ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, November 22, 2010

ಸಾರಥಿಯೆ ನಿಲ್ಲೊಮ್ಮೆ .....


ಸಾರಥಿಯೆ ನಿಲ್ಲೊಮ್ಮೆ .....

ದೇಹದೀ ಕೊಳಲಿನಲಿ ನವರಂಧ್ರಗಳ ಕೊರೆದು
ಜೀವ ನುಡಿಸಿದ ತನ್ನ ಭಾವಗಳು ಹರಿದೂ
ಸಂಸಾರ ಸಾಗರದಿ ನೌಕೆನಡೆಸುತಲರಿದು
ಸುಖ ದುಃಖಗಳೀಯುತ್ತ ತನ್ನೆಡೆಗೆ ಕರೆದೂ


ರಾಜ್ಯಭಾರವ ನಡೆಸಿ ತಾ ಕುಳಿತು ಕಾಣದಲಿ
ಒಂದರೊಳಗೊಂದಾಗಿ ಮೆರೆವುದನು ಕಂಡೆ
ಮಂದಬುದ್ಧಿಗೆ ಕವಿದಿರುವಹಂಕಾರದಲಿ
ಕಂಡರೂ ಕಾಣದಂತಾಗಿಹುದನುಂಡೆ

ಆರೂ ವೈರಿಗಳಿರದ ಬದುಕಿನೀ ದಾರಿಯಲಿ
ಆರು ಅಶ್ವಗಳಿರಿಸಿ ಚಾವಟಿಯ ಬೀಸಿ
ಸಾರಥಿಯೆ ಎಲ್ಲಿಗದು ಪಯಣವೀ ವೇಗದಲಿ ?
ಮಾರುತಿಯ ಮೀರಿಸುವ ರೀತಿಯಲಿ ನಡೆಸಿ

ರಾಗ ಹಲವನು ನುಡಿಸಿ ಕೊಳಲ ಮಾಯೆಯಲಿರಿಸಿ
ಭೋಗದಾ ವೈಭೋಗ ತೆರೆತೆರೆದು ತೋರಿ
ತ್ಯಾಗಮಾಡುತ ಮುರಳಿ ತೊರೆವೆ ಮತ್ತೊಂದರಸಿ
ಯೋಗ ಬಯಸುವೆ ನಿನ್ನ ದರುಶನವ ಕೋರಿ

7 comments:

  1. ಎರಡು ಭಾರಿ ಓದಿದೆ. ಮತ್ತೊಂದು ಭಾರಿ ಓದಲೇ ಬೇಕು.ನಿಮ್ಮ ವಿವರಣೆ ಇದ್ದರೆ ಚೆನ್ನಿತ್ತು.

    ReplyDelete
  2. ಭಟ್ಟರೇ, ಎಲ್ಲವೂ ಆ ಸಾರಥಿಯ ಕೈಯ್ಯಲ್ಲಿದೆ, ನಮ್ಮ ಬದುಕಿನ ಜಟಕಾಬ೦ಡಿಯ ಸೂತ್ರ ಅವನಲ್ಲಿದೆ. ನಿಮ್ಮ ಕವನ ಚೆನ್ನಾಗಿದೆ.

    ReplyDelete
  3. ಪರಾಂಜಪೆಯವರ ಮಾತು ಸಮಂಜಸವಾಗಿದೆ.

    ReplyDelete
  4. ಮೇಲಿನ ಎರಡು ಪ್ರತಿಕ್ರಿಯೆಗಳನ್ನು ಅವಲೋಕಿಸಿದಾಗ ನನ್ನ ಮೊದಲ ಪ್ರತಿಕ್ರಿಯೆಯು ಕವನವು ಅರ್ಥವಾಗುವುದಿಲ್ಲ ಎಂಬ ಅರ್ಥದಲ್ಲಿ ತೆಗೆದುಕೊಳ್ಳಲಾಗಿದೆ. ಆದರೆ ನನ್ನ ಅನಿಸಿಕೆಯಾದರೋ ಕವನವನ್ನು ಆಳಕ್ಕಿಳಿದು ಅರ್ಥ ಮಾಡಿಕೊಳ್ಳಬೇಂಬುದಾಗಿದೆ.ಶ್ರೀ ಭಟ್ಟರ ಕವನಗಳನ್ನು ಅತ್ಯಂತ ಆಸಕ್ತಿಯಿಂದ ನಿರೀಕ್ಷಿಸುವ ನಾನು ಈ ಕವನದ ಹೆಚ್ಚುಗಾರಿಕೆಗಾಗಿ ಅದರ ವಿವರಣೆ ಕೊಟ್ಟಿದ್ದರೆ ನನ್ನಂತಹ ಸಾಮಾನ್ಯನಿಗೆ ಸುಲಭವಾಗುತ್ತಿತ್ತೆಂದು ಅರಿಕೆಮಾಡಿಕೊಂಡೆನಷ್ಟೆ.ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ನನ್ನ ಆತುರದ ಅಕ್ಷರಗಳು ಸೋತಿರುವುದಕ್ಕಾಗಿ ವಿಷಾದಿಸುವೆ.

