ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, January 2, 2011

ಸೊಗದೇಬೇರಿನ ಶರಬತ್ತು !


ಸೊಗದೇಬೇರಿನ ಶರಬತ್ತು !

ಹದಿನಾರಾಣೆ ಸತ್ಯ ಅಂದರೆ ನಮಗ್ಯಾರಿಗೂ ಗೊತ್ತಿರದ ನಾರು ಬೇರುಗಳ ಕಷಾಯಗಳನ್ನು ಯಾವುದೋ ಒಂದು ಹದದಲ್ಲಿ ಬೆರೆಸಿ ಅಂತೂ ರೋಗಗಳನ್ನು ವಾಸಿಮಾಡುವ ನಮ್ಮ ತಿಪ್ಪಾ ಭಟ್ಟರಿಗೆ ಸೊಗದೇಬೇರಿನ ಶರಬತ್ತು ಎಂದರೆ ಎಲ್ಲಿಲ್ಲದ ಪ್ರೀತಿ ! ಅವರಾಯಿತು ಅವರ ಕೆಲಸವಾಯಿತು ಪಾಪ ಯಾರ ಗೋಜಿಗೂ ಹೋಗದ ಮುಗ್ಧ ಜೀವ ಅದು! ಭಟ್ಟರು ಕಾಯಂ ಬಳಸುವ ದ್ರಾವಣಗಳಲ್ಲಿ ಸೊಗದೇಬೇರಿನ ಶರಬತ್ತೂ ಒಂದು. ಯಾರಿಗೇ ಏನೇ ಆದರೂ ಪ್ರಥಮವಾಗಿ ಅವರು ಕುಡಿಯಲು ಕೊಡುವುದು ಸೊಗದೇಬೇರಿನ ಶರಬತ್ತು. ಅಂದಹಾಗೆ ಈ ಶರಬತ್ತಿನ ಪರಿಚಯ ನಿಮಗಿರಬೇಕಲ್ಲ? ಇಲ್ಲವೇ ? ಹಾಗಾದರೆ ಒಂದೋ ನಾಗಸಂದ್ರದ ಮೂರನೇ ಅಡ್ಡರಸ್ತೆ ಹಾಗೂ ನಾಲ್ಕನೇ ಮುಖ್ಯರಸ್ತೆ ಸೇರುವ ಜಾಗದಲ್ಲಿರುವ ’ತಿರುಮಲೇಶ’ ನಾಮಧೇಯದ ಮನೆಗೆ ಭೇಟಿಕೊಡಿ ಅಥವಾ ಇದು ಸಾಧ್ಯವಾಗದಿದ್ದ ಪಕ್ಷದಲ್ಲಿ ಯಾವುದೇ ಆಯುರ್ವೇದದ ಅಂಗಡಿಗೆ ತೆರಳಿ ಅಲ್ಲಿ ಕೇಳಿ ಸಿಗುತ್ತದೆ! ಅದರ ರುಚಿಯನ್ನು ಬಲ್ಲವರೇ ಬಲ್ಲರು-ಇದು ಭಟ್ಟರಿಂದ ಕಡಾ ಪಡೆದು ಹೇಳಿದ ಮಾತು !

ಎಡವಟ್ಟಾಗಿದ್ದು ಎಲ್ಲಿ ಗೊತ್ತೇ? ಕೆಲವು ವರ್ಷಗಳ ಹಿಂದೆ ನಾನೂ ಅವರೂ ಯಾರದೋ ಮನೆಯಲ್ಲಿ ಲೋಕಾಭಿರಾಮವಾಗಿ ಮಾತನಾಡುತ್ತಿರುವಾಗ ರೇಡಿಯೋ ಕೂಗುತ್ತಿತ್ತು. ಬೆಳ್ಳಂಬೆಳಿಗ್ಗೆ " ಮಗೂಗೆ ಏನಾಯ್ತು .......ವುಡ್ವರ್ತ್ ಗ್ರೈಪ್ ವಾಟರ್ ಕೋಡೀಯಾ ಮಗುವಾಗಿದ್ದಾಗ ನಿಮ್ಮಮ್ಮಂಗೂ ನಾನು ಅದನ್ನೇ ಕೊಡ್ತಿದ್ದೆ " ಎಂದು ಅಜ್ಜಿ ಜಾಹೀರಾತಿನಲ್ಲಿ ಕೂಗುತ್ತಿರುವುದು ಭಟ್ಟರನ್ನು ಕೆರಳಿಸಿಬಿಟ್ಟಿತ್ತು !

