ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, March 30, 2010

ಉಷೆಯ ಬೆನ್ನಹತ್ತಿ !!

ಉಷೆಯೆಂಬರಸಿಯ ಜೊತೆ ರಮಿಸದ ಅರಸನಿಲ್ಲ ! ಅಲ್ಲಿ ಪ್ರತಿಯೊಬ್ಬನೂ ಅರಸನೇ, ಕಾಸು-ಕಾಂಚಾಣ, ರಾಜ್ಯ-ಬೊಕ್ಕಸ, ವಜ್ರ-ವೈಡೂರ್ಯ, ವಾಹನ-ಬಂಗಲೆಗಳ ಮಿತಿಯಿಲ್ಲ, ಅವು ಇದ್ದರೂ ಇರದಿದ್ದರೂ ಸಿಗುವ ಸೌಂದರ್ಯ ಮತ್ತು ತೃಪ್ತಿ ಒಂದೇ ! ಇನ್ನೇನು ಜಗವನಾಳುವ ದೊರೆ ಸೂರ್ಯನುದಿಸುವ ಕೆಲವೇ ಕಾಲ ಮುನ್ನ ಈ ಉಷೆ ಬಂದಿರುತ್ತಾಳೆ ! ಅವಳು ಬರದ ದಿನವೇ ಇಲ್ಲ. ಅವಳಿಗೆ ರಜಾ ಇಲ್ಲವೇ ಇಲ್ಲ. ಪ್ರಾಯತುಂಬಿದ ಹುಡುಗಿ ಈ ಉಷಾ ಎಲ್ಲರ ಮನದ ರಾಣಿ ! ಮನಗೆದ್ದ ತ್ರಿವೇಣಿ ! ಅವಳ ಬಿಂಕ-ಬಿನ್ನಾಣ,ಕೆಂಪಡರಿದ ತುಟಿಯ ತುಂಟ ನಗು, ಅವಳ ಸಿಂಹ ಕಟಿಯ ಮೈಮಾಟ,ನಳಿದೋಳುಗಳು,ಸುಮಧುರ ಕಂಠ ಅಬ್ಬಬ್ಬಾ ಅವಳನ್ನು ಬಣ್ಣಿಸಲೇ ಶಬ್ಧ ಸಾಲದು. ಬೆಳದಿಂಗಳ ಬಾಲೆಯಾದ ಅವಳನ್ನು ಬೆನ್ನುಹತ್ತಿ ಕಣ್ತುಂಬ ನೋಡಬೇಕು, ಅವಳನ್ನು ಹೇಗಾದರೂ ಮಾಡಿ ಲವ್ ಮಾಡಬೇಕು.ಅವಳ ಪ್ರೀತಿ ಪಡೆಯಲೇ ಬೇಕು. ಅವಳ ಅಪ್ಪ ಏನಾದರೂ ಅಂದುಕೊಳ್ಳಲಿ ತೊಂದರೆಯಿಲ್ಲ, ನನಗವಳು ಬೇಕೇ ಬೇಕು ! ಯಾರನ್ನಾದರೂ ಬಿಟ್ಟೇನು ಉಷಾಳನ್ನು ಮಾತ್ರ ಮರೆಯಲಾರೆ,ತೊರೆಯಲಾರೆ,ಬಿಡಲಾರೆ. ಅವಳ ನಗುವಲ್ಲಿ ಅಹಹ ಎಂಥಹ ಸೌಂದರ್ಯವಪ್ಪ ಅದು, ದಂತವೈದ್ಯರು ಶ್ರಮಿಸಿದರೂ ಅಷ್ಟು ಸುಂದರವಾಗಿ ಮಾಡಲಾರದ ದಂತವೈಖರಿ ನನ್ನ ಉಷಾಳದ್ದು. ನೋಡಿ ನೋಡಿ -->ಸಂಪಿಗೆಯ ಎಸಳಿನ ಮೂಗೇ ಖರೆ,ನಿಜ! ಹಸಿರು ಸೀರೆಯುಟ್ಟು ಕೆಂಪು ರವಿಕೆ ತೊಟ್ಟು ಹಾಗೊಮ್ಮೆ ಬಳುಕುತ್ತ ಬಳುಕುತ್ತ ನಡೆದು ಬರುವಾಗ ನನ್ನ ಉಷೆಗೆ ಬೇರೆ ಸಾಟಿಯುಂಟೇ ? ಅವಳ ಮೈಯ ಪರಿಮಳಕ್ಕೆ ಮನಸೋತ, ಅವಳ ಸೆರಗಲ್ಲೊಮ್ಮೆ ಹುದುಗಿ ಸುಖಪಡುವ, ಅವಳ ಚೇತೋಹಾರಿ ನೇವರಿಕೆಗೆ ಬಯಸಿದ, ಅವಳ ಮಧುರ ಚುಂಬನಕ್ಕೆ ಅಧರವೊಡ್ಡಿದ ರಸಿಕ ನಾನಾದರೆ ನಿಮಗೇನು ಹೊಟ್ಟೆಕಿಚ್ಚೇ ? ಹಾಗಾದರೆ ನನ್ನಿಂದ ಉಷೆಯನ್ನು ನೀವು ಪಡೆಯಲು ಪ್ರಯತ್ನಿಸಿ ನೋಡೋಣ ? ಅವಳಪ್ಪ ಬಂದಾನು ಹುಷಾರು !


