ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, November 24, 2010

ದಿ| ಶ್ರೀ ಕೆರೆಮನೆ ಶಂಭು ಹೆಗಡೆಯವರ ಮರೆಯಲಾಗದ ಪಾತ್ರಗಳು


ದಿ| ಶ್ರೀ ಕೆರೆಮನೆ ಶಂಭು ಹೆಗಡೆಯವರ ಮರೆಯಲಾಗದ ಪಾತ್ರಗಳು

ಯಕ್ಷರಂಗದ ಕೆಲವು ಪಾತ್ರಗಳನ್ನು ಕೆಲವರು ಮಾತ್ರ ಸಮರ್ಥವಾಗಿ ನಿಭಾಯಿಸಬಲ್ಲರು. ಹೇಗೆಂದರೆ ಅವರು ಅಭಿನಯಿಸುವ ಪಾತ್ರ ನಿಜವಾಗಿಯೂ ಅದು ಪಾತ್ರವಲ್ಲ ಬದಲಾಗಿ ಅದೇ ವ್ಯಕ್ತಿ ನಮ್ಮ ಕಣ್ಣಮುಂದಿರುವಂತೆ ಅನಿಸುತ್ತದೆ. ಆ ಯಾ ವ್ಯಕ್ತಿಗಳು ಆ ಯಾ ಪಾತ್ರಗಳಿಗಾಗೇ ಹುಟ್ಟಿಬಂದಿದ್ದರೋ ಎಂಬ ಸಂದೇಹ ಕೂಡ ಬಾರದೇ ಇರುವುದಿಲ್ಲ. ಕನ್ನಡ ನೆಲದ ಅಷ್ಟೇ ಏಕೆ ಭಾರತದ ಸರ್ವ ಶ್ರೇಷ್ಠ ಕಲಾ ಪ್ರಾಕಾರಗಳಲ್ಲಿ ಯಕ್ಷಗಾನ ತನ್ನ ವಿಶಿಷ್ಟವಾದ ಛಾಪು ಒತ್ತಿದ್ದರೆ ಅದಕ್ಕೆಲ್ಲ ಈ ಮಹನೀಯರು ನಿರ್ವಹಿಸಿದ ಪಾತ್ರಗಳೂ ಕಾರಣ ಎಂದರೆ ತಪ್ಪಾಗಲಾರದೇನೋ. ಇವತ್ತು ಅಂತಹ ಒಂದೆರಡು ಸನ್ನಿವೇಶಗಳನ್ನು ನಿಮ್ಮೆಲ್ಲರಲ್ಲಿ ಹಂಚಿಕೊಳ್ಳಲು ಅಪೇಕ್ಷಿಸಿ ಹೀಗೆ ಬಂದಿದ್ದೇನೆ.

ಕಣ್ಣೀರಿಳಿಸುವ ದೃಶ್ಯಗಳಿಗಿಂತಲೂ ಮೊದಲು ಶಶಾಂಕ್ ಎಂಬ ಈ ಬಾಲ ಪ್ರತಿಭೆಯನ್ನು ನೋಡಿ, ಇಷ್ಟು ಎಳವೆಯಲ್ಲೇ ಆ ಕುಣಿತ, ಹಾವ ಭಾವ:ಪುಟಾಣಿಗೊಂದು ಚಪ್ಪಾಳೆ ತಟ್ಟಿ ಭಳಿರೇ ಬಾಲಕ || ದೀರ್ಘಾಯುಷ್ಮಾನ್ ಭವ || ಎಂದು ಹರಸಿ ಮುನ್ನಡೆಯುತ್ತಿದ್ದೇನೆ.

