ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, February 16, 2010

ಅನುಲೋಮ

ಕೊರಗು, ಅಹಂಕಾರ, ದುಃಖ-ದುಮ್ಮಾನ, ನೋವು-ನಲಿವು,ಬಡತನ-ಸಿರಿತನ ಏನೇ ಇರಲಿ ಅವುಗಳನ್ನು ಸಮಚಿತ್ತದಿಂದ ಸ್ವೀಕರಿಸಿ ನಡೆಯಬೇಕೆಂಬ ನಮ್ಮ ಹಿರಿಯ ಕವಿ ದಿ| ಶ್ರೀ ಡಿ.ವಿ.ಜಿ.ಯವರನ್ನು ಮತ್ತೆ ನೆನೆಪಿಸಿಕೊಳ್ಳುತ್ತ ಅವರ ಕಗ್ಗದ ಅನುಭಾವವನ್ನು ಅನುಸರಿಸಿ ಮತ್ತೆ ಚುಟುಕಗಳನ್ನು ಬರೆದಿದ್ದೇನೆ, ಕೆಲವರಿಗೆ ಇಂಥವೆಲ್ಲ ಅರ್ಥವಾಗದ ಕಗ್ಗಂಟು! ಆದರೂ ಡಿ.ವಿ.ಜಿ.ಯವರಷ್ಟು ಕ್ಲಿಷ್ಟ ಶಬ್ಧಗಳನ್ನು ಬಳಸದಿರಲು ಪ್ರಯತ್ನಿಸಿದ್ದೇನೆ. ನೆಗಡಿನೂ ಇದೆ ಕಮ್ಮಿ ಆಗ್ಬೇಕು - ಐಸ್ ಕ್ರೀಮೂ ಬೇಕು ಅಂದರೆ ತುಂಬಾ ಕಷ್ಟ, ಒಂದನ್ನು ಪಡೆಯುವಾಗ ಇನ್ನೊಂದರ ತ್ಯಾಗ ಅನಿವಾರ್ಯ! ಇಲ್ಲಿ ಅವರ ಕಗ್ಗದ ರೂಪುರೇಷೆಯ ರೀತಿಯಲ್ಲಿ ಕಾವ್ಯ ಮುಂದುವರಿದಿದೆ. ಆದರೆ ತಕ್ಕಮಟ್ಟಿಗೆ ಸರಳಶಬ್ಧಗಳನ್ನು ಉಪಯೋಗಿಸಿದ್ದೇನೆ,ಇನ್ನೂ ಸರಳ ಮಾಡಹೊರಟರೆ ಅದು ಅರ್ಥಹೀನವಾಗುತ್ತದೆ. ಹೀಗಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಸರಳೀಕರಿಸಿದ್ದೇನೆ. ಹೆಸರೊಂದಿದ್ದರೆ ಚೆನ್ನ ಅಲ್ಲವೇ ? ಅದಕ್ಕೇ ಈ ಚುಟುಕಗಳ ಮಾಲೆಯನ್ನು

'ಅನುಲೋಮ'

ಎಂದು ಕರೆದಿದ್ದೇನೆ. ಅನುಕೂಲದ ಸಮಯನೋಡಿ ಒಮ್ಮೆ ಓದಿಬಿಡಿ ಆಗದೇ?


'ಅನುಲೋಮ'
[ಚುಟುಕಗಳು]

ನೋವಿನಲಿ ಯಾರಿಹರು ಬರಲುಂಟೆ ನಿನ್ನಜನ
ನಲಿವಿನಲಿ ಕಂಡ ಕಂಡವರೆಲ್ಲ ಸಖರು
ಒಲವಿನಲಿ ಗೆಲುವೆಂಬ ತತ್ವ ನೀನನುಸರಿಸು
ಹಲವ ಹಂಬಲಿಸದಿರು | ಜಗದಮಿತ್ರ

ತನ್ನ ತಾನರಿಯುವುದು ಘನ್ನಮಹಿಮರ ಮಹತಿ
ತನ್ನೊಳಗೆತಾನಲ್ಲವೆಂಬ ಅನುಭೂತಿ
ಕನ್ನತಾಕದ ಪತ್ತು ಜನುಮಜನುಮಕು ಸಾಕು
ಬಿನ್ನಾಣವಿರೆ ಬರದು | ಜಗದಮಿತ್ರ

ಎಲುವಿರದ ನಾಲಿಗೆಯ ಹಲವು ಥರ ತಿರುಗಿಸುತ
ಹುಲುಮಾನವರ ಮಧ್ಯೆ ಹಲುಬುವುದು ಹಿತವೇ?
ಗೆಲುವಿನೋಳ್ ಸೋತದಿನದಾತಂಕ ನೆನೆಯುತ್ತ
ಬಲವುಬ್ರಹ್ಮನ ತೇಜ’ | ಜಗದಮಿತ್ರ

ಆರು ಒಂಬತ್ತೆಂಬ ಅಂಕೆಗಳ ತಿರುವಿದರೆ
ತೋರಿಬರುವುದು ನಿನಗೆ ವಿಕಸನದ ದಾರಿ
ಹಾರಿ ನೂರೆಂಟು ತನದೆಂದು ಸಾರುವ ಮುನ್ನ
ಮಾರಜನಕನ ನೆನೆಯೊ | ಜಗದಮಿತ್ರ

ಗಳಿಗೆಗೊಂದಾವರ್ತಿ ಬಳಗವೆಲ್ಲವ ಕರೆದು
ಸಳನ ಪೌರುಷ ಮೆರೆಯೆ ಹಂಬಲಿಸಬೇಡ
ಒಳಗಿರುವ ಸಿರಿತಾನು ಹಳವರಿದು ಹೊರಟಾಗ
ಗಳಗಳನೆ ಅಳುವೆ ನೀ | ಜಗದಮಿತ್ರ

ವಿದ್ಯೆಯಲಿ ಸೋತಿಹರೆ ಜಗವಿಹುದು ವಿಸ್ತರದಿ
ಗೆದ್ದೇಗೆಲುವೆನು ಎಂಬ ಬದ್ಧಕಟಿಯಿರಲಿ
ಸದ್ದುಮಾಡದೆ ಓದು ಕಾರ್ಯತತ್ಪರನಾಗು
ಎದ್ದು ಕುಣಿಯುವೆ ನೀನು| ಜಗದಮಿತ್ರ

ತಂತ್ರಜ್ಞಾನದಿ ಮತ್ತು ವೈದ್ಯರಂಗದಿ ಮಾತ್ರ
ಯಾಂತ್ರಿಕದ ಬದುಕು ಸ್ಥಿರವೆನಲು ಬೇಡ
ಮಂತ್ರಪಠಿಸುವರೆಲ್ಲ ಕಟ್ಟಿಹರು ಬಹುಮಹಡಿ
ತಂತ್ರದಿಂ ಪರದೊಳಗೆ ! ಜಗದಮಿತ್ರ