ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, April 26, 2011

ಇಂದಿನ ವಿಶೇಷ : ಬದನೇಕಾಯಿ ಕೋಸಂಬರಿ !


ಇಂದಿನ ವಿಶೇಷ : ಬದನೇಕಾಯಿ ಕೋಸಂಬರಿ !

" ಬನ್ನಿ ಬನ್ನಿ ಇವತ್ತು ನನ್ನದೇ ಕೈ ಅಡುಗೆ ಬಿಸಿಬಿಸಿಯಾಗಿ ಊಟಮಾಡೋಣ " ಎಂದ ತಕ್ಷಣ "ಅಡುಗೆ ಕೈಲಲ್ದೇ ಕಾಲಲ್ಲೇ ಮಾಡ್ತಾರೆ ? " ಎಂದು ಕೇಳೋಣ ಅನ್ನಿಸಿಬಿಟ್ಟಿತ್ತು. ಆದರೂ ಹಾಗೆಲ್ಲಾ ಮಾಡೋದು ಶಿಷ್ಟಾಚಾರಕ್ಕೆ ಸರಿಯಾಗೊಲ್ಲಾಂತ ಸುಮ್ನಾಗಿಬಿಡುತ್ತೇವೆ. ಎಷ್ಟೋ ಸಮಯದಲ್ಲಿ ನೋಡಿ " ನಂಗೆ ಉರದ್ಹೋಯ್ತು " ಅಂತಾರೆ, ಅದೇನು ಉರಿಯುತ್ತೋ ಶಿವನೇ ಬಲ್ಲ! ಇಂತಹ ವಾಕ್ಪಟುಗಳು ನಮ್ಮಲ್ಲಿ ಬಹಳೇ ಮಂದಿ. ಒಬ್ರಂತೂ ನಾವು ಚಿಕ್ಕವರಿದ್ದಾಗ ನಮ್ಮ ಅಜ್ಜನ್ನ ಕಾಣಬೇಕು ಅಂತ ಬೆಳಿಗ್ಗೇನೆ ಮನೆಗೆ ಬರೋರು. ಅದೂ ಇದೂ ಲೋಕಾಭಿರಾಮ ಮಾತಾಡ್ಕೊಂಡು ಸ್ವಲ್ಪ ಹೊತ್ತಿಗೆ ಮರಳಿ ಹೋಗ್ತಿದ್ರು. ಆಗಷ್ಟೇ ತಿಂಡಿ ಮುಗಿಸಿರುತ್ತಿದ್ದ ಅಜ್ಜ " ಏಳೋ ಚಾ ಕುಡೀ " ಅಂತ ಕೇಳ್ದ್ರೆ " ನಾನು ಈಗಷ್ಟೇ ಕುಡ್ದು ಬಂದಿದ್ದು" -ಇದು ಅವರು ಸದಾ ಕೊಡುತ್ತಿದ್ದ ಉತ್ತರ. ನಾವು ಮಕ್ಕಳೆಲ್ಲಾ ಸೇರಿ ಅವರಿಗೆ ’ಕುಡ್ದು ಬಂದಿದ್ದು’ ಅಂತ ಹೆಸರಿಟ್ಟಿದ್ವಿ ! ಇನ್ನೊಬ್ಬ ಮಹಾಶಯ ಇದ್ದ. ಏನನ್ನೇ ಕಾಣ್ಲಿ " ಏ ಮಾರಾಯ ಕೈಮುಗ್ಯೋದೇಯ " ಅಂತಿದ್ದ. ಅವನ ಹಾಸಿಗೆಯಲ್ಲಿ ಒಮ್ಮೆ ತಿಗಣೆ ಕಂಡ್ತಂತೆ. ಅದನ್ನೇ ಮಾರನೇದಿನ ಹೇಳಿಕೊಂಡು ಮತ್ತದೇ " ಅದೆಷ್ಟು ತಿಗಣೆ ಏ ಮಾರಾಯ ಕೈಮುಗ್ಯೋದೇಯ " ಅಂದ. ಕೈಮುಗದ್ರೆ ತಿಗಣೆಗಳು ಓಡಿಹೋಗ್ತಾವಾ ? ನಮ್ಗಂತೂ ತಿಳೀಲಿಲ್ಲ. ಇನ್ನೊಬ್ಬಂದು ಇನ್ನೂ ವಿಶಿಷ್ಟ ಪದಬಳಕೆ: ಆತ ಯಾವ್ದನ್ನೇ ಕಂಡ್ರೂ " ಎಂತಕ ಸುಡ್ಲಿ " ಅನ್ನೋ ಗಿರಾಕಿ. ಅವರ ಮನೆಗೆ ಒಮ್ಮೆ ಯಾರೋ ಪ್ರೀತಿಯಿಂದ ಗಿಫ್ಟ್ ಏನನ್ನೋ ತಂದ್ರಂತೆ -ಆಗಲೂ ಅದನ್ನು ಸ್ವೀಕರಿಸಿದ ಆತ ಉಚ್ಚರಿಸಿದ್ದು " ಇದೆಂತಕೋ ಸುಡ್ಲಿ " ಎಂದು. ಕೊಟ್ಟವನಿಗೆ ಅಲ್ಲಿಯ ಸ್ಥಾನಿಕ ಭಾಷೆಯ ಸೊಗಡಿನ ಅರ್ಥವಾದರೇ ಕೊಟ್ಟವ ಬಚಾವು, ಅದಿಲ್ಲಾ ಕೊಟ್ಟವ ಏನಂದುಕೊಳ್ಳಲಾರ!

