ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, April 6, 2010

ಬಾಟಲೀ ಪುತ್ರ ಪುರಾಣಂ




ಕುಡಿತವೆಂಬ ದುಶ್ಚಟಕ್ಕೆ ಬಲಿಯಾಗಿ ಅನೇಕರು ಮನೆ-ಮಠ ಮಾರುವಷ್ಟು ಅದಕ್ಕೇ ತಮ್ಮನ್ನು ಮಾರಿಕೊಂಡಿದ್ದಾರೆ. ಅಪ್ಪಿ ತಪ್ಪಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಕುಡುಕನ ಮಡದಿಯಾಗಿ ಕನಸು ಕಟ್ಟಿ ಬಾಳುವ ಹೆಂಡತಿಯ ಗೋಳು ಹೇಳತೀರ. ಕುಡುಕನನ್ನು ತಿದ್ದುತ್ತೇನೆ, ಅವನ ಚಟವನ್ನು ಸಾತ್ವಿಕ ಶಕ್ತಿಯಿಂದ ಬಿಡಿಸುತ್ತೇನೆ ಎಂದು ಹೊರಟು ಅವನನ್ನೇ ಪ್ರೀತಿಸಿ ಮದುವೆಯಾಗಿ, ಮಗುವನ್ನು ಪಡೆದು ಒಂದೆರಡು ವರ್ಷಗಳಲ್ಲೇ ಗಂಡನನ್ನು ಕಳೆದುಕೊಂಡ ಹುಡುಗಿಯೊಬ್ಬಳನ್ನು ನೋಡಿ ಮರುಗಿದ್ದೇನೆ; ಹೌದು ಕುಡುಕರೇ ಹೀಗೆ, ಅವರು ಯಾರಿಗೂ ಬಗ್ಗದ ಅಧುನಿಕ ಕುಡುಕರು. ಹಿಂದೆ ಒಂದು ಕಾಲಕ್ಕೆ ಹಳ್ಳಿಯ ಭಟ್ಟಿ ಸಾರಾಯಿಗಳಿದ್ದವು.ಅವುಗಳನ್ನು ಕುಡಿಯುವವರೂ ಇದ್ದರು, ಅದರ ಪರಿಪಾಠ ಬದಲಿತ್ತು, ಅಲ್ಲಿ ಒಣ ಪ್ರತಿಷ್ಠೆಗಾಗಿ ಸಮೂಹಸನ್ನಿಗೊಳಗಾಗಿ ಕುಡಿಯುತ್ತಿರಲಿಲ್ಲ.ಆದರೆ ಅಂಥವರೂ ಕೂಡ ಸ್ವಲ್ಪ ತಿಳಿಸಿ ಹೇಳಿದರೆ ಬಿಡುವಲ್ಲಿ ಮುಂದಾಗುತ್ತಿದ್ದರು. ಇಂದು ಕುಡಿಯುವುದೂ ಒಂದು ಕಲೆ ! ಕಾರ್ಪೋರೆಟ್ ಕಲ್ಚರ್ ! ಗುಂಡು-ತುಂಡು ಎಂದು ಅನೇಕ ಹುಡುಗರು ಹೇಳುತ್ತಾ ತಿರುಗುವುದನ್ನು ನೋಡಿದ್ದೇನೆ. ಅದೆಲ್ಲಾ ಆದಮೇಲೆ ಅವರಿಗೆ ಇನ್ನೂ ಕೆಲವು ಇಲ್ಲದ್ದು ನೆನಪಾಗುತ್ತವೆ. ದೇಶದಲ್ಲಿ ಅಲೋಪಥಿ ಔಷಧ ಅಂಗಡಿಗಳು ಮತ್ತು ಬಾರ್ ಅಂಡ್ ರೆಸ್ಟಾರೆಂಟ್ ಗಳು ಮಿತಿ ಮೀರಿದ ವೇಗದಲ್ಲಿ ಹೆಚ್ಚುತ್ತಲೇ ಇವೆ. ಎಲ್ಲಿಯವರೆಗೆ ಇವುಗಳ ನಾಯಿಕೊಡೆಯ ರೀತಿಯ ವೇಗದ ಬೆಳವಣಿಗೆ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಕುಡುಕರ, ಅನಾರೋಗ್ಯದಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ನಮ್ಮೆದುರಿಗೆ ಬರುವ ಯಾವ ವ್ಯಕ್ತಿ ಕುಡುಕರ ಸಾಲಿಗೆ ಸೇರುವುದಿಲ್ಲ ಎಂಬುದನ್ನು ಹೇಳುವುದೇ ಕಷ್ಟ, ಅದು ಅಷ್ಟು ಕೆಟ್ಟ ಜನಪ್ರಿಯ ತುಡಿತ ! ಸಂಘ ಸಂಸ್ಥೆಗಳು ಅನೇಕ ಪ್ರಯತ್ನಿಸುತ್ತಾ ಕುಡುಕರ ಚಟಗಳನ್ನು ಬಿಡಿಸಲು ಬಹಳ ವಿಸ್ತ್ರತ ಅಧ್ಯಯನ,ಅನುಸರಣ ಪ್ರಕ್ರಿಯೆಯಲ್ಲಿ ತೊಡಗಿವೆ, ಆದರೂ ಈ ಕುಡುಕ ಅಪ್ರತಿಮ ಕಳ್ಳ ಮನೋಭಾವದವರು. ತಾಯಿ-ಹೆಂಡತಿ-ಮಕ್ಕಳು ಯಾರಲ್ಲಿಯೂ ನಿಜ ಹೇಳದ ಅವರು 'ದೇವರಾಣೆ ಇನ್ನು ಕುಡಿಯುವುದಿಲ್ಲ ' ಎಂದು ಪ್ರತಿಜ್ಞೆ ಮಾಡಿ ಮಗ್ಗುಲಲ್ಲೇ ಮತ್ತೆ ಬಾಟಲಿ ಮಲಗಿಸಿ ಕೊಂಡೇಬಿಡುತ್ತಾರೆ !

