ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, July 8, 2010

ದೇವರು ಕೊಟ್ಟ ’ಭಾಗ್ಯಜ್ಯೋತಿ’ ಕಣ್ಣು
ದೇವರು ಕೊಟ್ಟ ’ಭಾಗ್ಯಜ್ಯೋತಿ’ ಕಣ್ಣು


ದೇವರು ಕೊಟ್ಟ ಭಾಗ್ಯಗಳಲ್ಲಿ ಕಣ್ಣೂ ಕೂಡ ಒಂದು ಭಾಗ್ಯ. ಶರೀರದಲ್ಲಿ ಮುಖ್ಯ ಹಾಗೂ ವಿದ್ಯುದೀಕರಿಸುವ [ಇಲೆಕ್ಟ್ರಿಫಾಯಿಂಗ್ ಇಫೆಕ್ಟ್]ಗುಣ ಹೊಂದಿರುವ ಅಂಗ ಕಣ್ಣು. ಇಂತಹ ಕಣ್ಣಿನ ಬಗ್ಗೆ ಹಿಂದೆ ಬರೆದಿದ್ದೆ, ಮತ್ತೆ ಕೆಲವು ಸಂಗತಿಗಳನ್ನು ಬರೆಯುತ್ತಿದ್ದೇನೆ.

ಹಚ್ಚಿದ ದೀಪ ಕೋಣೆಗೆ ಬೆಳಕನ್ನು ನೀಡುವುದು ಹೇಗೋ ಹಾಗೇ ಸರಿಯಾದ ಕಣ್ಣು ಮನುಜ ಶರೀರಕ್ಕೆ ದೀಪ. ಕಣ್ಣಿದ್ದರೇ ಬಹುತೇಕ ಕೆಲಸಗಳು ಸಾಧ್ಯವೇ ವಿನಃ ಕಣ್ಣಿನ ಹಂಗಿಲ್ಲದೇ ಮಾಡುವ ಕೆಲಸಗಳು ಅತಿ ವಿರಳ. ಒಂದೊಮ್ಮೆ ಕಣ್ಣಿನ ಸಹಾಯವಿಲ್ಲದೇ ಕುರುಡನೊಬ್ಬ ಕೆಲಸಮಾಡುತ್ತಿದ್ದರೆ ಅದು ಆತನಿಗೆ ದೈವೀದತ್ತ ಹೆಚ್ಚುವರಿ ಸೂಕ್ಷ್ಮ ಸಂವೇದನೆಯ ಗುಣದಿಂದ ಮಾತ್ರ ಸಾಧ್ಯ. ಆದರೂ ಅಲ್ಲಿ ಕೆಲಸಕ್ಕೆ ತಗಲುವ ಸಮಯ ಸಾಮಾನ್ಯವಾಗಿ ಬೇಕಾಗುವ ಸಮಯದ ಎರಡು ಮೂರು ಪಟ್ಟು ಹೆಚ್ಚಾಗಿರಬಹುದು. ಹೇಗೆ ಉರಿಯುವ ದೀಪಕ್ಕೆ ಎಣ್ಣೆ ಸಾಲದಿದ್ದರೆ ದೀಪ ಆರಿಹೋಗುವುದೋ ಹಾಗೇ ಕೆಲವರಿಗೆ ಯಾವುದೋ ಪಡೆದ ದೌರ್ಭಾಗ್ಯದಿಂದ ಕಾಣುತ್ತಿದ್ದ ಕಣ್ಣು ಕಾಣದಂತಾಗಬಹುದು! ಉರಿಯುವಾಗ ಹೇಗೆ ಕಪ್ಪನೆಯ ಕದಿರು ಬಂದ ಬತ್ತಿಯಾದರೆ ದೀಪ ತಡವರಿಸಿ ಉರಿಯುವುದೋ ಹಾಗೆಯೇ ಕಣ್ಣ-ಹೂ ಬಂದರೆ ಕಣ್ಣು ಸರಿಯಾಗಿ ಕಾಣಿಸದೇ ಹೋಗಬಹುದು. ಜೋರಾಗಿ ಬೀಸುವ ಗಾಳಿಯಲ್ಲೂ ಮತ್ತು ಗಾಳಿ ಇಲ್ಲದ ನಿರ್ವಾತದಲ್ಲೂ ದೀಪ ಉರಿಯುವುದು ಕಷ್ಟ ಹೇಗೋ ಹಾಗೇ ಕಲುಷಿತ ವಾತಾವರಣದಲ್ಲಿ ಮತ್ತು ವಿಷಪೂರಿತ ಹೊಗೆಯಿರುವಲ್ಲಿ ಕಣ್ಣು ತನ್ನತನ ಕಳೆದುಕೊಳ್ಳಬಹುದು. ಸಿಡಿಮದ್ದು, ಗೊತ್ತಿಲ್ಲದೇ ಬಳಸುವ ಔಷಧಗಳು, ಮೂಢನಂಬಿಕೆಯಿಂದ ಸಮಯಪ್ರಜ್ಞೆ ಇಲ್ಲದೇ ಕಣ್ಣಿಗೆ ಏನನ್ನೋ ಬಿಟ್ಟುಕೊಂಡು ಕಾಲಕಳೆಯುವುದು, ಕಲುಷಿತ ನೀರಿನಲ್ಲಿ ಕಣ್ಣು ತೊಳೆಯುವುದು, ಕಣ್ಣನ್ನು ವಿನಾಕರಣ ಅಥವಾ ನವೆಯಾದಾಗ ಜೋರಾಗಿ ಮತ್ತು ಗಡುಸಾಗಿ ಉಜ್ಜುವುದು,ಫ್ಯಾನ್ಸಿಗಾಗಿ ಕಲರ್ ಕಲರ್ ಕಣ್ಣಿನ ಗ್ಲಾಸ್ ಗಳನ್ನು ಅವುಗಳ ಗುಣಮಟ್ಟ ತಿಳಿಯದೇ ಬಳಸುವುದು ಮುಂತಾದ ಹಲವು ಕಾರಣಗಳಿಂದ ಸರಿಯಾದ ಕಣ್ಣು ಹಾಳಾಗಬಹುದು. ಈ ಎಲ್ಲಾ ಸಂದರ್ಭಗಳ ಬಗ್ಗೆ ಎಚ್ಚರ ಎಂಬ ಸಂದೇಶವನ್ನು ಆರಂಭದಲ್ಲೇ ನೀಡುತ್ತ ಕಣ್ಣಿನ ಬಗ್ಗೆ ಹಿಂದೆ ಹೇಳಿದ್ದರ ಹೊರತಾಗಿ ಕೆಲವು ಮಾಹಿತಿಯನ್ನು ಕೊಡಲು ಉಪಕ್ರಮಿಸುತ್ತಿದ್ದೇನೆ.

