ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, August 6, 2011

ಕುಳಿತೋದದೆಯುಂ ಕಾವ್ಯ ಪರಿಣತಮತಿಗಳ್ !


ಕುಳಿತೋದದೆಯುಂ ಕಾವ್ಯ ಪರಿಣತಮತಿಗಳ್ !

ಶಂಭೋ ಶಂಕರ !

ದಿನವೂ ವೇದಾಂತವನ್ನೇ ಕೊರೆದರೆ ಸಂಸಾರಿಗಳಾದ ನಮ್ಮಲ್ಲಿ ಬಹುತೇಕರಿಗೆ ಅದು ರುಚಿಸುವುದಿಲ್ಲ ಅಲ್ಲವೇ? ಯಾಕೆಂದರೆ ನಾವು ರಾಜಸರು. ರಾಜಸರಿಗೆ ರಾಜಸ ಗುಣಗಳುಳ್ಳ ಆಹಾರ, ವಿಹಾರ ಅಥವಾ ಸುರಿದುಣ್ಣುವ ಪರಮಾನ್ನ ಗೊರೆತದ ನಿದ್ರೆ ಎಲ್ಲಾ ಬೇಕು. ಆಚೆಮನೆ ಉಪ್ಪಿನಕಾಯಿ, ಉಪ್ಪಿಟ್ಟು, ಪಲ್ಯ, ಸಾರು ಈಚೆಮನೆ ಕಡಬು, ಎಳ್ಳುಂಡೆ, ತಂಬಿಟ್ಟು ರಾಜಾರಾಯರ ಮನೆ ಬೆಣ್ಣೆ ಮುರುಕು, ನಾಣ ಗೌಡ್ರ ಮನೆ ಮುದ್ದೆ-ಬಸ್ಸಾರು ಇದೆಲ್ಲಾ ಸೇರಿ ನಮ್ದೊಂಥರಾ ವಿಚಿತ್ರಾನ್ನದ ಬದುಕು. ಸೃಷ್ಟಿಸಿದ ಬೊಮ್ಮಂಗೂ ಇಲ್ಲದ ಕಾಳಜಿ ನಮ್ಗೇ ಇದೆ ಈ ಪ್ರಪಂಚದ ಬಗ್ಗೆ!

ಛೆ ಛೆ ಅಳ್ತೆ ಗಿಳ್ತೆ ಎಲ್ಲಾ ಇಲ್ದೆ ಸುಮ್ನೇ ಹೇಳೋ ಜನವೇ ಅಲ್ಲ ನಾವು. ಅದ್ಯಾಕ ಹಾಗ್ ನೋಡ್ತೀರಿ. ಗೋಪಾಲನ ದುಡ್ನಲ್ಲಿ ಬೈಟೂ ಕಾಫೀ ಕುಡಿಯೋದು, ಶೆಟ್ರ ಅಂಗಡೀಲಿ ಸಾಲದ ಸಿಗರೇಟು ಸೇದೋದು, ಪಕ್ಕದ ಸೀಟ್ನಲ್ಲಿ ಕೂತವರ ಕೈಲಿಂದ ಡೈಲಿ ಪೇಪರ್ ಇಸ್ಗೊಂಡು ಸಲ್ಪ ನೋಡ್ಕೊಕ್ಹೋಗಿ ಅವರು ಬಸ್ ಇಳಿದು ಹೋದರೂ ವಾಪಸ್ ಕೊಡದೇ ಓದೋದು, ಬ್ಯಾಂಕಿನಲ್ಲಿ ಬೇರೆಯವರ ಪೆನ್ನು ಕಿತ್ಗೊಂಡು ಬರೀತಾ ಬರೀತಾ ನಮ್ ಜೇಬಿಗೆ ಬಿಟ್ಗೊಂಡ್ಹೋಗೋದು ಇವೆಲ್ಲಾ ಇಲ್ದಿದ್ರೆ ಜೀವನದಲ್ಲಿ ಏನೇನೂ ಹುರುಳೇ ಇರೋದಿಲ್ಲ!

