ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, March 29, 2010

ಹನುಮಂತನ ವಿಸ್ಮೃತಿ



ಹನುಮಂತನ ವಿಸ್ಮೃತಿ


ಅತುಲಿತ
ಬಲಧಾಮಂ ಹೇಮ ಶೈಲಾಭ ದೇಹಂ
ದನುಜವನಕೃಶಾನುಂ ಜ್ಞಾನಿನಾಮಗ್ರಗಣ್ಯಮ್ |
ಸಕಲ ಗುಣನಿಧಾನಂ ವಾನರಾಣಾಮಧೀಶಂ
ರಘುಪತಿವರಭಕ್ತಂ ವಾತಜಾತಂ ನಮಾಮಿ ||



ಎಲ್ಲಾ ಓದುಗ ಮಿತ್ರರಿಗೆ ಆಂಜನೇಯನ ಹುಟ್ಟಿದ ಹಬ್ಬದ ಶುಭಾಶಯಗಳು !

ಇವತ್ತು ಆಂಜನೇಯನ ನೆನಪಿನಲ್ಲಿ ಚಿಕ್ಕದೊಂದು
ಸಂದೇಶ--

ಸೀತೆಯನ್ನು ಹುಡುಕಲು ಹೊರಟ ಆಂಜನೇಯನಿಗೆ ಋಷಿಯೊಬ್ಬರು ದಾರಿಯಲ್ಲಿ ಸಿಕ್ಕು ಸೀತೆ ಎಲ್ಲಿರುವಳೆಂಬ ಭಾತ್ಮೆ ಕೊಡುತ್ತಾರೆ. ನಿಶ್ಚಲ ತಪೋನಿರತರಾಗಿದ್ದ ಅವರ ಜಡೆ ಭೂಮಿಗಿಳಿದು ಹುದುಗಿಹೋಗಿ ಅವರನ್ನು ಎತ್ತಲಾಗದಿದ್ದರೂ ಹನುಮ ತನ್ನ ಭೀಮಬಲದಿಂದ ಅವರನ್ನು ಎತ್ತಿ ಸಂತುಷ್ಟಗೊಳಿಸಿ ಅವರಿಂದ ಅವರ ತಪೋ ಬಲದಿಂದ ಸೀತೆ ಎಲ್ಲಿರುವಳೆಂಬ ಸುದ್ದಿಯನ್ನು ತಿಳಿಯುತ್ತಾನೆ. ಸೀತೆ ಸಮುದ್ರದಾಚೆಗಿನ ಲಂಕಾಪಟ್ಟಣದಲ್ಲಿ ರಾವಣನ ರಾಜ್ಯದಲ್ಲಿ ಅಶೋಕವನವೆಂಬಲ್ಲಿ ಶೋಕತಪ್ತಳಾಗಿರುವಳು ಎಂದು ತಿಳಿದು ಮರುಗುತ್ತಾನೆ. ಬಳಿಕ ತನ್ನ ವಾನರ ಸಮೂಹವನ್ನು ಕರೆದುಕೊಂಡು ಲಂಕೆಗೆ ಹೋಗಲು ಯಾರು ಸಿಗಬಹುದೆಂದು ವಿಚಾರಿಸುತ್ತಾನೆ. ಸಮುದ್ರದಕ್ಕೆ ಹತ್ತಿರದ ಎತ್ತರದ ಒಂದು ಪ್ರದೇಶದಲ್ಲಿ ಕುಳಿತು ಎಲ್ಲರೂ ವಿಚಾರಿಸುತ್ತಿರಲಾಗಿ ಯಾರೂ ಸಾಗರೋಲ್ಲಂಘನ ಮಾಡುವವರು ಸಿಗುವುದಿಲ್ಲ. ಅಂಗದ,ಜಾಂಬವ ಮೊದಲಾದ ಕಪಿವೀರರೆಲ್ಲ ಮನದಲ್ಲಿ ತಮ್ಮ ಅಘೋಷಿತ ನಾಯಕ ಶ್ರೀಮದಾಂಜನೇಯನನ್ನು ಪ್ರಾರ್ಥಿಸುತ್ತಾರೆ. ಆಂಜನೇಯ ಸಮುದ್ರ ಕಂಡವನೇ ಸಣ್ಣಗಾಗಿಬಿಟ್ಟಿದ್ದಾನೆ! ಎಲ್ಲಿ ಏನನ್ನೂ ಮಾಡಬಲ್ಲ ಘನ ದಾರ್ಷ್ಟ್ಯ ವ್ಯಕ್ತಿತ್ವದ ಆಂಜನೇಯ, ಕಬ್ಬಿಣದ ಕಡಲೆಯನ್ನೂ ಕಟರ್ ಕಟರ್ ಎಂದು ಜಗಿದುಬಿಡುವ ಹನುಮ, ಮೆಘವನ್ನೂ ನಾಚಿಸುವ ವೇಗದಲ್ಲಿ ನಿಸ್ಸೀಮನಾದ ಮಾರುತಿ, ಜಾಗದ ಗೊಡವೆ ನೋಡದೆ ಬೆಳೆದುನಿಲ್ಲಬಹುದಾದ ಇಚ್ಛಾ ಶಕ್ತಿಯ ಶಾರೀರಿ, ವಜ್ರಮುಷ್ಠಿಯಿಂದ ಗುದ್ದುತ್ತೇನೆಂದು ಹೊರಟರೆ ಯಾರಿಂದಲೂ ತಪ್ಪಿಸಲಾರದ ಹಠಸಾಧಕ, ರಾಮನ ಇರವಿಗೆ ಅರಿವಿಗೆ ಮರುಗಿ-ರಾಮನ ಸತತ ಸಂತತ ದಾಸ್ಯವನ್ನು ತ್ರಿಕರಣಪೂರ್ವಕ ಒಪ್ಪಿ ನಡೆತಂದ ಮಹಾನುಭಾವ ಇಂದು ಸುಮ್ಮನೆ ಒಂದು ಕಡೆ ಕುಳಿತುಬಿಟ್ಟಿದ್ದಾನೆ.

