ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, December 25, 2012

ಸ್ವರಚಿತ ಭಾಮಿನಿಗಳ ಮೂಲಕ ಭಾಷಾ ಸಗುಣಾರಾಧನೆ

ಚಿತ್ರಕೃಪೆ : ಅಂತರ್ಜಾಲ 
ಸ್ವರಚಿತ ಭಾಮಿನಿಗಳ ಮೂಲಕ ಭಾಷಾ ಸಗುಣಾರಾಧನೆ

ಬರುತಿರಲು ಪುಷ್ಪಕ ವಿಮಾನವು
ಥರಥರದ ಯೋಚನೆಯು ಮನದೊಳು
ಪರಿತಪಿಸಿ ತಲೆತಿರುವಿ ನೋಡಿದನಾಜಟಾಯುವು ತಾ |
ಭರದಿ ಸಾಗಿಸುತಿರ್ದ ಸೀತೆಯ
ಧುರದಿ ಮರಣವೆ ಬಂದರೂ ಬಿಡೆ
ಹರಿಯೆ ನಿನ್ನೊಳು ಸೇರಿಕೊಂಬೆನು ಶರಣತಾನೆನುತ ||

ಆಗಸದಲ್ಲಿ ಹಾರುತ್ತಿದ್ದ ಪುಷ್ಪಕದಲ್ಲಿ ಬಲವಂತದಿಂದ ಸಾಗಿಸಲ್ಪಡುತ್ತಿದ್ದ ಸೀತಾದೇವಿಯನ್ನು ಕಂಡ ಜಟಾಯುವಿನ ಹೃದ್ಗತವನ್ನು ಮೇಲಿನ ಪದ್ಯದಲ್ಲಿ ಕಾಣುತ್ತೀರಲ್ಲವೇ? ಕಾಲಬದಲಾದರೂ ಅಂದಿನ ಕವಿ-ಕಾವ್ಯ ಪರಂಪರೆಯನ್ನು ಮೆಲುಕಿಹಾಕಿದಾಗ ಎಂತೆಂತಹ ಪುಣ್ಯವಂತರು ಆಗಿಹೋದರು ಎಂಬುದು ತಿಳಿಯುತ್ತದೆ. ಅನೇಕರಿಗೆ ಕಾವ್ಯ-ಸಾಹಿತ್ಯ ದೇವರ ಸೇವೆಯಾಗಿತ್ತು-ತನ್ಮೂಲಕ ಪರೋಕ್ಷ ಸಮಾಜಸೇವೆಯಾಗಿತ್ತು. ಹೆಸರಿನ ಗೀಳಿನ ಹಿಂದೆ ಬಿದ್ದ ಜನವಲ್ಲ; ಕೆಸರಿನ ಪ್ರಶಸ್ತಿಗಳಿಗಾಗಿ ತೊಡಗಿಕೊಂಡವರಲ್ಲ. ಉಪಜೀವನದ ಅಗತ್ಯಗಳನ್ನು ನಿಭಾಯಿಸಿಕೊಳ್ಳುತ್ತಾ ಬಿಡುವಿನಲ್ಲಿ ತ್ರಿಕರಣ[ಕಾಯಾ-ವಾಚಾ-ಮನಸಾ]ಪೂರ್ವಕ ಶುಚಿರ್ಭೂತರಾಗಿ ತಾಡವೋಲೆಗಳನ್ನು ಸಿದ್ಧಪಡಿಸಿಕೊಂಡು ಅವುಗಳಮೇಲೆ ಅಕ್ಷರಗಳನ್ನು ಹರಿತವಾದ ಲೋಹದ್ದೋ ಮರದ್ದೋ ಕಡ್ಡಿಯಿಂದ ಕೊರೆಯುತ್ತಿದ್ದರು, ಕಾಲಾನಂತರದಲ್ಲಿ ವನಸ್ಪತಿಗಳ ತೆಗೆದ ರಸದಿಂದ ಮಸಿಯನ್ನು ತಯಾರಿಸಿಕೊಂಡು ಬೈನೆ ಮರದ ಕಡ್ಡಿಯಿಂದಲೋ ಹಕ್ಕಿಯ ಉದುರಿದ ಪುಕ್ಕದ ಬುಡದಿಂದಲೋ, ಮಸಿಯನ್ನು ಅದ್ದಿಕೊಂಡು ಬರೆಯಲು ತೊಡಗಿದರು. ಆ ಮಸಿ ಅಳಿಸಿಹೋಗದಂತಹದುದಾಗಿದ್ದು ಶತಶತಮಾನಗಳು ಕಳೆದರೂ ಗ್ರಂಥಗಳು ಕೆಡಲಿಲ್ಲ. ಆ ಕಾಲದಲ್ಲೂ ಹಿಂದಿಗಿಂತಾ ಹೊಸಕಾಲ ಎಂಬುದಿದ್ದಿರಲೇ ಬೇಕಲ್ಲಾ? ಆದರೆ ಹೊಸಕಾಲದ ಆಡಂಬರಕ್ಕೆ, ನವಜೀವನ ಧೋರಣೆಯಲ್ಲಾದ ಬದಲಾವಣೆಗೆ ಹಿತಮಿತವಾಗಿ ತೆರೆದುಕೊಂಡವರು ನಮ್ಮ ಪೂರ್ವಜರು. ಧಾವಂತದ ಜೀವನಕ್ಕೆ ಆಸ್ಪದವಿತ್ತವರಲ್ಲ; ಚಣಕಾಲವನ್ನು ವ್ಯರ್ಥಮಾಡಿದವರೂ ಅಲ್ಲ. ಎಲ್ಲರೂ ಶ್ರಮಜೀವಿಗಳಾಗಿದ್ದರು. ಹೆಂಗಸರಿಗಾಗಲೀ ಗಂಡಸರಿಗಾಗಲೀ ಯಂತ್ರಗಳ ಸಹಾಯ ಬೇಕಿರಲಿಲ್ಲ. ಅಗತ್ಯಗಳನ್ನು ಖುದ್ದಾಗಿ ತಯಾರಿಸಿಕೊಳ್ಳುವ ಸ್ವಾವಲಂಬನೆ ಇತ್ತು. ಬೊಜ್ಜು ಬೆಳೆದ ಹೆಂಗಸರ/ಗಂಡಸರ ಸಂಖ್ಯೆ ಇರಲಿಲ್ಲವೆಂದರೇ ತಪ್ಪಾಗಲಾರದು.  

