ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, July 21, 2013

ಗಾಯತಿ ವನಮಾಲೀ ಮಧುರಂ....

ಚಿತ್ರಗಳ ಋಣ : ಅಂತರ್ಜಾಲ 
ಗಾಯತಿ ವನಮಾಲೀ ಮಧುರಂ....
                                             
ನಗ್ನಬೈರಾಗಿಯೊಬ್ಬ ಆ ಪ್ರದೇಶದಲ್ಲಿ ಕಾಣಿಸಿಕೊಂಡು ಮುಸ್ಲಿಂ ನವಾಬನ ಅಂತಃಪುರಕ್ಕೆ ನುಗ್ಗಿಬಿಟ್ಟ. ಅಂತಃಪುರದ ಕಾವಲುಗಾರರು ನೋಡನೋಡುತ್ತಿರುವಂತೆಯೇ ಆತ ಅಂತಃಪುರದಲ್ಲೆಲ್ಲಾ ಸುತ್ತುತ್ತಲೇ ಇದ್ದ. ಸುದ್ದಿ ತಿಳಿದ ನವಾಬ, ತನ್ನ ಕಾವಲುಗಾರರಿಗೆ ಆತನನ್ನು ತಡೆದು ನಿಲ್ಲಿಸಿ ಶಿಕ್ಷಿಸಲು ಹೇಳಿದ. ನವಾಬನ  ಕಾವಲುಪಡೆಯವರು ನಗ್ನಸಂನ್ಯಾಸಿಯನ್ನು ಬೆನ್ನಟ್ಟಿ ಕೈಗಳನ್ನು ಕತ್ತರಿಸಿಹಾಕಿದರು. ಅಷ್ಟಾದರೂ ತಟ್ಟಿಸಿಕೊಳ್ಳದ ನಗ್ನ ಸಂನ್ಯಾಸಿ ಜನಾನಾದಲ್ಲಿ ಈಕಡೆಯಿಂದ ಆಕಡೆಗೂ ಆ ಕಡೆಯಿಂದ ಈ ಕಡೆಗೂ ಸುತ್ತುತ್ತಿರುವಾಗ ನವಾಬನಿಗೆ ಬಹಳ ವಿಚಿತ್ರವಾಗಿ ಕಂಡಿತು. ತುಂಡಾಗಿ ಕೆಳಗೆ ಬಿದ್ದಿದ್ದ ಕೈಗಳನ್ನು ಸ್ವತಃ ನವಾಬನೇ ಎತ್ತಿತಂದು ಸಂನ್ಯಾಸಿಯ ಮುಂದೆ ಹಿಡಿದು ತೆಗೆದುಕೊಳ್ಳುವಂತೇ ವಿನಂತಿಸಿದ. ನಗ್ನಸಂನ್ಯಾಸಿ ಕೈಗಳನ್ನು ತೆಗೆದುಕೊಂಡು ಅವುಗಳ ಜಾಗಗಳಲ್ಲಿ ಇಟ್ಟುಕೊಳ್ಳುತ್ತಿರುವಂತೆಯೇ ಅವು ಮೊದಲಿನಂತಾದವು! ಮಾತಿಲ್ಲ ಕತೆಯಿಲ್ಲ-ಸಂನ್ಯಾಸಿ ಹೊರಟೇ ಹೋದ!!

ಬ್ರಹ್ಮಜ್ಞಾನಿಯಾದಾತನಿಗೆ ಎಲ್ಲವೂ ಬ್ರಹ್ಮಮಯವೇ ಹೊರತು ಅಲ್ಲಿ ಜಾತಿ-ಮತ-ಪಂಥ-ಪ್ರಾಣಿ-ಪಕ್ಷಿ-ಕಲ್ಲು-ನೆಲ್ಲುಗಳೆಂಬ ಭೇದವೇ ಇರುವುದಿಲ್ಲ! ಎಲ್ಲೆಂದರಲ್ಲಿ ಅಲೆದಾಡುತ್ತಿದ್ದ ಸದಾಶಿವ ಬ್ರಹ್ಮೇಂದ್ರರನ್ನು ಕೆಲವುಕಾಲಾನಂತರ ಜನ ಮರೆತುಬಿಟ್ಟರು ಎಂದುಕೊಳ್ಳುವಾಗಲೇ ಮೇಲಿನ ಘಟನೆ ನಡೆಯಿತಂತೆ!! ಶೀರ್ಷಿಕೆಗೂ-ಬ್ರಹ್ಮಜ್ಞಾನಿಗೂ-ನಗ್ನ ಸಂನ್ಯಾಸಿಗೂ-ನೀವೀಗ ಓದುತ್ತಿರುವ ಕಥೆಗೂ ಏನು ಸಂಬಂಧವೆಂದು ತಿಳಿದುಕೊಳ್ಳಬೇಕಾದರೆ ಲೇಖನದ ಕೊನೆಯಸಾಲಿನವರೆಗೂ ಪೂರ್ವಾಗ್ರಹವಿಲ್ಲದ ನಗ್ನಮನಸ್ಸಿನಿಂದ ನೀವು ನಡೆದು ಬರುತ್ತೀರಿ!  

