ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, June 19, 2010

ಶ್ರೀಕೃಷ್ಣನ ನೆನೆದು


ಶ್ರೀಕೃಷ್ಣನನ್ನು ನಾವು ನೋಡುವುದು ಬರೇ ನವನೀತ ಚೋರ, ಹೆಂಗಸರ ಮಳ್ಳ, ಕಪಟ ರಾಜಕಾರಣಿ ಎಂದೆಲ್ಲ ಹೌದಷ್ಟೇ ? ಆದರೆ ಕೃಷ್ಣ ಬದುಕಲ್ಲಿ ತನ್ನ ಸ್ವಾರ್ಥಕ್ಕಾಗಿ ಯಾವರೀತಿ ಬದುಕಿದ ಅಥವಾ ತಾನು ಎಷ್ಟು ಕೋಟಿ ನುಂಗಿದ ಎಂದು ಯಾವತ್ತಾದರೂ ಯಾರಾದರೂ ನೋಡಿದೆವೇ ? ಇಲ್ಲವಲ್ಲ ? ಕೃಷ್ಣ ನಮ್ಮ ಥರದಲ್ಲೇ ಮನುಷ್ಯನಾಗಿದ್ದ ಎಂದಮೇಲೆ ಅವನಿಗೆ ನಮ್ಮಂತೆ ಬೇಕು-ಬೇಡಗಳು ಜೀವನದಲ್ಲಿ ಇರುತ್ತಿದ್ದವಲ್ಲ, ಆದರೆ ಅವುಗಳ ಬಗ್ಗೆ ಆತ ಒಂದು ಕ್ಷಣವೂ ಚಕಾರವೆತ್ತಲಿಲ್ಲ. ಮಳೆಬಂದಾಗ ಇಂದ್ರನ ಮಾತು ಕೇಳಿಸಲು, ಇಂದ್ರನಿಗೆ ಬುದ್ಧಿ ಕಲಿಸಲು ಮಂದರಗಿರಿಯನ್ನೇ ಅದೂ ಕಿರುಬೆರಳಿಂದ ಎತ್ತಿ ಹಿಡಿದ, ಚಂದಿರನ ಪ್ರತಿಬಿಂಬವನ್ನು ಹಾಲ ಬಿಂದಿಗೆಯಲ್ಲಿ ಕಂಡು ಶ್ಯಮಂತಕ ಮಣಿಯ ಕಳ್ಳ ಎನಿಸಿಕೊಂಡ, ಹಂದರದಲ್ಲಿ ಹದಿನಾರು ಸಾವಿರ ಕನ್ನಿಕೆಯರನ್ನು ಬಿಡಿಸಿ ಅವರು ಅನಾಥರಾಗದಿರಲಿ ಎಂಬ ಕೇವಲ ಆ ಒಂದು ದೃಷ್ಟಿಯಿಂದ ಅವರೆಲ್ಲ ತನ್ನ ಹೆಂಡಿರು ಎಂದ-ಆದರೆ ಭೋಗಿಸಲಿಲ್ಲ,ಬಳಸಲಿಲ್ಲ-ಬದುಕು ಕೊಟ್ಟ!, ಕುಂತಿಯ ಮಗ ನೀನು ಕರ್ಣಾ ನಿನಗೆ ತಮ್ಮಂದಿರೊಟ್ಟಿಗೆ ಯುದ್ಧ ಬೇಡವೆಂದ, ದಾಸಿಯ ಮಗ ವಿದುರನ ಮನೆಯಲ್ಲಿ ಬಿಂದು ಹಾಲನ್ನು ಕುಡಿದು ಹಾಲಿನ ಸಿಂಧು-ಸಾಗರವನ್ನೇ ಹರಿಸಿದ, ಬಾಲ್ಯ ಸ್ನೇಹಿತ ಕುಚೇಲನನ್ನು ಅಂಗಳದ ವರೆಗೆ ಓಡೋಡಿ ಬಂದು ಮಂಗಳ ವಾದ್ಯಗಳೊಂದಿಗೆ ಸ್ವಾಗತಿಸಿ-ಆತನ ಪಾದ ಪೂಜೆ ಮಾಡಿ, ಆತ ಸಂಕೋಚದಿಂದ ಕೊಡದೇ ಇದ್ದ ಬೇಡಿ ತಂದ ಅವಲಕ್ಕಿಯನ್ನು ಕಟ್ಟಿತಂದಿದ್ದ ಚಿಂದಿಯನ್ನು ಬಿಡಿಸಿ ಮುದದಿಂದ ಮೆದ್ದು-ಮನಸಾರೆ ಸ್ವೀಕರಿಸಿ ಬಂದ ಕಾರಣವನ್ನು ಆತ ಹೇಳದೇ ಇದ್ದರೂ ಆತನ ಕಣ್ಣಲ್ಲೇ ಅದನ್ನು ಗ್ರಹಿಸಿ ಅನುಗ್ರಹಿಸಿದ ಅತಿಮಾನುಷ ಶಕ್ತಿ ನಮ್ಮ ಕೃಷ್ಣನಲ್ಲವೇ ? ಜನಸಾಮಾನ್ಯರ ಮಧ್ಯೆ ಇದ್ದೂ ಎಲ್ಲರಲ್ಲಿ ಒಬ್ಬನಾಗಿ ಅತಿ ಸಾಮಾನ್ಯರಂತೆ ಬದುಕಿದ ಕೃಷ್ಣ ತನಗಾಗಿ ಏನನ್ನೂ ಇಟ್ಟುಕೊಳ್ಳಲಿಲ್ಲ! ತನ್ನ ಬದುಕಿನಲ್ಲಿ ಹುಟ್ಟಿದಾರಭ್ಯ ತರಾವರಿ ಸಮಸ್ಯೆಗಳು ಎದುರಾಗುತ್ತಿದ್ದರೂ ಅವೆಲ್ಲಕ್ಕೂ ಸಾವಧಾನವಾಗಿ, ಬಹುತಾಳ್ಮೆಯಿಂದ-ಬಹು ಜಾಣ್ಮೆಯಿಂದ ಬೆಣ್ಣೆಯ ಮೇಲಿನ ಕೂದಲನ್ನೋ ಕಣ್ಣಲ್ಲಿ ಬಿದ್ದ ಕೂದಲನ್ನೋ ತೆಗೆವಂತೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದ.