ಒಂದುಕಡೆ ಕುಡುಕರ ಸಂಖ್ಯೆ ಜಾಸ್ತಿ ಆಗುವಂತೆ ಪ್ರೇರೇಪಿಸುವ, ಆ ಕೆಟ್ಟಕಲೆಯನ್ನು ಪೋಷಿಸುವ ಲಿಕ್ಕರ್ ಬ್ಯಾರನ್ [ಹೆಂಡದ ದೊರೆಗಳು] ಬೆಳೆಯುತ್ತಲೇ ಇದ್ದಾರೆ. ಅವರುಗಳ ಸಾಮ್ರಾಜ್ಯ ವಿಸ್ತರಣೆ ಸದಾ ಉನ್ನತಿಯಲ್ಲಿದೆ. ಅನೇಕ ಮಹಡಿಗಳ ಹೊಸ ಹೊಸ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ. ಈ ಕಟ್ಟಡಗಳ ಬುನಾದಿಯ ಅಡಿಯಲ್ಲಿ ಲಕ್ಷಾಂತರ ಕುಟುಂಬಗಳ ಕಣ್ಣೀರಿನ ಕಥೆಗಳಿವೆ, ಲಕ್ಷಾಂತರ ಎಳೆಯ ಕುಡುಕರ ಗೋರಿಗಳಿವೆ ! ಇತ್ತ ಕುಡುಕ ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದರೆ ಅತ್ತ ಹೆಂಡದ ದೊರೆಗಳು ಬಿಸ್ನೆಸ್ ಮೀಟಿಂಗ್ ಗಳಲ್ಲಿ ಬ್ಯುಸಿಯಾಗಿರುತ್ತ, ಲಲನೆಯರ ಮಧ್ಯೆ ತೊಳಲಾಡುತ್ತಾ, ಬೇಡದ ಸಂಸ್ಕೃತಿಗಳ ಅಘೋಷಿತ ಹರಿಕಾರರಾಗಿ ವಿಜೃಂಭಣೆಯಿಂದ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆದು ತಾವೂ ಅತಿ ಶ್ರೇಷ್ಠರೆಂಬ ಹೆಗ್ಗಳಿಕೆಯಿಂದ ಕೊಬ್ಬುತ್ತಿದ್ದಾರೆ; ರಾಜ್ಯ ರಾಜ್ಯಗಳನ್ನೇ ಕೊಳ್ಳುವಷ್ಟು
ದುಡ್ಡುಮಾಡಿಕೊಂಡು ಅನೆಕದೇಶಗಳಲ್ಲಿ ವ್ಯವಹಾರ ನಡೆಸುವತ್ತ ಮುನ್ನುಗ್ಗಿದ್ದಾರೆ. ಇಂತಹ ಸಮಾಜ ಘಾತುಕರಿಗೆ,ಹಗಲು ದರೋಡೆಕೋರರಿಗೆ ನಾವು ಗೌರವ ಡಾಕ್ಟರೇಟ್ ಕೊಡುತ್ತೇವೆ,ಕೊಟ್ಟು ಸನ್ಮಾನಿಸುತ್ತೇವೆ. ಇವರು ಚುನಾವಣೆಗಳಿಗೆ ನಿಲ್ಲಲು ಆಸ್ಪದ ಕೊಡುತ್ತೇವೆ, ನಾಳೆ ಒಂದು ದಿನ ಅಂತಹ ಹೆಂಡದ ದೊರೆಗಳ ಸಂಪೂರ್ಣ ಆಳ್ವಿಕೆಗೆ ಒಳಪಡುವ ಪ್ರಜಾಪ್ರಭುತ್ವವೆಂಬ ದುರಂತ ಕಥೆಯೊಂದರ ಹಂದರವನ್ನು ದೂರ ದೃಷ್ಟಿಯಿಂದ ನಾವು ಈಕ್ಷಿಸಬಹುದಾಗಿದೆ. ಇವತ್ತಿನ ನಮ್ಮಂಥವರ ಸ್ಥಿತಿ ಹೇಗಿದೆ ಅಂದರೆ ಬೆಕ್ಕಿಗೆ ಗಂಟೆ ಕಟ್ಟಲಾರದ ಇಲಿಗಳು ನಾವಾಗಿದ್ದೇವೆ. ನಮ್ಮಲ್ಲಿ ಈ ಕೆಟ್ಟ ಶಕ್ತಿಗಳ ವಿರುದ್ಧ ಭಂಡೇಳುವ ಸಂಘಶಕ್ತಿಯಿಲ್ಲ! ಆ ಸಂಘವನ್ನು ಕಟ್ಟುವ ಸಾಧ್ಯತೆ ಮೊದಲೇ ಕಾಣುತ್ತಿಲ್ಲ ! ಇಂತಹ ಕೈಲಾಗದ ಹತಾಶ ಮನೋಸ್ಥಿತಿಯಲ್ಲಿ ಹುಟ್ಟುವ ಹಲವು ಸಾತ್ವಿಕ ಕ್ರೋಧರೂಪಗಳು ಸಾಕಾರಪಡೆದು ಒಂದು ಕೃತಿಯಾಗಿ ಹೊರಬಂದರೆ ಹೇಗೆ? ಅದು ನಮ್ಮೆಲ್ಲಾ ನೊಂದ ಮಾತೆಯರ-ಮಹಿಳೆಯರ ಪರವಾಗಿ ಕುಡುಕರ ಬಗ್ಗೆ, ಅವರನ್ನು ಕುಣಿಸುವ,ಆಡಿಸುವ ಹೆಂಡದ ದೊರೆಗಳ ಬಗ್ಗೆ ಬರೆದ ಹಾಸ್ಯದ ಹೊನಲಾಗಲಿ ಅಲ್ಲವೇ ? ಇಂತಹ ಕೆಟ್ಟ ಸನ್ನಿವೇಶಗಳಲ್ಲಿ ನಮ್ಮ ಹರಕಂಗಿ ಮಾಬ್ಲೇಶ್ವರ ಕವಿ ಬರೆಯತೊಡಗುತ್ತಾನೆ !


ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಸೋಮಕಾಂಡದ ಪೇಯಪರ್ವದ 420 ನೇ ಶ್ಲೋಕದಲ್ಲಿ 8 ನೇ ಉಪಸರ್ಗದಲ್ಲಿ ಉಲ್ಲೇಖವಿದೆ. " ನಭಯಂ ನಾಸ್ತಿ ಸ್ವಭಾವತಃ " ಅಂದರೆ ಕುಡಿತದಲ್ಲಿ ಅತೀವ ಆಸಕ್ತಿಯುಳ್ಳವನಿಗೆ ಯಾವ ಭಯವೂ ನಾಚಿಕೆಯೂ ಇಲ್ಲ ಅವನು ಸದಾ ಅದರಲ್ಲೇ ಮುಳುಗಿ ಸಾಯುವವನಾಗಿರುತ್ತಾನೆ ಎಂದೂ ಅವನೊಳಗಿನ ಹೆಂಡ ಹೊರಗಿನ ಹೆಂಡವನ್ನು ಕರೆದು ಒಳ ಸೇರಿಸಿಕೊಳ್ಳಲು ಹಗಲಿರುಳೂ ಸತತ ಪ್ರಯತ್ನಿಸುತ್ತಿರುತ್ತದೆಂದೂ ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ.

