ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, December 31, 2012

ಛೂ ಬಾಣ, ಹೂಬಾಣ ಮತ್ತು ’ಬಾಣ’ಗಳನ್ನು ಬಿಡುವ ಸಂಪಾದಕರುಗಳು !

ಚಿತ್ರ ಋಣ : ಅಂತರ್ಜಾಲ 
ಛೂ ಬಾಣ, ಹೂಬಾಣ ಮತ್ತು ’ಬಾಣ’ಗಳನ್ನು ಬಿಡುವ ಸಂಪಾದಕರುಗಳು!

ಕಲಿಯುಗದಲ್ಲಿ ರಾಮಬಾಣ ಕೇವಲ ಹೆಸರಿಗೆಮಾತ್ರ! ಯಾಕೆಗೊತ್ತೇ ಬಹುತೇಕರು ಎಡಪಂಥೀಯರು: ದೇವರು-ದಿಂಡರನ್ನು ನಂಬುವವರಲ್ಲ, ರಾಮ ಇದ್ದನೆಂಬ ಸಂಗತಿಯೇ ಅವರಿಗೆ ಅಸಂಗತ. ಇನ್ನು ಕೆಲವರಿಗೆ ರಾಮನ ಹೆಸರನ್ನು ಹೇಳಿ ಬೇಳೇ ಬೇಯಿಸಿಕೊಳ್ಳುವ ಕೆಲಸವಾದ್ದರಿಂದಲೂ ಇಂಥಾ ಆಸಾಮಿಗಳು ಕರೆದರೂ ರಾಮ ಈ ದಿಕ್ಕಿಗೆ ಮುಖಹಾಕುವುದಿಲ್ಲವೆಂಬುದು ಅವರಿಗೇ ಗೊತ್ತಿರುವುದರಿಂದಲೂ ರಾಮನಾಮದ ದುರುಪಯೋಗವಾಗುತ್ತಿದೆ. ವಿಷಯ ಹೀಗಿದ್ದರೂ ರಾಮನ ಬಾಣ ಗುರಿತಪ್ಪುತಿರಲಿಲ್ಲ ಎಂಬುದು ನಮಗೆಲ್ಲಾ ವಿದಿತವಾದ ಸತ್ಯಕಥೆ. ರಾಮಬಾಣವನ್ನು ವಿರೋಧಾಭಾಸವಾಗಿ ಉಪಯೋಗಿಸುವ ಪರಿಯೂ ಇದೆ: ಹೇಗೆ ಬೈಗುಳಗಳಿಗೆ ಕೆಲವರು ’ಮಂತ್ರ’ ಅಥವಾ ’ಸಂಸ್ಕೃತಪದಗಳು’ ಎನ್ನುತ್ತಾ ಪದಗಳಿಗೆ ಅಪಮೌಲ್ಯ ಹುಟ್ಟಿಸುತ್ತಾರೋ, ’ಸರಿಯಾಗಿ ಮುಖಕ್ಕೆ ಮಂಗಲಾರತಿಮಾಡಿದೆವು’ ಎಂದು ಹೇಳಿ ’ಮಂಗಲಾರತಿ’ಪದದ ’ಪದವಿ’ಯನ್ನು ಕಳೆಯುತ್ತಾರೋ ಅದೇ ರೀತಿ ನಮ್ಮಲ್ಲಿ ಕೆಲವು ಕಡೆ ಯಾರಾದರೂ ಕೆಟ್ಟ ಹೂಸು ಬಿಟ್ಟರೆ "ಅಯ್ಯೋ ಬಿಟ್ಟ್ನಪ್ಪಾ ಒಂದು ರಾಮಬಾಣ"ಎಂದು ಆಡಿಕೊಳ್ಳುವುದಿದೆ. ಹೀಗೇ ಕೆಲವು ಪದಗಳನ್ನು ನಮ್ಮನಮ್ಮ ಯೋಗ್ಯತೆಗೆ ಮತ್ತು ಅನುಕೂಲಕ್ಕೆ ತಕ್ಕಂತೇ ದುರುಪಯೋಗಮಾಡಿಕೊಳ್ಳುವವರ ಮಧ್ಯೆ ಬಾಣಗಳ ಬಗ್ಗೆ ಅವಲೋಕನಮಾಡುವ ಮನಸ್ಸಾಯ್ತು. ಬಾಣಗಳಲ್ಲೇ ವಿಶೇಷವಾದ ಶಕ್ತಿಯನ್ನು ಹೊಂದಿದಂತಹ ಬಾಣಗಳನ್ನು ಅಸ್ತ್ರಗಳೆಂದೂ ಕರೆಯುತ್ತಿದ್ದರು ಎಂಬುದು ತಿಳಿದುಬರುತ್ತದೆ, ಸರಿಯಷ್ಟೇ? ಬ್ರಹ್ಮಾಸ್ತ್ರ, ನಾರಾಯಣಾಸ್ತ್ರ, ಸರ್ಪಾಸ್ತ್ರ ಹೀಗೆಲ್ಲಾ ಕೇಳಿದ್ದೇವೆ ನಾವು ಅಲ್ಲವೇ? ಇಂತಹ ಅಸ್ತ್ರಗಳೋ ಬಾಣಗಳೋ ವೈರಿಗಳನ್ನೋ ವಿರೋಧಿಗಳನ್ನೋ ವಧೆಮಾಡಲು ಬಳಸಲ್ಪಡುತ್ತಿದ್ದವು ಎಂಬುದಂತೂ ನಿಜ; ಯಾಕೆಂದರೆ ನಾಗಾಲ್ಯಾಂಡ್ ಮಿಜೋರಾಮ್ ದಂಥಾ ಪ್ರದೇಶದ ಕೆಲವು ಬುಡಕಟ್ಟು ಜನಾಂಗಗಳಲ್ಲಿ ಇಂದಿಗೂ ಬಾಣಗಳ ಪ್ರಯೋಗ ಚಾಲ್ತಿಯಲ್ಲಿದೆ. ರಾಮನ ವಿರೋಧಿಯಾದ ವಾಲಿಗೆ ರಾಮಪ್ರಯೋಗಿಸಿದ ಬಾಣವೂ ಒಮ್ಮೆ ತಾಗಿರಲಿಲ್ಲವಂತೆ! ಹೀಗಿರುವಾಗ ಗುರಿತಲ್ಪದ ಅನೇಕ ಬಾಣಗಳನ್ನು ಬಿಡುವ ಹುಲುಮಾನವರು ನಮ್ಮ ನಡುವೆ ಇದ್ದಾರೆ; ಅವು ಬಾಣಗಳಲ್ಲ, ಆದರೆ ಮಾತಿನ ಬಾಣಗಳು, ಅಕ್ಷರ ಬಾಣಗಳು.