ಪೌರಾಣಿಕ ಕಥಾಭಾಗಗಳಲ್ಲಿ ಸತ್ಯವೇ ಮೂರ್ತಿವೆತ್ತ ರಾಜಾ ಸತ್ಯಹರಿಶ್ಚಂದ್ರ, ತನ್ನ ದೌರ್ಭಾಗ್ಯದಿಂದ ದೇಶಬ್ರಷ್ಟನಾದ ನಳ-ಬಾಹುಕ, ಮಹಾಭಾರತದ ದಾನಶೂರ ಕರ್ಣ, ರಾಮ ನಿರ್ಯಾಣದ ಶ್ರೀರಾಮ, ಪಾದುಕಾ ಪಟ್ಟಾಭಿಷೇಕದ ದಶರಥ.....ಹೀಗೇ ಈ ಕೆಲವು ಪಾತ್ರಗಳನ್ನು ದಿ| ಶ್ರೀ ಕೆರೆಮನೆ ಶಂಭುಹೆಗಡೆಯವರು ನಿರ್ವಹಿಸುತ್ತಿದ್ದ, ಪೋಷಿಸುತ್ತಿದ್ದ ರೀತಿಯೇ ಬೇರೆ. ಅಲ್ಲಿ ಅಭಿನಯಕ್ಕಿಂತ ಭಾವನೆಗೆ ಬಹು ಪ್ರಾಧಾನ್ಯತೆ. ಅಂತಹ ಭಾವನಾಪ್ರಧಾನ ಸಂಗತಿಗಳನ್ನು ಪ್ರೇಕ್ಷಕರೆಲ್ಲ ಕಣ್ಣೆವೆಯಿಕ್ಕದೇ ಮೈಯ್ಯೆಲ್ಲಾ ಕಿವಿಯಾಗಿ ಕಾದು ಕುಳಿತು ನೋಡುವಂತೇ ನಡೆಸಿಕೊಡುತ್ತಿದ್ದ ಮಹಾನುಭಾವ ಶಂಭಣ್ಣನ ನೆನಪು ಮರುಕಳಿಸಿ, ಮನದ ಭಾವ ನೀರಾಗಿ ಕಣ್ಣಾಲಿಗಳಲ್ಲಿ ಹರಿದಾಗ ಅವರಿಗೊಮ್ಮೆ ವಂದಿಸಲೋಸುಗ ಬರೆಯುತ್ತಿದ್ದೇನೆ. ಈ ಮೇಲೆ ಹೇಳಿದ ಎಲ್ಲಾ ಪಾತ್ರಗಳಲ್ಲಿ ಅವರ ಭಾವತಲ್ಲೀನತೆ, ಭಾವತನ್ಮಯತೆ, ಆ ಅಸ್ಖಲಿತ ಮಾತುಗಳು, ನಿರರ್ಗಳವಾಗಿ ಹರಿಯುವ ಕಥೆಗೆ ಪೂರಕವಾದ ಜ್ಞಾನಧಾರೆ ಕುಳಿತ ಎಲ್ಲಾ ಪ್ರೇಕ್ಷಕರ ಕಣ್ಣಲ್ಲೂ ನೀರು ತರಿಸುತ್ತಿದ್ದವು. ಕಣ್ಣೀರು ತರಿಸುವ ಪಾತ್ರಗಳೇ ಅವುಗಳಾದರೂ ಜನ ಮತ್ತೆಮತ್ತೆ ಅದನ್ನೇ ನೋಡಲು ಬಯಸುತ್ತಿದ್ದರು, ಮೇಲಾಗಿ ತಮ್ಮ ಜೀವನದ ಘಟನೆಗಳಿಗೂ ಆ ಪಾತ್ರಗಳಿಗೂ ತಾದಾತ್ಮ್ಯತೆ ಕಂಡು ತಮ್ಮ ನೋವನ್ನು ಅಂದು ಅಲ್ಲಿ ಕಣ್ಣೀರು ಹರಿಸುವುದರ ಮೂಲಕ ನೊಂದ ಮನವನ್ನು ಹಗುರಗೊಳಿಸಿಕೊಳ್ಳುತ್ತಿದ್ದರು.