ಹಳ್ಳಿಯಿಂದ ಬಂದವರಿಗೆ ಎಚ್ಚರಿಕೆ - ಹಲವಾರು ಗ್ರಾಮ್ಯ ಶಬ್ದಗಳು ನಮ್ಮ ಜೀವನದುದ್ದಕ್ಕೂ ಹಾಸುಹೊಕ್ಕಾಗಿರುತ್ತವೆ. ಅವು ಬೇರೇ ಬೇರೇ ಪ್ರಾಂತಗಳಲ್ಲಿ ಬೇರೇ ಬೇರೇ ಅರ್ಥಗಳನ್ನು ಕೊಡಬಹುದು. ಒಮ್ಮೆ ಹೀಗೇ ನನ್ನ ಸ್ನೇಹಿತರೊಬ್ಬರ ಮದುವೆಗೆ ಧಾರವಾಡಕ್ಕೆ ಹೋಗಿದ್ದೆ. " ಬೆಂಗ್ಳೂರಿಗೆ ಎಂದ್ ಹೊಳ್ಳೋಗ್ತೀರಿ ? " ಅಂತ ಮದುವೆ ಬಂದ ಒಬ್ಬಾತ ಪ್ರಶ್ನಿಸ್ತಿದ್ದ. ಅವನಿಗೋ ಸಮಯವಿದ್ದರೆ ತಮ್ಮನೆಗೂ ನನ್ನನ್ನು ಕರೆದುಕೊಂಡು ಹೋಗುವ ಆಸೆ, ನಂಗೋ ಆತ ಯಾಕೆ ಹಾಗಂದ ಎನ್ನುವುದು ಅರ್ಥವಾಗದ ಸಂಕಟ! ’ಹೊಳ್ಳಿ ಹೋಗೋದು’ ಅಂದ್ರೆ ಮರಳಿ ಹೋಗೋದು ಎಂದು ಆಮೇಲ್ ಗೊತಾತ್ ಬಿಡ್ರೀಪಾ. ನಾವೆಲ್ಲಾ ಅಷ್ಟು ಶಾಣ್ಯಾ ಇರಾಂಗಿಲ್ಲ, ಅದ್ಕೇ ನಮ್ಮಂದಿ ತೆಪ್ ತಿಳೀಬಾರ್ದು ಗೊತಾತಿಲ್ಲೋ ?

ಈ ಕಡೆ ಮಂಡ್ಯಕ್ಕೆ ಹೋದ್ರೆ ಅದರ ಕತೇನೇ ಬೇರೆ. ಹಲ್ಲೀ ಭಾಸೆ ಈ ಮೊದ್ಲೇ ನಾ ಬರ್ದಿರೋದ್ನ ಬಾಳ್ ಸಲ ನಮ್ಹೈಕ್ಳು ಓದವ್ರೆ. ಬ್ಯಾಡ ಅಂದ್ರೂ ಅಟ್ಟುಸ್ಕಬತರೆ ಬರೀ ಬರೀ ಅಂತಾವ. ಅದ್ಕೇಯ ನಾ ಯೋಳೇಬುಟ್ಟೆ ಈ ಕಿತಾ ನಂಗಾಯಾಕಿಲ್ಲ ನೀಮೇ ನೋಡ್ಕಳಿ ನಂದಿಷ್ಟೇಯ ಅಂತಾವ. ಅವ್ನದಾನಲ್ಲ ಆ ಮನ್ಸ ಬಲ್ನನ್ಮಗ ಅವನು. ಒಸಿ ಸಿಕ್ರೆ ಬಿಡೋ ಗಿರಾಕಿನೇ ಹಲ್ಲ. --ಹೀಗೇ ಅಲ್ಲಿಯದೇ ಒಂದು ಶೈಲಿ. ಬಯಲುಸೀಮೆ ಜನ ಬೋಳೀಮಗ್ನೆ ಸುಳಾಮಗ್ನೆ ಅನ್ನೋ ಶಬ್ದಗಳನ್ನ ಸಾರಾಸಗಾಟಾಗಿ ಬಳಸ್ತಾ ಇರ್ತಾರೆ. " ಏ ತಕಂಬಾರಲೇ ಸುಳಾಮಗನ " ಅಂದ್ರೇನೇ ಅದು ಅಲ್ಲಿನ ಗಂಡುಮಾತು! ಅಂತಹ ಶಬ್ದಗಳನ್ನು ಉಪಯೋಗಿಸದೇ ಇದ್ರೆ ಅವರಿಗೆ ಉಪ್ಪು-ಖಾರ-ಹುಳಿ ಇಲ್ಲದ ಊಟದ ಹಾಗೇ ಸಪ್ಪೆ ಅನ್ನಿಸ್ತದೆ. ಆ ಶಬ್ದಗಳ ಪ್ರಯೋಗ ಅಕಸ್ಮಾತ್ ಆಗಲಿಲ್ಲ ಎಂದುಕೊಳ್ಳಿ ಆ ಕ್ಷಣಕ್ಕೇ ಅವರಿಗೆ ಗೊತ್ತು - ನೀವು ಅಲ್ಲೀ ಜನ ಅಲ್ಲ ಅಂತ!