ಹಾಗಂತ ದೇಶ ತಿರುಗೋದಾಗ್ಲೀ ಕೋಶ ಓದೋದಾಗ್ಲೀ ನಮ್ಗೆ ಬೇಕಾಗೇ ಇಲ್ಲ. ಯಾಕಂದ್ರೆ ಹಿಂದ್ನೋರೇ ಹೇಳ್ಬುಟ್ರಲ್ಲ "ಕುಳಿತೋದದೆಯುಂ ಕಾವ್ಯ ಪರಿಣತಮತಿಗಳ್" ಎಂದು. ಅವರು ಹೇಳಿದ್ ಮೇಲೆ ಮುಗ್ದೇ ಹೋಯ್ತು. ದಿನಾ ಒಂದಷ್ಟು ಸೀರಿಯಲ್ ನೋಡ್ಬುಟ್ರೆ ಸಾಕು. ಮುಕ್ತ ಮುಕ್ತ, ಮನೆಯೊಂದು ಮೂರು ಸಾವಿರ ಬಾಗಿಲು ! ಹಬ್ಬಗಳನ್ನೂ ಅಲ್ಲೇ ಆಚರಿಸಿಬಿಡ್ತೇವೆ ನಾವು. ನಾಗರಪಂಚಮಿ ಇರ್ಲಿ, ಕೃಷ್ಣಾಷ್ಟಮಿ, ಗಣೇಶ ಚತುರ್ಥಿ ಹೀಗೇ ಬಂದಿದ್ದೆಲ್ಲಾ ಅಲ್ಲೇ. ಹಾಗಂತ ನಮಗೇನೂ ಗೊತ್ತಿಲ್ಲಾ ಅಂದ್ಕೋಬೇಡಿ ಸ್ವಾಮೀ ಶ್ರಾವಣ ಮಾಸ ಅಂದ್ರೆ ದೇವರೆಲ್ಲಾ ಉಪಾಸಬಿದ್ದು ಭೂಮಿಗೆ ಬತ್ತವೆ! ಬಂದ ನಾನಾಥರದ ದೇವರಿಗೆ ಮೊಸರನ್ನವಂತೆ, ಪೊಂಗಲ್ಲು ಇನ್ಕೆಲವಕ್ಕೆ ಪುಳಿಯೋಗರೆ ಹೀಗೇ ಪೂಜಾರಪ್ಪ ಹೇಳ್ತಾಯಿತ್ತಪ್ಪ! ಆಯ್ತು ತಗಳಿ ಸೇವೆ ಮಾಡೋಮಿ ಏನ್ ತೊಂದ್ರೆಯಿರಾಕಿಲ್ಲ ಅಂದ್ವು ನಾವು.