ನಾವೆಲ್ಲಾ ಅಂದು ಚಿಕ್ಕವರೇ ಆಗಿದ್ದರೂ ಆ ಪಾತ್ರಗಳು ಸೃಜಿಸಿದ ಚಿತ್ರಣ, ಕೆರಳಿಸಿ ಮನದೊಳಕ್ಕಿಳಿದ ಭಾವನೆಗಳು ಇಂದಿಗೂ ಜೀವಂತ, ನಾವಿರುವವರೆಗೂ ಅವು ಜೀವಂತ. ಬಹುಶಃ ಎಲ್ಲಾ ಮಕ್ಕಳಿಗೂ ಎಳವೆಯಲ್ಲಿ ಇಂತಹ ಪುಣ್ಯಕಥಾಭಾಗಗಳ ಅಭಿನಯವನ್ನು ಯಕ್ಷಗಾನದಲ್ಲಿ ನೋಡಲು ಅದೂ ಇಂತಹ ಕಲಾವಿದರು ನಿರ್ವಹಿಸಿದ್ದನ್ನು ಕಾಣಲು ಸಾಧ್ಯವಿಲ್ಲ. ಆ ದಿಸೆಯಲ್ಲಿ ನಾವು ಪಡೆದುಬಂದ ಪುಣ್ಯ ನಮಗೆ ಆ ಕಾಲಕ್ಕೆ ಇಂತಹ ದೃಶ್ಯಗಳನ್ನು ಕಣ್ಣಾರೆ ನೋಡುವ ಅವಕಾಶ, ಅನುಕೂಲ ನಮಗೆ ದೊರೆಯಿತು. ಮಹಾನುಭಾವರಾದ ನಮ್ಮ ಹಿರಿಯರು ಅದಕ್ಕೆ ಅನುಮತಿಯಿತ್ತು, ಅಗತ್ಯ ಸಹಕಾರವನ್ನೂ ಇತ್ತು, ನಾವು ಪೂರ್ಣರಾತ್ರಿ ಅದನ್ನು ನೋಡಲಾಗದೇ ಮಧ್ಯೆ ಮಧ್ಯೆ ನಿದ್ದೆಮಾಡಿದರೂ ನಮ್ಮನ್ನು ಪಕ್ಕದಲ್ಲೇ ಕೂರಿಸಿಕೊಂಡು ತೋರಿಸುವ ಸಾಹಸಮಾಡಿದರು, ಈ ವಿಷಯದಲ್ಲಿ ನಾವು ಅವರಿಗೆ ಮೊದಲಾಗಿ ಋಣಭಾರಿಗಳು.

ಈಗ ಶ್ರೀಯುತ ಶಂಭುಹೆಗಡೆಯವರ ಹರಿಶ್ಚಂದ್ರನ ಪಾತ್ರದ ಕೆಲವು ತುಣುಕುಗಳನ್ನು ಆಸ್ವಾದಿಸೋಣ ಬನ್ನಿ :


