ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, November 17, 2011

ಪರಮ ಭಾಗವತರ ಕೇರಿಯೊಳಾಡುವ ಪುರಂದರ ವಿಠಲ ಹರಿಕುಣಿದ !


ಪರಮ ಭಾಗವತರ ಕೇರಿಯೊಳಾಡುವ ಪುರಂದರ ವಿಠಲ ಹರಿಕುಣಿದ!

ನೀವು ತಿಳಿದಷ್ಟೆಲ್ಲಾ ಸಪ್ಪೆ ಹುಡುಗರು ನಾವಾಗಿರಲಿಲ್ಲ, ಸುಮ್ನೇ ಬೊದ್ದ [ಪೆದ್ದರು ಎಂಬುದಕ್ಕೆ ಹವ್ಯಕ ಪರಿಭಾಷೆ] ಮಕ್ಕಳಾಗಿರಲಿಲ್ಲ. ನಾವು ಮಾಡದ ಕಿಲಾಡಿ ಇರಲಿಲ್ಲ. ಕಿಲಾಡಿ ಹನುಮನೋ ಕಿಲಾಡಿ ಕಿಟ್ಟ [ಕೃಷ್ಣ]ನೋ ಇದ್ದರೆ ಅವರನ್ನೂ ಮೀರಿಸಿಬಿಡುವ ಕಿಲಾಡಿಗಳು ನಾವಾಗಿದ್ದೆವು ಹಾಂ..,. ಹಾಗಂತ ಹಾಳುಗೆಡಹುವ ಕಿಲಾಡಿತನ ನಮದಲ್ಲ, ಸಿಕ್ಕ ಸಮಯದಲ್ಲಿ ಸಿಕ್ಕವಸ್ತುಗಳನ್ನೇ ಸದುಪಯೋಗಪಡಿಸಿಕೊಂಡು ಸಿಗಬಹುದಾದ ಮಜಾ ತೆಗೆದುಕೊಳ್ಳುವುದು ನಮ್ಮ ಜಾಯಮಾನವಾಗಿತ್ತು ! ಅಪ್ಪಿ-ತಪ್ಪಿ ನಮಗರಿವಿಲ್ಲದೇ ಪೆದ್ದುಬಿದ್ದಿದ್ದೆಂದು ನಿಮಗನ್ನಿಸಿದರೆ ಅದಕ್ಕೆಲ್ಲಾ ನಾವು ಜವಾಬ್ದಾರರಾಗುವುದಿಲ್ಲ. ಪಾಪ ಅಂದಿನ ಮಕ್ಕಳಿಗೆ ಇವತ್ತಿನ ದಿನದಂತೇ ಏನ್ ಟಿವಿ ಗೀವಿ ಎಲ್ಲಾ ಇತ್ತೇ ? ಪೋಗೋ ಕಾರ್ಟೂನ್ ನೆಟ್ವರ್ಕು, ನಿಕ್ಕು ಅಂತೆಲ್ಲಾ ಹಲವಾರು ಮಕ್ಕಳಾಟಿಗೆಯ ಮಾಧ್ಯಮ ವಾಹಿನಿಗಳಿದ್ದವೇ ? ಏನೋ ಪಾಪದ ಮಕ್ಕಳಾದ ನಾವು ಇದ್ದುದರಲ್ಲೇ ಅಡ್ಜೆಸ್ಟ್ ಮಾಡ್ಕೊಂಡು ಆಡುತ್ತಿದ್ದೆವಪ್ಪ.