ನಮ್ಮಪ್ಪ ನಮ್ಕೊಟ್ಟಿರದ್ ಅಷ್ಟಕಷ್ಟೇ ಐತೆ, ಸ್ಕೂಲು ಅಂತ ಹೋತಿದ್ವಲ್ಲಾ ಅಲ್ಲೇ ನಮ್ಮೆಂಡ್ರುಗೋಳು ವೈನಾಗಿ ಓಡ್ಯಾಡ್ಕಂಡಿದ್ರು. ಕಂಡಿದ್ದೇ ಹಿಂದ್ಬಿದ್ವಾ ಅವ್ರಪ್ಪಂದ್ರು ಅವ್ರತಾತಂದ್ರು ಸೇರ್ಕೆಂಡು ನಮ್ಗೇ ಕೊಡೋದು ಅಂತಾವ ನಿರ್ಣಯಿಸ್ಬುಟ್ರು. ಜಾಸ್ತಿ ಏನಿಲ್ಲಾ ಅಳೀಮಯ್ಯನ ಮರ್ವಾದೆಗೆ ಕಮ್ಮಿ ಆಗ್ದಂಗೆ ಇದೇ ಬೆಂಗಳೂರಾಗೆ ಒಂದ್ ಸೈಟು, ಒಂದ್ ಸೂಟು, ಆ ಕಾಲಕ್ಕೆ ಹೆಚ್.ಎಮ್.ಟಿ ಗೋಲ್ಡ್ ವಾಚು, ಬೀರು, ಫ್ರಿಡ್ಜು, ವಾಷಿಂಗು, ಬಜಾಜ್ ಸ್ಕೂಟ್ರು, ಖರ್ಚಿಗೊಂದಷ್ಟು ಇದ್ಕಳ್ಳಿ ಅಂತಾವ ಅಕೌಂಟ್ನಗೆ ಎರಡಲಕ್ಸ ಇದಿಷ್ಟು ಮಾತ್ರ ಕೊಟ್ಟವ್ರೆ. ಗಂಡೆಂಬೋ ಗಂಡಸರ್ಗೆ ಇಷ್ಟ ಮಾತ್ರಾ ಕೊಟ್ರೆ ಸಾಕಾ ? ನಾಮೂ ಬಿಡ್ಲಿಲ್ಲ ಹೆಂಡ್ರನೆಲ್ಲಾ ಅಗಲಗಲ ತೌರ್ಗೆ ಕಳಸ್ಕ್ಯಬುಟ್ಟು ತಗಂಬಾ ಅಂತದ್ವಿ. ಮಾವ್ಗೇನ್ ನಾವ್ ಬಿಟ್ಟೀಲ್ ಸಿಕ್ಕುದ್ವಾ ? ಓ ಬಾಳಾ ಚೆನ್ನಾಗಿದೆ ನೀವ್ಯೋಳೋದು. ಏನೋ ನಮ್ಮಪ್ಪ ನಮಗೆ ಕೊಡ ಕಾಗ್ಲಿಲ್ಲ ಅಂದ್ಬುಟ್ಟು ನಾವೇನ್ ಅಬ್ಬೆ ಪಾರಿ ಜನ ಅಲ್ಲ ಸ್ವಾಮೀ, ತಿಳ್ಕಳಿ ನಾವು ಇದೇ ಬೆಂಗಳೂರಾಗೇ ಉಟ್ ಬೆಳದಿರಾದು, ಸಲ್ಪ ನಿಮ್ಮಷ್ಟು ಓದ್ದೋರಲ್ಲ ಒಪ್ಗಳವ, ಹಾಗಂತ ಏನೂ ತಿಳೀದೇ ಇರೋ ಮೂದೇವಿಗ್ಳು ಅಂತೆಲ್ಲಾ ಯೋಳುದ್ರೆ ಯಾವ್ ನನ್ಮಗಂಗೆ ಕೋಪ ಬಾರಕಿಲ್ಲ ಯೋಳಿ!

ವ್ಯವಾರ್ದಾಗೆ ನಮ್ಮಷ್ಟ್ ಮುಂದೆ ಯಾರೂ ಹೋಗಾಕಿಲ್ಲ. ಬರ್ಮುಡಾ ಬಂತಾ ಬಂದ್ಮಾರ್ನೇ ದಿನವೇ ಹಾಕಂಡ್ವಿ, ನಮ್ಮೆಂಡ್ರು ನೈಟೀನೇ ಎಲ್ಲಾ ಕಡೆಗೂ ಬಳ್ಸೋದು, ನಾವೂ ಅಷ್ಟೆ ಬ್ಯಾಂಕ್ಗೋಗ್ಲಿ, ಸಿನ್ಮಾ-ನಾಟ್ಕ-ಮಾಲು ಗೀಲು ಅಂತ ಎಲ್ಲಾನಾ ಓಗ್ಲಿ ಬರ್ಮುಡಾ ಟೀಸರ್ಟು ಆರಾಮಾತದೆ! ಮೊನ್ನೆ ನಮ್ಮ ಫ್ರೆಂಡ್ ದೀರು ಸಿಕ್ಕುದ್ರು ಹವ್ರೂ ಅದನ್ನೇ ಡಜನ್ ಡಜನ್ ಮಡ್ಗವ್ರಂತೆ. ಮೊಬೈಲ್ ಹುದ್ಗಾಟ್ನೆ ಮಾಡಿದ್ದೇ ನಾವು. ಬೆಂಗ್ಳೂರಗೆ ಹದೂ ಹಾ ಕಾಲ್ದಗೆ ಸ್ಪೈಸು ಜೆಟಿಎಮ್ಮು ಎರಡೇ ಇತ್ತಲ್ಲಾ ಹಾಗ್ಲೇ ಅವರು ಟಾವರ್ ಕರ್ಚ್ಗೇ ಇಲ್ಲಾ ಕಣ್ಸಾಮೀ ನೀವೂ ತಗಳಿ ಅಂತಾವ ಮನೆ ಬಾಗ್ಲಿಗೆ ಹುಡೀಕ ಬಂದುದ್ರು. ಅಂಥಾ ಯೋಗ್ತೆ ಉಳ್ಳ ಜನಾ ನಾವು ತಿಳ್ಕಳಿ!

