ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, December 2, 2011

ಅಲ್ಲಿ ವಿಠೋಬನೆಂಬ ಒಬ್ಬ ಸಾಹುಕಾರ !

ಅಲ್ಲಿ ವಿಠೋಬನೆಂಬ ಒಬ್ಬ ಸಾಹುಕಾರ !

ವಾಸ್ತವಿಕವಾಗಿ ಹೇಳಬೇಕಾದರೆ ನಾನು ದೈನಿಕ ಧಾರಾವಾಹಿಗಳನ್ನು ನೋಡುವುದಿಲ್ಲ. ಆದರೂ ಆರಂಭದಿಂದ ಇಲ್ಲೀವರೆಗೂ ಆಗಾಗ ಆಗಾಗ ನನ್ನನ್ನು ಸೆಳೆದಿದ್ದು ಒಂದೇ ಒಂದು ಧಾರಾವಾಹಿ ’ಶ್ರೀ ಗುರು ರಾಘವೇಂದ್ರ ವೈಭವ’. ಭರತಭೂಮಿ ಕಂಡ ತಪೋನಿಧಿಗಳಲ್ಲಿ ಮಂಚಾಲೆಯ ಶ್ರೀಗುರು ರಾಘವೇಂದ್ರ ತೀರ್ಥರೂ ಒಬ್ಬರು. ಅವರ ಹುಟ್ಟಿನಿಂದ ಹಿಡಿದು ನಡೆದ ಬಹುತೇಕ ಎಲ್ಲಾ ಘಟನೆಗಳನ್ನೂ ಸವಿಸ್ತಾರವಾಗಿಯೂ ಸಮರ್ಪಕವಾಗಿಯೂ ಜನರಿಗೆ ತಲ್ಪಿಸುವಲ್ಲಿ ನಿರ್ದೇಶಕ ಬ.ಲ.ಸುರೇಶ್ ಯಶಸ್ವಿಯಾಗಿದ್ದಾರೆ. ಆಯಾ ಪಾತ್ರಗಳ ಪೋಷಣೆಗಳನ್ನು ಎಲ್ಲಾ ಕಲಾವಿದರೂ ಅಷ್ಟೇ ಭಕ್ತಿಯಿಂದ, ಪ್ರೀತಿಯಿಂದ ನಿರ್ವಹಿಸುತ್ತಿದ್ದಾರೆ. ಅದರಲ್ಲಂತೂ ರಾಘವೇಂದ್ರರ ಪಾತ್ರಧಾರಿ ಆ ಪಾತ್ರಕ್ಕೆ ಹೇಳಿಮಾಡಿಸಿದ ಹಾಗಿರುವುದು ನನಗೆ ಬಹಳ ಖುಷಿಕೊಟ್ಟಿದೆ. ಭೂಮಿಕೆಯನ್ನು ಹಂಚುವುದರಲ್ಲೂ ಕಲಾವಿದರ ಆಯ್ಕೆಯಲ್ಲೂ ನಿರ್ದೇಶಕರು ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ.