ಇನ್ನು ಮಂಗಳೂರಿಗೆ ಬಂದರೆ ಅದು ನಮ್ಮ ಮಂಗಳೂರಲ್ಲವೋ ಬೇಸಿಗೆಯಲ್ಲಿ ತುಂಬಾ ಸೆಖೆ ಉಂಟು ಮಾರಾಯರೆ. ಮೊದಲೇ ನಮಗೆ ಮಂಡೆಬಿಸಿ ಅದರಲ್ಲೂ ಈ ಬೆಸಿಗೆ ಉಂಟಲ್ಲ ಆಗ ಮಾತ್ರ ತಡೆದುಕೊಳ್ಳಲಿಕ್ಕೆ ಸಾಧ್ಯವಿಲ್ಲ. ನಾನು ಈಗ ಬಜ್ಪೆಗೆ ಹೋಗಿ ಬಂದದ್ದು, ಗೊತ್ತಾಯಿತೋ ? ಮೋನಪ್ಪ ಮೇಸ್ತ್ರಿ ಕೆಲಸ ಮಾಡಿಕೊಡ್ತೆ ಅಂದೇಳಿ ಐನೂರು ತೆಗೆದುಕೊಂಡವ ಆಸಾಮಿ ೩ ತಿಂಗಳಾದರೂ ಪತ್ತೆಯೇ ಇಲ್ಲ! ಅಂತೂ ಸಿಕ್ಕಿದ ಚೆನ್ನಾಗಿ ಬೈದು , ಚೆನ್ನಾಗಿ ಬೈದು ಬಂದೆ. --ಬೈಗುಳಕ್ಕೆ ಅಬಬ್ಬಾ ಅಂದರೆ ತಲೆಸರಿಯಿಲ್ಲದವ, ಅವಿವೇಕಿ, ಮಳ್ಳ ಇಂತಹ ಶಬ್ದಗಳೇ ಹೊರತು ಅವಾಚ್ಯ ಶಬ್ದಗಳೆಂದು ಸಾಹಿತ್ಯಕ ಪರಿಭಾಷೆಯಲ್ಲಿ ಗುರುತಿಸಲ್ಪಟ್ಟ ’ಬೋಳೀಮಗ’ ಇಂತಹ ಪದಗಳನ್ನು ಅಲ್ಲಿ ಬಳಸುವುದಿಲ್ಲ.

ಹೀಗೇ ಪ್ರಾದೇಶಿಕವಾಗಿ ಭಾಷೆಯಲ್ಲೂ ರೂಢಿಗತ ಅರ್ಥಗಳ, ಧ್ವನ್ಯರ್ಥಗಳ ಒಳಹರಿವು ವಿವಿಧ. ಬದನೇಕಾಯಿ ಕೋಸಂಬರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ[ಒಂದರ್ಥದಲ್ಲಿ ಇದಕ್ಕೂ ಅದಕ್ಕೂ ಸಂಬಂಧ ಕಾಣಬರುವುದರಿಂದಲೂ] ಬದನೇಕಾಯಿ ಕೋಸಂಬರಿ ಕೈ ಅಡುಗೆಯಲ್ಲಿ ತಯಾರಾಗುವವರೆಗೆ ಬಂದ ಅತಿಥಿಗಳಾದ ನಿಮ್ಮನ್ನು ಕಾಲಿ ಕೂರಿಸುವ ಬದಲು ಸ್ವಲ್ಪ ಶೈತ್ಯೋಪಚಾರ ಮಾಡಿದೆ ಅಷ್ಟೇ. ಅಂತೂ ನಮ್ಮ ಸ್ನೇಹಿತನನ್ನು ನಿಮಗೆ ಪರಿಚಯ ಮಾಡಿಕೊಡುವ ಸಮಯ ಬಂದುಬಿಟ್ಟಿದೆ. ಸ್ನೇಹಿತನ ಹೆಸರು ಕೆ.ಆರ್.ಎಲ್, " ಇದು ವಿ.ಆರ್.ಎಲ್ ಗ್ರೂಪಿನ ಸಿಸ್ಟರ್ ಕನ್ಸರ್ನ್ ಥರಾ ಇದೆಯಲ್ಲ " ಎಂದು ಕೇಳಬೇಕೆನಿಸಿದರೂ ಕೇಳಬೇಡಿ. ಒಂದರ್ಥದಲ್ಲಿ ಕೆ.ಆರ್.ಎಲ್ ಕೂಡ ದೊಡ್ಡ ಸಂಸ್ಥೆಯೇ! ಏಕ ವ್ಯಕ್ತೀ ಸಂಸ್ಥೆ. ಇದರ ಬಗ್ಗೆ ನೀವು ಅಧ್ಯಯನ ಮಾಡಿದರೆ ನಿಮ್ಮಲ್ಲಿ ಯಾರಾದರೂ ಒಬ್ಬರಿಗಾದರೂ ಡಾಕ್ಟರೇಟ್ ಸಿಗಬಹುದು!

