ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, March 29, 2010

ಹನುಮಂತನ ವಿಸ್ಮೃತಿಹನುಮಂತನ ವಿಸ್ಮೃತಿ


ಅತುಲಿತ
ಬಲಧಾಮಂ ಹೇಮ ಶೈಲಾಭ ದೇಹಂ
ದನುಜವನಕೃಶಾನುಂ ಜ್ಞಾನಿನಾಮಗ್ರಗಣ್ಯಮ್ |
ಸಕಲ ಗುಣನಿಧಾನಂ ವಾನರಾಣಾಮಧೀಶಂ
ರಘುಪತಿವರಭಕ್ತಂ ವಾತಜಾತಂ ನಮಾಮಿ ||ಎಲ್ಲಾ ಓದುಗ ಮಿತ್ರರಿಗೆ ಆಂಜನೇಯನ ಹುಟ್ಟಿದ ಹಬ್ಬದ ಶುಭಾಶಯಗಳು !

ಇವತ್ತು ಆಂಜನೇಯನ ನೆನಪಿನಲ್ಲಿ ಚಿಕ್ಕದೊಂದು
ಸಂದೇಶ--

ಸೀತೆಯನ್ನು ಹುಡುಕಲು ಹೊರಟ ಆಂಜನೇಯನಿಗೆ ಋಷಿಯೊಬ್ಬರು ದಾರಿಯಲ್ಲಿ ಸಿಕ್ಕು ಸೀತೆ ಎಲ್ಲಿರುವಳೆಂಬ ಭಾತ್ಮೆ ಕೊಡುತ್ತಾರೆ. ನಿಶ್ಚಲ ತಪೋನಿರತರಾಗಿದ್ದ ಅವರ ಜಡೆ ಭೂಮಿಗಿಳಿದು ಹುದುಗಿಹೋಗಿ ಅವರನ್ನು ಎತ್ತಲಾಗದಿದ್ದರೂ ಹನುಮ ತನ್ನ ಭೀಮಬಲದಿಂದ ಅವರನ್ನು ಎತ್ತಿ ಸಂತುಷ್ಟಗೊಳಿಸಿ ಅವರಿಂದ ಅವರ ತಪೋ ಬಲದಿಂದ ಸೀತೆ ಎಲ್ಲಿರುವಳೆಂಬ ಸುದ್ದಿಯನ್ನು ತಿಳಿಯುತ್ತಾನೆ. ಸೀತೆ ಸಮುದ್ರದಾಚೆಗಿನ ಲಂಕಾಪಟ್ಟಣದಲ್ಲಿ ರಾವಣನ ರಾಜ್ಯದಲ್ಲಿ ಅಶೋಕವನವೆಂಬಲ್ಲಿ ಶೋಕತಪ್ತಳಾಗಿರುವಳು ಎಂದು ತಿಳಿದು ಮರುಗುತ್ತಾನೆ. ಬಳಿಕ ತನ್ನ ವಾನರ ಸಮೂಹವನ್ನು ಕರೆದುಕೊಂಡು ಲಂಕೆಗೆ ಹೋಗಲು ಯಾರು ಸಿಗಬಹುದೆಂದು ವಿಚಾರಿಸುತ್ತಾನೆ. ಸಮುದ್ರದಕ್ಕೆ ಹತ್ತಿರದ ಎತ್ತರದ ಒಂದು ಪ್ರದೇಶದಲ್ಲಿ ಕುಳಿತು ಎಲ್ಲರೂ ವಿಚಾರಿಸುತ್ತಿರಲಾಗಿ ಯಾರೂ ಸಾಗರೋಲ್ಲಂಘನ ಮಾಡುವವರು ಸಿಗುವುದಿಲ್ಲ. ಅಂಗದ,ಜಾಂಬವ ಮೊದಲಾದ ಕಪಿವೀರರೆಲ್ಲ ಮನದಲ್ಲಿ ತಮ್ಮ ಅಘೋಷಿತ ನಾಯಕ ಶ್ರೀಮದಾಂಜನೇಯನನ್ನು ಪ್ರಾರ್ಥಿಸುತ್ತಾರೆ. ಆಂಜನೇಯ ಸಮುದ್ರ ಕಂಡವನೇ ಸಣ್ಣಗಾಗಿಬಿಟ್ಟಿದ್ದಾನೆ! ಎಲ್ಲಿ ಏನನ್ನೂ ಮಾಡಬಲ್ಲ ಘನ ದಾರ್ಷ್ಟ್ಯ ವ್ಯಕ್ತಿತ್ವದ ಆಂಜನೇಯ, ಕಬ್ಬಿಣದ ಕಡಲೆಯನ್ನೂ ಕಟರ್ ಕಟರ್ ಎಂದು ಜಗಿದುಬಿಡುವ ಹನುಮ, ಮೆಘವನ್ನೂ ನಾಚಿಸುವ ವೇಗದಲ್ಲಿ ನಿಸ್ಸೀಮನಾದ ಮಾರುತಿ, ಜಾಗದ ಗೊಡವೆ ನೋಡದೆ ಬೆಳೆದುನಿಲ್ಲಬಹುದಾದ ಇಚ್ಛಾ ಶಕ್ತಿಯ ಶಾರೀರಿ, ವಜ್ರಮುಷ್ಠಿಯಿಂದ ಗುದ್ದುತ್ತೇನೆಂದು ಹೊರಟರೆ ಯಾರಿಂದಲೂ ತಪ್ಪಿಸಲಾರದ ಹಠಸಾಧಕ, ರಾಮನ ಇರವಿಗೆ ಅರಿವಿಗೆ ಮರುಗಿ-ರಾಮನ ಸತತ ಸಂತತ ದಾಸ್ಯವನ್ನು ತ್ರಿಕರಣಪೂರ್ವಕ ಒಪ್ಪಿ ನಡೆತಂದ ಮಹಾನುಭಾವ ಇಂದು ಸುಮ್ಮನೆ ಒಂದು ಕಡೆ ಕುಳಿತುಬಿಟ್ಟಿದ್ದಾನೆ.