ಬಂದ ಅತಿಥಿಯನ್ನು ಎಂದಿಗೂ ಅಸಡ್ಡೆಯಿಂದ ಕಂಡವರಲ್ಲ. ಅತಿಥಿಗಳಿಗೆ ಎಲ್ಲದರಲ್ಲೂ ಪ್ರಥಮ ಆದ್ಯತೆ. ಆತಿಥಿಗಳು ಉಂಡು, ತಿಂದು, ವಿಶ್ರಮಿಸಿ ಹೀಗೆಲ್ಲಾ ಆತಿಥ್ಯದಿಂದ ಸಂಪ್ರೀತರಾದಮೇಲೇ ತಾವು ಆಹಾರ ಸ್ವೀಕರಿಸುತ್ತಿದ್ದರು. ಇದರಲ್ಲಿ ರಾಜ-ಮಹಾರಾಜರೂ ಕಮ್ಮಿ ಇರಲಿಲ್ಲ! ಬಾಲ್ಯ ಸ್ನೇಹಿತ ಕುಚೇಲ ಬಂದ ಸುದ್ದಿ ತಿಳಿದ ಶ್ರೀಕೃಷ್ಣ ರಾಜಭವನದೊಳಗಿಂದ ಮಹಾದ್ವಾರದೆಡೆಗೆ ಪರಿವಾರಸಹಿತನಾಗಿ ಓಡೋಡಿ ಬಂದ ಕಥೆಯನ್ನು ಕೇಳಿದ್ದೇವೆ. ಸುಧಾಮನಿಗೋ ರೋಮರೋಮದಲ್ಲೂ ನಾಚಿಕೆ; ರಾಜ್ಯಾಡಳಿತದ ಸೂತ್ರಧಾರ ಕೃಷ್ಣನೆಲ್ಲಿ-ಬರಿಗೈ ದಾಸ ತಾನೆಲ್ಲಿ ಎಂಬ ಭಾವನೆ; ತನ್ನಲ್ಲಿ ಏನನ್ನು ಕಂಡು ಕೃಷ್ಣ ತನಗಾಗಿ ಹೀಗೆ ಇಷ್ಟೆಲ್ಲಾ ವಿಜೃಂಭಣೆಯ ಆತಿಥ್ಯವನ್ನು ನೀಡುತ್ತಿದ್ದಾನೆ ಎಂಬ ಮುಜುಗರ. ಸಹಪಾಠಿಯಾಗಿದ್ದುದೇನೋ ನಿಜವೇ, ಆದರೂ ಈಗ ಕೃಷ್ಣನೊಬ್ಬ ರಾಜರ್ಷಿ-ಪ್ರಜೆಗಳ ಸುಖದುಃಖಗಳನ್ನು ನಿಭಾಯಿಸುವವನು, ತಾನೋ ಸಂಸಾರಿಯಾಗಿ ತನ್ನ ಸಂಸಾರವನ್ನೇ ನಿಭಾಯಿಸಲಾಗದ ನಿರ್ಗತಿಕ. ವಿಷಯ ತಿಳಿದರೆ ಕೃಷ್ಣ ಏನೆಂದುಕೊಂಡಾನು ಎಂಬ ಭಯವೂ ಆತಂಕವೂ ಮಡುಗಟ್ಟಿದ್ದವು. ಅದೊಂಥರಾ ಭಯ, ಆತಂಕ, ಸ್ನೇಹಿತನನ್ನು ಬಹುಕಾಲದ ನಂತರ ಭೇಟಿಯಾದ ಹರ್ಷೋದ್ವೇಗ, ಮನೆಯ ಬಡತನವನ್ನು ನೆನೆದು ದುಃಖ ಹೀಗೆ ಹಲವು ಭಾವಗಳ ಸಮ್ಮಿಶ್ರಛಾಪು. ವಾದ್ಯ ಸಹಿತನಾಗಿ ಎದುರ್ಗೊಂಡ ಅತಿಥಿ ಸ್ನೇಹಿತ ಸುಧಾಮನನ್ನು ಕೃಷ್ಣ ರಾಜೋಚಿತ ಪೀಠದಲ್ಲಿ ಕುಳ್ಳಿರಿಸಿ, ರುಕ್ಮಿಣೀಸಹಿತನಾಗಿ ಪಾದತೊಳೆದು ಪೂಜಿಸಿದ. ಆಗಮನದ ದಣಿವನ್ನಾರಿಸಿಕೊಂಡ ಕುಚೇಲನ ಪಕ್ಕದಲ್ಲಿ ಕುಳಿತು ತನಗೇನು ತಂದೆಯೆಂದು ಪ್ರಸ್ತಾಪಿಸಿದಾಗ ಸುಧಾಮನ ಮಾತನ್ನು ಈ ರೀತಿ ಅಭಿವ್ಯಕ್ತಗೊಳಿಸಬಹುದಾಗುತ್ತದೆ: 

