ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, February 10, 2012

ಬಡೇ ಅಚ್ಛೇ ಲಗ್ತೇ ಹೈಂ ಯೇ ಧರತೀ ಯೇ ನದಿಯಾಂ ಯೇ ರೈನಾ ಔರ್ ತುಮ್ .........

ಬಡೇ ಅಚ್ಛೇ ಲಗ್ತೇ ಹೈಂ
ಯೇ ಧರತೀ.. ಯೇ ನದಿಯಾಂ.. ಯೇ ರೈನಾ.. ಔರ್ ತುಮ್ .........

ಮಾನವ ಜೀವನದ ಮಜಲುಗಳಲ್ಲಿ ನೋವು-ನಲಿವು, ಸುಖ-ದುಃಖ, ಅಳು-ನಗು ಇವೆಲ್ಲಾ ಇದ್ದಿದ್ದೇ. ಅದೆಲ್ಲವೂ ಎಲ್ಲರಿಗೂ ತಿಳಿದಿರುವ ವಿಷಯ. ಆದರೂ ಲೌಕಿಕ ವ್ಯಮೋಹ ಹೇಗೆ ನಮ್ಮನ್ನು ಬಂಧಿಸುತ್ತದೆ ಎಂದು ಯೋಚಿಸುವಾಗ ಸಾಮಾನ್ಯದವರು ಈ ಮೋಹಪಾಶದಿಂದ ಬಿಡಿಸಿಕೊಳ್ಳುವುದು ಸುಲಭವಲ್ಲ. ಬಿಟ್ಟುಬಿಡೋಣ ಎಂದುಕೊಂಡರೂ ಬಿಡಲಾರದ ಗಟ್ಟಿಯ ಬೆಸುಗೆ ಈ ಜೀವನ. ಎಷ್ಟೇ ನೋವಿನ ಎಳೆಗಳಿದ್ದರೂ ಮರುಭೂಮಿಯಲ್ಲಿ ಸಿಗಬಹುದಾದ ಒಂದೆರಡು ಓಯಸೀಸ್ ಗಳಂತೇ ಸಿಗುವ ಪ್ರೀತಿಗಾಗಿ ಹಗಲಿರುಳೂ ನೆನೆಸುತ್ತೇವೆ. ಆ ಪ್ರೀತಿ ಸದಾ ಸಿಗಲೆಂದು ಅಪೇಕ್ಷಿಸುತ್ತೇವೆ; ನಿರೀಕ್ಷಿಸುತ್ತೇವೆ. ಸಿಗುತ್ತದೋ ಬಿಡುತ್ತದೋ ಒಟ್ಟಿನಲ್ಲಿ ಅದರಿಂದ ಸಿಗುವ ತೃಪ್ತಿಯನ್ನು ಕಳೆದುಕೊಳ್ಳಲು ನಾವು ಸಿದ್ಧರಿಲ್ಲ. ಅದೊಂಥರಾ ಬೆಳಗಿನ ಜಾವದ ಸಕ್ಕರೆ ನಿದ್ದೆಯಂತೇ. ಬೆಳಗಿನ ಜಾವ ಸಿಗುವುದು ಸಕ್ಕರೆ ಸವಿಯ ನಿದ್ದೆಯೇನೋ ಸರಿ, ಆ ನಿದ್ದೆ ಆಲಸ್ಯಕ್ಕೆ ಕಾರಣವಾಗುತ್ತದೆ ಎಂಬುದು ಆಯುರ್ವೇದ ತಿಳಿಸುವ ಸತ್ಯ. ಆದರೂ ಅದನ್ನೂ ನಾವು ಆದಷ್ಟೂ ತಪ್ಪಿಸಿಕೊಳ್ಳುವುದಿಲ್ಲ. ಯಾರೋ ಹೇಳಿದ್ದರು "ಮೊಬೈಲ್ ನಲ್ಲಿ ಅಲಾರ್ಮ ಸೆಟ್ ಮಾಡಿದ್ದೇನೆ. ಎಲ್ಲರೂ ಬೆಳಿಗ್ಗೆ ೫ ಗಂಟೆಗೇ ಎದ್ಬಿಡಿ..........[ನಿಧಾನವಾಗಿ ಹೇಳ್ತಾರೆ] ಆದರೆ ನನ್ನನ್ನು ಹೊರತುಪಡಿಸಿ !" ಚಳಿಗಾಲದ ಬೆಳಗಿನ ಚಳಿಯಲ್ಲಿ ಶಾಲು ಹೊದೆದು ಬಿಸಿ ಬಿಸಿ ಕಾಫಿ ಕುಡಿಯುವುದೂ ಒಂಥರಾ ಖುಷಿ; ಅದರಲ್ಲೇನೋ ಅಗೋಚರ ಮಜಾ! ಶುಚಿಯ ಕೊರತೆ ಇರುವ ಬೀದಿ ಬದಿಯ ತಿಂಡಿಗಳನ್ನು ಅಲ್ಲಲ್ಲೇ ತಿನುವುದೂ ಇನ್ನೊಂಥರಾ ಮಜಾ! ಹೀಗೇ ಗೊತ್ತಿದ್ದೂ ಬಿಡಲಾಗದ ಸಂಗತಿಗಳು ಇದ್ದೇ ಇವೆ. ಜೀವನವೆಂಬ ಹರಿಯುವ ನದಿಯಲ್ಲಿ ಸಿಗುವ ಚಿಕ್ಕಪುಟ್ಟ ನೆನಪಿನ ನಡುಗಡ್ಡೆಗಳನ್ನು ತೋರಿಸುವ ಇರಾದೆಯಿಂದ ಬರೆಯಲು ಮನ ಮಾಡಿದ್ದೇನೆ.