ಈಗ ಸದ್ಯಕ್ಕೆ ನೀವು-ನಾವೆಲ್ಲ ಓದುತ್ತಿರುವುದು ನಮ್ನಮ್ಮ ಕಣ್ಣುಗಳಿಂದಲೇ ಅಲ್ಲವೇ? ಕಣ್ಣಿಂದ ಬರೇ ನೋಡುವುದರ ಹೊರತಾಗಿ ಹಲವು ಭಾವನೆಗಳನ್ನೂ ವ್ಯಕ್ತಪಡಿಸಬಹುದು ಎಂಬುದು ನಮೆಗೆಲ್ಲಾ ತಿಳಿದೇ ಇದ್ದರೂ ಯಾವ್ಯಾವ ಭಾವನೆಗಳು ಮತ್ತು ಹೇಗೇಗೆ ಎನ್ನುವುದನ್ನು ಸ್ವಲ್ಪ ಅವಲೋಕಿಸೋಣ.

ಕೋಪ ಬಂದಾಗ ಕಣ್ಣು ಕೆಂಡಕಾರುತ್ತದೆ ಎನ್ನುತ್ತಾರೆ. ಆದರೆ ನಿಜವಾಗಿ ನಮ್ಮ ಕಣ್ಣಲ್ಲಿ ಕೆಂಡ ಇದೆಯೇ ? ಇಲ್ಲ. ಆದರೆ ಒಂದು ಮತು ಸತ್ಯ- ನಮ್ಮ ಕಣ್ಣು ಕೆಲವು ಭಾವನೆಗಳ ಅಲೆಗಳನ್ನು ಹರಿಬಿಡುತ್ತದೆ. ಕಣ್ಣು ನಗುತ್ತದೆ ಎನ್ನುತ್ತಾರಲ್ಲ-ಆದರೆ ಕಣ್ಣಿಗೆ ಪ್ರತ್ಯೇಕ ಬಾಯಿದೆಯೇ ನಗಲಿಕ್ಕೆ? ಇದರರ್ಥ ಕಣ್ಣಿನಲ್ಲಿ ನಡೆವ ವಿವಿಧ ಮಾರ್ಪಾಡುಗಳವು! ಕಣ್ಣು ಸರಿ ಸುಮಾರು ೨೫೬ ಬೇರೆ ಬೇರೆ ಭಾವನೆಗಳನ್ನು ನೋಟಗಳ ರೂಪದಲ್ಲಿ ತೋರ್ಪಡಿಸುತ್ತದೆ. ಬಹಳ ಅಳುವಾಗಲೂ ಕಣ್ಣೀರು ಅತಿಯಾಗಿ ನಗುವಾಗಲೂ ಕಣ್ಣೀರು ಈರುಳ್ಳಿ ಹೆಚ್ಚಿದಾಗಲೂ ಕಣ್ಣೀರು...ಎಲ್ಲಿದೆ ಆ ನೀರಿನ ಸರೋವರ? ಒವರ್ ಹೆಡ್ ಟ್ಯಾಂಕ್ ಯಾವುದು? ಎಂತಹ ವಿಚಿತ್ರ ನೋಡಿ. ಆದರೆ ಸುರಿವ ಆ ನೀರಿನ ಪ್ರಮಾಣದಲ್ಲಿ ಭಿನ್ನತೆ!

ಕಣ್ಸನ್ನೆಯಲೇ ...... ಎಂದು ಕೆಲವು ಹಾಡುಗಳಲ್ಲಿ ಕೇಳುತ್ತೇವೆ. ಕಣ್ಣಿನ್ನಲ್ಲೇ ಸನ್ನೆ ಮಾಡಲು ಸಾಧ್ಯವೆಂದಾಯಿತಲ್ಲ. ಹೌದೌದು ಇದು ಕಾಲೇಜು ಹುಡುಗ-ಹುಡುಗಿಯರಿಗೆ ಗುರುವಿರದೇ ಬಂದ ವಿದ್ಯೆ! " ಆ ಸೂರ್ಯ ಕೂಡ ಕಣ್ಣ್ ಹೊಡೀತಾನ್ ಕಾಣಣ್ಣೋ ..." ಎನ್ನುವ ಸಿನಿಮಾ ಹಾಡನ್ನು ಗುನುಗುನಿಸದ ಹುಡುಗರು ದಶಕದ ಹಿಂದಿರಲಿಲ್ಲ! ಈಗ ಅದು ಹಳೆಯ ಹಾಡು. ಕಣ್ಣಿಂದ ಅನೇಕ ಸಂಕೇತಗಳನ್ನು ಸೃಜಿಸಬಹುದು. ಶೃಂಗಾರ, ಕಾರುಣ್ಯ, ದಯಾ, ಭೀಭತ್ಸ, ಉಗ್ರ, ಭಯಾನಕ,ಪ್ರೇಮ, ವಾತ್ಸಲ್ಯ, ಹಾಸ್ಯ, ಸಂತೋಷ ....ಹೀಗೇ ನವರಸಗಳನ್ನೂ ಬರೇ ಕಣ್ಣಲ್ಲೇ ಅಭಿವ್ಯಕ್ತಗೊಳಿಸಲು ಸಾಧ್ಯ ಮಾತ್ರವಲ್ಲ ಕಣ್ಣಿರದಿದ್ದರೆ ಅವುಗಳ ಅಭಿವ್ಯಕ್ತಿ ಧುಸ್ಸಾಧ್ಯ!

