ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, August 31, 2010

ಶ್ರಾವಣ ಭಾನುವಾರ!!


ಶ್ರಾವಣ ಭಾನುವಾರ!!

[ನವ್ಯ-ಕಾವ್ಯ ೫೦ : ೫೦ ]
ಬಹುತೇಕರು ಅಂದಿಕೊಂಡಿರುವುದು ಇಂದಿನ ನವ್ಯಕಾವ್ಯವನ್ನು ಕವನ ರೂಪದಲ್ಲಿ ಬರೆಯಲು ಸಾಧ್ಯವಿಲ್ಲ ಎಂದು. ಆದರೆ ಸಮಯೋಕ್ತ ಶಬ್ದ ಲಾಲಿತ್ಯದಿಂದ ಹದಹಿಡಿದು ಬರೆದಾಗ ನವ್ಯವೂ ಕೂಡ ಮಜಕೊಡುವ ಕಾವ್ಯವಾಗುತ್ತದೆ ಎಂಬುದನ್ನು ತೋರಿಸಲು, ತಮ್ಮೆಲ್ಲರ ಮುಂದೆ ಇಡಲು ಉದ್ಯುಕ್ತನಾಗಿದ್ದೇನೆ. ನಿಮ್ಮ ಯಾವುದೇ ಭಾವಗಳಿರಲಿ ಅವುಗಳನ್ನು ಕವನವಾಗಿಸಬಹುದು! ಅಂತಹ ಕವನಗಳು ಕೆಲವೊಮ್ಮೆ ಪ್ರಾಕಾರಗಳಲ್ಲಿ ಬದಲೆನಿಸಿದರೂ ರಾಗದೊಂದಿಗೆ ಎಲ್ಲರನ್ನೂ ರಂಜಿಸಲು ಅಣಿಯಾಗುತ್ತವೆ. ಹಾಡಲಾಗದ ಕವಿತೆಗಿಂತ ಹಾಡಿಕೊಂಡು ಗುನುಗುನಿಸಬಹುದಾದ ಕವನ ಬರೆದರೆ ಬಹಳ ಜನರನ್ನು ಇಂದಿಗೂ ಅದು ತಲ್ಪುತ್ತದೆ ಎಂಬುದು ನನ್ನ ಅನಿಸಿಕೆ. ಅನೇಕ ಸಿನಿಮಾ ಹಾಡುಗಳಲ್ಲಿ ಸತ್ವರಹಿತವಾಗಿದ್ದನ್ನೂ ಹಲವೊಮ್ಮೆ ಕೇವಲ ರಾಗದಿಂದ ಮತ್ತು ಜೊತೆ ಸಂಗೀತದಿಂದ ನಾವು ಇಷ್ಟಪಟ್ಟು ಆಗಾಗ ಗುನುಗುನಿಸುತ್ತೇವಲ್ಲ ? ಅದೇ ರೀತಿಯಲ್ಲಿ ಸತ್ವಯುತವಾದ ಹೂರಣವನ್ನು ಶಬ್ದಗಳ ಕಣಕದಲ್ಲಿ ತುಂಬಿದಾಗ ಹದನಾದ ಹಾಗೂ ರುಚಿಯಾದ ಹೋಳಿಗೆ ಹೊರಬರಬಹುದಲ್ಲ! ಈ ದಿಸೆಯಲ್ಲಿ ಒಂದಡಿ ಮುಂದಿಟ್ಟು ನಿಮಗೆ ಕೊಡುತ್ತಿರುವ ಡಯಾ-ಹೋಳಿಗೆ [ಸ್ವೀಟು ಕಮ್ಮಿ]ಇದು ಎಂದುಕೊಂಡರೆ ತಪ್ಪೇ ? ತಿಂದು ನೋಡಿ, ಜೀರ್ಣವೋ-ಅಜೀರ್ಣವೋ, ವಾಂತಿಯೋ-ಭೇದಿಯೋ, ಕೆಮ್ಮೋ-ದಮ್ಮೋ ಅಂತೂ ನಿಮ್ಮ ಅಭಿಪ್ರಾಯವನ್ನು ಕೀಬೋರ್ಡ್ ಜಜ್ಜಿ ಗುಜರಾಯಿಸಲು ನೇರ ದಾರಿಯಿದೆ, ನಿಮಗಿದೋ ರತ್ನಗಂಬಳಿ ಮನಸಾ ಹಾಸಿದ್ದೇನೆ--ಹೀಗೆ ದಯಮಾಡಿಸಿ >>