" ಇವ್ಕೆಲ್ಲಾ ತಲೆಯಿಲ್ಲ ಜನಮಳ್ಳೊ ಜಾತ್ರೆಮಳ್ಳೋ ನಾವೆಲ್ಲಾ ಬದುಕಿ ಬೆಳೀಲಿಲ್ವಾ ಹೇಳ್ತಾರಪ್ಪ ಗ್ರೈಪ್ ವಾಟರಂತೆ ಗ್ರೈಪ್ ವಾಟರು ನಾವು ಕುಡಿಯೋ ಕಷಾಯಾನೋ ಸೊಗದೇಶರಬತ್ತನ್ನೋ ಕುಡಿಸಿದರೆ ಆಯ್ತಪ್ಪ....ಮಕ್ಳಿಗೆಲ್ಲಾ ಏಕ್ ದಂ ಕಮ್ಮಿ ಆಗ್ತದೆ ಮಾಡೂಕೆ ಬೇರೇ ಕೆಲ್ಸಿಲ್ಲಾ ಅದಕೇ ಇಂಥಾದ್ನೆಲ್ಲಾ ಹಾಕ್ತರೆ ರೇಡಿಯೋದಲ್ಲಿ "

ಭಟ್ಟರು ಏಕಾಏಕಿ ಕೋಪಾವಿಷ್ಟರಾಗಿದ್ದರು. ಅಷ್ಟು ಸಣ್ಣ ವಿಷಯಕ್ಕೆ ಭಟ್ಟರು ನಾರಸಿಂಹಾವತಾರ ತಾಳಿಬಿಟ್ಟಿದ್ದರು. ನಿಮಗೆ ಹೇಳಲು ಮರೆತಿದ್ದೆ-- ಅಲ್ಲಿಗೆ ನಾವು ಹೋಗಿದ್ದು ಯಾರಿಗೋ ಚ್ಯವನಪ್ರಾಶ ಮಾಡಿಕೊಡಲಾಗಿ. ಚ್ಯವನಪ್ರಾಶವನ್ನು ನೀವು ಮನದಣಿಯೇ ತಿಂದಿರಬಹುದು ಅಥವಾ ಕಾಸು ಜಾಸ್ತಿ ಅಂತ ಬಿಟ್ಟಿರಲೂ ಬಹುದು. ಕ್ಯಾಡ್ ಬರೀಸ್ ಚಾಕೋಲೇಟ್ ಗಿಂತ ರುಚಿಯಲ್ಲಿ ಹೆಜ್ಜೆ ಮುಂದಿರುವ ಚ್ಯವನಪ್ರಾಶದಲ್ಲಿ ಇರುವ ಸಾಮಾನುಗಳೇ ಅಂಥದ್ದು. ಉತ್ತುತ್ತೆ,ಒಣ ದ್ರಾಕ್ಷಿ, ಬಾದಾಮಿ, ಯಾಲಕ್ಕಿ, ಲವಂಗ, ಗಸಗಸೆ, ತುಪ್ಪ ಇತ್ಯೇತ್ಯಾದಿ ಘಟಾನುಘಟಿ ಪದಾರ್ಥಗಳನ್ನೆಲ್ಲಾ ಗೊತ್ತಾದ ಹದಕ್ಕೆ ಮಿಶ್ರಣಮಾಡಿ ಜಜ್ಜಿ-ಅರೆದು ಯಾವುದೋ ಹಂತದಲ್ಲಿ ಅಂತೂ ಕಾಯಿಸಿಯೋ ಬೇಯಿಸಿಯೋ ಎಲ್ಲಾ ಮುಗಿದಮೇಲೆ ತಣ್ಣಗಾದ ಅದುವೆ 'ಚ್ಯವನಪ್ರಾಶ'.