ವಿರೋಧಿಗಳನ್ನು ಬಗ್ಗುಬಡಿಯಲಷ್ಟೇ ಅಲ್ಲದೇ ಇನ್ನೂ ಕೆಲವು ಬಾಣಗಳನ್ನು ನಮ್ಮ ಹಿಂದೂ ಪುರಾಣಗಳಲ್ಲಿ ಹೇಳಿದ್ದಾರೆ; ಈ ಬಾಣಗಳು ಕಾಮದೇವ ಮನ್ಮಥನಿಗೆ ಮೀಸಲು. ಅಶೋಕ, ಚೂತ, ಅರವಿಂದ, ನಮಮಲ್ಲಿಕಾ, ನೀಲೋತ್ಫಲಗಳೆಂಬ ಶರಗಳನ್ನು ಎಸೆದು, ಸುಕುಮಾರ ಮನ್ಮಥ ಕುಮಾರ-ಕುಮಾರಿಯರ ನಡುವೆಯೋ ಅಥವಾ ಹರೆಯದ ಹೆಣ್ಣು-ಗಂಡಿನ ನಡುವೆಯೋ ವಿಷಯಾಸಕ್ತಿಯನ್ನು ಜಾಗೃತಗೊಳಿಸಿ, ಪರಸ್ಪರ ಅನುರಕ್ತರಾಗುವಂತೇ ಪ್ರೇರೇಪಿಸುತ್ತಾನೆ ಎಂದೂ ನಾವು ಕೇಳಿದ್ದೇವಲ್ಲವೇ? ಶಿವ-ಶಿವೆಯರ ಒಲವಿಗೆ ಕಾರಣನಾಗಿ ತನ್ನನ್ನೇ ಜಗತ್ತಿಗಾಗಿ ಬಲಿಹಾಕಿಕೊಂಡವ ಅರ್ಥಾತ್ ಮುಕ್ಕಣನ ಮೂರನೇ ಕಣ್ಣಿನ ಜ್ವಲಿತಾಗ್ನಿಯಲ್ಲಿ ಬೆಂದು ಬೂದಿಯಾದವ ಮನ್ಮಥ. ಸದ್ಯ ನಮಗೆ ಈ ಬಾಣಗಳ ಸುದ್ದಿಯೂ ಬೇಕಾಗಿಲ್ಲ! ಯಾಕೆಂದರೆ ನಮಗೆ ಇವೆಲ್ಲಾ ಕೇರ್ವಲ ಕಥೆಗಳಾಗಿ ಗೋಚರಿಸುವುದು ಕಲಿಯುಗದ ಗೋಚಾರಫಲ! ಮುಂದುವರಿದ ಜಗತ್ತಿನ ಅತಿಮುಂದುವರಿದ ತಂತ್ರಜ್ಞಾನದಲ್ಲಿ ಪಳಗಿದ ನಾವು, ಅಪ್ಪನನ್ನೇ ಅಪನಂಬಿಕೆಯಿಂದ ನೋಡುವ ಕಾಲ ಕಲಿಗಾಲ ಎಂದರೂ ತಪ್ಪಲ್ಲವಲ್ಲಾ? ಯಾರಮೇಲೂ ನಂಬಿಕೆ ಇಡಲಾರದ ಸ್ಥಿತಿಗೆ ನಮ್ಮನ್ನೇ ನಾವು ಒಡ್ಡಿಕೊಂಡಿದ್ದರೆ ಅದು ನಮ್ಮ ಅಧುನಿಕ ವಿಜ್ಞಾನದ ಸಂವಹನ ಪರಿಕರಗಳಿಂದ, ಸಮೂಹ ಮಾಧ್ಯಮಗಳ ದುರ್ಬಳಕೆಯಿಂದ ಆದ ಅಡ್ಡಪರಿಣಾಮ [ಸೈಡ್ ಇಫೆಕ್ಟ್] ಎಂಬುದಕ್ಕೆ ನನ್ನ ಜೊತೆ ನೀವೆಲ್ಲಾ ದುಡ್ಡು ತೆಗೆದುಕೊಳ್ಳದೇ ವೋಟುಹಾಕುತ್ತೀರೆಂಬ ನಂಬಿಕೆಯಂತೂ ಇದೆ!!  ಹೇಳುತ್ತಿರುವ ಈ ವಿಷಯವನ್ನು ಪೂರ್ತಿಯಾಗಿ ಓದಿ ತಿಳಿದ ನಿಮ್ಮಿಂದ, ಇಡಗಂಟು ಬಚಾವ್ ಆಗುವಷ್ಟಾದರೂ ವೋಟುಗಳು ಬೀಳುತ್ತವೆ ಎಂಬ ವಿಶ್ವಾಸವೂ ಇದೆ!--ಇದು ಅಪನಂಬಿಕೆಗಳ ನಡುವೆಯೇ ನಂಬಿಕೆ ಇಡಬಹುದಾದ ವಿಶಿಷ್ಟ ಕಾರ್ಯ!ಇರಲಿ ಬಿಡಿ. 