ಪಾಕಿಸ್ತಾನದ ಭೂಟ್ಟೋ ಗತಿಸಿ ಬಹಳ ವರ್ಷಗಳೇ ಕಳೆದವು. ಅವರ ಬಗ್ಗೆ ಅಲ್ಲಲ್ಲಿ ಓದುವಾಗ ಅವರ ಅಂತ್ಯದ ಒಂದೆರಡು ದಿನಗಳನ್ನು ಓದಿ ಬಹಳ ಬೇಸರವಾಗಿತ್ತು. ಇನ್ನೇನು ನಾಳೆ ಬೆಳಗಾದರೆ ಗಲ್ಲಿಗೇರಿಸುತ್ತಾರೆ ಎಂಬ ಹಂತದಲ್ಲಿ ಮಗಳು ಬೆನಜೀರ್ ಜೈಲಿಗೆ ಬರುತ್ತಾಳೆ. ಅದು ಆ ಅಪ್ಪ-ಮಗಳ ಕೊನೆಯ ಭೇಟಿ. ಅದು ಅವಳಿಗೂ ಗೊತ್ತು, ಆ ಅಪ್ಪನಿಗೂ ಗೊತ್ತು. ಆದರೂ ಎಲ್ಲೋ ದೇವರು ತನ್ನಪ್ಪನನ್ನು ಸಾವಿನ ದವಡೆಯಿಂದ ತಪ್ಪಿಸಬಹುದು ಎಂಬುದು ಅವಳ ಅನಿಸಿಕೆಯಾಗಿತ್ತು. ಆದರೂ ಅಪ್ಪ ಬಹುವಾಗಿ ಇಷ್ಟಪಡುತ್ತಿದ್ದ ಸಿಗರೇಟ್ ಹಿಡಿದು ಅದನ್ನು ಕೊಟ್ಟು ಮಾತನಾಡಿಸಿಕೊಂಡು ಹೋಗಲು ಬಂದಿದ್ದಳು. ಜೈಲರ್ ಅನುಮಾನಿಸುತ್ತಲೇ ಆಕೆಯ ತಂದೆಯನ್ನು ಇರಿಸಿರುವ ಕೋಣೆಯಿರುವ ವಾರ್ಡ್ ಗೆ ಬಿಟ್ಟಿದ್ದಾನೆ. ಆಕೆ ನಿಧಾನವಾಗಿ ಅಳುತಡೆದುಕೊಂಡು ಹೆಜ್ಜೆ ಹಾಕುತ್ತಾ ಅಪ್ಪನಿದ್ದ ಕೋಣೆಯೆಡೆಗೆ ಬರುತ್ತಾಳೆ. ಅಪ್ಪ ಕೋಣೆಯಲ್ಲಿ ಸರಳುಗಳ ಹಿಂದೆ ಅದೆಲ್ಲೋ ಮೂಲೆಯಲ್ಲಿ ಕೂತಿದ್ದವ ಎದ್ದುಬರುತ್ತಾನೆ. ಅಪ್ಪ-ಮಗಳು ಮತ್ತು ಮೌನರೋದನ. ಇಬ್ಬರ ಕಣ್ಣುಗಳಿಂದಲೂ ಧಾರಾಕಾರವಾಗಿ ನೀರು ಹರಿಯುತ್ತದೆ. "ಅಪ್ಪ ಹೇಗಿದ್ದೀಯಪ್ಪಾ?" ಮಗಳ ಪ್ರಶ್ನೆಗೆ ಉತ್ತರಿಸುವ ಮನೋಸ್ಥಿತಿಯಲ್ಲಿ ಭುಟ್ಟೋ ಇರಲಿಲ್ಲ. ಆದರೂ ಮಾತನಾಡಲೇಬೇಕು. ಇಬ್ಬರೂ ತುಸುಹೊತ್ತು ಮಾತನಾಡಿದ್ದಾರೆ. ಆಕೆಯನ್ನು ಕೋಣೆಯೊಳಗಡೆ ಬಿಡಲಿಲ್ಲ. ಬಾಗಿಲ ಕಂಬಿಗಳ[ಸರಳುಗಳ]ಮೇಲೆ ಅಪ್ಪ ಇಟ್ಟ ಕೈಗಳನ್ನು ಪ್ರೀತಿಯಿಂದ ಮಗಳು ಸ್ಪರ್ಶಿಸುತ್ತಾಳೆ. ಆ ದಿವ್ಯ ಸ್ಪರ್ಶ ಇಬ್ಬರಿಗೂ ಅದೇನೋ ಕಾಣದ ತೃಪ್ತಿಯನ್ನು ನೀಡುತ್ತದೆ! ಅಗಲಿರಲಾರದ ಅಪ್ಪ-ಬಿಟ್ಟಿರಲಾರದ ಮಗಳು ಈ ಮೂರ್ತರೂಪಗಳ ಮುಂದೆ ಅಮೂರ್ತವಾಗಿ ನಿಂತು ಕೊಂಡೊಯ್ಯುವ ವಿಧಿ ಅಟ್ಟಹಾಸ ಮಾಡುತ್ತಿರುವಂತೇ ಭಾಸ! ತಾನು ತಂದಿದ್ದ ಸಿಗರೇಟಿನ ಪೊಟ್ಟಣವನ್ನು ಅಪ್ಪನಿಗೆ ನೀಡುತ್ತಾಳೆ ಮಗಳು. ಉಕ್ಕೇರಿಬರುವ ಭಾವದ ಅಲೆಗಳನ್ನು ತಡೆಯಲಾರದೇ ಇಬ್ಬರೂ ಗೋಳಿಡುತ್ತಾರೆ. ಆಯ್ತು ಅದೇ ಕೊನೆ.....ನಾಳೆಯಾದರೆ ಆ ಅಪ್ಪ ಇನ್ನೆಲ್ಲೂ ಸಿಗುವುದಿಲ್ಲ..ಆ ಅಪ್ಪನಿಗೆ ಮಗಳು ಮತ್ತೆ ಸಿಗುವುದಿಲ್ಲ. ಹೋಗುವ ಮುನ್ನ ಆ ರಾತ್ರಿ ಪೂರ್ತಿ ಆ ಇಬ್ಬರ ಮನದಲ್ಲಿ ಅದೆಷ್ಟು ನೋವಿತ್ತು, ಆಕ್ರಂದನವಿತ್ತು ? ಲೆಕ್ಕಹಾಕಲು ಅಸಾಧ್ಯವಾದ ಆದರೂ ಗ್ರಹಿಸಿಕೊಳ್ಳಬಹುದಾದ ಅಮೂಲ್ಯ ಸಂಬಂಧದ ಮೌಲ್ಯ ಇದು.