ಚ್ಯವನಪ್ರಾಶ ಎಂಬ ಹೆಸರು ಅದಕ್ಕೆ ಬರಲು ಕಾರಣವಿದೆ. ಚ್ಯವನನೆಂಬ ಋಷಿಕುಮಾರನಿಗೆ ಎಳವೆಯಲ್ಲೇ ಇರಬೇಕೆಂದೂ ಮುಪ್ಪು ಆವರಿಸಬಾರದೆಂದೂ ಆಸೆ ಹುಟ್ಟಿತು. ಆಗ ಆತ ಹಲವು ಮಾರ್ಗಗಳಲ್ಲಿ ಅದಕ್ಕೆ ಚಿಕಿತ್ಸೆಗಳನ್ನು ಮಾಡಿಕೊಳ್ಳತೊಡಗಿದ. ಆಗ ಹುಟ್ಟಿದ್ದೇ ಈ ಚ್ಯವನಪ್ರಾಶ. ’ಪ್ರಾಶ’ ಎನ್ನುವುದು ಸಂಸ್ಕೃತದ ಮರಿ! ಪ್ರಾಶನ ಎಂದರೆ ತಿನ್ನಿಸುವುದು, ಅದರ ಬಾಲ ಕತ್ತರಿಸಿದಾಗ ಸಿಗುವುದೇ ಪ್ರಾಶ. ಆ ಪ್ರಾಶವನ್ನು ಅಂದರೆ ತಿನ್ನಬಹುದಾದದ್ದನ್ನು ಚ್ಯವನನ ನೆನಪಿನಲ್ಲಿ ಅದೇ ಹೆಸರಿಗೆ ಜೋಡಿಸಿ ಚ್ಯವನಪ್ರಾಶವಾಯಿತು. ಚ್ಯವನಪ್ರಾಶ ತಿಂದವರೆಲ್ಲಾ ಎಳಬರಾಗೇ ಇರುತ್ತಾರೋ ಇಲ್ಲವೋ ಗೊತ್ತಿಲ್ಲ. ಒಂದಷ್ಟು ಶಕ್ತಿಯಂತೂ ಬರುವುದು ಖಚಿತ--ಈ ಸಲಹೆ ನಿಮಗೆ ಉಚಿತ ! ಸುಕನ್ಯೆ ಚ್ಯವನನ ರೂಪರಾಣಿ. ಅವಳಿಗಾಗಿ ತನ್ನ ಪ್ರಾಯ ಕಾಪಿಡಲು ಚ್ಯವನ ಪ್ರಯತ್ನಿಸಿದ ಎಂದಮೇಲೆ ನಮ್ಮ ಯುವಜನಾಂಗ ಈ ಕುರಿತು ಸ್ವಲ್ಪ ಯೋಚಿಸಬೇಕಾದ್ದು ನ್ಯಾಯ!

ಭಟ್ಟರಿಗೂ ಚ್ಯವನಪ್ರಾಶಕ್ಕೂ ತೀರಾ ಅನ್ಯೋನ್ಯತೆ ಥಳುಕುಹಾಕಿದ್ದೇನಿಲ್ಲ. ಆದರೆ ಹಲವಾರು ಔಷಧಗಳನ್ನು ಮನೆಯಲ್ಲೇ ತಯಾರಿಸಿಕೊಡುವ ಭಟ್ಟರು ಪುರೋಹಿತರಂತೇ ಅಲ್ಲಲ್ಲಿ ಅಲ್ಲಲ್ಲಿ ತನ್ನ ಅಭಿಮಾನೀ ಶಿಷ್ಯಬಳಗವನ್ನೇ ಹೊಂದಿದ್ದು ಆಗಾಗ ಅವರಿಗೆಲ್ಲಾ ಬೇಕಾದ ಔಷಧವನ್ನೋ ಕಷಾಯವನ್ನೋ ಅವರವರ ಮನೆಗೇ ತೆರಳಿ ಮಾಡಿಕೊಡುವುದು ಭಟ್ಟರ ವಾಡಿಕೆ. ಹಾಗಂತ ಭಟ್ಟರು ಯಾರಲ್ಲೂ ಇದನ್ನು ಬಡಾಯಿ ಕೊಚ್ಚಿಲ್ಲ. ಅವರನ್ನೇ ಕೇಳಿ ಯಾವುದೇ ಕೆಲಸವನ್ನೇ ಆಗಲಿ