ನವ್ಯ

ಮೂರುಮುಕ್ಕಾಲು ಗಂಟೆ ತಿಣುಕಿ ತಿಣುಕಿ
ಬರೆದಿದ್ದು ಮೂರೇಸಾಲು
ಸಾಕು ನಮ್ಮಂಥವರ ಹಣೆಬರಹವೇ
ಹೀಗೆಂದು ಬಗೆವಾಗ
ನೆರೆಮನೆಯ ನಾಯಿ ಬಾಯಿಗೆಬೀಗವೇ ಇರಲಿಲ್ಲ
ಬೇಕಾದ ಹಾಗೆ ಬೊಗಳುತ್ತಿತ್ತು
ರೇಡಿಯೋದಲ್ಲಿ ಅಶ್ವಥ್ ಹಾಡು ಶ್ರಾವಣ ಬಂತು ನಾಡಿಗೆ
ಕೆಳಗಿನ ಮನೆಯಲ್ಲಿ ಹುರಿದ ಮೀನಿನ ಕಮಟು ವಾಸ್ನೆ
ಅಷ್ಟರಲ್ಲೇ ಮೊಬೈಲಿಗೆ ಕಾಲು
ಬಾಗಿಲ ಬೆಲ್ಲು ರಿಂಗಣಿಸಿದ ಸದ್ದು
ಅಮ್ಮಾ ಹೂವು ಎಂಬಾಕೆಯ ಕೂಗನ್ನಾಲಿಸುತ್ತ ಹೊರನಡೆದರೆ
ಮೇಲಿನ ಮನೆಯ ಕಪ್ಪು ಬೆಕ್ಕು ದುರುಗುಟ್ಟಿ ಕಂಗಾಲಾಗಿ ನೋಡಿ
ಮಿಯಾಂವ್ ಎನ್ನುತ್ತ ಹೊರಟೇ ಹೋಯಿತು

೯ ಮೊಳದ ಧೋತಿ ಉಟ್ಟ ಸುಬ್ಬಾ ಭಟ್ಟರು
ಧಾರೆಪೂಜೆಗೆ ಬನ್ನಿ ಅಂದಿದ್ದಕ್ಕೆ ಮಡಿಯಾಗಿ ಬಂದಿದ್ದರು
ರಾತ್ರಿಯಿಂದ ಯಾಕೋ ತಲೆನೋವು ಪೂಜೆಬೇಡವೆಂದು
ಅಟ್ಟಿಬಿಡಲೇ ಎಂದುಕೊಳ್ಳುವಾಗ
ನೀರು ಬಿಸಿ ಇದೆ ನೀವು ಹೋಗಿ ಎಂದ ಮಡದಿಯ ಮಾತಿಗೆ
ಎದುರಾಡದ ಪ್ರಾಮಾಣಿಕ ನಾನು!
ರಸ್ತೆಯಲ್ಲಿ ಯಾವುದೋ ಕಾರು ಬುರ್ರನೆ ಬಂದು ನಿಂತ ಶಬ್ದ
ಬಹಳದಿನವಾಯಿತು ಇಲ್ಲೇ ಬಂದಿದ್ದೆವು
ನಿಮ್ಮನ್ನೊಮ್ಮೆ ನೋಡಿಹೋಗೋಣ ಎಂದು ಬಂದೆವು ಎಂದವರ
ಮುಖನೋಡುತ್ತ ನಾವು ಕಕ್ಕಾವಿಕ್ಕಿ
ಕೂರಿಸಿ ಹೊರ ಬಾಗಿಲು ಹಾಕಿಬರಲು ಹೋದರೆ
ಸಾಬ್ ಎನ್ನುತ್ತ ದೀನಸ್ವರ ಹೊರಡಿಸುವ ಗೂರ್ಖ ನಿಂತಿದ್ದ
ಅದೇ ಕ್ಷಣ ಪೇಪರಿನವ ಹಾಲಿನವ ಎಲ್ಲಾ ಬಂದರು
ಎಲ್ಲರಿಗೂ ಬೇಕು ಕಾಸು ಯಾರಿಗೆ ಬೇಡ ಎಂದುಕೊಳ್ಳುವಷ್ಟರಲ್ಲೇ
ಬಕ್ಷೀಸು ಕೇಳಲು ಕಾರ್ಪೋರೇಷನ್ ಕಸಗುಡಿಸುವವ ಬಂದಿದ್ದ
ಎಲ್ಲರಿಗೂ ದುಡ್ಡುಕೊಟ್ಟು ಕಳುಹಿಸಿದ ಮೇಲೆ ಪೂಜೆಗೆ ಮನಸ್ಸಿರಲಿಲ್ಲ!
ಶ್ರಾವಣದ ಪೂಜೆಗೆ ಅಂತೂ ಮುಹೂರ್ತ ಮಾತ್ರ ಕೂಡಿ ಬಂದಿತ್ತು.

