ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, March 30, 2011

ದಂಡಂ ದಶಗುಣಂ!


ದಂಡಂ ದಶಗುಣಂ!

ಹೇಳಲೇಬೇಕಾದ ಕೆಲವು ಮಾತುಗಳು ಉಳಿದುಹೋಗಿ ಆಮೇಲೆ ಆ ವಿಷಯಗಳು ಮರೆತುಹೋಗುತ್ತವೆ. ಅದನ್ನು ಸಮಯದಲ್ಲೇ ಹೇಳಿದರೆ ಹಲವರಿಗೆ ಅದರ ಸತ್ಯಾಸತ್ಯತೆಯ ಪರಾಮರ್ಶೆಗೆ ಅನುಕೂಲವಾಗುತ್ತದೆ. ಬರಬೇಕಾದ ಹಣ ಸಮಯದಲ್ಲಿ ಸಿಕ್ಕರೆ ಎಷ್ಟೋ ಅನುಕೂಲವಾಗುತ್ತದೆ. ಆ ಹಣ ತಡವಾಗಿ ಬಂದರೆ ಅದರಿಂದ ಆಗುವ ಅನಾನುಕೂಲ ಅನುಭವಿಸಿದವರಿಗಷ್ಟೇ ಗೊತ್ತಿರುತ್ತದೆ. ಪೀಠಿಕೆ ಹಾಕುತ್ತಿರುವುದು ಯಾವುದೋ ಪಕ್ಷ ವಹಿಸಿಕೊಂಡು ಅವರನ್ನು ಅನುಮೋದಿಸಲಲ್ಲ. ಬದಲಾಗಿ ನಾಗರಿಕ ಬದುಕಿನ ಕೆಲವು ಮಜಲುಗಳನ್ನು ವಿವೇಚಿಸುವುದು ಉದ್ದೇಶವಾಗಿದೆ.

ಇವತ್ತು ಮೋಹಾಲಿಯಲ್ಲಿ ಭಾರತ-ಪಾಕಿಸ್ತಾನಗಳ ನಡುವೆ ಕ್ರಿಕೆಟ್ ಆಟ ನಡೆಯಲಿದೆ. ಜನಮಳ್ಳೊ ಜಾತ್ರೆಮಳ್ಳೋ ಅನ್ನೋ ಹಾಗೇ ಮಂದಿರ ಮಸೀದಿಗಳಲ್ಲಿ ಹೋಮ-ಹವನ,ಪೂಜೆ, ಪ್ರಾರ್ಥನೆ ಮೊದಲಾದ ಕಾರ್ಯಗಳು ನಡೆಯುತ್ತಿರುವುದನ್ನು ನಾವು ವೀಕ್ಷಿಸುತ್ತಿದ್ದೇವೆ. ಆಪ್ಟರ್ ಆಲ್ ನಡೆಯುತ್ತಿರುವುದು ಕೇವಲ ಕ್ರಿಕೆಟ್! ನಮ್ಮ ಭಾರತದಲ್ಲಿ ಕ್ರಿಕೆಟ್ ಆಟಗಾರರಿಗೆ ಕೊಡುವ ಸವಲತ್ತುಗಳು ಮತ್ತು ಗೌರವಗಳು ಅತಿಯೆನಿಸುವುದಿಲ್ಲವೇ? ಯಾವ ಲೆಕ್ಕದಲ್ಲಿ ಅವರು ದೇಶಕ್ಕೆ ಉಪಕಾರವಾಗುವಂತಹ ಘನಕಾರ್ಯವನ್ನು ಮಾಡಿದ್ದಾರೆ ಅಥವಾ ಮಾಡುತ್ತಾರೆ? ಒಬ್ಬೊಬ್ಬ ಕ್ರಿಕೆಟ್ ಆಟಗಾರನ ಖರ್ಚುವೆಚ್ಚ ಬಿಳೀ ಆನೆಸಾಕಿದಷ್ಟೇ ಅಥವಾ ಅದಕ್ಕೂ ದುಬಾರಿ ಎಂದರೆ ಬೆರಗಾಗಬೇಕಾಗಿಲ್ಲ. ಯಾವ ಪುರುಷಾರ್ಥವನ್ನು [ಹೆಂಗಸರು ಕ್ರಿಕೆಟ್‍ನಲ್ಲಿ ಜಾಸ್ತಿ ಇರದ್ದರಿಂದ ಈ ಶಬ್ದ ಪ್ರಯೋಗ! ಹೆಂಗಳೆಯರು ಓದುವಾಗ ’ಯಾವ ಮಹಿಳಾರ್ಥಕ್ಕೆ’ ಎಂದು ಸೇರಿಸಿಕೊಳ್ಳುವುದು]ಸಾಧಿಸುವ ಹೀರೋಗಳು ಅವರು ಎಂಬುದು ಮಾತ್ರ ಓದುಗರಿಗೆ ಬಿಟ್ಟಿದ್ದು.

