ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, June 25, 2010

’ಇದು ದೀಪ ಇರುತ್ತದೆ’!!!


’ಇದು ದೀಪ ಇರುತ್ತದೆ’!!!


ದೀಪಕ್ಕೆ ’ಇದು ದೀಪ ಇರುತ್ತದೆ’ ಎಂದು ಯಾರೂ ಬೋರ್ಡು ಹಾಕುವುದಿಲ್ಲ ಅಲ್ಲವೇ? ದೀಪವನ್ನು ನೋಡಿದ ತಕ್ಷಣ ನಮಗೆ ಗೊತ್ತು ಅದು ದೀಪ್ ಎಂಬುದು! ಯಾಕೆಂದರೆ ಅದು ಸುತ್ತಲ ಪ್ರದೇಶಕ್ಕೆ ಬೆಳಕು ಹರಿಸಿರುತ್ತದೆ. ಹಾಗೆಯೇ ಜ್ಞಾನಿಗಳು, ಮಹಾತ್ಮರು ಎಲ್ಲರ ಬದುಕು. ಅವರು ತಾವು ಇಂಥವರು ಅಂಥವರು ಮೆಂತೆ ಕದ್ದವರು ಎಂದು ಬಡಾಯಿ ಕೊಚ್ಚಿಕೊಳ್ಳುವುದಿಲ್ಲ. ಅದೆಲ್ಲಾ ಏನಿದ್ದರೂ ರಾಜಕೀಯದವರಿಗೆ ಬಿಟ್ಟಿದ್ದು. ಇತ್ತೀಚಿನ ರಾಜಕೀಯದ ಹಲವು ದುಂದುಗಾರಿಕೆಗಳಲ್ಲಿ ಸಮಾವೇಶಗಳೂ ಒಂದು. ಸಾಧನೆ ಮಾಡಿದ್ದರೆ ಅದನ್ನು ಜನತೆ ಮೆಚ್ಚುತ್ತಾರೆ, ಅದಕ್ಕಾಗಿ ಸಮಾವೇಶ ಯಾತಕ್ಕೆ ಬೇಕು ? ಹಿಂದೆ ರಾಮರಾಜ್ಯವನ್ನು ನಾವು ಕೇಳಿಲ್ಲವೇ? ಅಂತಹ ಅನ್ವರ್ಥಕ ನಾಮ ಪಡೆದ ರಾಜ್ಯ ಅದಾಗಿತ್ತು, ಅಲ್ಲೆಲ್ಲೂ ಈ ಥರದ ಸಮಾವೇಶಗಳು ನಡೆದಿರಲಿಲ್ಲ ಅಲ್ಲವೇ? ನಡೆದಿದ್ದಾದರೆ ಅದು ಉಲ್ಲೇಖಗೊಳ್ಳುತ್ತಿತ್ತು.

ಇಂದಿನ ಜನತೆ ಪಾಲಾಗಿ ಹೋಗಿದ್ದಾರೆ, ಕೈ ಬೆಂಬಲಿಗರು,ಕಮಲ ಬೆಂಬಲಿಗರು,ತೆನೆಹೊತ್ತ ಮಹಿಳೆ ಬೆಂಬಲಿಗರು ಹೀಗೆಲ್ಲ ಹಲವಾರು ಬೆಂಬಲಿಗರುಗಳು--ಆ ಬೆಂಬಲಿಸುವಿಕೆಗೆ ಅರ್ಥವೇ ಇಲ್ಲ! ಪಕ್ಷದ ಕಾರ್ಯಕರ್ತನಾಗಿ ಕಾಸು ಹೊಡೆಯುವ ಪ್ಲಾನು! ಅಲ್ಲಿ ನ್ಯಾಯ-ನೀತಿ-ಧರ್ಮ ಎಲ್ಲ ಬರೇ ಪುಸ್ತಕಗಳಲ್ಲಿವೆ. ನಾನು ಈ ಮೊದಲೇ ಬರೆದಂತೆ ಹಳ್ಳಿ ಹಳ್ಳಿಗಳಲ್ಲೂ ಈ ರಾಜಕೀಯ ಹೊಕ್ಕು ಅಕ್ಕ-ಅಣ್ಣ ಎಂದುಕೊಂಡಿದ್ದ ಮಂದಿಯೆಲ್ಲ ಈಗ ಆ ಪಕ್ಸದ ಅಧ್ಯಕ್ಸರು ಈ ಪಕ್ಸದ ಕಾರ್ಯಕರ್ತ್ರು ಅಂತಲೇ ಗುರುತಿಸಿಕೊಳ್ಳುತ್ತಾರೆ....ಏನಾಗಿದೆ ನಮ್ಮ ಜನರಿಗೆ? ನಮಗೆ ಬೇಕಾದುದು ಒಳ್ಳೆಯ ಸೌಲಭ್ಯಸಹಿತ ಸಂತೃಪ್ತ ಜೀವನ-ಅದನ್ನು ದೊರಕಿಸಿ ಕೊಡುವಂತಹ ಸರಿಯಾದ ವ್ಯಕ್ತಿ ಯಾರೋ ಅವನಿಗೆ ಪಕ್ಷಭೇದವಿಲ್ಲದೇ ಮತದಾನ ಮಾಡಬೇಕು. ಮೇಲಾಗಿ ಇಡೀ ದೇಶದಲ್ಲಿ ಎರಡೇ ಪಕ್ಷಗಳಿದ್ದರೆ ಆಗ ದಿನಬೆಳಗಾಗಿನ ದ್ಯಾವು,ಸಿದ್ದು,ಜಾನು, ರಾಮು ಇವರೆಲ್ಲರ ಕಿತ್ತಾಟ-ತೇಪೆ ಹಚ್ಚಿಕೊಂಡು ರಾಜಕೀಯ ಅಧಿಕಾರ-ದುಡ್ಡಿನ ಲಾಲಸೆಗಾಗಿ ತೆಕ್ಕೆಹಾಕಿಕೊಳ್ಳುವುದು ನಿಲುತ್ತದೆ, ಪಕ್ಷಾಟನೆ- ಕುದುರೆ ವ್ಯಾಪಾರ ಎಲ್ಲಾ ಮಾಯವಗಿ ಜನತೆ ನಿರುಂಬಳರಾಗುತ್ತಾರೆ! ಆದರೆ ’ಅಂದಕಾಲತ್ತಿಲ್’ ಎಂಬಂತೆ ಸ್ವಾತಂತ್ರ್ಯ ಬಂದಾಗ ಅರ್ಜೆಂಟಾಗಿ ಮಾಡಿದ ನಮ್ಮ ಸಂವಿಧಾನದಲ್ಲಿ ಅನೇಕ ನ್ಯೂನತೆಗಳಿವೆ-ಅವುಗಳು ಹಾಗೇ ಇರುವವರೆಗೂ ರಾಜಕೀಯದವರ ಆಸ್ತಿ ಬೆಳೆಯುತ್ತದೆ-ಹಲವಾರು ಅನುಪಯುಕ್ತ ಸಮಾವೇಶಗಳು ನಡೆಯುತ್ತಲೇ ಇರುತ್ತವೆ!

ಎಲ್ಲಿಯವರೆಗೆ ಸಂವಿಧಾನದ ತಿದ್ದುಪಡಿ ಆಗುವುದಿಲ್ಲವೋ ಅಲ್ಲೀವರೆಗೆ ನ್ಯಾಯವೇ ಮೂರ್ತಿವೆತ್ತಂತ ವೆಂಕಟಾಚಲೈಯ್ಯ, ಸಂತೋಷ ಹೆಗ್ಡೆ ಇಂಥವರಿಗೆಲ್ಲ ನೋವು ಸಹಜ! ಕಥೆಯೋಮ್ದು ನೆನಪಿದೆ -ನೀನು ಹೊಡೆದ ಹಾಗೇ ಮಾಡು, ನಾನು ಸತ್ತಹಾಗೇ ನಟಿಸುತ್ತೇನೆ’ ಎಂದು, ಅದೇ ರೀತಿ ನೀವು ಹಿಡಿದ ಹಾಗೇ ಮಾಡು, ನಾವು ಶಿಕ್ಷಿಸಿದ ಹಾಗೇ ಮಾಡುತ್ತೇವೆ ಎಂದು ಆಳುವ ದೊರೆಗಳು ಹೇಳಿದ್ದನ್ನು ಕೇಳಿಕೊಂಡು ಬಿದ್ದಿರುವ ಕೆಲಸ ಸದ್ಯ ಲೋಕಾಯುಕ್ತ ಸ್ಥಾನದ್ದು! ಅದರಲ್ಲೂ ಕಳ್ಳರನು-ಖೂಳರನ್ನು ಹಿಡಿಯುವಗಲೇ ಫೋನು,ಬೆದರಿಕೆ ಇತ್ಯಾದಿ! ಯಾಕಾಗಿ ಮಾಡಬೇಕು ಇದನ್ನು, ನಮ್ಮ ಜನರಿಗೆ ದಮ್ಮಿದ್ದರೆ ಎದ್ದು ಬಂದು ಚಳುವಳಿ ನಡೆಸಿ ಲೋಕಯುಕ್ತರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಿಸಲಗುವುದಿಲ್ಲವೇ? ಇದು ಲೋಕಾಯುಕ್ತರಿಗೆ ಮಾತ್ರವಲ್ಲ- ಎಲ್ಲ ಆ.ಭಾ.ಸೇ, ಆ.ಕ.ಸೇ ಮುಂತಾದ ಬ್ಯೂರೋಕ್ರಾಟ್ಸ್ ಕೂಡ ಇದಕ್ಕೆ ಹೊರತಾಗಿಲ್ಲ. ಎತ್ತಾಕಿ ಅವನನ್ನು ಎಂದರೆ ಅಲ್ಲಿಂದ ರಾತ್ರೋ ರಾತ್ರಿ ವರ್ಗಾವಣೆ- ಏನು ಅ ಅಧಿಕಾರಿಗೆ ನಮಗಿರುವಂತೆ ಹೆಂಡತಿ-ಮಕ್ಕಳು ಇರುವುದಿಲ್ಲವೇ, ಸಂಸಾರದ ಆರೋಗ್ಯ,ಮಕ್ಕಳ ವಿದ್ಯಾಭ್ಯಾಸ ಇವೆಲ್ಲದರ ಕುರಿತು ವರ್ಗಾಯಿಸುವಾಗ ದೊರೆಗಳು ವಿಚಾರಿಸುತ್ತಾರೆಯೇ? ಇಲ್ಲವಲ್ಲ. ತನ್ನ ಬಚಾವಿಗಾಗಿ, ತನ್ನ ಉಳಿವಿಗಾಗಿ ತನ್ನಿಂದ ಆದ ಹೆಚ್ಚಿನ ಕಾಣಿಕೆಯನ್ನು ಕಾಣದ ಕೈಗೆ ಕೊಡಬೇಕಾಯಿತು ಆತ! ಅಲ್ಲಿಂದಲೇ ಶುರು ಬ್ರಷ್ಟಾಚಾರ! ಬ್ರಷ್ಟಾಚಾರದ ನಿರ್ಮೂಲನೆ ಮೇಲಿಂದ ಕೆಳತನಕ ಆಗ್ಬೇಕೇ ಹೊರತು ಕೆಳಗಿನಿಂದ ಮೇಲೆ ಹೋಗುತ್ತಾ ಹೋದರೆ ಶತಶತಮಾನಗಳು ಕಳೆದರೂ ಅದು ಲಂಗು-ಲಗಾಮು ಇಲ್ಲದೇ ಬೆಳೆಯುತ್ತದೆ! ಇದನ್ನು ನೋಡಿದಾಗ ನಮಗೆ ರಾಜರುಗಳ ಆಳ್ವಿಕೆಯೇ ಮೇಲೆಸುತ್ತದೆ ಅಲ್ಲವೇ?

