ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, November 7, 2011

ತುಲಸೀ-ಜಲಂಧರ

ಚಿತ್ರ ಋಣ : ಅಂತರ್ಜಾಲ

ತುಲಸೀ
-ಜಲಂಧರ


[ಎರಡು ಲೇಖನಗಳು ಸ್ವಲ್ಪ ಶೀಘ್ರಗತಿಯಲ್ಲಿ ಪ್ರಕಟಗೊಂಡಿರುವುದರಿಂದ ಮನಸ್ಸಿನ ಹಸಿವಿನವರು ಹಿಂದಿನ ಲೇಖನ/ಕೃತಿಗಳನ್ನೂ ಈ ಕೆಳಗಡೆ ಓದಬಹುದಾಗಿದೆ]

ಚಿಕ್ಕವನಿರುವಾಗ ನಾನು ಮೊದಲಾಗಿ ಈ ಹೆಸರನ್ನು ಕೇಳಿದಾಗ ಆಶ್ಚರ್ಯವಾಗಿತ್ತು. ಆದರೆ ಜಲಂಧರನ ಬಗ್ಗೆ ಬಹಳ ವಿವರ ಸಿಕ್ಕಿರಲಿಲ್ಲ. ಮನದತುಂಬಾ ಸಂದೇಹಗಳಿದ್ದವು. ಕೆರೆಮನೆ ಶಂಭು ಹೆಗಡೆಯವರು ’ತುಲಸೀ-ಜಲಂಧರ’ ಎಂಬ ಯಕ್ಷಗಾನವನ್ನು ಕವಲಕ್ಕಿಯಲ್ಲಿ ನಡೆಸಿದ್ದರು. ಅದು ಆಗ ಪ್ರಚಲಿತದಲ್ಲಿರದ ಅಪರೂಪದ ಪೌರಾಣಿಕ ಪ್ರಸಂಗ. ಅದನ್ನು ನೋಡಿದಮೇಲೆ ಕಥೆಯ ಹಂದರ ಅರ್ಥವಾಗಿತ್ತು. ಹಿಂದೂ ಮೈಥಾಲಜಿ ಎಂದು ವಿಜ್ಞಾನಿಗಳು ಇಂದು ಕರೆಯುತ್ತಾರೋ ಅಂತಹ ಮೈಥಾಲಜಿಯ ಹಿಂದೆ ಅಳವಾದ ಅನುಭವ ಜನ್ಯ ಸಂಶೋಧನಾ ಫಲವಿದೆ, ನಿಜವಾಗಿ ಅದೇ ವಿಜ್ಞಾನ, ತಾವು ಪುನಃ ಸಂಶೋಧನೆ[ರಿಸರ್ಚ್]ಮಾಡುತ್ತಿದ್ದೇವೆಂಬುದು ನಮ್ಮ ವಿಜ್ಞಾನಿಗಳೇನಕರಿಗೆ ಇಂದೂ ಗೊತ್ತಿಲ್ಲ. ಅನುಭವ ಇರುವಲ್ಲಿ ಅಮೃತತ್ವ ಇರುತ್ತದೆ, ಅದು ಪ್ರೂವನ್ ಟ್ರ್ಯಾಕ್. ಅಂಥದ್ದನ್ನೂ ಕೂಡ ನಮ್ಮ ವಿಜ್ಞಾನಿಗಳೆಂಬ ಅಜ್ಞಾನಿಗಳು ಕೆಲವೊಮ್ಮೆ ಅಲ್ಲಗಳೆಯುವುದು ಬೇಸರದ ಸಂಗತಿ.