[ಚಿತ್ರ ಋಣ : ರಾಜಾ ರವಿವರ್ಮ ]

ಉಷೆಯ ಬೆನ್ನಹತ್ತಿ !!

ಸರಸವಾಡುವ ಬಾರೆ ಹೇ ಉಷೇ
ವಿರಸ ದೂರ ನೀರೇ ಬಹು ತೃಷೆ

ಮಂಜಹನಿಯ ಮುಕುಟ ಧರಿಸುತಾ
ರಂಜಿಪ ತ್ರಿಭುವನ ಸುಂದರಿಯೇ
ಮುಂಜಾವಿನಲೇ ನಂಜು ನಿವಾರಿಸಿ
ಅಂಜನ ಹಿಡಿದು ರೂಪವ ತೋರೇ

ರನ್ನ ಕೇಯೂರ ಹಚ್ಚಿದ ವಡ್ಯಾಣ
ಪನ್ನಗಧರನರಸಿಯ ಸಹಸಖಿಯೇ
ನನ್ನೀ ಮನಕಾನಂದವ ನೀಡುತ
ಮುನ್ನ ರಮಿಸು ನೀ ಸೆರಗನು ಹಾಸುತ

ಹರೆಯ ಉಕ್ಕಿ ಹರಿವ ನಿನ್ನನು ನಾ
ಧರೆಯ ಸಿಂಹಕಟಿ ನಳಿದೋಳ್ ನೋಡುತ
ಮರೆಯೆ ಮೂಜಗವ ಕಳೆದುಕೊಳ್ಳುತಾ
ಮೆರೆಯುತಿದ್ದೆ ಗಡುತರದಿ ಬೀಗುತಾ

ತುಟಿಯ ಕೆಂಪು ಹರಡಿ ಪರಿಸರದಿ
ಸುಟಿಯಿರದಾ ಕಂಪು ಬಲು ಒನಪು
ನಿಟಿನಿಟಿ ಉರಿವಾಗ್ನಿಯ ಬಣ್ಣದಝರಿ
ನಟನೆಯಿಲ್ಲದಾ ನಗುಮುಖ ತೋರೇ

ಹಸಿರು ಸೀರೆಯ ತುಂಬಾ ಚಿತ್ತಾರದ
ಕುಸುರಿ ಹೂವ ಬಿಂಬಾ ಥರ ಥರದ
ಉಸುರಿ ಕಿವಿಯೊಳು ಪ್ರೇಮ ವಾಂಛೆಯನು
ಹೊಸರೀತಿಯ ಕಾಮನೆಗಳ ತಣಿಸು