ವನವಾಸ
- ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಕೆಟ್ಟ ದ್ರವಪದಾರ್ಥ ಅವನ ಕಣ್ಣಿಗೆ ಬಿತ್ತು. ಅದರಿಂದ ಬಂದ ಒಂದು ಆರ್ತನಾದ ಅವನಿಗೆ ಕೇಳಿಸಿತು .
ಆರ್ತಸ್ವರ ಕೇಳಿದ ರಾಮ ಅದರ ಬಳಿ ಬಂದು "ಏನಾಯಿತು ?" ಎಂದು ಕೇಳಿದಾಗ ಅತೃಪ್ತ ದ್ರವರೂಪದ ಆತ್ಮ ಹೀಗೆ ಉತ್ತರಿಸಿತು. " ಸ್ವಾಮೀ ರಾಮ, ನಿನ್ನ ಬರುವಿಕೆಗಾಗೇ ಇಷ್ಟು ದಿನ ಕಾದಿದ್ದೆನಪ್ಪಾ, ನನ್ನ ಗುರುತು ಸಿಗಲಿಲ್ಲವೇ? ಲಂಕೆಯಲ್ಲಿ ನಿನ್ನಜೊತೆ ಸಹಸ್ರಾರು ಕಪಿಗಳು ಸೇರಿ ರಾವಣನ ಸಂಹಾರವನ್ನು ಮಾಡುವ ಘಳಿಗೆಯಲ್ಲಿ ರಾವಣನ ಶರೀರದಲ್ಲಿ ಅಡಗಿದ್ದ ಅಸದೃಶ ಶಕ್ತಿ ನಾನಾಗಿದ್ದು, ಆತ ಸೋತು ಉಚ್ಚೆ ಹೊಯ್ದಾಗ ಆ ರೂಪದಲ್ಲಿ ಹೊರಬಿದ್ದು ಬಹಳ ತೊಳಲಾಡಿಬಿಟ್ಟೆ, ಆದರೂ ಬಿಡದೆ ನಿನ್ನ ಕಪಿ ಸೈನಿಕರನೇಕರು ನನ್ನನ್ನು ತುಳಿದು ಜಾರಿಬೀಳುವಂತೆ ಮಾಡಿದೆ. ಆ ಸ್ಥಿಯಲ್ಲಿ ಅದನ್ನರಿತ ನೀನು ಕೋಪದಿಂದ ನನಗೆ ಕೆಟ್ಟ ವಾಸನೆ ಹೊಡೆಯುವ ದ್ರವವಾಗಿ ಬಿದ್ದಿರು ಎಂದು ಶಾಪವಿತ್ತೆ "

ರಾಮ ಆಜ್ಞಾಪಿಸಿದ -" ಆಗಲಿ, ಆದದ್ದೆಲ್ಲ ಒಳ್ಳೆಯದೇ ಅಂತ ತಿಳಿ, ಕಲಿಯುಗದಲ್ಲಿ ಬಾಟಲಿಗಳಲ್ಲಿ ಬರ್ತಿಯಾಗುವ ಮದಿರೆಯಾಗಿ ನಿನ್ನ ವಶರಾಗುವ ಹಲವು ಪಾಪಿಜನರ ವಂಶ ನಿರ್ವಂಶ ಮಾಡಿ ಮರಳಿ ಪಾತಾಳಕ್ಕೆ ಹೋಗು, ಅಲ್ಲಿ ಮುಂದೆ ನೀ ಸುಖದಿಂದಿರು,ಕಾಲಾನಂತರದಲ್ಲಿ ಪ್ರಳಯ ಸಂಭವಿಸಿದ ಮೇಲೆ ಒಳ್ಳೆಯ ರೂಪವನ್ನ ಪಡೆದು ಸ್ವಸ್ಥಾನಕ್ಕೆ ಸೇರು "