ಶ್ರೀಯುತರು ಈ ಎಲ್ಲಾ ಪಾತ್ರಗಳಿಗೆ ಜೀವರಸ ತುಂಬುತ್ತಿದ್ದುದು ಅವರ ಸಾಹಿತ್ಯಕ ಮಾತುಗಾರಿಕೆಯಿಂದ. ಆಹಾ ....ಎಂತಹ ಸುಂದರ, ಸ್ಪಷ್ಟ ಮಾತುಗಳವು! ಮಾತು ಆಡಿದರೆ ಮುತ್ತು ಉದುರಿದಂತೇ. ಎದುರಿನ ಪಾತ್ರಧಾರಿಗೇ ಕಣ್ಣಲ್ಲಿ ನೀರುಹರಿಸುವ ತಾಕತ್ತು ಅವರಿಗಿತ್ತು. ಯಕ್ಷಗಾನದ ವಿಶೇಷವೆಂದರೆ ಇಲ್ಲಿ ಮಾತುಗಳನ್ನು ಬಾಯಿಪಾಠ ಮಾಡಿ ಉಚ್ಚರಿಸುವುದಿಲ್ಲ, ಬದಲಾಗಿ ಸನ್ನಿವೇಶಕ್ಕೆ ತಕ್ಕಂತೇ ಪಾತ್ರಧಾರಿಯೇ ಅದನ್ನು ಭರಿಸಬೇಕು. ಇಲ್ಲಿ ಪಾತ್ರಧಾರಿಯ ಓದಿನ ಆಳ-ಅಗಲ-ವಿಸ್ತಾರದ ವಿಸ್ತರವನ್ನು ನಾವು ಅವಲೋಕಿಸಿಬಹುದಾಗಿದೆ. ಹೆಗಡೆಯವರು ದಿನಂಪ್ರತಿ ಓದುತ್ತಿದ್ದರು. ಸಮಕಾಲೀನ ಮತ್ತು ಪೂರ್ವದ ಹಲವು ಪುಸ್ತಕಗಳನ್ನು ಬಿಡುವಿದ್ದಾಗ ಓದುವುದು ಅವರ ಅಭ್ಯಾಸವಾಗಿತ್ತು. ಪಾತ್ರವನ್ನು ಆಳಕ್ಕೆ ಇಳಿದು ಆ ದಿನಗಳಲ್ಲಿ ಆ ವ್ಯಕ್ತಿ ಹೇಗಿದ್ದಿರಬಹುದು ಎಂಬುದನ್ನು ಮೊದಲೇ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತಿದ್ದರು. ಉದಾಹರಣೆಗೆ ಹರಿಶ್ಚಂದ್ರ ತನ್ನ ಹೆಂಡತಿ ಸತ್ತ ಮಗನನ್ನು ಹೊತ್ತುಕೊಂಡು ಸ್ಮಶಾನಕ್ಕೆ ಬಂದಾಗಿನ ದೃಶ್ಯವನ್ನು ಅವರು ಮನಸಾ ಅನುಭವಿಸಿ ಆ ಮೂಲಕ ಅವರೂ ಅಳುತ್ತ ಪ್ರೇಕ್ಷಕರಿಗೆ ಉಣಬಡಿಸುತ್ತಿದ್ದರು. ಮಗನನ್ನು ಕಾಡಿಗೆ ಕಳುಹಿಸಿದ ಅನಿವಾರ್ಯತೆಯನ್ನು ಆ ಸಂದಿಗ್ಧವನ್ನು ಅನುಭವಿಸುವ ದಶರಥ ನಮ್ಮೆದುರಿಗೇ ಸಾಯುತ್ತಿದ್ದಾನೇನೋ ಎಂದೆನಿಸುತ್ತಿತ್ತು. ತಾಯ ಪ್ರೀತಿಯನ್ನೂ ಕಳೆದುಕೊಂಡು, ಹೆತ್ತ ಮಗ ವೃಷಸೇನನನ್ನೂ ಕಳೆದುಕೊಂಡು ರಣರಂಗದಲ್ಲಿ ದುಃಖಿಸುವ ಕರ್ಣನನ್ನು ನೋಡಿದಾಗ ಆತ ತನ್ನೆದೆಯಲ್ಲಿರುವ ಅಮೃತಕಲಶವನ್ನು ಹೊರತೆಗೆದು ಕೊಡುವಾಗಿನ ದೃಶ್ಯ ಕರ್ಣ ನಮ್ಮೆದುರಲ್ಲೇ ಇದ್ದಾನೇನೋ ಎಂಬಂತಿರುತ್ತಿತ್ತು. ಅಂತಹ ಕರ್ಣನ ಪಾತ್ರದ ಎರಡು ತುಣುಕಗಳನ್ನು ನೋಡಿ :