ಬಾಣ ಎಂಬುದನ್ನೇ ತನ್ನ ಹೆಸರನ್ನಾಗಿಸಿಕೊಂಡಿದ್ದವ ಒಬ್ಬ ಮಹಾಕವಿ. ಕಾಳಿದಾಸನಂತೇ, ಪಾಣಿನಿಯಂತೇ, ಭವಭೂತಿಯಂತೇ ಅವರ ಸಾಲಿನಲ್ಲಿ ನಿಲ್ಲುವ ಅಸಾಮಾನ್ಯರಲ್ಲಿ ಬಾಣನೂ ಒಬ್ಬ ಮಹನೀಯ, ಮನನೀಯ, ಸ್ಮರಣೀಯ. ಬಾಣನ ನಂತರ ಅನೇಕ ಕವಿಪುಂಗವರು ಈ ನೆಲದಲ್ಲಿ ಆಗಿಹೋದರು ಆದರೆ ಬಾಣ ಎಂಬ ಹೆಸರನ್ನು ಅವರ್ಯಾರೂ ಮತ್ತೆ ಇಟ್ಟುಕೊಳ್ಳಲಿಲ್ಲ; ಹೀಗಾಗಿ ಒಮ್ಮಡಿ [ಒಂದನೆಯ] ಬಾಣ, ಇಮ್ಮಡಿ ಬಾಣ, ಮುಮ್ಮಡಿಬಾಣ ಎಂದೆಲ್ಲಾ ಹೇಳುವ ಅಗತ್ಯ ಬೀಳುವುದಿಲ್ಲ. ಆದರೂ ಬಾಣ ಎಂಬ ಶಬ್ದದ ನೇರ ಹಾಗೂ ಪರೋಕ್ಷ ಮತ್ತು ಬೇಹುಗಾರಿಕಾ ಬಳಕೆ ಸದಾ ಜಾರಿಯಲ್ಲೇ ಇದೆ.  ಅದು ಹೇಗೆ ಎಂಬುದಕ್ಕೆ ಉದಹರಿಸಿಬಿಡುತ್ತೇನೆ: ಕಥೆಗಳಲ್ಲಿ, ’ಆರ್ಚರಿ’ ಎಂಬ ವಿದ್ಯೆಯ ಪರೀಕ್ಷೆಯ ಫಲಿತಾಂಶಗಳಲ್ಲಿ ನಮಗೆ ಕಾಣುವುದು ನೇರವಾದ ಬಾಣ.  ಆಗಾಗ ಕೆ.ಇ.ಬಿಯವರ ಬಿಲ್ಲುಬಂದಾಗ ಅನೇಕರಿಗೆ ಬಾಣದ ನೆನಪೂ ಆಗುವುದೂ ಇದೆ, ಇದು ಪರೋಕ್ಷ ಅವರು ಎಸೆಯುವ ಬಾಣ ಎಂದವರೂ ಇದ್ದಾರೆ! ’ನೀನೇ ತ್ರಿಪುರಸುಂದರಿ’ ಎಂಬುದನ್ನು ಒಪ್ಪಿಕೊಂಡ ಅಮಾಯಕನೆಡೆಗೆ, ಸುಂದರಿಯರೆಂದು ತಾವೇ ತಿಳಿದುಕೊಂಡವರು ತುಸುಹುಸಿನಗೆ ಚೆಲ್ಲಿ ಮಿಂಚಿಮಾಯವಾಗಿ, ವಾರಗಟ್ಟಲೆ ಆತ ಎದೆನೀವಿಕೊಳ್ಳುವಂತೇ ಮಾಡುವುದು ’ಬೇಹುಗಾರಿಕಾ ಬಾಣ’ ಎಂಬುದನ್ನು ಬಲ್ಲ ಅಮಾಯಕರು ಹೇಳಿಕೊಂಡಿದ್ದಾರೆ! ’ನಿನ್ನ ಹುಬ್ಬು ಕಾಮನಬಿಲ್ಲು’ ಎಂದು ಹೇಳಿಸಿಕೊಳ್ಳಲು ಬೇತಾಳದ ಕಥೆಗಳಲ್ಲಿ ಬರುವ ಛಲಬಿಡದ ತ್ರಿವಿಕ್ರಮನಂತೇ, ಅವಿರತ ಶ್ರಮ ಮತ್ತು ನಿಗಾವಹಿಸಿ ಸದಾ ಬ್ಯೂಟಿಪಾರ್ಲರಿನ ಸೇವೆ ಪಡೆದು ಹುಬ್ಬಿನಮೇಲೆ ಬಾಣಪ್ರಯೋಗಿಸುವ ಸುಂದರಿಯರು ಯಾರಲ್ಲಾ?--ಎಂಬುದನ್ನು ಹೆಂಗಸರೆನಿಸಿದ ಯಾರಲ್ಲಾದರೂ ಕೇಳಿ ಅವರು ಒಪ್ಪಿಯೂ ಒಪ್ಪದಿರುತ್ತಾರೆ! ಹುಬ್ಬಿನ ನೆನಪಾದಾಗ ಗುಬ್ಬಿಯ ನೆನಪೂ ಆಗುವುದಕ್ಕೆ ಕಾರಣ ಇಂತಿದೆ: ’ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ’!-ಎಂಬ ಅನಾದಿಯ ಹೇಳಿಕೆ. ಮುಷ್ಠಿಗಾತ್ರಕ್ಕಿಂತಲೂ ಚಿಕ್ಕದಾದ ಗುಬ್ಬಚ್ಚಿಯನ್ನು ಸದೆಬಡಿಯಲೋ ಬೆದರಿಸಲೋ ಬ್ರಹ್ಮಾಸ್ತ್ರ ಬೇಕೇ? ಅಂತೂ ’ಅಸ್ತ್ರವಿದ್ಯಾ ವಿಶಾರದ’ರು ಹಲವು ಮಜಲುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂಬುದಂತೂ ಅರ್ಥವಾಗುತ್ತದಲ್ಲಾ?

ಬಾಣಕ್ಕೆ ಶರ ಎಂಬುದೂ ಇನ್ನೊಂದು ಹೆಸರಷ್ಟೇ?  ಶರಪಂಜರ ಎಂಬ ಸಿನಿಮಾವೊಂದು ಕನ್ನಡದಲ್ಲಿ ಇರುವುದು ತಿಳಿದಿದೆ, ಶರಶಯ್ಯೆಯಲ್ಲಿ ಭೀಷ್ಮ ಪಿತಾಮಹ ಮಲಗಿದ್ದರಂತೆ, ಶರಧಿಗೆ ಅರ್ಜುನ ಶರದಿಂದಲೇ ನಿರ್ಮಿಸಿದ ಸೇತುವೆಯನ್ನೂ ಮತ್ತು ಅದನ್ನು ಮುರಿದುಹಾಕುತ್ತಿದ್ದ ಹನುಮನನ್ನೂ ಕೇಳಿದ್ದೇವೆ. ’ಧಾರವಾಡಕ್ಕೆ ಹೋಗುವ ಶರವೇಗದ ಬಸ್ಸುಗಳಿಗಾಗಿ’ ಎಂಬ ಬೋರ್ಡು ಹಿಂದೊಮ್ಮೆ ಹುಬ್ಬಳ್ಳಿ ಸಿಬಿಟಿ ನಿಲ್ದಾಣದಲ್ಲಿ ಕಾಣುತ್ತಿತ್ತು-ಅದು ಈಗಲೂ ಇದ್ದಿರಬಹುದೋ ಗೊತ್ತಿಲ್ಲ! ಬಸ್ಸುಗಳ ವೇಗಕ್ಕೂ ಶರವೇಗವೆಂದು ಕಲ್ಪಿಸಿ ಹೆಸರಿಸಿದ ಮಹಾನ್ ಕಲಾವಿದರು ನಮ್ಮಲ್ಲಿದ್ದಾರೆ ಎಂದಾಯಿತಲ್ಲವೇ? ಹೀಗೇ ಈ ಬಾಣದ ಕಥೆ ಬಿಚ್ಚಿಕೊಂಡಷ್ಟೂ ಮುಗಿಯದಷ್ಟು ಉದ್ದವಾಗುತ್ತದೆ; ಸನ್ಮಾನ ವೇದಿಕೆಯೊಂದರಲ್ಲಿ ಅನೇಕರ ’ಛದ್ಮವೇಷಗಳು’ ಮುಗಿದು ನಡುರಾತ್ರಿ ಕಳೆದ ನಂತರ, ಯಾವುದೋ ಅಜ್ಜಿಯಿಂದ ಹಾಡಲ್ಪಟ್ಟ ಕಮಲದಳಗಳ ಆರತಿಪದದ ಬಗ್ಗೆ, ಇನ್ನೂ ಸಭೆ ಮುಗಿದಿಲ್ಲವಲ್ಲಾ ಎಂಬ ಚಿಂತೆಯಲ್ಲಿ ಮುಳುಗಿದ್ದ ಗಂಗಾವತಿ ಪ್ರಾಣೇಶರಿಗೆ ಒಂದು ವಿಶಿಷ್ಟವಾದ ಅನುಭವವಾಗಿತ್ತಂತೆ;  ಅಜ್ಜಿ ಹಾಡುತ್ತಲೇ ಇದ್ದಳು ...ಒಂದು..ಎರಡು..ಮೂರು.. ನಾಕು....ಎಲ್ಲಾ ಮುಗಿದು ಈಗ

..ಅಷ್ಟದಳದ ಕಮಲದಲ್ಲಿ ಮೂಡಿಬಂದ ಲಿಂಗವೇ
ಇಷ್ಟವಾದ ಲಿಂಗವೇ ಅಷ್ಟುಮಾತ್ರ ಲಿಂಗವೇ   
ಓಂ ನಮಃಶಿವಾಯ ಓಂ  ನಮಃಶಿವಾಯ   
ಓಂ  ನಮಃಶಿವಾಯಾ  ಓಂ  ನಮಃಶಿವಾಯ
.