ಶುದ್ಧಸಾವೇರಿ ರಾಗದಲ್ಲಿ ಗಾಯಕಿ ವಾರಿಜಶ್ರೀಯವರು ಹಾಡಿದ ಹಾಡನ್ನು ಕೇಳಲು ಆರಂಭಿಸಿದಾಗ ಆಗಿನ್ನೂ ಬೆಳಗಿನ ಪೂಜೆಯನ್ನು ಮುಗಿಸಿದ್ದ ನಾನು ಧನ್ಯಾಲೋಕದಲ್ಲಿ ವಿಹರಿಸತೊಡಗಿದ್ದೆ! ಭಕ್ತಿರಸ ಉಕ್ಕಿ ಹರಿಯುವ ಕೆಲವು ರಾಗಗಳು ಮತ್ತು ಅವುಗಳನ್ನು ತಮ್ಮ ಧ್ವನಿಯಲ್ಲಿ ಧೇನಿಸುವ ಕೆಲವು ಸಿರಿಕಂಠಗಳಿಗೆ  ಪರಮಹಂಸರಾಗಿಯೇ ಜನಿಸಿದ ಜನ ಸಾಹಿತ್ಯವನ್ನೊದಗಿಸಿದರೆ ಅದು ನಿಜಕ್ಕೂ ಪಾಯಸಕ್ಕೆ ಕಲ್ಲುಸಕ್ಕರೆ ಹಾಕಿ ತಿನ್ನುವ ರಸದೌತಣ; ಸನ್ನಿವೇಶ ಹೇಗಿದೆಯೆಂದರೆ ರಾಗವನ್ನು ಹೊಗಳಬೇಕೋ, ರಾಗದ ಭೋಗವನ್ನುಣಿಸುವ ಸಂಗೀತಗಾರರ ಕಂಠವನ್ನು ಶ್ಲಾಘಿಸಬೇಕೋ ಅಥವಾ ಶ್ರೇಷ್ಠ ಸಾಹಿತ್ಯವನ್ನೊದಗಿಸಿದ ಮಹಾಪುರುಷರನ್ನು ಸ್ಮರಿಸಿ ನಮಸ್ಕರಿಸಬೇಕೋ ತಿಳಿಯದ ಅತ್ಯಾನಂದದ ಸಮಯ. ಹಾಡುಗಳದೆಷ್ಟು ಕೋಟಿಗಳಿವೆಯೋ ಲೆಕ್ಕಕ್ಕಿಲ್ಲ. ಆದರೆ ಇರುವ ಹಾಡುಗಳ ಸಾಹಿತ್ಯಕ-ಸಾಂಸ್ಕೃತಿಕ-ಸಾಂಸಾರಿಕ-ಸಾಂಗತ್ಯಕ-ಸಾರಸ್ವತಿಕ-ಸಾತ್ವಿಕ ಗುಣಮಟ್ಟಗಳಲ್ಲಿ ವ್ಯತ್ಯಾಸವಿದೆ. ಅದ್ಭುತ ಪದಪುಂಜಗಳನ್ನೊಳಗೊಂಡ ಹಾಡುಗಳು ಸಾಹಿತ್ಯಕವಾಗಿ ಎಷ್ಟೇ ಚೆನ್ನಾಗಿದ್ದರೂ ಸಾಂಸ್ಕೃತಿಕವಾಗಿ ಉತ್ತಮವಾಗಿವೆ ಎನ್ನಲು ಸಾಧ್ಯವಾಗುವುದಿಲ್ಲ. ಉನ್ನತ ಮನಸ್ಕರ ಉತ್ತಮ ಮನೋಜವದಲ್ಲಿ ಹುಟ್ಟಿದ ಸಾಹಿತ್ಯಕ್ಕೊಂದು ವಿಶಿಷ್ಟ ಶಕ್ತಿ ಇರುತ್ತದೆ. ಅಂತಹ ಹಾಡುಗಳನ್ನು ಸಂಸ್ಕೃತಭಾಷೆಯಲ್ಲಿ ನಮಗೆ ಕರುಣಿಸಿದವರು ಅವಧೂತ ಶ್ರೀ ಸದಾಶಿವ ಬ್ರಹ್ಮೇಂದ್ರರು.

