ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, March 23, 2013

ಬರೆಯುವ ಮನಕ್ಕೆ ನೂರೆಂಟು ಕನಸುಗಳು

ಚಿತ್ರಗಳ ಕೃಪೆ : ಅಂತರ್ಜಾಲ 
 ಬರೆಯುವ ಮನಕ್ಕೆ ನೂರೆಂಟು ಕನಸುಗಳು

ವಾರದ ಆರಂಭದಲ್ಲಿ ನಿಮಗೆ ತಿಳಿಸಿದ್ದೆ. ಇಬ್ಬರು ವ್ಯಕ್ತಿಗಳ ಬಗ್ಗೆ ಬರೆಯುತ್ತೇನೆ ಎಂದು. ಆ ಇಬ್ಬರಿಗಿಂತಾ ಮೊದಲು ಒಬ್ಬರನ್ನು ನೆನೆದುಕೊಳ್ಳುತ್ತೇನೆ. ಅವರೇ ಶೃಂಗೇರಿ-ಶಿವಗಂಗಾ ಪೀಠದ ೧೮ನೆಯ ಗುರುಗಳಾಗಿದ್ದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿಗಳು. ತೋರಿಸಿಕೊಳ್ಳುವುದಕ್ಕೆ ಬಯಸದ, ಯಾವುದೇ ಆಡಂಬರವನ್ನೂ ರೂಢಿಸಿಕೊಳ್ಳದ ಕೆಲವೇ ಸನ್ಯಾಸಿಗಳಲ್ಲಿ ಅವರೂ ಒಬ್ಬರು. ಬೆಂಗಳೂರಿನಲ್ಲೇ ಹುಟ್ಟಿ, ಇಲ್ಲಿಯೇ ಆಡಿ-ಓದಿ ಬೆಳೆದು, ಸಂಸಾರದ ಬದುಕನ್ನು ಮರೆತ ಸೀತಾರಾಮ ಶರ್ಮ, ಸಂನ್ಯಾಸದೀಕ್ಷೆಯನ್ನು ಪಡೆದು ಶಿವಗಂಗೆಯ ಪೀಠಾಧಿಪತಿಯಾಗಿ, ಸಾತ್ವಿಕ ತಪಸ್ಸಿನ ಮೂಲಕ, ನಿರಾಡಂಬರದ ಸಂನ್ಯಾಸ ಜೀವನದ ಮೂಲಕ ಹಲ್ವು ಸಂನ್ಯಾಸಿಗಳಿಗೆ ಮಾದರಿಯೆನಿಸಿದ್ದಾರೆ.

ವೈಚಾರಿಕತೆಯ ಹಿನ್ನೆಲೆಯಲ್ಲಿ, ಇಂದು ಮಠಾಧಿಪತಿಗಳಲ್ಲಿ ಹಲವು ವೈರುಧ್ಯಗಳನ್ನೂ ವೈಮನಸ್ಯಗಳನ್ನೂ ಕಾಣುತ್ತೇವೆ; ಸರ್ವಸಂಗ ಪರಿತ್ಯಾಗಿಗಳಿಗೇ ಸರ್ವರ ಸಂಗವೂ ಬೇಕಾಗುವುದೂ, ರಾಜಕೀಯದ ನಂಟು ಬೆಳೆಯುವುದೂ ಕಾಣುತ್ತದೆ ಮಾತ್ರವಲ್ಲ, ತಾನೇ ಮೇಲು ತಾನೇ ಮೇಲು ಎಂಬ ಮೇಲಾಟದ ಅಟಾಟೋಪದ ತೆವಲು ಕುದುರಿಕೊಂಡು, ಮಠ-ಮಠಗಳ ನಡುವೆಯೇ ದ್ವೇಷಾಸೂಯೆಗಳು ಬೆಳೆದುಬಿಡುತ್ತವೆ. ನಾನು ಹಲವು ಬಾರಿ ಯೋಚಿಸಿದ್ದೇನೆ: ಶ್ರೀ ಆದಿಶಂಕರರು ಯಾಕೆ ಮಠಗಳನ್ನು ಸ್ಥಾಪಿಸಿದರು? ಸಂನ್ಯಾಸಿಗಳಿಗೆ ಮಠವೆಂಬ ಐಹಿಕಸಂಸ್ಥೆಯ ವ್ಯವಸ್ಥೆಯ ಅಗತ್ಯತೆ ಇತ್ತೇ? -ಎಂದು. ಶಂಕರರ ಕಾಲಕ್ಕೂ ಮುನ್ನ ಮಠಗಳ ಪರಿಕಲ್ಪನೆ ಇದ್ದಿರಲಿಲ್ಲ. ಸ್ವತಃ ಶ್ರೀಶಂಕರರೂ ಒಂದೇ ಮಠಕ್ಕೆ, ಒಂದೇ ಪ್ರದೇಶಕ್ಕೆ, ಒಂದೇ ವರ್ಗಕ್ಕೆ ಆತುಕೊಂಡು ಕೂತುಕೊಂಡಿರಲಿಲ್ಲ; ಶಂಕರರ ಜೀವನದ ಉತ್ಕರ್ಷದ ದಿನಗಳಲ್ಲಿ ಅವರು ದೇಶವನ್ನು ಕಾಲ್ನಡಿಗೆಯಿಂದಲೇ ಸುತ್ತಿದರು; ಆಹಾರಕ್ಕಾಗಿ ಮನೆಗಳ ಮುಂದೆ ಮಧುಕರಿ ನಡೆಸಿದರು! ಶಂಕರರ ಬದುಕು ’ಕರತಲ ಭಿಕ್ಷ ತರುತಲ ವಾಸ’ ಎಂಬಷ್ಟು ಸಂನ್ಯಾಸ ಜೀವನ ಸಹಜವಾದದ್ದಾಗಿತ್ತು. ಯೋಗಸಂನ್ಯಾಸಿಯೊಬ್ಬ ನಡೆಸಬೇಕಾದ ಜೀವನ ವಿಧಾನವನ್ನು ಅವರು ನಡೆಸಿದರೂ, ಲೋಕಹಿತವನ್ನು ಬಯಸಿ, ಅಳಿದುಹೋಗುತ್ತಿದ್ದ ಸನಾತನ ಧರ್ಮದ ಪುನರುಜ್ಜೀವನ ಬಯಸಿ ತನ್ನನ್ನು ಆ ಕೆಲಸದಲ್ಲಿ ತೊಡಗಿಸಿಕೊಂಡವರು. ಅವರ ಜೀವನಕಥೆಯ ಆಳಕ್ಕೆ ಇಳಿದಾಗ ಹಲವು ಸರ್ತಿ ನಮಗೆ ಕಣ್ಣೀರು ತಂತಾನೇ ಹರಿದರೆ ಅದಕ್ಕೆ ಕಾರಣವಿಷ್ಟೇ: ಶಂಕರರು ಎಂದೂ ಆಡಂಬರದ ಜೀವನ ನಡೆಸಲೇ ಇಲ್ಲ!! ಸರ್ವರ ಜೊತೆಗಿದ್ದೂ ಸರ್ವಸಂಗವನ್ನು ಪರಿತ್ಯಜಿಸಿದ ನಿಜವಾದ ಸಂನ್ಯಾಸಿ ಅವರಾಗಿದ್ದರು; ಇಂದು ಆ ಉದ್ದೇಶ ಕಾಣುವುದು ಅಪರೂಪ. ಶಂಕರರ ಹೆಸರಿನಲ್ಲಿ ಮಠಗಳು ನಡೆಯುತ್ತವೆ ಎಂದಾಗ ಶಂಕರರ ದಿವ್ಯ ಶಕೆಯ ಅನುಭವ ನಮಗಾಗುತ್ತದೆ. ಜೀವನಧರ್ಮವನ್ನು ಬೋಧಿಸುವ ಧರ್ಮಾಚಾರ್ಯರುಗಳಿಗೆ, ಅದಕ್ಕೆ ಸಂಬಂಧಿಸಿದ ಪರಿಕರಗಳನ್ನೆಲ್ಲಾ ಇಟ್ಟುಕೊಂಡು ಅದನ್ನು ಕಾಪಾಡಿಲಿಕ್ಕೆ ಮತ್ತು ಆಚರಿಸಲಿಕ್ಕೆ ಎಂಬರ್ಥದಲ್ಲಿ ಮಠಗಳನ್ನು ಶಂಕರರು ಸ್ಥಾಪಿಸಿದರು.