ಅರಿಯದಾದೆಯ ಮರುಳು ಮಾಧವ  ?
ದರುಶನವೆ ಸಾಕೆಂದು ಬಂದೆನು
ಪರಮಪಾವನವೆನ್ನ ಜೀವನ ಹೊರಡಲಪ್ಪಣೆಯೇ?
ಸರಸರನೆ ಅವಸರದಿ ಪೊರಟಿರೆ
ಬರುತಲಿರ್ದೆನು ಬರಿಯ ಕಯ್ಯೊಳು
ಪರಮಮಿತ್ರ ತೆರಳಲನುಮತಿಸೆನ್ನ ಭಾವಿಸದೆ   ||

ಹರುಕು ಪಂಚೆಯಲ್ಲಿ ಬಂದ ತಾನು ಪರಿಮಳಸೂಸುವ ಆ ದಿವ್ಯ ಪೀಠದಲ್ಲಿ ಕೂರುವುದು ಉಚಿತವೇ? ಎಂಬುದು ಕುಚೇಲನ ಮನದಿಂಗಿತವಾಗಿತ್ತು. ಬಾಲ್ಯಕಾಲ ಸಖ-ಕೃಷ್ಣ, ಆಗೆಲ್ಲಾ ತಾವು ಏನೆಲ್ಲಾ ತಿಂಡಿಗಳನ್ನು ಹಂಚಿಕೊಂಡು ತಿನ್ನುತ್ತಿದ್ದೆವು, ಆದರೆ ಇಂದು ತಾನು ಹೆಂಡತಿಯ ಮೂಲಕ ಬೇಡಿ ತಂದ ಹಿಡಿಯವಲಕ್ಕಿಯನ್ನು ಆತನಿಗೆ ಕೊಡಲಾರ. ಕೃಷ್ಣನಿಗೂ ಗೊತ್ತು, ಸುಧಾಮ ತನಗಾಗಿ ಏನನ್ನಾದರೂ ತಂದಿರುತ್ತಾನೆ, ಆತ ಬರುವಾಗ ಆತನನ್ನು ಆತನ ಮಡದಿ ಅತ್ತಿಗೆ ಬರಿಗೈಲಿ ಕಳಿಸಿರಲು ಸಾಧ್ಯವಿಲ್ಲ, ಏನನ್ನೋ ತನ್ನಿಂದ ಮುಚ್ಚಿಡುತ್ತಿದ್ದಾನೆ ಎನಿಸಿ ಸೊಂಟದ ಎಡೆಯಲ್ಲಿ ಸಿಕ್ಕಿಸಿಕೊಂಡಿದ್ದ ಹರುಕು ಪಂಚೆಯ ತುಂಡಿನಲ್ಲಿರುವ ಹಿಡಿ ಅವಲಕ್ಕಿಯನ್ನು ಆತ ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ. ಕೃಷ್ಣ ತಿಂದಿದ್ದು ಹಿಡಿಯವಲಕ್ಕಿಯನ್ನಲ್ಲ-ಪರೋಕ್ಷ ಕುಚೇಲನ ಬಡತನವನ್ನು! ದಿನವೊಪ್ಪತ್ತು ಉಳಿದು ಹೊರಟುನಿಂತ ಕುಚೇಲನಿಗೆ ಮನದೊಳಗಿನ ಅಷ್ಟೂ ಬೇಗುದಿಗಳು ಮರೆತುಹೋಗಿದ್ದವು. ಏನನ್ನು ಕೇಳಬೆಂದು ಬಂದನೋ ಅದನ್ನು ಕೇಳಲು ಆಸ್ಪದವೇ ಇರಲಿಲ್ಲ; ಆದರೂ ಸುಧಾಮನಿಗೆ ತನ್ನ ಕೃಷ್ಣನ ಸಾಮರ್ಥ್ಯದ ಅನನ್ಯ ಅನುಭವ ಅದಾಗಲೇ ಆಗಿಬಿಟ್ಟಿತ್ತು, ಹಾಗಾಗಿಯೇ ಸಂಸಾರ ಹೇಗೇ ಇರಲಿ ಕೃಷ್ಣ ದರುಶನವಿತ್ತನಲ್ಲಾ ಎಂಬ ಸಂತೃಪ್ತ ಭಾವ ಒಡಮೂಡಿತ್ತು. ಆ ಅನನ್ಯ ಭಾವದಲ್ಲೇ ಕುಚೇಲ ಕೃಷ್ಣನಿಂದ ಬೀಳ್ಕೊಂಡ, ನಡೆದು ಬಹುದೂರದ ತನ್ನ ಮನೆಯೆಡೆಗೆ ತೆರಳಿದಾಗ ಬಡವನ ಗುಡಿಸಲು ಸ್ವರ್ಣಮಹಲಾಗಿದ್ದನ್ನು ಕಂಡ, ಹೆಂಡತಿ-ಮಕ್ಕಳು ಸರ್ವಾಲಂಕರ ಭೂಷಿತರಾಗಿ ಸುಖದಿಂದಿರುವುದನ್ನು ಕಂಡ, ಮನೆಯನ್ನು ಸಮೀಪಿಸುತ್ತಿದ್ದಂತೆಯೇ ತನ್ನ ಉಡುಗೆ-ತೊಡುಗೆಗಳೂ ತಂತಾನೇ ಬದಲಾದುದನ್ನು ಕಂಡ!!     