ಹತ್ತೊಂಬತ್ತು ವರ್ಷಗಳ ಹಿಂದೆ ಮೊದಲಗಿ ಬೆಂಗಳೂರಿಗೆ ನನು ಬಂದಾಗ ಸಿಗ್ನಾಲಿನಲ್ಲಿ ನಾಯಿಯೊಂದನ್ನು ನೋಡಿದೆ. ಅದು ಜನರಮಧ್ಯೆ ಹಾಗೆಯೇ ನಿಂತಿತ್ತು. ಕೆಂಪು ದೀಪ ಆರಿ ಹಸ್ರಿರು ದೀಪಬಂದ ತಕ್ಷಣ ಅದು ರಸ್ತೆಯ ಮತ್ತೊಂದು ಬದಿಗೆ ಓಡಿತು. ಅದಾದ ಹಲವು ಸರ್ತಿ ಈ ರೀತಿ ನೋಡಿದ್ದೇನೆ. ಕೆಲವು ನಾಯಿಗಳೂ, ಉಳಿದ ಪಶು-ಪಕ್ಷಿಗಳೂ ಕೂಡ ತಮ್ಮ ಸಂಕೇತಗಳಿಗೆ ಬಳಸುತ್ತವೆ. ಒಮ್ಮೆ ಒಂದು ನಾಯಿಯನ್ನು ದುರುಗುಟ್ಟಿ ನೋಡಿ..ಅದು ಗು ಎನ್ನಬಹುದು.. ಅದರ ಕಣ್ಣು ಸರಿಯಾಗಿ ಕೆಲಸಮಾಡುತ್ತಿದ್ದು ಅದು ಜಾತಿ ನಾಯಿಯಾದರೆ ಹಾಗನ್ನುತ್ತದೆ.....ನಾಯಿ ಜಾತಿಯಾದರೆ ಹಾಗೇ ಬಿದ್ದುಕೊಂಡಿರಬಹುದು! ಮರದ ಮೇಲೆ ಕುಳಿತ ಕಾಗೆಗೆ ಕೆಳಗಿನಿಂದಲೇ ಕಲ್ಲೆತ್ತಿ ಎಸೆದ ಪೋಸು ಕೊಡಿ, ಕಾಗೆ ಕತ್ತು ತಿರುತಿರುವಿ ಕೊನೆಗೊಮ್ಮೆ ಹಾರಿಹೋಗುತ್ತದೆ. ಕೆಲವು ಸಿನಿಮಾಗಳಲ್ಲಿ ಹುಡುಗಿಗೋ ಹೆಂಗಸಿಗೋ ಎದುರುನಿಂತ ಗಂಡಸು ಒಂದೇ ಕಣ್ಣು ಮಿಟುಕಿಸುವುದರಿಂದ ಅವರು ಕೋಪಗೊಂಡು ಚೆನ್ನಾಗಿ ದಬಾಯಿಸುತ್ತಾರೆ-- ಆಮೇಲೆ ಆ ಆ ಗಂಡಸು ಕಣ್ಣಿನ ನರದೌರ್ಬಲ್ಯ ಉಳ್ಳವನು ಎಂಬ ಉತ್ತರಬಂದಾಗ ಸಮಾಧಾನಪಟ್ಟುಕೊಳ್ಳುತ್ತಾರೆ. ಕೆಲವರಿಗೆ ಹಾಗೆ ಕಣ್ಸನ್ನೆ ಮಾಡದಿದ್ದರೇ ಬೇಸರವಾಗಬಹುದು ಬಿಡಿ-ಆ ವಿಚಾರ ಬೇರೆ! ಇಲ್ಲಿ ನೋಡಿ-- ಹೆಂಗಸಿಗೆ/ಹುಡುಗಿಗೆ ಗಂಡಸೊಬ್ಬ/ಹುಡುಗನೊಬ್ಬ ಅಥವಾ ಗಂಡಸಿಗೆ/ಹುಡುಗನಿಗೆ ಹೆಂಗಸೊಬ್ಬಳು/ಹುಡುಗಿಯೊಬ್ಬಳು ಒಂದೇ ಕಣ್ಣು ಮಿಟುಕಿಸುವುದರಿಂದ ಅದರಲ್ಲಿರುವ ಅರ್ಥ ನಿಮಗೀಗ ಅರ್ಥವಾಗಿದೆ!