ನಮ್ಮ ಆ ಪೂರ್ವಾಶ್ರಮದಲ್ಲಿ ನಾವು ಮಕ್ಕಳಾಗಿದ್ದಾಗ ರೇಡಿಯೋ ಅಂದರೇ ದೊಡ್ಡದು! ಅದರೊಳಗೆ ಮನುಷ್ಯರು ಹೊಕ್ಕಿ ಕೂತು ಹಾಡುವಾಗ ಕೆಲವು ಹಾಡುಗಳನ್ನು ನಮಗೆ ಹಿಡಿಸಿದರೆ ಕಿವಿಗೊಟ್ಟು ಕೇಳುತ್ತಿದ್ದೆವು. ಈ ವಾರ್ತೆಪಾರ್ತೆ ಎಲ್ಲಾ ನಮ್ಗೆ ಬೇಕಾಗ್ತಿರ್ಲಿಲ್ಲ. ಅಂದಹಾಗೇ ಆ ದಿನಗಳಲ್ಲಿ ಇಂದಿನಂತೇ ದಿನಬೆಳಗಾದ್ರೆ ರಕ್ತಪಾತ, ಹದಿನಾರು ರಸ್ತೆ ಅಪಘಾತ, ಮತ್ತೆಲ್ಲೋ ವಿಮಾನ ಅಪಘಾತ, ಧರಣಿ-ಹರತಾಳ ಇವೆಲ್ಲಾ ಕಮ್ಮಿ ಇದ್ದವೇನೋ ಅನಿಸುತ್ತದೆ. ಆ ಬಗ್ಗೆ ನಾವು ತಲೆ ಕೆಡಿಸಿಕೊಂಡಿದ್ದರಲ್ವಾ ಗೊತ್ತಿರ್ತಿತ್ತು. ತಲೆಯೊಳಗೆ ಏನಾದ್ರೂ ಇದ್ರಲ್ವಾ ತಲೆ ಕೆಡಿಸಿಕೊಳ್ಳೋದಕ್ಕಾಗ್ತಿತ್ತು ! ಛೇ ಛೇ ತೀರಾ ಆಲೂಗಡ್ಡೆ ಅಂತ ತಿಳಿಯೋ ಅವಶ್ಯಕತೆಯಿಲ್ಲ ಬಿಡಿ ಓಹೊಹೊ...ನಮಗ್ಗೊತ್ತು ನೀವು ನಮ್ತರಾನೇ ಆಟ ಆಡಿದ್ದು, ಬಿಟ್ಗೊಂಡ್ ತಿರ್ಗಿದ್ದು, ನಾಯಿಗೆ ಕಲ್ಲು ಹೊಡ್ದು ಅದು ಅಟ್ಟಿಸಿಕೊಂಡು ಬಂದಾಗ ಹೆದರಿ ಗಿಡವೇರಿ ಕೂತಿದ್ದು, ಇರೋ ಒಂದೆರಡು ಚಡ್ಡಿ ಒದ್ದೆಯಾಗಿದ್ದಾಗ ಅಪ್ಪನ ಹಳೇ ಅಂಗಿ ಹಾಕ್ಕೊಂಡು ಮೊಳಕಾಲ ಕೆಳವರೆಗೂ ಅಲೆಸುತ್ತಾ ಮಾಸ್ತರು ಬಂದ ಸುದ್ದಿ ಕೇಳಿ ಮನೆಯೊಳಗೆ ಹೋಗಿ ಬಚ್ಚಿಟ್ಟುಕೊಂಡಿದ್ದು...ಎಲ್ಲಾ ಗೊತ್ತಿರೋವೇ.

ಅಜ್ಜನ ಮನೇಲಿ ಎಮ್ಮೆ ಕರುಹಾಕಿದ್ರೂ ಸಾಕು ನಮ್ಮ ಕನ್ನಡ ಶಾಲೆಗೆ ಹೋಗುವುದಕ್ಕೆ ನಮಗೆ ಹಡೆದ ಸೂತಕ ತಾಗಿಬಿಡುತ್ತಿತ್ತು. ಅಜ್ಜನ ಮನೆಯ ತಿರುಗಾಟ ಮುಗಿಸಿದ ಶಾಲೆಗೆ ಮರಳಿದ ನಾವು ಅದೇ ಕಾರಣವನ್ನು ಕೊಡುವುದೂ ಇತ್ತು. ಆಗಿನ ಮಾಸ್ತರುಗಳೂ ಇಷ್ಟೆಲ್ಲಾ ಹೋಮ್ ವರ್ಕ್ ಕೊಡ್ತಿರಲಿಲ್ಲ ಬಿಡಿ; ತಮಾಷೆಗಲ್ಲ ಆ ವಿಷಯದಲ್ಲಿ ನಾವೇ ಪುಣ್ಯವಂತ್ರು! ಅಜ್ಜನ ಮನೇಲಿ ಒಂದು ರೇಡಿಯೋ ಇತ್ತು. ಅದೇನೋ ಟ್ರಾನ್ಸಿಸ್ಟರು ಅಂತಿದ್ರಪ್ಪ ಸುಣ್ಣದ ಅಂಡೆ ಥರದ ತಿರಗಣಿ ಇರುವ ಪೆಟ್ಗೆ. ಅದರೊಳಗೆ ಒಂದು ಬಿಳೇ ಕಡ್ಡಿ ಆ ಕಡೆ ಈ ಕಡೆ ಓಡಾಡ್ತಿತ್ತು-ಯಾಕೋ ಗೊತ್ತಿಲ್ಲ.