ಹನುಮನಿಗೆ ತನ್ನ ಶಕ್ತಿಯ ಅರಿವಿಲ್ಲ, ಆತ ಪಾರ್ವತಿ-ಪರಮೇಶ್ವರರ ವರದಿಂದ ಭುವಿಯದಲ್ಲದ ಒಂದಂಶ ರುದ್ರಾಂಶ ಸಂಭೂತನಾಗಿ ವಾಯುದೇವನಿಂದ ಸಾಗಿಸಲ್ಪಟ್ಟು ಅಂಜನಾದೇವಿಯ ಗರ್ಭದಲ್ಲಿ ಅಂಕುರಗೊಂಡು ಬೆಳೆದ ವಿಶಿಷ್ಟ ಶಕ್ತಿಯ ಸಾಕಾರ ಎಂಬುದು ಅವನಿಗೆ ಗೊತ್ತಿಲ್ಲ. [ಇಲ್ಲಿ ಗಮನಿಸಬೇಕಾದ ಒಂದು ಸಂದರ್ಭ --ಮಹಾವಿಷ್ಣು ಶ್ರೀರಾಮನಾಗಿ ಬಂದಾಗ, ಪರೋಕ್ಷ ಸಹಾಯಕ್ಕಾಗಿ ಪರಮೇಶ್ವರ ತನ್ನ ಪ್ರಬಲ ಅಂಶವೊಂದನ್ನು ಭೂಮಿಗೆ ಕಳಿಸಿ ತನ್ಮೂಲಕ ಸೇವೆಗೈಯ್ಯುವುದು ಇದು ಹರಿ-ಹರರು ಹೇಗೆ ಒಂದೇ ಎಂಬ ಗುರುತನ್ನು ತೋರಿಸಿಕೊಡುತ್ತದೆ! ] ಕುಳಿತುಬಿಟ್ಟಿದ್ದಾನೆ, ಸಣ್ಣ ಹುಡುಗ ಕುಳಿತಂತೆ, ಏನೋ ಕಾಯಿಲೆಗೋ ಕಷ್ಟಕ್ಕೋ ಸೋತು ನಾವೆಲ್ಲಾ ಕುಳಿತಂತೆ, ಬಹಳ ಚಿತಾಕ್ರಾಂತನಾಗಿ ಕುಳಿತಿದ್ದಾನೆ. ಅವನಿಗೆ ಸಮುದ್ರೋಲ್ಲಂಘನ ಮಾಡಿ ಸೀತಾಮಾತೆಯನ್ನು ಯಾರು ಹುಡುಕಿಯಾರು ಎಂಬುದಷ್ಟೇ ಚಿಂತೆ. ಆ ಚಿಂತೆಯಲ್ಲಿ ಸೊರಗಿ ಸುಣ್ಣವಾಗಿ ಕ್ಷಣಕಾಲ ಬಸವಳಿದುಹೋಗಿದ್ದಾನೆ ಹನುಮ. ಆ ಸಮಯ ವೃದ್ಧನಾದ ಜಾಂಬವ ಹತ್ತಿರ ಬಂದಿದ್ದಾನೆ, ಹನುಮನಿಗೆ ಅವನಲ್ಲಿರುವ ಶಕ್ತಿಯನ್ನು ಹುರಿದುಂಬಿಸಿ ನೆನಪಿಗೆ ತಂದುಕೊಡುತ್ತಾನೆ. ಬಹಳ ಸಮಯದವರೆಗೆ ಹೇಳಿದ ಮೇಲೆ ನಮ್ಮ ಹನುಮಣ್ಣ ರೆಡಿ! ಹೀಗೇ ಹನುಮಂತನ ವಿಸ್ಮೃತಿ ಮಾಯವಾಗಿ ತಾನು ಜಿಗಿದೇ ಜಿಗಿಯುತ್ತೇನೆ ಎಂಬ ವಿಶ್ವಾಸ ಮೂಡುತ್ತದೆ, ನಂತರ ನಿಜಕ್ಕೂ ಆತ ಜಿಗಿದದ್ದು, ಲಂಕೆಗೆ ಸಾಗಿದ್ದು ರಾಮಾಯಣದ ಮಹತ್ತರ ಘಟ್ಟ. ಹನುಮನಿಲ್ಲದೆ ರಾಮಾಯಣ ಕಲ್ಪಿಸಲೂ ಸಾಧ್ಯವಿಲ್ಲ.