ಸಂದರ್ಶನಕ್ಕೆ ಕುಳಿತ ಗಂಡಸಿನ/ಹೆಂಗಸಿನ ಕಣ್ಣುಗಳಲ್ಲಿ ಪರಸ್ಪರ ಭಾವನೆಗಳು ಹರಿದಾಡುತ್ತಿರುತ್ತವೆ. ನೇರ ಸಂವಹನದಲ್ಲಿ ಕೆಲವೊಮ್ಮೆ ಕೆಲವರು ಬಹಳ ಆಳವಾಗಿ ಎದುರಿಗಿರುವವರ ಕಣ್ಣಲ್ಲಿ ಏನನ್ನೋ ಹುಡುಕುತ್ತಿರುತ್ತಾರೆ. ಅದು ಅವರ ವೈಯಕ್ತಿಕ ಮಾಹಿತಿಗಳ ಕಲೆಹಾಕುವಿಕೆಗೆ ಬೇಕಾಗಿ ಇರಬಹುದು, ಅಥವಾ ತನಗಿಂತ ಹೆಚ್ಚಿಗೆ ತಿಳಿದುಕೊಂಡ ವ್ಯಕ್ತಿಯನ್ನು ಆಳದವರೆಗೆ ನೂಕಿ ನೋಡುವ ರೀತಿ ಇರಬಹುದು ಅಥವಾ ಆಮೇಲೆ ಈ ಹುಡುಗ/ಹುಡುಗಿ ಎಲ್ಲಿ ಹೇಗೆ ತನಗೆ ಸಿಗಬಹುದು ಎಂಬ ಕಾಮದ ವಾಸನೆ ಇರುವ ನೋಟವಾಗಿರಬಹುದು. ಇದು ಆ ಈರ್ವರ ನಡುವೆ ಮಾತ್ರ ಗೊತ್ತಾಗುವ ವಿಷಯವೇ ಹೊರತು ಬೇರೇ ಸಾಕ್ಷಿ ಇದಕ್ಕಿರುವುದಿಲ್ಲ. ಆದರೆ ಪರಸ್ಪರರ ನೋಟವೇ ಕೆಲವೊಮ್ಮೆ ಸಹಜವಾಗಿದ್ದರೆ ಇನ್ನೊಮ್ಮೆ ಅಸಹಜವಾಗಿರಬಹುದು ಮತ್ತೊಮ್ಮೆ ಹತ್ತಿರ ಸೆಳೆವ ನೋಟವಗಿರಬಹುದು, ಇನ್ನೂ ಕೆಲವೊಮ್ಮೆ ಧಿಕ್ಕರಿಸುವ ನೋಟ, ಮಗುದೊಮ್ಮೆ ತಾನೇನು ಕಮ್ಮಿ ಎಂಬ ಅಹಮ್ಮಿನ ನೋಟ ಇರಬಹುದು.

ಹೀಗೇ ಮಾಡಿದರೆ ಸರಿ ಹೀಗೇ ಮಾಡಿದರೆ ತಪ್ಪು ಎಂಬ ಚೌಕಟ್ಟನ್ನು ಹಾಕಿ ಬಂಧಿಸುವುದಕ್ಕಿಂತ ಯಾವ ವ್ಯಕ್ತಿ ಎಲ್ಲೆಲ್ಲಿ ಹೇಗೇಗೆ ನೋಟ ಹರಿಸಿದರೆ ಒಳ್ಳೆಯದು ಎಂಬುದನ್ನು ಅವರವರೇ ಅರಿತುಕೊಳ್ಳುವುದು ಒಳ್ಳೆಯದು. ಒಂದೊಮ್ಮೆ ಇದಕ್ಕೆಲ್ಲ ಪಾಠಹೇಳಿ ಕಲಿಸಿದರೂ ಕಣ್ಣಿಗೆ ಬೀಗಹಾಕಲು ಸಾಧ್ಯವಿಲ್ಲವಷ್ಟೇ? ಇಲ್ಲಿ ಇಂದ್ರಿಯ ನಿಗ್ರಹವೆಂಬ ವಿಷಯ ಕೂಡ ತನ್ನ ಒಳಹರಿವನ್ನು ತೆರೆದಿಡುತ್ತದೆ ನೋಡಿ. ಗಂಡಿಗೆ ಹೆಣ್ಣಿಗಿಂತ ಸೌಂದರ್ಯೋಪಾಸನೆ ಜಾಸ್ತಿ ಎನ್ನಬಹುದು, ಅಥವಾ ಅದಕ್ಕಿಂತ ಭಿನ್ನವಾಗಿ ಚೆನ್ನಾಗಿ ಕಂಡ ಹಲವು ವಸ್ತು-ವಿರುದ್ಧ ಲಿಂಗೀ ವ್ಯಕ್ತಿಗಳನ್ನು ತನ್ನದಾಗಿ ಮಾಡಿಕೊಳ್ಳುವಾಸೆ ಪ್ರಕೃತಿ ಸಹಜವಾಗಿ ಗಂಡಿಗೆ ಜಾಸ್ತಿ. ಇದನ್ನರಿತ ಹಲವು ವ್ಯಾಪಾರೀ ಗಂಡುಗಳು ತಮ್ಮ ಮಳಿಗೆಗಳಲ್ಲಿ ಸುಂದರ ಹುಡುಗಿಯರನ್ನು ಕುಳ್ಳಿರಿಸಿ ತನ್ಮೂಲಕ ಪರೋಕ್ಷವಾಗಿ ಬೇರೆ ಗಂಡಸರನ್ನು ತಮ್ಮಲ್ಲಿ ಖರೀದಿಮಾಡುವಂತೆ ಆಕರ್ಷಣೆ ನೀಡುತ್ತಾರೆ. ಹಲವು ಇಂತಹ ಪ್ರದೇಶಗಳಲ್ಲಿ ಮುತ್ತಿನ ನಗೆಚೆಲ್ಲುವ ಚೆಲುವೆಯರ ಚಳುಕು ಥರುವ ಕಣ್ಣೋಟಕ್ಕೆ ಮನಸೋತ ಗಿರಾಕಿ ಒಲ್ಲೆ ಎನ್ನದೇ ಅಲ್ಲಿ ಮರಲ್ಪಡುವ ವಸ್ತುಗಳನ್ನು ಖರೀದಿಸಲು ಮುಂದಾಗುತ್ತಾನೆ!