ಹನುಮನಿಗೆ ತನ್ನ ಶಕ್ತಿಯ ಅರಿವಿಲ್ಲ, ಆತ ಪಾರ್ವತಿ-ಪರಮೇಶ್ವರರ ವರದಿಂದ ಭುವಿಯದಲ್ಲದ ಒಂದಂಶ ರುದ್ರಾಂಶ ಸಂಭೂತನಾಗಿ ವಾಯುದೇವನಿಂದ ಸಾಗಿಸಲ್ಪಟ್ಟು ಅಂಜನಾದೇವಿಯ ಗರ್ಭದಲ್ಲಿ ಅಂಕುರಗೊಂಡು ಬೆಳೆದ ವಿಶಿಷ್ಟ ಶಕ್ತಿಯ ಸಾಕಾರ ಎಂಬುದು ಅವನಿಗೆ ಗೊತ್ತಿಲ್ಲ. [ಇಲ್ಲಿ ಗಮನಿಸಬೇಕಾದ ಒಂದು ಸಂದರ್ಭ --ಮಹಾವಿಷ್ಣು ಶ್ರೀರಾಮನಾಗಿ ಬಂದಾಗ, ಪರೋಕ್ಷ ಸಹಾಯಕ್ಕಾಗಿ ಪರಮೇಶ್ವರ ತನ್ನ ಪ್ರಬಲ ಅಂಶವೊಂದನ್ನು ಭೂಮಿಗೆ ಕಳಿಸಿ ತನ್ಮೂಲಕ ಸೇವೆಗೈಯ್ಯುವುದು ಇದು ಹರಿ-ಹರರು ಹೇಗೆ ಒಂದೇ ಎಂಬ ಗುರುತನ್ನು ತೋರಿಸಿಕೊಡುತ್ತದೆ! ] ಕುಳಿತುಬಿಟ್ಟಿದ್ದಾನೆ, ಸಣ್ಣ ಹುಡುಗ ಕುಳಿತಂತೆ, ಏನೋ ಕಾಯಿಲೆಗೋ ಕಷ್ಟಕ್ಕೋ ಸೋತು ನಾವೆಲ್ಲಾ ಕುಳಿತಂತೆ, ಬಹಳ ಚಿತಾಕ್ರಾಂತನಾಗಿ ಕುಳಿತಿದ್ದಾನೆ. ಅವನಿಗೆ ಸಮುದ್ರೋಲ್ಲಂಘನ ಮಾಡಿ ಸೀತಾಮಾತೆಯನ್ನು ಯಾರು ಹುಡುಕಿಯಾರು ಎಂಬುದಷ್ಟೇ ಚಿಂತೆ. ಆ ಚಿಂತೆಯಲ್ಲಿ ಸೊರಗಿ ಸುಣ್ಣವಾಗಿ ಕ್ಷಣಕಾಲ ಬಸವಳಿದುಹೋಗಿದ್ದಾನೆ ಹನುಮ. ಆ ಸಮಯ ವೃದ್ಧನಾದ ಜಾಂಬವ ಹತ್ತಿರ ಬಂದಿದ್ದಾನೆ, ಹನುಮನಿಗೆ ಅವನಲ್ಲಿರುವ ಶಕ್ತಿಯನ್ನು ಹುರಿದುಂಬಿಸಿ ನೆನಪಿಗೆ ತಂದುಕೊಡುತ್ತಾನೆ. ಬಹಳ ಸಮಯದವರೆಗೆ ಹೇಳಿದ ಮೇಲೆ ನಮ್ಮ ಹನುಮಣ್ಣ ರೆಡಿ! ಹೀಗೇ ಹನುಮಂತನ ವಿಸ್ಮೃತಿ ಮಾಯವಾಗಿ ತಾನು ಜಿಗಿದೇ ಜಿಗಿಯುತ್ತೇನೆ ಎಂಬ ವಿಶ್ವಾಸ ಮೂಡುತ್ತದೆ, ನಂತರ ನಿಜಕ್ಕೂ ಆತ ಜಿಗಿದದ್ದು, ಲಂಕೆಗೆ ಸಾಗಿದ್ದು ರಾಮಾಯಣದ ಮಹತ್ತರ ಘಟ್ಟ. ಹನುಮನಿಲ್ಲದೆ ರಾಮಾಯಣ ಕಲ್ಪಿಸಲೂ ಸಾಧ್ಯವಿಲ್ಲ.ಬಲಿಷ್ಠನಾದ ಹನುಮ ಒಂದು ಯಕ್ಕಶ್ಚಿತ ಕಸದಂತೆ ಕುಳಿತುಬಿಟ್ಟಿದ್ದ, ತನ್ನ ಶಕ್ತಿಯ ಅರಿವಿಗೆ ಬಂದಾಗ ಆತ ಪುನಃ ಮಹಾಬಲಿಷ್ಠನಾದ. ನಮ್ಮ ಮನಸ್ಸಲ್ಲೂ ಮನಸ್ಸೆಂಬ ಹನುಮ ಸುಮ್ಮನೇ ಕುಳಿತಿರುತ್ತಾನೆ, ಆತನಿಗೆ ಚಾಲನೆ ಕೊಡಿ, ಆತನಿಗೆ ಪೂರಕ ಸಂದೇಶ ಕೊಡಿ, ನಮಗೂ ಹನುಮಬಲ ಬರಲಿ, ನಾವೆಲ್ಲಾ ಜಿಗಿದು ಈ ಭವಸಾಗರದವನ್ನು ಬಹಳ ಸುಲಭದಲ್ಲಿ ದಾಟುವಂತಾಗಲಿ ಎಂದೂ, ಹನುಮನ ನಿಷ್ಠೆ, ಒಲವು,ಕಾರ್ಯತತ್ಪರತೆ, ಶ್ರದ್ಧೆ ನಮಗೆ ಒದಗಿಬರಲೆಂದೂ ಶ್ರೀ ಹನುಮಂತ ನಲ್ಲಿ ಪ್ರಾರ್ಥಿಸೋಣ.