ಇಹ ಜೀವನದಲ್ಲಿ ಒಂದೊಂದೂ ಭಾವಗಳು ಭಿನ್ನ ಭಿನ್ನ. ಭಾವಗಳನ್ನು ತಹಬಂದಿಗೆ ತರುವುದು ನಿಜವಾಗಿಯೂ ಪ್ರಯಾಸದ ಕೆಲಸ. ಹುಡುಗ-ಹುಡುಗಿ ಹದಿಹರೆಯದಲ್ಲಿ ಪರಸ್ಪರರ ಸೌಂದರ್ಯಕ್ಕೆ ಮರುಳಾಗುತ್ತಾರೆ. ಸಿನಿಮಾಗಳಲ್ಲಿ ಕಾಣುವ ನಾಯಕ-ನಾಯಕಿರಲ್ಲಿ ತಮ್ಮನ್ನು ಕಲ್ಪಿಸಿಕೊಂಡು ಯಾವುದೋ ಪ್ರೇಮಕಥೆಯ ಸಿನಿಮಾದಂತೇ ವರ್ತಿಸುತ್ತಾರೆ. ಅಸಲಿಗೆ ಅಲ್ಲಿರುವುದು ದೈಹಿಕ ವ್ಯಾಮೋಹ. ಹುಡುಗನೋ ಹುಡುಗಿಯೋ ಯಾವುದೋ ತೊಂದರೆಯಲ್ಲಿ ಸಿಲುಕಿದರೆ, ಅಪಘಾತದಿಂದ ವಿರೂಪಗೊಂಡರೆ ಆಗ ಪರಸ್ಪರರ ಪ್ರೀತಿ ಅಳಿದುಹೋಗುತ್ತದೆ! ಇಲ್ಲಿ ಪ್ರೀತಿ ಎಂಬುದು ಬಹುತೇಕ ಈರುಳ್ಳಿಯ ಮೇಲ್ಕವಚದ ಒಳಗಿನ ತೆಳು ಪಾರದರ್ಶಕ ಸಿಪ್ಪೇಯಂತೇ ಅಷ್ಟೇ ಇರುತ್ತದೆ! ಪ್ರೇಮಕ್ಕಿಂತ ಪರಸ್ಪರರನ್ನು ಪಡೆದುಕೊಳ್ಳುವ ಕಾಮದ ತೆವಲು ಈ ಪ್ರೇಮವೆಂಬ ಸಿಪ್ಪೆಯಲ್ಲಿ ಮುಚ್ಚಿರುತ್ತದೆ. ಎಷ್ಟೋ ಸರ್ತಿ ಅವರಿನ್ನೂ ಓದು ಮಗಿಸುವ ಮುನ್ನವೇ ಅಪ್ಪ-ಅಮ್ಮನ ಕಣ್ತಪ್ಪಿಸಿ ಸುತ್ತಲು ತೊಡಗುತ್ತಾರೆ. ಹಾಗಂತ ಇಬ್ಬರಿಗೂ ಅಪ್ಪ-ಅಮ್ಮಂದಿರ ಪ್ರೀತಿ ಬೇಕು, ಆದರೂ ತಮಗೆ ಬೇಕಾದ ಅದೇನೋ ಈ ಹೊಸ ಪ್ರೀತಿಯಲ್ಲಿ ಅಪ್ಪ-ಅಮ್ಮಂದಿರಿಗೆ ತಾವು ಮಾಡುತ್ತಿರುವುದು ಮೋಸ ಎನಿಸಿದರೂ ಅದು ಗೌಣವಾಗುತ್ತದೆ; ಈ ಪ್ರೀತಿಯೇ ಹೆಚ್ಚೆನಿಸುತ್ತದೆ. ಆಯ್ತು ಅಂತೂ ಹೇಳಿದರೆ ಮದುವೆಗೆ ಭಂಗ ಎಂದು ಓಡಿಹೋಗಿ ಮತ್ತೆಲ್ಲೋ ಮದುವೆಯಾಗಿ ಮುಂದೆ ಜೀವನಕ್ಕೆ ಆಧಾರವೇ ಇಲ್ಲದಾದಾಗಲೋ ಅಥವಾ ಪರಸ್ಪರರ ಕೊಡು-ಕೊಳ್ಳುವಿಕೆ ಬೇಸರಬಂದಮೇಲೋ ಅಥವಾ ಇಬ್ಬರಲ್ಲಿನ ವಿಶ್ವಾಸ ಕಮ್ಮಿಯಾದಾಗಲೋ ಮತ್ತೆ ಮನಗೆ ಮರಳುತ್ತಾರೆ. ಅಪ್ಪ-ಅಮ್ಮನಿಗೆ ಓಡಿಹೋದಗಲೂ ಗೋಳು, ಮತ್ತೆ ಬಂದಾಗಲೂ ಗೋಳು. ಆದರೂ ಮಕ್ಕಳನ್ನು ಬಿಡುವ ಮನಸ್ಸು ಅವರದಲ್ಲ! ಇದು ಗೊತ್ತಿದ್ದೂ ನಡೆದೇ ಇರುವ ಕಾಲೇಜು ಪ್ರೇಮ ಕಥೆ.