ಸಂಪಿಗೆ ನಾಸಿಕ ಸುಖದಾ ಕೆನ್ನೆಯು
ಸೊಂಪಾಗಿ ಬೆಳೆದು ಬಿಗಿದಿಹ ಕಂಚುಕವು
ಇಂಪಿನ ಕೋಕಿಲ ಮಾರ್ದನಿ ನಿನ್ನದು
ಕಂಪುಸೂಸುವಾ ಮಲ್ಲಿಗೆ ಜಡೆಯೂ

ಹರುಷದಿ ಅಡಿದಾಂಗುಡಿಯಿಡುತಲಿ ಬಾ
ಅರಿಶಿನ ಕುಂಕುಮ ಹಚ್ಚಿದ ಮೊಗದಿ
ನಿರಶನ ನೀ ಬರದಿರೆ ಕಳೆಗುಂದುತ
ಅರಸ ನಾ ಕರೆವೆ ಪ್ರತಿದಿನ ಸರಸಕೆ


10 comments:

  1. ಉಷಾಕಾಲದಿ ಉಷೆಯ ಸ್ಮರಣೆ.ಅನಿರುದ್ಧನ ಅಪ್ಪಣೆ ಪಡೆದಿದ್ದೀರಿ, ತಾನೆ? ಅಂತೂ ಮನಸ್ಸು ಪ್ರಫುಲ್ಲವಾಗಿದ್ದು ನಾಳೆಗೆ ಹುಮ್ಮಸ್ಸು ಇಮ್ಮಡಿಸಲಿ.

    ReplyDelete
  2. ವಿಷಯಾಂತರಕ್ಕೆ ಕ್ಷಮೆ ಇರಲಿ. http://vedasudhe.blogspot.com/ ಗೆ ಸ್ವಲ್ಪ ಸಿಂಗಾರ ಮಾಡಿರುವೆ. ಒಮ್ಮೆ ಇಣುಕಿನಡಿ.

    ReplyDelete
  3. ವಿ.ಅರ್.ಭಟ್-

    ಸೊಗಸಾದ ಕವನ..
    ಸೊಗಸಾದ ಪದಗಳ ಬಳಕೆ,ಸುಂದರ ವರ್ಣನೆ,ಚಂದದ ಚಿತ್ರ..
    ನಿಮ್ಮದೇ ನಿರೀಕ್ಷೆಯಲ್ಲಿ..: http://manasinamane.blogspot.com/

    ReplyDelete
  4. ಉಷೆಯ ಬೆನ್ನುಹತ್ತಿ ನೀವಿತ್ತ ಸ್ವಾಗತ, ವರ್ಣನೆ ಮತ್ತು ಅದ್ಭುತ ಚಿತ್ರಕ್ಕೆ ...Special thanks.

    ReplyDelete
  5. ಉಷೆಯ ಅದ್ಬುತ ವರ್ಣನೆಗೆ ಮನಸೋತೆ
    ನಿಮ್ಮ ಶಬ್ದಗಳ ಮೇಲಿನ ಹಿಡಿತ ಬಹು ಸುಂದರ