ಹರಕಂಗಿ ಮಾಬ್ಲೇಶ್ವರ ಕವಿ ಬರೆದ ಈ ಪುರಾಣದ ಸಂಕ್ಷಿಪ್ತ ರೂಪ ತಮಗಾಗಿ----



[ಚಿತ್ರಗಳ ಋಣ : ಅಂತರ್ಜಾಲ]

ಬಾಟಲೀ ಪುತ್ರ ಪುರಾಣಂ

ಪುರಾಣದ ಆದಿ ಭಾಗದಲ್ಲಿ ಕವಿ ತನ್ನ ಸ್ವಗತದಲ್ಲಿ ........

ವಂದಿಪೆನು ಗಣನಾಥಗೊಂದಿಪೆನು ಶಾರದೆಗೆ ಬಂದ ಭಂಗವ ಕಳೆಯಲ್ಕೆ ಸುಕೃತವ ನೀವ ಕಥೆಯ ಹೊಸೆಯಲ್ಕೆ ಹರಸು ಹರಸೆಂದೆನುತ
ನಮಿಸಿ ನಾರಾಯಣನ ನರನ ಪುರುಷೋತ್ತಮನ ವ್ಯಾಸವಾಲ್ಮೀಕಿಗಳ ಬಳಿಕ ಪೇಳ್ವುದು ಜಯವ

ಪುರಾಣದ ಮಧ್ಯಭಾಗ ಬಹಿರ್ಗತದಲ್ಲಿ .........


ಮೊದಲಂ ಕಿಂಗಫಿಶರ್ ಬಾಟಲಿಂ ಬಗಲೊಳಿಟ್ಟು ಮದ್ದಾನೆ ಥರದಿಂದ ಮುನ್ನುಗ್ಗುತಂ ಎದುರಿಗೆ ಬಂದವಗೆಲ್ಲ ಗಣನೆಗಂ ತೆಗೆದುಕೊಳಲೇನಪ್ಪನೆ ಕಡುಪಾಪಂ ಬರ್ಪುದು ಅದಕಂ ಮರೆತು ತಳ್ಳುತ ಮುಂದೆ ಮುಳ್ಳು ಹಂದಿಯಥರದಿ ದುರುಗುಡುತಂ ಮುದದಿ ತಾನೊಬ್ಬನೇ ನಸುನಗುತಿದ್ದ ಹರಹರಾ ಹರಕಂಗಿ ಮಾಬ್ಲೇಶ್ವರಾ ||

ವೋಡ್ಕಾ ವಿಸ್ಕಿಯದೇನು ಬಂತು ಮಹಹಾ ರಮ್ಮೇನು ಜಿನ್ನೆನ್ನುತಂ ಅಲ್ಲಿ ವೊಡಾಫೋನಿಲ್ಲವೇ ಕುಂತು ಕರೆಯಲವರ್ಗಳಂ ಡೋರು ಸಪ್ಲೈ ಮಾಳ್ಪರು ಮಿಗೆ ಬಿಲ್ಲಕೂಡಮವರೇ ತರ್ಪರು ಅನಿತರೊಳ್ ದ್ವೈತಮದ್ವೈತವಾಗಿ ವಿಶಿಷ್ಟಾದ್ವೈತಮಾಗಿ
ಹರಿಹರ ಭೇದವೆಣಿಸದೆ ಗಟಗಟನೆ ಕುಡಿದು ಉಮ್ಮಳಿಸಿದರೆ ಇಂದ್ರನ ಒಸಗೆ ಹತ್ತಿರವೆಂದನೈ ಹರಹರಾ ಹರಕಂಗಿ ಮಾಬ್ಲೇಶ್ವರಾ ||