ಜಗದ್ಗುರು ಎಂದು ನಾಮಫಲಕವನ್ನು ಕೃಷ್ಣ ಹಾಕಿಕೊಳ್ಳಲಿಲ್ಲ. ನಮ್ಮ ಜನರಲ್ಲೇ ಇರುವ ಅನೇಕ ಜ್ಞಾನಿಗಳು ಅವನ ರೂಪವನ್ನು ಅರಿತು ಅವನೊಬ್ಬ ಕಾರಣೀಭೂತ ವಿಭೂತಿ ಪುರುಷ ವ್ಯಕ್ತಿತ್ವ ಎಂದು ಹಾಗೆ ಕರೆದು ಗೌರವಿಸಿದರು. ಜಗತ್ತಿಗೇ ಅಪ್ರತಿಮ ಕೊಡುಗೆಯಾಗಿ ಶ್ರೀಮದ್ಭಗವದ್ಗೀತೆಯನ್ನು ಕರುಣಿಸಿದ ಕೃಷ್ಣ ಹಿಂದಿನ-ಇಂದಿನ-ಮುಂದಿನ ಅಥವಾ ಸಾರ್ವಕಾಲಿಕ ಸತ್ಯವನ್ನು-ತಥ್ಯವನ್ನು ಬೋಧಿಸಿದ, ಬೋಧಿಸಿ ಗುರುವಾದ! ಇವತ್ತಿಗೂ ಅದರ ಒಂದೊಂದು ಅಂಶವೂ ಅತಿಮೌಲ್ಯಯುತ. ಹಲವು ತೆರನಾದ ಮಾರ್ಗದರ್ಶಕರು, ನಿರ್ದೇಶಕರು, ನಿರ್ಮಾಪಕರು, ಸನ್ಯಾಸಿಗಳು, ವಿಜ್ಞಾನಿಗಳು ಕಾಯಂ ಅಭ್ಯಸಿಸುತ್ತ ಅಳವಡಿಸಿಕೊಳ್ಳಲು ಬಯಸುವ, ಜಗತ್ತಿಗೇ ಭಾರತಕೊಟ್ಟ, ಮಹಾಭಾರತ ಕೊಟ್ಟ ಮಹಾನ್ ಕೊಡುಗೆ ನಮ್ಮ ಭಗವದ್ಗೀತೆ. ಬ್ರಹ್ಮಲೀನ ಪೂಜ್ಯ ಶ್ರೀ ಜಯದಯಾಲ ಗೋಯಂದಕಾ ರವರು ಅತೀ ಕಡಿಮೆ ವೆಚ್ಚದಲ್ಲಿ ತನ್ನ ಸೇವಾರೂಪವಾಗಿ ಗೀತಾ ಪ್ರೆಸ್, ಗೋರಖಪುರ ಇದರಮೂಲಕ ಹರಿಸುತ್ತಿರುವ ಸೇವಾಸುಧೆ ಈ ಭಗವದ್ಗೀತೆಯ ಪ್ರತಿಗಳ ಪ್ರಸರಣೆ. ಗೀತಾಮೃತವನ್ನು ಅಂದು ಕರುಣಿಸಿದ ಶ್ರೀಕೃಷ್ಣನನ್ನೂ ಅದನ್ನು ಬಹುಭಾಷೆಗಳಲ್ಲಿ ಮುದ್ರಿಸಿ ಸ್ವಂತಖರ್ಚಿನಲ್ಲಿ ವಿತರಿಸಿದ ಶ್ರೀ ಜಯದಯಾಲರನ್ನೂ ಹಲವು ಬಾರಿ ನೆನೆಯೋಣ, ನಮ್ಮ ಹಲವು ಕಾರ್ಯಕ್ರಮಗಳಲ್ಲಿ ನಮ್ಮ ಪ್ರೀತಿಪಾತ್ರರಿಗೆ ಒಂದೊಂದು ಪ್ರತಿಯನ್ನು ಕೊಡುವ ಮೂಲಕ ಅದರಲ್ಲಿರುವ ಜ್ಞಾನವನ್ನು-ವಿಜ್ಞಾನವನ್ನು ಎಲ್ಲೆಡೆ ಪಸರಿಸೋಣ ಅಲ್ಲವೇ ?