ಒಪ್ಪಿಕೊಳ್ಳೋಣ, ಹಲವನ್ನು ಕಂಡುಹಿಡಿದಿದ್ದಾರೆ, ಹಲವಷ್ಟು ಸಾಧಿಸಿದ್ದಾರೆ, ಆದರೆ ಮಜವೇನೆಂದರೆ ಇವತ್ತು ನಮ್ಮ ವಿಜ್ಞಾನಿಗಳು ಕಂಡುಹಿಡಿದಿದ್ದೆಲ್ಲಾ ಮೊದಲೊಮ್ಮೆ ಬಳಕೆಯಲ್ಲಿದ್ದ ಸೂತ್ರಗಳನ್ನೇ! ಮಾನವ ಜೀವನದ ಮಧ್ಯಂತರದಲ್ಲಿ ಆ ಸೂತ್ರಗಳೂ ಸಂಶೋಧನೆಗಳೂ ಮರೆತು ಕೈತಪ್ಪಿ ಯಾರಿಗೂ ಸಿಗದಂತಾಗಿದ್ದವು. ಪ್ರಾಯಶಃ ಅದು ಪ್ರಳಯಗಳಂತಹ ಅನಾಹುತಗಳ ಪರಿಣಾಮವಾಗಿ ಆಗಿದ್ದಿರಬಹುದು. ಉದಾಹರಣೆಗೆ ವಿಮಾನ ಕಂಡು ಹಿಡಿದೆವೆಂದರು--ಪುಷ್ಪಕವಿಮಾನ ರಾಮಾಯಣ ಕಾಲದಲ್ಲೇ ಇತ್ತು! ಚರ್ಮದಲ್ಲಿ ಏಳುಪದರಗಳಿರುವುದನ್ನು ಇತ್ತೀಚೆಗೆ ಕಂಡರು-- ಈ ವಿಷಯ ವೇದಮಂತ್ರಗಳಲ್ಲಿ ಮೊದಲೇ ಉಲ್ಲೇಖವಾಗಿದೆ! ಇರಲಿ ಜಲಂಧರನ ಕಥೆ ತಿಳಿಯೋಣ.

ಜಲಂಧರನೊಬ್ಬ ರಕ್ಕಸ. ಶಿವನ ಕುರಿತು ಘೋರ ತಪಸ್ಸು ಮಾಡಿದ. ತಪಸ್ಸಿಗೆ ಒಲಿಯುವ ಬೋಲೇನಾಥ ನಮ್ಮ ಕನ್ನಡದಲ್ಲಿ ಬೋಳೇಶಂಕ್ರ ಹಾಗೆ ಹೇಳಿಸಿಕೊಳ್ಳಲು ಕಾರಣ, ಭಕ್ತನ ತಪಸ್ಸಿಗೆ ಮೆಚ್ಚಿ ಒಲಿದಾಗ ಕೇಳಿದ ವರಗಳನ್ನೆಲ್ಲಾ ಹಿಂದೆಮುಂದೆ ನೋಡದೇ ಕೊಟ್ಟುಬಿಡುವಾತ! ಆತ ಭಕ್ತಪರಾಧೀನ. ತನ್ನ ಅಥವಾ ದೇವತೆಗಳ ಆಗುಹೋಗುಗಳಿಗಿಂತ ಭಕ್ತರು ತೃಪ್ತಿಪಡುವುದನ್ನು ನೋಡಲು ಬಯಸುವ ಮುಗ್ಧ. ಸಾಕ್ಷಾತ್ ಮೃತ್ಯುಂಜಯನೇ ಆದರೂ ತಾನು ಕೊಡುವ ವರದಿಂದ ತನಗೇ ಕಂಟಕಗಳನ್ನು ತಂದುಕೊಳ್ಳುತ್ತಿದ್ದ. ಹೀಗಿದ್ದ ಸಮಯ ಜಲಂಧರನ ಕಠಿಣ ತಪಸ್ಸಿಗೆ ಒಲಿದ ವಿರೂಪಾಕ್ಷ ಆತನಿಗಷ್ಟು ವರಗಳನ್ನು ಕೊಟ್ಟುಬಿಟ್ಟ. ಅವುಗಳಲ್ಲಿ ಒಂದು ಆತನ ಪತ್ನಿ ಪತಿವೃತೆಯಾಗಿರುವವರೆಗೂ ಯಾರಿಂದಲೂ ಜಲಂಧರನಿಗೆ ಸಾವಿಲ್ಲ ಎಂಬುದು.

