ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, March 6, 2010

ಸಮಯವಿಲ್ಲ ನನಗೆ ಅರೆಘಳಿಗೆ


ಇವತ್ತಿನ ಗಡಿಬಿಡಿಯ ವಾತಾವರಣ ಯಾರಿಗೂ ಇಷ್ಟವಾಗುವಂತಹುದಲ್ಲ. ಇಲ್ಲಿ ಯಾರಿಗೂ ತೃಪ್ತಿ ಇಲ್ಲ, ಬೆಳಗಾದರೆ ಸಾಕು ಒತ್ತಡ, ಒತ್ತಡ. ಸ್ನಾನ,ಪೂಜೆ, ತಿಂಡಿ, ಮಕ್ಕಳ ಸ್ಕೂಲು, ಅವರ ತಯಾರಿ,ಆಫೀಸಿನ ಕೆಲಸ-ಅಲ್ಲೂ-ಹೊಸಕೆಲಸಗಳು, ಮನೆಯಲ್ಲಿ ಹೆಂಡತಿ ಬೇಸರದಲ್ಲಿದ್ದರೆ ಅದನ್ನು ನಮ್ಮ ಬಾಸ್ ಗೆ ಹೇಳಿದರೆ ಅವರ ಹೊಸ ಕೆಂಪುಕಣ್ಣಿನ ಭಂಗಿ, ಪಕ್ಕದವರನ್ನು ಜೊತೆಮಾಡಿಕೊಂಡು ಎಲ್ಲಾದರೂ ಅಪರೂಪಕ್ಕಾದರೂ ಸ್ವಲ್ಪ ಊರಾಚೆ ಹೋಗಿಬರೋಣವೆಂದರೆ ನಾಳೆಯ ಕೆಲಸಕ್ಕೆ ಹೋಗಲು ತಡವಾಗಬಹುದೆಂಬ ಆತಂಕ, ದುಗುಡ-ದುಮ್ಮಾನ. ನಿಜವಾಗಿಯೂ ಈ ಮಾನಸಿಕ ಒತ್ತಡವೇ ದೈಹಿಕ ಆನಾರೋಗ್ಯಕ್ಕೆ ಕಾರಣ ಎಂಬುದು ನಮಗೇ ತಿಳಿದಿಲ್ಲ, ಇದನ್ನು ಬಗೆಹರಿಸುವ ಯಾವುದೇ ಪ್ರಯತ್ನ ನಾವು ಮಾಡಿಲ್ಲ, ಯೋಗ-ಧ್ಯಾನ-ಸಂಗೀತ-ಸಾಹಿತ್ಯ-ಕಲೆ ಇವುಗಳಿಗೆಲ್ಲ ನಮಗೇ ಸಮಯವೇ ಉಳಿದಿಲ್ಲ, ದಿನಕಳೆದ ಹಾಗೆ ನಾವು ಪ್ರೊಮೋಶನ್ ಗಾಗಿ ಕಾಯುತ್ತೇವೆ, ಬರೇ ಅಲ್ಲಿ ಮಾತ್ರ ಪ್ರೊಮೋಶನ್ , ಮನೆಯಲ್ಲಿ ಡಿಮೋಶನ್ ಆಗುತ್ತಿರುತ್ತದೆ. ನಮ್ಮವರು,ಹಿತೈಷಿಗಳು ಸಲಹೆ ಕೊಡುತ್ತಾರೆ, ಆದರೆ ಅವರೂ ನಮ್ಮ ಥರಾನೇ ಬ್ಯುಸೀ ಆಗಿಬಿಡುತ್ತಾರೆ! ಇದನ್ನೆಲ್ಲಾ ತೊಡೆದುಹಾಕದಿದ್ದರೆ ಹೈ ಬ್ಲಡ್ ಪ್ರೆಶರ್ [high bp] ತನ್ಮೂಲಕ ಹೃದ್ರೋಗ, ಸಕ್ಕರೆ ಕಾಯಿಲೆ ಇವೆಲ್ಲ ಒಕ್ಕರಿಸುತ್ತವೆ! ಹಾಗಾಗಿ ವಾರದಲ್ಲಿ ಒಂದಾವರ್ತಿಯಾದರೂ 'ನಮಗೇ' ಅಂತ ಸ್ವಂತ ಸಮಯ ಮೀಸಲಿರಲಿ ಎಂಬುದು ಈ ಹಾಡಿನ ಧ್ವನಿತ ಸಂದೇಶ.

ಸಮಯವಿಲ್ಲ ನನಗೆ ಅರೆಘಳಿಗೆ

ಸಮಯವಿಲ್ಲ ನನಗೆ ಅರೆಘಳಿಗೆ
ಸಮಯವಿಲ್ಲ ನನಗೆ

ಬೆಡರು ಬೆಳಗಿನಲಿ ಸ್ನಾನ-ಪೂಜೆಗಳು
ಒಡನೆಯೇ ಗಬಗಬ ತಿಂಡಿಯ ಹಂತ
ಗಡಬಡಿಸುತ ಮಗನನು ಬಿಡೆ ಶಾಲೆಗೆ
ಬಿಡದೆ ಓಡುವುದು ಕಛೇರಿ ಕಡೆಗೇ

ಒಡನಾಡಿಗಳನು ಮಾತನಾಡಿಸಲು
ಜಡಜೀವಕೆ ತುಸು ಬೇಗುದಿ ಕಳೆಯಲು
ಅಡಿಗಡಿಗೊದಗುವ ಕಷ್ಟದ ದಿನಗಳು
ಬಿಡುಗಡೆಯಿಲ್ಲದ ಯಂತ್ರದ ಥರದಲಿ

ನಿಡುಸುಯ್ದಿರೆ ಮನೆಯಲಿ ಅರ್ಧಾಂಗಿ
ಗಡುಸಾಯಿತು ಯಜಮಾನರ ಭಂಗಿ
ನಡುನಡುವಲೇ ಬರೋ ಹೊಸ ಕೆಲಸಂಗಳು
ಎಡಬಿಡದೇ ಪೂರೈಸಲಿ ಹೇಗೇ ?

ಬಾಡಿಗೆ ಗಾಡಿಯ ಎರವಲು ಪಡೆದು
ಜೋಡಿಗೆ ಪಕ್ಕದ ಜನರನು ಕರೆದು
ನಾಡಸಿರಿಯ ನೋಡಲು ಯತ್ನಿಸಿದರೆ
ಗೂಡುಸೇರುವಾತಂಕವು ಮನಕೆ !

ನಾದೋಪಾಸನೆ ನಾಗರಹಬ್ಬ
ವೇದವೆಲ್ಲ ನನಗ್ಯಾತಕೋ ಅಪ್ಪಾ ?
ಓದಲೂ ಆಗದ ಈ ದಿನಗಳಲಿ
ವೇದನೆಯಾಯಿತು ಮನದಲಿ ತಪ್ಪಾ
?