ಅನೇಕ ಹಾಡುಗಳನ್ನೂ ದಾಸರ ಪದಗಳನ್ನೂ ಒಳಗೊಂಡಿರುವ ಧಾರಾವಾಹಿಯಲ್ಲಿ ಕೆಲವು ಹಾಡುಗಳಂತೂ ಅಮೋಘವಾಗಿವೆ, ವಿದ್ಯಾಭೂಷಣರ ಕಂಠಸಿರಿ ಮನಸ್ಸನ್ನು ಸಹಜಸ್ಥಿತಿಯಲ್ಲಿ ಗೆದ್ದುಬಿಡುತ್ತದೆ. ಒಂದು ದಿನ ಹೀಗೇ ತಡವಾಗಿ ಬಂದು ಊಟಕ್ಕೆ ಕುಂತಿದ್ದೆ, ಹತ್ತು ಗಂಟೆಯಾಗಿತ್ತು. ಸಾಮಾನ್ಯವಾಗಿ ಆ ಹೊತ್ತಿಗೆ ಇದ್ದರೆ ಟಿವಿ ೯ ಬಿತ್ತರಿಸುವ ಜಸ್ಟ್ ಬೆಂಗಳೂರು ನೋಡುವುದು ನನ್ನ ಅಭ್ಯಾಸ. ಆದರೆ ಆ ದಿನ ಮಾತ್ರ ಅದರ ಬದಲು ಯಾಕೋ ಸುವರ್ಣ ವಾಹಿನಿಯನ್ನು ನೋಡಲು ಆರಂಭಿಸಿದ್ದೆ. ಸಂಗೀತ ವಾದ್ಯ ಪರಿಕಕರಗಳಿಲ್ಲದೇ ಸಹಜವಾಗಿ ಕೈತಟ್ಟಿಕೊಂಡು ಹಾಡಿದ ಒಂದು ಹಾಡು ನನ್ನನ್ನು ಇನ್ನೂ ಹಿಡಿದಿಟ್ಟಿದೆ. ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಮಂತ್ರಾಲಯ ಮಠದ ಗುರುವಿನ ಶಿಷ್ಯರೂ ಮಠದ ಕೆಲಸಗಳಲ್ಲಿ ನಿರತರಾಗಿರುವ ಜನರು ಸೇರಿ ಒಂದೆಡೆ ಕುಳಿತು ಹಾಡುವ ಸನ್ನಿವೇಶ. ಶ್ವೇತವಸ್ತ್ರಧಾರೀ ಬ್ರಾಹ್ಮಣ ವೇಷದ ಹತ್ತಾರು ಮಂದಿ ಕೂತು ಹಾಡಿದ ಆ ದೃಶ್ಯಾವಳಿ ಈಗಲೂ ಕಾಡುತ್ತದೆ.

ಪಂಢರಾಪುರವೆಂಬ ಒಂದು ನಗರ
ಅಲ್ಲಿ ವಿಠೋಬನೆಂಬ ಒಬ್ಬ ಸಾಹುಕಾರ....

ನಿಜಕ್ಕೂ ವಿಠೋಬ ಸಾಹುಕಾರನೇ ಹೌದು. ಮಹಾರಾಷ್ಟ್ರದ ಇಂದಿನ ಮರಾಠಾವಾಡಾ[ಹಿಂದೆ ವಿದರ್ಭದಲ್ಲಿತ್ತು]ದಲ್ಲಿರುವ ತನ್ನ ಆಲಯ ಶ್ರೀಮಂತಿಕೆಯಿಂದ ಕೂಡಿದ್ದರೂ ಆ ಜಿಲ್ಲೆಯಾದ್ಯಂತ ರೈತರು ಅನುಭವಿಸುತ್ತಿರುವ ಯಾತನೆಯನ್ನು ಮಾತ್ರ ಆತ ಯಾಕೆ ಕೇಳುತ್ತಿಲ್ಲ ಎಂಬುದು ನನಗೆ ಪ್ರಶ್ನೆಯಾಗಿ ಹಾಗೇ ಉಳಿದಿದೆ! ವರ್ಷವೂ ಕೋಟ್ಯಂತರ ಜನ ಯಾತ್ರೆಬಂದು ದರ್ಶನಮಾಡಿ ಪುನೀತರಾಗುವ ಸ್ಥಳ ಪಂಢರಾಪುರ. ಪಂಢರೀನಾಥನಿಗೆ ಎರಡೇ ಹಸ್ತ! ಸೊಂಟದಮೇಲೆ ಕೈಇಟ್ಟು ನಿಂತ ವಿಠಲನಿಗೆ ಮೀನಿನಾಕೃತಿಯ ಎರಡು ಕಿವಿಗಳು. ಅನೇಕ ಸಾಧು ಸಂತರು, ಸನ್ಯಾಸಿಗಳು, ವಿರಕ್ತರು ಹೀಗೇ ಹಲವಾರು ತೆರನಾದ ಭಕ್ತ-ಭಾವುಕರು ದಿಂಡಿ ಭಜನೆಮಾಡುವುದು ಅಲ್ಲಿನ ವಿಶೇಷ. ವಿಠೋಬ ಎಂದುಬಿಟ್ಟರೆ ಮಹಾರಾಷ್ಟ್ರದ ಜನತೆಗೆ ಅಚ್ಚುಮೆಚ್ಚು. ಹಾಡುತ್ತಾ ಕುಣಿಯುತ್ತಾ ಆತನನ್ನು ಓಲೈಸುವಲ್ಲಿ ಸಫಲರಾಗುತ್ತಾರೆ. ಉತ್ತರಕರ್ನಾಟಕದ ಗಾಣಗಾಪುರ ಕ್ಷೇತ್ರಕ್ಕೆ ಬಂದವರು ಪಂಢರಾಪುರಕ್ಕೆ ಹೋಗುವುದು ಅಥವಾ ಪಂಢರಾಪುರಕ್ಕೆ ಬಂದವರು ಗಾಣಗಾಪುರಕ್ಕೆ ಬರುವುದು ಯಾತ್ರಾರ್ಥಿಗಳ ರೂಢಿ. ಕೆಲವೊಮ್ಮೆ ಈ ಎರಡರ ಜೊತೆಗೆ ಶಿರಡಿ ಕೂಡ ಯಾತ್ರೆಯ ಪಟ್ಟಿಗೆ ಸೇರ್ಪಡೆಗೊಳ್ಳುತ್ತದೆ.