ಕಣ್ಣಿನ ರೂಪ ವಿನ್ಯಾಸಗಳಲ್ಲಿ ಅಗಲ-ಉದ್ದ-ಆಕಾರಗಳಲ್ಲಿ ಹಲವು ವೈವಿಧ್ಯತೆಗಳನ್ನು ನಾವು ಕಾಣುತ್ತೇವೆ. ಅದು ಈ ಲೇಖನದ ವ್ಯಾಪ್ತಿಗೆ ಹೊರತಾಗಿದ್ದು ಇನ್ನೊಂದಿನ ನಿಮಗೆ ಹಾಸ್ಯರೂಪದಲ್ಲಿ ಕಾಣಸಿಗುತ್ತದೆ!

ಸಾಮಾನ್ಯವಾಗಿ ನಾವು ಸಂವಹಿಸುವಾಗ ಎದುರಿಗಿರುವ ವ್ಯಕ್ತಿ ಯಾರು, ಎಂಥವರು, ಯಾವ ವಯಸ್ಸು-ವರ್ಚಸ್ಸು, ನಾವು ಯಾರು, ನಮ್ಮ ವೈಯಕ್ತಿಕ ಹಕ್ಕು-ಬಾಧ್ಯತೆಗಳೇನು, ನಮ್ಮ ಸದ್ಯದ ಸ್ಥಿತಿ-ಗತಿ ಏನು, ನಮಗೂ ಎದುರಿಗಿರುವ ವ್ಯಕ್ತಿಗೂ ಇರುವ ಸಂಬಂಧವೇನು ಇವುಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ವ್ಯವಹರಿಸುವುದು ಈಗ ಬೇಕಾದ ವಿಷಯ. ಸಂದರ್ಶನಕ್ಕೆ ಕುಳಿತಾಗ ಎಲ್ಲೆಲ್ಲೋ ನೋಡುತ್ತ ಮಾತನಾಡುವುದು, ನಮ್ಮ ಕಾಲುಗಳನ್ನು ನೋಡುತ್ತ ಮಾತನಾಡುವುದು, ಇನ್ಯಾವುದೋ ಪಕ್ಕದಲ್ಲಿ ಮಂಡಿಸಿದ ವ್ಯಕ್ತಿಯನ್ನು ಸತತ ನೋಡುತ್ತ ಮಾತನಾಡುವುದು, ಸಂದರ್ಶಕರನ್ನು ದುರುಗುಟ್ಟಿ ನೋಡುತ್ತ ಮಾತನಾಡುವುದು, ಕಣ್ಣು ಮುಚ್ಚಿಕೊಂಡು ಮಾತನಾಡುವುದು, ಒಂದು ಅಥವಾ ಎರಡೂ ಕಣ್ಣು ಉಜ್ಜಿಕೊಳ್ಳುತ್ತ ಮಾತನಾಡುವುದು, ಕಣ್ಣು ಹುಬ್ಬಿನ ಹತ್ತಿರ ತುರಿಸಿಕೊಳ್ಳುತ್ತ ಮಾತನಾಡುವುದು, ಒಮ್ಮೆ ನೋಡಿ ನಕ್ಕು ಮತ್ತೆಲ್ಲೋ ನೋಡುತ್ತ ಪುನಃ ನೋಡದೇ ಇದ್ದುಬಿಡುವುದು, ದರ್ಪದಿಂದ ಬೀಗುವ ನೋಟ ಹರಿಸುವುದು, ಯಾವ ಸಂವೇದನೆಯನ್ನೇ ಹರಿಸದ ಕಣ್ಣನ್ನು ಪೇಲವವಾಗಿ ಒಮ್ಮೊಮ್ಮೆ ಹರಿಬಿಡುವುದು, ಸುಸ್ತಾಗಿರುವ ರೀತಿ ಕಣ್ಣು ಹಾಯಿಸುವುದು ಇವೆಲ್ಲಾ ಸರಿಯಾದ ನೋಟಗಳಲ್ಲ.