ಕರ್ನಾಟಕ ಸಂಗೀತದ ವಾಗ್ಗೇಯಕಾರರಲ್ಲಿ ಕೆಲವರು ಇನ್ನೂ ಬದುಕಿದ್ದ 17-18ನೇ ಶತಮಾನದಲ್ಲೇ ತಮಿಳುನಾಡಿನ ತಿರುವಿಸೈನಲ್ಲೂರಿನಲ್ಲಿ, ಮೋಕ್ಷಸೋಮಸುಂದರ ಅವಧಾನಿ-ಪಾರ್ವತಿ ದಂಪತಿಯ ಮಗನಾಗಿ ಜನಿಸಿ, ಶಿವರಾಮಕೃಷ್ಣನೆಂಬ ಜನ್ಮನಾಮವನ್ನು ಪಡೆದುಕೊಂಡಿದ್ದ ಸದಾಶಿವ ಬ್ರಹ್ಮೇಂದ್ರರಿಗೆ ಎಳವೆಯಲ್ಲೇ ಬ್ರಹ್ಮಾನಂದದೆಡೆಗೆ-ಪಾರಮಾರ್ಥದೆಡೆಗೆ ಒಲವು. ಸಂಪ್ರದಾಯ ಶರಣ ಕುಟುಂಬದ ಅಂದಿನಕಾಲಘಟ್ಟದ ಆಚಾರದಂತೇ 17ನೇ ವಯಸ್ಸಿಗೇ ಮದುವೆಯಾಗಿ, ಮುಂದಿನ ತನ್ನ ಬದುಕನ್ನು ಕೊಂಭಕೋಣಂನಲ್ಲಿ ಕಳೆಯತೊಡಗಿದ ಅವರಿಗೆ ಐಹಿಕ ಸುಖೋಪಭೋಗಗಳಲ್ಲಿ ಆಸಕ್ತಿಯೇ ಇರಲಿಲ್ಲ. ಸಂಸಾರವನ್ನಿಷ್ಟಪಡದೇ ಮನೆಯನ್ನು ತೊರೆದ ಅವರು ಕಾಂಚೀಪುರವನ್ನು ಸೇರಿ ಅಲ್ಲಿದ್ದ ಉಪನಿಷತ್ ಬ್ರಹ್ಮ ಮಠದ ಶ್ರೀ ಪರಮಶಿವ ಬ್ರಹ್ಮೇಂದ್ರ ಸರಸ್ವತೀ ಸ್ವಾಮಿಗಳ ಶಿಷ್ಯರಾದರು. ಅವರಲ್ಲೇ ಸಂನ್ಯಾಸದೀಕ್ಷೆ ಸ್ವೀಕರಿಸಿದ ಶಿವರಾಮಕೃಷ್ಣ ಸದಾಶಿವ ಬ್ರಹ್ಮೇಂದ್ರರೆಂಬ ದೀಕ್ಷಾನಾಮವನ್ನು ಪಡೆದರು. ಕಾಲಾನಂತರ ನಗ್ನವಾಗಿ ಅಥವಾ ಅರೆನಗ್ನವಾಗಿ ಎಲ್ಲೆಂದರಲ್ಲಿ ಅಲೆದಾಡುತ್ತಾ, ಧ್ಯಾನದಲ್ಲಿ ಲೀನವಾಗುತ್ತಾ ತುರ್ಯಾವಸ್ಥೆಯ ಮನದಲ್ಲೇ ಇರುತ್ತಿದ್ದರು. ಅವರ ಜೀವಿತದಲ್ಲಿ ಅನೇಕ ಪವಾಡಗಳು ತಂತಾನೇ ಘಟಿಸಿದವು.