ಜಲಂಧರನ ಸ್ಫುರದ್ರೂಪಿ ಪತ್ನಿ ವೃಂದಾ [ಮಂದಾ ಅಂತಲೂ ಕರೆಯುತ್ತಾರೆ]. ಆಕೆ ಮಹಾಪತಿವೃತೆ. ಪತಿಯನ್ನುಳಿದು ಯಾವ ಗಂಡಸನ್ನೂ ಕಣ್ಣೆತ್ತಿ ನೋಡದ ಸಾಧ್ವಿ. ವರಪಡೆದ ಜಲಂಧರ ಇನ್ನು ತಾನು ಯಾರಿಗೂ ಹೆದರಬೇಕಿಲ್ಲ ಎಂಬುದನ್ನು ಅರ್ಥೈಸಿಕೊಂಡು ದೇವತೆಗಳಮೇಲೇ ಯುದ್ಧಕ್ಕೆ ಹೊರಟ. ದೇವತೆಗಳಿಗೆ ಹಲವು ಥರದಲ್ಲಿ ಯಮಯಾತನೆ ಕೊಡಹತ್ತಿದ. ನಿಂತಲ್ಲಿ ಕುಂತಲ್ಲಿ ದೇವತೆಗಳು ಬೆಚ್ಚಿಬೀಳುವಂತೇ ಮಾಡಹತ್ತಿದ. ಇದೆಲ್ಲಾ ಪುಕಾರು ತೆಗೆದುಕೊಂಡು ದೇವತೆಗಳು ಮಹಾವಿಷ್ಣುವನ್ನು ಕಂಡರು. " ಸ್ವಾಮೀ ನೀನೇ ಕಾಪಾಡಬೇಕು " ಎಂದರು. ಆ ಕಡೆ ಶಿವನಲ್ಲಿಗೆ ತೆರಳಿದ ಜಲಂಧರ " ಹೇ ಶಿವನೇ ನಿನಗಾಗಲೇ ಬ್ರಹ್ಮಕಪಾಲ ಹಿಡಿದಿದೆ, ನೀನು ಭಿಕ್ಷಾಪಾತ್ರೆ ಹಿಡಿದು ಭಿಕ್ಷೆಗೆ ತೆರಳು, ತ್ರಿಪುರಸುಂದರಿಯಾದ ಪಾರ್ವತಿಯನ್ನು ನನಗೆ ಕೊಡು " ಎಂದು ಪೀಡಿಸಹತ್ತಿದ.

ವಿಷ್ಣು ಮನದಲ್ಲಿ ಎಲ್ಲವನ್ನೂ ಯೋಚಿಸಿದ. ವೃಂದಾ ಪತಿವೃತೆಯಾಗಿರುವವರೆಗೂ ಜಲಂಧರನ ವಧೆ ಸಾಧ್ಯವಿಲ್ಲ ಎಂಬುದು ಮನದಟ್ಟಾಯ್ತು. ನಿರ್ವಾಹವಿಲ್ಲದೇ ಜಗತ್ಕಲ್ಯಾಣಕ್ಕಾಗಿ ದುಷ್ಟಶಿಕ್ಷಣಕ್ಕಾಗಿ ತಾನು ಜಲಂಧರನಾಗಿ ರೂಪತಳೆದು ಜಲಂಧರ ಮನೆಯಲ್ಲಿಲ್ಲದ ಹೊತ್ತಿನಲ್ಲಿ ಆತನ ಮನೆಗೆ ಬಂದ. ಬಂದ ಜಲಂಧರವೇಷಧಾರಿಯನ್ನು ಕಂಡ ವೃಂದಾ ದಿನನಿತ್ಯದಂತೇ ಪತಿಸೇವೆಗೈದಳು. ಜಲಂಧರರೂಪಿ ಆಕೆಯ ಶೀಲಹರಣಮಾಡಿದ! ತಕ್ಷಣಕ್ಕೆ ಅದು ಆಕೆಗೆ ಗೊತ್ತಾಗಲಿಲ್ಲ. ಯಾವಾಗ ಆಕೆಯ ಪತಿ ಜಲಂಧರ ಜಲಂಧರಪಾತ್ರಧಾರಿಯ ಎದುರಿಗೆ ಬಂದನೋ ಆಗ ಆಕೆ ತಬ್ಬಿಬ್ಬಾದಳು. ಅರೇ ಇದೇನಿದು ತಾನು ನೋಡುತ್ತಿರುವುದು ಎಂದು ಭಯವಿಹ್ವಲಳಾಗಿಯೂ ಆಶ್ಚರ್ಯಚಕಿತಳಾಗಿಯೂ ನೋಡುತ್ತಿರುವಂತೆಯೇ ಜಲಂಧರರಿಬ್ಬರಲ್ಲೂ ಯುದ್ಧ ಘಟಿಸಿತು. ನಿಜವಾದ ಜಲಂಧರ ಸತ್ತು ಧರೆಗುರುಳಿದ. ಅದನ್ನು ಕಂಡು ವೃಂದಾ ಬಹಳೇ ಗೋಳಿಟ್ಟಳು. ತನ್ನ ಪತಿಯನ್ನು ವಧಿಸುವ ಸಲುವಾಗಿ ದೇವರು ತನಗೆ ಮೋಸಮಾಡಿದನೆಂದು ರಂಪಮಾಡಿದಳು.