ಡಾಕ್ಟರೇಟ್ ಅಂದ ತಕ್ಷಣ ಹಾಗೆ ಮುಖ ಯಾಕೆ ಸಿಂಡರ್ಸ್ತೀರಿ ? ಮೊನ್ನೆ ನಮ್ಮ ಖರ್ಗೆ ಸಾಹೇಬರು ತಗೊಂಡರು, ಹಿಂದೆ ನಮ್ಮ ಯಡ್ಯೂರಣ್ಣ ತಗಂಡಿದ್ರು ಆದ್ರೆ ಅದ್ಯಾಕೋ ಬಳಕೇಲಿಲ್ಲ! ಮನುಷ್ಯನಾಗಿ ಹುಟ್ಟಿದಮೇಲೆ ಡಾಕ್ಟರೇಟ್ ಪಡೆಯದೇ ಹೋದರೆ ಅದು ಮನುಕುಲಕ್ಕೇ ಮಾಡುವ ಅಪಮಾನ! ಅದರಲ್ಲೂ ಕಾಣದ ದೇಶದ ಗೊತ್ತಿರದ ವಿಶ್ವವಿದ್ಯಾನಿಲಯಗಳವರು ಹಗಲಲ್ಲೇ ಟಾರ್ಚ್ ಹಾಕಿ ಹುಡುಕಿಬಂದು ಕೊಡುವ ಗೌರವ ಡಾಕ್ಟರೇಟ್ ಇದೆಯಲ್ಲಾ ಅದನ್ನೇ ಪಡೆಯಬೇಕು.

ಬ್ರಷ್ಟಾಚಾರಿಯೇ ಆಗು ಬೊಕ್ಕಸವ ತುಂಬಿಸುತ
ಅಷ್ಟದಿಕ್ಕುಗಳಲ್ಲೂ ಬ್ರಾಂಚು ತೆರೆದು
ಏನಾದರೂ ಆಗು ರಾಜಕಾರಣಿಯಾಗು
ಏನಾದರೂ ಸರಿಯೇ ಮೊದಲು ಡಾಕ್ಟರನಾಗು !

ಇತ್ತೀಚೆಗೆ ಇಂತಹ ಡಾಕ್ಟರುಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ! ಯಾರು ಡಾಕ್ಟರು ಯಾರು ಅಲ್ಲ ಎಂಬುದೇ ಅನುಮಾನ! ೨೦೨೦ರಲ್ಲಿ ಪ್ರತಿಯೊಬ್ಬರೂ ಡಾಕ್ಟರಾಗಲೇಬೇಕಂತೆ! ಮಧ್ಯೆ ಖೊಟ್ಟಿ ಜ್ಯೋತಿಷಿಗಳ ಭವಿಷ್ಯದಂತೇ ೨೦೧೨ರ ಪ್ರಳಯದಲ್ಲಿ ಬದುಕಿ ಉಳಿಯುವವರೆಲ್ಲಾ ಪುಣ್ಯಾತ್ಮರು ಮತ್ತು ಅವರೆಲ್ಲಾ ಮುಂದೆ ಮತ್ತೆ ಪ್ರಳಯವಾಗದ ಹಾಗೇ ತಡೆಗಟ್ಟಲು ಡಾಕ್ಟರಾಗಲೇಬೇಕು!

ಬದನೇಕಾಯಿ ಕೋಸಂಬರಿ ತಣಿದುಹೊಗುವ ವಸ್ತುವಂತೂ ಅಲ್ಲ. ಹೀಗಾಗಿ ಅಲ್ಲಿಲ್ಲಿ ಸ್ವಲ್ಪ ಪಾನಕ ಪನವಾರ ಚರ್ಪು ಕೊಟ್ಟಿದ್ದನ್ನು ಸ್ವೀಕರಿಸಿ ಮುಂದಕ್ಕೆ ಹೋಗೋಣ ಅಂತ, ಹ್ಯಾಗೆ ಪರವಾಇಲ್ವಾ ?

ಕೆ.ಆರ್. ಎಲ್ ಅಂದ್ರೆ ಕೆ.ಆರ್. ಲಕ್ಷ್ಮೀನಾರಾಯಣ. ಇಂಥಾ ಅಸಾಮಾನ್ಯ ಕೆ.ಆರ್.ಎಲ್ಲು ಒಂದಾನೊಂದು ಕಾಲಕ್ಕೆ ನಮ್ಮೊಟ್ಟಿಗೆ ಇದ್ದ. ಶಾಖಾಹಾರೀ ಬ್ರಹ್ಮಚಾರೀ ಜೀವನ. ಒಂದೇ ಕೋಣೆಯಲ್ಲಿ ವಾಸ: ಮೂರು ಮಂದಿ. ಬದಿಯಲ್ಲಿ ಒಂದು ಪರದೆ ಕಟ್ಟಿದ್ದೆವು. ಅದರಾಚೆ ಅಡುಗೆಮನೆ! ಅಲ್ಲೊಂದು ಸಣ್ಣ ಕಟ್ಟೆಯಿತ್ತು. ಕಟ್ಟೆಯಮೇಲೆ ಸೀಮೆ ಎಣ್ಣೆಯ [ಪಂಪ್‍ಸ್ಟವ್] ಅಗ್ಗಿಷ್ಟಿಕೆ. ಅಲ್ಲಲ್ಲೇ ಕೆಲವು ಪಾತ್ರೆಗಳು. ಕಟ್ಟೆಯ ಕೆಳಗೆ ಒಂದು ಸ್ಟೀಲ್ ಡ್ರಮ್ಮು, ಬಿಂದಿಗೆ ಒಂದಷ್ಟು ಪಾತ್ರೆಗಳು. ಕಟ್ಟೆಯ ಸಂದಿನಲ್ಲಿ ಒಂದು ಸಣ್ಣ ತಂತಿಯ ಶೆಲ್ಪು. ಅದರಲ್ಲಿ ಸಣ್ಣ ಸಣ್ಣ ಬಾಟಲುಗಳಲ್ಲಿ ಅಡಿಗೆ ಸಾಮಗ್ರಿಗಳು. ಹೊತ್ತಿಲ್ಲಾ ಗೊತ್ತಿಲ್ಲಾ ನಾವೇ ಅಡುಗೆ ಮಾಡಿಕೊಳ್ಳುತ್ತಿದ್ದೆವು. ನಮ್ದೇ ಕೈ-ನಮ್ದೇ ಬಾಯಿ: ಸೇರುತ್ತೋ ಬಿಡುತ್ತೋ ಅದು ಈಗ ಪ್ರಸ್ತುತವಲ್ಲ.