ಅಜ್ಜನ ಮನೆಗೆ ನೆರೆಕೆರೆಯ ಹತ್ತಾರು ಜನ ರೇಡಿಯೋ ಕೇಳಲು ಬರ್ತಿದ್ರು. ರೇಡಿಯೋ ಅಂತ ಬರೀತಾ ಇರೋದು ಈಗ; ಆಗೆಲ್ಲಾ ಅದು ನಮ್ಗೆ ರಡ್ಯೋ ! ರಡ್ಯೋ ಕೇಳುವ ಬಳಗದಲ್ಲಿ ಅಪ್ಪಿ ಅಜ್ಜ ಕೂಡ ಒಬ್ಬ. ಅಜ್ಜನ ಮ್ನೇಲಿ ಇದ್ದಿದ್ದು ಒಂದೇ ಆರಾಮ್ ಕುರ್ಚಿ ! ಆ ಆರಾಮ್ ಕುರ್ಚಿಗೆ ಹಾಕುವ ಬಟ್ಟೆ ಇದ್ಯಲ್ಲ ಅದನ್ನು ತೆಗೆದು ತೊಳ್ಯೋ ಹಾಗೇ ಅದಕ್ಕೆ ಮೇಲೇ ಕೆಳಗೆ ಗೂಟ ತೂರಿಸಿ ಸಿಗಿಸೋ ವ್ಯವಸ್ಥೆ ಇತ್ತು. ಅಪ್ಪಿ ಅಜ್ಜ [ ಅಜಮಾಸು ೫೦ ವರ್ಷದ ವ್ಯಕ್ತಿ] ದಿನಾಲೂ ಬರ್ತಿದ್ದಂವ ಒಂದ್ ದಿನ ಆರಮ್ ಕುರ್ಚಿ ಬಿಟ್ಟಿದ್ದ್ರೆ ಹೇಳಿ. ಬಂದ ಬಂದ ಆರಾಮ್ ಕುರ್ಚಿಮೇಲೇ ಕುಂತ... ಬಂದ ಬಂದ ಆರಾಮ್ ಕುರ್ಚಿಮೇಲೇ ಕುಂತ..., ಅಬಬಬಬ ಅದೇನವನ ಅಜ್ಜ ಮಾಡಿಟ್ಟ ಹಕ್ಕು ಎಂಬಂತೇ ಕೂತು ಬಿಡ್ತಿದ್ದ. ಆರಾಮ್ ಕುರ್ಚಿ ಕೂತು ಅಲ್ಲೇ ಸಣ್ಣಗೆ ಜೋಲೀ ಹೋಡಿತಾ ಮಜಾ ತಗೊಳೋದಕ್ಕೆ ಬಾಳಾ ಒಳ್ಳೆ ಸೌಲತ್ತು. ಇವತ್ತಿಗೂ ಎಲ್ಲಾದ್ರೂ ಆರಮ್ ಕುರ್ಚಿ ಇದ್ರೆ ಹೇಳಿ ದೇವಸ್ಥಾನಕ್ಕೆ ಹೋದೋರೆಲ್ಲಾ ಕುಂತೆದ್ದು ಬರೋ ಹಾಗೇ ಒಂದ್ಸಲ ಆ ಕುರ್ಚಿಮೇಲೆ ಕೂತೆದ್ದೇ ಬರೋದು.

