ಜೀವನದಲ್ಲಿ ಹಲವಾರು ಪಾತ್ರಗಳು ಬಂದು ಹೋಗುತ್ತವೆ. ಆದರೆ ನಮ್ಮ ಜೊತೆ ತಮ್ಮನ್ನು ಅರ್ಧಭಾಗವಾಗಿ ಹಂಚಿಕೊಳ್ಳುವ ಅರ್ಧಾಂಗಿಯನ್ನು ನಾವು ಕೃತಜ್ಞತೆಯಿಂದ ಕಂಡರಷ್ಟೇ ನಮ್ಮ ಪಾತ್ರ ತುಂಬಿಬರುತ್ತದೆ. ನಮಗಾಗಿ ಹುಟ್ಟಿದ ಮನೆಯನ್ನು ಬಿಟ್ಟು, ನಮ್ಮ ಬದುಕಿನ ಕಷ್ಟಕೋಟಲೆಗಳಲ್ಲಿ ನಮ್ಮನುವರ್ತಿಯಾಗಿ, ನಮ್ಮ ನೋವು-ನಲಿವನ್ನು ಹಂಚಿಕೊಂಡು, ನಮ್ಮ ಕೆಲಸಗಳನೇಕವನ್ನು ಮಾಡಿಕೊಟ್ಟು, ನಮಗೆ ಬೇಕುಬೇಕಾದ ತಿಂಡಿತಿನಿಸು ಮಾಡಿಬಡಿಸಿ, ನಮ್ಮ ಮುಂದಿನ ಕುಡಿಗಳಿಗೆ ಅಮ್ಮನಾಗಿ-ಹೊತ್ತು, ಹೆತ್ತು, ಸಲಹಿ, ಬೆಳೆಸಿ, ಅವರ ಬೇಕು-ಬೇಡಗಳನ್ನೂ ಗಣನೆಗೆ ತೆಗೆದುಕೊಂಡು ಹೀಗೇ ಹಲವು ಹತ್ತು ಕಾರ್ಯಗಳಲ್ಲಿ ಜೋಡಿ ಎತ್ತಿನಂತೇ ನಮಗೆ ಹೆಗಲುಗೊಡುವ ಹೆಂಡತಿಯ ಪಾತ್ರ ನಿಜಕ್ಕೂ ಬಹಳ ದೊಡ್ಡದು.
ಇಚ್ಛೆಯನರಿತು ನಡೆವ ಸತಿಯಾಗೆ
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ | ಸರ್ವಜ್ಞ
----ಇದು ಸರ್ವಜ್ಞ ಹೇಳಿದ್ದು. ಅದರಂತೇ ಈ ವಿಷಯದಲ್ಲಿ ನನಗೆ ನನ್ನ ಇಚ್ಛೆಯನ್ನರಿತು ನಡೆಯುವ ಸತಿ ಸಿಕ್ಕಿದ್ದಾಳೆ ಎಂದು ಹೆಮ್ಮೆಯಿಂದ ನಿಮ್ಮೆದುರಲ್ಲಿ ಬೀಗಲು ನಾಚಿಕೆಯೇನಿಲ್ಲ! ದಿನಾಲೂ ಓದುಗ ಮಿತ್ರರಿಗೆ ನಾನು ಉಣಬಡಿಸುವ ಬರಹಗಳ ಹಿಂದೆ ಅವಳ ತ್ಯಾಗ ಬಹಳವಿದೆ. ಅವಳಜೊತೆಗೆ ಕಳೆಯಬಹುದಾದ ಸಮಯವನ್ನು ಮೊಟಕುಗೊಳಿಸಿ ಸರಿರಾತ್ರಿ ೧ ಘಂಟೆಯವರೆಗೆ ಬರೆಯುತ್ತ ಕೂರುವ ನನಗೆ ಏನೊಂದೂ ಕಮಕ್ ಕಿಮಕ್ ಎನ್ನದೇ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾಳೆ ನನ್ನ ರಶ್ಮಿ. ಅವಳು ನನ್ನ ಬಾಳಿಗೆ, ನನ್ನ ಪಾಲಿಗೆ ’ರಶ್ಮಿ’ಯೇ ಸರಿ.