ಪತಿವೃತಾ ಶಿರೋಮಣಿಯಾಗಿದ್ದ ವೃಂದಾ ಮಾಡಿದ ತಪ್ಪೇನೂ ಇರಲಿಲ್ಲ. ಆಕೆಯ ನೋವನ್ನೂ ಕಣ್ಣೀರನ್ನೂ ನೋಡಿ ಮಹಾವಿಷ್ಣುವಿನ ಅಂತಃಕರಣ ಕರಗಿತು. ಆಕೆ ಸತ್ತಮೇಲೆ ಆಕೆಯ ಸಮಾಧಿಸ್ಥಳದಲ್ಲಿ ಆಕೆ ’ತುಳಸಿ’ ಎಂಬ ಗಿಡವಾಗಿ ಜನಿಸುವಂತೆಯೂ ತಾನು ನೆಲ್ಲಿಯ ಗಿಡದರೂಪದಲ್ಲಿ ಬಂದು ವರಿಸುವುದಾಗಿಯೂ ಭರವಸೆಯಿತ್ತನಲ್ಲದೇ ಯುಗಭೇದವಿಲ್ಲದೇ ಸುರರು-ಭೂಸುರರಾದಿಯಾಗಿ ಎಲ್ಲರೂ ಪೂಜೆಯಲ್ಲಿ ತನಗೆ ಪ್ರಥಮ ಆದ್ಯತೆಯಾಗಿ ತುಳಸೀ ದಳಗಳ ಸಮರ್ಪಣೆಮಾಡಲೆಂದೂ ವರವನ್ನಿತ್ತ. ವೃಂದಾ ತುಳಸೀಗಿಡವಾಗಿ ನಿಂತ ಆ ಜಾಗ ವೃಂದಾವನವಾಯ್ತು. ವೃಂದಾವನ ಮಹಾವಿಷ್ಣುವಿಗೆ ಪರಮಪ್ರಿಯ ಜಾಗವೆನಿಸಿತು. ಉತ್ಥಾನದ್ವಾದಶಿಯಂದು ಈ ನೆನಪಿನಲ್ಲಿ ಮಹಾವಿಷ್ಣುವನ್ನು ವೆಂಕಟೇಶ ಅಥವಾ ನಾರಾಯಣ ಎಂತಲೂ ತುಳಸಿಯನ್ನು ಪದ್ಮಾವತಿ ಅಥವಾ ಲಕ್ಷ್ಮೀ ಎಂತಲೂ ಪರಿಗಣಿಸಿ ಅವರೀರ್ವರಿಗೂ ಸಾಂಕೇತಿಕ ಕಲ್ಯಾಣೋತ್ಸವ ನಡೆಸುವುದು ರೂಢಿಗೆ ಬಂತು.

