರಬೇತುಗೊಳಿಸಿ ಸಮಾಜದಲ್ಲಿ ಎಲ್ಲರಂತೇ ಆ ಮಕ್ಕಳು ಬೆಳೆದು ಬದುಕಲು ಅನುಕೂಲ ಕಲ್ಪಿಸುತ್ತಾರೆ. ಅದಕ್ಕಾಗಿ ಸರಕಾರದ ಯಾವುದೇ ನೆರವು ಪಡೆದಿಲ್ಲ ಬದಲಾಗಿ ಸಾರ್ವಜನಿಕರಲ್ಲಿ ಉಳ್ಳವರಲ್ಲಿ ದೇಣಿಗೆ ಸ್ವೀಕರಿಸಿ ಆ ಶಾಲೆಯನ್ನು ನಡೆಸುತ್ತಾರೆ. ವರ್ಷದ ಹಿಂದೆ ಅವರು ಹೇಳಿದ್ದು- ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಹಸಿದವರಿಗೆ ಊಟನೀಡುವ ಕಾರ್ಯಕ್ರಮ ಕೂಡ ಅವರ ಕೆಲವು ಕಾರ್ಯಗಳಲ್ಲಿ ಒಂದಾಗಿದೆ. ಉಳ್ಳವರು ಯಾರದರೂ ದಾನ-ಧರ್ಮಮಾಡಲು ಮುಂದಾದರೆ, ಅಂಥವರಿಂದ ಅನ್ನದಾನವನ್ನು ಏರ್ಪಡಿಸುತ್ತಾರೆ. ಹೀಗೇ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವುದು ಕಾಣಸಿಗುತ್ತದೆ. ಅಂಗವಿಕಲ/ಬುದ್ಧಿಮಾಂದ್ಯ ಮಕ್ಕಳು ಹುಟ್ಟುವ ವಿಷಯ ಜ್ಯೋತಿಷ್ಯದ ಮೂಲಕ ಪರಿಗಣಿಸಿ ತಿಳಿದುಕೊಳ್ಳಬಹುದೇ ಎಂಬ ಕುತೂಹಲದಿಂದ ಜ್ಯೋತಿಷ್ಯವನ್ನು ಐಚ್ಛಿಕವಾಗಿ ಅಭ್ಯಸಿಸಿದ್ದಾರೆ. ಆದರೆ ಅವರು ವೃತ್ತಿ ಜ್ಯೋತಿಷ್ಕರಲ್ಲ, ಅದೊಂದು ಪ್ರವೃತ್ತಿ ಅಷ್ಟೆ. ಹೆಬ್ಬಾರರು ಇಂದಿನ ಕ್ಯಾಮೆರಾಗೂ ಅಡ್ಜೆಸ್ಟಾಗಿದ್ದು ಫೋಟೋಶಾಪ್ ಕೂಡ ಬಳಸುತ್ತಾರೆ. ನಿತ್ಯವೂ ಬೆಳಿಗ್ಗೆ ಶುಭೋದಯದ ಸಂದೇಶ ನನ್ನ ಜಂಗಮವಾಣಿಗೆ ತಲ್ಪುತ್ತದೆ.
ಕೊಟ್ಟಕಾಸಿನ ಜೊತೆಗೆ ಕೊಡದ ಕಾಸನ್ನೂ ಕಬಳಿಸುವ ಕೆಟ್ಟಸಂಸ್ಕೃತಿ ಮೆರೆಯುತ್ತಿರುವಾಗ ಅಲ್ಲಲ್ಲಿ ಎಲೆಮರೆಯ ಕಾಯಿಯಂತೇ ಕೆಲವು ಜನ ಅದರಾಚೆ ನಿಂತು ತಾವು ಹಾಗಲ್ಲ ಎಂದು ಸಾಬೀತುಪಡಿಸುತ್ತಾರೆ. ಸನ್ಮಾನವಾಗಿ ಬಂದ ಹತ್ತುಸಾವಿರ ರೂಪಾಯಿ ಹಣವನ್ನು ತಾವೇ ಹುಟ್ಟುಹಾಕಿದ ’ಅರುಣಚೇತನ’ಕ್ಕೆ ಕೊಟ್ಟ ಹೆಬ್ಬಾರರ ಕೆಲಸವನ್ನು ಈ ವಿಷಯದಲ್ಲೂ ಇಲ್ಲಿ ನೆನೆಯಬೇಕಾಗುತ್ತದೆ. ಸನ್ಮಾನದ ವೇದಿಕೆಯಲ್ಲಿ ಅವರು ’ಅರುಣಚೇತನ’ದ ವಿಷಯ ಪ್ರಸ್ತಾಪಿಸಿದ ಮರುಘಳಿಗೆಯಲ್ಲೇ ಕೆಲವರು ೫ರಿಂದ ಹತ್ತುಸಾವಿರ ರೂಪಾಯಿಗಳನ್ನು ನೀಡುವುದಾಗಿ ಯಾವುದೇ ಒತ್ತಾಯವಿಲ್ಲದೇ [ಸ್ವಯಂ]ಘೋಷಿಸಿದ್ದಾರೆ.