" ಆಡದೇ ಮಾಡುವವ ರೂಢಿಯೊಳಗುತ್ತಮನು.
ಆಡಿಮಾಡುವವ ಮಧ್ಯಮನು
ಅಡಿಯೂ ಮಾಡದವ ಅಧಮನೆಂದಾ | ಸರ್ವಜ್ಞ "

ಹೀಗಾಗೀ ನಮ್ಮ ಭಟ್ಟರು ಹಾಗೆಲ್ಲಾ ಮಾತಾಡಿ ಕೆಡಿಸುವುದಿಲ್ಲ. ಒಂದು ಲೋಟ ಸೊಗದೇಶರಬತ್ತನ್ನು ಏರಿಸಿಕೊಂಡು ಚ್ಯವನಪ್ರಾಶ ಮಾಡಲು ಕುಳಿತುಬಿಟ್ಟರೆ ಆರು ಮೂರಾಗಲಿ ಮೂರು ಆರಾಗಲಿ ಅದು ಮುಗಿದಮೇಲೆಯೇ ಏಳುವುದು. ಮಧ್ಯೆ ವಿರಾಮವವೇ ಇರುವುದಿಲ್ಲ. ಚ್ಯವನಪ್ರಾಶ ಮಾಡುವುದು ತಿಂದಷ್ಟು ಸುಲಭವಲ್ಲ, ಕಮ್ಮೀ ಕಮ್ಮೀ ಅಂದ್ರೂ ೩-೪ ಗಂಟೆಕಾಲ ಬೇಕೇ ಬೇಕು, ಮಧ್ಯೆ ನಿಲ್ಲಿಸುವ ಹಾಗಿಲ್ಲ. ಹೆಚ್ಚೇಕೆ ಉಚ್ಚೆಗೆ ಎದ್ದುಹೋಗಲೂ ಆಗುವುದಿಲ್ಲ. ಅದನ್ನು ಮಾಡುವುದು ವೃತಮಾಡಿದಷ್ಟೇ ಪ್ರಯಾಸಕರ! ಆದರೂ ಯಾವುದೇ ಬೇಸರವಿಲ್ಲದೇ ಈ ಕಾಯಕದಲ್ಲಿ ತಲ್ಲೀನರಾಗುತ್ತಾರೆ. ಅರ್ಥಾತ್ ಬಸವಣ್ಣ ಹೇಳಿದ ಕಾಯಕಯೋಗಿ ಅವರು, ಶ್ರೀಕೃಷ್ಣ ಹೇಳಿದ ಹಾಗೇ ಕರ್ಮಯೋಗಿ ಅವರು.