ಶಂಕರರ ನಂತರ ಬಂದ ಶಾಂಕರ ಪೀಠಗಳವರಿಗೂ ಮತ್ತು ಕವಲೊಡೆದು ತಮ್ಮದೇ ಸರಿಯೆನಿಸಿಕೊಂಡ ಮಿಕ್ಕೆರಡು ಪಂಥಗಳ ಮಠಾಧಿಪತಿಗಳಿಗೂ ಅಲ್ಲದೇ ಇನ್ನುಳಿದ ಪಂಥಗಳ ಮಠಾಧಿಪತಿಗಳಿಗೂ ತಿರುಗಾಡಲು ಮೂರ್ನಾಲ್ಕು ಐಶಾರಾಮೀ ಕಾರುಗಳು ಬೇಕು, ಸ್ವಾಮಿಗಳು ಸೆಲ್ಲಿನಲ್ಲಿ ಮಾತನಾಡುವ ತನ್ನ ಆಪ್ತವಲಯದ ಅಗತ್ಯತೆಗೆಂದು ಸೆಲ್ ಫೋನು ಇರಿಸಿಕೊಳ್ಳುತ್ತಾರೆ, ಇಲೆಕ್ಟ್ರಾನಿಕ್ ಗ್ಯಾಜೆಟ್ ಗಳಲ್ಲಿ ಲೀಲಾಜಾಲವಾಗಿ ವ್ಯವಹರಿಸುತ್ತಾರೆ, ಮಾಧ್ಯಮಗಳಲ್ಲಿ ವಿಜೃಂಭಿಸುತ್ತಾರೆ. ಮಠಗಳ ಕಟ್ಟಡಗಳು ಬಲುಸೊಗಸು-ಶ್ರೀಮಂತರ ಬಂಗಲೆಗಳಿಗಿಂತಾ ಚೆನ್ನಾಗಿ ಕಾಣಿಸುತ್ತವೆ. ಮಠ-ಮಾನ್ಯಗಳಲ್ಲಿ ಕಾರುಗಳಲ್ಲಿ ಏಸಿಸೌಲಭ್ಯ ಬೇಕಾಗುತ್ತದೆ! ಸುತ್ತಲೂ ಮೆಹರ್ಬಾನು ಮಾಡುವ ಕೆಟ್ಟ ಯುವಕರು ಜಗತ್ತಿನ ಎಲ್ಲಾ ಚಟಗಳನ್ನೂ ಅಂಟಿಸಿಕೊಂಡು ದುಡ್ಡುಮಾಡಿಕೊಳ್ಳುವ ಅಡ್ಡೆಯಾಗಿ ಮಠಗಳನ್ನು ಅವಲಂಬಿಸಿಕೊಳ್ಳುತ್ತಾರೆ; ಆಳರಸರ ಸುತ್ತ ಇರುವ ಆಪ್ತ ಕಾರ್ಯದರ್ಶಿಗಳನ್ನಾದರೂ ಮಾತನಾಡಿಸಬಹುದು, ಆದರೆ ಮಠಗಳ ಸ್ವಾಮಿಗಳ ಸುತ್ತ ಇರುವ ಹತ್ತಿರದ ಸೇವಕರನ್ನು ಮಾತನಾಡಿಸಲು ಆಗುವುದೇ ಇಲ್ಲ!!

ಸ್ವಾಮಿಗಳಿಗಿಂತಾ ತಾವೇ ತೂಕ ಜಾಸ್ತಿ ಎನ್ನುವ ರೀತಿಯಲ್ಲಿ ಕೈಗೆ ಬಂಗಾರದ ಕಡಗ, ಕೊರಳಿಗೆ ಬಂಗಾರದ ಜಹಾಂಗೀರ್ ಸರ ಇತ್ಯಾದಿಗಳನ್ನು ತೊಟ್ಟಿಕೊಳ್ಳುವ ಈ ಜನರ ಕೈಗಳಲ್ಲಿ ತುಂಬಾ ದುಬಾರಿಯ ತರಾವರಿ ಮೊಬೈಲುಗಳು ಸದಾ ನಲಿಯುತ್ತವೆ. ಹತ್ತಿರ ಹೋದರೆ ಗುಟ್ಕಾ ವಾಸನೆ ಧುತ್ತೆಂದು ಮೂಗಿಗೆ ಬಡಿಯುತ್ತದೆ. ಅವರೋ ಅವರ ದಿರಿಸುಗಳೋ ಅವರ ನಡಾವಳಿ ವೈಖರಿಗಳೋ ಇಂಥವುಗಳನ್ನೆಲ್ಲಾ ಅವಲೋಕಿಸಿದರೆ ಸ್ವಾಮಿಗಳು ಇಂಥವರನ್ನೆಲ್ಲಾ ಯಾಕೆ ಹತ್ತಿರ ಇರಿಸಿಕೊಳ್ಳಬೇಕು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ’ಅಲ್ಪನಿಗೆ ಐಶ್ವರ್ಯ ಬಂದಾಗ ತಿಂಗಳು ಬೆಳಕಿನಲ್ಲೂ ಕೊಡೆಹಿಡಿದನಂತೆ’ ಎನ್ನುವ ರೀತಿ, ಉಂಡಾಡಿಯಾಗಿ ತಿರುಬೋಕಿಗಳಾಗಿ ಊರಕಡೆಗೆ ತಿರುಗಿಕೊಂಡಿದ್ದ ಕೆಲಸಕ್ಕೆ ಬಾರದ ಜನ, ಇಂದು ಮಠ-ಮಾನ್ಯಗಳಲ್ಲಿ ಗುರುಸೇವಕರಾಗಿ ಗುರುದರ್ಶನ ಮಾಡಿಸುವ ಅಡ್ನಾಡಿ ಬಸವಗಳಾಗಿ ತಯಾರಾಗಿದ್ದಾರೆ. ಸ್ವಾಮಿಗಳನ್ನು ಕಾಣಬೇಕೆಂದರೆ ಈ ಬಸವಪ್ಪಗಳಿಗೆ ಸಲಾಮು ಹೊಡೆಯೆಬೇಕು, ಅವರ ಮರ್ಜಿಗೆ ಕಾಯಬೇಕು. ಇಂಥಾ ಗುರುಸೇವಕರಲ್ಲಿ ಕೆಲವರಿಗೆ ತಮ್ಮದೇ ಆದ ಅದ್ಯತೆಗಳಿರುತ್ತವೆ; ಮಿಕ್ಕವರಿಗೆ ಗುರುದರ್ಶನ ದುರ್ಲಭವಾಗುತ್ತದೆ. ಹೊರಗೆ ನಡೆಯುವ ಲೌಕಿಕವಾದ ವ್ಯವಹಾರಗಳು ಒಳಗೆ ಕೂತುಕೊಳ್ಳುವ ಸ್ವಾಮಿಗಳ ಲಕ್ಷ್ಯಕ್ಕೆ ಬರುವುದಿಲ್ಲ; ಬಂದರೂ ಅವರೇನೂ ಮಾಡಲಾಗದಂತೇ ನೋಡಿಕೊಳ್ಳುವ ವರೆಗೂ ಈ ಲಜ್ಜೆಗೆಟ್ಟವರು ನಡೆದುಕೊಳ್ಳುತ್ತಾರೆ. ನಾನು ಅನೇಕಬಾರಿ ವಿವಿಧ ಮಠಗಳಿಗೆ ಹೋದಾಗ ಇಂಥಾ ಕಹಿ ಅನುಭವಗಳನ್ನು ಪಡೆದುಕೊಂಡಿದ್ದೇನೆ. ಸಮಾಜದಲ್ಲಿ ಬಡವ ಎಂಬ ವ್ಯಕ್ತಿಗೆ ಸಂನ್ಯಾಸಿಗಳ ಪಾದಪೂಜೆ ಮಾಡಬೇಕೆಂಬ ಹಂಬಲ ನಿರಂತರವಾಗಿದ್ದರೆ ಅದು ಕನಸಾಗಿಯೇ ಉಳಿದುಹೋಗುತ್ತದೆ. ಆಗ ನಮ್ಮಂತಹ ಅನೇಕರಿಗೆ ಶ್ರೀಧರ ಸ್ವಾಮಿಗಳಂತಹ ಭಗವಾನರು ನೆನಪಾಗುತ್ತಾರೆ.