.
.
.
ಹೀಗೇ ದಳಗಳ ಸಂಖ್ಯೆಮಾತ್ರ ಏರುತ್ತಲೇ ಇರುವಾಗ ಮಧ್ಯೆ ಬೇಸತ್ತ ಪ್ರಾಣೇಶರು ಅಜ್ಜಿಯಲ್ಲಿ ಕೇಳಿದರಂತೆ:"ಇನ್ನೆಷ್ಟ್ ದಳಗಳ ಉಳ್ದಾವಬ್ಬೇ ?" ಅಂತ, ಆಕೆ ಹೇಳಿದಳಂತೆ " ನೂರಾ ಎಂಟು ದಳಗೋಳ್ ಅದಾವಪ್ಪಾ" ಅಂತ. ಇನ್ನೂ ಬಂಭತ್ತು ಹತ್ತರಾಗ ಇರೋ ಆಸಾಮಿ ೧೦೮ ಎಣಿಸೋ ವರೆಗೆ ’ರಾಹುಗ್ರಸ್ತ ದಿವಾಕರೇಂದು ಸದೃಶೋ’ ಎಂಬಂತೇ ಪ್ರಾಣೇಶರ ಫಜೀತಿ ಯಾಕೆ ಕೇಳ್ತೀರಿ! ಅಂತೂ ೧೦೮ ದಳಗಳಹಾಡನ್ನು ಅಜ್ಜಿ ಹಾಡುವುದರೊಳಗೆ ಮಳೆ ಆರಂಭವಾಗಿ ಆ ಮಳೆಯಲ್ಲೇ ವ್ಯವಸ್ಥಾಪಕರು "ಪ್ರಾಣೇಶ್, ತಗೋ ಅಪಾ ಸನ್ಮಾನ" ಎಂದು ನಿಂತಲ್ಲಿಂದಲೇ ಶಾಲು ಅವರೆಡೆಗೆ ಬೀಸಿ ಎಸೆದ ಕಥೆಯನ್ನು ಹೇಳುತ್ತಿದ್ದರು; ಅಂಥಾ ಬಾಣಪ್ರಯೋಗಗಳು ಉತ್ತರಕರ್ನಾಟಕದಲ್ಲಿ ಅಲ್ಲಲ್ಲಿ ಸರ್ವೇಸಾಮಾನ್ಯ ಎಂದೂ ಅವರು ಹೇಳುವುದನ್ನು ಕೇಳಿದ್ದೆ.  

’ಛೂಬಾಣ’ ಎಂಬುದು ಅಂಕಣವೊಂದಕ್ಕೆ ಟಿ.ಎಸ್.ರಾಮಚಂದ್ರರಾಯರೆಂಬ ಸಂಪಾದಕರು ಇಟ್ಟುಕೊಂಡ ಖಾಸಾ ಹೆಸರು. ಅವರ ಆ ಅಂಕಣದ ಬರಹಗಳು ರಾಜಕಾರಣಿಗಳಿಗೆ ಬಿಟ್ಟ ಬಾಣಗಳಂತೇ ಇರುತ್ತಿದ್ದವು ಎಂಬುದು ಓದುಗರ ಅಂಬೋಣ. ಛೂಬಾಣ ಬರೆಯುತ್ತಿದ್ದ ಟಿ.ಎಸ್. ಆರ್. ಪತ್ರಿಕಾರಂಗದಲ್ಲಿ ನಿಷ್ಠುರದ ಪತ್ರಕರ್ತರೆಂದೇ ಪ್ರಸಿದ್ಧ. ಶುದ್ಧಹೃದಯಿಗಳೂ  ಶುದ್ಧಹಸ್ತರೂ ಮತ್ತು ಸಿದ್ಧಹಸ್ತರೂ ಆಗಿದ್ದ ಅವರು ಜೀವನದಲ್ಲಿ ನಿಭಾಯಿಸಿದ್ದು ವಿಭಿನ್ನ ವೃತ್ತಿಗಳನ್ನು. ಕೊನೆಗೊಮ್ಮೆ ಅವರು ಪತ್ರಿಕಾ ಸಂಪಾದಕರಾಗಿ ಅದರಲ್ಲೇ ಬಹುಕಾಲ ಉಳಿದರು; ತನ್ನ ಛಾಪನ್ನು ಉಳಿಸಿದರು. ಕಟುಟೀಕೆಗಳಮೂಲಕ ವಾಸ್ತವವನ್ನು ತೆರೆದಿಡುತ್ತಿದ್ದ ಅವರು ಯಾರದೋ ಹಣದ ಆಮಿಷಕ್ಕೆ, ಮಾಸಾಶನಕ್ಕೆ ಕಯ್ಯೊಡ್ಡಿದವರಲ್ಲ. ನಾಳೆ ಹೇಗೆ ಎಂಬ ಚಿಂತೆ ಮನೆಯಲ್ಲಿದ್ದರೂ ತಮ್ಮ ಆರ್ಥಿಕ ಅನಿವಾರ್ಯತೆಯನ್ನು ಯಾರಮುಂದೂ ಅಲವತ್ತುಕೊಂಡವರಲ್ಲ! ಮಂಚದ ಮುರಿದ ನಾಲ್ಕನೇ ಕಾಲಿನ ಬದಲಿಗೆ ಹಳೆಯ ರದ್ದಿಗಳನ್ನು ಆಧಾರವಾಗಿ ಊತುಗೊಟ್ಟು ಮಂಚವನ್ನು ಬಳಸುತ್ತಿದ್ದ ಸ್ಥಿತಿ ಅವರದಾಗಿತ್ತು. ಕೊನೆಗೊಮ್ಮೆ ಹಣವೇ ಇಲ್ಲದ ದಿನದಲ್ಲಿ ಮಾರನೇ ದಿನ ಮನೆಗೆ ಬರುವ ಅತಿಥಿಗಳ ಸತ್ಕಾರಕ್ಕಾಗಿ ಮಂಚದ ಮುರಿದಕಾಲಿಗೆ ಪರ್ಯಾಯವಾಗಿ ಇರಿಸಿದ್ದ ರದ್ದಿಗಳ ಕಂತೆಯನ್ನೇ ಮಾರಿ, ಅದರಿಂದಲೇ ಬಂದ ಕೊಂಚಹಣದಲ್ಲೇ ಆ ಕೆಲಸವನ್ನು ನಿಭಾಯಿಸಿದ್ದರಂತೆ. ಮಂಚಕ್ಕೆ ಮೂರೇ ಕಾಲಾಯ್ತಲ್ಲ ಎಂಬ ಕಷ್ಟದ ಭಾವನೆಯಿರಲಿಲ್ಲ, ಅತಿಥಿಗಳು ವಕ್ಕರಿಸಿಕೊಂಡರಲ್ಲಾ ಎಂಬ ಅಸಹನೀಯ ಆಕ್ಷೇಪವಿರಲಿಲ್ಲ, ಸಂಪಾದಕನಾಗಿ ತನಗೀಸ್ಥಿತಿಯೇ ಎಂಬ ಖಿನ್ನತೆ, ಕೀಳರಿಮೆ ಇರಲಿಲ್ಲ. ಆದರೆ ಅತಿಸುಲಭವಾಗಿ ಮರೆತುಬಿಡುವ ನಮ್ಮಂತಹ ಜನರಿಗೆ ಅವರ ನೆನಪು ಮಾಸಿದರೂ ಅಲ್ಲಿಲ್ಲಿ ಛೂಬಾಣಗಳು ನಾಟಿದ ಗುರುತುಗಳು ಇನ್ನೂ ಕಾಣಸಿಗುತ್ತವೆ! 