ಮಹಾಭಾರತದಲ್ಲಿ ಶ್ರೀಕೃಷ್ಣ ತುಲಾಭಾರವೆಂಬ ಸನ್ನಿವೇಶವನ್ನು ನಾರದರು ಸಿದ್ಧಮಾಡಿದ್ದರು. ನಾರದರು ಎಂದರೆ ತಮಗೆಲ್ಲಾ ಗೊತ್ತೇ ಇದೆ. ಮನೆ-ಮನೆಗಳಲ್ಲಿ ಜಗಳ ತಂದಿಡುವ ಜನರಿಗೆ ನಮ್ಮ ತೋಂಡೀ ಶಬ್ದ " ಓ ಅಂವ ಮಾರಾಯ ನಾರದ " ಎನ್ನುವುದು ಅಭ್ಯಾಸ. ಇಂತಹ ನಾರದರು ಒಮ್ಮೆ ಹಾಗೆ ಕೃಷ್ಣನನ್ನೂ ಅವನ ಹೆಂಡತಿಯರನ್ನೂ ಮಾತಿಗಿಳಿಸಿ ತುಲಾಭಾರಕ್ಕೆ ಅಣಿಗೊಳಿಸೇಬಿಟ್ಟರು. ತಕ್ಕಡಿಯ ಒಂದು ತಟ್ಟೆಯಲ್ಲಿ ಶ್ರೀಕೃಷ್ಣ ಕುಳಿತ. ಇನ್ನೊಂದರಲ್ಲಿ ಬಂಗಾರದ ನಗ-ನಾಣ್ಯಗಳನ್ನು ಹಾಕುತ್ತಾ ನಡೆದಳು ಸತ್ಯಭಾಮೆ. ಅವಳಿಗೋ ಎಲ್ಲಿಲ್ಲದ ಗರ್ವ! ಗಂಡ ಪರಮಾತ್ಮನಲ್ಲವೇ ಅದಕ್ಕೇ ಹಾಗಿತ್ತೇನೋ. ಸುರಿದಳು ಸುರಿದಳು ಇದ್ದಬದ್ದ ಬಂಗಾರವನ್ನೆಲ್ಲಾ ಸುರಿದಳು. ಊಹುಂ.....ತಕ್ಕಡಿ ಮೇಲೇಳಲೇ ಇಲ್ಲ. ಕೃಷ್ಣ ಕುಳಿತ ತಕ್ಕಡಿ ತಟ್ಟೆ ಕೆಳಗೇ ಇತ್ತು. ಕೊನೆಗೆ ನಾರದರೇ ಮುಂದಾಗಿ ಮದ್ಯಸ್ಥಕೆ ಮಾಡಿ ರುಕ್ಮಿಣಿಗೆ ತಿಳಿಸಿ ಒಂದು ದಳ ತುಳಸಿಯನ್ನು ತಂದು ಬಂಗಾರದ ಸಮಾನುಗಳನ್ನು ಇಟ್ಟ ತಕ್ಕಡಿಗೆ ಹಾಕಲು ಹೇಳಿದರು. ರುಕ್ಮಿಣಿ ನಾರದರಿಗೆ ಕೆಲಸವಿಲ್ಲ, ಇದೇನು ಮಹಾ ಜಾದೂ ಎಂಬ ಮನಸ್ಸಿನಲ್ಲೇ ಅಂತೂ ತುಳಸೀದಳವೊಂದನ್ನು ತಂದು ಹಾಕಿದಳು. ತಕಳಿ, ತಕ್ಕಡಿ ಮೇಲೆದ್ದು ಸಮನಾಗಿ ತೂಗಿತು; ತುಲಾಭಾರ ಸಂಪನ್ನವಾಯ್ತು. ಕೃಷ್ಣನ ಇಬ್ಬರೂ ಹೆಂಡಿರಿಗೆ ನಿಮ್ಮೆಲ್ಲರಿಗಿಂತಾ ತುಳಸಿಯೇ ಶ್ರೇಷ್ಠ ಎಂಬುದನ್ನು ಪರೋಕ್ಷವಾಗಿ ಶ್ರೀಕೃಷ್ಣ ತೋರಿಸಿಕೊಟ್ಟ.

ಒಂದು ದಳ ಶ್ರೀ ತುಳಸಿ ಬಿಂದು ಗಂಗೋದಕವ
ಇಂದಿರಾ ರಮಣಗರ್ಪಿತವೆನ್ನಲು
ಒಂದೇಮನದಲಿ ಸಿಂಧುಶಯನ ಮುಕುಂದನೆನೆ
ಎಂದೆಂದೂ ವಾಸಿಪನು ಮಂದಿರದೊಳಗೇ

ಹೂವ ತರುವರ ಮನೆಗೆ ಹುಲ್ಲ ತರುವಾ ....
ಅವ ಲಕುಮೀ ರಮಣ ಇವಗಿಲ್ಲ ಗರುವಾ .....

ಎಂದು ಪುರಂದರ ದಾಸರು ಹಾಡಿದ್ದಾರೆ. [ಇಲ್ಲಿ ಕರ್ನಾಟಕ ಸಂಗೀತ ಮತ್ತು ದೇವರನಾಮ ಹಾಡುವವರು ಗಮನಿಸಬೇಕು- ಅವ ಲಕುಮೀ ಎಂದರೆ ಅವಲಕ್ಷಣದ ಲಕ್ಷೀರಮಣ ಎಂದಲ್ಲ. ಅವ ಎಂಬುದು ಆತ ಎಂಬುದಕ್ಕೆ ಪರ್ಯಾಯ ಪದ. ಹಾಡುವಾಗ ಬಹಳ ಜೋಪಾನ !]