ಕರ್ನಾಟಕ ಸಂಗೀತವನ್ನು ಅಭ್ಯಸಿಸಿ ತನ್ನ ಇಂಪಾದ ಕಂಠದಿಂದ ಹಿರಿಯ ಕವಿಗಳಾದ ಬೇಂದ್ರೆ, ಪು.ತಿ.ನ.,ಲಕ್ಷ್ಮೀನಾರಾಯಣ ಭಟ್ಟ, ಎಚ್.ಎಸ್.ವಿ., ಕುವೆಂಪು, ನಿಸಾರ್ ಅಹಮ್ಮದ್ ಮೊದಲಾದವರ ಕವನಗಳ ಜೊತೆ ನನ್ನ ಹಲವು ಹಾಡುಗಳನ್ನೂ ನನಗಾಗಿ ನಾನು ಕೇಳಿದಾಗ ಹಾಡಿ ರಂಜಿಸುವ ಆಕೆಗೆ ಈ ದಿನ ಹುಟ್ಟಿದ ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಎಂಟುವರ್ಷಗಳಿಂದ ನನ್ನ ಬಿಡಿಸಲಾರದ ಭಾಗವಾದ ಆಕೆಯ ಹಾಗೂ ನನ್ನ ಮದುವೆಯ ಕಾಲದ ಕೆಲವು ನೆನಪಿನ ತುಣುಕುಗಳನ್ನು ಮತ್ತು ಮಗ ’ಶುಭಾಂಗ’ನ ಬಗೆಗೂ ಸೇರಿದಂತೆ ಇದೊಂದು ದಾಂಪತ್ಯ ಗೀತೆಯನ್ನು ಬರೆದಿದ್ದೇನೆ. ಇದನ್ನು ನನ್ನ ವಿಶಾಲ ಕುಟುಂಬದವರಾದ ನಿಮ್ಮೆಲ್ಲರೊಡನೆ ಹಂಚಿಕೊಳ್ಳಲು ಬಹಳ ಸಂತೋಷವಾಗುತ್ತದೆ. ಬನ್ನಿ ಅನುಭವಿಸಿ, ನಮ್ಮ ಜೀವನದ ಸವಿನೆನಪುಗಳನ್ನು--
ಮನದ ರಶ್ಮಿ
ನೆನಪಿನಂಗಳದಲ್ಲಿ ಮನವನ್ನು ಆಡಬಿಡೆ
ಬನಸಿರಿಯ ಸೊಬಗಂತೆ ಮೆರೆವ ಪುಟಗಳನು
ಅನಿತರೋಳ್ ಎನ್ನೊಡತಿ ಸೂರ್ಯ’ರಶ್ಮಿ’ಯ ತೆರದಿ
ಘನತರಂಗಗಳೆಬ್ಬಿ ನಗುವ ಚಿಮ್ಮಿದಳು
ಎಂಟುವರ್ಷಕು ಮುನ್ನ ನಾನ್ಯಾರೋ ಅವಳ್ಯಾರೋ
ಗಂಟುಬೀಳುವ ಕನಸು ನಮ್ಮಲಿರಲಿಲ್ಲ!
ನಂಟಾಯ್ತು ಆ ಜೀವ ನನ್ನೊಡನೆ ತಾ ನಡೆದು
ಕುಂಟು ನೆಪವದು ಸಾಕು ಒಮ್ಮೆ ಮುದ್ದಿಸಲು
" ಹೋಗಿ, ನಾ ಬರಲಾರೆ ಇದೇ ಮೊದಲು ಇದೇ ಕೊನೆಯು "
ಆಗ ನಾ ಗದರಿಸಿದೆ ನನ್ನ ಪಾಲಕರ
" ಬೇಗ ನೀ ಬಂದೊಮ್ಮೆ ನೋಡಿ ಹೋಗಿಬಿಡೆನುತ "
ರಾಗದಲಿ ಮೆದುಗೊಳಿಸಿ ನಡೆತಂದರೆನ್ನ !
ಸಾಗರದ ಈ ಹುಡುಗಿ ವೇಗದಲಿ ಮನಕದ್ದು
ಜಾಗರಣೆ ಕೂರಿಸಿದಳೆನ್ನ ಹಲವುದಿನ !
’ಜಾಗ’ ತುಂಬುವ ಮುಗುದೆ ಇವಳೇ ಸರಿಯೆಂದೆನಿಸಿ
ಬೀಗ ರವಾನಿಸಿದೆ ಹೃದಯದಿಂ ಸುದಿನ
ಬೀಗರೊಪ್ಪುತ ಹೊತ್ತಗೆಯ ತೆಗೆದು ದಿನಗುಣಿಸಿ
’ಮೇ’ಗಾಯ್ತು ತಿಥಿಮಿತಿಯ ತಾರಾನುಕೂಲ
ಸಾಗಾಟ ನಡೆದಿತ್ತು ನಡುವಲ್ಲಿ ನಮ್ಮೊಳಗೆ:
’ಮೇಘ ಸಂದೇಶ’ವಿಹ ಪ್ರೇಮ ಪತ್ರಗಳ !
ಪೆಪೆಪೆಪೆ ಮಂಗಳದ ವಾದ್ಯಗಳು ಮೊಳಗಿರಲು
ತಪಪಪಪ ಸಾವಿರದ ಚಪ್ಪಾಳೆ ತಟ್ಟಿ
ಹಿಪಿಪಿಪಿಪಿ ನಗೆಗಡಲ ಗದ್ದಲದ ಮಂಟಪದಿ
ಟಪಪಪಪ ಅಕ್ಷತೆಗಳುದುರಿ ಹರಸಿದವು
ಗಣಪ ಈಶ್ವರ ’ವಿಷ್ಣು’ ಎಲ್ಲ ದೈವಗಳನ್ನು
ಗಣನೆಯಲಿ ತಂದು ಶೋಧಿಸುತಿಟ್ಟ ಹೆಸರು
ಕೆಣಕುವನು ಆಗಾಗ ಕೈಕಾಲು ಮೈ ಹತ್ತಿ
ಅಣಕಿಸುತ ನಾಲ್ಕುವರೆ ವಯದ ’ಶುಭಾಂಗ’