ಶ್ರೀಧರ ಸ್ವಾಮಿಗಳು ಬಡವನೊಬ್ಬ ಕರೆದಾಗ " ಆಯ್ತು ಬರುತ್ತೇನೆ, ಪಾದಧೂಳಿ ಬೀಳಬೇಕೆಂದು ಹೇಳಿದೆಯಲ್ಲಪ್ಪಾ ಮನೆಯಲ್ಲಿ ಧೂಳನ್ನು ಹಾಕಿಬಿಡು, ನಾನು ಬಂದು ಅಲ್ಲಿ ನಡೆದುಕೊಂಡು ಹೋಗುತ್ತೇನೆ" ಎಂದು ತಮಾಷೆಗಾಗಿ ಹೇಳಿದ್ದರೂ ಭಾವುಕಭಕ್ತನೊಬ್ಬ ಹಾಗೇ ನಡೆದುಕೊಂಡ. "ಸ್ವಾಮೀ, ಮನೆಯ ಎಲ್ಲೆಡೆಗೂ ಧೂಳು ಬೀರಿದ್ದೇನೆ ತಾವು ದಯಮಾಡಿಸಬೇಕು" ಎನ್ನುತ್ತಾ ಮರಳಿಬಂದ. ದಯಾರ್ದೃ ಹೃದಯರೂ ಮಹಾನ್ ತಪೋಧನರೂ ಆದ ಭಗವಾನ್ ಶ್ರೀಧರರು ತಾವು ಹೇಳಿದಂತೇ ಆ ಮನೆಗೆ ನಡೆದೇ ಬಿಟ್ಟರು. ಶ್ರೀಧರರು ಆ ಮನೆಯ ಎಲ್ಲಾ ಭಾಗಗಳಲ್ಲೂ ಓಡಾಡಿದರು, ಗುರುಗಳ ಹೆಜ್ಜೆಗುರುತುಗಳು ಮೂಡಿದವು. ಬಡವ ಅಲ್ಲೇ ಗುರುಗಳ ಪಾದಪೂಜೆ ನಡೆಸಿ ಕೇವಲ ತುಳಸೀದಳಗಳನ್ನು ಅರ್ಪಿಸಿದ. ಹೊರಟುನಿಂತ ಶ್ರೀಧರರು " ಮಗನೇ ಈಗಲಾದರೂ ನಿನಗೆ ಸಮಾಧಾನವಾಯಿತೇ?" ಎಂದು ಕೇಳಿದರು. ಬಡವನ ಕಣ್ಣಿಂದ ಆನಂದಬಾಷ್ಪ ಹರಿಯಿತು. ಶ್ರೀಧರರು ಹೊರಟ ಪಶ್ಚಾತ್, ಆತ ಅವರನ್ನು ಬೀಳ್ಕೊಟ್ಟು, ಹೆಂಡತಿ-ಮಕ್ಕಳೊಡನೆ ಮನೆಯನ್ನು ಮರಳಿ ಪ್ರವೇಶಿದರೆ, ಗುರುಗಳು ಹೆಜ್ಜೆಯಿಟ್ಟಲ್ಲೆಲ್ಲಾ ಬಂಗಾರದ ನಾಣ್ಯಗಳು ಕಂಡವು !! ಇದು ಶ್ರೀಧರರಂತಹ ಅವತಾರಿಗಳಿಗೆ ಮಾತ್ರ ಸಾಧ್ಯ. ಶಂಕರರಿಗೂ ಶ್ರೀಧರರಿಗೂ ಒಂದು ಸಾಮ್ಯವಿದೆ:  ಅದೆಂದರೆ ಶಂಕರರು ಹೋದೆಡೆಗೆಲ್ಲಾ ಶ್ರೀಧರರೂ ತಿರುಗಾಡಿದ್ದಾರೆ. ಶಂಕರರ ನಂತರ ಭಾರತವನ್ನು ಜನಸಾಮಾನ್ಯನಂತೇ ಸುತ್ತಿದ ಏಕೈಕ ಸಂನ್ಯಾಸಿಯೆಂದರೆ ಅವರು ಭಗವಾನ್ ಶ್ರೀಧರರು ಮಾತ್ರ! ಯೋಗಿಯಾಗಿ ಜನಿಸಿ, ಮಠಗಳ ಅಧಿಕಾರವನ್ನು ಪರಿತ್ಯಜಿಸಿ, ತನ್ನ ತಪಸ್ಸಿನ ಶಕ್ತಿಯನ್ನು ಸಾವಿರ ಸಾವಿರ ಸಂಖ್ಯೆಯ ಭಕ್ತರಿಗೆ, ಆರ್ತರಿಗೆ ಹಂಚಿದ ಮಹಾನುಭಾವರುಗಳಲ್ಲಿ ಶ್ರೀಧರರು ಅಗ್ರಗಣ್ಯರು. ಶ್ರೀಧರರು ತಾವು ಕಾಡಿನಲ್ಲಿ ತಪಸ್ಸು ನಡೆಸುವಾಗ, ಕಾಣಲೆಂದು ದೂರದಿಂದ ಬರುವ ಭಕ್ತರಿಗಾಗಿ ಆಶ್ರಮ ನಿರ್ಮಿಸುವುದಕ್ಕೆ ಒಪ್ಪಿಕೊಂಡರೇ ಹೊರತು ಅವರು ಒಂದೆಡೆಗೇ ನಿಂತುಕೊಳ್ಳುವವರಾಗಿರಲಿಲ್ಲ. ಶ್ರೀಧರರ ಪರಮಹಂಸ ಪರಿವ್ರಾಜಕಾಚಾರ್ಯತೆಯ ಪರಮೋಚ್ಚ ಸ್ಥಿತಿಯನ್ನು ಗುರುತಿಸಿದ ಶೃಂಗೇರಿಯ ಅಂದಿನ ಜಗದ್ಗುರು ಶ್ರೀ ಶ್ರೀ ಅಭಿನವ ವಿದ್ಯಾತೀರ್ಥರು, ಶ್ರೀಧರರನ್ನು ಕಾಣಲು ಸ್ವತಃ ತಾವೇ ವರದಹಳ್ಳಿಗೆ ಧಾವಿಸಿದ್ದರು!