ಹೆಬ್ಬಾರರಿಗೆ ಸನ್ಮಾನ ಆನೆಗೆ ಅಲಂಕರಿಸಿದಂತೇ ಅಂತನಿಸಿತು ನನಗೆ. ಯಾಕೆಂದರೆ ಆನೆ ಸಹಜ ಸುಂದರ ಪ್ರಾಣಿ. ಗಜಗಾಂಭೀರ್ಯ ಅಂತಾರಲ್ಲ ಗಂಭೀರ ಸುಂದರ ನಡಿಗೆಗೆ ಆನೆ ಹೆಸರುವಾಸಿ. ಆಕಾರದಲ್ಲಿ ಅದರ ಸೌಂದರ್ಯ ಮನದೊಳಗೆ ಅಚ್ಚೊತ್ತಿ ನಿಲ್ಲುವಂಥದು. ಬುದ್ಧಿಮತ್ತೆಯಲ್ಲೂ ಕೂಡ ಪ್ರಾಣಿಗಳಲ್ಲಿ ಮನುಷ್ಯನನ್ನು ಬಿಟ್ಟರೆ ಅತೀ ಬುದ್ಧಿವಂತ ಪ್ರಾಣಿ ಎಂದರೆ ಆನೆ ಎಂಬುದು ಬೆಳಕಿಗೆ ಬಂದ ವಿಷಯ. ಅಂತಹ ಆನೆಗೆ ಅಲಂಕರಿಸಿದಾಗ ಹೇಗೆ ಕಾಣುತ್ತದೆ ಎಂಬುದನ್ನು ಜಂಬೂಸವಾರಿಯಲ್ಲಿ ನೋಡಿದ್ದೀರಿ. ಹಾಗೇ ಇಲ್ಲಿ ಕರ್ತವ್ಯದಲ್ಲಿ ಪರಿಪಕ್ವತೆ ಕೊಡಬಯಸುವ ಹೆಬ್ಬಾರರಿಗೆ ಸನ್ಮಾನ, ಪ್ರಶಸ್ತಿ ಇವುಗಳೆಲ್ಲಾ ಬಂದರೆ ಅದು ಆನೆಗೆ ಮಾಡುವ ಅಲಂಕಾರವಾಗುತ್ತದೆ. ನನ್ನ ಅವರ ಪರಿಚಯ-ಒಡನಾಟ ಬಹಳ ಹಿಂದಿನದೇನಲ್ಲ, ನಾನು ಬ್ಲಾಗ್ ಬರೆಯಲು ಆರಂಭಿಸಿದ ಸಮಯದಿಂದ ಸುಮಾರು ಒಂದೂವರೆ ವರ್ಷದ ಹಿಂದೆಯಷ್ಟೇ ಅವರ ನೇರ ಪರಿಚಯವಾಯಿತು. ಆಮೇಲೆ ಬ್ಲಾಗಿಗರ ಪುಸ್ತಕಗಳ ಬಿಡುಗಡೆಗೆ ಬಂದಾಗ ಆಗೀಗ ಭೇಟಿ, ಜಂಗಮವಾಣಿಯಲ್ಲಿ ಸಂಭಾಷಣೆ ಹೀಗೇ ಅದು ಮುಂದುವರಿದಿದೆ. ಇಷ್ಟೆಲ್ಲಾ ಇದ್ದರೂ ಹೆಬ್ಬಾರರು ಉತ್ತಮ ವಾಗ್ಮಿ ಎಂಬುದು ಹೊರನೋಟಕ್ಕೆ ಯಾರಿಗೂ ತಿಳಿಯುವ ವಿಷಯವಲ್ಲ. ಅವರೊಬ್ಬ ಒಳ್ಳೆಯ ಮಾತುಗಾರ ಕೂಡ. ಉತ್ತಮ ಪುಸ್ತಕಗಳನ್ನು ಓದುವುದು ಅವರ ಹವ್ಯಾಸಗಳಲ್ಲೊಂದು. ಬರಹಗಳ ಕುರಿತಾಗಿ ವಿಮರ್ಶೆಯನ್ನೂ ಮಾಡುತ್ತಾರೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅವರು ಮೌನಿ! ಅದುಯಾಕೋ ಗೊತ್ತಿಲ್ಲ. ಹೆಸರಿಗೆ ’ಹೆಬ್ಬಾರ್ ಪಿಕ್ಚರ್ಸ್’ ಎಂಬ ಬ್ಲಾಗೊಂದಿದ್ದು ಅಲ್ಲಿ ಏನನ್ನೂ ಬರೆದದ್ದನ್ನು ಕಾಣಲಿಲ್ಲ, ಅವರ ಚಿತ್ರಗಳನ್ನೂ ಹಾಕಿರಲಿಲ್ಲವಪ್ಪ. ಅವರ ಅಭಿಪ್ರಾಯ ಮಾತ್ರ ನಿಖರವಾಗಿರುತ್ತದೆ, ನೇರವಾಗಿರುತ್ತದೆ. ದಾಕ್ಷಿಣ್ಯಕ್ಕೆ ಯಾರಿಗೋ ಹೊಗಳಿಕೆ ಹಾಕುವ ಜಯಮಾನ ಅವರದಲ್ಲ.