ಒಮ್ಮೆ ಚಿಕ್ಕವನಿದ್ದಾಗ ನಾನು ನಮ್ಮ ಹಳ್ಳಿಯಲ್ಲಿ ದೂರದ ಬೆಟ್ಟಕ್ಕೆ ಹೋಗಿದ್ದೆ. ಬೇಸಿಗೆಯ ದಿನವಾದ್ದರಿಂದ ಮಳೆಬರುವ ಲಕ್ಷಣವೇನೂ ಇರಲಿಲ್ಲ. ಸಂಜೆ ಸುಮಾರು ೫ ಗಂಟೆ. ಬೆಟ್ಟವಿಳಿದು ಬರುವಾಗ ಜೋರಾಗಿ ಮಳೆ ಶುರುವಾಗಿಬಿಡ್ತು. ಬೆಟ್ಟದ ತಪ್ಪಲಿನಲ್ಲಿ ಮೊದಲು ಸಿಗುವುದು ಹರಿಜನರ ಮನೆಗಳು. ಅಲ್ಲಿನ ಕಾಲು ದಾರಿಯಲ್ಲಿ ಮರವೊಂದರ ಕೆಳಗೆ ನಿಂತಿದ್ದೆ. ದೂರದಲ್ಲಿ ಚಿಕ್ಕ ಗುಡಿಸಲು ಕಾಣುತ್ತಿತ್ತು. ಅವರೆಲ್ಲಾ ನಮ್ಮ ಪರಿಚಯದವರೇ. ಹಾಗಂತ ನಾನು ಮಳೆಯೆಂದು ಅವರ ಗುಡಿಸಲೊಳಗೆ ನುಗ್ಗಿ ನಿಲ್ಲಲು ಅಲ್ಲಿರುವ ಜಾಗವೇ ಚಿಕ್ಕದು...ಪಾಪ. ಅಲ್ಲಿನ ಗಂಡ-ಹೆಂಡತಿ ಅವರ ಇಬ್ಬರು ಮೂವರು ಮಕ್ಕಳು, ಪಾತ್ರೆ-ಪಗಡೆ, ಸಾಮಾನು. ಇನ್ನೆಲ್ಲಿರಬೇಕು ಜಾಗ? ಒಂದೆರಡು ನಿಮಿಷಗಳು ನಿಂತೇ ಇದ್ದಿದ್ದನ್ನು ಅವರಲ್ಲಿ ಯಾರೋ ನೋಡುತ್ತಿರಬೇಕು. ಅವರಿಗೆ ನನ್ನ ಗುರ್ತು ಸಿಕ್ಕಿದೆ. ಆದರೂ ಭಟ್ಟರ ಮನೆ ಹುಡುಗ ತಾವು ಕೊಡುವ ಕೊಡೆಯನ್ನು ಬಳಸಬಹುದೇ ಎಂಬ ತೋರಿಸಿಕೊಳ್ಳಲಾಗದ ಭಯ. ಆಗಿನ್ನೂ ನಮ್ಮಲ್ಲಿ ತಾಳಿಮಡ್ಲಿನ[ತಾಳೆಗರಿಯ] ಛತ್ರಿ ಮರೆಯಾಗಿ ಉದ್ದಕಾವಿನ ಕೊಡೆಗಳು ಬಂದಿದ್ದವು. ಅಂತೂ ಕೀಳರಿಮೆಯಿಂದಲೇ ಒಂದು ಛತ್ರಿಯನ್ನು ಹಿಡಿದು ಓಡಿ ಬಂದು ಕೊಟ್ಟರು. ನಾನು ಕೊಡೆಯನ್ನು ಬಿಡಿಸಿಕೊಂಡು ನಿಂತಿದ್ದನ್ನು ನೋಡಿ ಸಂತಸಪಟ್ಟರು. ನಾನು ಮಳೆಯಲ್ಲಿ ನೆನೆಯುತ್ತಾ ನಿಂತಾಗಿನ ಅವರ ಮನದ ಮೂಕ ಯಾತನೆ ಮತ್ತು ನಾನು ಕೊಡೆಬಿಡಿಸಿ ನಿಂತಾಗ ಆದ ಸಂತೋಷದ ಪುಳಕಿತ ಭಾವನೆ ಈ ಎರಡನ್ನೂ ಅಳೆಯಲು ಸಾಧ್ಯವೇ? ಮಳೆನಿಂತಮೇಲೆ ಕೃತಜ್ಞತೆಯೊಂದಿಗೆ ಛತ್ರಿ ಮರಳಿಸಿದೆ. ಈ ಹಿಂದೆ ಕೂಡ ಒಮ್ಮೆ ಇದನ್ನು ಬರೆದಿದ್ದೆ. ಈಗಲೂ ಅವರ ಆ ಮೃದುಮಧುರ ಬಾಂಧವ್ಯದ ನೆನಪು ಬಂತು .. ನಿಮ್ಮಲ್ಲಿ ಹೇಳಿಕೊಂಡೆ.