ನಮ್ಮಲ್ಲಿಯೇ ಒಬ್ಬಾತ ಕೆ.ಆರ್.ಎಲ್ಲು. ಆತ ಮಹಾನ್ ಆಳಸಿ. ಸೋಂಭೇರೀ ಸಾರ್ವಭೌಮ! ಹಲವು ಸಲ ನನ್ನಿಂದ ಉಪದೇಶ ಕೇಳಿಯೂ ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಹಾಗೆ ಪಾರ್ಸೆಲ್ ಮಾಡಿದ ಅದ್ಭುತ ವ್ಯಕ್ತಿತ್ವ! ಯಾವಾಗಲೂ ನಾವೇ ಅಡುಗೆ ಮಾಡಬೇಕಲ್ಲಾ ಆತ ಕಡ್ಡಿ ಹಂದುವುದಿಲ್ಲಾಂತ ಒಮ್ಮೊಮ್ಮೆ ಆತನನ್ನು ರೂಮಿನಲ್ಲೇ ಬಿಟ್ಟು ನಾವಿಬ್ಬರು ಹೊರಹೋಗಿ ತಡವಾಗಿ ಬರುತ್ತಿದ್ದೆವು. ಕೆಲವೊಮ್ಮೆ ಮೂವರಲ್ಲಿ ಯಾರಾದರೂ ಒಬ್ಬರಿಗೆ ಸಂಬಂಧಿಸಿದ ಯಾರೋ ಗೆಳೆಯರು ರೂಮಿಗೆ ಬರುವುದಿತ್ತು. ಬಂದಾಗ ಊಟ-ತಿಂಡಿ ಸಮಯವಾದರೆ ನಮ್ಮೊಡನೆಯೇ ಪೂರೈಸುವ ವಹಿವಾಟು ನಮ್ಮ ಬಳಗದ್ದು. ನಾವೂ ಆಗಾಗ ಅವರುಗಳ ರೂಮಿಗೆ ಬೇಸರ ಕಳೆಯಲು ಹೋಗುವ ಪರಿಪಾಟವಿತ್ತು. | ಸಮಾನ ಶೀಲೇಷು ವ್ಯಸನೇಷು ಸಖ್ಯಂ | ಎನ್ನುವಂತೇ ಅವರೂ ಬ್ಯಾಚುಲರ್ಸೇ ಆಗಿದ್ದುದ್ದರಿಂದ ನಮ್ಮನಮ್ಮಲ್ಲಿ ನಾವು ಹೋಗಿಬಂದು ಮಾಡುವುದು ರಿವಾಜು.

ಇಂಥಾ ಭೂಲೋಕದಲ್ಲಿ ಒಮ್ಮೆ ಏನಾಯ್ತಪ್ಪಾ ಅಂತಂದ್ರೆ ರೂಮಿನಲ್ಲಿ ಕೆಲವಾರು ಹಸಿರು ಬದನೇಕಾಯಿಗಳನ್ನು ಬಿಟ್ಟರೆ ತರಕಾರಿಗಳು ಬೇರೇನೂ ತಂದಿದ್ದಿರಲಿಲ್ಲ. ಪಕ್ಕದಲ್ಲೇ ಅಂಗಡಿಯಿದೆ-ತಂದುಕೊಂಡು ಏನಾದರೂ ಮಾಡ್ಲಿ, ಕಲೀಲಿ, ಸ್ವಲ್ಪ ಬುದ್ಧಿಬರ್ಲಿ ಅಂತಂದ್ಕೊಂಡು ನಾವಿಬ್ರು ಮತ್ತೆಲ್ಲಿಗೋ ಹೋಗಿದ್ವು. ಬರುವಾಗ ಸುಮಾರು ಮಧ್ಯಾಹ್ನ ೨ ಘಂಟೆ. ಹೊಟ್ಟೆ ಚುರ್ ಎನ್ನುವ ಹೊತ್ತು. ದಾರೀಲಿ ಸ್ನೇಹಿತರಿಬ್ಬರು ಸಿಕ್ಕಿದ್ರು. ಅವರನ್ನೂ ಕರ್ಕೊಂಡು ನಮ್ಮ ರೂಮಿನ ಕಡೆ ಸಾಗಿದ್ವು. ನಂಗಂತೂ ಮೊದ್ಲೇ ಅನುಮಾನ. ಅದ್ರಲ್ಲೂ ಸ್ನೇಹಿತರು ಬೇರೇ ಜೊತೆಗೆ! ಅಂತೂ ರೂಮಿಗೆ ತಲ್ಪಿದೆವಲ್ಲಾ ಪರದೆಯ ಈಕಡೆ ಸ್ವಾಗತ ಕೊಠಡಿ [ಡ್ರಾಯಿಂಗ್ ರೂಮ್ ಕಮ್ ಬೆಡ್ ರೂಮ್ ಕಮ್ ಹಾಲ್ ಕಮ್ ಡೈನಿಂಗ ಹಾಲ್ ಕಮ್ ಕಾಮನ್ ಹಾಲ್ ಕಮ್ ಸ್ಟಡೀ ರೂಮ್ ! ]ಯಲ್ಲಿ ಅದೂ ಇದೂ ಹರಟುತ್ತಾ ಕುಳಿತೆವು. ಅಷ್ಟರಲ್ಲಿ ಪರದೆಯ ಒಳಗೆ ಕಿಚನ್ ನಲ್ಲಿ ಅಡುಗೆ ಮುಗಿಸಿದ ಕೆ.ಆರ್.ಎಲ್ಲು ಡ್ರಾಯಿಂಗ್ ರೂಮಿಗೆ ಬಂದ. ಬಂದವನೇ ನಮ್ಮ ಸ್ನೇಹಿತರನ್ನು ನೋಡಿ ಕಿವಿಯವರೆಗೆ ಹಲ್ಲುಕಿರಿದ. ಬಂದ ಸ್ನೇಹಿತರಿಗೆ ಊಟಮಾಡಿಕೊಂಡು ಹೋಗಲು ನಾವು ಹೇಳುತ್ತಿರುವಾಗ ಮಧ್ಯೆ ಈತನೂ ಒತ್ತಾಯಿಸಿದ. ಆಗ ಬಂದವರಲ್ಲೊಬ್ಬ " ಏನಿವತ್ತು ವಿಶೇಷ ? " ಅಂದ.