ಅರಮನೆಗೆ/ಮಂತ್ರಿಗಳಮನೆಗೆ ಹೋದಾಗ ಅವರ ಹೆಂಗಸರನ್ನಾಗಲೀ, ಗುರುಮನೆಗೆ ಹೋದಾಗ ಅಲ್ಲಿರಬಹುದಾದ ಪರಿಚಾರಿಕೆಯರನ್ನಾಗಲೀ, ಶಿಕ್ಷಕರ ಮನೆಗೆ ಹೋದಾಗ ಅವರ ಹೆಂಡತಿ ಅಥವಾ ಮಗಳನ್ನಾಗಲೀ ನೋಡುವಾಗ ಅವನತ ಮುಖಿಯಾದ ಕಣ್ಣುಗಳಿದ್ದರೆ ಹಿತ. ಮನೆಯ ಹಿರಿಯರ ಮುಂದೆ, ದೊಡ್ಡವರ ಮುಂದೆ ಸಹಾ ಆದಷ್ಟು ವಿಧೇಯತೆ ಬಿಂಬಿಸುವ ಕಣ್ಣೋಟವಿದ್ದರೆ ಅದು ಸರಿ. ಸಭೆ-ಸಮಾರಂಭಗಳಲ್ಲಿ ನಮ್ಮ ನೋಟ ಸಭೆಯ ಉದ್ದಗಲಕ್ಕೂ ಓಡಾಡಬೇಕೇ ವಿನಃ ಕೇವಲ ಮುಂದೆ ಕುಳಿತ ಒಬ್ಬಿಬ್ಬರ ಮೇಲೋ ಅಥವಾ ಪರಿಚಿತರ ಮೇಲೋ ಕೇಂದ್ರೀಕೃತವಾಗಿರಬಾರದು. ಯಾವುದೇ ಸಂದರ್ಭದಲ್ಲೂ ದರ್ಪವನ್ನು ತೋರಿಸುವ ನೋಟ ಹರಿಸದಿದ್ದರೆ ಅದು ವಿನಯಕ್ಕೆ ಮತ್ತೊಂದು ಮಜಲನ್ನು ಕೊಡುತ್ತದೆ. ಮಕ್ಕಳನ್ನು ಸುಖಾಸುಮ್ಮನೇ ಕಣ್ಣು ಹಿಗ್ಗಿಸಿ ಹೆದರಿಸುವುದು ಸರಿಯಲ್ಲ. ಪಕ್ಕದಮನೆಯಲ್ಲಿ ಎಷ್ಟೆಲ್ಲಾ ಹಣ್ಣು ತಂದಿದ್ದಾರೆ ಎಂದು ಆಸೆಕಂಗಳಿಂದ ನೋಡುವುದು ಸರಿಯಲ್ಲ.

ಕೆಲವರು ಅಷ್ಟು ದೂರ ಬರುತ್ತಿರುವಾಗಲೇ ಅವರ ಕಣ್ಣನ್ನು ನೋಡಿಯೇ ನಾವು ಅಂದಾಜಿಸುತ್ತೇವೆ- ಬರುತ್ತಿರುವ ವ್ಯಕ್ತಿ ಯಾವ ಥರದವನು, ಅವನು ಕೋಪದಲ್ಲಿದ್ದಾನೋ, ಸಂತೋಷದಲ್ಲಿದ್ದಾನೋ, ಬೇಸರದಲ್ಲಿದ್ದಾನೋ, ಸೊಕ್ಕಿದ್ದಾನೋ, ಸೊರಗಿದ್ದಾನೋ ಇತ್ಯಾದಿ ಅವನ ಕಣ್ಣಲ್ಲಿ ಆತ ತೋರುವ ಮನದಿಂಗಿತಕ್ಕೆ ತಕ್ಕುನಾಗಿ ಭಾಷ್ಯ ಬರೆಯಲು ನೋಟಕರಿಗೆ ಸಾಧ್ಯವಾಗುತ್ತದೆ. ಕಣ್ಣ ಹುಬ್ಬನ್ನು ಆಗಿಂದಾಗ್ಗೆ ಅನಾವಶ್ಯಕವಾಗಿ ಹಾರಿಸುವವರು ಕೆಲವು ಮಂದಿ. ಇದು ರೂಢಿಯಾಗಿಬಿಟ್ಟರೆ ಬೀಡಿ-ಸಿಗರೇಟು ಚಟದಂತೆ ತಪ್ಪಿಸುವುದೇ ಕಷ್ಟ! ಬೊಗಸೆಕಂಗಳು ಎನ್ನುತ್ತೇವಲ್ಲ ಹಾಗೆಂದರೆ ಕಣ್ಣೇನು ಬೊಗಸೆ ತುಂಬಾ ತುಂಬುವಷ್ಟಿವಿಯೇ ? ಕಣ್ಣನ್ನು ನೋಡಿದಾಗ ನಮಗೆ ನಮ್ಮ ಬೊಗಸೆಯಲ್ಲಿ ತನ್ನ ಭಾವನೆಗಳನ್ನೆಲ್ಲ ಆ ವ್ಯಕ್ತಿ ತುಂಬಿಸಿಕೊಟ್ಟ ಅನುಭವವಾಗುತ್ತದೆ. ಅದಕ್ಕೇ ಅವು ಬೊಗಸೆಕಂಗಳು! ನೀಲಲೋಚನ ಅಂದರೆ ಕಣ್ಣೇನೂ ನೀಲಿಗಟ್ಟಿರುವುದಿಲ್ಲ ಬದಲಾಗಿ ಅರ್ಧನಿಮೀಲಿತವಾಗಿ ಜ್ಞಾನಚಕ್ಷುಗಳಂತೇ ಕಂಡುಬರುವುದರಿಂದ ಅವು ನೀಲಲೋಚನಗಳು. ಕಮಲಲೋಚನ ಎಂದರೆ ಕಮಲದಂತೇ ಅರಳಿರುವ ಭಾವವನ್ನು ಹೊರಹೊಮ್ಮಿಸುವ ಕಣ್ಣುಗಳು. ಸುಲೋಚನ--ಯಾವುದೋ ಹುಡುಗಿ ಬಂದು ಬಿಟ್ಟಾಳು! ಸುಲೋಚನ ಎಂದರೆ ಚೆನ್ನಾಗಿರುವಕಣ್ಣು ಅಲ್ಲವೇ? ಅದನ್ನೇ ಕೆಲವರು ಕನ್ನಡಕಕ್ಕೆ ಪರ್ಯಾಯವಾಗಿ ಬಳಸುತ್ತಾರೆಂಬುದನ್ನು ಕೇಳಿದ್ದೇನೆ.