ಹೇಳೀ ಕೇಳೀ ಈ ಕ್ರಿಕೆಟ್ ಸಂಭ್ರಮ ಬರುವುದಕ್ಕೂ ಇತ್ತ ವಿದ್ಯಾರ್ಜನೆಯಲ್ಲಿ ತೊಡಗಿರುವವರ ಪರೀಕ್ಷಾ ಸಮಯ ಹತ್ತಿರಬರುವುದಕ್ಕೂ ಯಾವುದೋ ಅವಿನಾಭಾವ ಸಂಬಂಧವೋ ಏನೋ ಅಂತೂ ಕ್ರಿಕೆಟ್ ಹೆಚ್ಚಾಗಿ ಈ ವೇಳೆಗೇ ಬರುತ್ತದೆ! ವಿದ್ಯಾರ್ಥಿ/ವಿದ್ಯಾರ್ಥಿನಿಯರು ಓದುವುದನ್ನು ಮರೆತು ಮಾಧ್ಯಮವಾಹಿನಿಗಳ ಮುಂದೆ ಠಿಕಾಣಿ ಹೂಡಿ ಕ್ರಿಕೆಟ್ ಟೂರ್ನಿಯೋ ಪಂದ್ಯವೋ ನೋಡುತ್ತಾ ಓದಬೇಕಾದ ಅಮೂಲ್ಯ ಸಮಯವನ್ನು ಅಲ್ಲಿ ಕಳೆದುಕೊಳ್ಳುತ್ತಾರೆ. ಕೆಲವರಿಗಂತೂ ಕ್ರಿಕೆಟ್ ಜ್ವರ ಬಂದಿರುತ್ತದೆ ಎಂದು ಕೇಳಿದ್ದೇನೆ! ದೇಶದಲ್ಲಿ ಅಳಿದುಳಿದ ಕೃಷಿಕ ಯುವಕರೂ ಕೂಡ ಕ್ರಿಕೆಟ್ ನೋಡಬಯಸಿ ತಮ್ಮ ಹಲವು ಕೆಲಸಗಳನ್ನು ಮುಂದೂಡುತ್ತಾರೆ. ಮಹಿಳೆಯರು ಕ್ರಿಕೆಟ್ ನೋಡುವುದರಲ್ಲಿ ಸಾಧನೆ ಸಾಧಿಸಿದ್ದು ನಮಗೆ ಕಾಲಗರ್ಭದಲ್ಲಿ ಕಂಡುಬಂದಿದೆ. ನಟೀಮಣಿಗಳು ತಮ್ಮ ಜೀವನದಲ್ಲಿ ಬ್ಯಾಟಿಂಗ್ ಮಾಡಲು ಇರಲಿ ಎಂಬ ಕಾರಣಕ್ಕೆ ಕ್ರಿಕೆಟಿಗರನ್ನು ಬೆನ್ನುಹತ್ತಿ ಸ್ಪರ್ಧೆಗಳು ನಡೆಯುವಲ್ಲಿ ಹಾಜರಾಗುವುದು ಮತ್ತು ಬೇಕಾದ ಆಟಗಾರರನ್ನು ಆತುಕೊಳ್ಳುವುದು ಸಂಗೀತಾ ಬಿಜಲಾನಿ-ಮಹಮ್ಮದ ಅಜರುದ್ದೀನ್ ಆಣೆಯಾಗಿಯೂ ಸತ್ಯ!