ಬಲಿಷ್ಠನಾದ ಹನುಮ ಒಂದು ಯಕ್ಕಶ್ಚಿತ ಕಸದಂತೆ ಕುಳಿತುಬಿಟ್ಟಿದ್ದ, ತನ್ನ ಶಕ್ತಿಯ ಅರಿವಿಗೆ ಬಂದಾಗ ಆತ ಪುನಃ ಮಹಾಬಲಿಷ್ಠನಾದ. ನಮ್ಮ ಮನಸ್ಸಲ್ಲೂ ಮನಸ್ಸೆಂಬ ಹನುಮ ಸುಮ್ಮನೇ ಕುಳಿತಿರುತ್ತಾನೆ, ಆತನಿಗೆ ಚಾಲನೆ ಕೊಡಿ, ಆತನಿಗೆ ಪೂರಕ ಸಂದೇಶ ಕೊಡಿ, ನಮಗೂ ಹನುಮಬಲ ಬರಲಿ, ನಾವೆಲ್ಲಾ ಜಿಗಿದು ಈ ಭವಸಾಗರದವನ್ನು ಬಹಳ ಸುಲಭದಲ್ಲಿ ದಾಟುವಂತಾಗಲಿ ಎಂದೂ, ಹನುಮನ ನಿಷ್ಠೆ, ಒಲವು,ಕಾರ್ಯತತ್ಪರತೆ, ಶ್ರದ್ಧೆ ನಮಗೆ ಒದಗಿಬರಲೆಂದೂ ಶ್ರೀ ಹನುಮಂತ ನಲ್ಲಿ ಪ್ರಾರ್ಥಿಸೋಣ.