ಅರ್ಧಘಂಟೆಯೂ ಆಗಿರಲಿಲ್ಲ
ಭಟ್ಟರ ಮೊಬೈಲಿಗೆ ಕಾಲು
ಮಂತ್ರದ ಮಧ್ಯೆಯೇ ಅಲ್ಲೇಲ್ಲೋ ಯಾರಿಗೋ
ಅರ್ಜೆಂಟು ಸತ್ಯನಾರಯಣ ಪೂಜೆ ಮಾಡಿಸುವ ತಲುಬು
ಮಂಗಳಾರತಿಗೂ ಮುನ್ನ ಮತ್ತೆ ಬಾಗಿಲ ಬೆಲ್ಲು
ಅಮ್ಮಾ ನಾವು ಯುರೇಕಾ ಫೋರ್ಬ್ಸ್ ನಿಂದ ಬಂದಿರೋದು
ಥೂ ಇವನ ಪೂಜೆಗೂ ಬಿಡುವುದಿಲ್ಲ ಎಂದೆನಿಸುವಷ್ಟರಲ್ಲೇ
ಎಲ್.ಐ.ಸಿ ಏಜೆಂಟ್ ಗೋವಿಂದ ಬಂದಿದ್ದ
ಇವತ್ತು ಬಹಳ ಬ್ಯೂಸಿ ಮತ್ತೆ ನೋಡೋಣವೆಂದು
ಪ್ರಸಾದಕ್ಕೆ ಕೂತುಕೊಳ್ಳಲು ಹೇಳಿದೆ
ಸ್ವಾಮೀ ಶನಿಮಹಾತ್ಮನ ದೇವಸ್ಥಾನದಲ್ಲಿ
ಅನ್ನದಾನ ಇಟ್ಟ್ಕೊಂಡಿದೀವಿ ತಮ್ಮಿಂದಾದ ದೇಣಿಗೆ ಕೊಡಿ
ಎನ್ನುತ್ತ ಎರಡೂ ಕಿವಿಗಳ ಮೇಲೆ ತುಳಸಿ ಸಿಂಬೆಗಳನ್ನು
ಇಟ್ಟುಕೊಂಡಿದ್ದ ಕಪ್ಪು ಜನ ಬಂದಿದ್ದರು
ಇನ್ನೇನು ಅವರನ್ನೂ ಹತ್ತು ರೂಪಾಯಿ ಕೊಟ್ಟು ಸಾಗಹಾಕಿದಾಗ
ಅನಾಥಾಶ್ರಮದ ಗಾಡಿ ಬಂತು
ಹಳೆಯ ಬಟ್ಟೆ ದೇಣಿಗೆ ವಗೈರೆ ಏನೆಲ್ಲಾ ಕೊಡಲು ಸಾಧ್ಯ ಕೊಡಿ
ಎಲ್ಲರನ್ನೂ ಸಂಭಾಳಿಸಿ ಕಳಿಸುವಾಗ ಸುಸ್ತೋ ಸುಸ್ತು
ಮತ್ತೆ ಎಫ್
. ಎಮ್ ರೈನ್ಬೋದಲ್ಲಿ ಹಾಡು ಬರುತ್ತಿತ್ತು
ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೇ....ಓ ಬಂತು ಶ್ರಾವಣ!