ವಿಠೋಬ ಭಕ್ತಾನುರಾಗಿ. ಭಜನೆಮಾಡುತ್ತಾ ಹೃದಯವನ್ನು ಸಮರ್ಪಿಸಿದರೆ ಏನನ್ನೇ ಕೇಳಿದರೂ ಒಲ್ಲೆ ಎನ್ನದ ಸ್ನೇಹಿತ! ಆತನ ಮೇಲೆ ಮರಾಠಿ ಅಭಂಗಗಳು, ಭಜನೆಗಳು, ಸಂಕೀರ್ತನೆಗಳು, ದೇವರನಾಮಗಳು ಅದೆಷ್ಟೋ ಇವೆ. ಕೆಲವೊಮ್ಮೆ ಅಹೋರಾತ್ರಿ ಜಾಗರಣೆನಡೆಸುತ್ತಾ ಮಾಡುವ ಭಜನೆಗಳಲ್ಲಿ ಕುಣಿತವೂ ಸೇರಿರುತ್ತದೆ. ನಾವು ಚಿಕ್ಕವರಿದ್ದಾಗ ನಮ್ಮೂರಿನ ಮಹಾವಿಷ್ಣು ದೇವಸ್ಥಾನದಲ್ಲೂ ಒಂದಷ್ಟು ಮರಾಠಿ ಭಜನೆಗಳನ್ನು ಹಿರಿಯರು ನಮಗೆ ಹೇಳಿಕೊಟ್ಟಿದ್ದರು. ಅರ್ಥ ಗೊತ್ತಿರಲಿಲ್ಲ. ಆದರೂ ಹಾಡಲು ತುಂಬಾ ಹಾಯಾಗಿರುವುದರಿಂದ ಭಜನೆಮಾಡುತ್ತಿದ್ದೆವು. " ಜೈ ಜೈ ವಿಠೋಬಾ ರಕುಮಾಯಿ ಮಹರಾಜ ವಿಠೋಬಾ ರಕುಮಾಯಿ "--ಇಂತಹ ಹಲವು ಹಾಡುಗಳು ಇಂದಿಗೂ ನೆನಪಿಗೆ ಬರುತ್ತವೆ. ಬೆಳಗಿನಜಾವದಲ್ಲಿ ಮರಾಠಿ ಭಜನೆಗಳು ಎಷ್ಟು ಚೆನ್ನಾಗಿರುತ್ತವೆ ಎಂದರೆ ಆ ಮಾಯೆಯಲ್ಲಿ ನಾವು ದೇವರನ್ನು ಕಾಣುತ್ತಾ ಭಾಷೆಯ ಗಡಿಯನ್ನೂ ಮೀರಿಬಿಡುತ್ತೇವೆ. ಯಾಕೆ ಈ ರೀತಿಯ ಭಜನೆ ಅಥವಾ ಸೇವೆ ವಿಠೋಬನಿಗೆ ಪ್ರೀತಿ ಎಂಬುದರ ಕುರಿತು ಅಲ್ಲಿನ ಸ್ಥಳಪುರಾಣ ಕೇಳಿ ಸ್ವಾರಸ್ಯಕರವಾಗಿದೆ:

ದಂಡಿರವನ ಎಂಬ ಅಡವಿಯಲ್ಲಿ ಜಾನು ಮತ್ತು ಸತ್ಯವತಿ ಎಂಬ ಬಡ ದಂಪತಿ ವಾಸವಾಗಿರುತ್ತಾರೆ. ಅವರಿಗೊಬ್ಬ ಮಗ ಪುಂಡಲೀಕ. ಮಗ ಪ್ರಾಯಪ್ರಬುದ್ಧನಾಗಿ ಮದುವೆಯಾಗುವವರೆಗೆ ತಂದೆ-ತಾಯಿಗಳನ್ನು ಪ್ರೀತಿಯಿಂದ ಕಾಣುತ್ತಿದ್ದ. ಯಾವಾಗ ಮದುವೆಯಾಯಿತೋ ಆಗ ಪುಂಡಲೀಕನಿಗೆ ದುರ್ಬುದ್ಧಿ ಬಂದುಬಿಟ್ಟಿತು. ಯುವ ದಂಪತಿ ಮುದಿ ದಂಪತಿಯನ್ನು ತೀರಾ ಹೀನಾಯವಾಗಿ ಕಾಣಹತ್ತಿದರು. ಅವರನ್ನು ಪೀಡಿಸಿ ದುಡಿಸಿಕೊಳ್ಳ ಹತ್ತಿದ್ದರು. ಮಗ-ಸೊಸೆ ಕೊಡುವ ಕಷ್ಟ ತಾಳಲಾರದೇ ವೃದ್ಧ ದಂಪತಿ ತಾವು ಕಾಶೀ ಯಾತ್ರೆಗೆ ಹೋಗುವುದಾಗಿ ಸುಮ್ಮನೇ ಹೇಳಿದರು. ಅದನ್ನೇ ಗಟ್ಟಿಯಾಗಿ ಹಿಡಿದುಕೊಂಡ ಪುಂಡಲೀಕ ತಾವೂ ನಿಮ್ಮ ಜೊತೆಗೂಡುತ್ತೇವೆ ಎಂದ ಮಾತ್ರವಲ್ಲ ಎಲ್ಲರೂ ಹೊರಡುವಂತೇ ಮಾಡಿಬಿಟ್ಟ. ಮಗ-ಸೊಸೆ ಕುದುರೆಯೊಂದರ ಮೇಲೆ ಪ್ರಯಾಣಿಸುತ್ತಿದ್ದರೆ ಅಪ್ಪ-ಅಮ್ಮ ಕುದುರೆಯ ಪಕ್ಕ ಕಾಲ್ನಡಿಗೆಯಲ್ಲಿ ಸಾಗಿದ್ದರು.

ನಿತ್ಯವೂ ಆಹಾರಕ್ಕಾಗಿ ಅಪ್ಪ-ಅಮ್ಮ ಅದೂ ಇದೂ ಕೆಲಸಮಾಡುವಂತೇ ಆಜ್ಞಾಪಿಸುತ್ತಿದ್ದ ಪುಂಡಲೀಕ ರಾತ್ರಿ ಎಲ್ಲಾದರೂ ತಂಗುತ್ತಾ ಅಲ್ಲಿ ತನ್ನ ಕುದುರೆಯನ್ನು ಸ್ವಚ್ಛಗೊಳಿಸಿ ಅಣಿಗೊಳಿಸಲು ಅಪ್ಪ-ಅಮ್ಮನಿಗೆ ತಾಕೀತು ಮಾಡುತ್ತಿದ್ದ. ಯಾಕಾದರೂ ಯಾತ್ರೆಗೆ ಹೋಗುತ್ತೇವೆಂದು ಹೇಳಿದೆವಪ್ಪಾ ಎನಿಸುವಷ್ಟು ತೊಂದರೆ ಕೊಡುತ್ತಿದ್ದ ಮಗನ ನಡಾವಳಿಯನ್ನು ಅನುಭವಿಸಿ ಪಾಲಕರು ಕಣ್ಣೀರಿನಲ್ಲಿ ಕೈತೊಳೆಯುತ್ತಾ ದಿನದೂಡುತ್ತಿದ್ದರು. ಬಹುಪ್ರಯಾಸದಿಂದ ಅಂತೂ ಕಾಶೀಪಟ್ಟಣವನ್ನು ತಲ್ಪಿದರು. ಅಲ್ಲಿದ್ದ ಕುಕ್ಕುಟಸ್ವಾಮಿ ಎಂಬ ಸಂತರ ಆಶ್ರಮದಲ್ಲಿ ತಂಗಲು ಏರ್ಪಾಡುಮಾಡಿಕೊಂಡರು. ನಡೆದೂ ನಡೆದೂ ಇನ್ನಾಗದು ಎಂಬ ಸ್ಥಿತಿಗೆ ತಲ್ಪಿದ್ದ ವೃದ್ಧ ದಂಪತಿಗೆ ವಾರದ ಕಾಲವಾದರೂ ಕಾಶಿಯಲ್ಲೇ ಇರಬೇಕಾದ ಅನಿವಾರ್ಯತೆ ಇತ್ತು. ಅದಕ್ಕೆ ಆಶ್ರಮದಲ್ಲಿ ಅನುಮತಿಯೂ ಸಿಕ್ಕಿತು. ಕಾಶೀ ವಿಶ್ವನಾಥನನ್ನು ನೆನೆಯುತ್ತಾ ದಂಪತಿ ಹಾಗೇ ವಿರಮಿಸುತ್ತಿದ್ದರು.