ಸಂನ್ಯಾಸಿಗಳು ರಾಜಸಂನ್ಯಾಸಿಗಳೇ ಆಗಿದ್ದರೂ, ಮಠಾಧಿಪತಿಗಳೇ ಆಗಿದ್ದರೂ, ಅವರ ಹೆಚ್ಚಿನ ಸಮಯ ತಪಸ್ಸಿನಲ್ಲಿ ವಿನಿಯೋಗವಾಗಬೇಕು. ನಾವಿಕನೊಬ್ಬ ನಡೆಸುವ ನಾವೆಯಲ್ಲಿ ಕುಳಿತುಕೊಳ್ಳುವ ಪಯಣಿಗರ ಜವಾಬ್ದಾರಿ ನಾವಿಕನ ಮೇಲೆ ಹೇಗಿರುತ್ತದೋ, ಚಾಲಕನೊಬ್ಬ ನಡೆಸುವ ಬಸ್ಸಿನಲ್ಲಿ ಕುಳಿತ ಪ್ರಯಾಣಿಕರ ಜವಾಬ್ದಾರಿ ಹೇಗೆ ಚಾಲಕನ ಮೇಲಿರುತ್ತದೋ, ಹಾಗೆಯೇ ಮಠಗಳನ್ನು ನಂಬಿದ ಶಿಷ್ಯ ಗಡಣಗಳನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಜವಾಬ್ದಾರಿ, ಗಮ್ಯವನ್ನು ಬೋಧಿಸುವ ನೈತಿಕ ಜವಾಬ್ದಾರಿ ಸಂನ್ಯಾಸಿಗಳಿಗೆ ಇರುತ್ತದೆ. ಹಲವರನ್ನು ಉದ್ಧರಿಸುವ ಜವಾಬ್ದಾರಿಯನ್ನು ಹೊತ್ತ ಗುರುವಿಗೆ ಹೆಚ್ಚಿನ ತಪಸ್ಸಿನ ತೇಜಸ್ಸು ಮತ್ತು ಆ ಸಾತ್ವಿಕ ಬ್ರಹ್ಮಫಲ ಬೇಕಾಗುತ್ತದೆ. ತಪಸ್ಸನ್ನು ಕಮ್ಮಿಮಾಡಿ ಲೌಕಿಕ ವ್ಯವಹಾರಗಳಲ್ಲಿ ಹೆಚ್ಚಿಗೆ ತೊಡಗಿಕೊಂಡರೆ, ಸಂನ್ಯಾಸಿಗಳ ಮೂಲ ಬಂಡವಾಳ ಕಮ್ಮಿಯಾಗಿಹೋಗುತ್ತದೆ!ಸಂನ್ಯಾಸಿಗಳು ಎಲ್ಲಾ ಸೌಕರ್ಯಗಳಿದ್ದೂ ಯಾವುದನ್ನೂ ಆತುಕೊಂಡಿರದ ಪರಿತ್ಯಜ್ಯ ಸ್ಥಿತಿಯಲ್ಲಿರಬೇಕು; ಸುತ್ತಲ ಹತ್ತು ಹತ್ತಿರದ ಕಳ್ಳ ಸೇವಕರನ್ನು ತನ್ನ ತಪಃಶ್ಶಕ್ತಿಯಿಂದಲೇ ನಿಗ್ರಹಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ಮಠಗಳಲ್ಲಿ ಗುರುಕಾರುಣ್ಯ ಬಯಸಿ ಬರುವ ಬಡವರಿಗೂ ಅದು ಸಲೀಸಾಗಿ ದೊರೆಯುವ ಸೌಲಭ್ಯ ಉಂಟಾಗಬೇಕು. ಯಾರೇ ಆರ್ತ ದನಿಯಿಂದ ಕರೆದರೂ ಅದನ್ನು ಆಲೈಸುವ ಸ್ಥಿತಿ ಗುರುವಿನದ್ದಾಗಿರಬೇಕು. ಇಂಥವರು ಇಂದು ನಮಗೆ ಬೆರಳೆಣಿಕೆಯಷ್ಟು ಸಿಗುತ್ತಾರೆ.

ಇಂತಹ ಸಾತ್ವಿಕ ಶ್ರೇಷ್ಠ ಸಂನ್ಯಾಸಿಗಳಲ್ಲಿ ಒಬ್ಬರು ಬ್ರಹ್ಮೀಭೂತ ಶ್ರೀ ಶ್ರೀ ಸಚ್ಚಿದಾನಂದ ಭಾರತಿಗಳು. ಮಠಕ್ಕೆ ರಾಜರಕಾಲದಲ್ಲಿ ಮೈಸೂರು ರಾಜರುಗಳ ಆಶ್ರಯವಿತ್ತು. ರಾಜಾಶ್ರಯ ತಪ್ಪಿದ ಮೇಲೆ ಮಠಕ್ಕೆ ಹೇಳಿಕೊಳ್ಳುವ ಯಾವುದೇ ಆದಾಯವಿರಲಿಲ್ಲ. ಬಂದುಹೋಗುವ ಭಕ್ತರಲ್ಲಿ ಬಡವರೇ ಅಧಿಕವಾದುದರಿಂದ ಶಿವಗಂಗೆ ಮಠ ಬಡಮಠವಾಗಿಯೇ ಇದ್ದರೂ ತಪಶ್ಚರ್ಯೆಯಲ್ಲಿ ತನ್ನನ್ನು ದೊಡ್ಡಮಠವನ್ನಾಗಿ ಗುರುತಿಸಿಕೊಂಡಿತು. ನನಗೆ ಗೊತ್ತಿರುವ ಬೆಂಗಳೂರಿನ ಭಕ್ತರೊಬ್ಬರ ಮಗುವಿಗೆ ಚಿಕ್ಕಂದಿನಲ್ಲಿ ಮಾತು ಬರುತ್ತಿರಲಿಲ್ಲ. ಅದಾಗಲೇ ೫-೬ ವಯಸ್ಸು ಕಳೆದಿತ್ತು. ಶೃಂಗೇರಿ-ಶಿವಗಂಗೆಯ ಗುರುಗಳಲ್ಲಿ ಅದನ್ನು ಪ್ರಸ್ತಾಪಿಸಿದರು. ಇದೇ ಶ್ರೀ ಸಚ್ಚಿದಾನಂದ ಭಾರತಿಗಳು ತಮ್ಮ ಮುಕ್ತಹಸ್ತದಿಂದ ಅಶೀರ್ವದಿಸಿದರು. ಮಗುವಿಗೆ ಕೆಲವೇ ದಿನಗಳಲ್ಲಿ ತೊದಲುನುಡಿ ಬಂತು, ನಂತರ ನಿಧಾನವಾಗಿ ಮಾತು ಬಂತು; ಇಂದು ಆ ಮಗು ಒಬ್ಬ ಉದ್ಯಮಿಯಾಗಿ ಬೆಳೆದು ಮುನ್ನಡೆಯುತ್ತಿದೆ! ಶಿವಗಂಗೆಯ ಗುರುಗಳಲ್ಲಿ ಬಂದ ಧನಿಕರೊಬ್ಬರು ಮಠದ ಬಣ್ಣಮಾಸಿದ ಗೋಡೆಗಳಿಗೆ ಹೊಸಬಣ್ಣ ಬಳಿಸಿ, ಹೊಸದಾಗಿ ಕೆಲವು ಕೊಠಡಿಗಳನ್ನು ನಿರ್ಮಿಸಿಕೊಡುವುದಾಗಿಯೂ ಅದಕ್ಕಾಗಿ ಯಾರೂ ಬಿಡಿಗಾಸನ್ನೂ ಕೊಡುವುದು ಬೇಕಾಗಿಲ್ಲ-ತನ್ನದೇ ಎಲ್ಲವೆಂದೂ ಹೇಳಿದ್ದರಂತೆ. ಆ ಧನಿಕ ಭಕ್ತನ ಆದಾಯದ ಮೂಲವನ್ನು ಗುರುಗಳು ಕೇಳಿದರು. ಅದನ್ನು ಮಾತ್ರ ಕೇಳಬಾರದೆಂದು ಆತ ಹೇಳಿಕೊಂಡನಂತೆ. ಆ ನಂತರ ಆ ಧನಿಕನ ಹಣದಿಂದ ಯಾವುದೇ ಕಾರ್ಯಗಳು ಶಿವಗಂಗೆ ಮಠದಲ್ಲಿ ನಡೆಯದಂತೇ ನೋಡಿಕೊಂಡವರು ಶ್ರೀ ಸಚ್ಚಿದಾನಂದ ಭಾರತಿಗಳು. ಸಂನ್ಯಾಸಿಗಳಿಗೆ ಯಾರಾದರೂ ದೊಡ್ಡಮಟ್ಟದ ಕಾಣಿಕೆ ಅರ್ಪಿಸಿದರೆ, ಸ್ವೀಕರಿಸುವ ಮೊದಲು ಅದರ ಮೂಲವನ್ನು ಸಂಶೋಧಿಸಬೇಕು; ಒಂದೊಮ್ಮೆ ಹಾಗೆ ಮಾಡದೇ ಯಾವುದೋ ಪಾಪಾರ್ಜಿತ ಹಣ ಮಠಕ್ಕೆ ಬಂದರೆ ಅಂತಹ ಪಾಪಿಗಳ ಪಾಪವನ್ನು ಹೊತ್ತುಕೊಳ್ಳುವ ಜವಾಬ್ದಾರಿ ಮಠದ್ದಾಗಿರುತ್ತದೆ. ಹಣವನ್ನೇ ನಂಬಿದ ಹಲವರು ಈ ದೇಶದಲ್ಲಿ ಕುಲಗೆಟ್ಟುಹೋಗಿದ್ದಾರೆ! ಹಣ ದೊರೆಯುತ್ತದೆ ಎಂದಮಾತ್ರಕ್ಕೆ ತಮ್ಮ ಅಂತಃಸತ್ವವನ್ನೂ ಪೀಠಗಳ ತಲೆಮಾರುಗಳ ದಿವ್ಯಶಕ್ತಿಯನ್ನೂ ಅದಕ್ಕೆ ಮಾರಿಕೊಂಡರೆ ಅದು ಪೀಠಸ್ಥ ಸಂನ್ಯಾಸಿಗಳಿಗೂ ಮತ್ತು ಮಠಕ್ಕೂ ಸಲ್ಲುವ ವಿಹಿತ ಧರ್ಮವಾಗಿರುವುದಿಲ್ಲ. ಮುಕ್ತರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತಿಗಳನ್ನು ಮಿಕ್ಕುಳಿದ ಸಂನ್ಯಾಸಿಗಳು ಅರಿತುಕೊಳ್ಳುವಂತಾಗಲಿ ಎಮ್ದು ಹಾರೈಸುತ್ತಾ ಬ್ರಹ್ಮೀಭೂತ ಶ್ರೀಗಳಿಗೆ ನಮನ ಸಲ್ಲಿಸುತ್ತಿದ್ದೇನೆ.