"ಇಂದಿನ ಸಂಪಾದಕರುಗಳು ಜಾಸ್ತಿ ಮ್ಯಾನೇಜ್ ಮೆಂಟ್ ತಿಳಿದುಕೊಂಡವರು, ಹಲವು ಪತ್ರಿಕೆಗಳ ನಡುವೆ ತಮ್ಮ ಪತ್ರಿಕೆಯ ಪ್ರಸಾರದ ಬೆಳವಣಿಗೆ ಹೇಗೆಮಾಡಬೇಕೆಂಬುದರಲ್ಲಿ ನಿಪುಣರು" ಎಂದು ಸ್ನೇಹಿತರೊಬ್ಬರು ಹೇಳಿದ್ದಾರೆ. ಪತ್ರಿಕಾ ಸಂಪಾದಕರಿಗೆ ಪ್ರಸಾರವೇ ಮುಖ್ಯವೆನಿಸಿದಾಗ ಪ್ರಚಾರದ ಅಬ್ಬರದಲ್ಲಿ ಅವರು ತೊಡಗಿಕೊಳ್ಳುವುದ ಕಾಣುತ್ತದೆ. ಕೆಲಸಕ್ಕೆ ಬಾರದ ವಿಷಯಗಳನ್ನೂ ಅತಿವಿಶಿಷ್ಟ ವಿಷಯವೆಂಬಂತೇ ಬಿಂಬಿಸಹೊರಟು, ಬರಹಕೌಶಲದಲ್ಲಿ ತಮ್ಮನ್ನು ಮತ್ತೊಂದು ಜನ್ಮದಲ್ಲೂ ಮೀರಲಾಗದ ಬರಹಗಾರರನ್ನು ಪುಕ್ಕಟೆಯಾಗಿ ಬಳಸಿಕೊಂಡು, ಆ ಮೂಲಕ ಅವರ ಬರಹಗಳನ್ನು ಪ್ರಕಟಿಸಿದ ’ಔದಾರ್ಯ’ಕ್ಕೆ, ’ಕೀರ್ತಿ’ಗೆ ಇಂತಹ ಸಂಪಾದಕರು ಪಾತ್ರರಾಗುತ್ತಾರೆ; ಪಟಾಲಮ್ಮು ಬೆಳೆಯುತ್ತದೆ; ಸಂಪಾದಕರೆಂಬ ಅರಸರಿಗೆ ಪಕ್ಕದಲ್ಲಿ ಎಡಬಲಗಳಲ್ಲಿ ಕತ್ತಿಯನ್ನು ಝಳಪಿಸಿ ಅವರ ಠೊಳ್ಳು ಘನತೆಯನ್ನು ಹೆಚ್ಚಿಸುವ ಮಂದಿ ತಯಾರಾಗುತ್ತಾರೆ! ಎತ್ತರದ ಸ್ಥಾನದಲ್ಲಿ ಕುಳಿತ, ಸುಲಭ-ಅಲಭ್ಯ ಪಂಡಿತರೊಬ್ಬರು ಕಿತ್ತೆಸೆದಾಗ ’ಬ್ಲಾಗ್ ಬರೆಯಲೋ’ ಎಂದುಕೊಂಡರು, ಆದರೆ ಬ್ಲಾಗ್ ಬರಹಗಾರರ ಬಗ್ಗೆ ಅವರು ಅಸಭ್ಯ ಹೇಳಿಕೆಗಳನ್ನು ಅದಾಗಲೇ ಅಪ್ಪಣೆಕೊಡಿಸಿಬಿಟ್ಟಿದ್ದರು; ಅವರು ಅಂದು ಬಿಟ್ಟ ಬಾಣ ಅವರಿಗೇ ತಿರುಗಿನಾಟುವ ಆ ದಯನೀಯ ಹಂತದಲ್ಲಿ ಸ್ವತಂತ್ರ ವೆಬ್ ಸೈಟ್ ತೆರೆದರು, ಸ್ವಂತ ಮೊಬೈಲ್ ಸಂಖ್ಯೆಯನ್ನೇ ಅಲ್ಲಿ ನಮೂದಿಸಿ ಸುಲಭಲಭ್ಯರಾಗಿ ಅನೇಕರ ಅನುಕಂಪವನ್ನು ಗಳಿಸಿದರು! ಜಾಲತಾಣಗಳ ಮಾದರಿಯಲ್ಲಿ ಬ್ಲಾಗ್ ಒಂದು ತೆರನಾದದ್ದಾದರೆ ವೆಬ್ ಸೈಟ್ ಇನ್ನೊಂದು ತೆರನಾದದ್ದು; ನಿಮಿತ್ತಮಾತ್ರದ ಅಂತರಗಳು ಇವುಗಳಿಗೆ ಎಂಬುದು ತಂತ್ರಜ್ಞಾನ ನಿಪುಣರಿಗೆ ಮತ್ತು ಅಂತರ್ಜಾಲದ ಓದುಗರಿಗೆ ಗೊತ್ತು. "ಎಲ್ಲಿಯೂ ಪ್ರಕಟವಾಗದ ಲೇಖನಗಳನ್ನು ಸ್ವಂತ ಬ್ಲಾಗ್ ತೆರೆಯುವ ಮೂಲಕ ಪ್ರಕಟಿಸುತ್ತಾರೆ" ಎಂದ ಅವರ ಪೊಗರನ್ನು ಗಮನಿಸಿದಾಗ ಅವರು ಬಿಟ್ಟಿದ್ದೇ ಬಾಣ ಎನ್ನಬೇಕೋ ಅಥವಾ ’ಬಿಟ್ನಪ್ಪಾ ರಾಮಬಾಣ’ ಎಂದು ಅಪಸವ್ಯವಾಗಿ ಹೇಳಬೇಕೋ ತಿಳಿಯದಾಗಿದೆ.     