ಒಂದು ರಾತ್ರಿ ಅಕಸ್ಮಾತ್ ಮಗ ಪುಂಡಲೀಕನಿಗೆ ಯಾಕೋ ಎಚ್ಚರವಾಗಿಹೋಯ್ತು. ನೋಡುತ್ತಾನೆ ಹೊರಗಿನಿಂದ ೪-೫ ಮಂದಿ ಕೊಳೆಯಾದ ಸೀರೆ ಧರಿಸಿದ ಸುಂದರ ತರುಣಿಯರು ಕುಕ್ಕುಟಸ್ವಾಮಿಯ ಆಶ್ರಮವನ್ನು ಪ್ರವೇಶಿಸುತ್ತಿದ್ದರು. ಹಾಗೆ ಬಂದವರು ಸ್ವಾಮಿಯ ಮನೆಯನ್ನು ಗುಡಿಸಿ, ಬೇಕಾದ ಸಾಮಗ್ರಿಗಳನ್ನು ಅಣಿಗೊಳಿಸಿಟ್ಟು ನಂತರ ಆಶ್ರಮದ ಪ್ರಾರ್ಥನಾ ಕೊಠಡಿಗೆ ತೆರಳಿದರು. ತುಸು ಹೊತ್ತಿನ ಬಳಿಕ ಮರಳಿ ಹೊರಹೊರಟ ಅವರ ಸೀರೆಗಳು ಆಗ ಪರಿಶುಭ್ರವಾಗಿದ್ದವು! ಇದೆಲ್ಲಾ ಏನು ವಿಚಿತ್ರ ಎಂದು ತನ್ನ ಕಣ್ಣುಗಳನ್ನೇ ನಂಬದಾದ ಪುಂಡಲೀಕ ಮಾರನೇ ರಾತ್ರಿಯೂ ಎಚ್ಚೆತ್ತುಕೊಂಡಿದ್ದು ತರುಣಿಯರು ಬಂದಾಗ ಅವರ ಹತ್ತಿರ ನಡೆದು " ನೀವೆಲ್ಲಾ ಯಾರು? ಇಲ್ಲಿಗೆ ಯಾಕೆ ಹೀಗೆ ಬರುತ್ತೀರಿ? ನಿಮ್ಮ ಬಟ್ಟೆಗಳು ಅದು ಹೇಗೆ ಕ್ಷಣಾರ್ಧದಲ್ಲಿ ಶುಭ್ರಗೊಳ್ಳುತ್ತವೆ ? " ಎಂದೆಲ್ಲಾ ಪ್ರಶ್ನೆಗಳನ್ನಿತ್ತನು. ತಾವು ಪುಣ್ಯನದಿಗಳಾದ ಗಂಗಾ, ಯಮುನಾ, ಸರಸ್ವತೀ ಮೊದಲಾದವರೆಂತಲೂ ಜನರು ಪ್ರತಿನಿತ್ಯ ತಮ್ಮ ಪಾಪಗಳನ್ನು ತೊಳೆಯಲು ನದಿಗಳಲ್ಲಿ ಸ್ನಾನಮಾಡುವುದರಿಂದ ತಮ್ಮ ಸೀರೆಗಳು ಮಲಿನವಾಗುತ್ತವೆ ಎಂದೂ ತಿಳಿಸಿ " ತಂದೆ-ತಾಯಿಗಳಿಗೆ ಕಷ್ಟಕೊಡುತ್ತಿರುವ ನಿನ್ನಂತಹ ಪರಮಪಾಪಿಯನ್ನು ಮಾತ್ರ ಕಾಣಲೇ ಇಲ್ಲ" ಎಂದುಬಿಟ್ಟರು.