ಹನುಮ ನಿನ್ನ ನೆನೆಯಲೊಮ್ಮೆ ಬಂತು ಚೈತ್ರ ಪೌರ್ಣಮಿ
ವನದ ತುಂಬ ಹೂವ ಹಾಸಿ ಹಾಡುತ ಜೋಗುಳಗಳ

ರಾಮನಾಗಿ ಮಹಾವಿಷ್ಣು ತಾನು ಬಂದು ಭುವಿಯತಳದಿ
ಭೀಮಬಲದ ನಿನ್ನ ಕರೆದು ಅಪ್ಪಿ ಮುದ್ದನಾಡಿದ
ವ್ಯೋಮಯಾನಗೈದ ನಿನ್ನ ಕಾಮಿತಫಲ ಕೊಡೋ ಎನುತ
ನೇಮ ನಿನ್ನೊಳಿರಿಸಿ ಸತತ ನಾಮಸ್ಮರಣೆ ಮಾಡಲೇ ?

ಇಷ್ಟಮಿತ್ರರೆಲ್ಲ ಸೇರಿ ಸೃಷ್ಟಿ ಯೊಳಗೆ ಸಭೆಯ ಕರೆದು
ಕಷ್ಟಕಳೆಯೆ ನೆನೆದು ಹೆದರಿ ಆತು ನಿನ್ನ ಕರೆದರೂ
ಅಷ್ಟುಗಟ್ಟಿ ದೇಹವೆನಲು ಅಂಬುಧಿಯನು ಜಿಗಿದುನಿಂತ
ಶ್ರೇಷ್ಠನಡೆಯು ನಿನದಾಯ್ತು ಜನುಮದಲ್ಲಿ ಪಾವನ

ಎಲ್ಲಿ ನೋಡೆ ನಿನ್ನ ಶಕುತಿ ಯುಕುತಿ ಸತತ ನೆನಪಿನಲ್ಲಿ
ಮಲ್ಲಿನಾಥಪುರದ ಮಗುವೇ ಕಲ್ಲದೇಹ ನಿನ್ನದೂ
ಬಲ್ಲವರೊಡನಾಡುವಾಗ ದೈನ್ಯತೆಯ ನೆರಳಿನಲ್ಲಿ
ಅಲ್ಲಿ ಬಂತು ಬ್ರಹ್ಮ ಪದವು ಸಾರ್ಥಕತೆಯ ಬಾಳಿನಲ್ಲಿ


12 comments:

  1. ಹನುಮನುದಿಸಿದ ನಾಡಿನಲಿ ಮಂಕು ಬಡಿದು ಕುಳಿತಿರುವ ನಮ್ಮ ದೇಶದ ಸತ್ಪ್ರಜೆಗಳನ್ನು ನೋಡಿ ರಾಮ-ಹನುಮರು ನಗುತ್ತಿರಬಹುಲ್ಲವೇ?
    ಹನುಮನೊಮ್ಮೆ ಮೈಕೊಡವಿದಂತೆ ನಮ್ಮ ಯುವಕರು ಮೈ ಕೊಡವಿ ನಿಂತರೆ ಮತ್ತೊಮ್ಮ ತಾಯಿ ಭಾರತಿಯ ಕೀರ್ತಿಯು ಅತ್ಯಂತ ಎತ್ತರಕ್ಕೆ ಏರಿ ವಿಶ್ವದ ಮುಂದೆ ಮತ್ತೊಮ್ಮೆ ವಿಶ್ವಗುರುವಿನ ಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ.ಇಂತಹ ಚಿಂತನೆಗಳು ಅಂತರ್ಜಾಲದಲ್ಲಿ ಹೆಚ್ಚು ಹೆಚ್ಚು ಸಿಗುವಂತಾಗಲಿ.ಎಂದಿನಂತೆ ಉತ್ತಮ ಬರಹ ನೀಡಿದ್ದೀರಿ. ಧನ್ಯವಾದಗಳು.