ಹೀಗೇ ಪುರಾಣೋಕ್ತವಾಗಿ, ಇತಿಹಾಸೋಕ್ತವಾಗಿ ತುಳಸಿ ಬೆಳಕಿಗೆ ಬಂತು. ಸಸ್ಯಶಾಸ್ತ್ರದಲ್ಲಿ ಅತಿ ವಿಶಿಷ್ಟ ಗಿಡವೆಂದು ಪರಿಗಣಿಸಲ್ಪಟ್ಟ ಶ್ರೀತುಳಸಿ ಹಲವು ಪ್ರಭೇದಗಳಲ್ಲಿ ಸಿಗುತ್ತಾಳೆ! ಸಮಾನ್ಯವಾಗಿ ನಾವು ಕೃಷ್ಣತುಳಸಿ, ಬಿಳಿತುಳಸಿ ಇವೆರಡನ್ನು ನೋಡಿರುತ್ತೇವೆ. ಇದಲ್ಲದೇ ಕರ್ಪೂರ ತುಳಸಿ, ನಿಂಬೂ ತುಳಸಿ ಹೀಗೇ ಹದಿನೈದು ಪ್ರಭೇದಗಳನ್ನು ನೋಡಬಯಸುವವರು ಕಾರವಾರಕ್ಕೆ ಹತ್ತಿರವಿರುವ ಕದ್ರಾ ಅಣೆಕಟ್ಟಿನ ಪ್ರದೇಶದಲ್ಲಿ ಹಿಂದೆ ಅಲ್ಲಿ ಎಂಜಿನೀಯರ್ ಆಗಿದ್ದ ಕೇಶವರಾವ್ ಎಂಬವರು ರೂಪಿಸಿದ ವಿಶಿಷ್ಟ ಸಸ್ಯೋದ್ಯಾನದಲ್ಲಿ ಕಾಣಬಹುದು. ಇದರ ಸಸ್ಯಶಾಸ್ತ್ರೀಯ ಹೆಸರು Ocimum tenuiflorum. ಇದು ಜಗತ್ತಿನ ಎಲ್ಲಾಭಾಗಗಳಲ್ಲೂ ಪಸರಿಸಿರುವ Lamiaceae ಎಂಬ ಸಸ್ಯಕುಟುಂಬಕ್ಕೆ ಸೇರಿದ್ದಾಗಿದೆ.