-----------------


ಇನ್ನು ಎರಡನೆಯದಾಗಿ ಡಾ| ಆಂಜಿರೆಡ್ಡಿಯವರ ಬಗ್ಗೆ ಎರಡು ಮಾತು. ಭಾರತೀಯ ಆಯುರ್ವೇದಕ್ಕೆ ೫೦೦೦ ವರ್ಷಗಳ ಪೂರ್ವೇತಿಹಾಸವೂ ೩೦೦೦ ವರ್ಷಗಳ ದಾಖಲಾತಿ ಸಹಿತ ಇತಿಹಾಸವೂ ಇದೆ. ನಂತರ ಬಂದಿದ್ದು ಹೋಮಿಯೋಪಥಿ. ಅದಕ್ಕೆ ಅಜಮಾಸು ೩೫೦ ವರ್ಷಗಳ ಇತಿಹಾಸವಿದೆ. ನಂತರ ಬಂದಿದ್ದು ಅಲೋಪಥಿ-ಇದಕ್ಕೆ ಇರುವುದು ಕೇವಲ ೧೫೦ ವರ್ಷಗಳ ಇತಿಹಾಸ ಮಾತ್ರ! ಕೃತ್ರಿಮವಾಗಿ ಮಾನವ ತಯಾರಿಸಿದ ರಾಸಾಯನಿಕಗಳನ್ನು ಸಮ್ಮಿಶ್ರಣಗೊಳಿಸಿ ಔಷಧಗಳನ್ನಾಗಿ ಬಳಸುವ ಕಲೆ ಅಲೋಪಥಿಯದ್ದು; ಅಡ್ಡ ಪರಿಣಾಮಗಳಿ ಇದ್ದೇ ಇರುತ್ತವೆ ಎಂಬುದನ್ನು ತಿಳಿದಿರಬೇಕು. ರಾಜಾಶ್ರಯ ತಪ್ಪಿದ ನಂತರ ಮತ್ತು ರಾಜರ ಆಳ್ವಿಕೆಗಳ ನಡುಗಾಲದಲ್ಲಿ ನಡೆದ ಪರಕೀಯರ ದಾಳಿಗಳಿಂದ ಆಯುರ್ವೇದ ತನ್ನ ಬೆಲೆಯನ್ನು ಕಳೆದುಕೊಳ್ಳುವಂತಹ ಸ್ಥಿತಿ ಬಂದೊದಗಿತ್ತು. ಚರಕ-ಸುಶ್ರುತರಂಥಾ ವೈದ್ಯರು ಭಾರತದಲ್ಲಿ ೩೦೦೦ ವರ್ಷಗಳ ಹಿಂದೆಯೇ ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದರು ಎಂದರೆ ನಮಗೀಗ ಆಶ್ಚರ್ಯವಾಗುತ್ತದೆ! ಆಂಗ್ಲರ ಆಳ್ವಿಕೆಯ ಕಾಲದಲ್ಲಿ ಭಾರತದಲ್ಲಿ ಪ್ರಚುರಗೊಂಡ ಅಲೋಪಥಿ ವೈದ್ಯ ಪದ್ಧತಿಯ ಮುಖ್ಯ ಉದ್ದೇಶ ರೋಗಿಗಳಿಗೆ ತ್ವರಿತ ಉಪಶಮನ. ರೋಗಗಳ ಮೂಲ ಬೇರುಗಳನ್ನು ಕಿತ್ತೆಸೆಯುವ ಬದಲು ರೋಗಿಗಳಿಗೆ ತತ್ಕಾಲಕ್ಕೆ ಪರಿಹಾರವನ್ನೊದಗಿಸುವ ಈ ಪದ್ಧತಿ ಹಲವರಿಗೆ ಅನುಕೂಲಕರವಾಗಿ ಕಂಡಿತು. ಆಯುರ್ವೇದದ ಅನೇಕ ಔಷಧಗಳು ಅನುವಂಶೀಯವಾಗಿ ಕೊಡಲ್ಪಡುತ್ತಿದ್ದು ಪುಸ್ತಕಗಳ ರೂಪದಲ್ಲಿ ಹೇಳಲ್ಪಟ್ಟ ಮಾಹಿತಿಯಲ್ಲಿನ ಮೂಲಿಕೆಗಳ ಪರಿಚಯ ಎಲ್ಲರಿಗೂ ಆಗುತ್ತಿರಲಿಲ್ಲ; ಮತ್ತು ನುರಿತ ಹಸ್ತದ ಪ್ರಮಾಣ ಬದ್ಧತೆ ಕಮ್ಮಿಯಾಗತೊಡಗಿತ್ತು. ಹೀಗಾಗಿ ಆಯುರ್ವೇದ ಎಂದರೆ ನಿಧಾನವಾಗಿ ಪರಿಣಾಮ ಬೀರಬಹುದಾದ ಔಷಧ ಪದ್ಧತಿ ಎಂದೇ ಜನ ಪರಿಗಣಿಸಿದರು; ದೋಷ ವೈದ್ಯರಲ್ಲಿತ್ತೇ ಹೊರತು ಆಯುರ್ವೇದದಲ್ಲಿರಲಿಲ್ಲ. ಇಂದು ಆಯುರ್ವೇದೀಯ ಔಷಧಿಗಳು ಅತಿಶೀಘ್ರ ಪರಿಣಾಮವನ್ನು ಕೊಡಬಲ್ಲ ಔಷಧಿಗಳಾಗಿ, ಅಲೋಪಥಿಯ ಮಾತ್ರೆಗಳ ರೂಪದಲ್ಲಿಯೇ ಮಾತ್ರೆಗಳೂ, ಕ್ಯಾಪ್ಸೂಲ್ ಗಳೂ ಸಹ ಲಭ್ಯವಿವೆ.