ಮಾವ ಕೊಟ್ಟ್ ಸೈಟಿತ್ತಲ್ಲಾ ಖಾಲೀ ಸೈಟು ಯಾವ್ ನನ್ಮಗುಂಗೆ ಬೇಕು ಮನೆ ಕಟ್ಟಿಸ್ಕೊಡಿ ಇಲ್ಲಾ ಮಗಳ್ನ ನಿಮ್ಮನೆಲೇ ಇಟ್ಕಬುಡಿ ಅಂದಿದ್ದಕ್ಕೆ ನಮ್ಮಾವ ೧೬೦೦ ಚದರದ್ ದೊಡ್ ಮನೆ ಕಟ್ಸಾಕ್ಬುಟ್ಟ. ಇದ್ಕಳ್ಳಿ ಬಿಡಿ ಅಳೀಮಯ್ಯ ಮೊಮ್ಮಕ್ಳಗಾದ್ರೂ ಆತದೆ ಅಂತ ಬಾಳ ಧಾರಾಳಿ ಬುಡಿ. ಹೀಗ ಹದೇ ಮನೇ ಬಿಲ್ಡಿಂಗ್ ನಗೆ ಪಾಲ್ಟೀಶನ್ ಹೊಡ್ದು ಒಟ್ಟೂ ಹತ್ ಮನೆ ಐತೆ. ಒಂದ್ ನಮಗಾ ಮಿಕ್ಕಿದ್ದೆಲ್ಲಾ ಬಾಡ್ಗೆ ಕೊಟ್ಟೀವಿ. ತಿಂಗ್ಳಾ ಒಂದ್ ಲಕ್ಸ ಬಾಡ್ಗೆಗೇನ್ ಮೋಸ ಇಲ್ಲ ಬುಡಿ! ಇದ್ಕಿಂತಾ ಇನ್ನೇನ್ ಬೇಕು ಮನ್ಸಂಗೆ ?

ಮದ್ಲೆಲ್ಲಾ ಪ್ಯಾಕ್ಟ್ರಿ ತಾವ ಹದೂ ಇದೂ ಕೆಲ್ಸ ಮಾಡ್ತಿದ್ವಾ ಹೀಗ ಸಾಕು ಹಂತವ ಬುಟ್ಬುಟ್ಟೀವಿ. ಎಂಗೂ ವರಮಾನ ಬತ್ತದೆ ಇನ್ಯಾಕೆ. ಬೇರೇನೂ ತೊಂದ್ರಿಲ್ಲಾ ನಮ್ಮ ಕಿರೀ ಮಗಳವಳಲ್ಲಾ ಕಾಲೇಜ್ಗೆ ಹೋತಾ ಇದ್ಲಾ ಹಲ್ಲಿ ಅದ್ಯಾವನೋ ಅಡ್ಕಸಬಿ ನನ್ಮಗ ಸಿಕ್ಕಾಕಂಬುಟ್ಟು ಲವ್ವು ಲವ್ವು ಹಂತಾವ ಗಂಟ ಬಿದ್ಕಬುಟ್ನಾ ಹಿವ್ಳೂ ಅವನ ಪಕ್ಸವೇ ಆಕ್ಕಬುಟ್ಟವಳೆ ! ತಮ್ದಿಬ್ರುದೂ ಶಾನೆ ದಿವ್ಸಾ ಆಯ್ತು ಅದಾಗಲೇ ಮೂರ್ತಿಂಗ್ಳು ನಿಮ್ಮಗೀಗೆ ನಂಗೇನ ಮದ್ವೆ ಮಾಡ್ಕಬೇಕು ಹಂದೇನಿಲ್ಲ, ಮಾಡ್ಕಬೇಕು ಹಂದ್ರೆ ಒಂದ್ ಸೈಟು ಸೇರ್ದಂಗೆ ಒಂದಷ್ಟು ಯೋಳ್ತೀವಿ ಕೊಡಿ ಆಮ್ಯಾಕೇಯ ಬಾಕಿ ಮಾತು ಅಂತವ್ನೆ.. !