ಕಾರ್ಕೋಟಕ ಸರ್ಪ ಕಚ್ಚಿದ ನೆಪದಿಂದ ನಳಮಹಾರಾಜ ಬಾಹುಕನಾಗಿ, ದೇಶಬ್ರಷ್ಟನಾಗಿ ಅಲೆಯುತ್ತಾ ಅಲೆಯುತ್ತಾ ತನ್ನ ಆಪ್ತ ಸ್ನೇಹಿತನಾದ ಋತುಪರ್ಣ ಮಹಾರಾಜನ ಆಸ್ಥಾನಕ್ಕೆ ಬಂದು ಆತನಿಗೆ ಪರಿಚಯಿಸಿಕೊಳ್ಳುವಾಗ ನಿಜ ಹೇಳಿದರೆ ಎಲ್ಲಿ ಆತ ನೊಂದುಕೊಳ್ಳುತ್ತಾನೋ ಎಂಬ ಪರಿವೆಯಿಂದ ತಾನು ನಳನಲ್ಲವೆಂದು ಬರಿದೇ ಹೇಳುವ ದೃಶ್ಯ, ಹೆಂಡತಿ ದಮಯಂತಿಯ ಪುನಃ ಸ್ವಯಂವರ ನಡೆಯುತ್ತದೆ ಎಂಬ ಸುದ್ದಿಯನ್ನು ಋತುಪರ್ಣ ತನಗೆ ತಿಳಿಸಿದಾಗ ಒಳಗೊಳಗೇ ವಿಲವಿಲನೆ ಒದ್ದಾಡುವ ಬಾಹುಕನ ಮಾತುಗಳು ಹೃದಯಕಲಕುತ್ತಿದ್ದವು. ಕೊನೆಗೊಮ್ಮೆ ಬಾಹುಕ ನಳನೇ ಎಂದು ತಿಳಿದಾಗ ಋತುಪರ್ಣನನ್ನು ನಡೆಸಿಕೊಳ್ಳುವ ಆ ಆಪ್ತತೆಯ ಅಭಿನಯ ಮತ್ಯಾರಲ್ಲಿ ಕಂಡೀತು ? ಬದುಕಿನ ಕೊನೆಯ ಕ್ಷಣದವರೆಗೂ ಪೌರಾಣಿಕ ಪಾತ್ರಗಳನ್ನು ಬಿಟ್ಟು ಬೇರೇ ಪಾತ್ರಗಳನ್ನು ಅವರು ನಿರ್ವಹಿಸಲಿಲ್ಲ. ಅವರು ಯಾರೊಂದಿಗೋ ಹೋಲಿಸಿಕೊಂಡು ಆ ನಟನನ್ನು ಮೀರಿಸುತ್ತೇನೆಂಬ ಗೋಜಿಗೆ ಹೋದವರಲ್ಲ. ಅವರದ್ದೇ ಆದ ಒಂದು ತಿಟ್ಟನ್ನು, ಒಂದು ಸಂಪ್ರದಾಯಬದ್ಧ ಚೌಕಟ್ಟನ್ನು ಅವರು ಇಟ್ಟುಕೊಂಡಿದ್ದರು. ಹೊಸರೂಪದ ಭಾಗವತಿಕೆ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಹಿತಮಿತವಾದ ಆಂಗಿಕ ಅಭಿನಯ, ನೃತ್ಯ ಮತ್ತು ಅರ್ಥ ಇವು ಅವರ ರಂಗಮಾಧ್ಯಮದ ಆಯಾಮಗಳಲ್ಲಿ ಸದಾ ಸಮನ್ವಯಗೊಂಡ ಅಂಶಗಳಾಗಿರುತ್ತಿದ್ದವು. ಖ್ಯಾತ ನೃತ ವಿದುಷಿ ಶ್ರೀಮತಿ ಮಾಯಾರಾವ್ ಅವರಲ್ಲಿ ಕೋರಿಯೋಗ್ರಾಫಿ ಬಗ್ಗೆ ತರಬೇತಿ ಪಡೆದಿದ್ದ ಅವರ ಜೀವನವನ್ನು ಸಾಗರದ ಎಲ್.ಬಿ ಕಾಲೇಜಿನ ಅಧ್ಯಾಪಕರಾಗಿದ್ದ ಡಾ| ಜಿ.ಎಸ್. ಭಟ್ಟರು ಸಂಶೋಧನೆಗೇ ವಿಷಯವಸ್ತುವಾಗಿ ಬಳಸಿಕೊಂಡರು.

ಸೀತಾವಿಯೋಗದ ಶ್ರೀರಾಮನ ಒಂದು ದೃಶ್ಯವನ್ನು ನೋಡಿ :


ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ, ಉತ್ತರಕನ್ನಡ ಮತ್ತು ಮಲೆನಾಡು ಪ್ರಾಂತಗಳಲ್ಲಿ ಶಂಭು ಹೆಗಡೆಯವರ ಪರಿಚಯ ಹೊಸದಾಗಿ ಮಾಡಿಕೊಡಬೇಕಾಗಿಲ್ಲ. ಅಲ್ಲಿನ ಬಹುತೇಕ ಜನರ ಜೀವನದ ಮೇಲೆ ಹೆಗಡೆಯವರ ಪಾತ್ರ ಪೋಷಣೆ ಪರಿಣಾಮ ಬೀರಿದೆ. ಚಿಕ್ಕ ಚಡ್ಡಿ ಹುಡುಗನಾಗಿದ್ದ ನನ್ನಂಥವನೊಬ್ಬ ಆ ಕಾಲಕ್ಕೆ ಅನುಭವಿಸಿದ್ದನ್ನು ನೆನಪಿಸಿಕೊಂಡು ಇಷ್ಟು ಬರೆಯುವೆನಾದರೆ ಬರೆಯುವ/ಮಾತನಾಡುವ ಕಲೆ ಗೊತ್ತಿರದ ಜನ ಅದೆಷ್ಟು ನೆನಪಿನ ಮೂಟೆಗಳನ್ನು ತಮ್ಮಲ್ಲೇ ಹುದುಗಿಸಿಕೊಂಡಿರಬಹುದು ನೀವೇ ಲೆಕ್ಕಹಾಕಿ !