ಏನೇ ಇರಲಿ, ೭೦ರ ದಶಕದಲ್ಲಿ ಆಲೋಪಥಿಯ ಔಷಧಗಳನ್ನು ಭಾರತ ಹೊರದೇಶಗಳಿಂದ ಆಮದುಮಾಡಿಕೊಳ್ಳಬೇಕಾದ ಪ್ರಮೇಯವಿತ್ತು. ಔಷಧಗಳ ಬರುವಿಕೆಗಾಗಿ ವೈದ್ಯರುಗಳು ಕಾದಿರಬೇಕಾದ ಅಗತ್ಯತೆ ಇರುತ್ತಿತ್ತು. ಆಂಗ್ಲರು ಅಲೋಪಥಿಯ ಬಗ್ಗೆ ಬಹಳ ಚೆನ್ನಾಗಿ ಬೋಧಿಸಿ ಅದನ್ನೇ ಎಲ್ಲೆಡೆಗೂ ಹಬ್ಬಿಸಿ ಬೆಳೆಸಿದ್ದರಿಂದ ಜನರಿಗೆ ಹೊಸಪದ್ಧತಿಯ ಔಷಧಗಳ ಅಡ್ಡಪರಿಣಾಮಗಳಿಗಿಂತಾ ತ್ವರಿತಗತಿಯ ಪರಿಹಾರಗಳೇ ಸಮಾಧಾನಕರವಾಗಿಯೂ ಉತ್ತಮವಾಗಿಯೂ ಕಂಡವು. ಇಂಥಾ ಕಾಲದಲ್ಲಿ, ದೇಶದಲ್ಲಿ ಇರುವ ಆಲೋಪಥಿ ಆಸ್ಪತ್ರೆಗಳಿಗೆ ಬೇಕಾಗುವ ಔಷಧಗಳಲ್ಲಿ ಹಲವನ್ನು ತಯಾರಿಸಲು ಆಲೋಚಿಸಿದವರು ಡಾ| ಆಂಜಿರೆಡ್ಡಿಯವರು. ಒಂದು ಸ್ವದೇಶೀ ಉದ್ಯಮದ ಸ್ಥಾಪನೆ ಮಾಡುವುದು ಮತ್ತು ಅದರಿಂದ ಹಲವರಿಗೆ ಉದ್ಯೋಗ ಕೊಡುತ್ತಾ ತಮ್ಮನ್ನೂ ಪೋಷಿಸಿಕೊಳ್ಳುತ್ತಾ, ದುಬಾರಿ ಬೆಲೆತೆತ್ತು ಖರೀದಿಸಬೇಕಾದ ಔಷಧಗಳನ್ನು  ಆದಷ್ಟೂ ಕಡಿಮೆ ಬೆಲೆಯಲ್ಲಿ ಉತ್ಪಾದಿಸಲು ಮುಂದಾಗಬೇಕೆಂಬುದು ಅವರ ಬಯಕೆಯಾಗಿತ್ತು. ಅದನ್ನವರು ಸಾಧ್ಯವಾಗಿಸಿದರು; ಡಾ. ರೆಡ್ಡೀಸ್ ಲ್ಯಾಬೋರೇಟರಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಅಲ್ಲಿ ಅಲೋಪಥೀಯ ಔಷಧಗಳನ್ನು ತಯಾರಿಸಿ ದೇಶವ್ಯಾಪೀ ಅದನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಯಾವಕಾಲದಲ್ಲಿ ಯಾವುದು ಕಷ್ಟಸಾಧ್ಯವೆಂದು ಪರಿಗಣಿತವಾಗಿತ್ತೋ ಅದನ್ನೇ ಎತ್ತಿಕೊಂಡು ಸಾಧಿಸಿದವರು ಡಾ| ಆಂಜಿರೆಡ್ಡಿ. ಅವರ ಸಾಧನೆಗೊಂದು ಸಲಾಮು ಸಲ್ಲಿಸುತ್ತಾ ಕಳೆದ ಕೆಲವುದಿನಗಳ ಹಿಂದೆ ನಿಧನರಾದ ಅವರ ಆತ್ಮಕ್ಕೆ ಶಾಂತಿಯನ್ನು ಹಾರೈಸುತ್ತಿದ್ದೇನೆ.


-------------


ಆಗಮಶಾಸ್ತ್ರಗಳಲ್ಲಿ ವಿಶೇಷ ಪರಿಣತಿಯನ್ನು ಗಳಿಸಿ, ಜೀವನದುದ್ದಕ್ಕೂ ಸಾವಿರಾರು ಮಹತ್ತರ ಪ್ರತಿಷ್ಠಾಪನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟವರು ಶ್ರೀಯುತ ಕಟ್ಟೆ ಪರಮೇಶ್ವರ ಭಟ್ಟರು. ನನಗೆ ಭಟ್ಟರ ಒಡನಾಟವಿತ್ತು. ಅನೇಕ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿಯೂ ಇದ್ದೆ. ದೇವಸ್ಥಾನಗಳ ಕ್ಷೇತ್ರ ಶುದ್ಧಿಯ ಬಗ್ಗೆ, ದೇವಾಸ್ಥಾನಗಳ ಪಂಚಾಂಗ ಶುದ್ಧಿಯ ಬಗ್ಗೆ, ಆಯ-ವ್ಯಯಗಳ ಬಗ್ಗೆ ಸುದೀರ್ಘವಾದ ಅವರ ಉಪನ್ಯಾಸವನ್ನು ಕೇಳಿ ಮಂತ್ರಮುಗ್ಧನಾಗಿದ್ದೆ. ಎಳವೆಯಲ್ಲೇ ನಾನೊಂದು ಪ್ರಶ್ನೆಯನ್ನು ಅವರಲ್ಲಿ ಕೇಳಿದ್ದೆ: ಸ್ನಾನ ಮಾಡಿಬಂದರೂ ಮತ್ತೆ ಆಗಾಗ ಕೈಕಾಲು ತೊಳೆದು ಶುದ್ಧೀಕರಿಸಿಕೊಂಡು ಪೂಜಾಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬುದಕ್ಕೆ ಕಾರಣವೇನು? -ಎಂದು. ಮನುಷ್ಯ ಸಹಜವಾಗಿ ಪ್ರತಿಯೊಬ್ಬರೂ ನಮಗರಿವಿಲ್ಲದಂತೇ ಯಾರಲ್ಲೋ ಹರಟುತ್ತಾ ತಲೆಕೆರೆದುಕೊಳ್ಳುವುದು, ಕಾಲು ಮುಟ್ಟಿಕೊಳ್ಳುವುದು, ಮೈ ತುರಿಸಿಕೊಳ್ಳುವುದು, ನಾಲಿಗೆಯಲ್ಲಿ ಬಂದ ಕಸವನ್ನು ತೆಗೆದುಹಾಕುವುದು, ಕಣ್ಣುಗಳನ್ನು ಉಜ್ಜಿವುದು, ಕಿವಿ-ಮೂಗುಗಳಲ್ಲಿ ನವೆಯಾದಾಗ ಬೆರಳಾಡಿಸಿಕೊಳ್ಳುವುದು --ಈ ರೀತಿಯೆಲ್ಲಾ ಮಾಡುತ್ತಿರುತ್ತೇವೆ. ಮನುಷ್ಯನ ಬಾಹ್ಯ ಶರೀರಕ್ಕಿಂತಾ ಶರೀರದೊಳಗಿನ ಕಲ್ಮಷಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ನಮ್ಮ ಬೆವರು, ಕಣ್ಣೀರು, ಸೀನು-ಸಿಂಬಳ, ಮಲ-ಮೂತ್ರ ಇವುಗಳಲ್ಲೆಲ್ಲಾ ಇರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನೇ ನಾವು ಗಮನಿಸಿ ನಮ್ಮ ಶರೀರದೊಳಗಿನ ಕಲ್ಮಷವನ್ನು ಗ್ರಹಿಸಬಹುದಾಗಿದೆ. ಕಲ್ಮಷ ಹರಿತವಾದ ಕೈಗಳಿಂದಲೂ ಮನದಿಂದಲೂ ಪೂಜಿಸಬೇಕು ಎಂದಾದಾಗ, ಭಗವಂತನನ್ನು ನಮ್ಮ ಮಟ್ಟಕ್ಕೆ ಇಳಿಸಿಕೊಳ್ಳದೇ, ನಮ್ಮನ್ನು ಆಗಾಗ ಶುದ್ಧೀಕರಿಸಿಕೊಳ್ಳುತ್ತಾ ಪೂಜಿಸುವುದು ಧರ್ಮಶಾಸ್ತ್ರಗಳಲ್ಲಿ ಹೇಳಿದ ವಿಧಿ ಎಂದಿದ್ದರು.