ಪುಂಡಲೀಕನಿಗೆ ತಾನು ಮಡುತ್ತಿರುವ ತಪ್ಪಿನ ಅರಿವಾಯಿತು. ಆ ಕ್ಷಣದಿಂದಲೇ ಪುಂಡಲೀಕ ಬದಲಾಗಿ ಹೋದ. ತಂದೆ-ತಾಯಿಗಳ ಸೇವೆಯೇ ತನ್ನ ಪರಮಭಾಗ್ಯ ಮತ್ತು ಆದ್ಯ ಕರ್ತವ್ಯ ಎಂದುಕೊಂಡ ಆತ ತನಗೇ ಶರೀರ ಸ್ವಾಸ್ಥ್ಯವಿಲ್ಲದಿದ್ದರೂ ಮಾತಾ-ಪಿತೃಗಳ ಸೇವೆಯನ್ನು ತೊರೆಯದಾದ. ಮಗನಲ್ಲಾದ ಈ ಅಪೂರ್ವ ಬದಲಾವಣೆ ಕಂಡು ದೇವರೇ ಅವನಿಗೆ ಬುದ್ಧಿ ಕೊಟ್ಟಿರಬೇಕೆಂದು ವೃದ್ಧರು ತಿಳಿದರು. ಯಾವುದೇ ಕೆಲಸದಲ್ಲೂ ತನ್ನ ತಾದಾತ್ಮ್ಯತೆ ಇದ್ದರೆ ಅದು ದೇವರ ಸೇವೆಯಾಗುತ್ತದೆ. ಅದರಂತೇ ಮಾತಾ-ಪಿತೃಗಳ ಸೇವೆಯನ್ನು ಅತಿ ವಿಶೇಷವಾಗಿ ಮಾಡುತ್ತಿರುವ ಪುಂಡಲೀಕನ ಭಕ್ತಿಗೆ ವೈಕುಂಠದ ಮಹಾವಿಷ್ಣು ಪ್ರಸನ್ನಾನಾಗಿ ಪುಂಡಲೀಕನನ್ನು ಕಾಣಲು ಹೊರಟುಬಿಟ್ಟ! ಭಗವಂತ ಮನೆಬಾಗಿಲು ಬಡಿದಾಗ ಪುಂಡಲೀಕ ತಂದೆ-ತಾಯಿಗಳಿಗೆ ಊಟ ನೀಡುತ್ತಿದ್ದ. ಬಾಗಿಲೆಡೆಗೆ ಒಂದು ಇಟ್ಟಿಗೆ ಎಸೆದು ಅದರಮೇಲೆ ನಿಂತುಕೊಳ್ಳುವಂತೆಯೂ ತಾನು ತಂದೆ-ತಾಯಿಗಳ ಸೇವೆ ಮುಗಿದನಂತರ ಬರುವುದಾಗಿಯೂ ಕೂಗಿ ಹೇಳಿದ. ಬಂದಾತ ಭಗವಂತ ಎಂಬ ಸಂದೇಹ ಬಂದಿದ್ದರೂ ತನ್ನ ಕರ್ತವ್ಯದಲ್ಲಿ ವಿಮುಖನಾಗದೇ ಹಾಗೆ ಹೊರಗೇ ಕಾಯಿಸಿದ.