ಅದ್ವೈತ ತತ್ತ್ವಜ್ಞಾನ ಮೂರ್ತಿವೆತ್ತಂತಿದ್ದ ಸದಾಶಿವ ಬ್ರಹ್ಮೇಂದ್ರರು ಕರ್ನಾಟಕ ಸಂಗೀತಕ್ಕೆ ಅನೇಕ ಕೃತಿಗಳನ್ನು ಕೊಟ್ಟಿದ್ದು, ಒಂದೊಂದೂ ಸ್ವಾತಿಮುತ್ತಿನಂತೇ, ಅಪ್ಪಟ ವಜ್ರದಂದೇ ಇಂದಿಗೂ ನಳನಳಿಸುತ್ತಿವೆ. ಸಾಮಾನ್ಯವಾಗಿ ಕರ್ನಾಟಕ ಸಂಗೀತ ಕಚೇರಿಗಳು ನಡೆದಾಗ ಅವರ ಒಂದಾದರೂ ಹಾಡು ಅಲ್ಲಿ ಕೇಳಿಬರುತ್ತದೆ. ಹಾಡುಗಳು ರಚಿತವಾದ ರಾಗ, ಅವುಗಳಲ್ಲಿನ ಸಾಹಿತ್ಯ ಕೇಳುಗರಮನವನ್ನು ಯಾವುದೋ ಲೋಕಕ್ಕೆ ಕರೆದೊಯ್ಯುತ್ತವೆ! ಮೋಹನರಾಗದ ’ಭಜ ರಘುವಿರಾಮಂ’, ಹಿಂದೋಳರಾಗದ ’ಭಜರೇ ಗೋಪಾಲಂ’, ಸಾಮರಾಗದ ’ಮಾನಸ ಸಂಚರರೇ’, ಅಹಿರ ಭೈರವೀರಾಗದ ’ಪಿಬರೇ ರಾಮರಸಂ’ ಮೊದಲಾದ ಹಾಡುಗಳು ಜನಮಾನಸದಲ್ಲಿ ನಲಿದಾಡುತ್ತಾ, ಸಹಜಗತಿಯಲ್ಲಿ ಜನರ ಮನಸ್ಸಿಗೆ ಉನ್ನತ ಸಂಸ್ಕಾರಗಳನ್ನು ಕೊಡುತ್ತಾ ಆಪ್ಯಾಯಮಾನವಾಗಿವೆ. ’ಗಾಯತಿ ವನಮಾಲೀ ಮಧುರಂ’ ಎಂಬ ಹಾಡಿನ ದಿವ್ಯಾನುಭೂತಿಯನ್ನು [ಕನ್ನಡಾನುವಾದದೊಂದಿಗೆ] ಅದರ ಪಲ್ಲವಿ ಮತ್ತು ಚರಣಗಳಲ್ಲಿ ಗಮನಿಸೋಣ:

ಗಾಯತಿ ವನಮಾಲೀ- ಮಧುರಂ - ಗಾಯತಿ ವನಮಾಲೀ || ಪ ||

[ಹಾಡುವ ವನಮಾಲೀ ಮಧುರ ಹಾಡುವ ವನಮಾಲೀ]

ಪುಷ್ಪ ಸುಗಂಧ ಸುಮಲಯ ಸಮೀರೇ
ಮುನಿ ಜನ ಸೇವಿತ ಯಮು
ನಾ ತೀರೇ || ೧ ||

[ಪುಷ್ಪ ಸುಗಂಧವ ಮಾರುತ ಬೀರೇ  
 ಮುನಿಜನ ಸೇವಿಪ ಯಮುನಾ ತಟದಿ ]

ಕೂಜಿತ ಶುಕ ಪಿಕ ಮುಖ ಖಗ ಕುಂಜೇ
ಕುಟಿಲಾಲಕ ಬಹು ನೀರದ ಪುಂಜೇ || ೨ || 

[ಕೂಗುವ ಶುಕ ಪಿಕ ಮುಖ ಖಗ ಮರದೊಳ್
 ರಾಜಿಪ ಭಾರದ ಮೇಘ ಮುಂಗುರುಳೊಳ್ ] 

ತುಲಸಿ ದಾಮ ವಿಭೂಷಿತ ಹಾರೀ
ಜಲಜ ಭವ ಸ್ತುತ ಸದ್ಗುಣ ಶೌರೀ || ೩ ||

[ತುಳಸೀ ಹಾರದಿ ಭೂಷಿತನಾಗೀ
 ಕಮಲಜ ಭಜಿಸಿದ ಸದ್ಗುಣ ಬೀಗೀ ]

