ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, March 18, 2012

ನಿನ್ನ ಹಿಡಿದಾಗ ಮೈತುಂಬ ಏರಿತು ಕಾವು- ಕವಿತೆಯಾಯಿತು ಪದ್ಯ ಕಟ್ಟಕಡೆಗೆ...

ಚಿತ್ರಕೃಪೆ : ಅಂತರ್ಜಾಲ

ನಿನ್ನ ಹಿಡಿದಾಗ ಮೈತುಂಬ ಏರಿತು ಕಾವು-
ಕವಿತೆಯಾಯಿತು ಪದ್ಯ ಕಟ್ಟಕಡೆಗೆ...

ಸಿಕ್ಕಿದ ವ್ಯಕ್ತಿಯಲ್ಲೇ ದಕ್ಕದ ವ್ಯಕ್ತಿಯನ್ನೂ ಕಂಡುಕೊಳ್ಳುವ ಮತ್ತು ಯಾರಿಗೂ ನೋವನ್ನು ಬಯಸದೇ ತಾನೇ ನೊಂದುಕೊಂಡ ಜೀವದ ಬಗೆಗೆ ಬರೆಯಲು ಬಹಳಹೊತ್ತು ಮನಸ್ಸು ತಿಣುಕಾಡುತ್ತಿತ್ತು! ಅದು ಸುಲಭಕ್ಕೆ ಸಾಧ್ಯವಾಗದ ವಿಷಯ! ಕಾಲವೊಂದಿತ್ತು: ಹಿಂದಿನ ಶತಮಾನದ ಪೂರ್ವಾರ್ಧದ ವರೆಗೂ ವ್ಯಕ್ತಿಗತ ಮೌಲ್ಯಗಳಿಗೆ ತುಂಬಾ ಬೆಲೆಯಿತ್ತು. ಗುರು-ಹಿರಿಯರ ಮಾತುಗಳಿಗೆ ತಮ್ಮನ್ನು ಒಡ್ಡಿಕೊಳ್ಳುವ ಅದರಲ್ಲೇ ತೃಪ್ತರಾಗುವ ಜೀವನಕ್ರಮ ಅಂದಿನದಾಗಿತ್ತು. ನಮ್ಮಜನ ಬಡತನವನ್ನೇ ಬಹಳವಾಗಿ ಹಾಸುಹೊದ್ದವರು; ಅದರಲ್ಲೇ ಸುಖವನ್ನೂ ನೆಮ್ಮದಿಯನ್ನೂ ಕಂಡವರು! ಬಡತನ ಭಾರ ಎನಿಸುವಷ್ಟು ಅಸಹಜವಾಗಿರಲೇ ಇಲ್ಲ; ಯಾಕೆಂದರೆ ಸಮಾಜದಲ್ಲಿ ಕಷ್ಟಸುಖಗಳಿಗೆ ಪರಸ್ಪರ ಸ್ಪಂದಿಸುತ್ತಿದ್ದ, ಪರಸ್ಪರ ಆಗಿಬರುತ್ತಿದ್ದ ಕಾಲಮಾನ ಅದು. ಇಲ್ಲದ್ದನ್ನೂ ಇದೆಯೆಂದೇ ಕವಿಗಳಂತೇ ಮಾನಸಿಕವಾಗಿ ಕಲ್ಪಿಸಿಕೊಂಡು ಸಂಭ್ರಮಿಸುವ ಕಾಲಘಟ್ಟ ಅಂದಿನದು. ಅಂತಹ ಕಾಲಘಟ್ಟದ ಪ್ರೇಮಪರ್ವವೊಂದು ಹೇಗೆ ಕೊನೆಯವರೆಗೂ ತನ್ನ ಸೆಳವನ್ನು ತನ್ನ ಪ್ರೀತಿಯ ಬಿಸುಪನ್ನು ಕಾದುಕೊಂಡಿತ್ತು ಎಂಬುದನ್ನು ಅವಲೋಕಿಸುತ್ತಾ ಪ್ರೇಮಕವಿಯ ಜೀವನದ ಇನ್ನೊಂದು ಮಜಲಿಗೆ ಇಣುಕುವ ಒಂದು ಪ್ರಯತ್ನ ಇದಾಗಿದೆ.

ಅಕ್ಕಿ ಆರಿಸುವಾಸ ಚಿಕ್ಕ ನುಚ್ಚಿನ ನಡುವೆ | ಬಂಗಾರವಿಲ್ಲದ ಬೆರಳು |
ತಗ್ಗಿರುವ ಕೊರಳಿನಾ ಸುತ್ತ ಕರಿಮಣಿ ಒಂದೆ | ಸಿಂಗಾರ ಕಾಣದಾ ಹರಳು |

ಕುಳಿತು ಅಕ್ಕಿ ಆರಿಸಿಕೊಳ್ಳಬೇಕಾದ ಜೀವನ ಅಂದಿನ ಬಹುತೇಕ ಗೃಹಿಣಿಯರಿಗೆ! ನುಚ್ಚನ್ನೂ ಇಡಿಭತ್ತವನ್ನೂ ಬೇರ್ಪಡಿಸಿ ಅನ್ನಮಾಡಲು ಯೋಗ್ಯವಾದ ಅಕ್ಕಿಯನ್ನು ಸಿದ್ಧಪಡಿಸಿಕೊಳ್ಳುವುದು ಬಿಡುವಿರುವಾಗೆಲ್ಲಾ ನಡೆಯುತ್ತಿದ್ದ ಕ್ರಮ. ಗೃಹೋಪಯೋಗೀ ಯಂತ್ರಗಳೆಂದು ಯಾವುವೂ ಇರಲಿಲ್ಲ! ಮಿಕ್ಸರ್, ಕುಕ್ಕರ್, ಗ್ರೈಂಡರ್, ವಾಷಿಂಗ್ ಮಶಿನ್, ಫ್ರಿಜ್ ಇಲ್ಲದ ಕಾಲ. ಎಲ್ಲವಕ್ಕೂ ದೈಹಿಕಶ್ರಮದ ಉಪಯೋಗ! ಮಜ್ಜಿಗೆ ಕಡೆಯುವಾಗ ಪಕ್ಕೆಗಳ ಸ್ನಾಯುಗಳಿಗೆ ವ್ಯಾಯಾಮವಾಗಿ ಬೊಜ್ಜು ಕರಗಿದರೆ, ಹಿಟ್ಟು ರುಬ್ಬುವಾಗ ರಟ್ಟೆಗಳಿಗೆ ಸಂಪೂರ್ಣ ವ್ಯಾಯಾಮ! ರಾಗಿ-ಗೋಧೀ ಬೀಸುವಾಗ ಸೊಂಟದಿಂದ ಹಿಡಿದು ಇಡೀ ಮೇಲ್ಭಾಗದ ಶರೀರಕ್ಕೇ ವ್ಯಾಯಾಮ. ಸ್ವಲ್ಪ ಆಯಾಸವೆನಿಸಿದರೂ ಹೆಂಗಸರಿಗೆ ಇಂದಿನಂತೇ ದುಡ್ಡುಕೊಟ್ಟು ಬೊಜ್ಜು ಕರಗಿಸಿಕೊಳ್ಳಬೇಕಾದ ಪ್ರಮೇಯವಿರಲಿಲ್ಲ. ಏನನ್ನೇ ತಿಂದರೂ ಅರಗಿಸಿಕೊಳ್ಳುವ, ಎಷ್ಟು ತಿಂದರೂ ಬೊಜ್ಜು ಬೆಳೆಯದ ಜೀವನಕ್ರಮ. ಅಂತಹ ದಿನಗಳ ಜೀವನದಲ್ಲಿ ಅಕ್ಕಿ ಆರಿಸುತ್ತ ಕುಳಿತ ಮಡದಿಯನ್ನು ಪಕ್ಕದಲ್ಲಿ ಕುಳಿತು ಕಂಡ ಕವಿ ನರಸಿಂಹಸ್ವಾಮಿಯವರಿಗೆ ಮೇಲಿನ ಹಾಡು ತಂತಾನೆ ಹೊಳೆದಿದ್ದು. ಅಕ್ಕಿ ಆರಿಸುತ್ತಿರುವ ಹೆಂಡತಿಯ ಬೆರಳಲ್ಲಿ ಉಂಗುರವೂ ಇರಲಿಲ್ಲ, ಕೊರಳಲ್ಲಿ ಕರಿಮಣಿ ಬಿಟ್ಟರೆ ಬೇರೇ ಹೊಳೆಯುವ ಹರಳಿನ ಸರವಿಲ್ಲ; ಆದರೂ ಆ ಬಗ್ಗೆ ಒಂದಿನಿತೂ ಕೊರಗಿಲ್ಲ!