ಇನ್ನೊಂದನ್ನು ತಮ್ಮೆಲ್ಲರಲ್ಲಿ ಹೇಳಬೇಕಾಗಿದೆ, ಇವತ್ತು ಜನಸಂಖ್ಯೆಯ ದೃಷ್ಟಿಯಲ್ಲಿ ಮೈನಾರಿಟಿ ಎಂಬುದು ಆ ಮಟ್ಟದಲ್ಲಿ ಇಲ್ಲ, ಎಲ್ಲಾ ಮೈನಾರಿಟಿ ಈಗ ಬದಲಾಗಿ ಮೆಜಾರಿಟಿಗೆ ಬಂದಿದೆ! ಮೈನಾರಿಟಿ-ಮೆಜಾರಿಟಿ, ಆ ಕೋಮು -ಈ ಕೋಮು,ಆ ಜಾತಿ-ಈಜಾತಿ, ಹಿಂದ-ಅಹಿಂದ,ಮೀಸಲಾತಿ-ಒಳಮೀಸಲಾತಿ ಇವೆಲ್ಲ ಯಾತಕ್ಕೆ ಸ್ವಾಮೀ? ಭಾರತ ಒಂದೇ, ಇಲ್ಲಿನ ಪ್ರಜೆಗಳೆಲ್ಲ ಒಂದೇ ಎಂಬ ಏಕರೂಪದ, ತಾರತಮ್ಯವಿರದ ಆಢಳಿತವನ್ನು ಇಟ್ಟು ಯಾರು ಪರಿಶ್ರಮದಿಂದ ಮೇಲೆಬರುತ್ತಾರೋ ಅಂತವರಿಗೆ ಆದ್ಯತೆ ಕೊಟ್ಟರೆ ಅಲ್ಲಿಗೆ ಬಹುಪಾಲು ಬ್ರಷ್ಟಾಚಾರ ವೇಗವಾಗಿ ಕಡಿಮೆಯಾಗುತ್ತದೆ. ಸುಳ್ಳು ಸರ್ಟಿಫಿಕೇಟ್ ಗಳು,ಜಾತಿ ಪತ್ರಗಳು, ಆದ್ಯತಾ ಪತ್ರಗಳು, ಶಾಸಕ-ಸಂಸದ-ಮಂತ್ರಿಗಳ ಪರ್ಸನಲ್ ಆದ್ಯತೆಗಳು ಎಲ್ಲವೂ ಹೊರಹೊರಟು ಟ್ರಾನ್ಸ್ಪರಂಟ್ ಆಢಳಿತವಾಗುತ್ತದೆ. ಖಜಾನೆಗೆ ಬರುವ ಮತ್ತು ಹೋಗುವ ಹಣದ ಲೆಕ್ಕದ ಜೊತೆಗೆ ಸರಕಾರೀ ಕೆಲಸಗಳನ್ನು ಮಾಡುವ ಗುತ್ತಿಗೆದಾರರಿಗೆ ಕೆಲವೊಂದು ನಿಬಂಧನೆಗಳನ್ನು ಹಾಕಿದರೆ ಅಲ್ಲಿ ಬ್ರಷ್ಟಚಾರ ಕಮ್ಮಿ ಆಗುತ್ತದೆ. ಸರಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಬಹುಕಾಲ ತಿಂದು ಬದುಕಿರುವ ಹಳೆಯ ಭೂತಗಳಮೇಲೆ ಸ್ವತಂತ್ರ ಲೋಕಾಯುಕ್ತರು ತಮ್ಮ ಮಾಂತ್ರಿಕತೆಯನ್ನು ಮೆರೆದರೆ ಅಲ್ಲಿಗೆ ಹಲವು ಹಂತಗಳ ಬ್ರಷ್ಟಾಚಾರ ಕಮ್ಮಿ ಆಗುತ್ತದೆ. ಆದರೆ ನಮ್ಮ ಸ್ಥಿತಿ ಹೇಗಿದೆ ಎಂದರೆ ಬೆಕ್ಕಿಗೆ ಘಂಟೆ ಕಟ್ಟುವವರಾರು ಎಂಬಂತಾಗಿದೆ! ಇದನ್ನೆಲ್ಲ ಗ್ರಹಿಸಿಯೇ ಸರಿಯಾದ ವ್ಯಕ್ತಿ ಲೋಕಾಯುಕ್ತರಾಗಿರಲು ಹೇಸುತ್ತಾರೆ, ಈಗ ಶ್ರೀ ಹೆಗ್ಡೆಯವರಿಗೆ ಆಗಿದ್ದೂ ಅಷ್ಟೇ!