ಪರಮಹಂಸ ಹೃದಯೋತ್ಸವ ಕಾರೀ
ಪರಿಪೂರಿತ ಮುರಲೀರವ ಧಾರೀ || ೪ ||

[ಪರಮಹಂಸ ಹೃದಯೋತ್ಸವ ಕಾರೀ
ಪರಿಪೂರಿತ ಮುರಲೀರವ ಧಾರೀ ] 

ಕೊನೆಯ ಚರಣ ಕನ್ನಡದ್ದೋ ಸಂಸ್ಕೃತದ್ದೋ ಎಂಬಷ್ಟು ಸಂಸ್ಕೃತ-ಕನ್ನಡಗಳು ಅಮ್ಮ-ಮಗುವಿನ ಬಾಂಧವ್ಯವನ್ನು ಹೊಂದಿವೆ, ಹೀಗಾಗಿ ಅನುವಾದ ಬೇಕಾಗಿಯೇ ಇಲ್ಲ!  ಸುಗಂಧಭರಿತವಾದ ತಂಗಾಳಿ ತೀಡುತ್ತಿರುವ ಯಮುನೆಯ ತಟದಲ್ಲಿ, ಸುತ್ತ ನೆರೆದ ಮುನಿಜನರ ಸೇವೆಗಳನ್ನು ಸ್ವೀಕರಿಸುತ್ತಾ ವನಮಾಲಿ ಸುಶ್ರಾವ್ಯವಾಗಿ ಹಾಡುತ್ತಿದ್ದಾನೆ. ಕೋಗಿಲೆ, ಗಿಳಿ, ನವಿಲಾದಿಯಾಗಿ ಹಲವು ಪಕ್ಷಿಗಳು ಕೂಗುತ್ತಾ ನಲಿದಾಡುತ್ತಿರುವ ಆ ಪ್ರದೇಶದಲ್ಲಿ ನಿಂತ ಅವನ ಮುಂಗುರುಳು ಭಾರದ ಮೋಡಗಳನ್ನು ಹೊತ್ತಂತೇ ಭಾಸವಾಗುತ್ತಿದೆ. ತುಳಸೀಹಾರವನ್ನು ಧರಿಸಿಕೊಂಡು ಬ್ರಹ್ಮನಿಂದ ಹೊಗಳಿಕೆಯ ನುಡಿಗಳನ್ನು ಸ್ವೀಕರಿಸಿ, ಎಲ್ಲದರಿಂದ ಮುದಗೊಂಡು ಶೂರತನದಿಂದ ಬೀಗುತ್ತಾ ವನಮಾಲಿ ಹಾಡುತ್ತಾನೆ. ಮುನಿಜನರ ಹೃದಯದಲ್ಲಿ ಸಂತಸಕ್ಕೆ ಕಾರಣನಾಗಿದ್ದಾನೆ, ಕರ್ಣಾನಂದಕರವಾದ ವೇಣುಗಾನದಿಂದ ಜಗದ ಜನರನ್ನೆಲ್ಲಾ ರಂಜಿಸುತ್ತಾನೆ.

ಇಂತಹ ಅನೇಕ ಭಾವನಾತ್ಮಕ ಹಾಡುಗಳನ್ನು ಸದ್ಗುರು ಸದಾಶಿವ ಬ್ರಹ್ಮೇಂದ್ರರು ಭಾರತೀಯರಿಗೆ ಅನುಗ್ರಹಿಸಿದ್ದಾರೆ. ಬರೇ ಹಾಡುಗಳಷ್ಟೇ ಅಲ್ಲಾ, ’ಆತ್ಮವಿದ್ಯಾವಿಲಾಸ’, ’ಬ್ರಹ್ಮಸೂತ್ರ ವೃತ್ತಿ’, ’ಯೋಗ ಸುಧಾಕರ’, ’ಕೈವಲ್ಯ ಅಮೃತ ಬಿಂದು’ [ಉಪನಿಷತ್ತುಗಳನ್ನಾಧರಿಸಿ], ’ಸಿದ್ಧಾಂತ ಕಲ್ಪವಲ್ಲಿ’[ ಅಪ್ಪಯ್ಯ ದೀಕ್ಷಿತರ ಕೃತಿಗಳ ಮೇಲೆ ಕವಿತ್ವದ ಹೇಳಿಕೆಗಳು], ’ಅದ್ವೈತ ರಸಮಂಜರಿ’, ’ಬ್ರಹ್ಮ ತತ್ತ್ವ ಪ್ರಕಾಶಿಕಾ’, ’ಮನೋ_ನಿಯಮನ’, ’ನವಮಣಿ_ಮಾಲಾ’, ’ಗುರುರತ್ನ ಮಾಲಿಕಾ’, ’ದಕ್ಷಿಣಾಮೂರ್ತಿ ಧ್ಯಾನ’-ಎಂಬೆಲ್ಲಾ ಪುಸ್ತಕಗಳನ್ನು ಸದಾಶಿವ ಬ್ರಹ್ಮೇಂದ್ರರು ಬರೆದಿದ್ದಾರೆ.  ಅವರ ಜೀವಿತ ಕಾಲದಲ್ಲಿ ನಡೆದ ಕೆಲವು ಘಟನೆಗಳನ್ನು ಅವಲೋಕಿಸೋಣ:

1. ಮಹದಾನಪುರದಲ್ಲಿ ಕಾವೇರೀನದೀ ತೀರದಲ್ಲಿ ಅವರು ವಿಹರಿಸುತ್ತಿದ್ದಾಗ, ಕೆಲವು ಮಕ್ಕಳು ತಮ್ಮನ್ನು ನೂರು ಕಿ.ಮೀಗೂ ಹೆಚ್ಚು ದೂರವಿರುವ ಮಧುರೈಯಲ್ಲಿ ನಡೆಯುತ್ತಿದ್ದ ಜಾತ್ರೆಗೆ ಕರೆದೊಯ್ಯಲು ಹೇಳಿದರು. ಸದಾಶಿವ ಬ್ರಹ್ಮೇಂದ್ರರು ಮಕ್ಕಳಿಗೆ ಕಣ್ಮುಚ್ಚಿಕೊಳ್ಳುವಂತೇ ಹೇಳಿದರು. ಒಂದೆರಡು ಸೇಕಂದುಗಳ ನಂತರ ಕಣ್ತೆರೆಯಲು ಹೇಳಿದಾಗ ಮಕ್ಕಳಿಗೆ ಆಶ್ಚರ್ಯ ಕಾದಿತ್ತು! ಮಕ್ಕಳೆಲ್ಲಾ ಅದಾಗಲೇ ಮಧುರೈಯಲ್ಲಿ ನಿಂತಿದ್ದರು! ಇದನ್ನು ಕೇಳಿದ ಯುವಕನೊಬ್ಬ ಮಾರನೇದಿನ ತನ್ನನ್ನೂ ಮಧುರೈಗೆ ಹಾಗೆ ತಲ್ಪಿಸಬೇಕು ಎಂದು ಪರೀಕ್ಷಾರ್ಥವಾಗಿ ಕೇಳಿದ. ಒಪ್ಪಿದ ಸದಾಶಿವ ಬ್ರಹ್ಮೇಂದ್ರರು ಅವನನ್ನು ಅರೆಕ್ಷಣದಲ್ಲಿ ಮಧುರೈಗೆ ಬಿಟ್ಟರು. ಹಿಂದಿರುಗುವಾಗ ಮಾತ್ರ ಆ ಯುವಕನಿಗೆ ಅಲ್ಲೆಲ್ಲೂ ಸದಾಶಿವ ಬ್ರಹ್ಮೇಂದ್ರರು ಕಾಣಿಸಲೇ ಇಲ್ಲ! ಆತ ತಾನೇ ನಡೆಯುತ್ತಾ ಮರಳಿ ಊರು ಸೇರಿಕೊಳ್ಳಬೇಕಾಯ್ತು.

2.ಬೆಳೆದುನಿಂತು ಫಸಲುತುಂಬಿದ ಹೊಲದ ಬುಡದಲ್ಲಿ ಒಮ್ಮೆ ಸದಾಶಿವ ಬ್ರಹ್ಮೇಂದ್ರರು ಧ್ಯಾನಮಗ್ನರಾಗಿಬಿಟ್ಟರು; ಅಲ್ಲಿಗೆ ಬಂದ ಹೊಲದ ರೈತ-ಮಾಲೀಕ ಅವರನ್ನು ಕಳ್ಳನೆಂದೇ ಭಾವಿಸಿ ಜಗಳವಾಡಿದ. ಹೊಡೆಯಲು ದೊಣ್ಣೆ ಎತ್ತಿದ್ದ ರೈತ-ಮಾಲೀಕ ನಿಂತಲ್ಲೇ ವಿಗ್ರಹವಾಗಿ ನಿಂತುಹೋದ! ಮಾರನೇ ಬೆಳಿಗ್ಗೆ ಸದಾಶಿವ ಬ್ರಹ್ಮೇಂದ್ರರು ಧ್ಯಾನದಿಂದ ವಿಮುಖರಾಗಿ ವಿಗ್ರಹದತ್ತ ನೋಡಿ ಮುಗುಳ್ನಗುವವರೆಗೆ ಆತ ವಿಗ್ರಹವಾಗೇ ನಿಂತಿದ್ದ! ಮಾಮೂಲಿ ಸ್ಥಿತಿಗೆ ಮರಳಿಸಿದ ಸದಾಶಿವ ಬ್ರಹ್ಮೇಂದ್ರರ ಶಕ್ತಿಯನ್ನರಿತ ರೈತ-ಮಾಲೀಕ ಅವರಲ್ಲಿ ಕ್ಷಮೆಯಾಚಿಸಿದ.