ಅಕ್ರೂರ ಮತ್ತು ವಿದುರರೂ ಕೂಡ ಕೃಷ್ಣಭಕ್ತರೇ. ಭಾರತಕಥೆಯಲ್ಲಿ ಈ ಎಲ್ಲಾಪಾತ್ರಗಳೂ ತಮ್ಮನ್ನು ಪರಮಾತ್ಮನಿಗೆ ಅರ್ಪಿಸಿಕೊಳ್ಳುವುದನ್ನು ಕಾಣಲು ಸಾಧ್ಯವಾಗುತ್ತದೆ. ಪಾಂಡವರು ಉಂಡು ತೊಳೆದಿಟ್ಟ ಪಾತ್ರೆಗೆ ಅಂಟಿದ್ದ ಅಗುಳನ್ನೇ ಉಂಡು ತೃಪ್ತನಾದ ಗೊಲ್ಲ ವಿದುರನ ಮನೆಯಲ್ಲಿ ಹಾಲು ಕುಡಿದು ಹಾಲಿನ ಹೊಳೆಯನ್ನೇ ಹರಿಸಿದ! ಕಂಸದೂತನಾಗಿ ನಿರ್ವಾಹವಿಲ್ಲದೇ ಬಿಲ್ಲಹಬ್ಬಕ್ಕೆ ಕರೆಯಲು ಬಂದ ಅಕ್ರೂರ, ಭಾರತಕಥೆಯ ವಿಶಿಷ್ಟ ಮತ್ತು ಪುಟ್ಟ ಪಾತ್ರ. ದುರುಳನ ಆಸರೆಯಲ್ಲೇ ಇದ್ದರೂ ಶರಣನಾದ ಅಕ್ರೂರ ಮಥುರೆಯಿಂದ ಮುಂದಾಗಿ ಸಾಗಿಬರುತ್ತಾ ವೃಂದಾವನ ಕಂಡಕ್ಷಣವೇ ಭೂಮಿಯನ್ನು ಮುಟ್ಟಿ ಷಡಂಗ ನಮಸ್ಕಾರ ಸಲ್ಲಿಸುತ್ತಾನೆ. ಪರಮಾತ್ಮ ಶ್ರೀಕೃಷ್ಣ ನಡೆದಾಡುವ ಪುಣ್ಯಭೂಮಿ ಎಂಬ ಅನಿಸಿಕೆ ಆತನನ್ನು ಸೆಳೆದು, ಅರೆಘಳಿಗೆ ಅಲ್ಲಿಯೇ ಕೃಷ್ಣನಮನವನ್ನು ಸಲ್ಲಿಸುತ್ತಾ ವಿಶ್ರಮಿಸಿ ಮನದತೊಳಲಾಟದಲ್ಲೇ ಅಕ್ರೂರ ಕೃಷ್ಣದರ್ಶನಕ್ಕೆ ಮುಂದೆಸಾಗುತ್ತಾನೆ. ಕೃಷ್ಣನಿಗೆ ಅಕ್ರೂರ ವಾವೆಯಲ್ಲಿ ಮಾವನಾಗಬೇಕು. ಇಲ್ಲಿಯೂ ಕೂಡ  ಬಂದ ಅತಿಥಿಗೆ ಕೃಷ್ಣ ಯಥೋಚಿತ ಸತ್ಕಾರಗಳನ್ನು ನೀಡುವುದನ್ನು ಕಾಣುತ್ತೇವೆ. ನಂತರ ಕೃಷ್ಣ ಸಂವಹಿಸಿದ ಆರಂಭಿಕ ಪರಿಯನ್ನು ಹೀಗೆ ಹೇಳಬಹುದಾಗಿರುತ್ತದೆ: 