ಅಪ್ಪಿ ಅಜ್ಜ ಆರಾಮ್ ಕುರ್ಚಿ ಬಿಡೋ ಹಾಗೆ ಏನಾದ್ರೂ ವ್ಯವಸ್ಥೆ ಆಗ್ಬೇಕಲ್ಲಾ ಎಂಬ ಇಚ್ಛೆಯ ಜೊತೆಗೆ ತಾನೊಬ್ನೇ ಕೂತು ನಮಗ್ಯಾರಿಗೂ ಆ ಕುರ್ಚಿ ಕೊಡ್ತಿರಲಿಲ್ಲ ಎಂಬ ಹೊಟ್ಟೆಕಿಚ್ಚೂ ಕೂಡ ಇತ್ತು. ಏನದ್ರೂ ಮಾಡ್ಬೇಕಲ್ಲಾ ಅಂದ್ಕೊಂಡ ಮನಸ್ಸಿಗೆ ಒಮ್ಮೆ ಮಾಷ್ಟರ್ ಪ್ಲಾನು ಬಂದೇ ಬಿಟ್ಟಿತ್ತು! ಒಂದಿನ ಹೀಗೇ ಎಮ್ಮೆ ಕರುಹಾಕಿದ ಸೂತಕದ ನೆವದಲ್ಲಿ ಶಾಲೆಗೆ ರಜಾ ಒಗೆದ ಸಮಯ ಅಜ್ಜನ ಮನೆಗೆ ಹೋಗಿದ್ದಾಗ ಮಧ್ಯಾಹ್ನ ೨:೦೦ ಗಂಟೆಗೆ ಸಿಲೋನ್ ಸ್ಟೇಶನ್ನಂತೆ ಅದರಲ್ಲಿ ಹಾಡು ಕೇಳೋಕೆ ಅಪ್ಪಿ ಅಜ್ಜನ ಸವಾರಿ ಬಂದೇ ಬಂತು. ನಮಗೆ ಮೊದಲೇ ಅಂದಾಜಿತ್ತಲ್ಲಾ.. ಪೂರ್ವ ಸಿದ್ಧತೆ ನಡೆದೇ ಹೋಗಿತ್ತು. ಆರಾಮ್ ಕುರ್ಚಿಮೇಲೆ ಕುಂತ ಅಪ್ಪಿ ಅಜ್ಜ " ಅಯಪ್ಪಾ ಇದೆಂತದಾ " ಅಂದ್ಕಂಡು ನಿಧಾನಕ್ಕೆ ಬೆನ್ನು ಉಜ್ಕೋತ ಎದ್ದ! ಅರ್ಥವಾಯ್ತಲ್ಲ? ಕುರ್ಚಿಯ ಬಟ್ಟೆಯ ಒಂದು ಕಡೆಯ ಕೋಲನ್ನು ತೆಗೆದು ಬಟ್ಟೆಯನು ಸುಸ್ಥಿಯಲ್ಲಿ ಸರಿ ಇದ್ದಹಾಗೇ ಕಾಣುವಂತೇ ಜೋಡಿಸಲಾಗಿತ್ತು. ಅಪ್ಪಿ ಅಜ್ಜನ ಸವಾರಿ ದೊಪ್ಪನೆ ನೆಲಕ್ಕೆ ಕುಸಿದಿತ್ತು! ಹಾಗೆ ಮಾಡಬಾರ್ದು ಅಪಘಾತವಾಗ್ತದೆ ಎಂಬೋದೆಲ್ಲಾ ಗೊತ್ತಿದ್ರಲ್ವಾ ಸ್ವಾಮೀ ನಮ್ಗೆ! ಆಮೇಲೆ ದೊಡ್ಡವರ್ಯಾರೋ ಕೇಳಿದ್ರು, ಬೈದ್ರು ಅದೂ ಇದೂ ಅಂತ ಹೇಳಿ ನಂಬ್ರ ಅಲ್ಲಿಗೇ ನಿಂತತು ಬಿಡಿ. ಅದಾರಾಲಾಗಾಯ್ತು ಅಪ್ಪಿ ಅಜ್ಜ ಆರಾಮ್ ಕುರ್ಚಿಮೇಲೆ ಕೂತರೆ ಹೇಳಿ ! ಕನಸಲ್ಲೂ ನೆನೆಸ್ಕೊಂಡು ಹಾರಿ ಬಿದ್ದಿರ್ಬೇಕು !