    ReplyDelete
  6. ಮಾರ್ಚ್ 31 ಎಂದರೆ ಸ್ವಲ್ಪ ಒತ್ತಡದ ದಿನವೇ, ಹೀಗಾಗಿ ಒತ್ತಡವನ್ನು ಒತ್ತಟ್ಟಿಗಿಡಲು ಉಷೆಯ ಬೆನ್ನುಹತ್ತುವ ಕೆಲಸ ಮಾಡಿದೆ ! ಆದರೆ ಉಷೆ ಇಷ್ಟಕ್ಕೆಲ್ಲ ನನ್ನ ಬಾಹುಬಂಧನಕ್ಕೆ ಸಿಗುವಳೇ ? ಅವಳದೇನಿದ್ದರೂ ತುಂಬಾ ಹೈ ಲೆವೆಲ್ ಕರಾಮತ್ತು ! ಅಂದಮೇಲೆ ಅವಳನ್ನು ಹಿಡಿಯಲು ಬಹಳ ಕಸರತ್ತು ಮಾಡಲೇ ಬೇಕಲ್ಲವೇ ? ಪ್ರತಿಕ್ರಿಯಿಸಿದ ಸರ್ವಶ್ರೀ ಹರಿಹರಪುರ ಶ್ರೀಧರ್, ಗುರು-ದೆಸೆ, ಸುಬ್ರಹ್ಮಣ್ಯ ಮತ್ತು ಗುರುಮೂರ್ತಿ ಈ ಎಲ್ಲರಿಗೂ ಹಾಗೂ ಇನ್ನೂ ಓದಲಿರುವ ಓದುಗ ಮಿತ್ರರಿಗೂ ಧನ್ಯವಾದಗಳು

    ReplyDelete
  7. ಪ್ರವಾಸದಲ್ಲಿದ್ದರಿ೦ದ ನಿನ್ನೆ ರಾತ್ರಿ "ಉಷೆ" ಶೀರ್ಷಿಕೆ ನೋಡಿ ಬೆಳಿಗ್ಗೆ ಓದಿದರಾಯಿತು ಎ೦ದು ಒ೦ದು ದಿನ ತಡವಾಗಿ ಉಷಾಸಮಯದಲ್ಲಿ ತಮ್ಮ ಲೇಖನ ಬಿಡಿಸಿ ಓದಿ ಗೋವೆಯ ಸು೦ದರ, ನೀರವ ಬೇಳಗ್ಗಿನ ರಸ್ತೆಯಲ್ಲಿ ಓಡಾಡಿ ಅದರ ಅನುಭೂತಿ ಪಡೆದು ಬರೆಯ ಕುಳಿತಿರುವೆ.
    ಚೆ೦ದದ ಲೇಖನ.
    ಮನ ಪ್ರಫ಼ುಲ್ಲವಾಯಿತು.
    ಉಷಾಕಾಲದ ಪ್ರಕೃತಿಯ ಸೊಬಗನ್ನು ಇ೦ಚಿ೦ಚಿ ಅನುಭವಿಸಿ ಓದಿದಾಗ ಆಗುವ ರಸಭೂತಿ ಅಕ್ಷರಕ್ಕೆ ಸಿಗದು.
    ಧನ್ಯವಾದಗಳು.
    ರವಿವರ್ಮನ ಚಿತ್ರ ಒಪ್ಪವಾಗಿದೆ.

    ReplyDelete
  8. ಶುಭೋದಯ, ಮತ್ತು ಧನ್ಯವಾದಗಳು ಸೀತಾರಾಮ್ ರವರಿಗೆ.

    ReplyDelete
  9. ಭಟ್ಟರೇ ನೀವು ಉಷೆಯನ್ನು 'ಅಬ್ಬಾ ಆ ಹುಡುಗೀ',ಅದೆಂಥಾ ಬೆಡಗಿ!ಎನ್ನುವಂತೆ ಬಣ್ಣಿಸಿದ್ದೀರಿ .ನಿಮ್ಮ ಕವಿತ್ವಕ್ಕೆ ಹ್ಯಾಟ್ಸ್ ಆಫ್ !

    ReplyDelete
  10. ಡಾ| ಕೃಷ್ಣಮೂರ್ತಿ, ನನಗೆ ಅದು ಅಷ್ಟೊಂದು ಮೇಲ್ದರ್ಜೆಗೆ ಹೋದ ಹಗೆ ಅನಿಸಲಿಲ್ಲ, ಸಮಯದ ಅಭಾವ, ರಸಾನುಭೂತಿ ಪಡೆದಿರಲ್ಲ, ಧನ್ಯವಾದಗಳು

    ReplyDelete