    ReplyDelete
  5. ಶ್ರೀಧರರೇ, ತಮ್ಮ ಆತುರದ ಶಬ್ದಗಳನ್ನು ನಾನೂ ಹಾಗೇ ಅಂತಲೇ ಗ್ರಹಿಸಿದ್ದೇನೆ, ಇದರಿಂದ ನಿಮಗೆ ಅರ್ಥವಾಗಲಿಲ್ಲ ಎಂಬುದು ನನಗನಿಸಿದ್ದಲ್ಲ, ಹಾಡಿನ ತಾತ್ಪರ್ಯ ಹೀಗಿದೆ : ದೇಹವೇ ಕೊಳಲೆಂದು ತಿಳಿದರೆ ನವರಂಧ್ರಗಳು ಅದರ ರಂಧ್ರಗಳಾಗುತ್ತವೆ, ದೇಹದ ಒಳಗೆ ಆತ್ಮರೂಪದಲ್ಲಿ ಕುಳಿತು ನಮ್ಮನ್ನು ನಡೆಸುವ ಪರಮಾತ್ಮ ಎಲ್ಲಿ ಹೇಗೆ ಕುಳಿತಿರುತ್ತಾನೆ ಎಂದು ತಿಳಿಯುವುದಿಲ್ಲ ಅಲ್ಲವೇ? ತಾನು ಕುಳಿತು ನಮ್ಮನ್ನು ಆತನಿಗೆ ಬೇಕಾದ ರೀತಿಯಲ್ಲಿ ನುಡಿಸುತ್ತಾನೆ; ನಡೆಸುತ್ತಾನೆ. ಅರಿಷಡ್ವರ್ಗಗಳನ್ನು ಕುದುರೆಗಳನ್ನಾಗಿ ಕಂಡಿರುವ ಹಾಡಿನಲ್ಲಿ ಆತನನ್ನೇ ಸಾರಥಿಯನ್ನಾಗಿ ಕಂಡಿದ್ದೇನೆ. ಎಲ್ಲಿಗೋ ಜೀವನರಥವನ್ನು ನಡೆಸುವ ಆತ ಊಸಿದ ಕೊಳಲನ್ನು[ದೇಹವನ್ನು] ತನಗಿಚ್ಛೆಬಂದಾಗ ಅಲ್ಲೇ ಬಿಟ್ಟು [ದೇಹ ವಿಸರ್ಜಿಸಿ] ಹೊರಟು ಮತ್ತೊಂದು ಹೊಸ ದೇಹವನ್ನು ಸೇರಿಕೊಳ್ಳುತ್ತಾನೆ. ಆತನಲ್ಲಿ ನನ್ನ ಪ್ರಾರ್ಥನೆ ಓ ನನ್ನಾತ್ಮದಿ ಕುಳಿತ ಸಾರಥಿಯೇ ನಿನ್ನ ನಿಜರೂಪ ದರ್ಶನಮಾಡುವ ಯೋಗ ನನಗೆ ಬರಲಿ ಎಂದು.--ಇದು ಸ್ಥೂಲದಲ್ಲಿ. ಇನ್ನು ಆಳಕ್ಕೆ ಹೋದರೆ ಹಲವು ಗಹನವಾದ ಅರ್ಥವನ್ನು ನೀವೇ ಅವಲೋಕಿಸಿ ವಿಷದೀಕರಿಸಬಹುದು, ನಮಸ್ಕಾರ.

    ಪ್ರತಿಕ್ರಿಯಿಸಿದ ಎಲ್ಲರಿಗೂ ನಮಸ್ಕಾರಗಳು

    ReplyDelete
  6. ಹಿತವಾಯ್ತು,
    ನಮಸ್ಕಾರ

    ReplyDelete
  7. ತುಂಬಾ ಅರ್ಥಪೂರ್ಣವಾಗಿದೆ.. ಮೊದಲನೆಯ ಸಾಲುಗಳಾದ "ದೇಹದೀ ಕೊಳಲಿನಲಿ ನವರಂಧ್ರಗಳ ಕೊರೆದು,ಜೀವ ನುಡಿಸಿದ ತನ್ನ ಭಾವಗಳು ಹರಿದೂ" ಇವು ಶುರುವಿನಲ್ಲೆ ಉತ್ತಮ ಹೋಲಿಕೆಯಿಂದ ಮನಸೆಳೆಯುತ್ತದೆ.. ನೀವು ನೀಡಿದ ವಿವರಣೆ ಇನ್ನು ಚೆನ್ನಾಗಿ ಅರಿಯುವಲ್ಲಿ ಸಹಾಯಕವಾಯಿತು.. ಧನ್ಯವಾದಗಳು!

    ReplyDelete