ಚಿತ್ರಋಣ: ಅಂತರ್ಜಾಲ
ಅರಿಕೆ :
ನನ್ನಾತ್ಮೀಯ ಓದುಗ ಬಳಗವೇ, ಮಿತ್ರರೇ,
ಫೇಸ್ ಬುಕ್ ಸಾಮಾಜಿಕ ತಾಣದಲ್ಲಿ ದಿನವಹಿ ಅನೇಕರು ನನ್ನ ಸ್ನೇಹಕೋರುತ್ತಿದ್ದೀರಿ, ಅನೇಕರು ನನ್ನ ಬರಹಗಳನ್ನು ಆಸ್ವಾದಿಸುತ್ತಿದ್ದೀರಿ. ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ನಿಮಗೆ ವೈಯ್ಯಕ್ತಿಕವಾಗಿ ನಾನು ಸ್ಪಂದಿಸಲಾಗದಿದ್ದರೂ ಸಾಮೂಹಿಕವಾಗಿ ನಿಮ್ಮೆಲ್ಲರಿಗೂ ಆಗಾಗ ನನ್ನ ಬರಹಗಳ ಮೂಲಕ ಸಿಗುತ್ತಲೇ ಇದ್ದೇನೆ. ಯಾರನ್ನೇ ಆಗಲಿ ಕಡೆಗಣಿಸಿದೆನೆಂಬ ಭಾವನೆ ಬೇಡ. ಬರಹಗಾರನಿಗೆ ಸಮಯದ ಅಭಾವ ಸಹಜ, ಸಿಗುವ ಸಮಯದಲ್ಲಿ ಕೆಲಹೊತ್ತು ಭಾವಲೋಕ, ಕೆಲಹೊತ್ತು ಅಧ್ಯಯನ, ಕೆಲಹೊತ್ತು ಅಧ್ಯಾಪನ, ಇನ್ನೂ ಕೆಲಹೊತ್ತು ಉದರನಿಮಿತ್ತದ ಕೆಲಸಗಳು ಹೀಗೇ ಸಮಯದ ಹೋಳುಗಳು ಹಂಚಿ ಹೋಗುತ್ತವೆ. ’ಉದ್ದಿಮೆ ಮೀಡಿಯಾ ನೆಟ್ವರ್ಕ್ಸ್’ ಮಾಡಿದಾಗಿನಿಂದ ಬರಹವನ್ನೇ ಉದ್ಯಮವನ್ನಾಗಿಯೂ ಅಂಗೀಕರಿಸಿದ್ದೇನೆ; ಅದರಲ್ಲೇ ಪ್ರಾಮಾಣಿಕತೆಯಿಂದ ದೇವರನ್ನೂ ಕಾಣಲು ಪ್ರಯತ್ನಿಸುತ್ತೇನೆ. ಈ ನಡುವೆ ಹತ್ತಿರದ ನೆಂಟರುಗಳ/ಸ್ನೇಹಿತರುಗಳ ಮನೆಗಳಲ್ಲಿ ನಡೆದ ಕಾರ್ಯಕ್ರಮಗಳಿಗೆ ನಾನು ಅಷ್ಟಾಗಿ ಹೋಗಲಾಗಲಿಲ್ಲ; ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ಅಡಗಿಹೋಗಿದ್ದರಿಂದ ಬ್ಲಾಗ್ ಬರವಣಿಗೆಗಳಿಗೂ ವಿಳಂಬನೀತಿ ಅನುಸರಿಸಿದ್ದೇನೆ. ಆಮಂತ್ರಿಸಿದ್ದರೂ ಆಗಮಿಸದಿದ್ದುದಕ್ಕೆ ಹಲವರ ಆಕ್ಷೇಪಣೆಗಳನ್ನೂ ಎದುರಿಸಿದ್ದೇನೆ; ಅನಿವಾರ್ಯತೆಯಿಂದ ಭಾಗವಹಿಸಲಾಗದ್ದು ಮುಂದೆ ಅವರಿಗೆ ಅರಿವಾದಾಗ ಸರಿಹೋಗುತ್ತದೆಂಬ ವಿಶ್ವಾಸವನ್ನೂ ಇಟ್ಟುಕೊಂಡಿದ್ದೇನೆ.
ಅಪರೂಪಕ್ಕೊಮ್ಮೆ ಹೀಗೆ ಮಳೆಯಲ್ಲಿ ತೆರಳುವಾಗ ಮಳೆಯೆಂಬ ಹುಡುಗಿಯ ನೆನಪಾಯ್ತು. ಅವಳ ಅಪ್ಪ-ಅಮ್ಮ, ಬೇರು-ಬಿತ್ತು ಎಲ್ಲದರ ವಿವರಗಳನ್ನು ಲೆಕ್ಕಹಾಕಲು ಕುಳಿತ ಮನದಲ್ಲಿ ಹೊಸದೊಂದು ಭಾವಗೀತೆ ಹುಟ್ಟಿಕೊಂಡಿತು. ಅದನ್ನೇ ಇವತ್ತು ನಿಮಗೆ ಉಪಾಹಾರವಾಗಿ ಬಡಿಸುತ್ತಿದ್ದೇನೆ. ನಿಮ್ಮೆಲ್ಲರ ಸ್ನೇಹಕ್ಕೆ, ಪ್ರೀತಿಗೆ, ನಿಮ್ಮ ಒಡನಾಟಕ್ಕೆ, ನಿಮ್ಮ ಓದಿಗೆ-ಸ್ಪಂದಿಸುವಿಕೆಗೆ ಸತತ ಆಭಾರಿಯಾಗಿದ್ದೇನೆ. ನೇರವಾಗಿ ಸಂವಹಿಸಲಾಗದಿದ್ದರೂ ನನ್ನ ಕೃತಿಗಳ ಮೂಲಕ ನಿಮ್ಮೊಡನೆ ವಿ.ಆರ್.ಭಟ್ ಎನಿಸಿದ್ದೇನೆ. ಸದಭಿರುಚಿಯ ಸಾಹಿತ್ಯದ ಓದಿನ ಗೀಳು ನಿಮ್ಮಲ್ಲಿ ಸದಾ ಉಕ್ಕುತ್ತಿರಲಿ, ಬರೆಯುವ ಕೆಲವು ಕೃತಿಗಳಾದರೂ ನಿಮ್ಮೆಲ್ಲರನ್ನೂ ರಂಜಿಸಲಿ ಎಂದು ಆಶಿಸುತ್ತಾ, ಬಯಸುತ್ತಾ ನಿಮ್ಮನ್ನು ಉಪಾಹಾರಕ್ಕೆ ಆಹ್ವಾನಿಸುತ್ತಿದ್ದೇನೆ-ಹೀಗೆ ಬನ್ನಿ, ಧನ್ಯವಾದಗಳು:
ಮಳೆಹುಡುಗಿ
ಶರಧಿಯೊಡಲಿನ ನೀರೆ ಸೂರ್ಯನಿಗೆ ಮನಸೋತುಹೊರಹೊರಟು ಗುಪ್ತಮಾರ್ಗದಿ ನಭಕೆ ನೆಗೆದು
ಭರದಿಂದ ಸಾಗುತ್ತ ಬರಸೆಳೆಯೆ ರವಿಯವನ
ಶರವೇಗದಲಿ ಹೇಗೆ ನಡೆವಳದೊ ಕಾಣೆ !
ಹಿರಿಹೊನ್ನ ಕಿರಣಗಳ ಬೆಡಗುರಾಯನ ಕಂಡು
ಗರಿಗರಿಯ ದಿರಿಸುಗಳ ಧರಿಸಿ ನಡೆಯುವಳೋ?
ಬರಿದಾಗಿ ಒಣಗುತ್ತ ಬಾಯ್ದೆರೆದ ಬಯಲುಗಳ
ಸರಸರನೆ ದಾಟುತ್ತ ಮುಂದೆ ಸಾಗುವಳೋ?
ಚರನಂತೆ ಗೋಚರಿಸಿ ಬಿರುಗಣ್ಣ ತೆರದಷ್ಟು
ತಿರೆಯೆಡೆಗೆ ತಿರುಗಿದನ ಹಿಡಿದು ಕಾಡುವಳೋ?
ಹರವಾದ ವಸುಧೆಯನು ಬೆಳಬೆಳಗಿ ರಂಜಿಸಿದ
ದೊರೆರಾಯನಾಟಕ್ಕೆ ಮರುಳಾಗಿರುವಳೋ?
ಹರಿಯನ್ನು ಹರನನ್ನು ಸರಸಿಜೋದ್ಭವನನ್ನು
ಗುರಿಹಿಡಿದು ತಲ್ಪಿದಳು ಹೆಣ್ಣುತಾನವಳು
ಅರಿವುಂಟೆ ಈ ಜಗಕೆ ಮಹಿಳೆಯೊಳತೋಟಿಯದು ?
ಮೆರೆಯುವಳು ಎಲ್ಲೆಡೆಗು ಭಾವರೂಪದೊಳು
ಅರೆರೆ ಅಲ್ಲೇನಾಯ್ತು ನಡುನಡುವೆ ನಿಂತಿಹಳು ?
ಮರೆಯಾದ ಮಿತ್ರನನು ಹುಡುಕಿಸೋಲುವಳೇ?
ಹಿರಿಯಲೋಸುಗ ನುಗ್ಗಿ ಪೈಪೋಟಿ ಅನುಭವಿಸಿ
ಬರಿಗೈಯ್ಯ ತಿರುವಿದನ ಕಂಡು ಬಳಲಿಹಳೇ?
ಸೊರಗಿ ಸೊಂಟದ ನೋವು ಸಿಗದಕ್ಕೆ ಸಮಯದಲಿ
ಮರುಗಿ ಮಮ್ಮಲ ತನ್ನ ಒಮ್ಮುಖದ ನಡೆಗೆ
ಕರಗಿ ಕಂಬನಿಯಾಗಿ ಹರಿದಿಹಳು ಭುವಿಯಲ್ಲಿ
ನೆರೆಬಂತು ನದಿಗೆಲ್ಲ ಅವಳ ಕೋಪದಲಿ !