ಶಾಲೆಯ ಸಮಾರಂಭಗಳಲ್ಲಿ ಜೈಕಾರ ಹಾಕುವುದೂ ಘೋಷಣೆ ಕೂಗುವುದು ಎಲ್ಲಾ ಇರ್ತಿತ್ತಲ್ಲಾ ಅಲ್ಲೂ ಅದೇ ಕತೆ. ನಮ್ಗೆ ಬೇಡಾ ಅಂದ್ರೂ ಮಾಡಿ ಅಂದ್ರೆ ಇನ್ನೇನ್ ಮಾಡೋದು? ಯಾಕೆ ಹಾಗೆ ಕೂಗ್ಬೇಕು ಅದರಿಂದ ಏನು ಪ್ರಯೋಜನ ಎಂಬುದು ನಮಗೆಲ್ಲಾ ಗೊತ್ತಿರ್ಲಿಲ್ಲ. ಏನಾದ್ರೂ ’ರಾಷ್ಟ್ರೀಯ ಹಬ್ಬ’ ಎಂಬ ಸುದ್ದಿ ಇದ್ದ್ರೆ ಬಾವುಟ ಹಾರ್ಸೋದು ಪೆಪ್ಪರಮಿಂಟ್ ಇಸ್ಕಳದು ಅದಷ್ಟೇ ನಮ್ಕೆಲಸ; ಬಾವುಟ ಹಾರ್ಸಬೇಕೂ ಅಂತಾನೂ ಇರ್ಲಿಲ್ಲ..ಪೆಪ್ಪರಮಿಂಟ್ ಕೊಟ್ಬುಟ್ರೆ ಸರಿ, ನಮ್ ಪಾಡಿಗೆ ನಾವು! ವಲ್ಲಭ ಭಾಯಿ ಪಟೇಲರ ಬಗ್ಗೆ ಬಂದಾಗ ’ಉಕ್ಕಿನ ಮನುಷ್ಯ’ ಅಂತಿದ್ರಲ್ಲಾ ಮಾಸ್ತರಿಗೆ ತಲೆ ಇಲ್ಲಾ ಅಂದ್ಕೊಂಡಿದ್ದೆವು ನಾವು. ಉಕ್ಕಿನಿಂದ ಮನುಷ್ಯ ಆದ್ರೆ ಜೀವ ಇರುತ್ತಾ? ಅಷ್ಟೂ ತಲೆ ಬೇಡ್ವಾ ಅಂತ ! ಅದ್ರಲ್ಲೂ " ಬೋಲೋ ಭಾರತ್ ಮಾತಾ ಕಿ " ಅಂದ ತಕ್ಷಣ " ನಿಮ್ಮನೆ ಕರಿಕುನ್ನಿ ನೇತಾಕಿ " ಅಂದ್ಕೊಳ್ತಿದ್ದೆವು ಮನಸ್ನಲ್ಲಿ. ಸ್ವಾಮೀ ಏನೂ ಅಪಾರ್ಥ ಮಾಡ್ಕೊಳ್ ಬೇಡಿ-ಇದು ದೇಶಕ್ಕೆ ಅವಮರ್ಯಾದೆ ಮಾಡೋ ಹಂಬಲ ಅಲ್ಲ, ಬದಲಾಗಿ ನಮ್ಮ ಅಂದಿನ ಹೋಡ್ ಬುದ್ಧಿವಂತಕೆ.