ಆಷಾಢ ಶುಕ್ಲ ಏಕಾದಶಿಯಂದು ವಿಶ್ರಾಂತಿ ಪಡೆಯಲು ತೆರಳಿ ಮಲಗಿದ ಮಹಾವಿಷ್ಣುವನ್ನು ಕಾರ್ತಿಕ ಶುದ್ಧ ದ್ವಾದಶಿಯಂದು ಎಬ್ಬಿಸು[ಉತ್ಥಾನ]ವ ವಾಡಿಕೆ ಶ್ರೀವೈಷ್ಣವರಲ್ಲಿದೆ. ತಿರುಮಲ ತಿರುಪತಿಯಲ್ಲೂ ಸಹ ಈ ಸೇವೆ ನಡೆಯುತ್ತದೆ. ಭಗವಂತನನ್ನು ಎಬ್ಬಿಸುವ ಈ ದ್ವಾದಶಿಯ ವಿಶೇಷವನ್ನು ಹಿಂದಿನವರು ಕೈಶಿಕ ಪುರಾಣವೆಂಬ ಗ್ರಂಥದಲ್ಲಿ ವಿವರಿಸಿದ್ದಾರೆ. ಈ ವಿವರಣೆ ಸಂಸ್ಕೃತ-ತಮಿಳು-ಕೊಂಚ ತೆಲುಗು ಭಾಷೆಗಳ ಸಂಗಮರೂಪದಲ್ಲಿದೆ. ದೇವರನ್ನು ಎಬ್ಬಿಸುವಾಗ ಹಾಡುವ ಹಾಡಿನ ಕೊನೆಯ ಭಾಗದಲ್ಲಿ ಬರುವ ಈ ರಾಗವನ್ನು ಮೊದಲಾಗಿ ಚಾಂಡಾಲ ಭಕ್ತ ನಂಬದುವನ್ ಎಂಬಾತ ಹಾಡಿದ ಎಂಬುದು ಇತಿಹಾಸ. ಈ ದೃಷ್ಟಿಯಿಂದ ಉತ್ಥಾನದ್ವಾದಶಿಗೆ ಶ್ರೀವೈಷ್ಣವರು ಕೈಶಿಕ ದ್ವಾದಶಿ ಎಂದೂ ಕರೆಯುತ್ತಾರೆ. ಎದ್ದ ಮಹಾವಿಷ್ಣುವಿಗೆ ಮಿಕ್ಕ ಸಮಾಜ ತುಳಸೀಲಕ್ಷ್ಮಿಯನ್ನು ಮದುವೆಮಾಡಿಕೊಡುವುದನ್ನು ಈ ದಿನ ಕಾಣುತ್ತೇವೆ. ಕರ್ನಾಟಕದ ಕೆಲವು ಭಾಗಗಳಲ್ಲಂತೂ ಹಳೇಕಾಲದ ಕಟ್ಟಾ ಮದುವೆ ಸಂಪ್ರದಾಯದಂತೇ ಮದುವೆಯಿಂದ ಹಿಡಿದು ಚತುರ್ಥೆ [ಮದುವೆ ಮುಗಿದು ಬೀಗರ ದಿಬ್ಬಣ ಹೊರಡುವ ದಿನ ಇರಬಹುದೇ ? ]ಯ ವರೆಗೂ ನಿತ್ಯ ಸಾಯಂಕಾಲ ಪೂಜೆ, ದೀಪೋತ್ಸವ ನಡೆಯುತ್ತದೆ. ಕೆಲವು ಪ್ರದೇಶಗಳಲ್ಲಿ ತುಳಸೀಕಟ್ಟೆಗೆ ಕಬ್ಬಿನಿಂದ ಸುತ್ತ ಮಂಟಪಕಟ್ಟಿ, ಚಂಡುಹೂವು, ಸೇವಂತಿಗೆ ಮುಂತಾದವುಗಳಿಂದ ಅಲಂಕರಿಸುತ್ತಾರೆ. ನಮ್ಮೂರಲ್ಲಿ ತುಳಸಿಗೆ ಕಬ್ಬಿನ ಜೊತೆಗೆ ಅಡಕೆ ದಬ್ಬೆಯಿಂದ ಮಂಟಪ ನಿರ್ಮಿಸಿ, ವಿಧವಿಧದ ಹೂವು, ಹಣ್ಣಡಕೆ[ಗೋಟಡಕೆ]ಯ ಹಾರ, ಅಡಕೆ ಶಿಂಗಾರ, ಮಾವಿನಎಲೆಗಳ ಸರ ಹೀಗೆ ಬಹುವಿಧ ಸಾಮಗ್ರಿಗಳಿಂದ ಅಲಂಕರಿಸುತ್ತಾರೆ. ಈ ಅಲಂಕಾರ ತುಳಸೀ ವಿವಾಹ ಮುಗಿದು ವಾರದ ಕಾಲ ಹಾಗೇ ಇರುತ್ತದೆ. ಪ್ರತೀ ವರ್ಷ ತನ್ನ ವಿವಾಹವನ್ನು ಮಹಾವಿಷ್ಣುನೊಟ್ಟಿಗೆ ಜನ ನಡೆಸಿಕೊಡುವ ಭಾಗ್ಯವನ್ನು ಪಡೆದ ವೃಂದಾ[ವನ] ನಿಜಕ್ಕೂ ಧನ್ಯ.