ಎಲ್ಲೇ ಹೋಗಲಿ ಅವರಲ್ಲಿ ನಿತ್ಯವೂ ನಡೆಸುವ ಕೆಲವು ಅನುಷ್ಠಾನಗಳು ಇರುತ್ತಿದ್ದವು. ನಿರ್ಗುಣ ಪರಬ್ರಹ್ಮನನ್ನು ಸಗುಣಾರಾಧಕರಾಗಿ ಹಲವು ಸಾವಿರ ವಿಗ್ರಹಗಳನ್ನು ವಿಧಿವತ್ತಾಗಿ ಪ್ರತಿಷ್ಠಾಪಿಸಿದ ಅವರು, ಅನೇಕೆ ಕ್ಷೇತ್ರಗಳಲ್ಲಿ ಅಷ್ಟಬಂಧವೆಂಬ ಕಾರ್ಯಕ್ರಮವನ್ನೂ ನಡೆಸಿಕೊಡುತ್ತಿದ್ದರು. ಪ್ರತಿನಿತ್ಯ ನಡೆಸುವ ನಿತ್ಯಗಣಹೋಮವೆಂಬ ಒಂದು ಹೋಮವನ್ನು ಕೊನೆಯವರೆಗೂ ನಡೆಸಿದ್ದರು! ದೇವರಲ್ಲಿ ಭಕ್ತರ ಪರವಾಗಿ ಸಲ್ಲಿಸುವ ಅವರ ಪ್ರಾರ್ಥನಾ ಶೈಲಿ ಅತಿ ವಿಶಿಷ್ಟವಾಗಿಯೂ ಅಮೋಘವಾಗಿಯೂ ಇರುತ್ತಿತ್ತು. ಇಂಥಾ ಕಟ್ಟೆಭಟ್ಟರು ಯಾನೇ ಕಟ್ಟೆ ಪರಮೇಶ್ವರ ಭಟ್ಟರು ಅನುಷ್ಠಾನ ತತ್ಪರರು. ಉದ್ಯಮಿಯೊಬ್ಬರ ಮನೆಗೆ ಯಾವುದೋ ಕಾರ್ಯಕ್ರಮಕ್ಕೆ ಅವರು ಬರುವುದಾಗಿ ನಿಶ್ಚಯವಾಗಿದ್ದು, ಕಾರ್ಯಕ್ರಮದ ದಿನ ಬೆಳಗಿನ ಜಾವ ಅವರು ಹಾಜರಿರಬೇಕಿತ್ತು; ಕಾರಣಾಂತರಗಳಿಂದ ಗಂಟೆ ತಡವಾಗಿ ಚಿತ್ತೈಸಿದ ಕಟ್ಟೆಭಟ್ಟರಿಗೆ ಧನಿಕ ಯಜಮಾನರು ಋತ್ವಿಜರೆಲ್ಲರ ಮತ್ತು ಸೇರಿದ ಜನರೆಲ್ಲರೆದುರು ಸ್ವಲ್ಪ ಉದ್ದಟವಾಗಿ ಮಾತನಾಡಿ ನಿಂದಿಸಿಬಿಟ್ಟರು. ಕಟ್ಟೆಭಟ್ಟರಿಗೆ ಆದ ಅಪರಾಧದ ಅರಿವಿತ್ತು, ಆದರೆ ಅಂದೇನೋ ಅನಿವಾರ್ಯವೂ ಬಂದೊದಗಿದ್ದರಿಂದ ಅವರ ಬರುವಿಕೆ ತಡವಾಗಿತ್ತು. ಭಟ್ಟರು ಮರುಮಾತಾಡಲಿಲ್ಲ. ತನ್ನ ಕರ್ತವ್ಯವನ್ನು ನಿಭಾಯಿಸಿ ಹೊರಟುಹೋದರು. ಆದಾದ ಕೆಲವೇ ದಿನಗಳಲ್ಲಿ ಆ ಉದ್ಯಮಿ ತಮ್ಮ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡರು! ಆವರ ಕುಟುಂಬವರ್ಗದವರು, ಕಟ್ಟೆ ಭಟ್ಟರಲ್ಲಿ ಮತ್ತೆ ವಿಷಯ ಪ್ರಸ್ತಾವಿಸಿ ನೋಯಿಸಿದ್ದಕ್ಕೆ ಕ್ಷಮಾಪಣೆ ಕೇಳಿದರು, ಕಟ್ಟೆಭಟ್ಟರು ಕ್ಷಮಿಸಿದರೂ ಕೂಡ ಆ ವ್ಯಕ್ತಿ ನೂರಕ್ಕೆ ನೂರು ಮೊದಲಿನಂತಾಗಲು ಸಾಧ್ಯವಾಗಲಿಲ್ಲ! 

ನಾವೆಲ್ಲಾ ಹುಟ್ಟುವುದಕ್ಕೂ ಮೊದಲೇ ಅವರು ಆಗಮೋಕ್ತವಾದ ಅನೇಕ ಕಾರ್ಯಗಳಲ್ಲಿ ನಿರತರಾಗಿದ್ದರು. ಆಳೆತ್ತರದ ಶಿವಲಿಂಗವನ್ನೂ, ಮುಸ್ಲಿಮರ ದಾಳಿಯಿಂದ ಹಾಳುಬಿದ್ದ ವಿಷ್ಣು ವಿಗ್ರಹವನ್ನೂ ತೆಗೆದು ಆ ಜಾಗಗಳಲ್ಲಿ ಅಂಥದ್ದೇ ಹೊಸ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದನ್ನು ನಾನು ಬಲ್ಲೆ. ಪ್ರತಿಷ್ಠಾಪನೆ ನಡೆದು ಹೊಸ ಮೂರ್ತಿಗೆ ಕಲಾವೃದ್ಧಿ ನಡೆಸಿ ಕಣ್ಣು ತೆರೆಸುವ ಕಾರ್ಯಕ್ರಮವೊಂದು ವಿಶಿಷ್ಟ ಕ್ರಮ. ಕಣ್ತೆರೆವ ದೇವರ ಎದುರಿಗೆ ನಿಲ್ಲಿಸಿದ ವಸ್ತು ಅಡ್ಡ ಬೀಳುವುದು ಶಕ್ತಿ ಸಂಚಾರವನ್ನು ಜನರಿಗೆ ತೋರಿಸಿದರೆ, ಮಹಾಮಂಗಲಾರತಿಯ ವೇಳೆ ವಿಗ್ರಹಗಳ ತಲೆಯಮೇಲಿಂದ ನಿರಂತರವಾಗಿ ಪ್ರಸಾದ ಉದುರುತ್ತಾ ಇರುವುದು ಅವರ ನೈಪುಣ್ಯತೆಗೆ ಹಿಡಿದ ಕನ್ನಡಿ.  ಧರ್ಮಶಾಸ್ತ್ರ ಪ್ರವೀಣರಾಗಿದ್ದ ಅವರು ಸಂಸ್ಕೃತದಲ್ಲೂ ಪ್ರೌಢಿಮೆ ಹೊಂದಿದ್ದ ವ್ಯಕ್ತಿ. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಅಧ್ವರ್ಯುಗಳಾಗಿ ಭಾಗವಹಿಸಿದ್ದಾರೆ. ಕಟ್ಟೆಭಟ್ಟರನ್ನು ನೋಡಿದ ಜನ ಸಹಜವಾಗಿ ಅವರಿಗೆ ಕೈಮುಗಿಯುವ ಮನಸ್ಸನ್ನು ಪಡೆಯುತ್ತಿದ್ದರು ಎಂದರೆ ಅವರ ಅನುಷ್ಠಾನಿಕ ವರ್ಚಸ್ಸು ಎಂಥದ್ದಿರಬೇಕು ಎಂಬುದನ್ನು ಗಣಿಸಬಲ್ಲಿರಷ್ಟೇ? ಅವರು ಹೋದಲ್ಲೆಲ್ಲಾ ಅವರ ಸುತ್ತ ಒಂದಷ್ಟು ಜನ ಮುತ್ತಿಕೊಳ್ಳುತ್ತಿದ್ದರೆ ಅದಕ್ಕೆ ಅವರ ಸರಳ ಜೀವನ ಮತ್ತು ಅಗಾಧ ಪಾಂಡಿತ್ಯಗಳೇ ಕಾರಣಗಳಾಗಿದ್ದವು. ಕಾರ್ಯಕ್ರಮಗಳಲ್ಲಿ ಎಲ್ಲೂ ನ್ಯೂನತೆಯನ್ನುಂಟುಮಾಡದೇ, ಕೊಡುವವರಿದ್ದಾರೆ ಎಂದು ಅನಗತ್ಯವಾಗಿ ಖರ್ಚುಮಾಡದೇ, ನಡೆಸಬೇಕಾದ ವಿನಿಯೋಗ-ವಿಧಿಗಳಲ್ಲಿ ಎಲ್ಲೂ ರಾಜಿಮಾಡಿಕೊಳ್ಳದೇ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಭಕ್ತರ ಪ್ರಶ್ನೆಗಳಿಗೆ ಆಧಾರ ಸಹಿತವಾಗಿ ಉತ್ತರಿಸುತ್ತಾ, ಭಕ್ತರ ಸಂದೇಹಗಳನ್ನು ನಿವಾರಿಸುತ್ತಾ, ಎಲ್ಲೂ ಆಭಾಸವಾಗದಂತೇ ಔದಾರ್ಯದಿಂದ ಧರ್ಮಾಚರಣೆಗಳನ್ನು ನಡೆಸುವ ರೀತಿಯೇ ಅವರನ್ನು ಮೇಲ್ಮಟ್ಟಕ್ಕೆ ಏರಿಸಿತ್ತು.