ಶ್ರೀಕೃಷ್ಣನ ನೆನೆದು


ಗುರುತರದ ಭಾರ ನಗುಮೊಗದಿ ಹೊತ್ತು
ಸಿರಿ ಕೃಷ್ಣ ನಿಂತ ಜಗದಿ
ಅರಿವುಂಟುಮಾಡಿ ನಿಜ ಬದುಕಿನರ್ಥ
ತೆರೆದಿಟ್ಟ ಗೀತೆ ಇಹದಿ

ಬಲುನೋವ ಸಹಿಸಿ ನಲಿವೆಲ್ಲ ತ್ಯಜಿಸಿ
ಅಲೆದಲೆದು ರಾಜಕಾರ್ಯ
ನೆಲೆನಿಂತು ಹಲವು ಸಂಕುಲವ ನಡೆಸಿ
ಒಲಿದಿತ್ತ ಬಾಳು ನವ್ಯ

ನಡೆತಂದ ಬಡವ ಸ್ನೇಹದಿ ಕುಚೇಲ
ಒಡಹುಟ್ಟಿದಂತ ಪ್ರೀತಿ
ಒಡೆದಾಡಲಿಲ್ಲ ಬಡತನದ ಕಷ್ಟ
ಬಿಡುಗಣ್ಣಲರಿತ ರೀತಿ !

ಘನ ಘೋರ ಕ್ರೂರ ತನ್ನ ಮಾವ ಕಂಸ
ಅನಗತ್ಯವಾಗಿ ಜನರ
ಮನಬಂದರೀತಿ ಹುರಿದುಂಬ ಭೀತಿ
ನೆನೆದಲ್ಲಿ ಕೃಷ್ಣ ಕುವರ

ಹದಿನಾರು ಸಾವ್ರ ಹೆಂಗಳೆಯರನ್ನು
ಹುದುಗಿಟ್ಟು ಕಾರಾಗೃಹದಿ
ಹದಮೀರಿ ನಡೆದ ನರಕಾಸುರನ್ನ
ಸದೆಬಡಿದು ಬಿಡಿಸಿ ಭರದಿ

ಇದಕಂಡ ನಮ್ಮ ಬಹು ಜನತೆಯೆಲ್ಲ
ವದರಿದರು ಕಪಟನೆನುತ
ಎದುರಿರುವ ಸತ್ಯ ಅರಿತಿಲ್ಲ ಕೊನೆಗೂ
ಬದುಕನ್ನು ನೀಡ್ದ ಪಾಠ

ಕೌರವಗೆ ಸಾರಿ ಪ್ರತಿ ಬಾರಿ ಬಾರಿ
ರೌರವದ ನರಕ ನೆನೆದು
ಗೌರವಕೆ ಕುತ್ತು ತಂದಿತ್ತ ಹೊತ್ತು
ಸೌರವಗೂ ವಿಷಯ ಪೇಳ್ದು

ನವನೀತ ಕಳ್ಳ ಹೆಂಗಸರ ಮಳ್ಳ !
ಭವರೋಗ ವೈದ್ಯ ನಿನ್ನ
ಅವನಿಯೊಳು ಜನತೆ ಆಡಿಹರು ಹಲವು
ಅವತಾರಿ ಕ್ಷಮಿಸೊ ಮುನ್ನ


ಪ್ರಪನ್ನಪಾರಿಜಾತಾಯ ತೋತ್ರವೇತ್ರೈಕಪಾಣಯೇ |
ಜ್ಞಾನಮುದ್ರಾಯ ಕೃಷ್ಣಾಯ ಗೀತಾಮೃತದುಹೇ ನಮಃ ||