ಚ್ಯವನಪ್ರಾಶ ಮಾಡುವುದರಲ್ಲೂ ಅದ್ಭುತ ಯಶಸ್ಸನ್ನು ಗಳಿಸಿರುವ ಶ್ರೀಯುತರು ಮಾಡಿದ ಚ್ಯವನಪ್ರಾಶ ತಿಂದವರು ಹೇಳುವಂತೇ " ಒಮ್ಮೆ ತಿಂದರೆ ಬೇರೇ ಬ್ರಾಂಡೆಡ್ ಚ್ಯವನಪ್ರಾಶಗಳನ್ನೆಲ್ಲಾ ನೀವು ಮೂಸಿ ಕೂಡ ನೋಡುವುದಿಲ್ಲ " ಸಾಕಾ ಸರ್ಟಿಫಿಕೇಟು ? ಹಾಗಂತ ಅವರು ಬಳಸುವ ಫಾರ್ಮ್ಯುಲಾಕ್ಕೊಂದು ಪೇಟೆಂಟ್ ಪಡೆಯಬೇಕೆಂಬುದು ಭಟ್ಟರ ಇರಾದೆ. ಆದರೂ ಕೆಲವೊಮ್ಮೆ ಅದರಲ್ಲಿ ವಿರಕ್ತಿ-" ಹೋಗ್ಲಿ ಬಿಡು ಒಬ್ಬನ ಜೀವಮಾನ ಎಷ್ಟ್ ದಿನಾ ಅಂತೀಯ ? ನಾ ಸತ್ತಮೇಲಾದ್ರೂ ಇದೇ ಥರ ಮಾಡೋದ್ನ ನಾಲ್ಕ್ ಜನ ಕಲ್ತಿದ್ರೆ ಮಾಡ್ಬೋದಲ್ವ? ಒಂದೊಮ್ಮೆ ಯಾರಿಗೂ ಬರ್ದೇ ಇದ್ರೆ ನಾ ಕಲಿತ ಈ ವಿದ್ಯೆ ಹಾಗೇ ಮರೆಯಾಗ್ತದಲ್ಲ ? ಬೇಕಾದವ್ರು ಬೇಕಾದ್ದು ಮಾಡ್ಕಳ್ಳಿ ಬಿಡು " ಅಂತಿದ್ರು. ಚ್ಯವನಪ್ರಾಶ ಮುಗಿದಮೇಲೆ ಮತ್ತೊಮ್ಮೆ ಸೊಗದೇಶರಬತ್ತನ್ನು ಸ್ವಲ್ಪ ಕುಡಿದರೆ ಅದರಿಂದ ಸಿಗುವ ಪರಮಾನಂದವೇ ಬಣ್ಣಿಸಲಸದಳ ಅಂತಾರೆ ಭಟ್ರು.

ಯಂಕೋಜಿ ಕೆಲವೊಮ್ಮೆ ಮಂಕಾಗಿ ಕೂತಾಗೆಲ್ಲಾ ಅವನ ತಾತ ಹೇಳೋದುಂಟು" ಹೋಗೋ ಮಂಕೆ ಭಟ್ರ ಮನೆಗೆ ಹೋಗಿ ಒಂದು ಗ್ಲಾಸು ಸೊಗದೇ ಶರಬತ್ತು ತೆಗೆದುಕೊಂಡು ಬಾ ಅದನ್ನು ಕುಡಿ ನಿಂಗಿರೋ ಆಲಸ್ಯ ಎಲ್ಲಾ ಬಿಟ್‍ಹೋಗುತ್ತೆ ನೋಡು. " ! ಕೆಲಸದಲ್ಲಿ ನಿರುತ್ಸಾಹ, ನಿದ್ರಾಹೀನತೆ, ನಿರಾಸಕ್ತಿ, ಹೊಟ್ಟೆಯ ತಳಮಳ, ಸುಸ್ತು ಇಂಥದ್ದಕ್ಕೆಲ್ಲಾ ಸೊಗದೇಬೇರಿನ ಶರಬತ್ತು ದಿವ್ಯೌಷಧ ಅಂತಾರೆ ನಮ್ ತಿಪ್ಪಾಭಟ್ರು.

