Tuesday, January 19, 2010
ಮಾಘಿಯ ಇಬ್ಬನಿ
ಮಾಘಿಯ ಇಬ್ಬನಿ
ನಸುಕಲೆ ಯಾಕೆ ಕೂಗಿದೆ ಹೇಳೇ
ಮಾಮರದಿ ಕೋಗಿಲೆ?
ಮಾಘಿಯ ಚಳಿಗೆ ಮರದಲಿ ಅವಿತು
ರಾಗವದು ಯಾಕೆಲೆ?
ಮುಂಜಾವದಲೇ ಸೂರ್ಯಬಂದಿರಲು
ಮೇಲೇಳದ ಆಲಸ್ಯ
ಮೈಯ್ಯನು ಮುರಿಯುತ ಹೊದಿಕೆಯ ಎಳೆದರೂ
ಹಾಸಿಗೆ ಬಿಡದು ರಹಸ್ಯ !
ಮಲೆನಾಡಿನ ಮೂಲೆಯೂರಿನ ಮನೆಯಲಿ
ಆಲೆಯ ಗಾಣದ ತಿರುವು
ಗಣಗಣಗುಡಿಸುತ ಗಾಣವ ಎಳೆಯುವ
ಹೋರಿಗಿದೆಯೆ ತುಸು ತೆರವು ?
ಬಿಸಿ ಬಿಸಿ ಕಾಫಿಯ ಲೋಟದೊಳಾಪರಿ
ಏನಡಗಿದೆ ಹೊಸ ಸತ್ವ ?
ಕಸುವು ತುಂಬಿ ಕೆಲಸಕೆ ಅಣಿಗೊಳಿಸುವ
ಬಿಂಕದ ಬಿಸಿರಸ ತತ್ವ !
ಬಚ್ಚಲು ಮನೆಯದು ನೆಚ್ಚಿನ ಆಸರೆ
ದಿನದೀ ಚೊಚ್ಚಲ ಘಳಿಗೆ
ಹುಚ್ಚು ಹರಿಯೆ ಹಂಡೆಯ ಬಿಸಿನೀರಿದೆ
ಬೆಚ್ಚನ ಆ ಒಲೆ ಬಳಿಗೆ
ತೊಟ್ಟಿಲ ಮಗುವಿನ ಕಿಲಕಿಲ ನಗುವಲಿ
ಕಳೆದು ಹೋಗುವ ಬಯಕೆ
ಬೆಟ್ಟವನೇರುತ ಎಳೆ-ಹೂ ಬಿಸಿಲಲಿ
ಮಿಳಿತು ಕುಣಿವ ಮೈ-ಮನಕೆ
ನಸುಗೆಂಪು ನಗೆಯ ಗುಲಾಬಿ ಮೇಲ್ಗಡೆ
ನವಿರಾದ ಮಂಜಹನಿಯು
ತುಸುನಾಚಿ ಮುಂದೆ ಸಾಗುವ ಇರುವೆಗೆ
ತಡಸೀತೆ ನೀರಹನಿಯು ?
ಗಡಬಡಿಸಿ ಓಡ್ವ ಗಡಿಯಾರದ ಮೇಷ್ಟ್ರಿಗೆ
ಯಾಕಿಲ್ಲವೊ ತುಸು ಕರುಣೆ ?
ಎಡಬಿಡದೆ ನಡೆದು ಈ ಜೀವಸಂಕುಲಕೆ
ಕಾಲದ ಒಗ್ಗರಣೆ !
Subscribe to:
Posts (Atom)