ಬೆರಳಿನ ಭಾರಕ್ಕೆ ತುಂಬಿರುವ ಕೆನ್ನೆಯಲಿ| ಹದಿನಾರು ವರುಷದ ನೆರಳು |
ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ | ಹುಚ್ಚುಹೊಳೆ
ಮುಂಗಾರಿನುರುಳು | ಬಂಗಾರವಿಲ್ಲದ ಬೆರಳು |

ಮದುವೆಯಾಗಿ ಅದಾಗಲೇ ಹದಿನಾರು ವರುಷವೇ ಕಳೆದರೂ ಬಡತನದ ಛಾಯೆ ತೋರದೇ, ಅದಕ್ಕಾಗಿ ಕೊರಗದೇ ಸೊರಗದೇ, ಸದಾ ದೀಪದಂತೇ ಹೊಳೆವ ಕಣ್ಣುಗಳನ್ನು ಕವಿ ಕಾಣುತ್ತಾರೆ. ಅಂದಿನ ಕಾಲದಲ್ಲಿ ಒಂದು ಮದುವೆಯೋ ಮುಂಜಿಯೋ ಮತ್ತಿನ್ನೇನೋ ಮಂಗಳಕಾರ್ಯವಿದ್ದರೆ ಬಂಗಾರದ ಅಭರಣಗಳನ್ನೊ ರೇಷ್ಮೆ ಸೀರೆ ಇತ್ಯಾದಿಗಳನ್ನೂ ನೆಂಟರಿಷ್ಟರಲ್ಲಿ ಕೆಲವರು ಬಳಕೆಗೆ ಕೊಡುವುದು/ತರುವುದು ಇರುತ್ತಿತ್ತು. ಇದನ್ನು ಸ್ವತಃ ನಾನೇ ಎಳವೆಯಲ್ಲಿ ಕಂಡಿದ್ದೇನೆ. ಮಂಗಳಕಾರ್ಯಗಳಲ್ಲಿ ಒಂದಷ್ಟು ಒಡವೆ ವಸ್ತ್ರಗಳನ್ನು ಕಂಡು ಸಂಭ್ರಮಿಸುವ ಸಮಯದಲ್ಲಿ ಉಳ್ಳವರು ಇಲ್ಲದ ನೆಂಟರಿಗೆ ಕೆಲವೊಮ್ಮೆ ಕೊಡುತ್ತಿದ್ದರು; ಕಾರ್ಯ ಸಾಂಗವಾದ ಮರುದಿನ ಪಡೆದವರು ಅದನ್ನು ಕೃತಜ್ಞತಾ ಪೂರ್ವಕವಾಗಿ ಮರಳಿಸುತ್ತಿದ್ದರು. ಇದಷ್ಟೇ ಅಲ್ಲ, ಮನೆಗಳಲ್ಲಿ ಹಾಸು-ಹೊದಿಕೆಗೆ ಕಮ್ಮಿ ಬಿದ್ದರೆ ಗುಡಾರ, ಕಂಬಳಿ, ಚಾದರಗಳು ಇತ್ಯಾದಿ ಬಟ್ಟೆಗಳನ್ನೂ ಹಾಗೇ ಕೊಡುವುದು/ತರುವುದು ನಡೆಯುತ್ತಿದ್ದ ಕ್ರಮ. ಇಂದು ಅವನ್ನೆಲ್ಲಾ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ! ಧಾವಂತದ ಜೀವನಕ್ರಮದಲ್ಲಿ ಮಾನವೀಯ ಮೌಲ್ಯಗಳಿಗೆ ಬೆಲೆಯಿಲ್ಲ.

ಕಲ್ಲಹರಳನು ಹುಡುಕಿ ಎಲ್ಲಿಗೋ ಎಸೆವಾಗ| ಝಲ್ಲೆನುವ ಬಳೆಯ ಸದ್ದೂ |
ಅತ್ತಯಾರೋ ಹೋದ ಇತ್ತ ಯಾರೋ ಬಂದ ಕಡೆಗೆಲ್ಲ ಕಣ್ಣುಬಿದ್ದೂ |
ಬಂಗಾರವಿಲ್ಲದ ಬೆರಳು|

ಅಕ್ಕಿಯನ್ನು ಆರಿಸುವುದು ಅಂಗಳದಲ್ಲಿ ಕುಳಿತು ಅಲ್ಲವೇ? ಅಂಗಳದ ಅಂಚಿನಲ್ಲೋ ಅಲ್ಲಿರಬಹುದಾದ ಕಟ್ಟೆಯಮೇಲೋ ಕುಳಿತು ಆರಿಸುವಾಗ ಕಲ್ಲಿನ ಹರಳುಗಳನ್ನು ಹುಡುಕಿತೆಗೆದು ಎಸೆಯುವುದು, ಆಗ ಕೈಗಳಲ್ಲಿರುವ ಗಾಜಿನ ಬಳೆಗಳ ಸದ್ದು, ಅಂಗಳದ ಹೊರವಲಯದಲ್ಲಿ ಆಕಡೆ ಈಕಡೆ ಹಾದಿಹೋಕರು ಓಡಾಡುವಾಗ ಆ ಕಡೆಗೆಲ್ಲಾ ಕಣ್ಣು ಓಡುತ್ತಿತ್ತು, ಬೆರಳಲ್ಲಿ ಮಾತ್ರ ಬಂಗಾರವೆಂಬುದು ಇರಲಿಲ್ಲ ಎಂಬುದನ್ನು ಕವಿ ಸಹಜ ಸ್ಫುರಿತ ಭಾವಗಳಿಂದ ಅತ್ಯಂತ ಸಾಮಾನ್ಯ ಪದಗಳಲ್ಲಿ ಕವನವಾಗಿಸಿದ್ದಾರೆ.