ನಾನು ಮತ್ತು ಹಿರಿಯ ಸ್ನೇಹಿತರಾದ ಶಿವಗುರು ಒಮ್ಮೆ ಮೊನ್ನೆ ಗತಿಸಿದ ಸಿ.ವಿ.ಎಲ್ ಶಾಸ್ತ್ರಿಗಳ ಭೇಟಿಗೆ ಹೋಗಬೇಕೆಂದುಕೊಂಡೆವು. ಎಲ್ಲೋ ಒಂದೆರಡು ಸಮಾರಂಭಗಳಲ್ಲಿ ಅವರನ್ನು ಕಂಡಿದ್ದೆ. ಇನ್ಯಾವುದೋ ಹಬ್ಬದ ಸಮಾರಂಭವೊಂದರಲ್ಲಿ ನಾವೆಲ್ಲಾ ಸೇರಿದ್ದರೂ ಶಾಸ್ತ್ರಿಗಳು ಬಹಳ ಕಾರ್ಯ ನಿರತರಾಗಿ ಮಾತನಾಡಲು ಆಗಿರಲಿಲ್ಲ. ಶಾಸ್ತ್ರಿಗಳ ಕಚೇರಿಯಲ್ಲಿ ಅವರನ್ನು ಭೇಟಿಯಾಗಲು ಸಮಯವನ್ನು ನಿಗದಿ ಪಡಿಸಿಕೊಂಡು ಗೊತ್ತಾದ ಆ ದಿನ ಗಾಂಧಿನಗರದ ಅವರ ಕಚೇರಿಯಲ್ಲಿ ಕೂತಿದ್ದೆವು. ಹೋಗಿ ಕೆಲವು ನಿಮಿಷಗಳಲ್ಲೇ ಒಬ್ಬಾತ ಬಂದು "ಏನ್ ತಗೋತೀರಿ ಸರ್? ಕಾಫಿ-ಟೀ-ಬಾದಾಮಿಹಾಲು-ಲೆಮನ್ ಟೀ " ಎಂದೆಲ್ಲಾ ಕೇಳಿದ. ನಾವು ಲೆಮನ್ ಟೀ ಕುಡಿದೆವು. ಕೆಲವು ಹೊತ್ತು ಶಾಸ್ತ್ರಿಗಳು ಇರಲಿಲ್ಲ. ಹೊರಗೆಲ್ಲೋ ಕೆಲಸಕ್ಕೆ ಹೋಗಿದ್ದವರು ಆಮೇಲೆ ಬಂದರು. ಬಂದ ತಕ್ಷಣವೇ ನಮ್ಮನ್ನು ಅವರ ಕೊಠಡಿಗೆ ಕರೆದರು. ಮತ್ತೆ ಒತ್ತಾಯಪೂರ್ವಕವಾಗಿ ಟೀ. ಶಾಸ್ತ್ರಿಗಳ ಬಗೆಗೆ ಕೇಳಿದ್ದೆನಾದರೂ ಹತ್ತಿರದ ಒಡನಾಟವಿರಲಿಲ್ಲ. ಅಂದು ಅದು ಆರಂಭವಾಗಿತ್ತು. ರಾಮನಗರ ಮೂಲದ ಶಾಸ್ತ್ರಿಗಳು ಬಾಲ್ಯವನ್ನು ಕಷ್ಟದಲ್ಲೇ ಕಳೆದರು. ಹಾಗಾಗಿ ಅವರಿಗೆ ಬಡತನ-ಶ್ರೀಮಂತಿಕೆಗಳೆರಡರ ಅನುಭವವೂ ಇತ್ತು. ಬಡವರನ್ನು ಕಂಡರೆ ಎಲ್ಲಿಲ್ಲದ ವಾತ್ಸಲ್ಯ. ಅವರಲ್ಲಿ ಜಾತಿ-ಭೇದ ಇರಲಿಲ್ಲ. ಶಾಸ್ತ್ರೀಜಿ ಎಂದರೆ ಸದಾ ಎಲ್ಲರಿಗೂ ಬೇಕು. ಸಿನಿಮಾ ರಂಗದಲ್ಲಿ ನಿರ್ಮಾಪಕರಾಗಿ ಹಲವು ಕನ್ನಡ ಸಿನಿಮಾಗಳನ್ನು ನಿರ್ಮಿಸಿದ ಅವರು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಯೂ ಕೆಲಸಮಾಡಿದ್ದರು. ಹಲವು ಸಂಘ-ಸಂಸ್ಥೆಗಳು ಅವರ ಮಾರ್ಗದರ್ಶನದಲ್ಲೇ ರೂಪುಗೊಂಡಿದ್ದವು. ಗೋಕಾಕ್ ಚಳುವಳಿಗೆ ಕಾರಣೀಭೂತರೇ ಶಾಸ್ತ್ರಿಗಳು!