ರಾಮಾಯಣ ಮಹಾಭಾರತದ ಕಥೆಗಳನ್ನು ಮತ್ತೆ ಮತ್ತೆ ಹೇಳಲು, ತಿಳಿಸಿಕೊಡಲು ಇಂತಹ ಪಾತ್ರಪೋಷಕರ ಅವಶ್ಯಕತೆ ಈಗಲೂ ಯಕ್ಷರಂಗದಲ್ಲಿದೆ. ಆದರೆ ನನಗನಿಸಿದ ರೀತಿಯಲ್ಲಿ ಇದುವರೆಗೆ ಭಾವಪೂರಿತ ಮಾತಿನಲ್ಲಿ ಶಂಭುಹೆಗಡೆಯವರ ಸರಿಸಾಟಿಯಾಗುವ ವ್ಯಕ್ತಿ ಹುಟ್ಟಿಬಂದಿಲ್ಲ. ಅವರ ಜಾಗವನ್ನು ತುಂಬಲು ಇದುವರೆಗೂ ಯಾರಿಂದಲೂ ಆಗಲಿಲ್ಲ. ಸ್ನೇಹಿತರೇ, ನೋಡಿದಿರಲ್ಲ ಈ ಮೇಲಿನ ತುಣುಕಗಳಲ್ಲಿ ಭಾಗವಹಿಸಿದ ಶ್ರೇಷ್ಠ ಭಾಗವತ ನೆಬ್ಬೂರು ನಾರಾಯಣ ಹೆಗಡೆಯವರಿಗೂ ಹಾಗೂ ಮಿಕ್ಕುಳಿದ ಹಿಮ್ಮೇಳ-ಮುಮ್ಮೇಳದವರಿಗೂ ನಮ್ಮ ನಮನ ಸಲ್ಲಿಸೋಣ. ದಿ| ಶಂಭುಹೆಗಡೆಯವರು ಮತ್ತೆ ಯಕ್ಷಗಾನಕ್ಕಾಗಿ ಮರಳಿ ಜನಿಸಿ ಬರಲಿ, ಕರ್ನಾಟಕದ ಜನತೆಗೆ ತನ್ನ ಭಾಷೆಯ ಸೊಬಗನ್ನು ಉಣಬಡಿಸಲಿ ಎಂದು ಹಾರೈಸುತ್ತೇನೆ, ನಮಸ್ಕಾರ.

9 comments:

 1. ನಿಮ್ಮ ಲೇಖನ ಓದಿ ಖುಷಿ ಆಯ್ತು. ನಾನು ಕೂಡ ಯಕ್ಷಗಾನ ಪ್ರೇಮಿ. ನೀವು ಉತ್ತರ ಕನ್ನಡದವರು ಬಡಗು ತಿಟ್ಟಿನ ಯಕ್ಷಕಲಾ ಪ್ರೇಮಿಗಳು , ದಕ್ಷಿಣ ಕನ್ನಡದವರು ತೆ೦ಕು ತಿಟ್ಟಿನ ಯಕ್ಷಕಲಾ ಪ್ರೇಮಿಗಳು. ಮೂಲತಹ ಇವೆರಡೂ ಒ೦ದೇ ಕಲಾಪ್ರಕಾರದ ಎರಡು ಶಾಖೆಗಳು. ನಿಮ್ಮ ಲೇಖನ ಓದಿ ನನ್ನ ಜೀವನದ ಒ೦ದು ಘಟನೆ ನೆನಪಾಯಿತು. ನಾನೊಮ್ಮೆ ಹತ್ತನೇ ತರಗತಿ ಮಹಾಪರೀಕ್ಷೆ ಇದ್ದಾಗ, ಗಣಿತ ಪರೀಕ್ಷೆಯ ಮುನ್ನಾದಿನ ರಾತ್ರಿ ಉಜಿರೆಯಲ್ಲಿ "ಬಪ್ಪನಾಡು ಕ್ಷೇತ್ರ ಮಹಾತ್ಮೆ " ನೋಡಿ ಶೇಣಿ ಗೋಪಾಲಕೃಷ್ಣ ಭಟ್ಟರ ಬಪ್ಪಬ್ಯಾರಿ ಪಾತ್ರವನ್ನು ಕಣ್ಣಲ್ಲಿ ತು೦ಬಿಕೊ೦ಡು, ಅಲ್ಲಿ೦ದಲೇ ಪರೀಕ್ಷಾ ಕೊಠಡಿಗೆ ಹೋಗಿ ಬರೆದು ಶಾಲೆಗೇ ಮೊದಲಿಗನಾಗಿದ್ದೆ. ಕೆರೆಮನೆ ಶ೦ಭು ಹೆಗಡೆಯವರ ಪಾತ್ರವೈಭವವನ್ನು ನಾನು ನೋಡಿದ್ದೇನೆ. ಬಹಳ ಚೆನ್ನಾಗಿ ವಿವರಿಸಿದ್ದೀರಿ.