ಹನುಮ ನಿನ್ನ ನೆನೆಯಲೊಮ್ಮೆ ಬಂತು ಚೈತ್ರ ಪೌರ್ಣಮಿ
ವನದ ತುಂಬ ಹೂವ ಹಾಸಿ ಹಾಡುತ ಜೋಗುಳಗಳ

ರಾಮನಾಗಿ ಮಹಾವಿಷ್ಣು ತಾನು ಬಂದು ಭುವಿಯತಳದಿ
ಭೀಮಬಲದ ನಿನ್ನ ಕರೆದು ಅಪ್ಪಿ ಮುದ್ದನಾಡಿದ
ವ್ಯೋಮಯಾನಗೈದ ನಿನ್ನ ಕಾಮಿತಫಲ ಕೊಡೋ ಎನುತ
ನೇಮ ನಿನ್ನೊಳಿರಿಸಿ ಸತತ ನಾಮಸ್ಮರಣೆ ಮಾಡಲೇ ?

ಇಷ್ಟಮಿತ್ರರೆಲ್ಲ ಸೇರಿ ಸೃಷ್ಟಿ ಯೊಳಗೆ ಸಭೆಯ ಕರೆದು
ಕಷ್ಟಕಳೆಯೆ ನೆನೆದು ಹೆದರಿ ಆತು ನಿನ್ನ ಕರೆದರೂ
ಅಷ್ಟುಗಟ್ಟಿ ದೇಹವೆನಲು ಅಂಬುಧಿಯನು ಜಿಗಿದುನಿಂತ
ಶ್ರೇಷ್ಠನಡೆಯು ನಿನದಾಯ್ತು ಜನುಮದಲ್ಲಿ ಪಾವನ

ಎಲ್ಲಿ ನೋಡೆ ನಿನ್ನ ಶಕುತಿ ಯುಕುತಿ ಸತತ ನೆನಪಿನಲ್ಲಿ
ಮಲ್ಲಿನಾಥಪುರದ ಮಗುವೇ ಕಲ್ಲದೇಹ ನಿನ್ನದೂ
ಬಲ್ಲವರೊಡನಾಡುವಾಗ ದೈನ್ಯತೆಯ ನೆರಳಿನಲ್ಲಿ
ಅಲ್ಲಿ ಬಂತು ಬ್ರಹ್ಮ ಪದವು ಸಾರ್ಥಕತೆಯ ಬಾಳಿನಲ್ಲಿ