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷರಾಗಿ ಸಂಸ್ಥೆಯ ಏಳಿಗೆಗಾಗಿ ವಿಶಿಷ್ಟವಾದ ಕೆಲಸಗಳನ್ನು ಮಾಡಿದರು. ಅಂಥಾ ಮೇರು ವ್ಯಕ್ತಿಯ ಮೇಜಿನ ಇನ್ನೊಂದು ತುದಿಯಲ್ಲಿ ನಾನು ಮಾತನಾಡುತ್ತಾ ಕೂತಿದ್ದೆ. ಅವರೂ ಕೂಡ ಮಾತನಾಡುತ್ತಾ " ನಮ್ಮ ಕಚೇರಿಗೆ ಯಾರೇ ಎಷ್ಟೇ ಹೊತ್ತಿಗೆ ಬರಲಿ ಒಂದರ್ಧ ಕಾಫಿಯನ್ನಾದರೂ ಕುಡಿದು ಹೋಗಬೇಕೆಂಬುದು ನನ್ನ ಅನಿಸಿಕೆ. ಯಾರೋ ಒಬ್ಬಾತ ಹಳ್ಳಿಯಿಂದ ಕೆಲಸ ಕೇಳಿ ಬಂದ. ಆತನಿಗೆ ಜಾಸ್ತಿ ವಿದ್ಯಾರ್ಹತೆಯೂ ಇರಲಿಲ್ಲ. ಕಾಫಿ-ಟೀ ಮಾಡೋಕೆ ಬರುತ್ತಾ? ಕೇಳಿದೆ. ಬರುತ್ತೆ ಅಂದ. ಅಂದಿನಿಂದ ಅವನಿಗೂ ಒಂದು ಕೆಲಸ, ನಮಗೂ ಬಂದ ಅತಿಥಿಗಳಿಗೆ ಏನೋ ಕೊಟ್ಟ ತೃಪ್ತಿ " ಹೀಗಿತ್ತು ಶಾಸ್ತ್ರಿಗಳ ಮಾತು. ಅವರ ಮನೆ ಮತ್ತು ಕಚೇರಿಗಳಲ್ಲಿ ಹಲವು ಹುಡುಗರು [ಜಾಸ್ತಿ ಕೆಲಸಕೊಡಲಾಗದಿದ್ದರೂ] ಇದ್ದರು. "ದೇವರು ನಮಗೆಲ್ಲೋ ಕೊಡ್ತಾನೆ-ನಾಕು ಮಂದಿ ಬದುಕಿಕೊಳ್ಳಲಿ ಪಾಪ" ಎನ್ನುತ್ತಿದ್ದರು. ಎಂತಹ ಆಂತರ್ಯ ಶಾಸ್ತ್ರಿಗಳದು ! ಆವರ ಆಂತರ್ಯದ ಸಾಮಾಜಿಕ ಕಳಕಳಿಗೆ ಬೆಲೆಕಟ್ಟಲಾದೀತೇ ? ಗತಿಸಿದ ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸದಿದ್ದರೆ ಅದು ನಿಜಕ್ಕೂ ನಾನು ಮಾಡುವ ಅಪರಾಧ ಎಂಬ ಪ್ರಜ್ಞೆ ಕಾಡುತ್ತಿತ್ತು.ಅದಕ್ಕೇ ಅದನ್ನೂ ನಿಮ್ಮ ಮುಂದೆ ಹೀಗಿಟ್ಟಿದ್ದೇನೆ.


ನಟ ಕರಿಬಸವಯ್ಯ ಕೀರ್ತನೆ ದಾಸರ ಮಗ. ತಂದೆ ಮಾಡುವ ಹರಿಕೀರ್ತನೆಗಳ ಪ್ರಭಾವದಿಂದಲೋ ಪರಿಣಾಮದಿಂದಲೋ ಅವರ ಮನಸ್ಸು ಮಾತ್ರ ಅವರ ಬಣ್ಣಕ್ಕೆ ತದ್ವಿರುದ್ಧವಾಗಿತ್ತು! ಯಾವ ವರ್ಗವಾದರೇನು ಜಾತಿಯಾದರೇನು ಸ್ವಾಮೀ ನೀತಿಯೆಲ್ಲರಿಗೂ ಒಂದೇ ಅಲ್ಲವೇ? ಅವರ ಆಂತರ್ಯದಲ್ಲಿ ಯಾವ ಕಲ್ಮಶವೂ ಇದ್ದಿದ್ದು ಕಾಣೆ. ಎರಡು ವರ್ಷಗಳ ಕೆಳಗೆ ಮಗಳನ್ನು ಕಳೆದುಕೊಂಡಮೇಲೆ ಸ್ವಲ್ಪದಿನ ಖಿನ್ನರಾಗಿದ್ದರು. ಆದರೂ ತನ್ನ ವೃತ್ತಿಯಲ್ಲಿ ಮುಂದುವರಿಯುತ್ತಾ ಯಾರಲ್ಲೇ ಯಾವುದೇ ಸಹಾಯ ಬಯಸಿ ತೆರಳಿದವರಲ್ಲ. ಅವರ ಆ ಗಂಭೀರ ಹಾಸ್ಯಪಾತ್ರಗಳು ಹಲವು ಕಾಲ ಜನರನ್ನು ರಂಜಿಸಿವೆ ರಂಜಿಸುತ್ತವೆ. ಹಾಸ್ಯನಟನಾಗಿ ಸತ್ತೂ ಬದುಕಿದ ಕೆಲವರಲ್ಲಿ ಕರಿಬಸವಯ್ಯ ಒಬ್ಬರು. ಒಳ್ಳೇತನವೇ ಮೈವೆತ್ತ ಮನುಷ್ಯ. ಕಿರಿಯ ಕಲಾವಿದರನ್ನು ಬಹಳ ಪ್ರೋತ್ಸಾಹಿಸುತ್ತಿದ್ದರು ಎಂದು ಕೇಳ್ಪಟ್ಟೆ. ಮಾಡುವ ಪಾತ್ರ ಯಾವುದೇ ಇರಲಿ ಪಾತ್ರವೇ ತಾನಾಗುತ್ತಿದ್ದ ಅಪ್ಪಟ ಕಲಾವಿದ. ಕನಕಪುರದೆಡೆಗೆ ಕೀರ್ತನೆಗೆ ಹೋಗಿದ್ದ ಅವರು ರಾತ್ರಿ ಅಲ್ಲೇ ತಂಗಿದ್ದು ಮಾರನೇ ಬೆಳಿಗ್ಗೆ ಮಡದಿಯನ್ನು ಜಯದೇವ ಆಸ್ಪತ್ರೆಗೆ ಕರೆದೊಯ್ಯುವ ಗೊತ್ತುವಳಿ ಸಮಯ ಬೇಗ ಇದ್ದಿದ್ದರಿಂದ ಬೆಳಗಿನ ಜಾವವೇ ಎದ್ದು ಹೊರಟಿದ್ದಾರೆ. ದಣಿದ ದೇಹಕ್ಕೆ ಕಾರು ಚಲಾಯಿಸುತ್ತಾ ನಿದ್ದೆಯ ಜೋಂಪು ಹತ್ತಿದೆ. ಕಾರು ೨೦-೨೫ ಅಡಿ ಆಳದ ಗದ್ದೆಯಲ್ಲಿ ೩-೪ ಪಲ್ಟಿಯಾಗಿ ಬಿದ್ದಿತ್ತಂತೆ. ದಾರಿಹೋಕ ಹುಡುಗರು ಗುರ್ತು ಹಿಡಿದು ಅವರನ್ನು ಆಸ್ಪತ್ರೆಗೆ ತಲ್ಪಿಸಿದರು. ಆಮೇಲೆ ವಿಷಯ ಮೆನೆಗೆ ತಿಳಿದು ಇಲ್ಲಿನ ಬಸವೇಶ್ವರ ನಗರದ ಪ್ರಿಸ್ಟೀನ್ ಆಸ್ಪತ್ರೆಗೆ ಸಾಗಿಸಿದರು. ವಿಧಿ ಎರಡು ದಿನ ಬಿಟ್ಟಿತೇ ಹೊರತು ಮೂರನೇ ದಿನ ಕರೆದೊಯ್ದಿತು. ಕುಟುಂಬವನ್ನು ಅಗಲುವ ಘಳಿಗೆ ಹತ್ತಿರ ಬಂದಾಗಿನ ಅವರ ಮನದಲ್ಲಿ ಯಾವ ಭಾವ ಇದ್ದಿರಬಹುದು? ಕಳೆದುಕೊಂಡ ಅವರ ಮಡದಿಗೆ ಯಾವ ನೋವು ಇರಬಹುದು ? ಇದೆಲ್ಲಾ ಮೀಟರ್ ಹಿಡಿದು ಅಳೆಯಲು ಬರುವ ಅಂಶವಲ್ಲ! ಕರಿಬಸವಯ್ಯ ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ.