ಸರಳಜೀವನ ನಡೆಸಿಬಂದ ಭಟ್ಟರನ್ನು ಎದುರಿಗೇ ಸಿಕ್ಕಿದರೂ ನೀವು ಗುರುತಿಸಲು ಸಾಧ್ಯವಿಲ್ಲ. ಆದರೆ ಗೊತ್ತಿದ್ದವರು ಅರ್ಧಾ ಕಿಲೋಮೀಟರ್ ದೂರದಿಂದಲೇ ಅವರ ಬಿಳಿಚಾಟಿ [ಕಪ್ಪು ಕೊಡೆ ಬಿಸಿಲಿನಲ್ಲಿ ತಿರುಗೀ ತಿರುಗೀ ಬೆಳ್ಳಗಾಗಿದ್ದು]ಕೊಡೆಯನ್ನು ಕಂಡೇ ಗುರುತು ಹಿಡಿಯುತ್ತಾರೆ. ಅಲ್ಲಲ್ಲಿ ತೂತುಗಳೂ ಇರುವ ಕೊಡೆಯನ್ನು ಸದಾ ಸಂಗತಿಯನ್ನಾಗಿ ಇರಿಸಿಕೊಂಡ ಭಟ್ಟರಿಗೆ ಕೊಡೆಯೆಂದ್ರೆ ಬಹಳ ಇಷ್ಟ. ಅದೊಂಥರಾ ಋಣಾನುಬಂಧ ಇದ್ದಹಾಗೇ ಅಂತಾರೆ! ಹತ್ತಾರುಸಲ ದುರಸ್ತಿ ನಡೆದಿದ್ರೂ, ಕಡ್ಡಿಗಳೆಲ್ಲಾ ತುಕ್ಕು ಹಿಡಿದು ವೇಗದ ಗಾಳಿಗೆ ಮುರಿದುಬೀಳುವಷ್ಟು ಮುದುಕಾಗಿದ್ರೂ ಭಟ್ಟರಿಗೆ ಅದೇ ಕೊಡೆಯ ಸೇವೆ ಪ್ರೀತಿ. ಅದನ್ನು ಮಾತ್ರ ಬಿಟ್ಟವರಲ್ಲ. ಅವರ ಈ ರೀತಿಯನ್ನು ನೋಡೇ ನಮ್ಮ ಕವಿಯೊಬ್ಬರು -

ತಿಪ್ಪಾ ಭಟ್ಟರ ಚೆಂದ ಕೊಡೆ
ಸಾವಿರ ತೂತುಗಳಿಂದ ಕೊಡೆ
ಮಳೆನೀರೆಲ್ಲಾ ಒಳಗಡೆಗೆ
ಭಟ್ಟರು ಮಿಂದರು ಕೊಡೆಯೊಳಗೆ

--ಎನ್ನುವ ಹಾಡನ್ನು ಬರೆದಿರಬೇಕು ಎನಿಸುತ್ತದೆ.

ಒಮ್ಮೆ ಭಟ್ಟರ ಮಗಳನ್ನು ಪರವೂರ ಗಂಡಿನಕಡೆಯವರು ನೋಡಲು ಬಂದಿದ್ದರು. ಅವರಿಗೆಲ್ಲಾ ಸ್ವಾಗತಕೋರಿದ ಭಟ್ಟರ ಮೊದಲ ಶೈತ್ಯೋಪಚಾರ ಎಂದರೆ ಸೊಗದೇಬೇರಿನ ಶರಬತ್ತು! ಸರಿಸುಮಾರು ಮುಕ್ಕಾಲುಗಂಟೆ ಶರಬತ್ತಿನ ಬಗ್ಗೆ ಭಾಷಣಮಾಡಿದ ಭಟ್ಟರ ವಾಗ್ಝರಿಯಲ್ಲಿ ಗಂಡಿನಕಡೆಯವರು ಬಂದ ಕೆಲಸವನ್ನೇ ಮರೆತಿದ್ದರು! ಅಮೇಲೆ ಭಟ್ಟರ ಮುಗ್ದ ಸ್ವಭಾವ, ಹುಡುಗಿಯ ಸೌಂದರ್ಯ-ಅರ್ಹತೆ ಎಲ್ಲಾ ಹಿಡಿಸಿದ್ದರಿಂದ ಮದುವೆಯೂ ನಡೆದುಹೋಯಿತು. ಮದುವೆಯಲ್ಲಿ ಬಳುವಳಿ ಸಾಮಾನುಗಳ ಜೊತೆಗೆ ತಾವೇ ತಯಾರಿಸಿದ ಸೊಗದೇಬೇರಿನ ಶರಬತ್ತಿನ ಬಾಟಲನ್ನು ಕೊಡಲು ಭಟ್ಟರು ಮರೆಯಲಿಲ್ಲ !