ಮನೆಗೆಲಸ ಬೆಟ್ಟದಷ್ಟಿರಲು | ಸುಮ್ಮನೆ ಇವಳು |
ಚಿತ್ರದಲಿ ತಂದಂತೆ ಇಹಳು |
ಬೇಸರಿಯ ಕಿರಿಹೊತ್ತು ನುಚ್ಚಿನಲಿ ಮುಚ್ಚಿಡಲು |
ಹುಡುಕುತಿವೆ ಆ ಹತ್ತು ಬೆರಳೂ |
ಬಂಗಾರವಿಲ್ಲದ ಬೆರಳು |

ಮನೆಗಲಸ ಇಂದಿನ ಹಾಗಲ್ಲವಲ್ಲ. ಎಲ್ಲಕ್ಕೂ ಸ್ವಾವಲಂಬನೆ! ಕಸಗುಡಿಸಲು ವ್ಯಾಕ್ಯೂಮ್ ಕ್ಲೀನರ್ ಇಲ್ಲ, ಬಟ್ಟೆ ಒಗೆಯಲು ವಾಷಿಂಗ್ ಮಶಿನ್ ಇಲ್ಲ, ಪಾತ್ರೆ ತೊಳೆಯಲು ಡಿಶ್ ವಾಶರ್ ಇಲ್ಲ. ಎಲ್ಲವೂ ಮಾನವಯಂತ್ರದಿಂದಲೇ ನಡೆಯಬೇಕು. ನೆಂಟರು-ಇಷ್ಟರು ಬಂದುಹೋಗುವವರ ಸಂಖ್ಯೆ ಕೂಡ ಜಾಸ್ತಿನೇ ಇರುತ್ತಿದ್ದ ಕಾಲ. ಜನರಿಗೆ ಅಷ್ಟೆಲ್ಲಾ ಕೆಲಸಗಳ ಮಧ್ಯೆಯೂ ಜೀವನವನ್ನು ಇದ್ದಹಾಗೇ ಸ್ವೀಕರಿಸಿ ಸುಖಿಸುವ ಕಲೆ ಗೊತ್ತಿತ್ತು; ಇಂದಿನಂತೇ ದಂಪತಿಯ ನಡುವೆ ಕುಟುಂಬ ಕಲಹಗಳು ಎದ್ದು ವಿಚ್ಛೇದನ ಕೊಟ್ಟುಕೊಳ್ಳುವ ಕಾಲ ಅದಾಗಿರಲಿಲ್ಲ.

ಇಂತಹ ಅನೇಕ ಹಾಡುಗಳನ್ನು ಬರೆದ ಕವಿಗಳ ಮನದಲ್ಲಿ ನೋವೊಂದು ಉಳಿದುಕೊಂಡಿತ್ತು. ವೈಯ್ಯಕ್ತಿಕ ಜೀವನದಲ್ಲಿ ಎಳವೆಯಲ್ಲೇ ಒಬ್ಬಳು ಹುಡುಗಿಯನ್ನು ಪ್ರೀತಿಸಿದ್ದರು ನಮ್ಮ ಕೆ.ಎಸ್.ನ. ! ಸುಮಾರಾಗಿ ಬುದ್ಧಿ ತಿಳಿದಾಗಿನಿಂದಲೂ ಅವರ ಆಪ್ತವಲಯದಲ್ಲಿ ಸಖಿಗೀತದ ಆರಂಭವಾಗಿಬಿಟ್ಟಿತ್ತು. ೧೯೪೫ರಲ್ಲಿ ’ಐರಾವತ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದ ಕೆ.ಎಸ್.ನ. ಅವರ ಆ ಹೊತ್ತಗೆಯಲ್ಲಿ ’ಅವಳೇ ಇವಳು’ ಎಂಬ ಕವನವೂ ಇತ್ತು ಎನ್ನುತ್ತಾರೆ ಖ್ಯಾತ ವಿಮರ್ಶಕ ಸುಮತೀಂದ್ರ ನಾಡಿಗರು. ಆ ಹಾಡಿನಲ್ಲಿ ಅಡಕವಾಗಿರುವ ಕಥಾಭಾಗದ ನಾಯಕ, ಪದ್ಮಾ ಎಂಬೊಬ್ಬ ಹುಡುಗಿಯೊಡನೆ ಇನ್ನೊಬ್ಬ ಹುಡುಗಿಯ ಪ್ರಸ್ತಾವನೆ ಮಾಡುತ್ತಾನೆ. ಹೇಮಗಿರಿಗೆ ಜಾತ್ರೆಗೆ ತೆರಳಿದ್ದೂ, ಜಾತ್ರೆಯ ದಿನ ಹೇಮಾನದಿಯ ದಡದಲ್ಲಿ ಬೆಳದಿಂಗಳ ಊಟಮಾಡುವಾಗ ಆಕೆ ಕಂಡಿದ್ದಾಗಿಯೂ ಆಕೆಯ ತುಟಿಯಂಚಿನಲ್ಲಿ ಸಿಡುಬಿನ ಕಲೆಯೊಂದು ಸದಾ ಇತ್ತು ಎಂದು ಹೇಳುತ್ತಾನೆ.

ಅಲ್ಲಿಗೆ ಹಾಗೆ ಬಂದಿದ್ದಾಕೆ ಯಾರು ಎಂದು ಪ್ರಶ್ನಿಸುವ ನಾಯಕ ಯಾರಾದರೇನಂತೆ? ಅದನ್ನು ಕಟ್ಟಿಕೊಂಡು ಏನಾಗಬೇಕೀಗ ? ಎಂತಲೂ ತನ್ನನ್ನೇ ಕೇಳಿಕೊಳ್ಳುತ್ತಾನೆ. ದೊಡ್ಡ ಹಣೆ, ಉದ್ದಜಡೆಯ ಹುಡುಗಿಯಾದ ಅವಳು ಪದ್ಮಾಳ ಕಿವಿಯಲ್ಲಿ ಏನೋ ಹೇಳಿದಳಂತೆ, ದಿಟ್ಟೆಯವಳು ಅನ್ನುತ್ತಾನೆ! ಊಟಕ್ಕೆ ಹಾಕಿದ ಬಾಳೆ ಎಲೆಗಳ ಮುಂದೆ ರಂಗೋಲೀ ಹಾಕಿದಳಂತೆ ಅವಳು. ಝರಿಯ ರವಿಕೆ ತೊಟ್ಟ ಅವಳು ತುಟಿಯರಳಿಸಿ ನಗುತ್ತಿದ್ದಳೆಂದೂ ಊಟದ ತರುವಾಗ ಕೈತೊಳೆಯುವಾಗ ನದಿಯನೀರಿನಲ್ಲಿ ಅವಳ ಜಡೆ ತೇಲುತ್ತಿತ್ತೆಂದೂ, ಧರಿಸಿದ್ದ ಕೆಂಪು ಹರಳಿನ ಉಂಗುರವನ್ನು ಕೆನ್ನೆಗೆ ತಾಗಿಸಿಕೊಂಡಾಗ ಗೀರುಬಿದ್ದಿತ್ತೆಂದೂ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನೂ ಒಪ್ಪಿಸುವ ಆತನ ಮಾತು ಆಡಿ ಮುಗಿಯುವುದಲ್ಲ! ಮತ್ತೆ ಮತ್ತೆ ಯಾರವಳು ಯಾರವಳು ಎಂಬ ಪ್ರಶ್ನೆ ಹಣುಕುತ್ತದೆ. ಮೈಸೂರಿನ ಬೀದಿಯಲ್ಲಿ ನಡೆದಿದ್ದಳು ಅವಳು ಎನ್ನುವ ನಾಯಕ ಅವಳು ರಾಮರಾಯರ ಮಗಳಲ್ಲವೇ? ಈಗ ಎಲ್ಲಿದ್ದಾಳೆ ಅವಳು? ಎಂದೂ ಪ್ರಶ್ನಿಸುತ್ತಾನೆ. ಆ ಹುಡುಗಿಗೆ ಮದುವೆ ಆಗಬಾರದಿತ್ತೇ? ಇನ್ನೂ ಆಗಲಿಲ್ಲವೇ ? ಎಂದೂ ಕೇಳುತ್ತಾನೆ. ಆಮೇಲೆ "ಬಾರೇ ಲಕ್ಷ್ಮಿ ಹೊರಗೆ ಒಂದು ಗಳಿಗೆ" ಎಂದು ಕರೆಯುತ್ತಾನೆ.