ಕೊನೆಯದಾಗಿ ಟೈಟಲ್ ಸಾಂಗು ! ಬಡೇ ಅಚ್ಛೇ ಲಗ್ತೇ ಹೈಂ ....! ರಾಮ್ ಕಪೂರ್ ಮತ್ತು ಸಾಕ್ಷಿ ತನ್ವರ್ ನಟಿಸಿರುವ ಈ ಧಾರಾವಾಹಿ ಬಹುತೇಕರಿಗೆ ಆಪ್ಯಾಯಮಾನ. ನಾನು ಯಾವುದೇ ಧಾರಾವಾಹಿ ನೋಡಿ ಅದಕ್ಕೆ ಅಂಟಿಕೊಂಡವನಲ್ಲ. ಆದರೂ ಈ ಧಾರಾವಾಹಿ ಮಾತ್ರ ನನ್ನನ್ನು ಬಿಡಲೇ ಇಲ್ಲ. ರಾತ್ರಿ ಹತ್ತೂವರೆ ಆಯ್ತೆಂದರೆ ಅದನ್ನು ನೋಡುವ ಬಯಕೆ! ಅನುಕೂಲವಂತ ಬ್ಯುಸಿನೆಸ್ ಮನ್ ಆಗಿರುವ ರಾಮ್ ಕಪೂರ್ ೪೦ ರ ವಯಸ್ಸಿಗ. ಮದುವೆಯೇ ಬೇಡ ಎಂದುಕೊಂಡಿದ್ದಾತ. ೩೦ ರ ಆಸುಪಾಸಿನ ಹುಡುಗಿ ಪ್ರಿಯಾಗೆ ಎಷ್ಟೇ ಪ್ರಯತ್ನಿಸಿದರೂ ಯಾವುದೇ ಸಂಬಂಧ ಕೂಡಿಬರುತ್ತಿರಲಿಲ್ಲ. ರಾಮ್ ಕಪೂರ್ ಮಲತಂಗಿ ನತಾಶಾ ಪ್ರಿಯಾಳ ತಮ್ಮ ಕಾರ್ತೀಕ್ ನನ್ನು ಪ್ರೀತಿಸುತ್ತಾಳೆ. ಅವರಿಬ್ಬರೂ ಮದುವೆಯಾಗುವುದಾಗಿ ಸುದ್ದಿ ಬಂದಾಗ ರಾಮ್ ಕಪೂರ್ ಮಲತಾಯಿ ಆತ ಪ್ರಿಯಾಳನ್ನು ಮದುವೆಯಾಗಬೇಕೆಂದು ಒತ್ತಾಯಿಸುತ್ತಾಳೆ. ಇಬ್ಬರ ಮನೆಗಳಲ್ಲೂ ಒತ್ತಾಯ ಆರಂಭವಾಗಿ ಮನೆಗಳವರ ಇಷ್ಟಕ್ಕೆ ಕಟ್ಟುಬಿದ್ದು ಅಂತೂ ಮದುವೆಗೆ ಒಪ್ಪುತ್ತಾರೆ.