ಏನಿದಕ್ರೂರ ನಿನ್ನಯ ?
ಯಾನಸುಲಲಿತವೆಂದುಕೊಂಡೆ
ಧ್ಯಾನದಿರ್ದೆನು ತಾತ-ಅಜ್ಜಿ ಕುಶಲದಿಂದಿಹರೇ ?
ಕೋನದಿಂ  ವ್ಯಾಕುಲ  ಕಂಡೆ
ಹೀನಕಂಸನು ಮಥುರೆಗೆಳೆದವ
ಮಾನಿಸೆ ಶರಚಾಪಹಬ್ಬದ ನೆಪವನೊಡ್ಡಿಹನೇ ? 

 ಅಥವಾ 

ಬಂದೆಯಾ ಅಕ್ರೂರ ನಿನ್ನಯ 
ಸಂದ ಪಯಣವು ಸೌಖ್ಯವಾಯ್ತೆ
ಚಂದದಲಿ ಮುಂದೆನಗೆ ನೀ ಪೇಳ್   ಕುಶಲವಿಷಯಗಳ ।
ಸಂದುಹೋದವು ಬಹಳದಿನಗಳು
ಮಿಂದೆನಾ ನೆನಪಲ್ಲಿ ಅನುದಿನ
ಎಂದು  ನೋಳ್ಪೆನೊ  ಅಜ್ಜಿತಾತರು  ಕುಶಲದಿಂದಿಹರೇ?

ಇಂತೀಪರಿಯಲ್ಲಿ ಕಾವ್ಯರಚನಾ/ವಾಚನಾವಿನೋದದಲ್ಲಿ ಪೂರ್ವಜರು ಸಮಯವ್ಯಯಿಸುತ್ತಿದ್ದರು. ಪೂರ್ವಭಾವಿಯಾಗಿ ಮಹಾಕವಿಗಳ ಕಾವ್ಯವನ್ನು ವಾಚಿಸುತ್ತಿದ್ದರು, ಆನಂದಿಸುತ್ತಿದ್ದರು, ಅದರಿಂದ ಸಾಕಷ್ಟು ಆಳವಾದ ಲೋಕಜ್ಞಾನ ಲಭಿಸುತ್ತಿತ್ತು. ಓದಿ ಗಳಿಸಿದ ಪಾಂಡಿತ್ಯವನ್ನು ಕಾವ್ಯರಚನೆಯಲ್ಲಿ ತೊಡಗಿಕೊಂಡು ಒರೆಗೆ ಹಚ್ಚುತ್ತಿದ್ದರು; ಜೊತೆಗೆ ಭಾರತ-ರಾಮಾಯಣ ಮೊದಲಾದ ಕಾವ್ಯಗಳನ್ನು ತಮ್ಮದೇ ಆದ ರೀತಿಯಲ್ಲಿ, ವೈಖರಿಯಲ್ಲಿ, ಛಂದಸ್ಸು-ಅಲಂಕಾರಗಳನ್ನು ಬಳಸಿ, ಬರೆಯುವುದು ಭಗವಂತನ ಸೇವೆ ಎಂಬ ಶ್ರದ್ಧೆಯಿಂದ ಬರೆಯುತ್ತಿದ್ದರು. ತಮ್ಮ ಖ್ಯಾತನಾಮರಾಗಬೇಕೆಂಬ ಭಾವವಾಗಲೀ ತಮಗೆ ಏನೋ ಸಂಭಾವನೆ ಸಿಗಬಹುದೆಂಬ ಅಪೇಕ್ಷೆಯಾಗಲೀ ಅಲ್ಲಿರುತ್ತಿರಲಿಲ್ಲ. ಇದಕ್ಕೆ ಮಹಾಕವಿ ಕುಮಾರವ್ಯಾಸ ಒಂದು ಜ್ವಲಂತ ಉದಾಹರಣೆ. ಅದುವರೆಗೆ ಮಹಾಭಾರತ ಕನ್ನಡಲ್ಲಿ ಪರಿಪೂರ್ಣವಾಗಿ ಕಾವ್ಯರೂಪದಲ್ಲಿ ಬಂದಿರಲಿಲ್ಲವೆನ್ನಬೇಕು. 