ತಮ್ಮೊಳಗೇ ಕಿತ್ತಾಟ, ಮುಸುಕಿನ ಗುದ್ದಾಟ ಮುಗಿಸಿಕೊಳ್ಳದ ಜನ ಸಮಾವೇಶ ಮಾಡುವುದೇತಕ್ಕೆ? ಅಷ್ಟಾಗಿಯೂ ಇವರು ಮಾಡಿದ ಅಂತಹ ಘನಂದಾರೀ ಕೆಲಸ ಯಾವುದೇ ಸರಕಾರ ಮಾಡಲಗದಂತಹ ಅಸಾಮಾನ್ಯ ಕೆಲಸವೇನು? ನೆರೆಪರಿಹಾರದ ಸಮಸ್ಯೆಯೇ ಇನ್ನೂ ಬಗೆಹರಿದಿಲ್ಲ, ಬೇಕಾದಲ್ಲಿ ರಸ್ತೆ ಮಾಡುವುದು ಬಿಟ್ಟು ಬೇಡದಲ್ಲಿ ರಸ್ತೆ, ಬೋರು, ಅಂಡರ್ಪಾಸು ಇತ್ಯದಿ ಮಾಡುತ್ತ ಇದನ್ನೇ ಹೆಗ್ಗಳಿಕೆಯೆನ್ನುವವರಿಗೆ ಏನೆನ್ನಬೇಕು? ಇದಕ್ಕೇ ಹೇಳಿದ್ದು ಸಾಧಿಸಿದವರು ಅದನ್ನು ಸಮಾವೇಶ ಕರೆದು ತೋರಿಸಬೇಕಿಲ್ಲ, ಜನರಿಗೆ ಕಣ್ಣಿದೆ,ಬುದ್ಧಿಯಿದೆ. ಮತದಾರ ದೂರದಿಂದ ನೋಡುತ್ತಿರುತ್ತಾನೆ! ಹೊಗೆಯ ಮೂಲ ಬೆಂಕಿ ಎಂಬುದು ಎಲ್ಲರಿಗೂ ಗೊತ್ತು! ಇದಕ್ಕಾಗಿ ಕೋಟಿಗತ್ತಲೇ ಖರ್ಚುಮಾಡಿ ಸಮಾವೇಶಬೇಕೆ? ಹೋಗಲಿ ಸಮಾವೇಶದಲ್ಲಿ ನಿಜವಾಗಿ ’ಸಾಧನೆ’ಗೈದ ಸಂಪಂಗಿ,ರೇಣುಕ, ಹಾಲಪ್ಪ ಇವರೆಲ್ಲರಿಗೂ ಸನ್ಮಾನವನ್ನಾದರೂ ಮಾಡಿ!