3.ಇನ್ನೊಮ್ಮೆ ತಪಸ್ಸಿಗೆ ಕುಳಿತಾಗ, ಕಾವೇರಿ ನದಿಯ ಪ್ರವಾಹ ಅವರನ್ನು ಕೊಚ್ಚಿಕೊಂಡು ಹೋಗಿಬಿಟ್ಟಿತ್ತು. ಯಾವುದೋ ಹಳ್ಳಿಯ ಮಣ್ಣುದಿಣ್ಣೆಯನ್ನು ಅಲ್ಲಿನ ರೈತರು ಅಗೆಯುತ್ತಿರುವಾಗ ಆಯುಧಗಳು ಶರೀರಕ್ಕೆ ಸೋಕಿ ಎಚ್ಚೆತ್ತ ಸದಾಶಿವ ಬ್ರಹ್ಮೇಂದ್ರರು ಅಲ್ಲಿಂದ ಎದ್ದುನಡೆದರು.   

ಪೊದುಕೊಟ್ಟೈನ ರಾಜಾ ತೊಂಡೈಮನ್ ಎಂಬಾತನಿಗೆ ದಕ್ಷಿಣಾಮೂರ್ತಿ ಮಂತ್ರವನ್ನು ಮರಳಿನಲ್ಲಿ ಬರೆದು ಉಪದೇಶಿದರು. ಆ ಕುಟುಂಬದವರು ಇಂದಿಗೂ ಆ ಮರಳನ್ನು ಪೂಜಿಸುತ್ತಾ ಹಾಗೇ ಇಟ್ಟುಕೊಂಡಿದ್ದಾರೆ.

4.ತಂಜಾವೂರಿನ ಸಮೀಪದ ಪುನ್ನೈನಲ್ಲೂರಿನಲ್ಲಿ ಮಾರಿಯಮ್ಮನನ್ನು ಸ್ಥಾಪಿಸಲು ಕಾರಣೀಭೂತರಾಗಿದ್ದು ಇದೇ ಸದಾಶಿವ ಬ್ರಹ್ಮೇಂದ್ರರು. ನಂತರ ದೇವದಾನಪಟ್ಟಿ ಎಂಬಲ್ಲಿ ಕಾಮಾಕ್ಷಿದೇವಿಯನ್ನು ಸ್ಥಾಪಿಸುವಂತೇ ಜನರಿಗೆ ತಿಳಿಸಿದವರೂ ಅವರೇ. ಕಾಲಾನಂತರದಲ್ಲಿ ಮೂರು ಪ್ರಾಂತಗಳ ಮೂರು ಜಾಗಗಳಲ್ಲಿ ಸದಾಶಿವ ಬ್ರಹ್ಮೇಂದ್ರರು ಸಜೀವಸಮಾಧಿಯನ್ನು ಏಕಕಾಲಕ್ಕೆ ಪಡೆದು ದಾಖಲೆಮಾಡಿದ್ದಾರೆ! ತಿರುಚಿರಾಪಲ್ಲಿಗೆ ನೂರು ಕಿ.ಮಿ.ದೂರದಲ್ಲಿ, ನೆರೂರಿನಲ್ಲಿ[ತಮಿಳುನಾಡು], ಮಧುರೈಯಿಂದ ಅರ್ವತ್ತು ಕಿ.ಮಿ. ದೂರದಲ್ಲಿರುವ ಮನಮಧುರೈಯ್ಯಲ್ಲಿ ಇವೆ. ಮನಮಧುರೈ ಸೋಮನಾಥ ದೇವಸ್ಥಾನ ಸಮುಚ್ಚಯದಲ್ಲಿ ಅವರ ಸಮಾಧಿ ಇರುವುದನ್ನು ಪತ್ತೆಹಚ್ಚಿದವರು ಕಂಚಿ ಪರಮಾಚಾರ್ಯರು. 