ಯಾವ ಲಕ್ಷ್ಮಿ ಅವಳು? ಎಲ್ಲಿಯವಳು? ಹೇಗಿದ್ದಳು? ಯಾರಿಗೂ ಅದರ ಮಾಹಿತಿ ಸಿಕ್ಕಿರಲಿಲ್ಲ. ೧೯೪೧ರಲ್ಲಿ ’ಪ್ರಬುದ್ಧ ಕರ್ನಾಟಕ’ದಲ್ಲಿ, ಇದು ತನ್ನದೇ ಕಥೆಯೆಂಬ ಗುರುತು ಹತ್ತಬಾರದೆಂಬ ಉದ್ದೇಶದಿಂದ ’ಅಚ್ಚಣ್ಣ’ ಎಂಬ ಹೆಸರಿನಲ್ಲಿ ’ಮಾವನ ಮಗಳು’ ಎಂಬ ಕಥೆಯನ್ನು ಬರೆದಿದ್ದರಂತೆ. ೧೯೪೫ರಲ್ಲಿ ’ಸುಧಾ’ ಮಾಸಪತ್ರಿಕೆಯಲ್ಲಿ ’ತುಂಬಿದಮನೆ’ ಎಂಬ ಕಥೆಯನ್ನೂ ಬರೆದಿದ್ದರಂತೆ. ಅದರಂತೇ ೧೯೯೯ರಲ್ಲಿ ’ಮುಗಿದ ಬೆಳಕು’ ಎಂಬ ಕವನ ಅಡಕವಾಗಿರುವ ’ನವಿಲದನಿ’ ಕವನ ಸಂಕಲನ ಹೊರತಂದಿದ್ದರು. ಈ ಎಲ್ಲಾ ಕಡೆಗಳಲ್ಲೂ ತುಟಿಯಂಚಿನ ಸಿಡುಬಿನ ಕಲೆಯ ಹುಡುಗಿಯ ಪ್ರಸ್ತಾಪ ಬರುತ್ತದೆ. ಆದರೆ ನರಸಿಂಹಸ್ವಾಮಿಯವರ ಪತ್ನಿ ವೆಂಕಮ್ಮನವರಿಗೆ ಆ ರೀತಿಯ ಸಿಡುಬಿನ ಕಲೆ ಇರಲಿಲ್ಲ! ಹಾಗಾದರೆ ಯಾರಾಕೆ ಸಿಡುಬಿನ ಕಲೆಯವಳು ಎಂಬುದು ಬಹುಜನರನ್ನು ಕಾವ್ಯಾತ್ಮಕವಾಗಿ ಕುತೂಹಲಕ್ಕೆಳಸಿದರೂ ಕೆಲಜನರನ್ನು ಆಳವಾಗಿ ಹೊಕ್ಕು ಮರುಪ್ರಶ್ನಿಸುವಂತೇ ಮಾಡಿತು. ಕವಿಯ ಆಶಯವೇನಿತ್ತು ಎಂಬುದನ್ನು ತಿಳಿಯುವ ಕವನ ಕುತೂಹಲಿಯಾಗಿ ನಾಡಿಗರು ನರಸಿಂಹ ಸ್ವಾಮಿಯವರ ಸಹೋದರ ಕೆ.ಎಸ್. ಸುಬ್ಬನರಸಿಂಹಯ್ಯನವರನ್ನು ಕಂಡು ವಿಚಾರಿಸಿದ್ದಾರೆ.

೧೯೪೧ ರಿಂದ ೧೯೯೯ರ ವರೆಗಿನ ಕಾಲಾವಧಿಯಲ್ಲಿ ಯಾವತ್ತೂ ಮರೆಯಲಾಗದೇ ಆಗಾಗ ನೆನೆಯುತ್ತಲೇ ಇದ್ದ ಅ ಸಿಡುಬಿನ ಕಲೆಯ ಹುಡುಗಿ ಯಾರಾಗಿರಬಹುದು ?

ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ
ರತ್ನದಂತಹ ಹುಡುಗಿ ಊರಿಗೆಲ್ಲ |
ಬಲುಜಾಣೆ ಗಂಭೀರೆ ಹೆಸರು ಸೀತಾದೇವಿ
ಮೂವತ್ತು ತುಂಬಿಹುದು ಮದುವೆಯಿಲ್ಲ !

ಈ ಕವನದಲ್ಲಿ ಕಂಡ ಸೀತೆಯೂ ಬೇರಾರೂ ಅಲ್ಲ, ’ಅವಳೇ ಇವಳು!’ ತುಟಿಯಂಚಿನ ಸಿಡುಬಿನ ಕಲೆಯವಳು! ಕಥಾನಾಯಕಿಗೆ ಇಲ್ಲಿ ತಾಯಿಯಿರುವುದಿಲ್ಲ, ತಂದೆ ಶಾನುಭೋಗರಾಗಿ ಕೆಲಸಮಾಡುತ್ತಿರುತ್ತಾರೆ. ಹುಡುಗಿಗೆ ವಿನಾಕಾರಣ ವರಸಾಮ್ಯ ಕೂಡಿಬರುವುದೇ ಇಲ್ಲ. ಯಾರ್ಯಾರೋ ಗಂಡುಗಳು ಬರುತ್ತಾರೆ; ತಾಳಮೇಳ ಕೂಡುವುದಿಲ್ಲ. ತಾಯಿಯಿಲ್ಲದ ತಬ್ಬಲಿ ಎಂಬ ಅನಿಸಿಕೆ ಕವಿಯ ಹೃದಯವನ್ನು ಹಿಂಡುತ್ತಿದೆ.

ಎಂತೆಂತಹ ಅದ್ಭುತ ದಾಂಪತ್ಯಗೀತೆಗಳನ್ನು ಬರೆದ ಕೆ.ಎಸ್.ನ. ಅವರ ನಿಜವಾದ ’ಮೈಸೂರು ಮಲ್ಲಿಗೆ’ ಹುಟ್ಟಿದ್ದು ನೋವಿನ ನಲಿವಿನಲ್ಲಿ! ಕವಿಗೆ ಹಲವುಬಾರಿ ಕಾವ್ಯ ಜನಿಸುವುದೇ ಹಾಗೆ!