ಅಷ್ಟರಲ್ಲಿ ನತಾಶಾಳ ಮದುವೆ ಜರುಗಿ ಆಕೆ ಮಧ್ಯಮ ವರ್ಗದ ಕುಟುಂಬಕ್ಕೆ ಹೊಂದಿಕೊಳ್ಳಲು ಪ್ರಯಾಸಪಟ್ಟರೂ ಅಲ್ಲಿನ ಜನರ ಪ್ರೇಮ-ವಾತ್ಸಲ್ಯವನ್ನು ಕಂಡು ಹೊಂದಿಕೊಳ್ಳುತ್ತಾಳೆ.ರಾಮ್ ಕಪೂರ್ ಮತ್ತು ಪ್ರಿಯಾ ಇಬ್ಬರ ಸ್ವಭಾವಗಳಲ್ಲೂ ಇಷ್ಟಾನಿಷ್ಟಗಳಲ್ಲೂ ಅವರದ್ದು ಪೂರ್ವ-ಪಶ್ಚಿಮ. ಒತ್ತಾಯಕ್ಕೇ ಮದುವೆಯಾದರೂ ನಿಧಾನವಾಗಿ ಅವರಲ್ಲಿ ಅದೇನೋ ಒಂಥರಾ ಬಿಟ್ಟಿರಲಾರದ ಭಾವ, ಒಳಗೊಳಗೇ ಎದ್ದ ಅನನ್ಯತೆಯ ಅನುಭವ! ಮಧುಚಂದ್ರಕ್ಕೆಂದು ಆಷ್ಟ್ರೇಲಿಯಾಕ್ಕೆ ತೆರಳಿದಾಗ ಅವರಿಬ್ಬರಲ್ಲೂ ಪ್ರೇಮಾಂಕುರವಾಗುತ್ತದೆ! ಅಲ್ಲಿಯವರೆಗೂ ನೋವು-ನಲಿವು, ನಗು-ಅಳುಗಳನ್ನು ಹಂಚಿಕೊಂಡಿದ್ದರೂ ಪರಸ್ಪರ ಅಷ್ಟೊಂದು ಪ್ರೇಮ ಬಂಧನದಲ್ಲಿ ಕಟ್ಟುಬಿದ್ದಿರಲಿಲ್ಲ.

ಅಪೇಕ್ಷಾ ಮತ್ತು ಕೃಷ್ಣಾ ಎಂಬಿಬ್ಬರು ಅಪರಿಚಿತ ಮಹಿಳೆಯರ ಮಧ್ಯ ಪ್ರವೇಶದಿಂದ ಪ್ರಿಯಾಗೆ ಗಲಿಬಿಲಿಯದರೂ ರಾಮ್ ತಮ್ಮ ಗತಕಾಲದ ಜೀವನವನ್ನು ತಿಳಿಸಿ ಅಪೇಕ್ಷಾ ತನ್ನ ನಿಜವಾದ ತಂಗಿಯೆಂದೂ ಮತ್ತು ಕೃಷ್ಣಾ ತನ್ನ ತಾಯಿಯೆಂದೂ ...ಇನ್ನೊಬ್ಬ ಗಂಡಸನ್ನು ಬಯಸಿ ತನ್ನಪ್ಪನನ್ನು ತೊರೆದು ಅಪ್ಪನ ದಾರುಣ ಸಾವಿಗೆ ಕಾರಣಳಾದ ತಾಯಿ ಮತ್ತು ತಂಗಿಯರ ಸಂಪರ್ಕವನ್ನೇ ತಾನು ತೊರೆದಿದ್ದನ್ನು ವಿವರಿಸಿದಾಗ ಪ್ರಿಯಾಗೆ ಖುಷಿಯಾಗುತ್ತದೆ. ಮತ್ತದೇ ಪ್ರೀತಿ-ಪ್ರೇಮ ಮುಂದುವರಿದು ಸಂಸಾರ ಸರಾಗವಾಗಿ ಸಸಾರವಾಗಿ ನಡೆಯುತ್ತಿರುವಾಗ ಅಕಸ್ಮಾತ್ ಆಸ್ಪತ್ರೆಯೊಂದಕ್ಕೆ ತಪಾಸಣೆಗೆ ಹೋಗಿದ್ದ ಪ್ರಿಯಾಗೆ ಸ್ತನದಲ್ಲಿ ಅರ್ಬುದರೋಗ ಇರುವುದಾಗಿ ತಿಳಿದುಬಂದಾಗ ಇಡೀ ಜೀವನ ಒಂದು ದಾರುಣ ಸ್ಥಿತಿಗೆ ತಲುಪುತ್ತದೆ. ೧೪೯ ಕಂತುಗಳನ್ನು ಮುಗಿಸಿರುವ ಈ ಧಾರಾವಾಹಿಯ ವಿಶೇಷತೆ ಎಂದರೆ ಒಂದೇ ದಿನವೂ ಬೇಸರ ತರಿಸಲಿಲ್ಲ. [ನಾನು ನೋಡಿದ್ದು ನಡುನಡುವೆ ಕೆಲವು ದಿನಗಳು ಮಾತ್ರ] ಎಲ್ಲೂ ಎಳೆತವಿಲ್ಲದ ಮೃಧು-ಮಧುರ ಭಾವಗಳನ್ನು ಎಳೆ ಎಳೆಯಾಗಿ ಹೂವಿನ ಪಕಳೆ ಬಿಡಿಸಿದಷ್ಟೇ ನಾಜೂಕಾಗಿ ಹೆಣೆದ, ನಿರ್ದೇಶಿಸಿದ ವೈಖರಿ ನಿಜಕ್ಕೂ ಮನತಟ್ಟುತ್ತದೆ. ಮಾಮೂಲು ಧಾರಾವಾಹಿಗಳಲ್ಲಿರುವ ಹೊಡೆದಾಟ, ಬಡಿದಾಟ ಇಂತಹ ಅತಿರೇಕಗಳನ್ನು ಬಿಟ್ಟು ಸೂರಜ್ ಬರ್ಜಾತ್ಯ ಅವರ ಕೌಟುಂಬಿಕ ಸಿನಿಮಾಗಳಂತೇ ನಯ-ನಾಜೂಕಿನ ಬಲುಸೊಬಗಿನ ಧಾರಾವಾಹಿ...ನನಗಂತೂ ಬಹಳ ಹಿಡಿಸಿದೆ. ಅದರ ಟೈಟಲ್ ಸಾಂಗ್ ಕೇಳುತ್ತಾ ಕಲಾವಿದರೆಲ್ಲರಿಗೂ ಕೃತಜ್ಞನಾಗಿ ನಿಮ್ಮಿಂದ ಸದ್ಯಕ್ಕೆ ಬೀಳ್ಕೊಳ್ಳುತ್ತಿದ್ದೇನೆ, ನಮಸ್ಕಾರ.