ಬರೆಯುತಿರಲಾ ಕುವರವ್ಯಾಸ
ಹರೆಯವುಕ್ಕುತ ಮುದುಕರಲ್ಲಿಯು
ಸರಸಕೆಳಸುತ ಕಾಲಮರೆವರು ಕಾವ್ಯಕೌತುಕದಿ |
ಸರಸತಿಯು ಮುದಗೊಂಡು ನಡೆತಂ
ದಿರಲು ನರ್ತಿಸೆ ನೂಪುರಗಳ
ಸ್ವರವನಾಲಿಸಿ ಚಕಿತಗೊಂಬರ್ ಭಾವವೇದಿಯೊಳು ||

ಮೆಥಮೆಟಿಕಲ್ ಮ್ಯಾಜಿಕ್ ಅಥವಾ ಗಣಿತದಲ್ಲಿ ಇಂದ್ರಜಾಲದಂತಹ ಚಮತ್ಕಾರಕ ಸಮಸ್ಯೆಗಳು ಕಾವ್ಯರಚನೆಯಲ್ಲಿ ಎದುರಾಗುತ್ತವೆ. ಸಂಖ್ಯಾಬಂಧವನ್ನು ನಿಭಾಯಿಸಿದಂತೇ ಪದಗಳ ಉಪಯೋಗ ಮತ್ತು ನಿರುಪಯೋಗವನ್ನೂ ಕಾಣಬಹುದಾಗುತ್ತದೆ. ಪದಗಳ ರಾಶಿಯನ್ನು ಹಾಕಿಕೊಂಡು ಪೋಣಿಸುವುದು ಕೂಡುವುದು ಕಳೆಯುವುದು ಮಾಡಬಹುದಾಗಿರುತ್ತದಾದರೂ ಸಮಯಮಿತಿಯ ಬಗ್ಗೆ ಅರಿವಿರಬೇಕಾದುದೂ ಅಷ್ಟೇ ಅಗತ್ಯ. ಇಂತಹ ಅಭಿಜಾತ ಕಾವ್ಯರಚನೆಯಲ್ಲಿ ತೊಡಗಿದಾಗ ಲಾಜಿಕ್ ಅಥವಾ ತರ್ಕಶಾಸ್ತ್ರದ ಪರಿಣಾಮವೂ ನಮಗೆ ಅನುಭವಕ್ಕೆ ಬರುತ್ತದೆ. ಮೇಲಾಗಿ ಸಮೂಹ ಮಾಧ್ಯಮಗಳಲ್ಲಿ ಸಿಗುವ ಕೀಳು ಅಭಿರುಚಿಯ ಕಥನಗಳ ಸಂಗ-ಸಾಂಗತ್ಯಕ್ಕಿಂತಾ ಇವು ಒಳ್ಳೆಯತನದೆಡೆಗೆ ನಮ್ಮನ್ನು ಕರೆದೊಯ್ಯುತ್ತವೆ. ಉತ್ತಮದೆಡೆಗೆ ನಡೆಯುವಾಗ ಆದಷ್ಟೂ ತಪ್ಪುಮಾಡದಂತೇ ಮನಸ್ಸು ಎಚ್ಚರವಹಿಸುತ್ತದೆ. ತಪ್ಪೇ ಮಾಡದ ವ್ಯಕ್ತಿತ್ವಗಳು ರೂಪುಗೊಂಡರೂ ಅದು ಆಕಸ್ಮಿಕವಲ್ಲ! 

ಕೆಲಸ ಹೇರಳವೆಂಬ ಜನರಿಗೆ
ಒಲಸೆಪೋಗಲು ಸಮಯ ದೊರೆವುದು
ಕಲಸಿ ಬಡಿಸಲು ಉಂಬುವರ್ ಮೈತೊಳೆಯದಕಟಕಟಾ |
ಚಲಿಪುದಕೆ ಚರವಾಣಿಗೇ ಮೇಣ್
ಕಲಿಕಳತ್ರದ ’ಮುಖದಪುಸ್ತಕ’
ಕೊಲಿದುನೋವನುಭವಿಪರವರ್ಗೆ ಕಾಂಬುದೈ ವಿಕಟ ||