ಕ್ರೀಡೆಗಳು ಉಲ್ಲಾಸದಾಯಕ, ದೇಹಾರೋಗ್ಯಕ್ಕೆ ಅವುಗಳು ಬೇಕು--ಇವೆಲ್ಲಾ ಸರಿ. ಆದರೆ ಕ್ರೀಡೆಗಳೇ ಜಗತ್ತಿನ ಸಾಮಾಜಿಕ ಸ್ಥಿತಿಯನ್ನು, ಆರ್ಥಿಕತೆಯನ್ನು ನಿರ್ಧರಿಸುವ ಮಾಪನಗಳಲ್ಲವಲ್ಲ? ಕ್ರೀಡೆಗಳಿಂದ ವಿನೋದ ವಿಹಾರ ಮೋದವೇನೋ ಸಿಗಬಹುದು ಆದರೆ ಕ್ರೀಡೆಗಳು ಪ್ರತ್ಯಕ್ಷವಾಗಿ/ಪರೋಕ್ಷವಾಗಿ ಹಲವರ ಕೆಲಸಗಳಿಗೆ ಕಡಿವಾಣಹಾಕುವ, ಹೆಚ್ಚಿನ ಖರ್ಚುವೆಚ್ಚಗಳಿಗೆ ಹಣವನ್ನು ದೇಶದ ಬೊಕ್ಕಸದಿಂದ ಇಸಿದುಕೊಳ್ಳುವ ಕಾಲ ಇದಾಗಿದೆ. ಒಂದುಕಡೆ ದುಡಿಮೆಯಲ್ಲಿ ಆಲಸ್ಯ ಉಂಟುಮಾಡಿ ಆ ಮೂಲಕ ಅಲ್ಲಿ ಜನಸಾಮಾನ್ಯರ ಆದಾಯ ಕುಂಠಿತವಾಗುವುದು ಮತ್ತೊಂದುಕಡೆ ದೇಶಕ್ಕೆ ತೆರಿಗೆಯ ಮೂಲಕ ಸಂದ ಜನರ ಹಣವನ್ನು ಇದಕ್ಕಾಗಿ ಪೋಲುಮಾಡುವುದು ಅಷ್ಟಾಗಿ ಬೇಕಿತ್ತೇ ಎಂಬುದು ಪ್ರಶ್ನೆ.

ದೇಶವನ್ನು ಗಡಿಯಲ್ಲಿ ನಿಂತು ಕಾಯುವ ಯೋಧನಿಗಾಗಲೀ ದೇಶದ ವೈಜ್ಞಾನಿಕ ರಂಗದಲ್ಲಿ ಪ್ರಗತಿ ಸಾಧಿಸಿದ ಡಾ| ಅಬ್ದುಲ್ ಕಲಾಂ ಥರದ ವ್ಯಕ್ತಿಗಳಿಗಾಗಲೀ ಸಿಗದ ಪ್ರತಿಷ್ಠೆಯ ಗೌರವ ಪುರಸ್ಕಾರಗಳು ಕ್ರಿಕೆಟಿಗರಿಗೆ ಸಲ್ಲುತ್ತಿರುವುದು ನಿಜಕ್ಕೂ ಖಂಡನೀಯ. ಕ್ರಿಕೆಟಿಗರ ಹೆಸರನ್ನು ಪ್ರಮುಖ ರಸ್ತೆಗಳಿಗೆ ಅಲ್ಲಿನ ವೃತ್ತಗಳಿಗೆ ಇಡುವುದು, ಅವರಿಗೆ ಪದ್ಮ ಪ್ರಶಸ್ತಿಗಳನ್ನೆಲ್ಲಾ ಕೊಡಮಾಡುವುದು ಯಾಕಾಗಿ ನಡೆಯುತ್ತದೋ ತಿಳಿಯದಾಗಿದೆ. ಆಟಗಾರರಿಗೆ ನಗರಗಳಲ್ಲಿ ವಸತಿ ನಿವೇಶನಗಳು, ಎಲ್ಲಾ ಸೌಲಭ್ಯಗಳೂ ಮೊದಲ ಆದ್ಯತೆಯಲ್ಲಿ ಸಿಗುವುದಾದರೆ ಈ ದೇಶಕಂಡ ಕೆಲವು ಸಜ್ಜನರು ಮಡಿದಾಗ ಅವರ ಅಂತ್ಯ ಸಂಸ್ಕಾರಕ್ಕೂ ಅವರ ಖಾತೆಯಲ್ಲಿ ಕಿಂಚಿತ್ತೂ ಹಣ ಇರದಿರುವುದಕ್ಕೆ ದಿ|ಲಾಲ್ ಬಹಾದ್ದೂರ್ ಶಾಸ್ತ್ರಿ ಉದಾಹರಣೆಯಾಗಿದ್ದಾರೆ. ಕರ್ನಾಟಕದ ರಾಜಕಾರಣದಲ್ಲೂ ತಮ್ಮ ವಂಶಕ್ಕೇ ಎಲ್ಲಾ ಇರಲಿ ಎಂಬುದನ್ನು ಬಿಟ್ಟು ನಿಸ್ವಾರ್ಥರಾಗಿ ನಿಸ್ಪೃಹರಾಗಿ ಆಡಳಿತ ನಡೆಸಿದ ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪ ಈ ಥರದ ಬೆರಳೆಣಿಕೆಯಷ್ಟು ಜನ ಸಿಗುತ್ತಾರೆ!

ಜನಜೀವನಕ್ಕೆ ಸಂಗೀತ, ಸಾಹಿತ್ಯ, ಕಲೆ ಮೊದಲಾದ ಎಲ್ಲಾ ರಂಗಗಳೂ ಕ್ರಿಕೆಟ್ಟಿಗಿಂತ ಹೆಚ್ಚಿನ ಕೊಡುಗೆಗಳನ್ನು ಕೊಟ್ಟ ದಾಖಲೆ ಸಿಗುತ್ತದೆ. ಅಲ್ಲಿಯೂ ಕೂಡ ಚಲನಚಿತ್ರ ರಂಗದ ನಟ/ನಟಿಯರಿಗೆ ಸಿಗುವ ಗೌರವ/ಪುರಸ್ಕಾರಗಳನ್ನು ಅವಲೋಕಿಸಿದರೆ ಅವರೇನು ಸ್ವರ್ಗದಿಂದ ಧರೆಗಿಳಿದು ಸಮಾಜಸೇವೆಗೆ ಬಂದರೇ ಎಂಬುದು ಕಾಡುತ್ತದೆ. ಬೇರೇ ರಂಗಗಳಲ್ಲಿ ದುಡಿಯುವ ವ್ಯಕ್ತಿಗಳಿಗೆ ಗಣನೀಯವಾದ ಯಾವುದೇ ಮಾನ್ಯತೆಯೇ ಕಾಣಸಿಗುವುದಿಲ್ಲ. ಮೊನ್ನೆ ಒಂದು ಚಲಚಿತ್ರದ ಹಾಡುಗಳ ಧ್ವನಿಫಲಕದ ಬಿಡುಗಡೆಯ ಸಲುವಾಗಿ ನಿರ್ಮಾಪಕ ಮತ್ತು ನಟೀಮಣಿಯ ನಡುವೆ ನಡೆದ ಪ್ರಹಸನ ಎಲ್ಲಿಯವರೆಗೆ ಪ್ರಚಾರಪಡೆಯಿತು ಎಂಬುದು ಎಲ್ಲರಿಗೂ ತಿಳಿದದ್ದೇ ಆಗಿದೆ. ಕೈಲಾಗದ ನಿರ್ಮಾಪಕರಿಗೆ ಸಾಲಮಾಡಿ ಚಿತ್ರಮಾಡು ಎಂದು ಯಾರು ಹೇಳುತ್ತಾರೆ ? ರಾಜಕೀಯದ ಹಿನ್ನೆಲೆಯುಳ್ಳ ನಟ/ನಟಿಯರಿಗೆ ಕೇವಲ ಶೋಕಿಗಾಗಿ ನಟಿಸಲು ಬಂದವರಿಗೆ ನಿರ್ಮಾಪಕನನ್ನು ಉದ್ಧಾರಮಾಡಲು ಸಹಾಯಮಾಡು ಎಂದು ಯಾರಾದರೂ ಹೇಳಿದ್ದಾರಾ ? ದಶಗುಣಗಳನ್ನು ತನ್ನ ದಶಾವತಾರಗಳ ಮೂಲಕ ಆಗಾಗ ಹೊರಹೊಮ್ಮಿಸಿ ಯಾವಾಗಲೂ ಪ್ರಚಾರ ಗಿಟ್ಟಿಸುವ ವೈಖರಿ ಹೊಂದಿರುವ ನಟಿಯನ್ನೂ ಹೇಗೋ ಒಂದು ಹಂತಕ್ಕೆ ತಂದು ನಿಲ್ಲಿಸಿ ತನ್ನ ಸಿನಿಮಾ ವಿತರಣೆಯಾದ ಬಳಿಕ ಬಂದ ಹಣದಲ್ಲಿ ಸಾಲವನ್ನು ತೀರಿಸಿದರಾಯ್ತು ಎಂದುಕೊಂಡು ತಿರುಗುತ್ತಿದ್ದ ನಿರ್ಮಾಪಕನಿಗೆ ಆಕೆ ವಿಧಿಸಿದ ’ದಂಡ’ವನ್ನೂ ನೋಡಿ ನಿಜಕ್ಕೂ ಆ ಸಿನಿಮಾಗೆ ಹೆಸರು ಅನ್ವರ್ಥವಾಗಿದೆ ಎನಿಸಲಿಲ್ಲವೇ?

ಒಟ್ಟರೆಯಾಗಿ ನಾವು ತಿಳಿಯಬೇಕಾದ ವಿಚಾರ ಇಷ್ಟು: ಕ್ರಿಕೆಟಿಗರಾಗಲೀ ಕಲಾವಿದರಾಗಲೀ ದೇವಲೋಕದಿಂದ ಧರೆಗಿಳಿದವರಲ್ಲ. ಅವರೆಲ್ಲಾ ನಮ್ಮ ನಿಮ್ಮಂತೆಯೇ ಇರುವವರು. ಜೀವನೋಪಾಯಕ್ಕಾಗಿ ಆ ರಂಗಗಳಲ್ಲಿ ತೊಡಗಿಕೊಂಡವರಿಗೆ ಹಣೆಬರಹ ಗಟ್ಟಿ ಇದ್ದು ಆದ್ಯತೆ/ಮಾನ್ಯತೆ ಗಳಿಸಿದವರು ಅವರಾಗಿದ್ದಾರೆ/ಗುತ್ತಾರೆ. ಒಮ್ಮೆ ಹೆಸರು ಪಡೆದರೆ ಅವರು ತಾವು ಆಡಿದ್ದೇ ಆಟ ಎನ್ನುವದನ್ನು ಸಮಾಜದಲ್ಲಿ ನಾವು ಈಗ ಕಾಣುತ್ತಿದ್ದೇವೆ. ಜೀವನೋಪಾಯಕ್ಕಾಗಿ ಆಸಕ್ತ ವಿಷಯದಲ್ಲಿ ತೊಡಗಿಕೊಂಡರೆ ಅದೂ ಕೂಡ ಅವರ ವೃತ್ತಿಯೇ ಹೊರತು ಅದು ದೇಶಕ್ಕೆ ಅವರು ಸಲ್ಲಿಸುವ ಸೇವೆ ಎನಿಸುವುದಿಲ್ಲ! ನಮ್ಮದೊಂದು ಪರಿಪಾಟ--ಯಾವನೋ ಏನನ್ನೋ ಮಾಡಲಿ " ಅವರ ಕೊಡುಗೆ ಅಪಾರ " ಎನ್ನುವ ಸ್ವಭಾವ ನಮ್ಮದು. ಕೊಡುಗೆ ಏನು ? ಸಚಿನ್ ಸೆಂಚುರಿ ಬಾರಿಸಿದ್ದೇ ? ಅದರಿಂದ ದೇಶದ ಬಡತನದ ನಿರ್ಮೂಲನೆಯಾಯಿತೇ? ಜನರಿಗೆ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಲ್ಪಟ್ಟಿತೇ ?