ಕೊನೆಯದಾಗಿ ಒಂದುಮಾತು,ನಿನ್ನೆಯ ಒಂದು ದಿನಪತ್ರಿಕೆಯೊಂದರಲ್ಲಿ ಒಬ್ಬರು ಬರದ್ರು ಇಂಥಾ ಮಂತ್ರಿ-ಅವರೊಳಗೆ ನೀವರಿಯದ ಇಂಥಾ ಒಳ್ಳೆಯ ಮುಖಗಳು ಅಂತ. ಸ್ವಾಮೀ ಹತ್ತುಮಂದಿಯ ಆಸ್ತಿಯಾದ ಭೂಮಿಯಲ್ಲಿ ನಿಸರ್ಗವನ್ನು ದೋಚುವ ಗಣಿಗಾರಿಕೆಯಿಂದ ಗಳಿಸಿದ ಹಣವನ್ನು ತಮ್ಮ ಸ್ಥಾನಭದ್ರತೆಗೆ ಉಪಯೋಗಿಸುತ್ತಿದ್ದಾರೆ, ಅದಿಲ್ಲಾ ಅವರು ಮುಂದೆ ಅಧಿಕಾರಕ್ಕೆ ಬರುವುದಿಲ್ಲ! ಅಧಿಕಾರವಿಲ್ಲದಿದ್ದರೆ ಗಣಿ ಕೈತಪ್ಪಿ ಹೋಗುತ್ತದೆ! ಹೀಗಾಗೇ ಬರೆದ ಆ ಮಹನೀಯರಿಗೊಂದು ಹೇಳುತ್ತೇನೆ ನಾವರಿಯದ ಅ ಮುಖ ನಾವರಿಯದಿದ್ದರೂ ಅರಿತೇ ಇರುವುದು! ಅಲ್ಲಿ ಸ್ವಾರ್ಥವೇ ಇದೆ! ನಮ್ಮ ಹಿಂದಿನ ಜನಾಂಗ ನಿಸರ್ಗವನ್ನು ಇಷ್ಟೊಂದು ದೋಚಿರಲಿಲ್ಲ! ನನಗೂ ಒಂದಷ್ಟು ಅನುಕೂಲ ಕೊಡಿ-ಹಲ್ವಾರು ಜನರಿಗೆ ದಿನಾ ಅನ್ನಸತ್ರ ಮಾಡುತ್ತೇನೆ, ಹಲವು ಚಿಕ್ಕ-ಪುಟ್ಟ ಸೌಲಭ್ಯ ಕೊಡಿಸುತ್ತೇನೆ, ಸಾಮೂಹಿಕ ಮದುವೆಮಾಡಿಸುತ್ತೇನೆ--ಇದೆಲ್ಲಾ ರಾಜಕೀಯದವರ ಅಂಗಸೌಷ್ಟವ ಸ್ವಾಮೀ, ಅದಕ್ಕಿಂತಾ ಭಿನ್ನವಾದ ಬೇರಾವ ರೀತಿಯ ಮುಖವಿದೆಯೇ ಹೇಳಿ? ಹೇಳಿಕೊಟ್ಟ ಮಾತು ಕಟ್ಟಿಕೊಟ್ಟ ಬುತ್ತಿ ಬಹಳಕಾಲ ಬರೋದಿಲ್ಲ ಅನ್ನೋ ಗಾದೆ ಇದ್ಯಲ್ಲ ಹಾಗೇ ಜನಸಾಮಾನ್ಯನಿಗೆ ಅವನು ದುಡಿದು ತಿನ್ನಲು ಅನುಕೂಲವಾಗುವ ಪರಿಸರ ನಿರ್ಮಿಸಬೇಕೇ ಹೊರತು ಕ್ಷಣಿಕ ಆಮಿಷಗಳು-ದಾಸೋಹಗಳು ಜನರಲ್ಲಿ ಆಲಸ್ಯವನ್ನು ಬೆಳೆಸುತ್ತವೆ, ಜನ ತಮ್ಮತನವನ್ನು ಕಳೆದುಕೊಳ್ಳುತ್ತಾರೆ-ಇದು ಸಮಾಜಕ್ಕೆ ಅಂಟುವ ಪಾರ್ಕಿನ್ಸನ್ ಕಾಯಿಲೆಯಾಗುತ್ತದೆ. ದಾಸೋಹ ನಡೆಸಲು ಮಠ-ಮಾನ್ಯಗಳಿವೆ,ಮಂದಿರ-ಮಸೀದಿಗಳಿವೆ, ಅವುಗಳನ್ನು ನಡೆಸುವುದಕ್ಕಿಂತ ಆ ಅನಿವಾರ್ಯತೆ ಜನರಲ್ಲಿ ತಲೆದೋರದಂತೆ ನೋಡಿಕೊಳ್ಳಿ! ವೀರ ಮಯೂರವರ್ಮರು-ಹೊಯ್ಸಳರು-ವಿಜಯನಗರದ ಅರಸರು ಆಳಿದ ಈ ನಾಡಿನಲ್ಲಿ ಸ್ವಾವಲಂಬನೆಯ ಮಂತ್ರ ಹೇಳಿಕೊಡಿ, ಭಿಕ್ಷಾಟನೆ ಬೇಡ ಅಲ್ಲವೇ? ನಮ್ಮಲ್ಲಿನ ರಾಜಕೀಯಕ್ಕೆ ಸದ್ಯ ಎಚ್.ಎನ್ ರಂತಹ ಶಿಕ್ಷಣ ಕೊಡುವವರು, ನಿಜಲಿಂಗಪ್ಪ-ಕಡಿದಾಳು ಮಂಜಪ್ಪ ಥರದವರು ಬೇಕು. ಆವರು ನಿತ್ಯ ಅವರ ಮನೆಗಳಲ್ಲಿ ದಾಸೋಹ ಮಾಡಲಿಲ್ಲ, ಪತ್ರಿಕೆಗಳಲ್ಲಿ ಬಹಳ ಕಾಣಿಸಿಕೊಳ್ಳಲಿಲ್ಲ ಬದಲಿಗೆ ಜನಸಾಮಾನ್ಯನ ಮನೆಯಲ್ಲಿ ದಿನದ ದಿನಸಿಗೆ ಕೊರತೆ ಆಗದಂತೆ ನೋಡಿಕೊಂಡರು, ಅವರ ಮನೆಗಳಲ್ಲಿ ದಿನವೂ ದೀಪ ಬೆಳಗುವಂತೆ ಕಣ್ಣಿಟ್ಟು ಕಾದರು! ಅವರು ಮಡಿದಾಗ ಅವರ ಅಂತ್ಯಕಿಯೆಗೆ ಹೊರತಾಗಿ ಅವರಲ್ಲಿ ಬೇರಾವ ಕಾಸೂ ಇರಲಿಲ್ಲ-ಹೇಳಿಕೊಳ್ಳುವಂತಹ ಸ್ಥಿರಾಸ್ತಿಯೂ ಇರಲಿಲ್ಲ! [ಆದ್ರೆ ಆಂಧ್ರದಲ್ಲಿ ವೈ ಎಸ್ ಆರ್ ಸತ್ತಾಗ ಅವರ ಪರಿವಾರದ ಆಸ್ತಿ ೩೩ಸಾವಿರ ಕೋಟಿ ರೂಪಾಯಿ ಅಂತ ಹಲವು ಮಿಂಚಂಚೆಗಳು ಇನ್ನೂ ಪ್ರಚಲಿತದಲ್ಲಿವೆ -ಇವರೂ ಬದುಕಿದ್ದಾಗ ದಾಸೋಹಿಗಳಾಗಿದ್ದರು,ಈ ಮಿಂಚಂಚೆ ತಮಗೂ ಬಂದಿರಬಹುದು!] ಅಂತಹ ಸುಪುತ್ರರು ಬೇಕು ಕರ್ನಾಟಕಕ್ಕೆ, ಅಂತಹ ನಿಸ್ಪೃಹರು ಬೇಕು ನಮ್ಮ ದೇಶಕ್ಕೆ !