ಇಟ್ಟಿಗೆಯಮೇಲೆ ನಿಂತ ಮಹಾವಿಷ್ಣು ಸಾದಾ ಮಾನವ ರೂಪದಲ್ಲಿದ್ದ! ಸೊಂಟದಮೇಲೆ ಕೈ ಇಟ್ಟುಕೊಂಡು ಕಾದು ನಿಂತಿದ್ದ. ಹೊರಗೆ ಬಂದಾಗ ಪುಂಡಲೀಕನಲ್ಲೇ ಭಗವಂತ ಆತನ ಕ್ಷಮೆಯಾಚಿಸಿದ. ಸೇವಾ ಭಕ್ತಿಯ ಪಾರಮ್ಯವನ್ನು ಕಂಡು ಆನಂದಬಾಷ್ಪ ಸುರಿಸಿದ ವಿಠೋಬ ತಾನು ಯಾರೆಂಬುದನ್ನೂ ತಾನು ಬಂದಿದ್ದೇಕೆ ಎಂಬುದನ್ನೂ ಪುಂಡಲೀಕನಿಗೆ ಅರುಹಿದ. ತನಗೆ ಕೊಟ್ಟ ಈ ದರುಶನ ಭಾಗ್ಯ ಅದೇ ರೂಪದಲ್ಲಿ ತನ್ನಂತಹ ಸಕಲ ಭಕ್ತರಿಗೂ ಇದೇ ಜಾಗದಲ್ಲಿ ಸತತವಾಗಿ ಸಿಗುತ್ತಿರಲಿ ಎಂದು ಪ್ರಾರ್ಥಿಸಿದ ಪುಂಡಲೀಕ. ವಿಠೋಬ "ತಥಾಸ್ತು" ಎಂದು ಅಲ್ಲೇ ನಿಂತುಬಿಟ್ಟ! ನಂತರ ಅದೇ ಜಾಗದಲ್ಲಿ ದೇವಸ್ಥಾನದ ನಿರ್ಮಾಣವಾಯ್ತು.
ಅದೃಷ್ಟಪೂರ್ವಂ ಹೃಷಿತೋಸ್ಮಿ ದೃಷ್ಟ್ಯಾ
ಭಯೇನ ಚ ಪ್ರವ್ಯಥಿತಂ ಮನೋ ಮೇ |
ತದೇವ ಮೇ ದರ್ಶಯ ದೇವರೂಪಂ
ಪ್ರಸೀದ ದೇವೇಶ ಜಗನ್ನಿವಾಸ ||