ಮಲ್ಯರ್ ಖೋಡೆಗಳಾದಿ ಹಲವರ್ ನಿಸ್ವಾರ್ಥದಿಂ ಜನತೆಗಂ ಬಹು ಪ್ರೀತಿಲಿ ಕೊಡಮಾಳ್ಪರ್ ತಾವು ಹಲವು ರೂಪಂಗಳಂ ನೀಡುತಂ ಬಸಿದು ಕೊಡಲಾ ಬಾಟಲಿಯೋಳ್ ಹೊಸಲೋಕಕೆಲ್ಲ ಕರೆದೊಯ್ವ ಕುಸುಮಕೋಮಲಾಂಗಿಯರ ಚಿತ್ರವಂ ಬರೆದು ರಸ್ತೆಯಿಕ್ಕೆಲಕಂಟಿಸಲ್ಕೆ ನಮಗದನಂ ನೋಡುತ ನೆಶೆಬರ್ಪುದು ಇದು ಪಾನಂಗಳೊಳಗೆ ಅತಿ ಶ್ರೇಷ್ಠಮೆಂದ ನೋಡಾ ಹರಹರಾ ಹರಕಂಗಿ
ಮಾಬ್ಲೇಶ್ವರಾ ||

ಅವ ಧರಿಸಿ ಬಾಟಲಿಯ ಕೈಯ್ಯಲಿ ಹದನೆ ತಿರುಗಿಸಿ ಬೂಚು-ಮುಚ್ಚಳ ತೆಗೆದು ಬಿಸುಡುತ ಮೂಸುತಹಹ ಪರಿಮಳವು ಘನವೆನುತಂದದಲಿ ಸರಕ್ಕನೆ ಗ್ಲಾಸೊಳದನಂ ಬಗ್ಗಿಸುತ ಮಿಗೆ ಐಸು ಪೀಸುಗಳನೆಲ್ಲ ತೆಗೆತಂದು ಟಣಕು ಟಣಕು ಟಣಕೆನೆ ಅದರೊಳಿಟ್ಟು ಮೂರಾವರ್ತಿ ಎತ್ತಿ ಬಾಯ್ಗಿಳಿಸೆ ನಿಡುಸುಯ್ದು ಜಗವನೆ ಮರೆತ ವಿಚಿತ್ರವಂ ಕಂಡು ನಡುಗಿದ ನಮ್ಮ ಶಂಭೋ ಮಹಾದೇವ ನೋಡಾ ಹರಹರಾ ಹರಕಂಗಿ ಮಾಬ್ಲೇಶ್ವರಾ ||

ಸಾಟಿಯುಂಟೆ ಮೂಜಗದಿ ಎನಗೇನುಕಮ್ಮಿ ಎಂದೆನುತ ಮಿಗೆ ತೂರಾಡುತಂ ಹಾರಿ ಹಾರಿ ತನ್ನಿರವನೆ ಮರೆತು ಥಕತೈ ಎನಲಂ ಸ್ವರ್ಗದಲಿರ್ಪ ಮಹಾಮಹಿಮ ಭರತಮುನಿ ಕಿಟಕಿಯಿಂದಾಚೆ ಗಾವುದ ಗಾವುದ ದೂರ ದೃಷ್ಟಿ ಬೀರೆ ಕಂಡನಪಸವ್ಯ
ಕುಂಡೋದರನ ಭರತನಾಟ್ಯವಂ ಅಯ್ಯೋ ಎಂದೆನುತ ಹಣೆಯಂ ತಾಂ ಚಚ್ಚಿಕೊಂಡ ನೋಡಾ ನೋಡಾ ಹರಹರಾ ಹರಕಂಗಿ ಮಾಬ್ಲೇಶ್ವರಾ ||

ಒಂದಿನಿತು ಕಾಸಿಲ್ಲದಲೇ ಮುಗಿದಾದೊಂದುದಿನ ಪತ್ನಿಯಂ ಅಂಗಳದಿ ಎಳೆತಂದು ಭಕ್ತಿಯಿಂ ಮಂಗಳದ ಸೂತ್ರವಂ ಸರ್ರನೆ ಬಲಗೈಲಿ ತಾಂ ಪಿಡಿದು ಹರಿಯಲ್ಕೆ ಕೆನಲುತ ಕೆಂಡವಾದಳು ಗರತಿ ಗಂಡನ ಗುಂಡಿನಾಟದಲೀಂ ಮಿಗೆ ನಂಗಾನಾಚು ಮಾಡೆಂದ ಭೂಪನ ಕಂಡು ನಡುಗಿದರ್ ಪಕ್ಕದೊಳಿರ್ಪ ಅಂಗನೆಯರೆಲ್ಲ ಸೇರುತೈತಂದು ಭಂಗವ ಬಿಡಿಸಲ್ಕೆ ಎಳೆದೊಯ್ದರದೋ ಗೆಳತಿಯ ಮಾನಮಂ ಮುಚ್ಚುತ ನೋಡಾ ಹರಹರಾ ಹರಕಂಗಿ
ಮಾಬ್ಲೇಶ್ವರಾ ||