ಬಹಳ ಕೊರೆದುಬಿಟ್ಟೆನೇ? ಬೇಸರವಾಯಿತೇ? ಎಂದಿನಂತೆ ಒಂದು ಚಿಕ್ಕ ಹಾಡಿನೊಂದಿಗೆ ಮಂಗಳ ಹಾಡೋಣ ಅಲ್ಲವೇ?


ಬೆಳ್ಳಿ ಮೂಡಿತೋ ಕೋಳಿ ಕೂಗಿತೋ
ಭೂಮ್ಯಾಗೆ ಹಣವಚೆಲ್ಲಿ ಮಂಕ್ರಿಯಪ್ಪ ಕಾರೇರಿ ಬಂದ ................

ಮಳೆ-ಬಿಸಿಲು ಎಲ್ಲೆಲ್ಲೂ ಚೆಲ್ಲಾಡೈತೆ
ಸ್ಯಾಮಿಯಾನ್ದ ಮೇಲ್ ಮಂಜು ಹನಿ ಇಂಗೋಗೈತೆ
ಫ್ಲೆಕ್ಸು ಹಾರುತಿದೆ ಧೂಳು ಹರಡುತಿದೆ
ಜನತೆ ನೋಡುತಿದೆ ಹಣೆ ಚಚ್ಚಿಕೊಳ್ಳುತಿದೆ !

ಯಾಕ್ಲಾ ಲೂಸ್ ಮಾದ ಗುರ್ ಗುಟ್ತೀಯ್ಯಾ......?
ಎಣ್ಣೆ ಸಾಕಾಯಕಿಲ್ವಾ.....?