" ಬನ್ನಿ ಬನ್ನಿ ಇವತ್ತು ನನ್ನದೇ ಕೈ ಅಡುಗೆ ಬಿಸಿಬಿಸಿಯಾಗಿ ಊಟಮಾಡೋಣ ಇಂದಿನ ವಿಶೇಷ : ಬದನೇಕಾಯಿ ಕೋಸಂಬರಿ ! "

ಆ ಕಡೆಯಿಂದ ಉತ್ತರಬರುತ್ತಿದ್ದಂತೇ ನನಗೆ ಟಯರ್ ಪಂಕ್ಚರ್ ಆದ ಅನುಭವ! ಅಯ್ಯೋ ದೇವ್ರೇ ಇದೆಂಥದಪ್ಪಾ ಹೊಸರುಚಿ ಎಂದು ನನ್ನ ಮುಖ ಚಿಕ್ಕದಾಗಿಹೋಯಿತು. ಸಮಯ ೨:೩೦. ಆಗ ಯಾವ ಅಂಗಡಿಯ ಬಾಗಿಲೂ ತೆರೆದಿರುವುದಿಲ್ಲ. ಹೊಸದಾಗಿ ಅಡುಗೆ ಹೇಗಾದರೂ ಮಾಡುವುದಾದರೂ ಕಮ್ಮೀ ಕಮ್ಮೀ ಅಂದ್ರೆ ಅರ್ಧಗಂಟೆ ಬೇಕು. ಏನ್ಮಾಡೋಣ ಹೇಳಿ ? ಮೊದ್ಲೇ ನಂಗಾವತ್ತು ಹೊಟ್ಟೆಯೊಳಗಿನ ಹುಳಾ ಎಲ್ಲಾ ಸತ್ತೋಗಿದ್ವು. ಯಾರಾದ್ರೂ ಪ್ರೀತಿಯಿಂದ ಏನಾದ್ರೂ ತಿನ್ನಲು ಕೊಟ್ರೆ ಸಾಕಪ್ಪಾ ಅನ್ನಸ್ತಿತ್ತು. ಆದ್ರೆ ಪರಿಸ್ಥಿತಿ ಹೀಗಿತ್ತು.