"ನಮ್ಮ ಕೆಲಸಕ್ಕೆ ಬಿಡುವೇ?" ಎನ್ನುವ ಮಹಾನುಭಾವರು ನಮ್ಮ ನಡುವೆ ಅದೆಷ್ಟಿಲ್ಲ? ಯಾರಿಗೂ ತೆರಪಿಲ್ಲ-ಪುರ್ಸೊತ್ತಿಲ್ಲ, ಕೆಲವರಿಗಂತೂ ಸ್ನಾನಮಾಡಲೂ ವೇಳೆಯಿಲ್ಲ. ಆದರೆ ಊಟಕ್ಕೆ, ಗಾಡಿಯಲ್ಲಿ ದೂರ ವಾರಗಟ್ಟಲೆ ವಿಹಾರಹೋಗಲಿಕ್ಕೆ, ಚರದೂರವಾಣಿಯಲ್ಲಿ ಪ್ರತಿನಿತ್ಯ ಗಂಟೆಗಟ್ಟಲೆ ಹರಟಲಿಕ್ಕೆ ಮತ್ತು ಮುಖಪುಸ್ತಕ[ಫೇಸ್ ಬುಕ್]ದಲ್ಲಿ ಬಹುಕಾಲ ’ತಮ್ಮತನ’ವನ್ನು ತೋರಿಸಿಕೊಳ್ಳಲಿಕ್ಕೆ ಮಾತ್ರ ಸಮಯ ಸಿಕ್ಕೇ ಸಿಗುತ್ತದೆ. ತಮ್ಮ ಬಗ್ಗೆ ಅಷ್ಟೆಲ್ಲಾ ಹೇಳಿಕೊಳ್ಳುವ, ಬಂಡಿತುಂಬಾ ಹೇರಿಕೊಂಡು ಬಂದು ಮುಖಪುಸ್ತಕದಲ್ಲಿ ಬಡಿಸುವ ಮಂದಿ ಒಂದಿನಿತು ಕಾಲ ಉತ್ತಮವಾದುದಕ್ಕೆ ಮೀಸಲಿಟ್ಟರೆ ಗಂಟೇನೂ ಹೋಗಲಾರದು ಎನಿಸುತ್ತದೆ. ಭಾನುವಾರವಂತೂ ಕೆಲವರಿಗೆ ಮುಗಿಸಲಾರದಷ್ಟು ಕೆಲಸ! ಹನ್ನೊಂದು ಗಂಟೆಗೆಲ್ಲಾ ಸೂರ್ಯ ಕಣ್ಣುಬಿಡುತ್ತಾನೆ![ಕಣ್ಣು ಬಿಡುತ್ತಾನೋ ಕಣ್ ಕಣ್ ಬಿಡುತ್ತಾನೋ ಶಿವನೇ ಬಲ್ಲ!!] ಸರಳವಾಗಿ ತಮಾಷೆಗೆ ಇಂಥವರ ವೈಖರಿಯನ್ನು ಬಣ್ಣಿಸುವುದಾದರೆ:

ತಿಂದೆವಾರಿಡ್ಲಿಗಳ ಜೊತೆಯಲಿ
ಮೆಂದೆವಾರೊಡೆಗಳನು ಅಡಿಗಾ-
ಸಿಂದ ತರಿಸುತ ಭಾನವಾರದ ಬೆಳಗುವೇಳೆಯಲಿ | 
ಮುಂದೆ ತಾರಾ ಹೋಟ್ಲ ಕಡೆಗೇ     /   [  ಮುಂದೆ ಕಾಫೀ ಡೇಯ ಕಡೆಗಿದೊ]
ನಿಂದು ನುಗ್ಗುತ ಸೀಟುಹಿಡಿವೆವು
ಚಂದದಲಿ ಮಯ್ಯಾಸು ಕರೆವುದು ರಾತ್ರಿಯಾಗುವೊಲು || 

ಇಂತಹ ’ಮಹನೀಯರ’ನ್ನು ಜ್ಞಾಪಿಸಿಕೊಂಡಾಗ ನಾನು ಓದಿದ್ದ

ಪೌರಜನವೈತರಲು ಬಂಡಿಯ
ನೂರ ಹೊರವಂಡಿಸಿದರೆಲ್ಲರು .......ಎಂಬ ಭಕಾಸುರ ವಧೆಯ ಕುರಿತಾದ ಭಾಮಿನಿ ನೆನೆಪಾಗುತ್ತದೆ! ತಿಂಡಿತಿಂದವರೆಲ್ಲಾ ಭಕಾಸುರರಲ್ಲ ನಿಜ. ಆದರೆ ತಿನ್ನುವುದಕ್ಕಾಗಿಯೇ ಕೆಲವುಜನ ಬದುಕಿರುತ್ತಾರೆ, ಸಮಯಕ್ಕೆ ಹೊಟ್ಟೆತೊಳೆದುಕೊಂಡು ಖಾಲೀಹೊಟ್ಟೆಹೊತ್ತು ಬಂದರೋ ಎಂಬಂತೇ ಭಾಸವಾಗುತ್ತದೆ! ಬದುಕುವುದಕ್ಕಾಗಿ ಮಾತ್ರ ತಿನ್ನು ಎನ್ನುತ್ತದೆ ವೇದ, ಆಯುರ್ವೇದ. ಆದರೆ ಅದನ್ನು ಪಾಲಿಸುವವರೆಷ್ಟು ಮಂದಿ ಎಂಬುದೂ ಕೆಲವೆಡೆ  ಪ್ರಶ್ನಾರ್ಹವೇ. 