ರೈತರಿಗೆ ಹೊಸ ಸೌಲತ್ತನ್ನು
ಕೊಡುವೆನೆಂದು ಕಿತ್ತು ಭೂಮಿಯನ್ನು
ಕೈತೋರಿಸಿ ಅವರ್ಗೆ ಆಕಾಸ್ನಾಗೆ
ಹಾರೋದರು ಬೇಗ ಇಮಾನ್ದಾಗೆ
ಯೇ ಹೇ ಹೇ ಹೇ ಹೇ ಹೇ ಆಹಾಹಾ........ಹೋ

ಗಣಿಗಳಲಿ ಧಣಿಗಳು ಚೆನ್ನಾಗ್ಮೆದ್ದು
ಗಡಿಭಾಗದ ಜನಕ್ಕೊರ್ಸಿ ’ಜೇನುಕೈನ’
ಪೇಪರ್ನಾಗೆ ಮಿಂಚಿ ನಾ ನಾ ಥರ
ಆಗವ್ರೆ ಬಲು ಜೋರು ಶಿವನೇ ಹರ
ಓಹೋ ಹೋ ಹೋ ಹೋ ಹೋ ಆಹಾಹಾ......ಹೋ

ನೆರೆಕಂಬಳ ಗ್ಲೋಬಲ್ ಇನ್ವಸಟ್ಮಂಟು
ಎಲ್ಲಾದ್ರಾಗೂ ಉಂಟು ನೋಟಿನ ನಂಟು!
ತಮ್ಮೊಳಗೇ ತಾವ್ಯಾರು ತೋರ್ಸ್ಗಂಬುದು
ಈ ಇಸ್ಯಕ್ಕೊಂದಷ್ಟು ಖರ್ಚಾಕೋದು
ಯೇ ಹೇ ಹೇ ಹೇ ಹೇ ಹೇ ಆಹಾಹಾ........ಹೋ

ಏ ಏ ಎಲ್ಲಾಪ್ಪಾ ಇವ್ರೂ ಏಳ್ಲಾ ಮಾದ ಹೊತ್ತಾಯ್ತದೆ, ಹೊಟ್ಟೆ ಚುರುಗುಟ್ತೈತೆ ಮನೇಲಿ ಹಿಟ್ಟು ಆಗೋಗದೆ....ಮಂಕ್ರಿಯಪ್ಪೋರ್ನ ಕೇಳ್ದೆ ಒಸಿ ಇರು ಇನ್ನೊಂದ್ಕಿತಾ ಇಲೆಕ್ಸನ್ನಾಗೆ ಬತ್ತೀನಿ ಅಂತಂದ್ರು...ಹೋಗುದ್ಕೆ ಕೈಗೊಂದ್ ಕೆಂಪ್ ನೋಟ್ ಕೊಟ್ಟವ್ರೆ..ಭಾಳಾ ವಳ್ಳೆ ಜನ ನಮ್ಮ ಮಂಕ್ರಿಯಪ್ಪ್ನೋರು...ಊಟಿಲ್ಲಾ ಅಂದ್ರೆ ತಮ್ಮನೆತಾವ ಮಾಡ್ಕಂಡೋಗ್ಬುಡು ಅಂದ್ರು....ಏಳ್ರಪೋ .....ಹೇ ಹೇ...ಹೇ........

7 comments:

 1. ನೀವು ಹೇಳಿದ್ದು ಹದಿನಾರಾಣೆ ಸತ್ಯ. ಆದರೆ ನೀವು ಹೇಳಿದ೦ತಹ ಮಹನೀಯರು ಸದ್ಯಕ್ಕೆ ಯಾರೂ ಕಾಣುತ್ತಿಲ್ಲ. ಇರುವವರೆಲ್ಲರೂ ಪರಮಭ್ರಷ್ಟರೆ. ಕೊನೆಯಲ್ಲಿರುವ ನಿಮ್ಮ ಕವನದಲ್ಲಿರುವ ಅಣಕ ಸೂಪರ್, ಇದನ್ನು ನಮ್ಮ ಅಧಿಕಾರಸ್ಥರು ಓದುವುದಿಲ್ಲ ವಲ್ಲ ಎ೦ಬುದೊ೦ದೇ ಕೊರಗು. ಓದಿದರೂ ಅವರಿಗೆ ಅದು ಅರ್ಥವಾಗ ದೇನೋ ?

  ReplyDelete
 2. ನಿಮ್ಮ ‘ಮಂಗಳ ಶ್ಲೋಕ’ ಅದ್ಭುತವಾಗಿದೆ!

  ReplyDelete
 3. ಆಳವಾದ ಚಿಂತನೆಗೆ ಪ್ರೇರೇಪಿಸುವ ಲೇಖನವಿದು. ಥ್ಯಾಂಕ್ಸ್

  ReplyDelete
 4. ಅದ್ಭುತವಾದ ಹಾಸ್ಯಲೇಪನದೊಂದಿಗೆ ಕಟುವಾಸ್ತವವನ್ನು ತೆರೆದಿಟ್ಟು, ಕಟುವಾಗಿ ಕುಟುಕಿದ್ದಿರಾ...
  ಲಜ್ಜೆಗೆಟ್ಟ ಜನಕ್ಕೆ ಎಷ್ಟೇ ಇಟ್ಟರೂ ಅಷ್ಟೆಯಾ...
  ತಮ್ಮ ಕವಿರತ್ನ ಕಾಳಿದಾಸನ ಹಾದಿನ ಹೊಸ ಭಾಗ ಚೆನ್ನಾಗಿದೆ..