ಶಾಲೆಯಲ್ಲಿ ಬಾಯಿಪಾಠ ಹೇಳಿಕೊಡ್ತಾ ಇದ್ರು. ಪ್ರತಿನಿತ್ಯ ಅದು ಶಿಸ್ತುಬದ್ಧ ಆಚರಣೆ. ಒಂದೊಂದ್ಲಿ ಒಂದ ಒಂದೆರಡ್ಲ ಎರಡ...ಹೀಗೇ ಮಗ್ಗಿ ಗಿಗ್ಗಿ ವಾರ ನಕ್ಷತ್ರ, ರಾಶಿ, ಸಂವತ್ಸರ ಇದೆಲ್ಲಾ ಇರ್ತಿತ್ತು. ನಮ್ಮಲ್ಲಿ ಕೆಲವು ಶಿಳ್ಳೆಕ್ಯಾತಗಳಿದ್ದವು. ನಾವೆಲ್ಲಾ ಸೇರಿ ಒಂದ್ಕಾಲ್ ಕಾಲ ಅಂತ ಹೇಳುವುದಕ್ಕೆ ಪ್ರಾಸಬದ್ಧವಾಗಿ ಅದನ್ನು ತಿರುಗಿ ಕಟ್ಟುತ್ತಿದ್ದೆವು. ಉದಾಹರಣೆಗೆ ಒಂದ್ಕಾಲ್ ಕಾಲ ಮಾಸ್ತರ ಬೆನ್ನಿಗೆ ಕೋಲ....ಒಂದ್ ಸಿದ್ದ ಭತ್ತ.. ಮಾಸ್ತರ್ ಸತ್ತ. ಯಾರಾದ್ರೂ ಮಾಸ್ತರು ಹೊಡೆದ ನೋವು ಕೆಣಕಿದ್ರೆ ಅದರ ಆರ್ಭಟ ಜಾಸ್ತಿಯಾಗಿರುತ್ತಿತ್ತು ಎಂಬುದನ್ನು ಮರೆಯುವ ಹಾಗಿಲ್ಲ. [ ಅಲ್ಲಾ ವಿಷಯ ನಿಮ್ಮಲ್ಲೇ ಇರ್ಲಿ ಈಗ ನನ್ನನ್ನೂ ಸೇರಿದಂತೇ ನಮ್ಮ ಶಿಳ್ಳೇಕ್ಯಾತಗಳೆಲ್ಲಾ ಎಂಜಿನೀಯರುಗಳಾಗಿ ಬೇರೇ ಬೇರೇ ವೃತ್ತಿಗಳಲ್ಲಿ ನಿರತರಾಗಿದ್ದೇವೆ; ಕಲಿಸಿದ ಮಾಸ್ತರುಗಳನ್ನೆಲ್ಲಾ ಆಗಾಗ ನೆನೆಯುತ್ತಲೇ ಇರುತ್ತೇವೆ.]

ಕಾರ್ತೀಕ ಮಾಸದಲ್ಲಿ ಊರ ದೇವಸ್ಥಾನಗಳಲ್ಲಿ ಭಜನೆ ನಡೆಯುತ್ತಿತ್ತು. ಅದರಲ್ಲಿ ಪುರಂದರ ದಾಸರ ಭಜನೆಗಳೇ ಜಾಸ್ತಿ. ದಾಸರ ಪದಗಳಲ್ಲಿ ಅತೀ ಹೆಚ್ಚು ಸಿಗುವುದು ಪುರಂದರ ದಾಸರದ್ದು ಅಲ್ವೇ? ಹಾಗೆ ಹಾಡುವ ಭಜನೆಗಳಲ್ಲಿ ’ಹರಿಕುಣಿದಾ ನಮ್ಮ ಹರಿಕುಣಿದ..’ ಭಜನೆ ಕೂಡಾ ಒಂದು. ಅದರಲ್ಲಿ ಕೊನೇ ಸಾಲು ’ಪರಮ ಭಾಗವತರ ಕೇರಿಯೊಳಾಡುವ ಪುರಂದರ ವಿಠಲ ಹರಿಕುಣಿದ ’. ನೀಲ್ಕೋಡ್ ಕಡೆಯ ಹಾಗಲಬಳ್ಳಿ ನೆಂಟರಲ್ಲಿ ’ಪರಮ ಭಾಗವತ’ ಎನ್ನುವವರೂ ಒಬ್ಬರು. ಅವರ ಹೆಸರು ಪರಮೇಶ್ವರ ಎಂದಿರಬೇಕು, ಕುಟುಂಬದ ಹೆಸರು [ಸರ್ ನೇಮ್] ಭಾಗವತ ಎಂಬುದಾಗಿ ಇತ್ತು. ಹಿಂದಕ್ಕೆ ಯಕ್ಷಗಾನ ಭಾಗವತಿಕೆ ಮಾಡುವ ಮನೆತನವನ್ನು ಭಾಗವತರು