ಫಿಜಿ ಅಮೇರಿಕ ಸ್ವಿಟ್ಜರ್ ಲೆಂಡು ಜೆಪಾನು ಎಂತೆಲ್ಲ ತೂಫಾನಿನಂತೆ ಸಗ್ಗದ ವಿಮಾನಮಂ ಏರಿ ಅಂಬರಕೇರಿ ತೊಡೆಯಲಿ ಲ್ಯಾಪುಟಾಪಿಡುತಂ ಪಕ್ಕದಿ ಚಂದಿರಾನನೆಯರ ಸೆಳೆದುಕೊಳುತಂ ಮುಸಿ ಮುಸಿ ನಗುತ ಬಿಳಿ ಮಂಗನಂ ತೆರದಿ ತುಸು ಬಿಟ್ಟ ಗಡ್ದವಂ ಬರಿದೆ ಸ್ಟೈಲಿಗೆ ತುರಿಸಿಕೊಳುತಂ ವಸುಮತಿಯ ಮಡಿಲಲ್ಲಿ ಬಿದ್ದಿಹ ಹಲವರ ಕಸುವು ತನದೆಂದೆನುತ ಉಸುರಿ ನಕ್ಕನು ಹೆಂಡದೊರೆ ತಾಂ ನೋಡಾ ಹರಹರಾ ಹರಕಂಗಿ
ಮಾಬ್ಲೇಶ್ವರಾ ||

ಫಲಶೃತಿ....

ಭಕ್ತಿಯಿಂದೀಪುರಾಣಮಂ ಕೇಳ್ವರ್ಗೆ ಬೋಧಿಪರ್ಗೆ ಮಿತ್ರರಂದದಿಂ ಈ -ಮೇಲ್ ಮಾಳ್ಪರ್ಗೆ ಶಕ್ತ್ಯಾನುಸಾರ ಸತತಂ ನಕ್ಕು ಮತ್ತೆಯೀಪುರಾಣಮಂ ಎತ್ತಿಟ್ಟು ಕೊಡಲ್ಕೆ ಹಲವರ್ಗೆ ಬೇಕಾದ ರೀತಿ ಓದಿ ಸಂತಸವಂ ಪಡೆಯಲ್ಕೆ ಮುಕ್ತದ್ವಾರದಿ ಗೂಗಲ್ ಬಜ್ಜಿನೋಳ್ ಗುಜ್ಜಾಡಿಪರ್ಗೆ ಮಿದಲ್ಲದೇ ನಜ್ಜುಗುಜ್ಜಾಗಿ ಕನಸು ಕಳಕೊಂಡ ಗರತಿಯರ್ಗೆ ಬೊಜ್ಜುದೇಹವಂ ದಣಿಸದೆ ಗಣಕಯಂತ್ರದ ಮುಂದೆ ಕುಂತಿರ್ಪ ಸಕಲರ್ಗೆ ಸದಾ ಸನ್ಮಂಗಳಮಪ್ಪುದು

ಪುರಾಣದ ಅಂತ್ಯಭಾಗ ಪುನಃ ಸ್ವಗತದಲ್ಲಿ .......

ಜಯಜಯಮೆನುವೆ ಸರಸತಿಗೆ ಜಯಮು ಪಾರ್ವತಿಪತಿಗೆ ಜಯಮು ಲಕ್ಷ್ಮೀರಮಣ ಗೋವಿಂದಗೇ ಭಯವ ಕಳೆಯಲ್ಕೆರಗಿ ಹನುಮ ಮೂರುತಿಗೆ ಸುಮನಸಗೆ ಸ್ಕಂದ ಸಿರಿಗಣನಾಥಗೇ