ಮೊನ್ನೆ ಒಬ್ಬರು ದಾರಿಯಲ್ಲಿ ಸಿಕ್ಕಿದ್ದರು, ಸ್ವಾತಂತ್ರ್ಯ ಪೂರ್ವದ ದೇಶಬಂಧು! ಅಂತರ್ಜಾಲದ ಬಗ್ಗೆ ತುಸುವೇ ಅರಿವುಳ್ಳವರೂ ಗಣಕಯಂತ್ರಗಳ ಬಗ್ಗೆಯೇ ಅಸಡ್ಡೆಯನ್ನು ಬೆಳೆಸಿಕೊಂಡ ವ್ಯಕ್ತಿ. ಮೊಮ್ಮಗನಂಥವರು ಕೆಲಸಮಾಡುವಾಗ ಮರೆಯಲ್ಲಿ ಕಂಡೂ ಕಾಣದಂತೇ ಆರ್.ಕೆ, ಲಕ್ಷ್ಮಣ್ ಅವರ ವ್ಯಂಗಚಿತ್ರದ ಶ್ರೀಸಾಮಾನ್ಯನಂತೇ ಗೋಚರಿಸುವ ಅವರಿಗೆ ಗಣಕಯಂತ್ರಗಳೂ ಸಂವಹನಕ್ಕೆ ಪ್ರಮುಖವಾಗಿ ಬಳಸಲ್ಪಡುತ್ತವೆ ಎಂಬುದು ತಿಳಿದುಬಂದ ಸುದ್ದಿ. ಛೆ ಛೆ ಎಲ್ಲಾದರೂ ಉಂಟೇ ಎಂಬ ರೀತಿ ಅಂತರ್ಜಾಲ ಮಾಧ್ಯಮವನ್ನು ಒಪ್ಪಲು ಸಿದ್ಧವಿರುವ ಜನ ಅದಲ್ಲ! ಹಲವು ಸುದ್ದಿಗಳ ನಡುವೆ "ಕನ್ನಡ ಸಾಹಿತ್ಯ ಪರಿಷತ್ತು ನಿಮ್ಮ ಬ್ಲಾಗ್ ಗಳನ್ನೆಲ್ಲಾ ಮಾನ್ಯಮಾಡುವುದಿಲ್ಲ" ಎಂದರು. "ಅಯ್ತು ಸ್ವಾಮೀ ನಾವು ಕನ್ನಡ ಸಾಹಿತ್ಯ ಪರಿಷತ್ತಿನ ಆದ್ಯತೆಗಳ ಯಾದಿಯಲ್ಲಿ ಸೇರುವ ಏಕಮೇವ ಉದ್ದೇಶದಿಂದ ಬರೆಯುತ್ತಿಲ್ಲಾ, ನಮ್ಮ ಬರಹಗಳನ್ನು ಮೆಚ್ಚುವ, ಓದುವ ಸ್ನೇಹಿತ ಓದುಗ ಬಳಗಕ್ಕಾಗಿ ನಾವು ಬರೆಯುತ್ತೇವೆ"ಎಂದೆ. ಮುದ್ರಿತ ಪುಸ್ತಕಗಳ ರೂಪದಲ್ಲಿ ಬಂದಾಗಮಾತ್ರ ಕೃತಿಯ ಮನ್ನಣೆ ದೊರೆಯುತ್ತದೆ ಎಂಬುದು ಗೊತ್ತಿರುವ ವಿಷಯವೇ, ಆದರೆ ಕೇವಲ ಕೆಲವರ ಮನ್ನಣೆಗಾಗಿ ಮಾತ್ರ ನಾವು ಬರೆಯುವುದಿಲ್ಲ ಎಂಬುದನ್ನೂ ತಿಳಿಸಿದೆ. ಬರಹಗಾರ ಕೈಬರಹದಲ್ಲೇ ಬಿಟ್ಟಿದ್ದನ್ನು ಅನೇಕ ವರ್ಷಗಳ ನಂತರ ಯಾರೋ ಓದಿ ಇಷ್ಟಪಟ್ಟು ಪ್ರಕಟಿಸಿದ ದಾಖಲೆಗಳಿರುವಾಗ, ನಾಲ್ಕು ಜನ ಅಂತರ್ಜಾಲದಲ್ಲಿ ಸರಳವಾಗಿ ಸಿಗುವ ಬರಹಗಳನ್ನು ಓದಲಿ ಬಿಡಿ ಎಂದೆ. ಪೂರ್ವಾಗ್ರಹ ಪೀಡಿತರಾದ ಅವರನ್ನು ಅಂತರ್ಜಾಲದ ಯುಗಕ್ಕೆ ಕರೆತರುವುದು ಸದ್ಯಕ್ಕಂತೂ ಸಾಧ್ಯವಿಲ್ಲ ಎಂದುಕೊಂಡೆ; ಇಂತಹ ಓದುಗರು ಇರುವವರೆಗೆ ಅಭಿಷಿಕ್ತ ಸಂಪಾದಕರೆಲ್ಲರ ಸ್ಥಾನ ಭದ್ರವಾಗಿರುತ್ತದೆ, ಅದಕ್ಕೆ ಯಾವುದೇ ಡೋಕಿಲ್ಲ! ಕೆಲವು ಸಂಪಾದಕರ ’ಸಂಪಾದನೆ’ಗೂ ಯಾವುದೇ ಮುಜುಗರವಿಲ್ಲ!  