    ReplyDelete
  2. ಆತ್ಮೀಯ ಶ್ರೀಧರರೇ, ತಮ್ಮ ಪ್ರತಿಕ್ರಿಯೆ ಚೆನ್ನಾಗಿದೆ, ತುಂಬಾ ಆಭಾರಿ

    ReplyDelete
    Replies
    1. ಸರ್ ನಿಮ್ಮ ನಂಬರ್ ಕೊಡಿ ಸರ್ ಒಂದು ಡೌಟ್ ಕೇಳಬೇಕಿತ್ತು.

      ಸುಧಾಕರ ಜೈನ್

      9900500832

      Delete
  3. ಇಂದು ಹನುಮನ ಬಗೆಗೆ ಓದಿಯಾದರೂ..
    ಅವನ ನಾಮ ಸ್ಮರಣೆಯಾಯಿತು...

    ಅವನ ವ್ಯಕ್ತಿತ್ವವೇ ಹಾಗೆ...
    ಸರ್ವ ವಂದಿತ...

    ಲೇಖನ ತುಂಬಾ ಸೊಗಸಾಗಿ..
    ಸಕಾಲಿಕವಾಗಿದೆ..

    ಜೈ ಹನುಮಾನ್..

    ನೀಮಗೂ ಹನಮ ಜಯಂತಿಯ ಶುಭಾಶಯಗಳು...

    ReplyDelete
  4. ಹನುಮನ ಬಗೆಗೆ ನೀವು ಬರೆದ ಪ್ರಾರ್ಥನೆ ತುಂಬ ಚೆನ್ನಾಗಿದೆ.

    ReplyDelete
  5. ನಮಗೂ ಇಂಥಹ ಬರಹದ ಮೂಲಕ ಹನುಮನ ನಾಮ ಸ್ಮರಣೆ ಮಾಡಿದಿರಿ
    ತುಂಬಾ ಸುಂದರ ಕವನ

    ReplyDelete
  6. ಜೈ ರಘುವೀರ ಸಮರ್ಥ.
    ಭಕ್ತಿಪೂರ್ಣ ಕಾವ್ಯಾಭಿವಂದನೆ.

    ReplyDelete
  7. ದಾಸಶ್ರೇಷ್ಠನೆಂದರೆ ಹನುಮಂತ ಒಬ್ಬನೇ, ಅವನಂಥ ಗುಣವಂತ ವ್ಯಕ್ತಿತ್ವ ಸಿಗಲು ಸಾಧ್ಯವೇ ಇಲ್ಲ, ಇದು ಕೇವಲ ಕವಿ ವಾಲ್ಮೀಕಿಯ ಕಲ್ಪನೆ ಎಂಬುದಂತೂ ಸುಳ್ಳು, ನಡೆದ ಕಥೆಗೆ ದೃಷ್ಟಾರರಾಗಿ ವಾಲ್ಮೀಕಿ ಬಂದರು. ರಾಮಾಯಣವನ್ನು ಜೀವಂತವಾಗಿ ಸಕ್ರಿಯವಾಗಿ ನೋಡಿ ಪಾಲ್ಗೊಂಡ ಹಾಗೂ ಅದರ ನೆನಪುಗಳನ್ನು ಹೊತ್ತು ಚಿರಂಜೀವಿಯಾಗಿ ನಮ್ಮ ಮಧ್ಯೆಯೇ ಇದ್ದು ನಮಗೆ ಗೋಚರವಿಲ್ಲದ ವ್ಯಕ್ತಿ ಹನುಮ ! ಹಾಗಂತ ಅನೇಕ ತಾಪಸರಿಗೆ ಅವರ ದಿವ್ಯ ಚಕ್ಷುಗಳಿಗೆ ಕಾಣಿಸುವ ಅದ್ಭುತ ವ್ಯಕ್ತಿ ಕೂಡ ಹೌದು! ರಾಮಾಯಣವನ್ನು ಓದಲಾಗಲೀ, ಹೇಳಲಾಗಲೀ,ಅಭಿನಯಿಸಲಾಗಲೀ ಪ್ರಾರಂಭಿಸಿದರೆ ಅಲ್ಲೊಂದು ಮಣೆಯೋ ಅಥವಾ ಒಂದು ದರ್ಭೆಯಿಂದ ಮಾಡಿದ ಕೂರ್ಚೆ ಎಂಬ ಸ್ಥಾನವನ್ನೋ ಇಟ್ಟು ಅಲ್ಲಿ ಆಂಜನೇಯನಿಗೆ ಒಂದು ಗೌರವಸಲ್ಲಿಸುವುದು ಪದ್ಧತಿ, ಅದು ಆವಶ್ಯಕ ಕೂಡ.