  ReplyDelete
 5. ಭಟ್ ಸರ್ ;ನಿಮ್ಮ ವಿಚಾರ ಧಾರೆಯ ಓಘ ಅಮೋಘ!ಮಳೆಗಾಲದ ಜೋಗದ ಜಲಪಾತಕ್ಕಿಂತಾ ಜೋರಾದ ಧಭ ಧಭೆ!ಅದು ಹೇಗೆ ಇಷ್ಟು ಚೆನ್ನಾಗಿ ಇಷ್ಟೆಲ್ಲಾ ಬರೆಯುತ್ತೀರಾ?!ನಿಮ್ಮ ಲೇಖನವನ್ನು ಓದಿದ ಯಾರಿಗಾದರೂ ಕಾಡುವ ಒಂದೇ ಪ್ರಶ್ನೆ,ಹೀಗೂ ---ಉಂಟೆ!!!?ಹಾರ್ದಿಕ ಅಭಿನಂದನೆಗಳು.

  ReplyDelete
 6. ಹಹಹಹ...ಸೂಪರ್ರಾಗಿದೆ !. ಇಷ್ಟು ಸಾಕು ಅನಿಸುತ್ತಿದೆ. :)

  ReplyDelete
 7. ಮಹನೀಯ ಮಿತ್ರರೇ, ತಮ್ಮೆಲ್ಲರ ರುಚಿ ಅಭಿರುಚಿಗಳಿಗೆ ಸತತ ಆಭಾರಿ, ರಾಜಕೀಯ ಎಲ್ಲಿಲ್ಲ ಎಂದು ನಮ್ಮನ್ನೇ ನಾವು ಪ್ರಶಿಸಿಕೊಂಡರೆ ಬಹುಶಃ ತಂದೆ ಮಗನ ನಡುವೆ,ತಾಯಿ-ಮಗುವಿನ ಮಧ್ಯೆ ತಂದಿಟ್ಟು ಸಂತಸಪಡುವ ಅತೀ ನಿಕೃಷ್ಟ ಧೂರ್ತ ರಾಜಕಾರಣಿಗಳು ನಮ್ಮ ಮಧ್ಯೆಯೇ ಇದ್ದಾರೆ! ಇನತಹ ಹೇಸಿಗೆ ತುಂಬಿದ ಸಮಾಜವನ್ನು ಪರೋಕ್ಷವಾಗಿ ನಾವೇ ಕಟ್ಟಿದ್ದೇವೆ , ನಾವು ಕಟ್ಟಿದ ಈ ಬಂಗಲೆಗೆ ಮೇಸ್ತ್ರಿ ಕೆಲಸ ಮಾಡಿದ್ದೇವೆ, ಎಂಜಿನೀಯರ್ ಇಲ್ಲ, ಪ್ಲೇನೂ ಇಲ್ಲ, ವಾಸ್ತುವೂ ಇಲ್ಲ! ಸಿಮೆಂಟು-ಮರಳು ಸರಿಯಾಗಿಲ್ಲ, ಕೆಲಸ ಮಾಡಿದ ಜನರು ಮನಮೆಚ್ಚಿ ಮಾಡಲಿಲ್ಲ! ಹೀಗಾಗಿ ಇನ್ನು ಮುಂದಾದರೂ ನಾವು ಎಂದಾದರೂ ಬೀಳಬಹುದಾದ ಈ ಭೂತ ಬಂಗಲೆ ಕೆಡವಿ ಸರಿಯಾದ ಪ್ಲಾನು ಹಾಕಿ ಹೊಸದಾಗಿ ನಿರ್ಮಿಸಬೇಕಾದ ಕರ್ತವ್ಯ ನಮ್ಮೆಲ್ಲರದಾಗಿದೆ! ಪ್ರತಿಕ್ರಿಯಿಸಿದ ಸರ್ವಶ್ರೀ ಪರಾಂಜಪೆ, ಸುಧೀಂಧ್ರ ದೇಶಪಾಂಡೆ, ಕೇಶವ ಪ್ರಸಾದ್, ಸೀತಾರಾಮ್, ಡಾ|ಕೃಷ್ಣಮೂರ್ತಿ, ಸುಬ್ರಹ್ಮಣ್ಯ ತಮಗೆಲ್ಲರಿಗೂ ಅನಂತ ಒಂದನೆಗಳು, ನೇಪಥ್ಯದ ಓದುಗರಿಗೂ ನಮನಗಳು.

  ReplyDelete