ಅವರು ನಡೆಸಿದ ಒಂದು ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ, ಆರಂಭದಿಂದ ಅಂತ್ಯದವರೆಗೂ ಇರುವ ಸೌಭಾಗ್ಯ ನನಗೊದಗಿತ್ತು. ಪ್ರಾರ್ಥನೆಯಿಂದಲೇ ಆರಂಭ. ಹಳೆಯ ವಿಗ್ರಹವನ್ನು ತೆಗೆದು ಹೊಸದನ್ನು ಪ್ರತಿಷ್ಠಾಪಿಸುವ ಸನ್ನಿವೇಶದಲ್ಲಿ ಹಳೆಯ ವಿಗ್ರಹವನ್ನು ರಾತ್ರಿಯ ಹೊತ್ತಿನಲ್ಲಿ ಹೊರತೆಗೆದು, ಅದಕ್ಕೆ ಶಾಸ್ತ್ರೋಕ್ತ ಅಂತ್ಯವಿಧಿಗಳನ್ನು ಪೂರೈಸಿ ಅದನ್ನು ನದಿಯಲ್ಲಿ ವಿಸರ್ಜನೆಗೆ ಕಳುಹಿಸಿದ್ದು ಇನ್ನೂ ನೆನಪಿದೆ. ಶಕುನಶಾಸ್ತ್ರದ ರೀತ್ಯಾ, ಹಲವುಕಾಲ ಪೂಜೆಗೊಂಡು ವಿಸರ್ಜಿತವಾದ ವಿಗ್ರಹವನ್ನು ಹಾಗೆ ನೀರಿನಲ್ಲಿ ಹಾಕಿಬರುವಾಗ ಎದುರಾಗಿ ಯಾರಾದರೂ ಬಂದರೆ, ಬಂದವರಿಗೆ ಅನಿಷ್ಟವಂತೆ! ಅದಕ್ಕೇ ರಾತ್ರಿಯಹೊತ್ತೇ ಆ ಕೆಲಸವನ್ನು ಮಾಡಲಾಗುತ್ತದೆ ಎಂದು ತಿಳಿಸಿಹೇಳಿದ್ದರು. ಪಾರ್ಥನೆ, ಮಹಾಸಂಕಲ್ಪ, ಋತ್ವಿಗ್ವರ್ಣನೆ, ದೇವನಾಂದಿ, ಗಣಹೋಮ, ಧ್ವಜಾರೋಹಣ, ಯಾಗಶಾಲಾ ಪ್ರವೇಶ, ಮಂಡಲದರ್ಶನ, ಸಹಸ್ರ ಕಲಶಸ್ಥಾಪನೆ, ನೂತನ ಬಿಂಬ[ಹೊಸಮೂರ್ತಿ]ಸಂಸ್ಕಾರ, ನಾನಾ ಹೋಮಗಳ ಜೊತೆಗೆ ಪ್ರತಿಷ್ಠಾ ಹೋಮ, ಕಲಾವೃದ್ಧಿ ಹೋಮ,  ಶುಭಮುಹೂರ್ತದಲ್ಲಿ ಬಿಂಬ ಪ್ರತಿಷ್ಠೆ, ಪ್ರತಿಷ್ಠಾಂಗ ತ್ರಿಕಾಲ ಸಾತ್ವಿಕ ಬಲಿಗಳು, ಪ್ರತಿಷ್ಟಾಂಗ ಅಷ್ಟಾಂಗಸೇವೆ-ಪಲ್ಲಕ್ಕಿ ಉತ್ಸವ, ಸಹಸ್ರಕಲಶಾಭಿಷೇಕ, ಹವನಗಳ ಪೂರ್ಣಾಹುತಿ, ಮಹಾಮಂಗಳಾರತಿ, ಅವಬೃತ ತೀರ್ಥಸ್ನಾನ, ಧ್ವಜಾವರೋಹಣ, ಆಶೀರ್ಗ್ರಹಣ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಇತ್ಯಾದಿ [ಎಲ್ಲವನ್ನೂ ಹೆಸರಿಸಿಲ್ಲ] ಎಲ್ಲವನ್ನೂ ನೋಡುವ ಅದೃಷ್ಟ ಪಡೆದಿದ್ದೆ ಎನಿಸಿತು. ಪೂಗವೃಕ್ಷದ[ಅಡಕೆ ಮರ] ಮಹತ್ವವನ್ನು ಅವರು ವಿವರಿಸಿದ್ದು ಬಹಳ ಸಂತೋಷ ನೀಡಿತ್ತು. ಕಾರ್ಯಕ್ರಮ ಮುಕ್ತಾಯವಾಗಿ ಪ್ರಸಾದ ವಿತರಿಸುವಾಗ ಅಂಥವರ ಕೈಯ್ಯಿಂದ ಪ್ರಸಾದ ಪಡೆಯುವ ಭಾಗ್ಯಶಾಲಿಯೂ ನಾನಾಗಿದ್ದೆ. ಚಿಕ್ಕ ಹುಡುಗನೆಂದು ಅಸಡ್ಡೆ ಮಾಡದೇ ಅವರು ನಡೆಸಿಕೊಂಡ ರೀತಿ, ತೋರಿದ್ದ ಪ್ರೀತಿ ಇಂದಿಗೂ ನೆನಪಿದೆ. ನಾಲ್ಕು ವರ್ಷಗಳ ಹಿಂದೆ ಶ್ರೀಧರ ಭಗವಾನರ ವರದಹಳ್ಳಿಯ ಆಶ್ರಮದಲ್ಲಿ ಅನಿರೀಕ್ಷಿತವಾಗಿ ಭೇಟಿಯಾಗಿದ್ದೆ. ಅದೇ ಕೊನೆ, ಆನಂತರ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ೯೨ ವಯಸ್ಸಿನವರೆಗೂ ತುಂಬುಕುಟುಂಬದ ಸುಖವನ್ನೂ ಜನಾನುರಾಗವನ್ನೂ ಪಡೆದು ದೇವರನ್ನೇ ಮಾತನಾಡಿಸುವವರು ಎಂಬ ಹೆಗ್ಗಳಿಕೆಗೆ ಪಾತ್ರರಾದ ಅವರಿಗೆ ಲೌಕಿಕವಾಗಿ ನೂರಾರು ಪ್ರಶಸ್ತಿಗಳು ನೀಡಲ್ಪಟ್ಟಿದ್ದವು. ವಾರದ ಹಿಂದೆ ಅಗಲಿದ ಕಟ್ಟೆಭಟ್ಟರಿಗೆ ನನ್ನ ಬಾಷ್ಪಾಂಜಲಿ ಮತ್ತು ನುಡಿನಮನಗಳು. ಮನದ ಮೂಸೆಯ ಭಾವಗಳಿಗೆ ಅಕ್ಷರಗಳ ರೆಕ್ಕೆಕಟ್ಟಿ ಸುಯ್ಯನೆ ಹಾರಿಬಿಡುವಾಗ ಬಂದುನೋಡಿ ಸುಖಿಸುವ ಎಲ್ಲಾ ಓದುಗ ಮಿತ್ರರಿಗೂ ಧನ್ಯವಾದಗಳು.