    ಯತ್ರ ಯತ್ರ ರಘುನಾಥ ಕೀರ್ತನಂ
    ತತ್ರ ತತ್ರ ಕೃತಮಸ್ತಕಾಂಜಲಿಮ್ |
    ಭಾಷ್ಪವಾರಿ ಪರಿಪೂರ್ಣಲೋಚನಂ
    ಮಾರುತಿಂ ನಮತ ರಾಕ್ಷಸಾಂತಕಮ್ ||

    ಎಂದಿದ್ದಾರೆ ಪ್ರಾಜ್ಞರು, ರಾಮಾಯಣ ಕಥೆ ಎಲ್ಲೇ ನಡೆದರೂ ಹಾಜರಿದ್ದು, ಭಕ್ತಿಯಿಂದ ಕುಳಿತು, ಅಂಜಲಿಯನ್ನು ಮುಂದೊಡ್ಡಿ ಆನಂದ ಭಾಷ್ಪ ಸುರಿಸುವುದು ಮಾರುತಿಯ ಸ್ವಭಾವ, ರಾಮನಂತೆ ನಿಸ್ಸೀಮನಾಗಿ, ಆತನ ಭಕ್ತನಾಗಿ, ಆತನನ್ನೇ ಭಕ್ತಿಯಿಂದ ಜಯಿಸಿ ವಿಜಯಿಯಾಗಿ, ರಾಮನ ಒಳ್ಳೆಯತನಕ್ಕೆ ತನ್ನನ್ನು ಮಾರಿಕೊಂಡ ದಾಸ ಹನುಮ ತಾನೂ ಒಳ್ಳೆಯತನದಲ್ಲಿ ಕಮ್ಮಿಯೇನಿಲ್ಲ ಎಂಬುದನ್ನು ಲೋಕಕ್ಕೆ ತೋರಿಸಿದ್ದಾನೆ. ಇಂದಿಗೂ ಕೆಲವುಕಡೆ ತನ್ನ ಪ್ರಭಾವ ತೋರಿಸುತ್ತ ಚಿರಂಜೀವಿಯಾಗಿ ನಮಗೆ ನಮ್ಮ ಭಕ್ತಿಗೆ ಓಗೊಡುವ ವ್ಯಕ್ತಿಯಾಗಿದ್ದಾನೆ;ಶಕ್ತಿಯಾಗಿದ್ದಾನೆ.

    ಪ್ರಸಕ್ತ ಪ್ರತಿಕ್ರಿಯಿಸಿದ ಸರ್ವಶ್ರೀ ಪ್ರಕಾಶ್, ಸುನಾಥ್, ಗುರುಮೂರ್ತಿ, ಸುಬ್ರಹ್ಮಣ್ಯ ಈ ಎಲ್ಲರಿಗೆ ಮತ್ತು ಇನ್ನೂ ಓದಲಿರುವ ಎಲ್ಲರಿಗೂ ವಂದನೆಗಳು.

    ReplyDelete
  8. ಹನುಮ ಜಯ೦ತಿಯ೦ದು ಅಧುತವಾದ ಸ೦ದೇಶವನ್ನ ನೀಡಿದ್ದಿರಾ... ಅದಕ್ಕೆ ಪೂರಕವಾಗಿ ವೇದಸುಧೆಯವರು ಎಲ್ಲ ಸಹೃದಯರ ಮನದ ಮಾತನ್ನು ಹೊರಹಾಕಿದ್ದಾರೆ. ತಮ್ಮಿಬ್ಬರ ಆಶಯ ನಮ್ಮೆಲ್ಲರದು. ಅದು ಪುರೈಸಲೆ೦ದು ಆ ಜಗದ ಪ್ರಾಣನಲ್ಲಿ ಕೇಳಿಕೊಳ್ಳುತ್ತೆನೆ. ಅರ್ಥಪೂರ್ಣ ಲೇಖನ.