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿರೂಪಾಯಿ... ಬರೆದವರು

ಮದುವೆಯಾಗಿ ತಿಂಗಳಿಲ್ಲಾ ನೋಡಿರಣ್ಣ ಹೇಗಿದೆ
ನಾನು ಕೂಗಿ ಕರೆಯುವಾಗ ಬರುವಳೆನ್ನ ಶಾರದೆ....

ಬರೆದಿದ್ದಾರೆ; ಒಂದೊಂದೂ ಕವನ ತನ್ನ ಭಾವರಸದಿಂದ ಓದುಗನ ಮನಕ್ಕೆ ತಂಪೆರೆದು ಪ್ರೇಮಮಯ ಸರಸಮಯ ದಾಂಪತ್ಯವನ್ನು ಸೆರೆಹಿಡಿದುಕೊಡುವಲ್ಲಿ ಯಶಸ್ವಿಯಾಗಿದೆ.

ತನ್ನ ೮೪ನೇ ವಯಸ್ಸಿನಲ್ಲೂ ’ಪದ್ಯ ಮುಗಿದ ಬೆಳಗು’ ಎಂಬ ಕವನವೊಂದನ್ನು ಕೆ.ಎಸ್.ನ. ಬರೆದಿದ್ದಾರೆ. ಯಾವ ಹೃದ್ಯ ಅಂತರ್ಗತ ಪದ್ಯಗಳಾಗಿ ಹೊರಹೊಮ್ಮುತ್ತಿತ್ತೋ ಆ ಪದ್ಯದ ಗತಿಗೆ ಅಂತ್ಯ ಹಾಡಿದೆ ಎಂದು ಅವರೇ ಹೇಳಿಕೊಂಡರೇ? ಅರಿವಾಗದಲ್ಲ!

ಎಲ್ಲರಿಗೂ ನಗುವನ್ನು ಕೊಟ್ಟ ಈ ಕವಿ ತನ್ನ ಮುಖದಲ್ಲಿ ಪೂರ್ಣಪ್ರಮಾಣದ ನಗುವನ್ನು ಹೊರಲು ಸಾಧ್ಯವೇ ಆಗಲಿಲ್ಲವೇ ಎಂಬುದು ಉತ್ತರ ಸಿಗದ ಪ್ರಶ್ನೆ. ಆದರೆ ಒಂದಂತೂ ಸತ್ಯ: ಅವರ ಕೆಲವು ಇಷ್ಟಾರ್ಥಗಳು ನೇರವೇರಿರಲಿಲ್ಲ. ತನ್ನ ಸೋದರಮಾವನ ಮಗಳು ’ವಿಜಯಲಕ್ಷ್ಮೀ’ ಎಂಬಾಕೆಯನ್ನು ಕವಿ ಪ್ರೀತಿಸಿದ್ದರಂತೆ. ಅದು ಒಮ್ಮುಖ ಪ್ರೀತಿಯಲ್ಲ! ವರಸೆಯಲ್ಲಿ ಅತ್ತೆಯಮಗನಾದ ನರಸಿಂಹಸ್ವಾಮಿಯವರನ್ನು ಆಕೆ ಕೂಡ ಅಷ್ಟಾಗಿ ಪ್ರೀತಿಸುತ್ತಿದ್ದಳಂತೆ! [ಪದ್ಯ ಮುಗಿದ ಬೆಳಗು ಹಾಡಿನೊಂದಿಗೆ ಈ ಕವಿಜೀವನ ಕಥೆಯನ್ನು ಮುಂದುವರಿಸೋಣ]

ಕರೆದಾಗ ಬರುವುದೇತರ ಸೊಗಸು ನನ್ನವಳೆ
ಕರೆಸಿಕೊಳ್ಳದೆ ಬಾರ ನನ್ನಬಳಿಗೆ
ಬೀಸಣಿಗೆ ಇಲ್ಲದೆಯೇ ಬೇಸಿಗೆಯ ಕಳೆದೇನು
ನನ್ನೊಡನೆ ನೀನಿರುವ ತನಕ, ಚಲುವೆ!

ಅನ್ಯೋನ್ಯ ಪ್ರೀತಿಯ ಅನುಬಂಧದಲ್ಲಿ ಸಿಲುಕಿದ್ದ ಈ ಜೋಡಿಗೆ ಮದುವೆಯಾಗಲು ಅನುಮತಿ ಸಿಗಲೇ ಇಲ್ಲ! ೧೯೩೪ರಲ್ಲಿ ಕೆ.ಎಸ್. ನ ಅವರ ತಂದೆ ಗತಿಸಿದಮೇಲೆ ಕೆ.ಎಸ್.ನ ಅವರಿಗೆ ಮದುವೆ ಮಾಡುವುದೆಂತ ತಯಾರಿ ನಡೆಯುತ್ತಿತ್ತು. ತನ್ನ ಪ್ರೀತಿಯನ್ನು ಮನೆಮಂದಿಗೆ ಅರುಹಿದ್ದರೂ ತಾಯಿಯಿಲ್ಲದ ಹುಡುಗಿ ವಿಜಯಲಕ್ಷ್ಮಿಯನ್ನು ಮದುವೆಯಾದರೆ ಅಳಿಯ ಮಾವನ ಮನೆಗೆ ಹೋದಾಗ ಉಪಚರಿಸಲು ಯಾರಿರುತ್ತಾರೆ? ಅಥವಾ ಮೊದಲ ಬಾಣಂತನ ನೋಡಿಕೊಳ್ಳುವವರಾರು ಎಂಬ ಪ್ರಶ್ನೆಗಳು ಕೆ.ಎಸ್.ನ ಅವರ ತಾಯಿಯನ್ನು ಕಾಡಿದ್ದರಿಂದ, ಜೋಯಿಸರಿಗೆ ಗುಟ್ಟಾಗಿ ತಿಳಿಸಿ-"ಜಾತಕಕ್ಕೆ ಕೂಡಿಬರುತ್ತಿಲ್ಲಾ" ಎಂಬ ಸಬೂಬು ನೀಡಿಸಿ ಆ ಹುಡುಗಿಯನ್ನು ಮದುವೆಯಾಗದಂತೇ ತಪ್ಪಿಸಿದ್ದರಂತೆ. ಮೊದಲೇ ತಾಯಿಯಿಲ್ಲದ ತಬ್ಬಲಿ ಹೆಣ್ಣುಮಗಳನ್ನು ಮನಸಾರೆ ಪ್ರೀತಿಸಿದ್ದ ಕವಿ ಮದುವೆಯ ಭರವಸೆಯನ್ನೂ ನೀಡಿದ್ದರು! ತಪ್ಪಿದ ತಾಳಕ್ಕೆ ಬಲಿಯಾದ ತನ್ನ ಪ್ರೀತಿಗೆ ತನ್ನ ಜೀವನದ ಅಂತ್ಯದವರೆಗೂ ಆ ಕೊರಗಿನಲ್ಲೇ ಅವರಿದ್ದರು ಎನ್ನಬಹುದಾಗಿದೆ. ಹಾಗಂತ ವೆಂಕಮ್ಮನವರನ್ನು ಅವರು ಕಡೆಗಣಿಸಲಿಲ್ಲ. ಬಹುಕಾಲ ವೆಂಕಮ್ಮನವರಲ್ಲೇ ಆ ಹುಡುಗಿಯ ಪ್ರತಿರೂಪವನ್ನು ಕವಿ ಕಂಡಿದ್ದಾರೆ.