ಆಯುರ್ವೇದದಲ್ಲಿ ತುಳಸಿಯ ಬಳಕೆ ಬಹಳ ಹೆಚ್ಚಾಗಿ ಕಾಣುತ್ತದೆ. ತುಳಸಿ ಕ್ರಿಮಿನಾಶಕವಾಗಿ ಕೆಲಸಮಾಡುವುದರಿಂದಲೂ ನೆಗಡಿ ಅಥವಾ ತಂಡಿ, ಸೀತ ಎನಿಸಿಕೊಳ್ಳುವ ಬಾಧೆಗೆ ಪರಿಹಾರಕೊಡುವುದರಿಂದಲೂ ಅದನ್ನು ಮನೆಯಮುಂದೆ ದೇವರೆಂದು ಕರೆದು ಪೂಜಿಸಬೇಕು ಎಂಬ ತತ್ವವನ್ನು ನಮ್ಮ ಪೂರ್ವಜರು ಸಾರಿದರು. ಪ್ರತಿನಿತ್ಯ ತೀರ್ಥವೆಂದು ನಾವು ಕುಡಿಯಬೇಕಾದ್ದು ಹೇಗೆಂದರೆ ತುಳಸಿಯನ್ನು ತೇಯ್ದ ಶ್ರೀಗಂಧದ ಜೊತೆಗೆ ತಾಮ್ರದ ’ಸೋಮಸೂತ್ರ’ವೆಂಬ ಪಾತ್ರೆಯಲ್ಲಿಡುವ ಸಾಲಿಗ್ರಾಮಕ್ಕೆ ಪೂಸಿ, ಅದಕ್ಕೆ ಶಂಖದಿಂದ ಪುರುಷಸೂಕ್ತ ಪಠಿಸುತ್ತಾ ಶುದ್ಧಜಲವನ್ನು ಅಭಿಷೇಚಿಸಿದಾಗ, ಸೋಮಸೂತ್ರದಿಂದ ಕೆಳಗೆ ಬಸಿಯುವ ಆ ನೀರೇ ತೀರ್ಥವಾಗಿರುತ್ತದೆ. ಅದು ಶ್ರೀಗಂಧ-ತುಳಸೀ ಪರಿಮಳ ಭರಿತವೂ ಮತ್ತು ಶರೀರದೊಳಗೆ ಕ್ರಿಮಿನಾಶಕವಾಗಿ ಕೆಲಸಮಾಡಲು ಸಾಮರ್ಥ್ಯವಿರುವ ದ್ರವವೂ ಆಗಿರುತ್ತದೆ. ತುಳಸಿ ಮತ್ತು ನೆಲ್ಲಿಯ ಸಂಗಮ ಈ ಕಾಲದಲ್ಲಿ[ಚಳಿಗಾಲ] ಆರೋಗ್ಯಕ್ಕೆ ಹೇಳಿಮಾಡಿಸಿದ್ದು. ಪೂರ್ವಜರು ಇದನ್ನೆಲ್ಲಾ ಹೇಗೆ ಅರಿತರು ಎಂಬುದು ನಮಗೆ ವಿದಿತವಲ್ಲ; ಆದರೆ ಅವರು ಮಾಡಿಟ್ಟುಹೋದ ಎಲ್ಲಾ ಸೂತ್ರಗಳ ಎಲ್ಲಾ ಶಾಸ್ತ್ರಗಳ ಹಿಂದೆ ಅಪ್ರತಿಮ ವಿಜ್ಞಾನ ಅಡಗಿದೆ. ನಮಗೆ ಕಾರಣ ಗೊತ್ತಿಲ್ಲದೇ ನಾವು ತುಳಸಿಕಟ್ಟೆಗೆ ವೃಂದಾವನ ಎನ್ನುತ್ತಿದ್ದೇವೆ. " ತುಳಸಿಯಂತೆ ತುಳಸಿ ನಮಗೇ ಜಾಗವಿಲ್ಲ ಇಲ್ಲಿ " ಎಂದು ಅರಚುವ ನಗರವಾಸಿಗಳೂ ಇದ್ದಾರೆ. ಆದರೆ ಎಷ್ಟೇ ರೋಗಗಳು-ಖಾಯಿಲೆ ಕಸಾಲೆಗಳು ಜನರಿಗೆ ಬಂದರೂ ತುಳಸಿಮಾತ್ರ ಮೂಕವಾಗಿ ಮನೆಗಳ ಮುಂದೆ ನಿಂತು ತನ್ನತನವನ್ನು ಕಾಪಾಡಿಕೊಂಡಿದೆ; ಮಾತನಾಡದ ದೇವರು ಮನೆಯ ಮುಂದೆ ಪ್ರತ್ಯಕ್ಷವಿರುವಾಗ ಬಳಕೆಮಾಡದ ಮಂದಿಮಾತ್ರ ಮೆಡಿಕಲ್ ಶಾಪಿನಿಂದ ಕೆಮಿಕಲ್ ಖರೀದಿ ಮಾಡುತ್ತಾ ತಮ್ಮ ಶರೀರದ ಸ್ವಾಸ್ಥ್ಯಕ್ಕೆ ವಿರುದ್ಧ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ. ತುಳಸಿಯ ಬಳಕೆ ಹೆಚ್ಚಾಗಲಿ, ತುಳಸಿ ಎಲ್ಲರನ್ನೂ ಕಾಪಾಡಲಿ ಎಂಬ ಸದಾಶಯದೊಂದಿಗೆ ತುಲಸೀಹಬ್ಬದ ಶುಭಾಶಯಗಳ್ನೂ ಕೋರುತ್ತಿದ್ದೇನೆ, ನಮಸ್ಕಾರ.