ಎದುರಿಗಿರುವ ವ್ಯಕ್ತಿಯ ಬಹುತೇಕ ಆಯಾಮಗಳು ಅವನ ಕಣ್ಣ ನೋಟದಲ್ಲೇ ಬಿಂಬಿತವಾಗುತ್ತವೆ. ಕೆಲವರನ್ನು ನೋಡಿ--ಅವರು ನಮ್ಮನ್ನು ತಿಂದುಬಿಡುವಂತೆ ನೋಟ ಹರಿಸುತ್ತಿರುತ್ತಾರೆ, ಇನ್ನು ಕೆಲವರು ಎಲ್ಲೋ ಪರಿಚಯವಿರುವವರ ಹಾಗೇ ನೋಡುತ್ತಾರೆ, ಕೆಲವರಿಗೆ ಎದುರಿಗೆ ಯಾರು ಬಂದರೆಷ್ಟು ಹೋದರೆಷ್ಟು! ಅವರಿಗೆ ಭಾವನೆಗಳೇ ಇಲ್ಲವೇನೋ ಎನ್ನುವಂತಿರುತ್ತವೆ ಅವರ ಕಣ್ಣುಗಳು. ಕೆಲವರಿಗೆ ಅನಾಥಪ್ರಜ್ಞೆ ಕಾಡುವ ಕಣ್ಣುಗಳಾದರೆ ಇನ್ನು ಕೆಲವರ್ದು ಅಪರಾಧೀ ಭಾವ ಹೊಮ್ಮಿಸುವ ಕಣ್ಣುಗಳು. ಕುಹಕ ಬುದ್ಧಿಯುಳ್ಳವರ ಕಣ್ಣುಗಳು ಎದುರಿಗಿರುವವರ ಆಯಳತೆ ನಿರ್ಧರಿಸುವ, ಅವರಿಗೆ ಕೀಟಲೆಕೊಟ್ಟು ಮಜಾತೆಗೆದುಕೊಳ್ಳುವ ಗೋಮುಖ ವ್ಯಾಘ್ರನ ರೀತಿಯ ಕಣ್ಣುಗಳಾಗಿದ್ದು ಗುರುತಿಸುವುದು ಭಾರೀ ಕಷ್ಟದ ಕೆಲಸ! ತತ್ವಜ್ಞಾನಿಯೊಬ್ಬನ ಕಣ್ಣುಗಳು ಹಲವರಿಗೆ ಏನನ್ನೋ ಕೊಡಬಯಸುವಂತೆ ವಾತ್ಸಲ್ಯಪೂರಿತವಾಗಿರುತ್ತವಾದರೆ ವಿಜ್ಞಾನಿಗಳ ಕಣ್ಣುಗಳು ಸದಾ ಹುಡುಕುವ ಗಡಿಬಿಡಿಯಲ್ಲಿರುವವು, ನಟನ ಕಣ್ಣುಗಳು ಚಂಚಲವಾದರೆ, ನಟಿಯಲ್ಲಿ ಅವು ಮೀನಿನ ಹೆಜ್ಜೆಯನ್ನು ನೀರಲ್ಲಿ ಹುಡುಕಿದಂತೇ ಆಭಾಸವುಂಟುಮಾಡುವಂಥವು,ಕುಡುಕನ ಕಣ್ಣು ಕೆಂಪಾಗಿ ನಿಸ್ತೇಜವಾಗಿದ್ದರೆ ತಾಪಸರ ಕಣ್ಣು ಚೈತನ್ಯದ ಚಿಲುಮೆಯನ್ನೇ ಹರಿಸುವ ದಿವ್ಯ ಚಕ್ಷುಗಳಾಗಿರುತ್ತವೆ. ರಾಜಸರ ಕಣ್ಣು ಸುಖೋಪಭೋಗಗಳನ್ನು ಲೆಕ್ಕಿಸುವುದಾದರೆ ಲೆಕ್ಕಿಗರ ಕಣ್ಣು ಅಂಕೆಗಳನ್ನು ಜೋಪಾನವಾಗಿ ಗ್ರಹಿಸುವ ತೀಕ್ಷ್ಣಮತಿಯುಳ್ಳವು, ವೈದ್ಯರ ಕಣ್ಣು ರೋಗಿಗೆ ಆಶಾದಾಯಕ ಭಾವನೆಯನ್ನು ಕೊಡುವವಾದರೆ ಜ್ಯೋತಿಷರ ಕಣ್ಣು ಖಗೋಳವನ್ನೇ ನುಂಗಿ ನೀರು ಕುಡಿದ ಮಹಾಪಾಂಡಿತ್ಯದ ಬೂಟಾಟಿಕೆಯಿಂದ ಕೂಡಿದವುಗಳು, ವಿದ್ಯಾರ್ಥಿಯ ಕಣ್ಣು ಪರೀಕ್ಷೆಯ ಚಿಂತೆಯನ್ನು ಸೂಚಿವಂತವಾಗಿದ್ದರೆ ಅಭ್ಯರ್ಥಿಯ ಕಣ್ಣು ಸೋಲು-ಗೆಲುವಿನ ತಳಮಳ ಹೊತ್ತಿರುವವು,ಜ್ಞಾನಿಗಳ ಕಣ್ಣು ಇನ್ನೂ ತಿಳಿದುಕೊಳ್ಳುವ ಕಾತುರದಿಂದ ಕೂಡಿದ್ದರೆ ಪಾತಕಿಗಳ ಕಣ್ಣು ಕ್ರೌರ್ಯವನ್ನು ಮೆರೆಯುವಂಥವು. ಹೀಗೇ ಆಯಾಯ ವ್ಯಕ್ತಿ ಮತ್ತು ಆಯಾಮಗಳಿಗೆ ತಕ್ಕನಾಗಿ ಕಣ್ಣು ಹಲವು ಭಾವನೆಗಳನ್ನು ಹೊರಸೂಸುವ ಮಾಯಾಪೆಟ್ಟಿಗೆಯಾಗಿರುತ್ತದೆ.