ಅವಧೂತ-ಬ್ರಹ್ಮಜ್ಞಾನಿಗಳನೇಕರ ಭೌತಿಕ ಅವತರಣಿಕೆಯನ್ನು ಗಮನಿಸಿದರೆ ಅಲ್ಲೆಲ್ಲವೂ ವಿಚಿತ್ರಗಳೇ! ತಮ್ಮ ಬಗ್ಗೆ ಅವರು ಏನನ್ನೂ ಹೇಳಿಕೊಳ್ಳುವುದಿಲ್ಲ, ಏನೇ ಅನಾನುಕೂಲವಾದರೂ ವಿಷಾದಿಸುವುದಿಲ್ಲ, ಜನಪ್ರಿಯತೆಯನ್ನು ಎಂದಿಗೂ ಬಯಸುವವರಲ್ಲ, ರಾಜಕಾರಣದಲ್ಲಿ ತೊಡಗುವುದಿಲ್ಲ, ಧನ-ಕನಕಗಳ ಆಸೆಯಿಲ್ಲ, ಭೋಗಭಾಗ್ಯಗಳ ಬಗ್ಗೆ ತಲೆಕೆಡಿಸಿಕೊಂಡವರಲ್ಲ, ಹೀಗೇ ಇರಬೇಕು ಎಂಬ ನಿಯಮಗಳೂ ಕೂಡ ಇರುವುದಿಲ್ಲ. ಬಟ್ಟೆಯಿದ್ದರೂ ಸರಿಯೇ ನಗ್ನವಾಗಿದ್ದರೂ ಸರಿಯೇ, ಉಂಡರೂ ಸರಿಯೇ ಉಪವಾಸವೇ ಇದ್ದರೂ ಸರಿಯೇ, ಅಳು-ನಗುಗಳಲ್ಲಿ ಅಂತರ ಕಾಣದ ಸ್ವಂತಿಕೆ ಅವರದಾದರೂ ಈ ಲೋಕದ ಜಂಜಡಗಳಲ್ಲಿ ಜೀವನದ ಮಜಲುಗಳನ್ನು ಹಮ್ಮಿಕೊಂಡು ಹೆಣಗಾಡುತ್ತಿರುವ ಜನಸಾಮಾನ್ಯರಿಗಾಗಿ ಅಂತಹ ಮಹಾತ್ಮರು ಬರುತ್ತಾರೆ-ಬರುತ್ತಲೇ ಇರುತ್ತಾರೆ-ತಮ್ಮ ಕೆಲಸ ಮುಗಿದ ತಕ್ಷಣ ಬಂದಷ್ಟೇ ವೇಗದಲ್ಲಿ ಸಾಗಿಹೋಗುತ್ತಾರೆ. ನಮ್ಮ ಲೋಕವನ್ನೇನೋ ಅವರು ಬಲ್ಲರು! -ಇಲ್ಲಿನ ಆಗುಹೋಗುಗಳನ್ನು ಅವರು ತಿಳಿವರು, ನಮಗೆ ಮಾತ್ರ ಅವರ ಮೂಲನೆಲೆಯ ರೇಖು-ಆ ಶಕ್ತಿಯ ಉಗಮಗೊಳ್ಳುವ ಚಿಲುಮೆ-ಅನಂತದ ನೆಂಟಸ್ತಿಕೆಯ ಕುರುಹು ದೊರೆವುದೇ ಇಲ್ಲ. ಆದರೆ ಅಂಥಾ ಮಹನೀಯರ, ಮಹಾತ್ಮರ, ಸಾಧಕರ ಜೀವನಗಾಥೆಯನ್ನು ತನ್ಮೂಲಕ ಅವರು ಕೊಟ್ಟುಹೋದ ಬಳುವಳಿಗಳನ್ನು ಮರೆಯುವ ಹಾಗಿಲ್ಲ, ಅಂಥಾ ಅವಧೂತ ಪರಂಪರೆಗೆ ಚಾತುರ್ಮಾಸ್ಯ ಸಮಯದಲ್ಲಿ ಸಾಷ್ಟಾಂಗ ನಮಸ್ಕಾರಗಳು.