-------------

ಕಾವ್ಯ

ಶ್ರಾವಣದಿ ಒಂದು ಭಾನುವಾರದಲಿ ಪೂಜೆಯನು
ನಾವೆಣಿಸಿದಂತೆ ನಡೆಸಲು ಇಷ್ಟಪಟ್ಟು
ಆವರಣ ಗುಡಿಸಿ ಮನೆಯೆಲ್ಲವನು ಶುಚಿಗೊಳಿಸಿ
ಕಾರಣವ ಹೇಳಿ ಬಾಕಿ ಕೆಲಸಗಳ ನಿಲಿಸಿ

ಹೊತ್ತಾರೆ ಎದ್ದು ಕಾವ್ಯವ ಬರೆಯೆ ತಿಣುತಿಣುಕಿ
ಮತ್ತೆ ಮೂರೇ ಸಾಲು ಬರೆದು ಮುಗಿಸಿ
ನೆತ್ತಿಯಲಿ ಬರೆದಿರುವುದೇ ಇಷ್ಟು ಇರುವಾಗ
ಒತ್ತಿ ಮನವನು ಬರೆಯಲೇನದುಪಯೋಗ ?

ನೆರೆಮನೆಯ ನಾಯಿ ಬಾಯಿಗೆ ಬೀಗವೇ ಇಲ್ಲ
ಹೊರಮನೆಯ ರೇಡಿಯೋದಲಿ ಅಶ್ವತ್ಥ್ ಹಾಡು
ಇರುವ ಹಲವನು ಮರೆಸಿ ಬಂತು ಶ್ರಾವಣವೆಂಬ
ವರಕವಿಯ ಕಾವ್ಯವದು ಸಡಿಲಿಸಿತು ಮೂಡು!

ಕೆಳಮನೆಯ ಕಡೆಯಿಂದ ಕರಿದ ಮೀನಿನ ಕಮಟು
ಕಳವಳಿಸಿ ಕೇಳುವಿರೆ ನಮ್ಮ ಗೋಳುಗಳ ?
ಒಳಗೆ ಜಂಗಮವಾಣಿ ಮೊಳಗಿರಲು ಅಬ್ಬರದಿ
ಬೆಳಗಿನಲೇ ಹೊರ ಗಂಟೆಯುಲಿತ ಕೇಳಿದೆವು !

ಹೂವಮಾರುವ ಹುಡುಗಿ " ಆಮ್ಮಾ ಹೂವು" ಎನಲು
ಭಾವ ಭಯದಲಿ ಕಪ್ಪನೆ ಬೆಕ್ಕು ಹೆದರಿ
ಆವ ಗಂಡಾಂತರವೋ ಎಂದು ಮಿಯಾಂವ್ ಎನುತ
ಕಾವೇರಿ ತಲೆಗೆ ಓಡಿತ್ತು ಮೇಲ್ಮನೆಗೆ !

ಒಂಬತ್ತು ಮೊಳದ ಧೋತಿಯನುಟ್ಟ ಸುಬ್ಭಟ್ಟರ್
ಒಂಬತ್ತಕೂ ಮುನ್ನ ಮಡಿಯಾಗಿ ಬಂದ್ರು
ತುಂಬಿತ್ತು ಗೊಂದಲವು ತಲೆನೋವು ಮೈಭಾರ
ಎಂಬಕಾರಣ ಹೇಳಿ ಅಟ್ಟಿಬಿಡಲೇನು ?

ನೀರುಬಿಸಿ ಇದೆಯೆಂದಾಗ ಮಡದಿಯೆಡೆಗೋಗೊಟ್ಟೆ
ನಾರಿಮಣಿಯವಳಿಗೆದುರಾಡುವವನಲ್ಲ
ದಾರಿಯಲಿ ಕಾರೊಂದು ಬುರ್ರೆನಿಸಿ ನಿಂತಿತ್ತು
ಆರು ಬಂದಿರಬಹುದು ಈ ನಮ್ಮ ಮನೆಗೆ ?

ಬಹಳದಿನವಾಯಿತೆನ್ನುತ ನೋಡಬಂದವರ
ಗಹನವಾದರ್ಥದಲಿ ನೋಡಿ ಕುಳ್ಳಿರಿಸಿ
ಬಹರಿಲ್ಲ ಇನ್ಯಾರು ಎನುತ ಬಾಗಿಲ ಹಾಕೆ
ಬಹು ದೀನ ಸ್ವರದಲ್ಲಿ " ಸಾಬ್ " ಎಂದ ಗೂರ್ಖ !