ಇನ್ನು ಗೂಗಲ್ ಬಜ್‍ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಕೆಲವು ಮಹನೀಯ ದೋಸ್ತರುಗಳು ಯಾರೂ ಅಂದಿನ ಸಮಾರಂಭದಲ್ಲಿ ಕಾಣಸಿಗಲಿಲ್ಲ. ದೂರದಲ್ಲಿರುವ ಗೆಳೆಯರಿಗೆ ಬರಲು ಕಷ್ಟ ಎಂದಿಟ್ಟುಕೊಂಡರೂ ಹತ್ತಿರದಲ್ಲಿ ಅದೂ ಬೆಂಗಳೂರಲ್ಲಿ ಇರುವ ಬ್ಲಾಗಿಗ ಮಿತ್ರರಿಗೆ ಬಹುಶಃ ಸಮಯವಾಗಲಿಲ್ಲವೇನೋ ಅನಿಸುತ್ತದೆ. ಬ್ಲಾಗಿಗರಲ್ಲಿ ಶಶಿ ಜೋಯಿಸ್ ಮತ್ತು ದಿಗ್ವಾಸ್ ಹೆಗಡೆ ಕಾಣಸಿಕ್ಕರು. ಹೋಗಲಿಬಿಡಿ ಸಭೆ ಕಿಕ್ಕಿರಿದ ಜನಸಂದಣಿಯಿಂದ ತುಂಬಿತ್ತು. ಬಂದ ಬಹುತೇಕ ಜನರೆಲ್ಲಾ ಅವರವರ ರಂಗಗಳಲ್ಲಿ ಪರಿಣತರೂ ಮತ್ತು ಪ್ರಬುದ್ಧ ಮನಸ್ಕರು ಎಂದಷ್ಟೇ ಹೇಳಬಯಸುತ್ತೇನೆ. ಗಣೇಶನ ದೇವಸ್ಥಾನ ಎಲ್ಲಾದಿನವೂ ತೆರೆದಿರುತ್ತದೆಯಾದರೂ ಮಹಾಚೌತಿಯ ದಿನ ಗಣಪತಿಯ ದರ್ಶನ ಶ್ರೇಷ್ಠವಂತೆ. ಅಂತೆಯೇ ಸನ್ಮಾನಿತರಾದ ಹೆಬ್ಬಾರರನ್ನು ಅಲ್ಲೇ ಕಂಡು ಸಂಭ್ರಮಿಸಿದ, ಅಭಿನಂದಿಸಿದ ಧನ್ಯತಾಭಾವ ನನ್ನದಾಗಿದೆ. ಹೆಬ್ಬಾರರು ನೂರ್ಕಾಲ ಸುಖವಾಗಿ ಬಾಳಲಿ ದಿನಗಳೆದಂತೇ ಇನ್ನೂ ಎಳಬರಾಗುತ್ತಾ ಮಿಕ್ಕುಳಿದ ಎಳಬರಿಗೆ ದಾರಿದೀಪವಾಗಲಿ ಎಂದು ಹಾರೈಸುತ್ತೇನೆ, ನಮಸ್ಕಾರ ಹೆಬ್ಬಾರರಿಗೆ ಹಾಗೂ ಈ ಕಥೆ ಕೇಳಿದ ನಿಮಗೆಲ್ಲರಿಗೆ.