ಕಾಲಯಾವುದಾದರೇನು ಹಿಂದೂ ಉತ್ತಮಕಾಲವಿತ್ತು, ಇಂದೂ ಉತ್ತಮಕಾಲವಿದೆ, ಮುಂದೂ ಇರುತ್ತದೆ ಎಂಬ ಉದಾತ್ತ ಅನಿಸಿಕೆಗಳನ್ನೇ ಇಟ್ಟುಕೊಂಡರೂ ನಿಯತಕಾಲಿಕೆಗಳಲ್ಲಿ ಬರುವ ಕಥೆ-ಕವನ-ಪ್ರಬಂಧಗಳನ್ನು ನೋಡುವಾಗ ಹಲವೊಮ್ಮೆ ಜನರ ಮನಃಸ್ಥಿತಿಯೇ ಬದಲಾಗಿದೆಯೇ ಎಂದೆನಿಸುವುದು ಸಹಜ. ಮಾತೆತ್ತಿದರೆ ಕನ್ನಡಭಾಷೆಯಬಗ್ಗೆ ಕನ್ನಡರಕ್ಷಣೆಯನ್ನು ಗುತ್ತಿಗೆಪಡೆದಂತೇ ಆಡುವ ಮಂದಿಗೇ ಛಂದೋಬದ್ಧ, ವ್ಯಾಕರಣ ಶುದ್ಧ ಕವನಗಳು ಹಿಡಿಸುವುದಿಲ್ಲ ಎಂಬುದು ಆಶ್ಚರ್ಯವಾದರೂ ಸತ್ಯ. ಬೆಂಗಳೂರಿನಲ್ಲಿ ’ಜ್ಞಾನ’ ಎಂಬುದನ್ನು ಅದೆಷ್ಟು ಮಂದಿ ’ಗ್ಯಾನ’ ಎಂದುಚ್ಚರಿಸುವುದಿಲ್ಲ? ಇನ್ನು ’ಹಾವು’ ಎಂಬಲ್ಲಿ ’ಆವು’, ’ಹಾಲು’ ಎಂಬಲ್ಲಿ ’ಆಲು’, ನೀರಿಗೆ ಬಹುವಚನ ಕಲ್ಪಿಸಿ ’ನೀರ್ಗೊಳು’ ಇದೆಲ್ಲಾ ಆಭಾಸ ಉಂಟುಮಾಡುವ ಉಚ್ಚಾರಗಳಲ್ಲವೇ? ಈ ತರಗತಿಯಲ್ಲಿರುವ ಜನ ತಮ್ಮನ್ನು ತಿದ್ದಿಕೊಳ್ಳುವುದಕ್ಕೆ ಸಾಧ್ಯವಾಗದೇ, ವ್ಯಾಕರಣವೆಲ್ಲ ಗೋಕರ್ಣಕ್ಕೆ ಹೋಗಲಿ ಎಂದೂ ಛಂದಸ್ಸೆಲ್ಲಾ ಚಂಡೀಗಡಕ್ಕೆ ಹೋಗಲಿ ಎಂದೂ ಅಟ್ಟಿಸಿ/ಓಡಿಸಿ ಭಾಷೆಯ ಅಂಗಸೌಷ್ಟವವನ್ನು ಕಳೆದರೇ ಎಂಬುದು ಹುಡುಕಬೇಕಾದ ಅಂಶ! ಮರವೊಂದಕ್ಕೆ ಟೊಂಗೆಗಳೂ ಎಲೆಗಳೂ ಬಣ್ಣವೂ, ಹೂಗಳೂ, ಕಾಯಿ-ಹಣ್ಣುಗಳೂ ಅದರ ಅಂಗಗಳಾಗಿವೆ ಹೇಗೋ ಹಾಗೆಯೇ ಭಾಷೆಯೊಂದಕ್ಕೆ ಛಂದಸ್ಸು, ಸಂಧಿ, ಸಮಾಸ, ವೃತ್ತ, ಅಲಂಕಾರ, ಸ್ವರ-ವ್ಯಂಜನ, ಅಲ್ಪಪ್ರಾಣ-ಮಹಾಪ್ರಾಣ ಇವೆಲ್ಲಾ ಅಂಗಾಂಗಳೆನಿಸುತ್ತವಲ್ಲವೇ? ಮನವಿಟ್ಟು ಕಲಿಯಲಾಗದ ಮಂದಿಗೆ ಭಾಷೆಯಬಗ್ಗೆ ಇಲ್ಲದ ಬಡಿವಾರ ಕಾಣುತ್ತದೆ! ಭಾಷೆಯ ಅಂಗಗಳು ಕಬ್ಬಿಣದ ಕಡಲೆಯಂತೇ ಕಂಡರೆ ಆಗ ಭಾಷೆಯ ಬೆಳವಣಿಗೆಯಾದರೂ ಎಂತು?

ನಸುನಗುತಲೋದುತ್ತ ಬಂದಿರಿ
ತುಸುನಗುತ ಮರೆಯಲ್ಲಿ ನಿಂದಿರಿ
ಕಸುವಿಡುತ ಕನ್ನಡವ ಕಲಿಯಿರಿ ಮಿತ್ರಬಂಧುಗಳೇ |
ಒಸಗೆಯೆನ್ನದು ನಿಮ್ಮಮನದೊಳು
ಕುಸಿತವಾಗಿದೆ ಭಾಷೆಯೀಪರಿ
ಬೆಸುಗೆಹಾಕುತ ಮತ್ತೆ ಬೆಳೆಸಿರಿ ಭಾವಸಿಂಧುಗಳೇ ||