ಕಣ್ಣ ನೋತದ ಬಗ್ಗೆ ಹಲವು ಭಾವಗೀತೆಗಳು- ಸಿನಿಮಾ ಹಾಡುಗಳು ಬರೆಯಲ್ಪಟ್ಟವು, ಇನ್ನೂ ಬರೆಯಲ್ಪಡುತ್ತಲೇ ಇವೆ. ಯಾಕೆಂದರೆ ಹೆಣ್ಣ ಕಣ್ಣುಗಳು ಹಲವೊಮ್ಮೆ ಕವನಗಳನ್ನು ಹಾಡುತ್ತವೆ! ನಾಯಕನ ಕಣ್ಣುಗಳು ನಾಯಕಿಗೆ ರುಚಿಸಿದರೆ ನಾಯಕಿಯ ನಯನಗಳು ನಾಯಕನಿಗೆ ಅತಿ ವಿಶಿಷ್ಟವಾಗಿ ಹೊರಹೊಮ್ಮುತ್ತವೆ. ರತಿ-ಮನ್ಮಥರನ್ನು ಗಣನೆಗೆ ತೆಗೆದುಕೊಂಡು ಬರೆಯುವಾಗ ಕಾಮನಬಿಲ್ಲು ಎಂದು ಬರೆದು ಅದನ್ನು ಕಣ್ಣಹುಬ್ಬಿಗೆ ಹೋಲಿಸಿದ್ದಾರೆ. ಪೌರಾಣಿಕ ಕಥೆಗಳನ್ನು ಗಮನಿಸಿದರೆ ಅಲ್ಲಿ ವಿಶ್ವಾಮಿತ್ರ ಮೇನಕೆಯನ್ನು ಕಂಡ ಪ್ರೇಮ ಸಂಚಲಿತ ಕಾಮದ ಕಣ್ಣು, ದುಷ್ಯಂತ-ಶಕುಂತಲೆಯರ ಮೊದಲ ನೋಟದ ಪ್ರೇಮ, ವಾಮನನ ಚಿಕ್ಕ ರೂಪ ಕಂಡು ದಾನಗೈದ ಬಲಿಗೆ ಬಹುದೊಡ್ಡ ರೂಪದ ವಾಮನನ್ನು ತೋರಿದ ಅದೇ ಕಣ್ಣು, ಚಿನ್ನದ ಜಿಂಕೆಯನ್ನು ಕಂಡ ಸೀತೆ ರಾಮ-ಲಕ್ಷ್ಮಣರನ್ನು ಕರೆದು ಅದನ್ನು ತಂದುಕೊಡುವಂತೆ ಮಾಡಿದ ಆ ಕಣ್ಣು, ಮಾರುತಿಗೆ ಶತಯೋಜನ ವಿಸ್ತೀರ್ಣದ ಸಮುದ್ರವನ್ನು ಅತಿ ಚಿಕ್ಕ ಕೂಗಳತೆಯ ನದಿಯದಡಗಳ ರೀತಿ ತೋರ್ಪಡಿಸಿದ್ದು ಅದೇ ಕಣ್ಣು. ಕಣ್ಣಿನ ಭಾಷೆಯ ವ್ಯಾಪಕತ್ವ ಇಷ್ಟಕ್ಕೇ ಸೀಮಿತವಲ್ಲ. ಆದರೆ ಇದ್ದುದರಲ್ಲಿ ಅದನ್ನು ಹೇಗೆ ಬಳಸಿದರೆ ಅನುಕೂಲಕರ ಅಥವಾ ಒಳ್ಳೆಯದು ಎಂದು ತಿಳಿದುಕೊಂಡರೆ ಅದರ ಮಹತ್ವದ ಅರಿವಾಗುತ್ತದೆ.

ಸ್ಥೂಲವಾಗಿ ಹೇಳಿಬಿಡಬಹುದಾದರೆ ಮನಸ್ಸಿಗೆ ವಿಷಯದ ದೃಶ್ಯಮಾಧ್ಯಮಗಳ ಅನುಭೂತಿಯನ್ನು ತರುವ ಅತಿ ವಿಷಿಷ್ಟ ಅಂಗ ನಮ್ಮ ಕಣ್ಣು. ಕಣ್ಣನ್ನು ಕೈಯ್ಯಲ್ಲಿ ಇಟ್ಟುಕೊಳ್ಳೋಣ, ಕಣ್ಣಿಗೆ ಕಂಡಿದ್ದೆಲ್ಲಾ ಬೇಕು ಎನ್ನುವ ಕೊಳ್ಳುಬಾಕ ಸಂಸ್ಕೃತಿಯನ್ನು ಮಟ್ಟಹಾಕೋಣ, ಈ ಕಣ್ಣು ಮನದಲ್ಲಿ ಜ್ಞಾನದ ದೀವಿಗೆಯನ್ನು ಬೆಳಗುವ ಮೂಲ ದೀಪವಾಗಲಿ, ಈ ಕಣ್ಣು ತನ್ನ ಸ್ವಯಂಪ್ರಕಾಶದಿಂದ ಹಲವರ ಬಾಳಿಗೆ ಬೆಳಕನ್ನು ನೀಡಲು ಉಪಕಾರವಾಗುವ ದೀಪವಾಗಲಿ ಎಂದು ಆಶಿಸೋಣವೇ?