ಐಶ್ವರ್ಯ ರೈ ಜಗದೇಕ ಸುಂದರಿ ಎಂಬ ಪಟ್ಟವನ್ನು ಪಡೆದಾಗ ಕೇವಲ ಮಾಧ್ಯಮದೆದುರು ಅನಾಥಮಕ್ಕಳೊಡನೆ ನಿಂತು ಛಾಯಾಚಿತ್ರ ತೆಗೆಸಿಕೊಂಡಿದ್ದು ಬಿಟ್ಟರೆ ಆಕೆ "ಸಕ್ರಿಯವಾಗಿ ಅನಾಥ ಮಕ್ಕಳ ಸೇವೆಮಾಡುತ್ತೇನೆ " ಎಂದಿದ್ದು ಜಗತ್ತಿನ ಅದ್ಭುತ ಸುಳ್ಳುಗಳಲ್ಲಿ ಒಂದಾಗಿದೆ. ತಮ್ಮ ತೀಟೆ ತೀರಿಸಿಕೊಳ್ಳುವ ಕೆಲವು ಇಂತಹ ಸೆಲೆಬ್ರಿಟಿಗಳೆನಿಸಿದವರು ಆನೆ ಹೂಸು ಬಿಟ್ಟಹಾಗೇ ಆಡುವ ಮಾತುಗಳು ಮಾತ್ರ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಲೇ ಇರುತ್ತವೆ. ಆನೆ ಯಾವಾಗ ಬಂತು ಎಲ್ಲಿ ಹೂಸು ಬಿಟ್ಟಿತು ಎಂಬುದು ನಮಗೆ ಗೊತ್ತೇ ಆಗುವುದಿಲ್ಲ! ಕೇವಲ ತಮ್ಮ ಸ್ವಾರ್ಥಕ್ಕಾಗಿ, ತಮ್ಮ ಹೆಚ್ಚಿನ ಗಳಿಕೆಗಾಗಿ, ತಮಗೆ ಹೆಚ್ಚಿನ ಮಾನ ಸನ್ಮಾನ ಬಿರುದು ಬಾವಲಿ ಅಬ್ಬರದ ಪ್ರಚಾರ ಸಿಗಲಾಗಿ ಮಾಡುವ ಇಂತಹ ಸೆಲೆಬ್ರಿಟಿಗಳ ’ಗಿಮಿಕ್ಸ್’ ನಮ್ಮಂತಹ ಪೆದ್ದುಗಳಿಗೆ ನಿಜವೇನೋ ಅನ್ನಿಸಿಬಿಡುತ್ತದೆ. ಕನ್ನಡದ ಬಗ್ಗೆ ಕಿಂಚಿತ್ ಆಸಕ್ತಿಯನ್ನೂ ಇಟ್ಟುಕೊಳ್ಳದ ಐಶ್ವರ್ಯ ರೈಯ್ಯನ್ನು ವಿಶ್ವಕನ್ನಡ ವೇದಿಕೆಯಲ್ಲಿ ಪಕ್ಕದಲ್ಲೇ ಕೂರಿಸಿಕೊಂಡು ನೇತಾರರು ಪ್ರಪುಲ್ಲರಾಗುತ್ತಿದ್ದರೆ, ಸಭೆಯಲ್ಲಿ ಅಮ್ಮನಿಂದ ಮೊನ್ನೆಯ ಸಮ್ಮೇಳನಕ್ಕಾಗಿಯಷ್ಟೇ ಕಲಿತ ಒಂದೆರಡು ಗಿಣಿಪಾಠವನ್ನು ಉಲಿದ ಆಕೆಯನ್ನು ನೋಡುತ್ತಾ ನಗಬೇಕೋ ಅಳಬೇಕೋ ಎಂದು ತಿಳಿಯದ ಸ್ಥಿತಿ ನಮ್ಮಲ್ಲಿ ಕೆಲವರದಾಗಿತ್ತು.