  ReplyDelete
 2. nimma ee baraha mattu video rasadoutaNa niDitu sir..

  dhanyavaada...

  ReplyDelete
 3. sir nivu hakida video nodi, nange naanu nodida shambhu hegdeyavara ella yakshagaana nenapige bantu
  tumba thanks sir

  ReplyDelete
 4. ಶಂಭು ಹೆಗಡೆಯವರ ಹಾಗು ಬಾಲಪ್ರತಿಭೆ ಶಶಾಂಕನ ವಿಡಿಯೋಗಳನ್ನು ಕೊಟ್ಟಿದ್ದಕ್ಕಾಗಿ ನಿಮಗೆ ತುಂಬ ಕೃತಜ್ಞತೆಗಳು.ಯಕ್ಷಗಾನವನ್ನು ನಾನು ಒಮ್ಮೆ ಮಾತ್ರ ನೋಡಿದ್ದೇನೆ. ತುಂಬ ಸೊಗಸಾದ ಕಲೆಯಿದು.

  ReplyDelete
 5. ಶಂಭು ಹೆಗಡೆಯವರು ಬಡುಗಿನ ಬೆಡಗಿನ ಕಲಾವಿದ . ಯಕ್ಷಗಾನಕ್ಕೆ ಹತ್ತು ಹಲವು ಹೊಸತು ಕೊಟ್ಟವರು ಶಂಭು ಹೆಗಡೆಯವರು. ಅರ್ಧ ಚಂದ್ರಾಕೃತಿಯ ರಂಗಸ್ಥಳ. ಪ್ರೇಕ್ಷಕ ಪ್ರಭುವಿಗೆ ಬೆಳವರಿಗೂ ಆಟ ನೋಡಲು ಅನುವಾಗುವಂತೆ ಆರಾಮು ಕುರ್ಚಿ ಕಲ್ಪನೆ. ರಂಗಸ್ಥಳ ದಲ್ಲಿ ಬೆಳಕು ವಿನ್ಯಾಸ , ಹೀಗೆ ಅವರು ಕೊಟ್ಟಕೊಡುಗೆ ಯಕ್ಷಗಾನಲೋಕಕ್ಕೆ ಅಪಾರ.ತಮ್ಮ ಕಲಾ ಪ್ರತಿಭೆ ಯಿಂದ ಜನಮನ ಗೆದ್ದ ಈ ಕಲಾವಿದರು ತಮ್ಮ ಜೀವನ ಯಾತ್ರೆ ಮುಗಿಸಿದ್ದು ರಂಗಸ್ಥಳದ ಬಳಿಯೇ. ಅಪರೂಪದ ಕಲಾವಿದ ಶಂಭು ಹೆಗಡೆಯವರು ಹಾಕಿ ಕೊಟ್ಟ ಮಾರ್ಗದರ್ಶನ ಬಡಗು ತಿಟ್ಟಿಗೆ ಅನುಕರಣೀಯ ಎಂದರೆ ಅದು ಅತಿಶಯೋಕ್ತಿ ಎನಿಸಲಾರೆದೆಂಬುದು ನನ್ನ ನಂಬುಗೆ.

  ಧನ್ಯ ವಾದಗಳು.

  ReplyDelete
 6. ಭಟ್ ಸರ್,

  ಶಂಭು ಹೆಗಡೆ ಮತ್ತು ಬಾಲಕ ವಿಡಿಯೋಗಳನ್ನು ತುಂಬಾ ಖುಷಿಯಾಯ್ತು. ಯಕ್ಷಗಾನವನ್ನು ನನಗೂ ತುಂಬಾ ಇಷ್ಟ. ಮಲ್ಲೇಶ್ವರಂನಲ್ಲಿ ಇತ್ತೀಚಿನ ವಿದ್ಯಾಮಾನಗಳಿಗನುಸರಿಸಿ ಹೊಸದಾಗಿ ಯಕ್ಷಗಾನದಲ್ಲಿ ತಮಾಷೆಯ ನಾಟಕವನ್ನು ಮಾಡುತ್ತಾರೆ ಅದನ್ನು ನೋಡಲು ಬಲು ಮಜ.