    ReplyDelete
  9. ಧನ್ಯವಾದಗಳು ತಮಗೆ ಸೀತಾರಾಮ್ ಸಾಹೇಬರೇ

    ReplyDelete
  10. ಹನುಮಜ್ಜಯಂತಿಯಂದು ಹನುಮತ್ಸ್ಮರಣೆಯನ್ನು ಸುಂದರವಾಗಿ ಭಕ್ತಿ ಪೂರ್ವಕವಾಗಿ ಒಕ್ಕಣಿಸಿದ್ದೀರಿ.
    ಹನುವದ್ವ್ಯಾಕರಣ ಇದೆ ಅನ್ನುವುದನ್ನು ಕೇಳಿದ್ದೇನೆ. ಆದರೆ ಎಲ್ಲಿಯೂ ನೋಡಿಲ್ಲ ಕೇಳಿಲ್ಲ.
    ಹನುಮಂತ ಅತ್ಯಂತ ಬುಧ್ಧಿವನ್ತರಲ್ಲಿಯೇ ಶ್ರೇಷ್ಠ. ರಾಮನು ಹನುಮನಿಗೆ ಅದು ದಕ್ಷಿಣ ದಿಶಾಭಿಮುಖವಾಗಿ ಹೊರಟ ಅಂಜನೆಯನಿಗೆ ಉಂಗುರವನ್ನು ಕೊಟ್ಟಿರುತ್ತಾನಲ್ಲವೇ? ಇದು ಲಂಕೆಯಲ್ಲಿ ಸೀತೆ ಇರುವುದು ರಾಮನಿಗೂ, ಹನುಮನಿಗು ಮೊದಲೇ ತಿಳಿದಿತ್ತು ಅನ್ನುವುದಕ್ಕೆ ಸಾಕ್ಷಿ. ಪ್ರಾಜ್ಞನಾದ ಹನುಮ ರಾವಣನ ಭದ್ರ ಕೋಟೆಯನ್ನು ಭೇದಿಸುವ ತಂತ್ರಗಾರಿಕೆಯನ್ನು ಮನದಲ್ಲೇ ಮನನ ಮಾಡುತ್ತಾ ಸಂಗಡಿಗರಿಂದ ದೂರ ಕುಳಿತಿದ್ದ. ತನ್ನನ್ನು ತಂಡದ ನಾಯಕ ಕೇಳುವವರೆಗೂ ಸುಮ್ಮನಿದ್ದದ್ದು ಅವನ ವಿನಯಕ್ಕೆ,ಸೂಕ್ಷ್ಮ ಮತಿಗೆ ನಿದರ್ಶನ.
    ಜೈ ಹನುಮಾನ್.

    ReplyDelete
  11. ತಮ್ಮ ಅಭಿಪ್ರಾಯಕ್ಕೆ ಭೇದವಲ್ಲ, ಇಲ್ಲಿ ರಾಮ ಉಂಗುರ ಕೊಟ್ಟಿದ್ದು ಸೀತೆ ಸಿಕ್ಕಿದ್ರೆ ಸೀತೆಗೆ ಹನುಮನ ಪರಿಚಯವಿಲ್ಲವಲ್ಲ-ಗುರುತಿಗಾಗಿ, ಸಿಕ್ಕೇಬಿಡುತ್ತಾಳೆ ಎಂದು ಗೊತ್ತಿರಬಹುದೇನೋ !!? ಹನುಮ ಪ್ರಾಜ್ಞನೇ ನೊ ಡೌಟ್, ಆದರೆ ಹನುಮ ಲೋಕದ ಜನರ ಕಣ್ಣಿಗೆ ತನ್ನಿಂದ ಆಗದ ಕೆಲಸವೆಂದು ತೋರುವಂತೆ ಕುಳಿತಿದ್ದ, ಶಿವರಾಮ ಭಟ್ ರೇ ತಮಗೆ ಧನ್ಯವಾದಗಳು

    ReplyDelete