ಸಿರಿಯು ಸಂಪತ್ತು ಸ್ಥಿರವಲ್ಲ ನಂಬದಿರು
ಹಿರಿದೊಂದು ಸಂತೆ ನೆರೆದೊಂದು ಜಾವಕ್ಕೆ
ಕರಗಿಹೋದಂತೆ | ಸರ್ವಜ್ಞ

ಸಂಪಾದಿಸಿದ ಹಣ ಕೆಲಕಾಲ ನಿಮ್ಮದಾಗಿರಬಹುದು, ಆದರೆ ಅದೇ ಶಾಶ್ವತವಲ್ಲ, ರೂಪವತಿಯ ರೂಪ ಶಾಶ್ವತವಲ್ಲ. ಸೇರಿದ ಸಾವಿರ ಜನರ ಸಂತೆ ಜಾವದ ನಂತರ ಕರಗಿ ಖುಲ್ಲಾಜಾಗ ಕಾಣುವುದಲ್ಲಾ ಹಾಗೆಯೇ ಹಣ ಮತ್ತು ಹೊಗಳಿಕೆಗಳ ಹಾರತುರಾಯಿಗಳ ನಡುವೆ ಸಂಪಾದಕನಾದವ ತನ್ನತನವನ್ನು ಕಳೆದುಕೊಂಡರೆ ಅದು ಸಾಮಾಜಿಕ ಹೊಣೆಗಾರಿಕೆಯನ್ನು ಮರೆತ ಠಕ್ಕನೊಬ್ಬ ಗುರುವಾಗಿ ಮಠವನ್ನು ಮುನ್ನಡೆಸಿದಂತಾಗುತ್ತದೆ; ಕುಡಿದ ಮತ್ತಿನಲ್ಲಿ ಚಾಲಕ ಹಲವು ಪ್ರಯಾಣಿಕರುಳ್ಳ ವಾಹನವನ್ನು ಓಡಿಸುವ ರೀತಿ ಆಗುತ್ತದೆ. ನನ್ನದೊಂದು ಪರಿಪಾಠವಿದೆ: ಚರ್ಮವಾದ್ಯಗಳಾದ ಮೃದಂಗ, ತಬಾಲಾ ಮೊದಲಾದವುಗಳನ್ನು ಬಾರಿಸುವವರು, ಪ್ರತೀ ಕಚೇರಿಗೂ ಪೂರ್ವಭಾವಿಯಾಗಿ, ಸಣ್ಣ ಸುತ್ತಿಗೆಯಿಂದ ಚಿಕ್ಕ ಚಿಕ್ಕ ಹೊಡೆತಗಳನ್ನು ಕೊಟ್ಟು ಚರ್ಮವನ್ನು ಬಿಗುವಾಗಿಸಿಯೋ ಸಡಿಲಗೊಳಿಸಿಯೋ ಸಿದ್ಧಪಡಿಸಿಕೊಳ್ಳುತ್ತಾರಲ್ಲಾ ಅಂತೆಯೇ ಮಾಧ್ಯಮಗಳ ಸಂಪಾದಕರು ಯಾವುದೇ ಪೂರ್ವಾಗ್ರಹವಿಲ್ಲದೇ, ಭಾರತೀಯ ಮಹಾಕವಿಗಳ, ದಾರ್ಶನಿಕರ, ಶರಣರ ಕೃತಿಗಳನ್ನು ಆಗಾಗ ಆದಷ್ಟು ಓದಿಕೊಳ್ಳುತ್ತಲೇ ಇರಬೇಕು. ಅವರ ಆದರ್ಶಗಳ ಸುತ್ತಿಗೆ ನಮ್ಮ ಅಹಂಕಾರದ ಮೇಲುಹೊದಿಕೆಯನ್ನು ತಟ್ಟಿ-ಕುಟ್ಟಿ ಸರಿಪಡಿಸುತ್ತದೆ. ಕೇವಲ ಆಂಗ್ಲ ಸಾಹಿತ್ಯಗಳೋ ಇನ್ಯಾವುದೋ ದೇಶಗಳ, ಇನ್ಯಾವುದೋ ಭಾಷೆಗಳ ಕೃತಿಗಳು ಹಾಗಿವೆ-ಹೀಗಿವೆ ಎಂದು ಹುಯ್ಯಲಿಡುವುದು ತಪ್ಪುತ್ತದೆ.   

ತ್ರಿಪುರ ಸುಂದರಿ ತಾನೆಂದುಕೊಳ್ಳುವ ಹೆಣ್ಣೋರ್ವಳಂತೇ, ಸಂಪಾದಕರ ಸಾಲಿನಲ್ಲೇ ಕೆಲವರಂತೂ ತಾವು ಮಹಾನ್ ಸಾಧನೆ ಮಾಡಿದ ಜಗದ್ವಿಖ್ಯಾತ-ಅಸಾಮಾನ್ಯನೆಂದುಕೊಂಡವರೂ ಕೆಲವರಿದ್ದಾರೆ. ಹೀಗೆ ಹೇಳಿದಾಗ ನೇಪಥ್ಯದಲ್ಲಿ ನಿಂತು ಓದುವ ಅವರು, ತಮ್ಮ ಹೆಗಲು ಒರೆಸಿಕೊಂಡರೆ ತಪ್ಪಾಗದಲ್ಲಾ? ಹೆತ್ತವರಿಗೆ ಹೆಗ್ಗಣಮುದ್ದು ಎನ್ನೋ ಹಾಗೇ ಬರಹಗಾರರನೇಕರು ಅಂತರ್ಜಾಲದಲ್ಲೋ ಮತ್ತೆಲ್ಲೋ ತಮ್ಮ ಬರಹಗಳನ್ನು ಪ್ರಕಟಿಸಬಹುದು, ಪ್ರಕಟಪಡಿಸುವುದು ಅವರ ಆಸೆ, ಅಶಯ. ಆದರೆ ಪ್ರಕಟಿಸಿದ ಬರಹಗಳೆಲ್ಲಾ ಉತ್ತಮವೆಂಬುದು ಕೇವಲ ಪತ್ರಿಕೆಗಳಲ್ಲಿ ಪ್ರಕಟಗೊಂಡ ಮಾತ್ರಕ್ಕೆ ಒತ್ತುವ ಮುದ್ರೆಯಲ್ಲವಲ್ಲಾ? ಅಲ್ಲವೇ ಸಂಪಾದಕರೇ? ಪಂಡಿತರೆನಿಸಿಕೊಂಡ ’ಸಾಧು’ ಸಂಪಾದಕರು ಮಿಂಚಂಚೆಮೂಲಕ ಕಳಿಸಿದ ನನ್ನ ಸ್ವಂತದ ಬರಹಗಳನ್ನು ’ಹೆಸರಿಲ್ಲದ ಅಜ್ಞಾತ ವ್ಯಕ್ತಿ ಬರೆದು, ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಹಾಸ್ಯಲೇಖನ’ ಎಂದು ಪ್ರಕಟಿಸಿ-ಮೆರೆದ ಸೌಜನ್ಯವನ್ನು ನಾನು ಮರೆಯಲುಂಟೇ?  