ನಮ್ ಕೆ.ಆರ್.ಎಲ್ಲು ನಾವು ಹೋದ ಸುಮಾರು ಹೊತ್ತಿನವರೆಗೆ ಸುಮ್ನೇ ಮಲಗಿತ್ತು. ಆಮೇಲೆ ಎದ್ದಿದ್ದೇ ಬದನೇಕಾಯಿ ಇರೋದನ್ನ ಕಂಡ್ತೋ ಇಲ್ವೋ ಅದೇ ಸಾಕು ಅಂದ್ಕಂಡು ಇದ್ದುದರಲ್ಲೇ ಅಡಿಗೆಯನ್ನು ಮಾಡಿದ್ದಾನೆ. ತಡಕಾಡಿದ್ದಾನೆ ಏನುಮಾಡಬೇಕೋ ತಿಳೀಲಿಲ್ಲ. ಹೇಗೂ ಬೇಸಿಗೆ ಬಿಸಿ ಅನ್ನಕ್ಕೆ ಕೋಸಂಬರಿ ಮಜ್ಜಿಗೆ ಸಾಕು ಅಂತ ಉದ್ದಿನಬೇಳೆ ನೆನೆಸಿಕೊಂಡು ಜೊತೆಗೇನಾದರೂ ಬೇಕಲ್ಲಾಂತ ಬದನೇಕಾಯಿಯನ್ನು ಸಣ್ಣಗೆ ತುರಿದು ಸ್ವಲ್ಪ ತೆಂಗಿನಕಾಯಿ ಹೆರೆದು ಎಲ್ಲವನ್ನೂ ಮಿಕ್ಸ್ ಮಾಡಿ ಅದ್ಭುತವಾದ ಒಗ್ಗರಣೆ ಕೊಟ್ಟಿದ್ದಾನೆ! ಶಿವಾ ಅಂತ ಸುಮ್ನಾಗಿಬಿಟ್ಟೆ. ಹೇಗೂ ಎಲ್ಲರೂ ಬ್ಯಾಚುಲರ್ಸೇ. ಗೋಳು ಗೊತ್ತೇ ಇದೆ. ಸುಧಾರ್ಸ್ಕೊಳ್ತಾರೆ ಅಂತ ಮತ್ತೇನೂ ಮಾಡುವ ಗೋಜಿಗೆ ಹೋಗಲಿಲ್ಲ. ಊರಲ್ಲಿ ಅಮ್ಮ ಕಟ್ಟಿಕೊಟ್ಟ ಉಪ್ಪಿನಕಾಯಿ ಇತ್ತಲ್ಲಾ ಅದನ್ನು ಪಕ್ಕಕ್ಕೇ ಇಟ್ಟುಕೊಂಡೆ. ಎಲ್ಲರೂ ಡನಿಂಗ್ ಹಾಲ್‍ನಲ್ಲಿ [!] ಊಟಕ್ಕೆ ಕುಳಿತೆವು. ಊಟಕ್ಕೆ ಬಡಿಸಿಕೊಂಡು ಉಣ್ಣತೊಡಗಿದಾಗ ಒಬ್ಬೊಬ್ಬರ ಮುಖದಲ್ಲೂ ಇನ್ನಿಲ್ಲದ ಆನಂದ! ಆಹಾಹಾ ದೇವಲೋಕದ ಬಾಣಸಿಗ ತಯಾರಿಸಿದ ದಿವ್ಯ ಅಡುಗೆ ! ಬಂದ ಸ್ನೇಹಿತರಿಗೆ ಯಾಕಾದರೂ ಊಟಕ್ಕೆ ನಿಂತೆವೋ ಅನ್ನಿಸದೇ ಇರಲಿಲ್ಲ ಬಿಡಿ.

ನಾನೇ ಮೌನ ಮುರಿದು " ಇವತ್ತು ನಮ್ಮ ಕೆ.ಆರ್.ಎಲ್ಲು ಅಡುಗೆ ಮಾಡಿದ್ದು, ಪಾಪ ಹೊಸ್ಬ, ಅಷ್ಟು ಸರೀ ಬರೋದಿಲ್ಲ, ಹಾಗೂ ಹೀಗೂ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ, ಬೇಕಾದರೆ ಉಪ್ಪಿನಕಾಯಿ ಎಣ್ಣೆ ಕಲಸ್ಕೊಳಿ " ಎಂದಿದ್ದೇ ತಡ ಬಂದ ಇಬ್ಬರೂ " ಹಾಂ.. ಹಾಂ ಉಪ್ಪಿನಕಾಯಿ ಇದ್ರೆ ಅದೇ ಪರವಾಗಿಲ್ಲ ಹಾಕು " ಎಂದು ಬರೇ ಉಪ್ಪಿನಕಾಯಿ ಮತ್ತು ಎಣ್ಣೆಯನ್ನು ಅನ್ನಕ್ಕೆ ಕಲಸಿಕೊಂಡು ಉಂಡರು. ಜೊತೆಗೆ ಕೆ.ಆರ್.ಎಲ್ಲೂ ಸೇರಿದಂತೇ ಎಲ್ಲರಿಗೂ ಉಪ್ಪಿನಕಾಯೇ ಗತಿಯಾಯ್ತು. ಎಲ್ಲರಿಗೂ ಊಟವಾದಮೇಲೆ ಬೋಗುಣಿಯಲ್ಲಿ ೯೦ ಪ್ರತಿಶತ ಬಾಕಿ ಉಳಿದಿದ್ದ ಬದನೇಕಾಯಿ ಕೋಸಂಬರಿ ನಮ್ಮನ್ನೇ ನೋಡಿ ಹಂಗಿಸುವಂತಿತ್ತು. ಉಂಡೆದ್ದ ಸ್ನೇಹಿತರು ಮತ್ತೊಮ್ಮೆ ಊಟಕ್ಕೆ ಬರುವಾಗ ಹತ್ತುಸಲ ಯೋಚಿಸಿ ಬರಬೇಕಾದ ಪ್ರಮೇಯ ಬಂತು!

ನಿಮ್ಗೂ ಬದನೇಕಾಯಿ ಕೋಸಂಬರಿ ಸಿಕ್ಕಿತಲ್ಲ, ರೆಸಿಪಿ ಬರ್ಕೊಳಿ --
ಹಸಿರು ಬದನೇಕಾಯಿ ೨
ಕಾಯಿ ತುರಿ -೧ ಕಪ್ಪು
ನೆನೆಸಿದ ಉದ್ದಿನಬೇಳೆ- ೧/೪ ಕೆ.ಜಿ
ಉಪ್ಪು --ರುಚಿಗೆ [ಅಧ್ವಾನಕ್ಕೆ] ತಕ್ಕಷ್ಟು
ಹಸಿಮೆಣಸಿನಕಾಯಿ- ೩
ಲಿಂಬೆಹಣ್ಣು - ೧
ಕೊತ್ತಂಬರಿ ಸೊಪ್ಪು - ಅರ್ಧ ಕಟ್ಟು
ಅಡುಗೆ ಎಣ್ಣೆ-- ೧ ಟೇಬಲ್ ಸ್ಪೂನ್
ಕರಿಬೇವಿನಸೊಪ್ಪು- ೨೩ ಎಲೆ.