ಅಸಾಮಾನ್ಯ ರಾಜಕಾರಣಿಗಳೇ,[ ನಮಗೆ ಗೊತ್ತು: ನಿಮಗೆ ಅಸಾಮಾನ್ಯರು ಎಂಬ ಪದವೇ ಯೋಗ್ಯವೆಂಬುದು!] ದೇಶದ ಒಳಿತಿಗಾಗಿ, ದೇಶದ ಸಾಮಾಜಿಕ, ಆರ್ಥಿಕ, ವೈಜ್ಞಾನಿಕ ಹಾಗೂ ಇನ್ನಿತರ ರಂಗಗಳಲ್ಲಿ ತೊಡಗಿಸಿಕೊಂಡವರಿಗೆ, ಕಷ್ಟವೋ ಸುಖವೋ ತನ್ನನ್ನು ತೊಡಗಿಸಿಕೊಂಡು ಮಳೆಬಿಸಿಲುಚಳಿಯೆನ್ನದೇ ಪ್ರಕೃತಿಯನ್ನೇ ಅವಲಂಬಿಸಿ ಬಿತ್ತಿ ಬೆಳೆದು ಜನತೆಗೆ ನಿಜವಾಗಿ ಅನ್ನವನ್ನು ನೀಡುವ ಮೇಟಿವಿದ್ಯೆಯ ಸಾಧಕರಿಗೆ ಆದ್ಯತೆ ಸಿಗಲಿ, ಸನ್ಮಾನ ಸಿಗಲಿ. ದೇಶಕ್ಕೆ ದೇಶವೇ ಅನಿರೀಕ್ಷಿತ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂದರೆ ಮುನ್ನುಗ್ಗುವವರು ಇಂಥವರೇ ಹೊರತು ಆಟಗಾರರೋ ಕಲಾವಿದರೋ ಸೆಲೆಬ್ರಿಟಿಗಳೋ ಅಲ್ಲ. ಯಾವುದಕ್ಕೆ ಎಷ್ಟು ಮಹತ್ವವನ್ನು ಕೊಡಬೇಕೆಂಬುದನ್ನು ಚಾಣಕ್ಯ ನೀತಿಯಿಂದ ಕಲಿತುಕೊಳ್ಳಿ. ನಮ್ಮ ಭಾರತದಲ್ಲಿ ಪೂರ್ವಜರು ತಮ್ಮ ಮುಂದಿನ ಜನಾಂಗಕ್ಕೆ ಉಳಿಸಿಹೋದ ಪಂಚತಂತ್ರದಂಥ ಕಥೆಗಳಿವೆ, ನೀತಿ ಪಾಠಗಳಿವೆ, ಅವುಗಳಲ್ಲೇ ಅಡಗಿರುವ ’ದಂಡ ದಶಗುಣಂ’ ಜನಸಾಮಾನ್ಯರಿಗೆ ದಂಡವಿಧಿಸುವ ಸ್ಥಿತಿ ಬಾರದಿರಲಿ. ಕ್ರಿಕೆಟ್ ಕೇವಲ ಒಂದು ಆಟವಾಗಿರಲಿ, ಅದು ಯುದ್ಧವೂ ಅಲ್ಲ, ಅವರು ಯೋಧರೂ ಅಲ್ಲ, ಆ ಆಟಗಾರರಿಗೆ ಸ್ವಲ್ಪ ಮಾನ್ಯತೆ ಕಮ್ಮಿ ಮಾಡಿ ಇತರ ರಂಗಗಳನ್ನೂ ಲೆಕ್ಕಿಸಿ ಎಂಬುದು ಜನಸಾಮಾನ್ಯನ ಆಡದೇ ಉಳಿದ ಮಾತಾಗಿದೆ.