" ಹುಡ್ಗಾ ಯೆಂಗವ್ನೆ "

" ಕಾಣಕೇನೋ ಬೋ ಸಂದಾಕೇ ಅವ್ನೆ....ಪರ್ವಾ ಇಲ್ಲ ಒಳ್ಳೇ ಮಂತನ ಅಂತಾವ ಯಾರ್ನೋ ಇಚಾರ್ಸ್ದಾಗ ಗೊತ್ತಾಯ್ತು "

" ಕೊಟ್ಬುಡಿ ಅತ್ಲಗೆ ....ನಿಮ್ಗೂ ವೈಸಾಯ್ತಾ ಹೋತದೆ. ಹಿನ್ನು ಗಂಡ್ಮಕ್ಳು ನಾಳೆದಿನ ತಂಗೀನ ಚೆನ್ನಾಗ್ ನೋಡ್ಕತವೆ ಹನ್ನೋಕಾಗಲ್ಲ, ನಿಮ್ಕಣ್ಮುಂದೆ ನೀವ್ಗಟ್ಟಿ ಹಿರೋವಾಗ್ಲೆ ಮಗುಳ್ನ ಮದ್ವೆ ಮಾಡ್ಕ್ಯಬುಟ್ರೆ ಸಲೀಸು "

" ಬುಡ್ರೀರೀ ನಂಗಿನ್ನೂ ನಲ್ವತ್ ವರ್ಸ, ಆಕಿಗಿನ್ನೂ ನನ್ನರ್ಧ ! ಇಷ್ಟ ಬೇಗ ಮಾಡಾಕ್ಬುಡೋದಾ ? ಹೋಕ್ಕಳಿ ಆ ನನ್ಮಗಂದು ಡಿಮ್ಯಾಂಡು ತುಂಬಾ ಐತೆ "

" ಹಿರ್ಲಿ ಬಿಡಿ ನಿಮ್ದೇ ಜನಿಕ್ಕೆ ಕೊಟ್ಟಾಂಗಾತದೆ! ನಿಮ್ಮಳ್ಗು ಮೊಮ್ಮಕ್ಳು ಆರಾಮಾಗಿ ತಿಂದ್ಕತವೆ ಬುಡಿ "

" ಹದ್ಯಾರು ಬರ್ತಿದಾರಲ್ಲ ? "

" ಚಲ್ವಯ್ಯ "

" ಬನ್ನಾ ಬರ್ಲಿ ಬರ್ಲಿ ಆವಯ್ಯಂಗೆ ಇನ್ನು ಮಧ್ಯಾಹ್ನತಕ ಬೇರೇ ಕೆಲ್ಸಿರಂಗಿಲ್ಲ "