ನನಗೆ ತಿಳಿಯದು ನೋಡು ನಿನ್ನ ಒಲವಿನ ಜಾಡು
ಮುಡಿದ ಹೂ ಎಸೆದುಬಿಡು ನನ್ನಮೇಲೆ
ಪದ್ಯವನು ಬದಿಗಿಟ್ಟೆ ನಾನು,ನೀನೇ ಕವಿತೆ
ನಿನ್ನಾಣೆಗೂ ನೀನೇ, ನನ್ನ ನಲಿವೆ!

ನೋವಿನ ನರಗಳನ್ನು ಎಳೆ ಎಳೆಯಾಗಿ ಹೊರಗೆಳೆದಂತೇ ಭಾಸವಾಗುವ ಈ ಕವನದಲ್ಲಿ ಪೂರೈಸಲಾಗದ ಪ್ರೀತಿಯ ಭರವನೆಯನ್ನು ಅಲವತ್ತುಕೊಂಡರೇ ?

ನಿನ್ನ ಕೆಳದುಟಿಯಲ್ಲಿ ಇರುವ ಸಿಡುಬಿನ ಕಲೆಯ
ನನ್ನ ಸಾವಿರ ಮುತ್ತು ತೊಡೆಯಲಿಲ್ಲ;
ನಿನ್ನ ಪಾಲಿಗೆ ನಾನು ತಂತಿಯಿಲ್ಲದ ವೀಣೆ
ವೀಣೆ ಬಂದರು ನೀನು ಮಿಡಿಯಲಿಲ್ಲ!

ಕೆಳದುಟಿಯಲ್ಲಿ ಸಿಡುಬಿನ ಕಲೆಯುಳ್ಳ ನನ್ನವಳೇ ನಿನ್ನ ಪಾಲಿಗೆ ನಾನು ತಂತಿಯೇ ಇಲ್ಲದ/ ಮೀಟಲಾಗದ ವೀಣೆಯಾಗಿಬಿಟ್ಟೆ! ಮದುವೆಯಾದರೂ, ಹೊಸದೊಂದು ವೀಣೆ ಬಂದರೂ ಅದನ್ನು ನೀನು ಮೀಟದಾದೆ!

ಸಿರಿಮೌನದಲ್ಲಿ ನಾನೊಲವ ಹುಡುಕಲು ನಡೆದೆ
ಊರ ಕಟ್ಟೋಡಿದೆನು ಹೊಳೆಯವರೆಗೆ;
ನಿನ್ನ ಹಿಡಿದಾಗ ಮೈತುಂಬ ಏರಿತು ಕಾವು-
ಕವಿತೆಯಾಯಿತು ಪದ್ಯ ಕಟ್ಟಕಡೆಗೆ

ತನ್ನ ಹರೆಯದ ಆ ದಿನದಲ್ಲಿ ಹೊಳೆಯಂಚಿನಲ್ಲಿ ಅವಳೊಂದಿಗೆ ಕೈಹಿಡಿದು ಮಾತನಾಡುವಾಗ ಮೈಬಿಸಿಬಿಸಿಯಾಗಿತ್ತು, ಹೇಗೂ ಆಗದ ತಮ್ಮ ಸಾಂಗತ್ಯವನ್ನು ಮೌನದಲ್ಲೇ ಅಡಗಿಸಿ ಕಾವ್ಯಕನ್ಯೆಯಾಗಿ ನಿನ್ನನ್ನು ನಿರೂಪಿಸಿದೆನೆಂಬ ಕವಿಮನದ ಈ ಭಾವಕ್ಕೆ ಅನ್ಯವುಂಟೇ? ನಾಡಿಗರು ತಿಳಿಸಿದ ಈ ವಿಷಯ ಕೇಳಿ ಭಾರವಾದ ಮನಸ್ಸು ಬಹಳ ಹೊತ್ತು ಸ್ಪಂದಿಸಲಿಲ್ಲ. ಅದೊಂಥರಾ ಡೆಡ್ ಲಾಕ್ ಆದಹಾಗೇ ಸುಮ್ಮನಾಗಿಬಿಟ್ಟಿತ್ತು. ಅಮರಪ್ರೇಮಕ್ಕೆ ತಾಜಮಹಲನ್ನೋ ಮತ್ತೊಂದನ್ನೋ ನಾವು ಹೆಸರಿಸುತ್ತೇವೆ. ಇಬ್ಬಂದಿತನದಲ್ಲಿಯೂ ತನ್ನ ಜೀವಿತದಲ್ಲಿ ಸಿಕ್ಕಿದವಳಲ್ಲೇ ದಕ್ಕದ ಆ ಹುಡುಗಿಯನ್ನೂ ಕಂಡುಕೊಳ್ಳುತ್ತಾ, ಕೊಡಲಾಗದ ಜೀವನಪ್ರೀತಿಗೆ ತನ್ನೊಳಗೇ ಕೊನೇ ಕ್ಷಣದವರೆಗೂ ಮರುಗುತ್ತಾ ಬಾಳಿದ, ಇನ್ನು ತನ್ನಿಂದಾಗದು-ಪದ್ಯ ನಿಲ್ಲಿಸುತ್ತೇನೆಂಬುದನ್ನೂ ಪದ್ಯದಲ್ಲೇ ಹೇಳಿದ ಕವಿಯ ಈ ಪ್ರೇಮ ನಿಜವಾದ ಪ್ರೇಮಕ್ಕೆ ಹಿಡಿದ ಕನ್ನಡಿ. ಇವತ್ತು ಪ್ರೀತಿಸಿದ್ದೇವೆ ಎಂದುಕೊಳ್ಳುವ ಅನೇಕ ಹುಡುಗರು ತಮಗೆ ಸಿಕ್ಕದ ಹುಡುಗಿ ಇನ್ನಾರಿಗೂ ಸಿಗಬಾರದು ಎಂಬಂತಹ ದುಷ್ಟವರ್ತನೆಗೆ ಮುಂದಾಗುತ್ತರಲ್ಲಾ, ಪ್ರೇಮ ಎಂಬುದು ನಿಜವಾಗಿ ಅವರದಾಗಿದ್ದರೆ ಪ್ರೇಮಿಸಿದ ಜೀವ ಸುಖವಾಗಿರಲಿ ಎಂದು ಹಾರೈಸುವುದು, ಹಾರೈಸಿ ಬೀಳ್ಕೊಡುವುದು ಒಪ್ಪತಕ್ಕ ಕೆಲಸ. ಇವತ್ತಿನ ದಿನಮಾನದಲ್ಲಿ ಹಣದ-ಸೌಲಭ್ಯದ ಹಿಂದೆ ಬಿದ್ದಿರುವ ಹುಡುಗಿಯರ ಮನೋಭೂಮಿಕೆಯಲ್ಲಿ ಪ್ರೇಮ ಎಂಬ ಪದಕ್ಕೆ ಅರ್ಥವಿಲ್ಲ; ಆ ಅನುಭೂತಿಯೇ ಇಲ್ಲವಾದಾಗ ಕೆ.ಎಸ್.ನ. ಬರೆದಂತಹ ಪ್ರೇಮ ಪದ್ಯಗಳ ಹುಟ್ಟೂ ಸಾಧ್ಯವಿಲ್ಲ.