ಬ್ಲಾಗ್ ಬರಹಗಾನಾದ ನನ್ನ ಅನೇಕ ಲೇಖನಗಳನ್ನು ರೂಪಾಂತರಗೊಳಿಸಿ ಪ್ರಕಟಿಸಿದ ಮಹಾನ್ ಲೇಖಕರೂ, ಸಂಪಾದಕರೂ ಇದ್ದಾರೆ ಎಂದರೆ ನೀವು ನಂಬುತ್ತೀರೇ? ಕದ್ದು ಪ್ರಕಟಿಸಿದ ಚಂದದ ಒಂದು ಛಾಯಾಚಿತ್ರಕ್ಕೆ ಒದ್ದು ಪ್ರತಿಕ್ರಿಯಿಸಿದ ಒಬ್ಬ ಛಾಯಾಚಿತ್ರಗ್ರಾಹಕ ಕೂಡ ನನ್ನ ಬಳಗದಲ್ಲಿದ್ದಾರೆ. ಎಂದಮೇಲೆ, ಸಮೂಹಮಾಧ್ಯಮದ ಸಂಪಾದಕರ ಮೇರ್ಲೆ ಸದಾ ಬಾಣಬಿಡುವುದೇ ನಮ್ಮ ಆದ್ಯತೆಯಾಗಬೇಕ್ರ್ಏ ಎಂಬುದು ನನ್ನ ಚಿಂತನೆಯಾಗಿದೆ. ಭಟ್ಟಂಗಿಗಳ ನಡುವಿನಲ್ಲಿ ಬಿಟ್ಟ ಬಾಣ ನಾಟಬೇಕೆಂಬ ತುಡಿತದಿಂದ ಕದ್ದು ಪ್ರಕಟಿಸುವುದಕ್ಕಿಂತಾ, ಪರಾಕು ಹಾಕುವ ಬಳಗವನ್ನು ಹೆಚ್ಚಿಸಿಕೊಳ್ಳುವ ಭರದಲ್ಲಿ ಕೆಲಸಕ್ಕೆ ಬಾರದ ಲೇಖನಗಳನ್ನು ಪ್ರಕಟಿಸುವುದಕ್ಕಿಂತಾ ಮಾನ್ಯ ಸಂಪಾದಕರೇ, ಕೆಲವು ಉತ್ತಮ ಬರಹಗಳನ್ನು ನೇರವಾಗಿ ನನ್ನಂತಹ ’ಅಜ್ಞಾತ’ ವ್ಯಕ್ತಿಗಳ ಜಾತ ನಾಮಧೇಯದಲ್ಲೇ ಪ್ರಕಟಿಸಿದರೆ, ಆಗ ನೀವು ಹೆಗಲೊರೆಸಿಕೊಳ್ಳುವ ಪ್ರಮೇಯ ಬರುವುದಿಲ್ಲ!

ನನಗೊಂದು ವಿಷಯದಲ್ಲಿ ಖಾತ್ರಿಯಿದೆ: ಕೆಲವು ಸಂಪಾದಕರಿಗೆ ಉತ್ತಮ ಬರಹಗಾರರನ್ನು ಪರಿಚಯಿಸುವ ಇರಾದೆ ಇಲ್ಲ, ಕಾರಣವಿಷ್ಟೇ: ನಾಳೆ ತಮ್ಮನ್ನೂ ಮೀರಿ ಬೆಳೆದುಬಿಟ್ಟರೆ, ಹೆಸರುಗಳಿಸಿಬಿಟ್ಟರೆ ಜನ ತಮಗಿಂತಾ ಹೆಚ್ಚಿನ ಮಾನ್ಯತೆಯನ್ನು ಅಂಥಾ ಬರಹಗಾರರಿಗೆ ನೀಡಿಬಿಡುತ್ತಾರಲ್ಲಾ? ಅಂಥಾ ಸಂಪಾದಕರು ಒಂದು ಸತ್ಯವನ್ನು ಅರ್ಥಮಾಡಿಕೊಳ್ಳಬೇಕು: ಇಂದಲ್ಲ ನಾಳೆ ಸೂರ್ಯನೇ ಪ್ರಕಾಶವುಳ್ಳವನೆಂದೂ ಚಂದ್ರ ಪ್ರತಿಫಲಿತ ಪ್ರಕಾಶವನ್ನು ಹೊಮ್ಮಿಸುವವನೆಂದೂ ಓದುಗರಿಗೆ ತಿಳಿಯುತ್ತದೆ. ಸ್ವಯಂ ಪ್ರಭೆಯುಳ್ಳ ಬರಹಗಾರರು ಬ್ಲಾಗ್ ಮೂಲಕವೇ ಬರೆಯಲಿ, ಫೇಸ್ ಬುಕ್ಕಿನಲ್ಲೇ ಬರೆಯಲಿ-ಜನ ಓದಿಯೇ ಓದುತ್ತಾರೆ. ಪ್ರತಿಭೆ ಎಂಬುದು ಕೈಗಡತಂದ ಸಾಮಾನಿನಂತಲ್ಲವಲ್ಲಾ?ಅದು ಸ್ವಂತಿಕೆ ಅಲ್ಲವೇ?  ಸ್ಟಾರ್ ಹೋಟೆಲ್ ಗಳಲ್ಲಿ ಸಿಗುವ ವ್ಯಂಜನಗಳಿಗಿಂತಾ, ರುಚಿಕಟ್ಟಾಗಿ ತಯಾರಿಸಿದ ಖಾನಾವಳಿಯ[ಮೆಸ್ಸಿನ] ಊಟಕ್ಕೆ ಜನ ಮುಗಿಬೀಳುತ್ತಾರೆ ಹೇಗೋ, ಹಾದಿಬದಿಯ ಪಾನಿಪೂರಿ ವ್ಯಾಪಾರಿಯೂ ಹದದಲ್ಲಿ ಪ್ರಾವೀಣ್ಯನಾದರೆ ಜನ ಸರದಿನಿಂತು ಕೊಳ್ಳುತ್ತಾರೆ ಹೇಗೋ, ಹಾಗೆಯೇ ಉತ್ತಮ ಬರಹಗಾರರಿಗೆ ಸಮಯವೊದಗುತ್ತದೆ. ಆ ಸಮಯದಲ್ಲಿ ತಾವೇ ಬಿಟ್ಟ ಬಾಣದ ’ಅಮೋಘ ಪರಿಮಳ’ವನ್ನು ಆಘ್ರಾಣಿಸಿ ತಲೆಯಾದೂಗುವ ಸ್ಥಿತಿ ಕೆಲವು ಸಂಪಾದಕರಿಗೇ ಬಂದರೆ ಅಶ್ಚರ್ಯವಿಲ್ಲ! ಆ ದಿನ ಬೇಗ ಬರಲಿ ಎಂದು ಅಶಿಸುತ್ತೇನೆ, ಮಾಧ್ಯಮ ಹಣಕ್ಕಾಗಿ ಮಾರಾಟವಾಗುವುದು ನಿಂತುಹೋಗಲಿ ಎಂದು ಹಾರೈಸುತ್ತೇನೆ.