ಹಾಲಿನವ ಬಂದ ದಿನಪತ್ರಿಕೆವಯನೂ ಬಂದ
ಕಾಲವಿದು ಕಾಸು ಯಾರಿಗೆ ಬೇಡ ಹೇಳಿ ?
ಬಾಲವಾಡಿಪ ನಾಯಿಯತೆರದಿ ಆ ಕಸದವನು
ಕಾಲೂರೆ ಬಕ್ಷೀಸು ಕೊಟ್ಟುಮುಗಿಸಿದೆನು

ಮನಕೆ ನೆಮ್ಮದಿಯಿಲ್ಲ ಪೂಜೆಗೆ ಮನಸಿಲ್ಲ
ಘನ ಶ್ರಾವಣದ ಕಾಲ ಮೂರ್ತ ಬಂದಿಹುದು
ಗುನುಗುನಿಸಿ ಮಂತ್ರಪಠಿಸುತಲಿದ್ದ ಭಟ್ಟರಿಗೆ
ಪುನರಪೀ ಜಂಗಮದ ವಾಣಿಗಳು ಮೊಳಗೆ !

"ಬನ್ನಿ ಭಟ್ಟರೆ ತಾವು ಸತ್ಯನಾರಾಯಣನ
ತನ್ನಿ ಮನೆಗೈತಂದು ಪೂಜೆ ತ್ವರಿತದಲಿ " !
ಮನ್ನಿಸುನೀ ಹೇ ಪ್ರಭುವೆ ಮಂಗಳಾರತಿಗೈವೆ
ಮುನ್ನ ಬಾಗಿಲ ಗಂಟೆ ಮತ್ತೆ ರಿಂಗಣಿಸೆ !

" ಅಮ್ಮಾ " ಎನುತಲಿದ್ದ ಯುರೇಕಾ ಫೋರ್ಬ್ಸಿನವ
"ಸುಮ್ಮನೇ ಹೋಗಯ್ಯ" ಎನುತಿರುವ ವೇಳೆ
ಚಿಮ್ಮಿ ಬಂದಾ ನಮ್ಮ ಎಲ್.ಐ.ಸಿ.ಗೋವಿಂದ
ಒಮ್ಮೆ ಕೂತಿರು ಪ್ರಸಾದಕೆ ಬ್ಯೂಸಿಯೆಂದೆ

ಎರಡೂ ಕಿವಿಗಳ ಮೇಲೆ ತುಳಸಿ ಸಿಂಬೆಯನಿಟ್ಟ
ಕರಡು ಪುಸ್ತಕ ಹಿಡಿದ ಕಪ್ಪು ಜನ ಬರಲು
ದೊರೆಸಾನಿ ಕೇಳಿರಲು ಬಂದವರ ಅಹವಾಲು
" ವರಶನೈಶ್ಚರನ ಸನ್ನಿಧಿಗೆ ದೇಣಿಗೆಯ " !

ಕೊಟ್ಟು ಹತ್ತು ರೂಪಾಯಿ ಭಕ್ತಿಯಲಿ ಕೈಮುಗಿದು
ಒಟ್ಟಿನಲಿ ಸಾಗಹಾಕಲು ಬೇಗನವರ
ಬಟ್ಟೆ-ಹಳೆಯದು ಮತ್ತು ದೇಣಿಗೆಯ ಪ್ರಾರ್ಥಿಸುತ
ಕಟ್ಟಕಡೆಯಲಿ ಕಂಡರನಾಥಾಶ್ರಮದವರು

ಎಲ್ಲರನೂ ತಕ್ಕಂತೆ ಉಪಚರಿಸಿ ಕಳಿಸುತ್ತ
ಒಲ್ಲೆನೆನ್ನುವ ಮನದಿ ಹರಿಯ ಧ್ಯಾನಿಸುತ
ಘಲ್ಲೆನುವ ಹಾಡಿನಾ ಹರಹು ಎಫ್.ಎಮ್. ರೈನ್ಬೋದಲಿ
ಅಲ್ಲಿ ಬಂದಿತು ಮತ್ತೆ "ಶ್ರಾವಣ..ಬಂತು " !