7 comments:

 1. Bhat avarE k s n ravara kathe ene irabahudu avara badukina sundara kshanagalu nOvina melukugalu kavyamaaleyaagi Odugara kelugarannu vismayagolisuttade

  ನನಗೆ ತಿಳಿಯದು ನೋಡು ನಿನ್ನ ಒಲವಿನ ಜಾಡು
  ಮುಡಿದ ಹೂ ಎಸೆದುಬಿಡು ನನ್ನಮೇಲೆ
  ಪದ್ಯವನು ಬದಿಗಿಟ್ಟೆ ನಾನು,ನೀನೇ ಕವಿತೆ
  ನಿನ್ನಾಣೆಗೂ ನೀನೇ, ನನ್ನ ನಲಿವೆ!

  mEllina kavana thunuku eshtu chennaagide, nodi.....
  olleya maahiti kottiddakkaagi dhanyavadagalu

  ReplyDelete
  Replies
  1. ರೂಪಾ ಅವರೇ, ಹೌದು, ನರಸಿಂಹ ಸ್ವಾಮಿಯವರ ಪ್ರತಿಯೊಂದೂ ಕಾವ್ಯವೇ ಹಾಗೆ! ಓದುಗ ಎದೆಯನ್ನೇ ಆವರಿಸಿಕೊಳ್ಳುವುದು ಅವರ ಕವನದ ತಾಕತ್ತು; ಪ್ರಾಯಶಃ ಅದು ಅವರ ಭಗ್ನಪ್ರೇಮವನ್ನೇ ಪ್ರೇಮಿಯಾಗಿ ಚಿತ್ರಿಸಿದ ವಿಶಿಷ್ಟ ಗತ್ತು, ಧನ್ಯವಾದಗಳು.

   Delete
 2. ಭಟ್ ಅವರೇ ನಾನಂತೂ ಕೆ.ಎಸ್.ನ. ಅವರನ್ನು ಕಾಮ ಪುರಾಣವಿಲ್ಲದ ಪುಟಕಿಟ್ಟ ದಾಂಪತ್ಯ ಪ್ರೇಮ ಕವಿ, ಸುಂದರ ಬದುಕಿನ ಕಲ್ಪನೆಯ ಸಾಕಾರ ಮೂರ್ತಿವೆತ್ತ ಪದುಮಳ ರಾಯರ ಒಳನುಡಿ, ಮೆಲುನುಡಿ, ನಲ್ನುಡಿ, ನಗೆ, ನಲಿವು, ಒಲವಿನ ಕವಿ ಎಂದು ಆರಾಧಿಸಿದ್ದೆ ಅಲ್ಲದೆ ಒಲವಿನ ದಾರ್ಶನಿಕತೆಯ ದರ್ಶಕರೂ ಅವರೆನ್ಬುದು ಸೋಜಿಗಕ್ಕೆ ದೂಡುತ್ತಿದ್ದ ಗೊಂದಲಕ್ಕೆ ತೆರೆ ಎಳೆಯುವಂತ ಮಾಹಿತಿ ಒದಗಿಸಿದ್ದೀರಿ ಅವರ ಮನದಾಳದಲ್ಲೆಲ್ಲೋ ಅಡಗಿ ಕಾವ್ಯದ ಬುಗ್ಗೆ ಹರಿಸುತ್ತಿದ್ದ ಸಿಡುಬು ಕಳೆಯ ಹುಡುಗಿಯನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.

  ReplyDelete
  Replies
  1. ಶಿವಶಂಕರ ಅವರೇ, ಕೆ.ಎಸ್.ನ ಎಂದೂ ಕಾಮಿಯಲ್ಲ! ತನ್ನ ಮನದಿಂಗಿತವನ್ನು ಮನೆಯವರೆದುರು ಹೇಳಿದಾಗಲೂ ಸಂಪ್ರದಾಯ ಶರಣರಾದ ಅಮ್ಮ ಹೇಳಿದ್ದನ್ನು ಅಲ್ಲಗಳೆಯಲಾರದೇ, ತನ್ನ ಪ್ರೇಮವನ್ನೂ ಬದಿಗೊತ್ತಿ ಅಮ್ಮನ ಮನಸ್ಸಿಗೆ ನೋವುಂಟುಮಾಡದೇ ತಾನೇ ನೋವನ್ನು ಅನುಭವಿಸಿದರು! ಪದ್ಮ ಅಥವಾ ಪದುಮ ಎನ್ನುವ ಹುಡುಗಿಯ ಪಾತ್ರವನ್ನು ಕಾವ್ಯಪ್ರತಿಮೆಯಾಗಿ ಅವರು ಸೃಜಿಸಿಕೊಂಡಿದ್ದು ಎನಿಸುತ್ತದೆ. ಪ್ರೀತಿಸಿದ ಸೋದರಮಾವನ ಮಗಳಿಗೆ ಬದುಕು ಕೊಡಲಾಗದ ಅನಿವಾರ್ಯತೆಯಲ್ಲಿ ತೊಳಲಾಡಿದ ನರಸಿಂಹಸ್ವಾಮಿಯವರು ಮನೆಯವರ ಇಚ್ಛೆಯಂತೇ ಮದುವೆಯಾದ ವೆಂಕಮ್ಮನವರಲ್ಲೇ ತನ್ನ ಪ್ರೇಮಿಯ ಪ್ರತಿರೂಪವನ್ನು ಕಂಡರೂ ಮಗ್ಗುಲಲ್ಲಿಟ್ಟುಕೊಂಡ ಕೆಂಡದಂತೇ ಆಗಾಗ ಆ ಕೆಂಡದ ಶಾಖ ಅವರಿಗೆ ತಟ್ಟುತ್ತಲೇ ಇತ್ತು ಎಂಬುದು ತಿಳಿದುಬರುತ್ತದೆ.