  ReplyDelete
 7. ಓದಿದ, ಮೆಚ್ಚಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು, ಅಭಿನಂದನೆಗಳು

  ReplyDelete
 8. ವಿಷ್ಣಣ್ಣ,ಶಂಭು ಹೆಗಡೆಯವರ ಬಗ್ಗೆ ನನ್ನ ಅಮ್ಮ ಹೇಳಿದ ಪ್ರಸಂಗ ಹೇಳುತ್ತೇನೆ, ನನ್ನ ಅಜ್ಜ ನಿಮಗೆ ಗೊತ್ತಿರಬಹುದು ,ಕೆಕ್ಕಾರು ವಿಷ್ಣು ಭಟ್ರು(ಗುಂಡಿಬೈಲು),ಯಕ್ಷಗಾನ ಕಲಾವಿದರು,ಶಂಭು ಹೆಗಡೆಯವರು ಮೊದಲ ಬಾರಿಗೆ ಕೌರವನನ್ನು ಮಾದಿದ್ದರಂತೆ ಕವಲಕ್ಕಿಯಲ್ಲಿ,ಆಗ ಶಿವರಾಮ ಹೆಗಡೆಯವರ ಮೇರು ಕಾಲ ,ಕೌರವನೆಂದರೆ ಶಿವರಾಮ ಹೆಗಡೆ ಎಂಬಂತಹ ಕಾಲವದು,ಆಗ ಮೊದಲ ಬಾರಿಗೆ ಕೌರವನನ್ನು ಮಾಡಿದ ಶಂಭು ಹೆಗಡೆಯವರ ಮಾತಿಗೆ ಅಳು ಬರಿಸಿಕೊಂಡ ನಮ್ಮ ಅಜ್ಜ,ನಂತರ ಹೇಳಿದರಂತೆ " ಶಂಭು , ಶಿವರಾಮಣ್ಣ ಬದುಕಿಪ್ಪಲ್ಲಿವರೆಗೆ ಕೌರವನ ಮಾಡಡ" ಎಂದು,ಅಂದರೆ ಶಂಭುಹೆಗಡೆಯವರು ಚೆನ್ನಾಗಿ ಮಾಡಿಲ್ಲ ಅಂತಲ್ಲ ಶಿವರಾಮ ಹೆಗಡೆಯವರದ್ದೇ ಆದ ಕೌರವನಿರಲಿ ಎಂಬ ಭಾವನೆ ಇದ್ದಿರಬಹುದು. ಅಂತಹ ಅದ್ಭುತ ಕಲಾವಿದ ಶಂಭು ಹೆಗಡೆ

  ReplyDelete
 9. ಓದಿದೆ, ಲೇಖನ ಚೆನ್ನಾಗಿ ಬರೆದಿದ್ದೀರಿ. ಶಂಭು ಹೆಗ್ಡೆ ಯವರು ಕೆಲವು ವರ್ಷ ಹಿಂದೆ ಅಮೇರಿಕಾ ಪ್ರವಾಸ ಬಂದಾಗ ಅವರ ಯಕ್ಷಗಾನ ನೋಡಿದ್ದೆ. ಬಹಳ ಚೆನ್ನಾಗಿತ್ತು. ಅವರು AKKA ಸಮ್ಮೇಳನದಲ್ಲಿ ಆಟ ಆಡಿದ ನಂತರ ಸಣ್ಣ ಭಾಷಣ ಕೊಟ್ಟಿದ್ದರು. ಇಡೀ ಸಮ್ಮೇಳನದಲ್ಲಿ ಅಷ್ಟು ಚೆನ್ನಾಗಿ, ಸುಸಂಸ್ಕ್ರತ ರೀತಿಯಲ್ಲಿ ಕೇಳುವುದಕ್ಕೆ ಆನಂದವಾಗುವ ರೀತಿಯಲ್ಲಿ ಅವರ ಭಾಷಣವೇ best ಅನ್ನಿಸಿತು ನನಗೆ. ಯಕ್ಷಗಾನವೂ ಬಹಳ ಚೆನ್ನಾಗಿತ್ತು.

  ReplyDelete