ಎಂದೇ ಕರೆಯುತ್ತಿದ್ದರು. ಪರಮೇಶ್ವರ ಎನ್ನುವುದು ಕರೆಯುವುದಕ್ಕೆ ಬಹಳ ಉದ್ದವಾಗುತ್ತದೆ ಎಂಬ ಅಡಚಣೆ ಗ್ರಹಿಸಿ ಪರಮ ಭಾಗವತ ಅಥವಾ ಪರಂ ಭಾಗೊತ ಅಂತ ಕರೀತಿದ್ರು. ಇಂಥಾ ಪರಮ ಭಾಗವತರ ಮನೆ ನೀಲ್ಕೋಡ್ನಲ್ಲಿ ಒಂದು ಕೇರಿಯಲ್ಲಿ ಇತ್ತು. ಆ ಕೇರಿಯಲ್ಲಿ ಪುರಂದರ ವಿಠಲನೆಂಬಾತ ಆಡುತ್ತಾನೆ ಅಂತಾದ್ರೆ ಪುರಂದರ ದಾಸರು ಅದನ್ನು ಹ್ಯಾಗೆ ಬಂದು ನೋಡಿದ್ರು ? ಅರ್ಥವಾಗದ ಬಹಳ ದೊಡ್ಡ ಸಮಸ್ಯೆ ನಮ್ಮದು! ಪುರಂದರ ದಾಸರು ಬದುಕಿಲ್ಲ ಬಹಳ ಹಿಂದೇ ಹಾಡು ಬರೆದರು ಎಂಬುದು ಗೊತ್ತಿತ್ತು..ಆದ್ರೆ ಈಗಿರುವ ಪರಮ ಭಾಗವತರ ಕೇರಿಯನ್ನು ಆಗಲೇ ಅದು ಹೇಗೆ ಅವರು ಕಂಡರು? ತಪಸ್ಸಿನ ಫಲವೇ ? ಆಗಲೇ ಭವಿಷ್ಯ ನುಡಿದರೇ? ಗೊತ್ತಾಗಿರ್ಲಿಲ್ಲ.

ಪರಮ ಭಾಗವತರು ನಮ್ಮನೆಗೆ ಅಪರೂಪಕ್ಕೆ ಬರುವುದಿತ್ತು, ಚಾ -ತಿಂಡಿ ವಗೈರೆ ಅಲ್ಪೋಪಹಾರವೋ ಬೇಸಿಗೆಯಾದರೆ ಶೈತ್ಯೋಪಚಾರವೋ ಊಟವೋ ಮುಗಿಸಿ ಅದೂ ಇದೂ ಕಥಾಕಾಲಕ್ಷೇಪವಾದಮೇಲೆ ಮತ್ತೆ ಅವರು ವಾಪಸ್ಸಾಗುತ್ತಿದ್ದರು. ಹೀಗಿದ್ದ ಒಂದು ಸಂದರ್ಭ ಅವರು ಬಂದಾಗ ನಾನು ಧೈರ್ಯಮಾಡಿ ಕೇಳಿಯೇ ಬಿಟ್ಟೆ. " ನಿಮ್ಮ ಕೇರಿಯಲ್ಲಿ ಪುರಂದರ ವಿಠಲ ಆಡಲಿಕ್ಕೆ ಬರುತ್ತಾನಂತೆ ಎಲ್ಲಿ ? " ನನ್ನ ಚಿಕ್ಕಪ್ಪಂದಿರು, ತಂದೆ, ಅಜ್ಜ ಆದಿಯಾಗಿ ಅಲ್ಲಿದ್ದ ಎಲ್ಲರೂ ನಕ್ಕರೆ ನಮ್ಮ ಗತಿ ಏನಾಗಬೇಡ ಸ್ವಾಮೀ ? ಪರಮ ಭಾಗವತರಿಗೂ ನಕ್ಕೂ ನಕ್ಕೂ ಹೊಟ್ಟೆ ಹುಣ್ಣಾಗಿರಬೇಕು.

ಕೆದಕಿದರೆ ನೂರಾರು ಕಥೆಗಳನು ಬರೆವೆನು
ಬೆದಕಿದರೆ ಹಲವಾರು ಘಟನೆಗಳ ತರುವೆನು
ಕೆದಕು-ಬೆದಕಿನ ಹಲವು ಸ್ವಾರಸ್ಯಗಳ ನಡುವೆ
ಬದುಕು ನೀರಸವಾಗದಂತಿರಲಿ
ಇದಕೆ ನಿನಗೊಂದಲ್ಲ ಹತ್ತಾರು ನೂರಾರು ನಮನಗಳು
ತದುಕದೇ ಸಲಹೆಮ್ಮ ಅಧಿಕ ಪ್ರೀತಿಯ ಪುರಂದರ ವಿಠಲ !