" ವಿಸ್ಯ ನಿಮ್ಮಲ್ಲೇ ಇರ್ಲಿ ಚಲ್ವಯ್ಯಂಗೆ ತಿಳುದ್ರೆ ಊರ್ಗೆಲ್ಲಾ ಡಾಣಾ ಡಂಗ್ರಾ "
------
ಮಾತುಕತೆ ಮುಂದುವರಿದಿತ್ತು. ಪಾರ್ಕಿನ ಕಲ್ಲಿನ ಬೆಂಚಿನಮೇಲೆ ಪ್ರತಿನಿತ್ಯ ಮೂರ್ನಾಕು ಜನರದ್ದು ಇದೇ ರೀತಿ ಪ್ರಹಸನ, ಕಾವ್ಯ, ಮಹಾಕಾವ್ಯ ಲಹರಿ. ಬೆಂಗಳೂರಿನಲ್ಲಿರೋ ಅನೇಕ ಜನ ಲ್ಯಾಂಡ್ ಲಾರ್ಡ್‍ಗಳು ಇದೇ ರೀತಿ. ಇಲ್ಲೇ ಹುಟ್ಟಿ ಬೆಳೆದಿರೋ ಹಲವು ಜನರಿಗೆ ಅಪ್ಪನೋ ಮಾವನೋ ಮಾಡಿಟ್ಟ, ಕೂಡಿಟ್ಟ ಆಸ್ತಿಯನ್ನು ಅನುಭವಿಸುತ್ತಾ ಮಜಾ ಉಡಾಯಿಸುವುದೇ ಕೆಲಸವಾಗುತ್ತಿತ್ತು. ಯಾವಾಗ ಸೈಕಲ್ ಮುಂದೆ ತಿರುಗಿತೋ ಆಗ ಕೆಲವರಿಗೆ ಜವಾಬ್ದಾರಿ ಬಂತು; ಇನ್ನೂ ಕೆಲವರಿಗೆ ಬರುವುದರಲ್ಲೇ ಇದೆ !

ಎಲ್ಲಾ ರೀತಿಯ ಅನುಕೂಲಗಳಿದ್ದರೂ ಜೀವನಕ್ರಮದಲ್ಲಿ ಶಿಸ್ತು ಇಲ್ಲವೇ ಇಲ್ಲ. ಸಂಸ್ಕಾರದ ಬಗ್ಗೆ ಬರೆಯೋದೇ ಬೇಡ ಬಿಡಿ. ಸ್ನಾನ ವಾರಕ್ಕೆ ಒಂದು ಸರ್ತಿ ಆದರೆ ಸಾಕು; ಅದೂ ಯಾರಿಗೋ ಬೇಸರವಾಗದಿರಲಿ ಎಂಬುದಕ್ಕಾಗಿ. ತಮ್ಮ ಮೈಯ್ಯ ವಾಸನೆಯಲ್ಲೇ ಮಹಾಕಾವ್ಯ ಬರೆಯುವ ತಾಕತ್ತುಳ್ಳ ಇಂತಹ ನಿಸ್ಸೀಮರನ್ನು ನಮ್ಮ ಕವಿಯೇನಾದರೂ ಕಂಡಿದ್ನೇ ? ಗೊತ್ತಿಲ್ಲ. ಆದರೂ ಕವಿಯ ಒಂದು ವಾಣಿ ನೆನಪಾಯ್ತು : ’ಕುಳಿತೋದದೆಯುಂ ಕಾವ್ಯಪರಿಣತಮತಿಗಳ್.’ ಸಾಂಸ್ಕೃತಿಕವಾಗಿ ಯಾವುದೇ ಮೌಲ್ಯಕ್ಕೂ ತೂಗದ ಈ ಜನ ತಿನ್ನುವುದಕ್ಕಾಗೇ ಬದುಕಿರುವುದಂತೂ ಸುಳ್ಳಲ್ಲ![ಕೆಲವು ಅಪವಾದಗಳಿರಬಹುದು] ಹುಟ್ಟು-ಆದಷ್ಟೂ ಬಿಟ್ಟಿ ಆಸ್ತಿಮಾಡು-ತಿನ್ನು-ಕುಪ್ಪಳಿಸು-ನೆಗೆದುಬೀಳು ----ಇದೇ ಅವರ ಜೀವನಚಕ್ರ. ಹೌದು ಕಣ್ರೀ ಇದೂ ಒಂದು ಶೈಲಿಯ ಜೀವನವೇ!


ಶಂಭೋ ಶಂಕರ !