   ಕೆ.ಎಸ್.ನ. ದಂಪತಿಯನ್ನು ನಾನು ಸ್ವತಃ ಭೇಟಿಯಾಗಿದ್ದೆ, ಸಾದಾಸೀದಾ ಬಡಜೀವನ ಅವರದ್ದು. ವೆಂಕಮ್ಮನವರಂತೂ ಮನೆಗೆ ಬಂದವರನ್ನು ಹಾಗೇ ಕಳಿಸಿದ ಜನವಲ್ಲ! ಅವರ ಮುಪ್ಪಿನಲ್ಲೂ, ನನಗೆ ಶುಚಿರುಚಿಯಾದ, ಏಲಕ್ಕಿಹಾಕಿದ ಲಿಂಬೂ ಪಾನಕವನ್ನು ಮಾಡಿಕೊಟ್ಟಿದ್ದರು. ಅವರ ಬಗ್ಗೆ ಬರೆದ ಇನ್ನೊಂದು ಲೇಖನ ಇಲ್ಲಿದೆ, ಸಾಧ್ಯವಾದರೆ ಓದಿ:
   http://nimmodanevrbhat.blogspot.in/2010/11/blog-post_17.html

   ಅವರು ಬಹಳ ಅನ್ಯೋನ್ಯವಾಗಿದ್ದರು, ಮನೆಯಲ್ಲಿ ತಂಟೆತಕರಾರು ಇರಲಿಲ್ಲ. ದಪ್ಪಗಾಜಿನ ಕನ್ನಡಕದ ಹಿಂದೆ ಆಗಾಗ ಬೆರಳಾಡಿಸುತ್ತಾ ಮತ್ತೆ ಧರಿಸುತ್ತಾ ಇರುತ್ತಿದ್ದ ಕೆ.ಎಸ್.ನ ಅವರು ತನ್ನ ಕುಟುಂಬದ ಇಚ್ಛೆಯಂತೇ ಸ್ವಾರ್ಥವನ್ನು ತ್ಯಾಗಮಾಡಿದರೂ ಮೆಚ್ಚಿದ ಸೋದರಮಾವನ ಮಗಳು ಅವರ ನೆನಪಲ್ಲೇ ಸದಾ ಉಳಿದಿದ್ದಳು. ಅಂತಹ ನೋವಿನಲ್ಲೂ ಪತ್ನಿಗೆ ಪ್ರೀತಿಯನ್ನು ಕಮ್ಮಿ ಮಾಡಲಿಲ್ಲ ಅವರು! ಇದು ಅವರ ಸಂಯಮವನ್ನೂ ಪ್ರೀತಿ-ರೀತಿ-ನೀತಿಯನ್ನೂ ತೋರಿಸುತ್ತದೆ. ಬಾಹ್ಯವಾಗಿ ಯಾರಿಗೂ ತನ್ನಂತರಂಗವನ್ನು ತೆರೆದೂ ತೆರೆದಿಡದೇ ಒಳಗೊಳಗೇ ಕೊರಗಿದವರು ಕೆ.ಎಸ್.ನ. ಪ್ರಾಯಶಃ ಕಣ್ಣಿಗೇ ಆಗಾಗ ಕಾಣುತ್ತಿದ್ದರೂ ಪತ್ನಿಯನ್ನಾಗಿ ಸ್ವೀಕರಿಸಲಾಗದಿದ್ದುದಕ್ಕೂ, ತಾನು ನಿನ್ನನ್ನೇ ಪ್ರೀತಿಸುತ್ತೇನೆ ಎಂದು ಮಾತುಕೊಟ್ಟು ಮುರಿದುಕೊಂಡಿದ್ದಕ್ಕೂ ಯಾವುದೋ ಅಪರಾಧೀ ಪ್ರಜ್ಞೆಯೋ ಪಾಪಪ್ರಜ್ಞೆಯೋ ಅವರನ್ನು ಕಾಡುತ್ತಿದ್ದಿತು ಎಂಬುದೂ ಸ್ಪಷ್ಟವಾಗುತ್ತದೆ. ಆದರೆ ಅವ್ಯಾವುದನ್ನೂ ಬಾಯ್ಬಿಟ್ಟು ಹೇಳಿಕೊಂಡರೂ ಪತ್ನಿಗೆ ಬೇಸರವಾಗಬಹುದಲ್ಲಾ ಎಂಬ ಕಾರಣಕ್ಕೆ ಗುಪ್ತವಾಗಿರಿಸಿದರೂ ಅದುಮಿಡಲಾರದ ಆ ರಹಸ್ಯವನ್ನು ತನ್ನ ಕವನಗಳಲ್ಲಿ ಅಪರೂಪಕ್ಕೆ ಬರೆದ ಕಥೆಗಳಲ್ಲಿ ಚಿತ್ರಿಸಿದ್ದಾರೆ. ಆ ಚಿತ್ರಣಗಳಲ್ಲಿ ಅಲ್ಲಲ್ಲಿ ಸಿಗುವ ತುಟಿಯಂಚಿನ ಸಿಡುಬಿನ ಕಲೆಯವಳು ಎಂಬುದನ್ನು ಬಿಟ್ಟರೆ ಮತ್ತೆಲ್ಲೂ ಅವರನ್ನು ಆ ಹಾದಿಯಲ್ಲಿ ಹಿಡಿಯಲು ಯಾರಿಂದಲೂ ಸಾಧ್ಯವಿಲ್ಲ. ಪಾಪದ ಜೀವವೊಂದು ಇನ್ನೊಂದು ಪಾಪದ ಜೀವಕ್ಕೆ, ಪ್ರೇಮಕ್ಕೆ ಹಾತೊರೆದು, ತನ್ನವರಿಂದಲೇ ತನಗದ ನಿಲುಕದ ನಕ್ಷತ್ರವೆಂದು ಮಾಡಲ್ಪಟ್ಟಾಗ ತನ್ನೆಲ್ಲಾ ಭಾವಬಂಧುರಗಳನ್ನೂ ಪ್ರೇಮ ಸಿಂಧುಗಳನ್ನೂ ತನ್ನಾಂತರ್ಯದಲ್ಲೇ ಬಂಧಿಸಿ ಒಳಮುಖಮಾಡಿ, ಕಾವ್ಯ ಕುಸುಮಗಳನ್ನೇ ತನ್ನ ಆ ಪ್ರೇಮಿಗೆ ಮನಃಪೂರ್ವಕ ಸಮರ್ಪಿಸಿದ ಕೆ.ಎಸ್.ನ ಅವರ ತಾಳ್ಮೆ ಸಣ್ಣ ವಿಷಯವಲ್ಲ; ಇದು ಸಾಮಾನ್ಯನೊಬ್ಬನಿಂದ ಸಸಾರಕ್ಕೆ ಆಗದ ಕೆಲಸ! ಅಂತಹ ಪರೀಕ್ಷೆಗೂ ತನ್ನನ್ನೇ ಒಡ್ಡಿಕೊಂಡು ನೋವು ನುಂಗಿ ನಮಗೆಲ್ಲಾ ಮಲ್ಲಿಗೆಯ ಕಂಪನ್ನು ಹರಡಿದ ಕವಿವರ್ಯನಿಗೆ ನಮ್ಮ ನಮನಗಳನ್ನು ಎಷ್ಟು ಹೇಳಿದರೂ ಕಮ್ಮಿಯೇ, ಧನ್ಯವಾದಗಳು.

   Delete
 3. ಓದಿದ ಎಲ್ಲರಿಗೂ ನಮನಗಳು.

  ReplyDelete
 4. Is this story is true sir ?.I was under the impression that all his poems are on his wife.In fact i told my friend i wanted to be KSN wife in next life.What is the source for this side of the story ?

  ReplyDelete
  Replies
  1. I am not sure whether its true or false, but well known critic Sumatheendra Nadig had written about this,but I feel nothing wrong in it, he wanted to marry a girl, due to his home circumstance he couldn't do it, he found it in poems, at the same time he has shown lavish love to his wife also! That is why he is really great !

   Delete