-- ಮಾಡುವ ವಿಧಾನ
ಒಲೆಯೆಮೇಲೆ ಬಾಣಲೆ ಇಡಿ. ಒಲೆ ಉರಿಸಿ, ಬಾಣಲೆಗೆ ಎಣ್ಣೆಹಾಕಿ
ಕೊತ್ತಂಬ್ರಿಸೊಪ್ಪು ಕರಿಬೇವಿನಸೊಪ್ಪು ಸಾಸಿವೆ, ಜೀರಿಗೆ, ಹಸಿಮೆಣ್ಸು ಇತ್ಯಾದಿ ಎಲ್ಲವನ್ನೂ ಹಾಕಿ ಗರಗರ ತಿರುಗಿಸಿ.
ಸಾಸಿವೆ ಚಟ ಚಟ ಅಂದ ತಕ್ಷಣವೇ ನೆನೆದ ಉದ್ದಿನಬೇಳೆಯನ್ನೂ ತುರಿದ ಬದನೇಕಾಯನ್ನೂ ಹಾಕಿ ಚೆನ್ನಾಗಿ ಕಲಸಿ. ಮೇಲಿಂದ ಕಾಯಿತುರಿ ಹಾಕಿ ರಪರಪನೇ ಮತ್ತೊಮ್ಮೆ ತಿರುಗಿಸಿ. ಖುಷಿಕಂಡಷ್ಟು ಉಪ್ಪು ಸುರಿದು ಮತ್ತೊಮ್ಮೆ ಸೌಟಿನಿಂದ ತಿರುಗಿಸಿ. ಒಲೆ ಆರಿಸಿ, ಮೆಲ್ಲಗೆ ಇಳಿಸಿ ಸ್ವಲ್ಪ ಹೊತ್ತು ಹಾಗೇ ಬಿಡಿ. ಲಿಂಬೇಹಣ್ಣನ್ನು ಪೂರ್ತಿ ರಸ ಹೊರಬರುವವರೆಗೂ ಹಿಂಡಿ ಇನ್ನೊಮ್ಮೆ ಸೌಟಾಡಿಸಿ. ಆಮೇಲೆ ನಿಮಗೆ ಬೇಕಾದ ಆಕಾರದ ಪಾತ್ರೆಗೆ ಸುರುವಿಕೊಳ್ಳಿ. ಈಗ ನೀವು ಕಾಯುತ್ತಿರುವ ’ ಬದನೇಕಾಯಿ ಕೋಸಂಬರಿ ’ ರೆಡಿ.

ಇದು ತುಂಬಾ ಆರೋಗ್ಯಕರವಾದ ಉತ್ತಮ ಆಹಾರವಾಗಿದ್ದು ಆಯುರ್ವೇದ ಪಂಡಿತರೂ ಕಲಿತುಕೊಳ್ಳಬೇಕಾದ ಪದ್ಧತಿಯಿರುತ್ತದೆ! ನಿಮ್ಮೆಲ್ಲಾ ಸ್ನೇಹಿತರಿಗೆ ಬಂಧು-ಬಳಗಕ್ಕೆ ಇದನ್ನು ಮಾಡಿಕೊಳ್ಳಲು ಇಂದೇ ಕಲಿಸಿ. ಮಾಡಲು ಜಾಸ್ತಿ ಸಾಮಾನೂ ಬೇಡ, ಸಮಯವೂ ಬೇಕಾಗಿಲ್ಲ. ಬೇಳೆ ನೆನೆಯುವುದೊಂದೇ ತಡ; ನಿಮ್ ಬೇಳೆ ಬೆಂದಹಾಗೇ! ಬೆವರಿಳಿಸುವ ಬಿರುಬೇಸಿಗೆಯಲ್ಲಿ ಮಕ್ಕಳಾದಿಯಾಗಿ ಮನೆಮಂದಿಯೆಲ್ಲಾ ತಂಪಾಗಿ ಕುಳಿತು ತಿನ್ನುವ ಅತ್ಯುತ್ತಮ ಹೊಸರುಚಿ ’ಬದನೇಕಾಯಿ ಕೋಸಂಬರಿ’. ಇನ್ಯಾರೋ ಓದಿ ಎಸ್ಸೆಮ್ಮೆಸ್ ಮಾಡುವ ಮೊದಲು ನೀವೇ ಅವರಿಗೆ ಎಸ್ಸೆಮ್ಮೆಸ್ ಕಳಿಸಿಬಿಡಿ. ಮತ್ತೆ ಮುಂದಿನ ಕಂತಿನಲ್ಲಿ ಮತ್ತಷ್ಟು ಹೊಸ ಹೊಸ ರೆಸಿಪಿಗಳನ್ನು ನಿಮಗಾಗಿ ಹೊತ್ತು ಬರಲಿದ್ದೇವೆ -- ಓ ಸಾರಿ ಟಿವಿಯಲ್ಲಿ ಕೇಳಿದ ನೆನಪು, ಹೀಗೇ ಎಲ್ಲಾದರೂ ಸಿಕ್ಕಿ, ಬದನೇಕಾಯಿ ಕೋಸಂಬರಿ ಮಾಡಿ ತಿನ್ನೋಣ! ಬಾ ಬಾಯ್.