ಮುಂದೊಂದು ಘಟನೆ ಹೀಗಿದೆ: ಮುಂದಿನ ಸಂತ ನಾಮದೇವ ಮಗುವಾಗಿದ್ದಾಗ ಆತನ ತಾಯಿ ಪ್ರತಿನಿತ್ಯ ಮಗನನ್ನು ಕರೆದುಕೊಂಡು ವಿಠೋಬನಿಗೆ ನೈವೇದ್ಯ ಸಲ್ಲಿಸಲು ಬರುತ್ತಿದ್ದಳು. ಒಂದೆರಡು ದಿನ ಅವಳಿಗೆ ಕಾರಣಾಂತರಗಳಿಂದ ದೇವಸ್ಥಾನಕ್ಕೆ ಬರಲಾಗಲಿಲ್ಲ, ಚಿಕ್ಕವನಾಗಿದ್ದ ಮಗನನ್ನು ನೈವೇದ್ಯ ಅರ್ಪಿಸುವಂತೇ ಕಳಿಸಿದ್ದಳು. ಮನೆಯಲ್ಲಿ ಮಡಿಯಲ್ಲಿ [ಸ್ವಚ್ಛತೆಯಲ್ಲಿ] ಮಾಡಿದ ಅಡಿಗೆಯನ್ನು ಪ್ರಥಮವಾಗಿ ದೇವರಮುಂದಿಟ್ಟು ಅದಕ್ಕೆ ಸುತ್ತ ನೀರನ್ನು ಪರಿಷೇಚಿಸಿ ದೇವರಲ್ಲಿ ಸ್ವೀಕರಿಸು ಎಂದು ಪ್ರಾರ್ಥಿಸುವುದು ವಾಡಿಕೆ. ಹಾಗೇ ಮಾಡಿದ ಮಗು ಭಗವಂತನ ಬರುವಿಕೆಗಾಗಿ ಕಾದ. ಕಾದ ಕಾದ ಕಾದ ಭಗವಂತ ಬರಲೇ ಇಲ್ಲ. ಬೇಸರಗೊಂಡ ನಾಮದೇವ ತನ್ನ ಹಣೆಯನ್ನು ಭವಂತನ ಪಾದಕ್ಕೆ ಜಪ್ಪಿ ಜಪ್ಪಿ ಘಾಸಿಮಾಡಿಕೊಳ್ಳತೊಡಗಿದ. ಬಾಲಕನ ಭಕ್ತಿ ಮತ್ತು ಮುಗ್ಧತೆಯನ್ನು ಕಂಡ ಭಗವಂತ ಪ್ರತ್ಯಕ್ಷನಾಗಿ ನೈವೇದ್ಯವನ್ನು ಸ್ವೀಕರಿಸಿ ನಾಮದೇವನ ಮೈದಡವಿದ! " ನಿನ್ನ ದರುಶನ ಪಡೆಯಲು ಬರುವ ಕೋಟ್ಯಂತರ ಜನ ನನ್ನನ್ನು ಸ್ಪರ್ಶಿಸಿ ಆಮೇಲೆ ನಿನ್ನನ್ನು ದರ್ಶಿಸುವಂತೇ ಅನುಗ್ರಹಮಾಡು ಎಂದ ಬಾಲಕನಿಗೆ ಭಗವಂತ " ತಥಾಸ್ತು" ಎಂದ. ನಾಮದೇವ ಇಂದಿಗೂ ಅಲ್ಲಿನ ಪ್ರಥಮ ಮೆಟ್ಟಿಲಲ್ಲಿ ಇದ್ದು ಎಲ್ಲರನ್ನೂ ಕಂಡು ಹರ್ಷಿಸುತ್ತಾನೆ ಮತ್ತು ನಿತ್ಯವೂ ಭಗವಂತನೊಡನೆ ಸಂವಾದ ಮಾಡುತ್ತಾನೆ ಎಂಬುದು ಅಲ್ಲಿನ ನಂಬಿಕೆ.

|| ಮಾಸಾನಾಂ ಮಾರ್ಗಶೀರ್ಷೋಹಮೃತೂನಾಂ ಕುಸುಮಾಕರಃ || ಎಂದು ಭಗವಂತ ಗೀತೆಯಲ್ಲಿ ಅಪ್ಪಣೆ ಕೊಡಿಸಿದ್ದಾನೆ. ಮಾಸಗಳಲ್ಲೇ ಮಾರ್ಗಶೀರ್ಷ ಮಾಸ ತಾನು ಎಂದಿದ್ದಾನೆ. ಈ ಮಾಸದಲ್ಲಿ ವಿಷ್ಣು ಕ್ಷೇತ್ರಗಳ ದರ್ಶನ, ಅಲ್ಲಿನ ಧೂಳಿಯ ಸ್ಪರ್ಶನ, ಅಲ್ಲಿನ ಸೇವೆಗಳ ಅವಲೋಕನ, ಕೀರ್ತನ-ಸಂಕೀರ್ತನಗಳ ಗಾಯನ, ವಾಚನ ಅತ್ಯಂತ ಪುಣ್ಯಪ್ರದ ಎಂಬುದು ಬಲ್ಲವರ ಅನಿಸಿಕೆ. ಗುರು ರಾಘವೇಂದ್ರರು ಧಾರಾವಾಹಿಯ ರೂಪದಲ್ಲಿ ವಿಠೋಬನ ನೆನಪನ್ನು ತಂದಿದ್ದಕ್ಕೆ ಅವರಿಗೆ ನನ್ನ ನಮನ, ಬಹುಶಃ ನಿಮ್ಮದೂ ಕೂಡಾ ...

ಪಂಢರಾಪುರವೆಂಬ ಒಂದು ನಗರ
ಅಲ್ಲಿ ವಿಠೋಬನೆಂಬ ಒಬ್ಬ ಸಾಹುಕಾರ....

ವಿಠೋಬನಿರುವುದು ನದಿತೀರ
ಅಲ್ಲಿ ಭಂಡಾರಿ ಭಜನೆಯು ವ್ಯಾಪಾರ ...