ಮೊನ್ನೆ ’ಆಯುರ್ವೇದ ಕಾಂಗ್ರೆಸ್’ ಎನ್ನುವ ಆಯುರ್ವೇದದ ಬಗೆಗಿನ ಮಾಹಿತಿ ಹಾಗೂ ಪ್ರಚಾರವನ್ನು ಸರಕಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿತ್ತಲ್ಲ ? ಆಗ ಅಲ್ಲಿಗೆ ಬರುವ ಆಸೆ ಇತ್ತಂತೆ ಭಟ್ಟರಿಗೆ. ಆದರೆ 'ಕಾಂಗ್ರೆಸ್' ಅಂತಿದೆಯಲ್ಲ ಒಂದೊಮ್ಮೆ ಅದು ಕಾಂಗ್ರೆಸ್ ಪಾರ್ಟಿ ವತಿಯಿಂದ ನಡೆಸುವಂತಹದ್ದಿರಬಹುದು ತನಗೆ ಯಾವ ಪಕ್ಷವೂ ಬೇಡ ಎನ್ನುವ ಅಂಬೋಣದಿಂದ ಅವರು ತಪ್ಪಿಸಿಕೊಂಡರಂತೆ. ಆಮೇಲೇ ತಿಳಿದದ್ದು ಕಾಂಗ್ರೆಸ್ ಅಂದರೆ ಅದೊಂದು ಸಮಾವೇಶವೇ ಹೊರತು ಕಾಂಗ್ರೆಸ್ ಪಕ್ಷಕ್ಕಷ್ಟೇ ಸೀಮಿತವಲ್ಲ ಎಂಬುದು. ಇಲ್ಲದಿದ್ದರೆ ಭಟ್ಟರ ಸೊಗದೇಬೇರಿನ ಶರಬತ್ತು ತುಂಬಿದ ಕೆಲವು ಬಾಟಲಿಗಳಾದರೂ ಅಲ್ಲಿ ಕಾಣಸಿಗುತ್ತಿದ್ದವು! ಶರಬತ್ತಿಗೆ ’ತಿಪ್ಪಾ ಭಟ್ಟರು ತಯಾರಿಸಿದ ’ ಎಂದಿರುತ್ತದೆ ಬಿಟ್ಟರೆ ಬೇರೇ ಯಾವುದೇ ಬ್ರ್ಯಾಂಡ್ ಹಾಕುವುದಿಲ್ಲ. ಭಟ್ಟರೇನಾದರೂ ಕಂಪನಿ ತೆರೆದು ಬ್ರ್ಯಾಂಡ್ ಹಾಕಿದ್ದರೆ ಇಷ್ಟೊತ್ತಿಗೆಲ್ಲಾ ನಟನಟಿಯರನ್ನಿಟ್ಟು ಜಾಹೀರಾತು ಕೊಟ್ಟು ಮಾರುಕಟ್ಟೆ ಗಳಿಸುವ ಅನೇಕ ಕಂಪನಿಗಳನ್ನು ಹಿಂದೆಹಾಕುತ್ತಿದ್ದರು.


ಪುರಾಣ
ಕೇಳಿದಿರಲ್ಲ ನಿಮಗೇನಾದರೂ ಭಟ್ಟರ ತಯಾರಿಕೆಯ ಸೊಗದೇ ಶರಬತ್ತು ಬೇಕೆ ? ಬೇಕೆಂದಿದ್ದಲ್ಲಿ ಮತ್ತೊಮ್ಮೆ ಅವರು ಎಲ್ಲಿ ಸಿಗುತ್ತಾರೆಂದು ವಿಚಾರಿಸಿ ಹೇಳುತ್ತೇನೆ ಆಗದೇ? ಮರೆಯದಿರಿ ಮರೆತು ನಿರಾಶರಾಗದಿರಿ ’ತಿಪ್ಪಾಭಟ್ಟರು ತಯಾರಿಸಿದ ಸೊಗದೇಬೇರಿನ ಶರಬತ್ತು’ !